Sunday, September 15, 2013

ಬೆಳ್ಳಿ ಮೋಡದ ಆಚೆಯಿಂದ ಮೂಡಿಬಂದ ಆಶಾಕಿರಣ....

"ಬಾರೋ ಬಾರಪ್ಪ... ಯಾಕೋ ಏನಾಯ್ತು!"

ನನ್ನ ಪ್ರೀತಿಯ ........ !

"ಶ್ರೀ ಯಾಕೋ ಈ ಜಾಗದಿಂದ ಬರೋಕೆ ಮನಸ್ಸೇ ಆಗ್ತಾ ಇಲ್ಲ.. ನೋಡು ಎದುರಿಗೆ ಕಾಣುವ ನೀರು..  ನೀರೋ.. ಅಥವಾ ಚಲನ ಚಿತ್ರ ಜಗತ್ತಿನ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಅವರನ್ನು ಹೃದಯ ಮಂದಿರದಲ್ಲಿಟ್ಟು ಪೂಜಿಸುತ್ತಿರುವ ಅವರ ಅಭಿಮಾನಿಗಳ ಆನಂದಭಾಷ್ಪವೋ.. ಅರಿವಾಗುತ್ತಿಲ್ಲ.. ಅದನ್ನು ದಾಟಲು ಬಹುಶಃ ಶ್ರೀ ಕೃಷ್ಣನನ್ನು ಹೊತ್ತು ಬಂದ ವಸುದೇವನಿಗೆ ದಾರಿ ಬಿಟ್ಟ ಯಮುನೆಯ ರೀತಿ ದಾರಿ ಬಿಟ್ಟರೆ ಮಾತ್ರ ನಾ ಬರಬಲ್ಲೆ..!"

ಈ ಮಾತುಗಳನ್ನು ನೀರಿನ ತೊರೆಯನ್ನು ದಾಟಲು ನಿಂತಾಗ ನನ್ನ ಪ್ರೀತಿಯ ಕಂದ ರಿಟ್ಜ್ ಕಾರು ಹೇಳಿದಂತೆ ಭಾಸವಾಯಿತು. ಮೈ ಕಂಪಿಸುತ್ತದೆ...  ಕಂಪಿಸಬಹುದು.... ಕಂಪಿಸಲೇಬೇಕು ಎನ್ನುವ ನೀತಿ ಅರಿವಾಗಿದ್ದು ಕಂಪಲಾಪುರದ ಶ್ರೀ ಮೋಹನ್ ಅವರ ಜೊತೆಯಲ್ಲಿ, ಚಿತ್ರ ಜಗತ್ತು ಕಂಡ ಶ್ರೇಷ್ಠ ನಿರ್ದೇಶಕ ಶ್ರೀ ಪುಟ್ಟಣ್ಣ ಕಣಗಾಲ್ ಹುಟ್ಟಿದ್ದರು ಎನ್ನಲಾಗುವ, ಒಂದು ತೋಟದ ಭಾಗವನ್ನು ನೋಡಿಕೊಂಡು ಬರುವಾಗ ಅನುಭವಿಸಿದ ಒಂದು ಅಸಾಧಾರಣ ಅನುಭವ!

ಆಸಕ್ತಿಯಿಂದ ವಿಷಯ ಹೇಳಲು ಬಂದ ಗ್ರಾಮಸ್ತರು 
"ಏನೂ.. ನಮ್ಮ ಪುಟ್ಟಣ್ಣನ ಬಗ್ಗೆ ಮಾಹಿತಿ ಬೇಕೇ.. ಬನ್ನಿ ಸರ್.. ಅವರು ನಡೆದಾಡಿದ, ಆಟವಾಡಿದ, ಹುಟ್ಟಿದ ತಾಣವನ್ನೆಲ್ಲ ತೋರಿಸುತ್ತೇನೆ" ಎಂದು ಹೆಮ್ಮೆಯಿಂದ ಬಂದ ಶ್ರೀಯುತರು ಹೇಳಿದ ಪ್ರತಿಮಾತುಗಳು ಮನದ ಪಟಲದಲ್ಲಿ ಪ್ರತಿಧ್ವನಿಸುತ್ತಿತ್ತು.
ಒಬ್ಬ ಅಭಿಜಾತ ನಿರ್ದೇಶಕನ ಬಗ್ಗೆ ಇವರೆಲ್ಲ ತೋರುತ್ತಿದ್ದ ಅಭಿಮಾನವನ್ನ  ನೋಡಿ ನನ್ನ ಕಣ್ಣುಗಳಲ್ಲಿ, ಹೃದಯದಲ್ಲಿ ಮುಂಗಾರು ಮಳೆಯ ಮೋಡಗಳು ಆವರಿಸಿಕೊಳ್ಳುತ್ತಿದ್ದವು.

"ನೋಡಿ ಸರ್ ಇಲ್ಲೇ.. ಈ ಜಾಗದಲ್ಲಿ ಒಂದು ಚಿಕ್ಕ ಮನೆಯಿತ್ತು.. ಇಲ್ಲೇ ನಮ್ಮ ಪುಟ್ಟಣ್ಣ ಹುಟ್ಟಿದ್ದು.. ನನಗೆ ಗೊತ್ತಿದ್ದ ವಿಷಯವನ್ನೆಲ್ಲ ಹೇಳಿದ ಮೇಲೆ ನನಗೆ ಆಗುತ್ತಿರುವ ಸಂತೋಷಕ್ಕೆ ನನ್ನ ಈ ನಗುವೇ ಸಾಕ್ಷಿ" ಎಂದರು ಈ ಮಹನೀಯರು.  ಚಿಕ್ಕ ಚೊಕ್ಕ ಮಾಹಿತಿ ಕೊಟ್ಟು ನಮ್ಮನ್ನು ಕಣಗಾಲ್ ಊರಿಗೆ ಬೀಳ್ಕೊಟ್ಟರು.

ಅವರಿಂದ ನಮ್ಮ ಊರಿಗೆ ಹೆಸರು ಬಂತು 
ಯಾಕೋ ಮೈ ಮನ ಸಣ್ಣಗೆ ಅದುರುತಿತ್ತು.

