Sunday, June 24, 2018

ಹೊರನಾಡಿನ ಶೃಂಗಗಿರಿಯಲ್ಲಿ ಕೋರವಂಗಲದ ಮಣಿಗಳು

 ಭಾವದ ಹುತ್ತ  ಬೆಳೆದಾಗ ಅಲ್ಲಿ ನೆನಪುಗಳ ಗಣಿಯನ್ನು ಸದಾ ಒಂದು ಉರಗ ಕಾಯುತ್ತಲೇ ಇರುತ್ತದೆ..

ಫೇಮ್ ಫೇಮ್.. ಮನೆಯ ಹತ್ತಿರ ಬಸ್ಸು ಬಂದು ನಿಂತಾಗ.. ಅಣ್ಣಾವ್ರ ಕಸ್ತೂರಿ ನಿವಾಸದ "ನೀ ಬಂದು ನಿಂತಾಗ ನಿಂತು ನೀ ನಕ್ಕಾಗ.. ನಕ್ಕು ನೀ ಸೆಳೆದಾಗ ಸೋತೆ ನಾನಾಗ" ಹಾಡು ನೆನಪಿಗೆ ಬಂತು..

ಬಸ್ಸು ಬಂದಿತ್ತು.. ಬಂದು ನಕ್ಕಿತ್ತು.. ನಕ್ಕು ನಮ್ಮನ್ನು ಸೆಳೆದಿತ್ತು.. ಸೊತ್ತಿದ್ದು ಮಾತ್ರ ನಾವಲ್ಲ.. ಯಾರೂ ಅಂದಿರಾ.. ಕೊನೆಯಲ್ಲಿ ಸಿಗುತ್ತೆ ಉತ್ತರ ನೋಡಿ..

ಮನೆಯಲ್ಲಿ ಇಡ್ಲಿ ಚಟ್ನಿ ಜೊತೆಯಲ್ಲಿ ಒಳ್ಳೆಯ ಬ್ಯಾಟಿಂಗ್ ಮಾಡಿ ಎಲ್ಲರೂ ಬಸ್ಸಿನ ಒಡಲಲ್ಲಿ ಕೂತಾಗ.. ಇದೊಂದು ಅವಿಸ್ಮರಣೀಯ ಪ್ರವಾಸ ಆಗುತ್ತೆ ಅನ್ನುವ ಒಂದು ಪುಟ್ಟ ಸುಳಿವನ್ನು ಕೊಟ್ಟಿರಲಿಲ್ಲ..

ಬಸ್ಸೊಳಗೆ ಕಲರವ... ಪುಟ್ಟ ಮಕ್ಕಳು.. ಬೆಳೆದ ಮಕ್ಕಳು.. ಮೂರು ತಲೆಮಾರನ್ನು ನೋಡಿದ್ದ ಮಕ್ಕಳು.. ಎಲ್ಲರೂ ತುಂಬಿದ್ದರು.. ಆದರೆ ಎಲ್ಲರ ವಯಸ್ಸು ಹತ್ತು ದಾಟಿರಲಿಲ್ಲ ಎನ್ನುವಷ್ಟು ಉತ್ಸಾಹ ತುಂಬಿತ್ತು..

ನಾನೂ.. ಜ್ಞಾನೇಶ.. ನಮ್ಮ ಬಸ್ಸಿನ ಸಾರಥಿಯ ಜೊತೆಯಲ್ಲಿ ಹರಟುತ್ತ ಅವರ ಪಕ್ಕದಲ್ಲಿಯೇ ಕುಳಿತಿದ್ದೆವು.. ಬಸ್ಸಿನ ಒಳಗಡೆ ಮಸ್ತಿ ನೆಡೆಯುತ್ತಿತ್ತು.. ಅಂತ್ಯಾಕ್ಷರಿ.. ಹಾಡುಗಳ ಸಾಲು.. ನೆಡೆದಿತ್ತು.. ಇದರ ಮಧ್ಯೆ ಹದವಾಗಿ ಹುರಿದು ಖಾರ ಹಾಕಿದ್ದ ಕಡಲೆ ಬೀಜ, ಚಕ್ಕುಲಿ.. ಕಡಲೆ ಪುರಿ.. ಎಲ್ಲವೂ ಬೆರೆತು ಪ್ರವಾಸಕ್ಕೆ ಒಳ್ಳೆಯ ಗಮ್ಮತ್ತು ನೀಡಿತ್ತು..

