Sunday, April 29, 2012

ಕೋರವಂಗಲದ ಬಂಗಾರದ ಕುಟುಂಬ ಬಂಗಾರದ ನಾಡಿನಲ್ಲಿ

ನಮ್ಮ ಸೌರವ್ಯೂಹದಲ್ಲಿ ಒಂಭತ್ತು ಗ್ರಹಗಳು ಇದೆ. ಆ ಗ್ರಹಗಳು ಒಂದಕ್ಕಿಂತ ಪ್ರಚಂಡರು..
ಅಂತೆಯೇ ನಮ್ಮ ಕೋರವಂಗಲದ ಒಂಭತ್ತು ಗ್ರಹಗಳು ಮತ್ತು ಅದರ ಉಪಗ್ರಹಗಳು ಒಂದೇ ಚಾವಡಿಯಡಿ ಸೇರೋಣ ಅಂತ ಮಾತಾಯಿತು. (ನನ್ನ ತಮ್ಮ ದೀಪು ಬರೆದ ಸಾಲುಗಳಿಂದ ಪ್ರೇರೆಪಿತವಾದದ್ದು)


ಸರಿ ಜಾಗ ಎಲ್ಲಿ ಅನ್ನುವ ಪ್ರಶ್ನೆ ಶುರುವಾಯಿತು, ಅದಕ್ಕೆ ವ್ಯವಸ್ತೆ ಏನು, ಹೇಗೆ? 

ಕಡೆಗೆ ಬಂದ ಸರ್ವಾನುಮತದ ಆಯ್ಕೆ..ಕೋರವಂಗಲದ ಬಂಗಾರದ ಕುಟುಂಬ ಬಂಗಾರದ ನಾಡಿನಲ್ಲಿ ಕೆಲವು ಕ್ಷಣಗಳನ್ನ ಕಳೆಯೋಣ ಅನ್ನುವುದು..ಹಾಗೆ ಕುಲದೇವರಾದ ವೆಂಕಟೇಶ್ವರನ ಅನುಗ್ರಹವನ್ನು ಪಡೆಯೋಣ ಅಂತ ಆಯಿತು..

ಸರಿ ಒಂದು ದೊಡ್ಡ ಉಗಿಬಂಡಿ ಸಿದ್ದವಾಯಿತು. ನಾಗಲಕ್ಷ್ಮಿಕೆಲಸದ ಒತ್ತಡದಿಂದ, ಸುರಭಿಗೆ ಆರೋಗ್ಯ ಸರಿ ಇಲ್ಲದ ಕಾರಣ ಮಾತೆ ಹಾಗು ಸುರಭಿ ಬರಲು ಆಗಲಿಲ್ಲ..ಮೂರನೇ ಹಾಗು ನಾಲ್ಕನೇ ತಲೆಮಾರು ಪೂರ ಸಿದ್ದವಾಯಿತು..ಒಟ್ಟಾರೆ ೨೬ ಸದಸ್ಯರು (ಒಂದು ಚಿಕ್ಕ ಮರಿ ಕೂಡ) ಬಸ್ಸನಲ್ಲಿ ಕೂತಾಗ ಹರ್ಷೋದ್ಗಾರ...

ಮೊದಲು ಚಿಕ್ಕ ತಿರುಪತಿಗೆ ಹೋಗಿ ತಿಮ್ಮಪ್ಪನ ದರುಶನ ಪಡೆದೆವು..ದಾರಿಯುದ್ದಕ್ಕೂ ನಗೆ ಚಟಾಕಿಗಳು, ಹಾಸ್ಯ ಲಹರಿ, ಗಾಯನ ಎಲ್ಲ ನಡೆಯಿತು.  ಎಲ್ಲ ಹನ್ನೊಂದು ಮಕ್ಕಳು ಲೋಕದ ಹಂಗೆ ಇಲ್ಲ ಅನ್ನುವ ಹಾಗೆ ತಮ್ಮ ಪಾಡಿಗೆ ಆಡಿ, ಹಾಡಿಕೊಂಡು ಇದ್ದವು..ಹಾಗಾಗಿ ನಮಗೆಲ್ಲ ಇನ್ನು ಸ್ಪೂರ್ತಿ ಬಂದಿತ್ತು..ನಮ್ಮ ಎಲ್ಲ ಹಳೆಯ, ಹೊಸ ನೆನಪನ್ನು ತಿಕ್ಕಿ, ತೀಡಿ, ಓರಗೆ ಹಚ್ಚಿ ಸಂಭ್ರಮಿಸಿದೆವು.