ಪುಟ್ಟಣ್ಣ ಹಾಗೂ ಅವರ ವಂಶಸ್ತರು ಬಾಳಿ ಬದುಕಿದ್ದ ಮನೆ

ಮೈ ಜುಮ್ ಎನ್ನಿಸುವಂತಹ ಚೌಕಟ್ಟಿನಲ್ಲಿ ನಾನು 
"ಗುರುಗಳೇ..  ಕಸ ತುಂಬಿಕೊಂಡು ಕಂಗೆಟ್ಟಿದ್ದ ಊರಿನ ಈ ದೇವಾಲಯದಲ್ಲಿ ಪುಟ್ಟಣ್ಣ ತಾನೇ ಪೊರಕೆ ತೆಗೆದುಕೊಂಡು ಬಂದು ಇಡಿ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ ಊರಿನ ಜನರಿಗೆ ಬುದ್ದಿ ಮಾತು ಹೇಳಿದ್ದು ಇಲ್ಲೇ" ಎಂದು ಒಂದು ದೇವಾಲಯವನ್ನು ತೋರಿದರು ನಮ್ಮ ಮೋಹನ್ ಸರ್.

ಪುಟ್ಟಣ್ಣನವರ ಮನೆಯ ಬೀದಿ 

ಪುಟ್ಟಣ್ಣನವರು ನೆಡೆದಾಡಿರಬಹುದಾದ ಈ ಭೂ ಮಾತೆಯನ್ನು ಒಮ್ಮೆ ಸ್ಪರ್ಶಿಸುವ ಮನಸ್ಸಾಯಿತು. ಮಳೆ ಬಂದು ರಾಡಿಯಾಗಿದ್ದ ನೆಲವನ್ನೊಮ್ಮೆ ಕೈಯಿಂದ ಮುಟ್ಟಿ ಆ ಮಹಾನ್ ಚೇತನಕ್ಕೆ ಒಮ್ಮೆ ಮನದಲ್ಲಿಯೇ ನಮನ ಸಲ್ಲಿಸಿದೆ.

ಸರ್ ಇದೆ ಮನೆಯಲ್ಲಿ ಸರ್ ಪುಟ್ಟಣ್ಣ ಬೆಳೆದದ್ದು.. ಎಂದು ಆ ಮನೆಯನ್ನು ತೋರಿದರು ಶ್ರೀ ಚಂದ್ರಶೇಖರ್.. "ಇಲ್ಲೇ ಕ್ಯಾಮೆರಾ ಇಟ್ಟು ಆ ಗುಡ್ದವನ್ನೆಲ್ಲ ಚಿತ್ರದಲ್ಲಿ ತೋರಿಸುತ್ತೇನೆ ಎಂದು ಆ ಊರಿನ ಜನತೆಗೆ ಹೇಳಿದ್ದ ಶ್ರೀ ಪುಟ್ಟಣ್ಣ ಇಂದು ಬರಿ ನೆನಪು ಮಾತ್ರ.
ಪುಟ್ಟಣ್ಣನವರ ಬಗ್ಗೆ ಅಪಾರ ಮಾಹಿತಿ ಇರುವ ಮೋಹನ್ ಸರ್ ಹಾಗೂ ಚಂದ್ರಶೇಖರ್ ಸರ್ 

ಇನ್ನೂ ಇಲ್ಲೇ ಸ್ವಲ್ಪ ಹೊತ್ತು ಕಣಗಾಲ್ ಊರಿನಲ್ಲಿ ಇರಬೇಕೆಂದು ಮನಸ್ಸು ಬಯಸಿದ್ದರೂ.. ನನ್ನ ಕಾರು ಹೇಳುತ್ತಿತ್ತು "ಶ್ರೀ ಬೇಗ ಬಾ ಮುಂದೆ ಕಾದಿದೆ ಒಂದು ಅಪರೂಪದ ದೃಶ್ಯ"

ಸುಂದರ ಪರಿಸರದಲ್ಲಿ ಕಾರು ಓಡುತ್ತಿತ್ತು.. ಸುತ್ತ ಮುತ್ತಲ ಪರಿಸರ ನೋಡುತ್ತಾ ಪುಟ್ಟಣ್ಣ ಯಾಕೆ ಪ್ರಕೃತಿ ಮಡಿಲಲ್ಲಿ ಹೆಚ್ಚಿನ ಚಿತ್ರಿಕರಣ ಮಾಡುತ್ತಿದ್ದರು ಎನ್ನುವ ಕುತೂಹಲದ ಪ್ರಶ್ನೆಗೆ....  ಮನ ಮಂದಿರದಲ್ಲಿ ಉತ್ತರ ಸಿಗುತ್ತಿತ್ತು.

ಪ್ರತಿಭೆ ಎಲ್ಲಿದ್ದರೂ ಬೆಳಕಿಗೆ  ಬರುತ್ತದೆ 

"ಸರ್ ಮಲ್ಲರಾಜಪುರದಲ್ಲಿ ಪುಟ್ಟಣ್ಣ ಅವರ ತಮ್ಮ ಇದ್ದಾರೆ ಅವರನ್ನು ಭೇಟಿ ಮಾಡಿ" ಎಂದರು ಪುಟ್ಟಣ್ಣ ಕಣಗಾಲ್ ಇದ್ದ ಮನೆಯ ನೆರೆಹೊರೆಯವರು.

ಇನ್ನು ತಡವೇಕೆ ಎಂದು ಒಮ್ಮೆ "MS (Maruti Suzuki) " ಕಡೆ ನೋಡಿದೆ.. MS ಕಣ್ಣು ಹೊಡೆದು ನಡಿ "SM" (Srikanth Manjunath) ಎಂದ.. ಭರ್ರನೆ ಪ್ರಕೃತಿ ಮಡಿಲಲ್ಲಿ ಸಾಗಿತ್ತು.. ಸುಮಾರು ಮುಸ್ಸಂಜೆಯ ಸಮಯ.. ಅವರಿವರನ್ನು ಕೇಳುತ್ತಾ ಒಂದು ಮನೆಯ ಮುಂದೆ ನಿಂತೆವು. ಅಂತು ಇಂತೂ ಮುಂದೆ ನಡೆಯಬೇಕಿದ್ದ ಒಂದು ಅಪರೂಪದ ರೋಮಾಂಚಕಾರಿ
ಸನ್ನಿವೇಶಕ್ಕೆ ಮನಸ್ಸು ಸಿದ್ಧವಾಗಿತ್ತು