ಹೆಬ್ಬಾವಿನ ಹಾಗೆ ಮಲಗಿದ್ದ ರಸ್ತೆಯಲ್ಲಿ ನಾಗಾಲೋಟದಿ ಓಡುತ್ತಿತ್ತು ಬಸ್ಸು..  ಆಡಿ ಕಾರು ಕೊಳ್ಳುವುದರಿಂದ ಹಿಡಿದು.. ಇತ್ತೀಚಿಗಷ್ಟೇ ಮುಗಿದಿದ್ದ ಕರುನಾಡಿನ ಚುನಾವಣೆ .. ತೋಟ, ಗದ್ದೆ.. ಲಾರಿ ವ್ಯಾಪಾರ.. ಹರಾಜು.. ಬಸ್ಸು ಕೊಂಡುಕೊಳ್ಳುವಿಕೆ.. ಎಲ್ಲವೂ ನಮ್ಮ ಮಾತುಗಳಲ್ಲಿ ಬಂದು ಹೋಗುತ್ತಿತ್ತು..
ಮೋಡಗಳ ಹಾದಿಯಲ್ಲಿ 
ಬೆಳಿಗ್ಗೆ ಬಾರಿಸಿದ್ದ ಇಡ್ಲಿ ಇನ್ನೂ ಹೊಟ್ಟೆಯೊಳಗೆ ಸ್ಥಾನ ಉಳಿಸಿಕೊಂಡಿದ್ದರಿಂದ.. ಮಧ್ಯಾಹ್ನ ಮತ್ತೆ ಅದಕ್ಕೆ ತೊಂದರೆ ಕೊಡುವುದು ಬೇಡವೆನಿಸಿದ್ದರೂ.. ಬಂದ ದಾರಿಯಷ್ಟೇ ಮತ್ತೆ ಸಾಗಬೇಕಾದ್ದರಿಂದ ಮತ್ತು ಹೆಂಗಸರು ಮಕ್ಕಳಿಗೆ ಒಂದು ಬ್ರೇಕ್ ಕೊಡು ಉದ್ದೇಶದಿಂದ.. ಕೋರವಂಗಲದ ಗುರುಗಳ ಸ್ಥಾನದಲ್ಲಿ ಇರುವ ಶ್ರೀ ನಾಗಭೂಷಣ ಅವರ ಆಶ್ರಮಕ್ಕೆ ದಾಳಿಯಿಟ್ಟೆವು... ನಾವು ಅಲ್ಲಿ ತಲುಪಿದ ಸಮಯಕ್ಕೆ ಸ್ವಲ್ಪ ಹೊತ್ತಿನ ಮುಂಚೆ ಅವರು ಬಂದಿದ್ದರು...

ನಾವು ಹೊತ್ತು ತಂದಿದ್ದ ಪುಲಾವ್, ಮೊಸರನ್ನ ಜೊತೆಯಲ್ಲಿ ಖಾರವಾದ ಕಡಲೆ ಬೀಜ ಹೊಟ್ಟೆಯ ಅಣೆಕಟ್ಟನ್ನು ಸೇರಿತು.. ಅಲ್ಲಿ ಸ್ವಲ್ಪ ಹೊತ್ತು ಮಾತುಕತೆ.. ಗುರುಗಳು ಭಗವತ್ ಪ್ರೇರಣೆಯಿಂದ ಕಟ್ಟಿಸುತ್ತಿರುವ ಗಣಪತಿ ದೇವಾಲಯದ ಅಡಿಪಾಯದ ಕೆಲಸ ಅದರ ಬಗ್ಗೆ ಸ್ವಲ್ಪ ಹೊತ್ತು ತಿಳುವಳಿಕೆ.. ನಂತರ ನೆಡೆದದ್ದು ಚಮತ್ಕಾರ..