ತಿಮ್ಮಪ್ಪನ ದರುಶನದ ನಂತರ ಬಂಗಾರು ತಿರುಪತಿ ಕಡೆಗೆ ಹೊರಟಿತು ನಮ್ಮ ಗ್ರಹಗಳ ಸೇನೆ.  ಅಲ್ಲಿ ಪ್ರತಿ ಕಲ್ಲು, ಬಂದೆ, ನೆಲ ಎಲ್ಲವು ದೋಸೆ ಹಂಚಿನ ಹಾಗೆ ಕಾದಿತ್ತು.  ಒಂದೇ ಉಸಿರಿನಲ್ಲಿ ಎಲ್ಲರು ಸುಮಾರು ೧೦೦ ಮೆಟ್ಟಿಲುಗಳನ್ನ ಒಂದೇ ಉಸಿರಿನಲ್ಲಿ ಹತ್ತಿ ಹೋದೆವು...ಕಿಂಡಿಯಲ್ಲಿ ಭಗವಂತನ ನೋಡಿ ಮನಸು ತಂಪಾಯಿತು..ಬೇಡುವುದನ್ನ ಬೇಡುತ್ತಾ, ಹರಕೆಗಳನ್ನ ಒಪ್ಪಿಸುತ್ತ ನಮನಗಳನ್ನು ಸಲ್ಲಿಸಿ..ಹೊಟ್ಟೆಯ ಪರಮಾತ್ಮನನ್ನು ಶಮನ ಮಾಡುವುದಕ್ಕೆ ಅಣಿಯಾದೆವು...


ಜಾಗವನ್ನು ಅರಸುತ್ತ ಹೊರಟಾಗ ಕಂಡ ಒಂದು ಅದ್ಭುತಜಾಗ...ಎಲ್ಲರು ಅಲ್ಲಿಯೇ ಬಿಡಾರ ಹೂಡುವುದು ಎಂದು ನಿರ್ಧಾರವಾಯಿತು. ಸರಿ ಸರಕು, ಸರಂಜಾಮನ್ನು ಇಳಿಸಿ..ಒಬ್ಬರಾದಿಯಾಗಿ ಒಬ್ಬರು ಉದರ ಚೀಲವನ್ನ ತುಂಬಿಕೊಳ್ಳುತ್ತಾ ಹರಟಿದೆವು..

ಆ ಕ್ಷಣಗಳು ನಮ್ಮ ಜೀವನ ಅತಿ ಉತ್ತಮ ಘಳಿಗೆಗಳಲ್ಲಿ ಒಂದು ಎಂದರೆ ತಪ್ಪಲ್ಲ

ಊಟವಾದ ಮೇಲೆ, ಛಾಯಾಚಿತ್ರ ಉತ್ಸವ ಆರಂಬಿಸಿತು..ಎಲ್ಲರು ಮನಸಿಗೆ ಬಂದ ರೀತಿ ಚಿತ್ರ ತೆಗೆಸಿಕೊಂಡೆವು..ಒಂದು ಇಡಿ ಗುಂಪಿನ ಚಿತ್ರವೂ ಬಂತು..ಸುಮಾರು ಹೊತ್ತು ಹರಟಿದೆವು. 

ಸಮಯ ೪ ಘಂಟೆ ಎಂದು ಕಿರುಚಿತು. ಸರಿ ಅವನಿಯ ಶಾರದಾಂಬೆ ಆಶೀರ್ವಾದ ಪಡೆಯಲು ಎಲ್ಲರು ಅಲ್ಲಿಗೆ ಪಯಣ ಬೆಳೆಸಿದೆವು..


ಕಲ್ಲಿನಲ್ಲಿ ಕಟ್ಟಿರುವ ರಾಮಲಿಂಗೇಶ್ವರ ದೇವಸ್ಥಾನ, ಶಾರದಾಂಬೆ ದೇವಸ್ಥಾನ ಎಲ್ಲವು ಮನಸೆಳೆಯಿತು..ಆವಣಿ ಶಂಕರ ಮಠದಲ್ಲಿ  ಕಾಫಿ ಕುಡಿದು ಬೆಂಗಳೂರಿನತ್ತ ಹೊರಟೆವು..

ಅಮೋಘ ಕ್ಷಣಗಳು :
ಚಿಕ್ಕ ತಿರುಪತಿ : ನಾವೆಲ್ಲಾ ಒಟ್ಟಿಗೆ ತಿರುಪತಿಗೆ ಹೋಗುವ ಬಯಕೆ ತುಂಬಾ ವರುಷಗಳಿಂದ ಇದೆ..ಆದ್ರೆ ಸಮಯದ ಅಭಾವದಿಂದ ಆಗದೆ ಇದ್ದದರಿಂದ ಇಲ್ಲಿಗೆ ಬಂದು ಹರಕೆ ತೀರಿಸಿದೆವು.  ದೇವಸ್ಥಾನ ತುಂಬಾ ಚೆನ್ನಾಗಿದೆ, ದೇವರ ಮೂರ್ತಿ  ಮನಸಿಗೆ ಶಾಂತಿ ಕೊಡುತ್ತದೆ. ಆವರಣ ಕೂಡ ಮನಸೆಳೆಯುತ್ತೆ.  ಅಗ್ನಿದೇವ  ಖಾಂಡವ ವನ ದಹಿಸಿ ತೇಜಸ್ಸನ್ನು ಮರಳಿ ಪಡೆದ ಮೇಲೆ  ತನ್ನ ಹರಕೆಯನ್ನು ತೀರಿಸಲು ಈ ಮೂರ್ತಿಯನ್ನ ಪ್ರತಿಷ್ಠಾಪಿಸಿದನು ಎಂದು ಐತಿಹ್ಯ ಹೇಳುತ್ತೆ. ತಿರುಪತಿಗೆ ಹೋಗಿ ಹರಕೆ ತೀರಿಸಲು ಸಾಧ್ಯವಾಗದೆ ಇರುವರು ಇಲ್ಲಿಗೆ ಬಂದು ಸಲ್ಲಿಸಬಹುದು ಎಂದು ಸ್ಥಳ ಪುರಾಣ ಹೇಳುತ್ತೆ