ಸರ್ ನಾನೇ ಪುಟ್ಟಣ್ಣ ಕಣಗಾಲ್ ಅವರ  ತಮ್ಮ ನರಸಿಂಹ ಅಂತ ಹೇಳುತ್ತಾ ನಮ್ಮ ಕಡೆ ಕೈಮುಗಿದರು. ನಮಗೆ ದೇವರನ್ನೇ ಕಂಡಷ್ಟು ಸಂತಸ.
ನಾನೇ ಪುಟ್ಟಣ್ಣ ಕಣಗಾಲ್ ಅವರ  ತಮ್ಮ ನರಸಿಂಹ
ನಾವು ಕೈ ಮುಗಿದೆವು.ಸುಮಾರು ಎಪ್ಪತ್ತೊಂದು ವಸಂತದಲ್ಲಿ ಅನೇಕ ಏರು ಹಾದಿ.. ಇಳಿಜಾರು ಹಾದಿಗಳನ್ನೂ ಕಂಡಿದ್ದರೂ ಕುಗ್ಗದ ಜೀವನೋತ್ಸಾಹ, ಎದೆ ತಟ್ಟಿ ನಾ ಸ್ವಾಭಿಮಾನಿ ಎಂದು ಹೇಳಬೇಕಾಗೆ ಇಲ್ಲದ ಸಾಭಿಮಾನ, ಅಭಿಮಾನ ತುಂಬಿದ ಕಣ್ಣುಗಳು, ಹೇಳುವ ವಿಷಯಗಳಲ್ಲಿ ನಿಖರತೆ,  ಎಲ್ಲವೂ ನಮ್ಮ ಮನದಲ್ಲಿದ್ದ ಪುಟ್ಟಣ್ಣ ಕಣಗಾಲ್  ಎಂಬ ಒಂದು ಸುಂದರ ಮೂರ್ತಿಗೆ ಆನಂದ ಭಾಷ್ಪದಲ್ಲೇ ಅಭಿಷೇಕ ಮಾಡಲು ಮಾನಸಿಕವಾಗಿ ಸಿದ್ಧಪಡಿಸಲು ತಾಕತ್ ಇರುವ ಒಂದು ಸುಂದರ ಮನಸ್ಸಿನ ಸುಮಧುರ ಜೀವಿಯ ಮುಂದೆ ಆಸೀನರಾದೆವು. ಸಹಾಸ್ರಾಕ್ಷ  ಇಂದ್ರನೇ ಬಂದಿದ್ದರೂ ತನಗೆ ಸಿಕ್ಕ ಶಾಪವನ್ನು ಸಹಸ್ರ ಕಿವಿಗಳಿಗೆ ಬದಲಿಸಿಕೊಳ್ಳಲು ಪ್ರೇರೇಪಣೆ ನೀಡುವ ಸನ್ನಿವೇಶ.

ಧನ್ಯನಾದೆ ಎಂದು ಭಾವುಕರಾದ ಬಾಲೂ ಸರ್ 
ಪುಟ್ಟಣ್ಣ ಅವರ ಸಹೋದರರಾದ ಶ್ರೀ ನರಸಿಂಹನವರು ಸುಮಾರು ಎರಡು ಘಂಟೆಗಳ ಕಾಲ ನಮ್ಮನ್ನು ಅಕ್ಷರಶಃ ೪೦ ವರ್ಷಗಳಷ್ಟು ಹಿಂದಕ್ಕೆ ಅನಾಮತ್ತಾಗಿ ಕರೆದೊಯ್ದಿದ್ದರು. ಪುಟ್ಟಣ್ಣ ಅವರ ಆರಂಭಿಕ ಸಾಹಸಮಯ, ಯಾತನಮಯ ಬದುಕು, ಶ್ರದ್ಧೆ, ನಿಷ್ಠೆ, ನಿರ್ದೇಶನ ಮಾಡಲು ಸುಮಾರು ೨೩ ವರ್ಷಗಳಷ್ಟು ಕಾಲ ಪಟ್ಟ ಶ್ರಮ, ಬೆಳ್ಳಿ ಮೋಡ ಚಿತ್ರ ಮಾಡಲು ಪಟ್ಟ ಪಾಡು, ಎಲ್ಲ ದೃಶ್ಯಗಳನ್ನು ಕಾಲನ ವಾಹನದಲ್ಲಿ ಕೂತು ಒಮ್ಮೆ ಹಿಂದಕ್ಕೆ ಹೋಗಿ ಅಲ್ಲಿಯೇ ನಿಂತು ಕಣ್ಣಾರೆ ನೋಡಿದಷ್ಟು ನಿಖರತೆಯಿಂದ ವರ್ಣಿಸಿದರು.

ನನ್ನ ಜೀವನದಲ್ಲಿ ಚಿನ್ನದ ಚೌಕಟ್ಟಿನಲ್ಲಿಲ್ಲಿಡಬೇಕಾದ ಚಿತ್ರ 

ಅವರ ನಿರರ್ಗಳ ಮಾತು ಮುಗಿದಾಗ

"ತುಲಾ ಮಾಸೇತು ಕಾವೇರಿ
ಸರ್ವಾತೀರ್ಥಾಶ್ರಿತಾ  ನದಿ
ಪಂಚ ಪಾತಕ ಸಂಹರ್ತ್ರಿ ವಾಜಿನೇದ ಫಲಪ್ರದ
ಭಕ್ತಾನುಕಂಪೇ ಮುನಿಭಾಗ್ಯ  ಲಕ್ಷ್ಮಿ
ನಿತ್ಯೆ  ಜಗನ್ಮಂಗಳದಾನಶೀಲೇ
ನಿರಂಜನೆ  ದಕ್ಷಿಣದೇಶ  ಗಂಗೆ
ಕಾವೇರಿ ಕಾವೇರಿ ಮಮ ಪ್ರಸೀದ"   

ಎಂದು ಕಣ್ಣಲ್ಲಿ ಹರಿಯುತ್ತಿದ್ದಳು. ಪುಟ್ಟಣ್ಣ ಮತ್ತು ಸಹೋದರರರು ಬಲು ಪ್ರೀತಿ ಗೌರವ ತೋರುವ ಕಾವೇರಿ ನದಿ ನನ್ನ ಕಣ್ಣಲ್ಲಿ ಕಂಡದ್ದು ಅನುಭವಿಸಿದ ಮೇಲೆ ನನಗೆ ನಾನೇ ಧನ್ಯ ಎಂದಿತು ಮನಸ್ಸು.