ಸುಮ್ಮನೆ ಒಂದು ವಿಷಯ ಬಿಸಾಕಿ.. ಅದನ್ನು ಆರಿಸಿಕೊಂಡು.. ಹಲಸಿನ ಹಣ್ಣಿನ ತರಹ ಅದರ ಹೂರಣ ಬಗೆದು.. ಸಿಹಿಯಾದ  ಹಣ್ಣು ರುಚಿಯಾಗುವ ಹಾಗೆ.. ತಿಳಿಯಾಗಿ ವಿಷಯವನ್ನು ಮನನ ಮಾಡಿಸುವ ನಾಗರಾಜ್ ಚಿಕ್ಕಪ್ಪ ಅವರ ಹುಟ್ಟು ಹಬ್ಬಕ್ಕೆ ಸೊಗಸಾದ ತೇರು ಸಿದ್ಧವಾಗಿತ್ತು..


ತಳ್ಳು ಗಾಡಿಯಲ್ಲಿ ಅವರನ್ನು ಕೂರಿಸಿಕೊಂಡು ಮೊಮ್ಮಕ್ಕಳ ಜೊತೆಯಲ್ಲಿ ಬಹುಪರಾಕ್ ಸ್ವೀಕರಿಸಿ ತಮ್ಮ ಹುಟ್ಟು ಹಬ್ಬವನ್ನು ಇನ್ನಷ್ಟು ಮಧುರವಾಗಿಸಿದರು..

ಮುಂದೆ ಸುಮಾರು ನಾಲ್ಕು ಘಂಟೆಗಳ ಕಾಲ ಬಸ್ಸು ಕಾಡಿನ ಹಾದಿಯನ್ನು ಸೀಳಿಕೊಂಡು ನುಗ್ಗುತ್ತಿತ್ತು..

ಇಳೆಯನ್ನು ತೋಯಿಸಿದ ಮಳೆ
ಮಳೆಯಿಂದ ಕಂಗೊಳಿಸಿದ ಕಾನನ
ಆ ಮಣ್ಣಿನ ಘಮಲು
ಗಿರಿಗೆ ಮುತ್ತಿಕ್ಕುವ ಮೋಡಗಳು
ಅಲ್ಲಲ್ಲಿ ಬಂಡೆಗಳ ಮಧ್ಯದಿಂದ
ಧುಮುಕುವ ಝರಿಗಳು
ಈ ಪ್ರವಾಸವನ್ನು ಮತ್ತಷ್ಟು ಸುಂದರವಾಗಿಸಿದ್ದವು.



ಚಳಿ ಇತ್ತೇ.. ?
ಹೌದು ಚಳಿ ಇತ್ತು
ಕೊರೆಯುತ್ತಿತ್ತಾ?
ಹೌದು ಕೊರೆಯುತ್ತಿತ್ತು
ಆದರೆ ಯಾರಿಗೂ ಚಳಿಯಾಗುತ್ತಿರಲಿಲ್ಲ ಕಾರಣ ಎಲ್ಲರ ಮನಸ್ಸು ಹಕ್ಕಿಯಾಗಿತ್ತು..
ಹಕ್ಕಿ ನೆಂದರೂ ಅದರ ರೆಕ್ಕೆಗಳ ಗರಿಗಳು ಒದ್ದೆಯಾಗೋಲ್ಲ ಕಾರಣ ಗರಿಗಳಲ್ಲಿರುವ ತೈಲದ ಲೇಪ..
ಹಾಗೆಯೇ ನಾವೂ ಕೂಡ.. ನಮ್ಮ ಮೈ ಮನಸ್ಸು ಹಗುರಾಗಿತ್ತು.. ಚಳಿ ಓಡಿ ಹೋಗಿತ್ತು..

ಹೊರನಾಡಿನ ಮನೆ ಬೇಕೆಂದಿವಳು
ಕುಳಿತಿಹಳಿಲ್ಲಿ ಮಲೆನಾಡಿನಲ್ಲಿ..
ದೇವಾನುದೇವತೆಗಳಿಗೆ ಬೆಟ್ಟ ಗುಡ್ಡಗಳ ತಾಣ ಇಷ್ಟವಾಗಿತ್ತು..
ಮನುಜರ ಅಹಂ ಇಳಿದು ತಮಸ್ಸಿನಿಂದ ಬೆಳಕಿನ ಕಡೆಗೆ ಸಾಗುವ ಪಯಣ ಸುಂದರವಾಗಿರಲಿ
ಎನ್ನುವ ಸಂದೇಶ ಹೊತ್ತು ನಿಂತಿರುವ ಈ ದೇಗುಲಗಳ ಪಯಣ ಮನಸ್ಸಿಗೆ ಮುದ ನೀಡಿತ್ತು..