ಬಂಗಾರ ತಿರುಪತಿ: ಉಡುಪಿಯಲ್ಲಿ ಕೃಷ್ಣನನ್ನು ಕಿಂಡಿಯಲ್ಲಿ ನೋಡಬೇಕು..ಇಲ್ಲಿಯೂ ಕೂಡ ಭೃಗು ಮಹರ್ಷಿಗೆ ಕಿಂಡಿಯಲ್ಲಿ ದರುಶನ ಕೊಟ್ಟಿದ್ದರಿಂದ ಇಲ್ಲಿ ಭಗವಂತನನ್ನು ಕಿಂಡಿಯಲ್ಲೇ ನೋಡಬೇಕು. ಭೃಗು ಮಹರ್ಷಿ ಈ ಮೂರ್ತಿಯನ್ನು ಪೂಜಿಸಿದ್ದರು ಎಂದು ಪುರಾಣ ಇದೆ. ದೇವಸ್ಥಾನ ಸುಮಾರು ನೂರು ಮೆಟ್ಟಿಲ ಬೆಟ್ಟದ ಮೇಲೆ ಇದೆ.  ಆವರಣದಲ್ಲಿ ದೊಡ್ಡ ಕಲ್ಯಾಣಿ ಇದೆ..ಸುತ್ತ ಮುಟ್ಟಲು ದತ್ತ ಕುರುಚಲು ಕಾಡು ಇರುವುದರಿಂದ ಮಳೆಗಾಲ ಕಳೆದ ಮೇಲೆ ಹೋದರೆ ತಂಪಾಗಿ ಇರುತ್ತೆ..ಪದ್ಮಾವತಿ ದೇವಸ್ಥಾನವು ಕೂಡ ಇನ್ನೊಂದು ಬೆಟ್ಟದ ಮೇಲೆ ಇರುವುದು ವಿಶೇಷ.ಆವಣಿ ಶಂಕರ ಮಠ : ನಿಂತಿರುವ ಶಾರದಾಂಬೆ ಮೂರ್ತಿ ಇಲ್ಲಿನ ವಿಶೇಷ.  ಶಂಕರಾಚಾರ್ಯರ ಮೂರ್ತಿ ಸುಂದರವಾಗಿದೆ..ಇಲ್ಲಿನ ದೇವಸ್ಥಾನದ ಹಿಂದೆ ಒಂದು ಚಿಕ್ಕ ಬೆಟ್ಟ ಇದೆ..ಸ್ಥಳ ಪುರಾಣ ಹೇಳುವಂತೆ ಸೀತಾ ಮಾತೆ ತನ್ನ ಮಕ್ಕಳಾದ ಲವ ಕುಶರಿಗೆ ಜನ್ಮವಿತ್ತ ಜಾಗ ಇದೆ, ಶ್ರೀ ರಾಮಚಂದ್ರನ ಅಶ್ವಮೇದ ಕುದುರೆಯನ್ನ ಮಕ್ಕಳು ಇಲ್ಲಿ ಕಟ್ಟಿ ಹಾಕಿದ್ದರು ಅನ್ನುವ ಜಾಗ, ಸೀತಾ ಮಾತೆ ಬಟ್ಟೆ ಒಗೆಯುತ್ತಿದ್ದ ಜಾಗ, ಆಭರಣದ ಪೆಟ್ಟಿಗೆ, ಹಾಗು ಅಡಿಗೆ ಸರಕು ಪಾತ್ರೆಗಳನ್ನ ಇಟ್ಟಿದ್ದ ಕೊಳಗ ಬಂಡೆಯ ರೂಪದಲ್ಲಿ ಇದೆ ಎಂದು ಹೇಳುತ್ತಾರೆ. ಆ ಬಂಡೆಯನ್ನ ತಟ್ಟಿದರೆ ತಾಮ್ರದ ಪಾತ್ರೆಯಾ ಸದ್ದು ಬರುತ್ತೆ ಎಂದು ಹೇಳುತ್ತಾರೆ..ಸಮಯದ ಅಭಾವ ಇದ್ದದರಿಂದ ನಾವು ಬೆಟ್ಟ ಏರಲು ಆಗಲಿಲ್ಲ..ಮರಳಿ ಬರುವ ಆಶ್ವಾಸನೆ ಕೊಟ್ಟು ಬಂದೆವು. 


No comments:

Post a Comment