ಬ್ಲಾಗ್ ಲೋಕ ಪುಟ್ಟಣ್ಣನವರ ಸಹೋದರ ಅವರ ಜೊತೆಯಲ್ಲಿ 

ನಾನು ನಾನಾಗಿರಲಿಲ್ಲ.. ಬಾಲೂ ಸರ್, ಮೋಹನ್ ಸರ್,  ಅಲೆಮಾರಿಗಳು ಗುಂಪಿನ ಪ್ರತಿ ಪ್ರವಾಸದಲ್ಲೂ ನನ್ನ ಜೊತೆ ಕೈಜೋಡಿಸುವ ಸಂದೀಪ್ ಎಲ್ಲರೂ ಅವರವರ ಅಭಿಪ್ರಾಯ, ಅನಿಸಿಕೆ ಹೇಳುತ್ತಿದ್ದರು, ನನ್ನ ಮನಸ್ಸು ಇನ್ನು ಎಪ್ಪತ್ತರ ದಶಕದಲ್ಲಿ ಪುಟ್ಟಣ್ಣ ಅವರ ಸುತ್ತ ಮುತ್ತಲೇ ಓಡಾಡುತ್ತಿತ್ತು.

"ಗುರೂಜಿ ಕಂ ಬ್ಯಾಕ್ ಪ್ಲೀಸ್.. ಕಂ ಬ್ಯಾಕ್ ಪ್ಲೀಸ್" ಎಂದರು ಬಾಲೂ ಸರ್..

ನಿಧಾನವಾಗಿ ಮನಸ್ಸು ತಹಬದಿಗೆ ಬಂದು ಸಂಗೀತ ಗ್ರಾಮ ರುದ್ರ ಪಟ್ಟಣಕ್ಕೆ ಹೊರಟಿತು. ಅರ್ಚಕರಿಗೆ ಕರೆ ಮಾಡಿ ಕಾಯುತ್ತಾ ಕುಳಿತೆವು. ಕೆಲ ಸಮಯದ ನಂತರ ಬಾಗಿಲನ್ನು ಸರಿಸಿ ಒಳಹೋದಾಗ ಕಂಡದ್ದು ಬೃಹದಾಕರವಾದ ವೀಣಾ ಮಂದಿರ.. ಕಟ್ಟಡ ವಿನ್ಯಾಸಗಾರರ ಚಾಕಚಕ್ಯತೆಯ ಕರಗಳಲ್ಲಿ ಅರಳಿದ ಸುಂದರ ಭವನ ಈ ವೀಣಾ ಮಂದಿರ. ವೀಣೆಯ ಆಕೃತಿಯಲ್ಲಿ ನಿರ್ಮಿತಗೊಂಡಿರುವ ಈ ಮಂದಿರದಲ್ಲಿ ಸಂಗೀತವನ್ನೇ ಉಸಿರಾಗಿಸಿಕೊಂಡ ದಾಸಶ್ರೇಷ್ಟರ ಮೂರ್ತಿಯ ಸುಂದರ ಕೆತ್ತನೆಗಳು ಕಂಡು ಬರುತ್ತವೆ. ನಡುವೆ ಸಂಗೀತ ಅಧಿದೇವತೆ ಶಾರದೆಯ ಸುಂದರ ಮೂರ್ತಿ. ಪ್ರತಿ ಮೂರ್ತಿಯ ಮುಂದೆ ನಿಂತು ನಮಸ್ಕರಿಸಿದಾಗ ಮುದ್ರಿತ ಧ್ವನಿಯ ಮೂಲಕ ಆ ಸಂಗೀತ ಸಾಧಕರ ಸ್ಥೂಲ ಪರಿಚಯ ನಮಗಾಗುತ್ತದೆ. ಸಂಗೀತದಲ್ಲಿ ಮಂತ್ರ ಹೇಳಿ ಪೂಜೆಸಲ್ಲಿಸುವ ವಿಶಿಷ್ಟ ವಿಧಾನವಷ್ಟೇ ಅಲ್ಲದೆ ಈ ಇಡಿ ಗ್ರಾಮವೇ ಸಂಗೀತ ಗ್ರಾಮ ಎಂದು ಹೆಸರಾಗಿದೆ. ಮನೆ ಮನದಲ್ಲೂ ಸಂಗೀತವನ್ನೇ ಉಸಿರಾಗಿಸಿಕೊಂಡ ಈ ಗ್ರಾಮ ಕರುನಾಡಿನ ವಿಶಿಷ್ಟ ಕಾಣಿಕೆ ಎನ್ನಬಹುದು.

ರುದ್ರಪಟ್ಟಣ ಸುಂದರ ಮಂದಿರ 

ವೀಣಾ ಭವನ 

ಮೋಹನ್ ಸರ್ ಅವರ ಮನೆಯಲ್ಲಿ ರಾತಿ ಭೋಜನಕ್ಕೆ ಸಿದ್ಧತೆಯಾಗಿದ್ದರಿಂದ ಪಿರಿಯಪಟ್ಟಣಕ್ಕೆ ಬಂದು, ಅವರ ತುಂಬು ಸಂಸಾರದ ಜೊತೆಯಲ್ಲಿ ಕೆಲವು ಆತ್ಮೀಯ ಕ್ಷಣಗಳನ್ನು ಕಳೆದು ಭೂರಿ ಭೋಜನವನ್ನು ಉಂಡು ಬಾಲೂ ಸರ್ ಅವರ ಮೈಸೂರಿನ ಮನೆಗೆ ತಲುಪಿದಾಗ ಘಂಟೆ ರಾತ್ರಿ ೧೧.೩೦ ಎಂದು ಕಿರುಚಿತು. ಹಾಸಿಗೆಗೆ ಹಾಗೆ ತಲೆಕೊಟ್ಟು ಒಮ್ಮೆ rewind ಗುಂಡಿಯನ್ನು ಒತ್ತಿದೆ.

"ಶ್ರೀಕಾಂತ್ ... ನಾನು ರೆಡಿ..ಹೊರಡೋಣ" ಎಂದರು ಸಂದೀಪ್. ಮೈಸೂರು ರಸ್ತೆಯ ದೀಪಾಂಜಲಿ ನಗರದ ಬಳಿಯಿಂದ ಸಂದೀಪ್ ಅವರನ್ನು ಕರೆದುಕೊಂಡು ಮೈಸೂರಿಗೆ ಧಾವಿಸಿತು ನನ್ನ ಮೆಚ್ಚಿನ ರಿಟ್ಜ್. ದಾರಿಯಲ್ಲಿ ಮದ್ದೂರಿನ ಕದಂಬಂನಲ್ಲಿ  ಉಪಹಾರ ಮುಗಿಸಿಕೊಂಡು ಮೈಸೂರಿಗೆ ಬಂದಾಗ ಘಂಟೆ ಬೆಳಿಗ್ಗೆ ಸುಮಾರು ೯.೩೦.