ಹೊರನಾಡಿಗೆ ಬಂದಾಗ. ಚುಮು ಚುಮು ಮಳೆ..ರೂಮಿನೊಳಗೆ ಸೇರಿಕೊಂಡು.. ಸುಸ್ತು ಪರಿಹಾರ ಮಾಡಿಕೊಂಡು ಮೋರೆ ತೊಳೆದು ಅನ್ನಪೂರ್ಣೇಶ್ವರಿಯ ಮುಂದೆ ನಿಂತಾಗ.. ಮನದೊಳಗೆ ಭಕ್ತಿಯ ಶಕ್ತಿ ಜಾಗೃತಿಗೊಂಡಿತ್ತು..

ಹತ್ತಿರದಿಂದ ಆಕೆಯ ಮೊಗವನ್ನು ಎಷ್ಟು ಬಾರಿ ನೋಡಿದರೂ ತೃಪ್ತಿಯಾಗುತ್ತಿರಲಿಲ್ಲ.. ಅಲ್ಲಿ ನನ್ನ ಮನದೊಳಗೆ ಕೂಗುತ್ತಿದ್ದದ್ದು ಒಂದೇ "ಓಂ ಅನ್ನಪೂರ್ಣೇಶ್ವರಿಯೇ ನಮಃ"



ಅನ್ನಪೂರ್ಣೇಶ್ವರಿ ತಾಯಿ ನೀಡಿದ ಪ್ರಸಾದ ಸ್ವೀಕರಿಸಿ ಮುಂಜಾವಿಗೆ ಕಾಯುತ್ತಾ ಮಲಗಿದಾಗ.. ಕೈಲಾಸವನ್ನೇ ಕಂಡಷ್ಟು ಸಂತಸ ಮನದಲ್ಲಿ..

ಚಂಡಿಕಾ ಹೋಮಕ್ಕೆ ಎಲ್ಲಾ ಸಿದ್ಧತೆಗಳು ನೆಡೆದಿದ್ದವು.. ಮಾತೆ ಕಾಳಿ, ಮಾತೆ ಲಕ್ಷ್ಮಿ, ಮಾತೆ ಸರಸ್ವತಿಯ ಸಂಗಮವಾದ ಈ ಚಂಡಿಕಾ ಅಥವಾ ಚಂಡಿಯ ಹೋಮ ನಾ ಮೊದಲಬಾರಿಗೆ ನೋಡಿದ್ದು ..ಒಳ್ಳೆಯ ಅನುಭವ ಕೊಟ್ಟಿತು.. ಯಾವುದೇ ದೇಗುಲಗಳಲ್ಲಿ ಹತ್ತು ಹದಿನೈದು ನಿಮಿಷ ಇದ್ದರೆ ಹೆಚ್ಚು.. ಜನಸಂದಣಿ, ಅಥವಾ ಮತ್ತೆ ಇನ್ನೆಲ್ಲೂ ಹೋಗುವ ಕಾರ್ಯಕ್ರಮಗಳು ಇದ್ದದ್ದೇ ಹೆಚ್ಚು.. ಹೊರನಾಡಿನ ಅನ್ನಪೂರ್ಣೆ ದೇವಾಲಯದಿ ನಾವು ಇದ್ದದ್ದು ಬರೋಬ್ಬರಿ ಏಳು ಘಂಟೆಗೂ ಹೆಚ್ಚು.. ಆ ಮಂತ್ರ ಪಠಣಗಳು.. ಘಂಟಾನಾದ... ತಾಯಿ ಅನ್ನಪೂರ್ಣೇಶ್ವರಿಯ ದರ್ಶನ ಮಾಡಬೇಕೆಂದಾಗ ಹೋಗಿ ಬರುವ ಅವಕಾಶ.. ಪೂರ್ಣಾಹುತಿ... ಆ ಧೂಮ.. ತುಪ್ಪದ ಸುವಾಸನೆ.. ಮನಸ್ಸಿಗೆ ಇನ್ನೇನು ಬೇಕು..





ಮಹಾಮಂಗಳಾರತಿ ಸಮಯ.. ಮಂತ್ರಘೋಷಗಳು ತಾರಕಕ್ಕೆ ಏರಿದ್ದವು... ಸಾಲು ಸಾಲು ದೀಪಗಳು .. ತಾಯಿಯ ಮೊಗವನ್ನು ಬೆಳಗುತ್ತಿದ್ದವು.. ಪ್ರಸಾದ ಸ್ವೀಕರಿಸಿ ಧನ್ಯತೆಯಿಂದ ಬೀಗುತ್ತಿದ್ದ ಮನಸ್ಸು ಮತ್ತೆ ಪಯಣಕ್ಕೆ ಸಿದ್ಧವಾಗಿದ್ದು.. ಶೃಂಗೇರಿ ಶಾರದಾಂಬೆಯ ದರುಶನಕ್ಕೆ..

ಉಕ್ಕಿ ಹರಿಯುತಿದ್ದ ತುಂಗೆ.. ಮುಗಿಲಿಂದ ಹನಿಯುತಿದ್ದ  ಮಳೆ.. ಹೋಟೆಲಿನಲ್ಲಿ ನಮ್ಮ ಬ್ಯಾಗುಗಳನ್ನು ಹೊತ್ತಾಕಿ ಕೆಳಗೆ ಬಂದೆವು.. ದಿನವೂ ಟೇಬಲಿನಲ್ಲಿ ಕೂತು.. ತಟ್ಟೆಯಲ್ಲಿ ತಿಂದು ಸಾಕಾಗಿದ್ದ ನಮಗೆ.. ಸ್ವಲ್ಪ ಬದಲಾವಣೆ ಬಯಸಿತ್ತು.. ಹೋಟೆಲಿಗೆ ಹೋಟೆಲಲ್ಲ.. ಮನೆಗೆ ಮನೆಯಲ್ಲ.. ಆ  ರೀತಿಯ ಒಂದು ವ್ಯವಸ್ಥೆಗೆ ನಾವು ಹೋದೆವು..

ಅಚ್ಚುಕಟ್ಟಾಗಿ ಬಾಳೆ ಎಲೆ..ಕುಡಿಯಲು ನೀರು.. ಇಡ್ಲಿ.. ಪೂರಿ.. ಚಟ್ನಿ.. ಸಾಗು.. ಕಾಫೀ .. ಟೀ.. ಹಾಲು.. ವಾಹ್ ಸುಂದರ ಅನುಭವ.. ಶೃಂಗೇರಿಗೆ ಮತ್ತೆ ಭೇಟಿ ನೀಡುವಾಗ ತಿಂಡಿಗಾಗಿ ಸ್ಥಳ ಹುಡುಕುತ್ತಾ ಅಲೆಯುವ ಶ್ರಮ ತಪ್ಪಿತು..


ಪಾದಪೂಜೆ ಮಾಡಿಸುವ ಅವಕಾಶ ಸಿಕ್ಕಿತು.. ಗುರುಗಳನ್ನು ಹತ್ತಿರದಿಂದ ನೋಡುವ ಸಂಭ್ರಮ.. ಅವರ ಕೈಯಿಂದ ಪ್ರಸಾದ ಸ್ವೀಕರಿಸುವ ಯೋಗ.. ವಾಹ್.. ಸುಮಾರು ಎರಡು ಘಂಟೆಗಳ ಕಾಲ ಗುರುಗಳು ಪೂಜೆ ಮಾಡುವ ದೃಶ್ಯವನ್ನು ಕಂಡ ಕಣ್ಣುಗಳು ಧನ್ಯ ಎಂದವು.. ಆ ದೊಡ್ಡ ಗುರುಮಂದಿರದಲ್ಲಿ ಪ್ರತಿಧ್ವನಿಸುತ್ತಿದ್ದ ಮಂತ್ರೋಚ್ಛಾರಗಳು ಮನಸ್ಸನ್ನು ಹಿಡಿದಿಟ್ಟಿದ್ದವು..