ಬಾಲೂ ಸರ್ ಅವರ ತಾಯಿ, ಮಡದಿ ಅವರ ಜೊತೆಯಲ್ಲಿ ಉ. ಕು. ಸಾಂ ಮುಗಿಸಿ, ಕಾಫಿ ಹೀರಿ ಪಿರಿಯಪಟ್ಟಣದಲ್ಲಿರುವ
ಶ್ರೀ ಕಂಪಲಾಪುರ ಮೋಹನ್ ಅವರ ಮನೆಗೆ ಬಂದೆವು. ಆಗ ಸಮಯ ಸುಮಾರು ೧೧.೩೦.

ಮೋಹನ್ ಸರ್ ಅವರ ಪರಿಚಯ, ಅವರ ದಾರಿ ದೀಪ ಪತ್ರಿಕೆಯ ವಾರ್ಷಿಕೋತ್ಸವ, ಪುಟ್ಟಣ್ಣನವರ ಜೊತೆಯಲ್ಲಿನ ಒಡನಾಟ, ಮೋಹನ್ ಸರ್ ಅವರಿಗೆ ಬಂದ ಪ್ರಶಸ್ತಿಗಳು, ಅಭಿಮಾನ ಪತ್ರಗಳ ಕಡೆ ಕಣ್ಣು ಹಾಯಿಸಿ ಇಂತಹ ಸುಮಧುರ ಮನಸ್ಸಿನ ಸಾಧಕರ ಪರಿಚಯ ಮಾಡಿಕೊಟ್ಟ ಬಾಲೂ ಸರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದೆವು. ಯಾವ ಫಲಾಫಲಗಳ ನಿರೀಕ್ಷೆಯಿಲ್ಲದೆ, ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿರುವ ಹಾಗು ಕವಿಗಳನ್ನು ಪ್ರೋತ್ಸಾಹಿಸುವ, ಕನ್ನಡ ಬೆಳೆಸುವ, ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಹಮ್ಮಿಕೊಂಡು ಸಾಗುತ್ತಿರುವ ಮನೆ ಮನೆಯಲ್ಲಿ ಕವಿಗೋಷ್ಠಿ ಕಾರ್ಯಕ್ರಮ ತಿಂಗಳಿಗೆ ಒಂದರಂತೆ ಸುಮಾರು ೧೭೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ದಾಟಿ ಮುಂದುವರೆಯುತ್ತಿರುವ ಇವರ ಸಾಧನೆಗೆ ನಮ್ಮ ಅನಂತ ನಮಸ್ಕಾರಗಳು. 

ಸರಳ ವಿರಳ ಜೀವಿ ಪುಟ್ಟಣ್ಣ ನವರ ಒಡನಾಟದ ಪುಣ್ಯ ಕಂಡ ಶ್ರೀ ಕಂಪಲಾಪುರ ಮೋಹನ್ 

ಮೋಹನ್ ಸರ್ ಜೊತೆಯಲ್ಲಿ ಬ್ಲಾಗ್ ಲೋಕದ ಮಂದಿ 
ನಮಗೆ ಇನ್ನೊಂದು ಆಶ್ಚರ್ಯ ಕಾದಿದ್ದು....  ನಮಗೆ ಅರಿವಿಗೆ ಬರಲೇ ಇಲ್ಲ. ಸರ್ಕಾರಿ ಪದವಿ ಪೂರ್ವ ಶಾಲೆಯಲ್ಲಿ NSS ವಿಭಾಗದ ವಾರ್ಷಿಕೋತ್ಸವದ ಸಮಾರಂಭಕ್ಕೆ ನಾವು ಹೋದೇವು. ಮೋಹನ್ ಸರ್ ಅವರನ್ನು ಆಹ್ವಾನಿಸಿದ್ದರು. ಹೂವಿನ ಜೊತೆಯಲ್ಲಿ ನಾರು ಸ್ವರ್ಗಕ್ಕೆ ಎನ್ನುವ ಹಾಗೆ ನಮಗೂ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶಮಾಡಿಕೊಟ್ಟು, ವಿಧ್ಯಾರ್ಥಿನಿಯರೇ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಈ ಸುಂದರ ಕಾರ್ಯಕ್ರಮದಲ್ಲಿ ಕೆಲ ಸಮಯ ಕಳೆದದ್ದು ನಿಜಕ್ಕೂ ಒಂದು ಅನರ್ಘ್ಯ ಅನುಭವ.  ಸುಂದರ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿದ್ದ ಶ್ರೀ ಮೋಹನ್ ಅವರು, ಉದ್ಘಾಟನೆ ಮಾಡಿದ ಬಾಲೂ ಸರ್. ವಿಜಯವಾಣಿ ಪತ್ರಿಕೆಯ ಪತ್ರಕರ್ತರು, ಪ್ರಾಂಶುಪಾಲರು, ಉಪಾಧ್ಯಾಯರು ಉಪಸ್ಥಿತ ಸಭೆಯಲ್ಲಿ ಮಾತಾಡಿದ, ಹಾಡಿದ ವಿಧ್ಯಾರ್ಥಿನಿಯರು ಅಭಿನಂದನೆಗೆ ಅರ್ಹರು. ಅಲ್ಲಿಂದ ಬೀಳ್ಕೊಡುವ ಮುನ್ನ ರುಚಿಯಾದ ಪಲಾವ್ ನೀಡಿದ ಕಾರ್ಯಕ್ರಮ ರೂವಾರಿಗಳಿಗೆ ಎಷ್ಟು ಧನ್ಯವಾದಗಳನ್ನು ಸಲ್ಲಿಸಿದರು ಕಡಿಮೆಯೇ. 

ನಗಬೇಡಿ ಮೋಹನ್ ಸರ್ ... ಏನ್ ಸರ್ ಹೀಗೆ ಮಾಡಿಬಿಟ್ರಿ ..! 