"ಎಲ್ಲರಿಗೂ ಒಳ್ಳೇದಾಗಲಪ್ಪಾ" ಆ ಗುರುಗಳ ಮಧುರ ಧ್ವನಿ ಕಿವಿಯಲ್ಲಿ ಇನ್ನೂ ಗುಯ್ ಗುಟ್ಟುತ್ತಿದೆ. .

ಬೆಳಿಗ್ಗೆ ಜಳಕ ಮುಗಿಸಿ ನದಿ ತೀರದೆಡೆಗೆ ಹೆಜ್ಜೆ ಹಾಕಿದೆ..

ಜಿಟಿ ಜಿಟಿ ಮಳೆ..
ಮೈತೊಳೆದುಕೊಂಡು ನಲಿಯುತ್ತಿದ್ದ ಬೆಟ್ಟ ಸಾಲುಗಳು
ಮೋಡಗಳು ಬೆಟ್ಟಗಳಿಗೆ ನಾ ನಿಮ್ಮನ್ನು ತಬ್ಬಿಕೊಳ್ಳುತ್ತೇನೆ ಎಂದು ಮುತ್ತಿಕ್ಕುತಿದ್ದ ದೃಶ್ಯಗಳು
ಆದಿ ಗುರು ಶ್ರೀ ಶಂಕರಾಚಾರ್ಯರು ಓಡಾಡಿದ ನೆಲ
ತನ್ನ ಆಹಾರ ಸರಪಳಿ ಮರೆತು ಪ್ರಸವ ವೇದನೆ ಅನುಭವಿಸುತ್ತಿದ್ದ ಮಂಡೂಕಕ್ಕೆ ನೆರಳು ನೀಡಿದ ಪುಣ್ಯ ತಾಣ
ತಾಯಿ ಶಾರದಾಂಬೆಯನ್ನು ಕಂಡ ಕಣ್ಣುಗಳು.. ವಾಹ್ ಹೊರಗಿನ ಮಳೆ ದೇಹವನ್ನು ನೆನೆಸುತ್ತಿದ್ದರೆ.. ಒಳಗೆ ನೆಡೆಯುತಿದ್ದ ನೆನಪುಗಳ ಮಂಥನ  ಮನವನ್ನು ತೋಯಿಸುತ್ತಿದ್ದವು..


ಗುರುಗಳು ತಮ್ಮ ಪೂಜೆಯ ಸಮಯಕ್ಕೆ ತಾಯಿ ಶಾರದಾಂಬೆಯ ದೇಗುಲಕ್ಕೆ ಹೊರಟಿದ್ದ ದೃಶ್ಯ ಮನವನ್ನು ತುಂಬಿಸಿತು..

ಬೆಳಗಿನ ಉಪಹಾರ ಮುಗಿಸಿ ಬಸ್ಸನ್ನು ಹತ್ತಲು ಮನಸ್ಸಿಲ್ಲ.. ಆದರೆ ಕರ್ತವ್ಯದ ಕರೆ.. ಈ ಮಾಯಾನಗರಿಗೆ ಬರಲೇ ಬೇಕಿತ್ತು.. ಒಲ್ಲದ ಮನಸ್ಸಿಂದ ತಾಯಿ ಶಾರದಾಂಬೆಗೆ ಕೈ ಮುಗಿದು.. ನಮ್ಮನ್ನು ಹರಸು ತಾಯೆ ಎಂದು ಬೇಡಿಕೊಂಡು ಹೊರಟೆವು..







ಮುಂದೆ.. ಮುಂದೆ.. ಮುಂದೆ.. ಮುಂದೆ.. ಮುಂದೆ.. ಮುಂದೆ.. ಮುಂದೆ.. ಮುಂದೆ.. ಮುಂದೆ.. ಮುಂದೆ.. ಮುಂದೆ.. ಮುಂದೆ..

ಹ ಹ ಹ ಹ ಹ ಹ ಹ ಹ

ಮುಂದೆ ಮ್ಯಾಜಿಕ್ ನೆಡೆಯಿತು.. ಮನುಜನ ಬಾಳಿಗೆ ನವರಸಗಳು ಮುಖ್ಯ.. ಮೂರು ದಿನಗಳಿಂದ ಭಕ್ತಿ ರಸಗಳಲ್ಲಿ ಮಿಂದಿದ್ದ ಎಲ್ಲರೂ.. ಇಂದು ಹಾಸ್ಯ ರಸ.. ಮನೋರಂಜನೆಯ ಕಡೆಗೆ ಮುಖ ಮಾಡಿದ್ದೆವು.. ಈ ಕಾರ್ಯಕ್ರಮಕ್ಕೆ ಸಾರಥಿಗಳಾಗಿದ್ದು ನಮ್ಮ ಪುಟಾಣಿಗಳು ಮತ್ತು ಅವರ ಜನನಿಯರು.. .. ಹಾಡು.. ನೃತ್ಯ ... ಅಂತ್ಯಾಕ್ಷರಿ.. ಹಾಸ್ಯ ಜೋರಾಗಿತ್ತು.. ಬರುತ್ತಿದ್ದ ಹಾಡುಗಳಿಗೆಲ್ಲಾ ಸಿಗುತ್ತಿದ್ದ ಸ್ಟೆಪ್ಪುಗಳು ಸೂಪರ್ ಇದ್ದವು.. ಹಿರಿಯರು.. ಕಿರಿಯರು ಎನ್ನದೆ ಎಲ್ಲರೂ ಸಂಭ್ರಮಿಸಿದರು..

ಇದರ ನಡುವೆ.. ಹೆಬ್ಬಾವಿನ ಹಾಗೆ ಸುತ್ತಿ ಸುತ್ತಿ ಒಮ್ಮೆ ಮೇಲೇರುತ್ತಿದ್ದ .. ಒಮ್ಮೆ ಕೆಳಗೆ ಇಳಿಯುತ್ತಿದ್ದ ಬಸ್ಸು.. ತನ್ನ ಪಾಡಿಗೆ ಹಾಸನದ ಕಡೆಗೆ ಪಯಣಿಸುತ್ತಿತ್ತು.. ಅತ್ತ ಕಂದರ.. ಇತ್ತ ಗಿರಿ... ಇದರ ನಡುವೆ ಮೋಡಗಳ ಚಲ್ಲಾಟ.. ಒಂದು ಸುತ್ತಿನಲ್ಲಿ ಮಳೆ ಇದ್ದರೆ.. ಇನ್ನೊಂದು ತಿರುವಿನಲ್ಲಿ ಮೋಡಗಳ ಮುತ್ತಿಗೆ.. ಹೀಗೆ ಸಾಗಿತ್ತು.. ಹಾಸನ ಬರುವ ಹೊತ್ತಿಗೆ ಹೊಟ್ಟೆಯೊಳಗಿದ್ದ ಇಡ್ಲಿ, ಮಸಾಲೆ ದೋಸೆ... ಪೂರಿ.. ಸಾಗು.. ಕಾಫಿ.. ಟೀಗಳು.. ಬನ್ನು.. ಕಡಲೇಕಾಯಿ ಬೀಜ.. ಚಕ್ಕುಲಿ.. ಎಲ್ಲವೂ ವಾತಾಪಿ ಜೀರ್ಣೋಭವವಾಗಿತ್ತು..

ಹೋಟೆಲ್ ರಾಮ ಕಂಡೊಡನೆ.. ಟೇಬಲಿನತ್ತ ಹೆಜ್ಜೆ ಹಾಕಿ.. ತಂದಿಟ್ಟ ಸರಕುಗಳನ್ನು ತುಟಿ ಪಿಟಿಕ್ ಮಾಡದೆ ಹೊಟ್ಟೆಗಿಳಿಸಿದೆವು.. ಹೊಟ್ಟೆಗೆ ಆಹಾರ ಬಿದ್ದೊಡನೆ.. ನೆಟ್ವರ್ಕ್ ಸಿಕ್ಕಿದ ಮೊಬೈಲಿನ ಹಾಗೆ ಮತ್ತೆ ಶುರುವಾಯಿತು  ಬಸ್ಸಿನೊಳಗೆ ಸಂಭ್ರಮ..