ಸುಂದರ ಸಮಾರಂಭ 

ಶಾಲೆಯ ಆವರಣ.. ಇಷ್ಟವಾಯಿತು 

ಅಲ್ಲಿಂದ ಮುಂದೆ ಹೋರಟ ನಾವು ಬಂದದ್ದು ರಾಜಬಿಳಗುಲಿ ಎಂಬ ಗ್ರಾಮಕ್ಕೆ. ಪುಟ್ಟಣ್ಣ ಅವರ ತಾಯಿಯ ತವರೂರು. ಇಲ್ಲಿಯೇ ಪುಟ್ಟಣ್ಣನವರ ಸಹೋದರ ಕಣಗಾಲ್ ಪ್ರಭಾಕರ ಶಾಸ್ತ್ರಿ ಹುಟ್ಟಿದ್ದು ಎನ್ನಲಾಗುತ್ತದೆ. ಅಲ್ಲಿಂದ ಮುಂದೆ ಹೊರಟ ನಮಗೆ ಸಿಕ್ಕದ್ದು ಇನ್ನೊಬ್ಬ ಸಾಧಕರ ಸಮಾಗಮ. 
ಸಾಧಕ ಶ್ರೀ ಲಕ್ಶ್ಮಣ ಮತ್ತು ಅವರ ನೆಚ್ಚಿನ ಮೋಹನ್ ಸರ್ 
ಹಳ್ಳಿಯಲ್ಲಿ ಇದ್ದು ಕನ್ನಡದಲ್ಲಿ ಎಂ ಎ ಮುಗಿಸಿ ಆರ್ಥಿಕ ಶಕ್ತಿ ಕೊಡುವ ಯಾವ ಉದ್ಯೋಗವನ್ನು ಅರಸದೆ ಸುತ್ತ ಮುತ್ತಲ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎನ್ನುವ ಅಭಿಲಾಷೆಯಿಂದ ಪ್ರಾರಂಭಿಸಿದ ಶಾಲೆಯಲ್ಲಿ ಇಂದು ಸುಮಾರು ೬೦೦ ಮಕ್ಕಳು ಓದುತ್ತಿದ್ದಾರೆ. ಜೊತೆಗೆ ಹತ್ತನೇ ತರಗತಿಯ ಪರೀಕ್ಷೆಗಳಲ್ಲಿ ನೂರು ಪ್ರತಿಶತ ಉತ್ತಿರ್ಣ ಶ್ರೇಣಿ ಹೊಂದಿರುವುದು ಈ ಶಾಲೆಯ ಹೆಗ್ಗಳಿಕೆ ಎನ್ನಬಹುದು. ಸರಳ ವಿರಳ ಜೀವಿ ಶ್ರೀ ಲಕ್ಷ್ಮಣ ಅವರಿಗೆ ನಮ್ಮೆಲ್ಲರ ಕಡೆಯಿಂದ ಅಭಿನಂದನೆಗಳನ್ನು ಸಲ್ಲಿಸಿ ಕಣಗಾಲ್ ಕಡೆಗೆ ದೌಡಾಯಿಸಿದೆವು. 
ಶ್ರೀ ಲಕ್ಷ್ಮಣ ಅವರ ಶಾಲೆ 

ಶ್ರೀ ಲಕ್ಷ್ಮಣ ಅವರ ಶಾಲೆ 

ಮನಸ್ಸು "ನೋಡು ಶ್ರೀ.. rewind ಟೇಪ್ ಮುಗಿದಿದೆ... ಇಲ್ಲಿಂದ ಮುಂದೆ ಹೇಳಬೇಕಾದ ವಿಷಯವನ್ನು ಈ ಲೇಖನದ ಆರಂಭದಲ್ಲೇ ಹೇಳಿದ್ದೇನೆ.. ಇನ್ನೊಮ್ಮೆ ಕಂಪ್ಯೂಟರಿನ ಆ ಇಲಿಯನ್ನು ಮೇಲಕ್ಕೆ ಕೊಂಡೊಯ್ದರೆ ಮತ್ತೆ ಮೊದಲಿಂದ ವಿಷಯ ಅರಿವಾಗುತ್ತೆ" ಎಂದು ಹೇಳಿತು.  

ಮುಂಜಾನೆ ಕಾರಿನ ಹತ್ತಿರ ಬಂದು ನಿಂತೇ.. ಕುಕ್ಕ್ ಕುಕ್ಕ್ ಎಂದು ಸದ್ದು ಮಾಡುತ್ತಾ ಬಾಗಿಲನ್ನು ತೆರೆದು ದಂತಪಂಕ್ತಿತೋರಿಸಿತು. "ಶ್ರೀ ಏನೇ ಹೇಳು ಈ ಪ್ರವಾಸ ನನ್ನ ಮನಪಟಲದಲ್ಲಿ ಉಳಿಯಲು ಬೇಕಾದಷ್ಟು ಕಾರಣಗಳಿವೆ.. ನೋಡಿಲ್ಲೇ ಇಲ್ಲೇ dashboard ನಲ್ಲಿ ಬರೆದಿದ್ದೇನೆ ಎಂದಿತು. ನಾನು ಕುತೂಹಲದಿಂದ ಇಣುಕಿ ನೋಡಿದೆ.. ಹಲ್ಲು ಬಿಟ್ಟೆ.. ಸ್ಟೀರಿಂಗ್ ಅನ್ನು ಗಟ್ಟಿಯಾಗಿ ತಬ್ಬಿಕೊಂಡು.. ಕಾರಿಗೆ ಒಂದು ಸುತ್ತು ಬಂದು.... ಒಂದು ಸಿಹಿ ನಗೆಯನ್ನು ಬೀರಿದೆ.... ಒಂದು ಬಾರಿ ಕಣ್ಣು ಮಿಟುಕಿಸಿ ನಮ್ಮನ್ನು ಕರೆದೊಯ್ದು ಬಂದ ಕಾರು ಮತ್ತೆ ನಿಂತದ್ದು ಬೆಂಗಳೂರಿನ ವಿಜಯನಗರದಲ್ಲಿ... 