ಮೂರು ದಿನ ಕಳೆದದ್ದು ಹೇಗೆ. .ಯಾರ ಬಳಿಯೂ ಉತ್ತರವಿರಲಿಲ್ಲ.. ಏ ದಿಲ್ ಮಾಂಗೆ ಮೋರ್  ಎನ್ನುವ ವಾಕ್ಯ ಎಲ್ಲರ ತುಟಿಯ ಮೇಲಿತ್ತು .

ಈ ಪ್ರವಾಸದ ವಿಶೇಷಗಳು

೧) ಬಸ್ಸಿನ ಸಾರಥಿ ದರ್ಶನ ಮತ್ತು ಆತನ ಸಹಾಯಕ ಶಿವೂ.. ಒಂದು ಚೂರು ಮೋರೆಯನ್ನು  ಗಂಟು ಹಾಕಿಕೊಳ್ಳದೆ ನಮ್ಮೆಲ್ಲರ ಜೊತೆ ಸಹಕರಿಸಿದ್ದು
೨) ಮಕ್ಕಳು ಪುಟಾಣಿಗಳಾಗಿದ್ದು.. ದೊಡ್ಡವರು ಮಕ್ಕಳಾಗಿದ್ದು
೩) ತಾಯಿ ಅನ್ನಪೂರ್ಣೇಶ್ವರಿಯ ಸುದೀರ್ಘ ದರ್ಶನ
೪) ಭಕ್ತಿ ಶಕ್ತಿ ಕೂಡಿದ ಚಂಡಿಕಾ ಹೋಮ
೫) ಉಕ್ಕಿ ಹರಿಯುತಿದ್ದ ತುಂಗಾ ತೀರಾ
೬) ಶೃಂಗೇರಿಯ ಗುರುಗಳನ್ನು ಹತ್ತಿರದಿಂದ ನೋಡಿದ್ದು.. ಅವರ ಆಶೀರ್ವಾದ ಸಿಕ್ಕಿದ್ದು
೭) ತಾಯಿ  ಶಾರದಾಬೆಯ ಆಶೀರ್ವಾದ
೮) ಘಟ್ಟ ಪ್ರದೇಶದ ತಾಣ.. ಹಸಿರಾಗಿ ಉಸಿರಾಗಿ ನಮ್ಮಲ್ಲಿ ನಿಂತಿದ್ದು
೯) ಶೃಂಗೇರಿಯ ಮನೆಯ ಹೋಟೆಲಿನ ಬಾಳೆ ಎಲೆಯ ಉಪಹಾರ
೧೦) ಕಡೆಗೆ ಸೋತಿದ್ದು ಏನೂ ಅಂದರೆ.. ನಮ್ಮ ನಮ್ಮ ಸಂಕಷ್ಟಗಳು

ಈ ಪ್ರವಾಸದಿಂದ ಸಿಕ್ಕ ಸ್ಪೂರ್ತಿಯ ಶಕ್ತಿ ನಮ್ಮ ಬದುಕಿನ ರಥವನ್ನು ಎಳೆಯಲು ಸಹಾಯ ಮಾಡುತ್ತದೆ ಎನ್ನುವ ವಿಶ್ವಾಸ ನಮ್ಮೆಲರದು..

ಮತ್ತೊಮ್ಮೆ ಎಲ್ಲರೊ ಸೇರೋಣ.. ಪ್ರವಾಸ ಮಾಡೋಣ ಎನ್ನುವ ಆಶಯದಲ್ಲಿ ನಮ್ಮ ನಮ್ಮ ಮನೆಯನ್ನು ಸೇರಿಕೊಂಡಾಗ ಮನಸ್ಸು ಹೇಳುತ್ತಿತ್ತು

"ನಗು ನಗುತಾ ನಲಿ ನಲಿ 
ಎಲ್ಲಾ ದೇವನ ಕಲೆ ಎ೦ದೇ ನೀ ತಿಳಿ 
ಅದರಿ೦ದ ನೀ ಕಲಿ 
ನಗು ನಗುತಾ ನಲಿ ನಲಿ 
ಏನೇ ಆಗಲಿ"