ಕಾರಿನ ಡ್ಯಾಶ್ ಬೋರ್ಡ್ನಲ್ಲಿ ಕಂಡ ವಿಷಯಗಳು :-

೧. ಶ್ರೀ ಪುಟ್ಟಣ್ಣ ನಭೂತೋ ನಭವಿಷ್ಯತಿ 

ಶ್ರೀ ಪುಟ್ಟಣ್ಣ ನಭೂತೋ ನಭವಿಷ್ಯತಿ 
೨. ಶ್ರೀ ಕಂಪಲಾಪುರ ಮೋಹನ್ ಅವರ ಆಸಕ್ತಿ, ತನಗೆ ಗೊತ್ತಿರುವ ವಿಚಾರವನ್ನು ಇತರರಿಗೆ ತಿಳಿಸುವ ತವಕ ಅಭಿನಂದನೀಯ 
೩. ಶ್ರೀ ಲಕ್ಷ್ಮಣ ಅವರ ಶಿಕ್ಷಣ ಕ್ಷೇತ್ರದ ಕ್ರಾಂತಿಕಾರಕ ದಾಪುಗಾಲು ಮತ್ತು ಪರಿಶ್ರಮ
೪. ಶ್ರೀ ನರಸಿಂಹ ಶಾಸ್ತ್ರಿಯವರ ಕುಗ್ಗದ ಜೀವನೋತ್ಸಾಹ, ವಿಚಾರಗಳನ್ನು ಹೇಳುವಲ್ಲಿ ನಿಖರತೆ, ಕರಾರುವಾಕ್ಕಾಗಿ, ಮತ್ತು ಆಸಕ್ತಿದಾಯಕವಾಗಿ ವಾಸ್ತವಿಕ ಘಟನೆಗಳನ್ನು ಹೇಳುವ ಶೈಲಿ 
೫. ಈ ಇಡಿ ಕಾರ್ಯಕ್ರಮದ ರೂವಾರಿ ಬಾಲೂ ಸರ್ ಅವರ ಸರಳತೆ 
೬. ಶ್ರೀಕಾಂತ್ ನೀವು ಯಾವುದೇ ಪ್ರವಾಸಕ್ಕೆ ಕರೆಯಿರಿ ನನ್ನದು ಡೀಫಾಲ್ಟ್ ಆನ್ಸರ್ ಎನ್ನುತ್ತಾ .. ಇದು ಸೇರಿ ಅಲೆಮಾರಿಗಳು ತಂಡದ ಅವಿರತ ೨೬ನೆ ಪ್ರವಾಸಕ್ಕೆ ಸಂದೀಪ್ ನನ್ನ ಜೊತೆಯಲ್ಲಿ ಕೈಗೂಡಿಸಿದ್ದು
೭. ಈ  ಲೇಖನವನ್ನು ಇ(ಕ)ಷ್ಟ ಪಟ್ಟು ಓದುವ ಎಲ್ಲಾ ನನ್ನ ಆತ್ಮೀಯ ಓದುಗರಿಗೆ ನನ್ನ ಧನ್ಯವಾದಗಳು. 

Wednesday, April 3, 2013

ಹಾಸನದ ಬಳಿಯ ಹಿನ್ನೀರಿನಲ್ಲಿ ಮುಳುಗೇಳುವ ಶೆಟ್ಟಿಹಳ್ಳಿ ಚರ್ಚು!

ಸನಾದಿ ಅಪ್ಪಣ್ಣ ಚಿತ್ರದಲ್ಲಿ ಜಯಪ್ರದ.. ಅಣ್ಣಾವ್ರ (ಅಪ್ಪಣ್ಣ) ಸನಾದಿ ನಾದಕ್ಕೆ ನೃತ್ಯ ಮಾಡಬೇಕು ಎಂದು ಆಸೆ  ಇಟ್ಟುಕೊಂಡಿರುತ್ತಾರೆ. ಆದರೆ ಅದು ಸಾಧ್ಯವಾಗೋಲ್ಲ.. ಹೇಗಾದರೂ ಸರಿ ಅದನ್ನು ಸಾಧಿಸಬೇಕು ಎಂದು ಸ್ವಲ್ಪ ಬುದ್ಧಿವಂತಿಕೆಯಿಂದ ಸನಾದಿ ಹಿಡಿಯಲೂ ಕೂಡ ಬರದ ಬಾಲಣ್ಣ ಅವರನ್ನು ಕರೆಸಿ ಕಾರ್ಯಕ್ರಮ ಸಿದ್ಧಪಡಿಸುತ್ತಾರೆ. ಆ ಊರಿನ ಜನಕ್ಕೆ ಸನಾದಿ ಅಂದ್ರೆ ಅಪ್ಪಣ್ಣ... ಅಪ್ಪಣ್ಣ ಅಂದ್ರೆ ಸನಾದಿ.. ಹಾಗಾಗಿ ಬಾಲಣ್ಣ ಅವರ ಸನಾದಿ ನಾದ ಕೇಳುತ್ತಲೇ ಅಪಶೃತಿ ಅಪಶೃತಿ ಎಂದು ಗಲಾಟೆ ಶುರು ಮಾಡುತ್ತಾರೆ... ಕೋಪಗೊಳ್ಳುವ ಬಾಲಣ್ಣ ಇದು ಅಪಶೃತಿ ಅಲ್ಲ ಕಣ್ರೋ.. ಇದು ಅಪರೂಪದ ಶ್ರುತಿ ಎನ್ನುತ್ತಾರೆ.... !


ಒಂದು ಕಣ್ಣಿನಲ್ಲೇ ಪ್ರಪಂಚ ತೋರುವ 
ಹಾಗೆಯೇ ಕೆಲವೊಂದು ಕಟ್ಟಡಗಳು, ಸ್ಮಾರಕಗಳು ಯಾವುದೋ ಒಂದು ಉದ್ದೇಶದಲ್ಲಿ ಕಟ್ಟಿ ನಂತರ ಇನ್ನ್ಯಾವುದೋ ಯೋಜನೆಗಳಿಗೆ ಬಲಿಯಾಗಿ  ಅಪಶೃತಿಯಾಗಿ...  ಅಪರೂಪದ ವಸ್ತುಗಳು ಎನ್ನುವ ಹಣೆ ಪಟ್ಟಿ ಹೊತ್ತುಬಿಡುತ್ತವೆ.. ಅಂತಹ ಒಂದು ಕಟ್ಟಡ ಕರ್ನಾಟಕದ ಹಾಸನ ಬಳಿಯ ಗೊರೂರು ಎಂಬ ಊರಿನ ಬಳಿ ಇರುವ ಶೆಟ್ಟಿಹಳ್ಳಿಯಲ್ಲಿರುವ ಚರ್ಚ್.

ತಲುಪಲು ನಕಾಶೆ ಕೈ ಬೀಸಿ ಕರೆಯುತ್ತಿದೆ 
ಸುಮಾರು ೧೮೬೦ ಇಸವಿಯಲ್ಲಿ  ಫ್ರೆಂಚ್  ಪಾದ್ರಿಗಳಿಂದ  ನಿರ್ಮಾಣವಾದ ಈ ಚರ್ಚ್ ಹಾಸನ, ಸಕಲೇಶಪುರ  ಸುತ್ತಾ ಮುತ್ತಾ  ಪ್ರದೇಶಗಳಲ್ಲಿ ವಾಸವಿದ್ದ  ಕ್ರಿಸ್ಚಿಯನ್ನರಿಗೆ  ಉಪಯೋಗವಾಗುತ್ತಿತ್ತು ಎಂದು ತಿಳಿದುಬರುತ್ತದೆ. ಆ ಕಾಲದಲ್ಲಿ ಈ ಪ್ರದೇಶದ ಸುತ್ತಲು ಹಸಿರು ಹೊಲಗಳು ಇದ್ದಿರಬಹುದು ಎನ್ನುವ ಮಾತಿಗೆ ಸಾಕ್ಷಿಯಾಗಿ ಈಗಲೂ ಕೂಡ ಸುತ್ತ ಮುತ್ತಲು ಅನತಿ ದೂರದಲ್ಲಿ ಅಂತಹ ದೊಡ್ಡ ದೊಡ್ಡ ಕೈಗಾರಿಕೆಗಳಾಗಲಿ ಕಾಣ ಬರುವುದಿಲ್ಲ. ಸರಿ ಸುಮಾರು ೧೯೬೦ ಇಸವಿಯಲ್ಲಿ ಸರಕಾರ ಕುಡಿಯುವ ನೀರಿಗೆ ಹಾಗೂ ನೀರಾವರಿ ಯೋಜನೆಯ ಅಡಿ ಹೇಮಾವತಿ ನದಿಗೆ ಆಣೆಕಟ್ಟು ಕಟ್ಟಿದ ಪರಿಣಾಮ ಈ ಚರ್ಚ್ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿ ಹೋಯಿತು. ಸುತ್ತ ಮುತ್ತಲ ಹಳ್ಳಿಯನ್ನು ಸ್ಥಳಾಂತರಿಸಿದರೂ ಈ ಚರ್ಚ್ ಹಾಗೆಯೇ ಉಳಿಯಿತು .
ಗತ ಕಾಲದ ಇತಿಹಾಸವನ್ನು ಗರ್ಭದೊಳಗೆ ಉಳಿಸಿಕೊಂಡು ನಿಂತಿದೆ 
ಆ ಕಾರಣದಿಂದಾಗಿ ಗೊರೂರು ಅಣೆಕಟ್ಟಿನಲ್ಲಿ ನೀರು ಹೆಚ್ಚಾದಾಗ ಈ ಚರ್ಚ್ ಭಾಗಶಃ ಮುಳುಗಿಹೋಗುತ್ತದೆ. ಅವಾಗ ತೆಪ್ಪಗಳಲ್ಲಿ ಈ ಚರ್ಚಿನ ತನಕ ಹೋಗಬಹುದು.  ಅನತಿ ದೂರದಲ್ಲಿರುವ ಸೇತುವೆ ಮೇಲೆ ನಿಂತು ಮುಳುಗಿ ಹೋದ ಕಟ್ಟಡದ ಮೇಲ್ಬಾಗವನ್ನು ನೋಡಬಹುದು. ಬೇಸಿಗೆಯಲ್ಲಿ ಅಥವಾ ಅಣೆಕಟ್ಟಿನಲ್ಲಿ ನೀರು ಕಡಿಮೆ ಇದ್ದರೇ ಚರ್ಚಿನ ತನಕ ಗಾಡಿಯಲ್ಲೇ ಹೋಗಬಹುದು.


ಒಂದು ಕಾಲದಲ್ಲಿ ಈ ಹಾದಿ ಹೇಗೆ ಇತ್ತು?
ನಾವು ಕಳೆದ ವಾರಾಂತ್ಯದಲ್ಲಿ ಕುಟುಂಬದ ಒಂದು ಕಾರ್ಯಕ್ರಮಕ್ಕೆ ಹಾಸನಕ್ಕೆ ಹೋಗಿದ್ದಾಗ ಈ ಪ್ರದೇಶಕ್ಕೆ ಭೇಟಿ ಕೊಡುವ ಅವಕಾಶ ಕೂಡಿಬಂತು.


ಕುಟುಂಬದ ಜೊತೆಯಲ್ಲಿ ಸ್ಮಾರಕದ ಮುಂದೆ
ಅಲ್ಲಿಗೆ ಹೋಗಿ ನೋಡಿದಾಗ ಆಗಲೇ ಸುಮಾರು ನೂರ ಅರವತ್ತು ವರ್ಷಗಳು ಕಳೆದಿರುವ ಈ ಕಟ್ಟಡ, ಕಳೆದ ೫೦ ವರ್ಷಗಳಿಂದ ನೀರಿನಲ್ಲೇ ಇರುವುದರಿಂದ ಕೆಲ ಭಾಗಗಳು ಬಿದ್ದುಹೋಗಿವೆ .. ಇನ್ನಷ್ಟು ಭಾಗಗಳು ಕಾಲನ ದಾಳಿಗೆ ಕುಸಿಯುವ ಎಲ್ಲಾ ಸೂಚನೆಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದೆ ಎಂದು ಅರಿವಾಯಿತು.. ಭೇಟಿ ಆದಷ್ಟು ಬೇಗ ಮಾಡಿದಷ್ಟು ಈಗಿರುವ ಕಟ್ಟಡವನ್ನು ಅದೇ ಸ್ಥಿತಿಯಲ್ಲಿ ನೋಡಬಹುದು.
ಕಾಲನ ದಾಳಿಗೆ?
ಸುಂದರ ಕಮಾನುಗಳು, ಗವಾಕ್ಷಿಗಳು, ಎತ್ತರದ ಬಾಗಿಲುಗಳು, ಮಿನಾರುಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಧರ್ಮ ಯಾವುದಾದರೇನು ಕಟ್ಟಡ ವಿನ್ಯಾಸ ಮನಸೆಳೆಯುತ್ತದೆ. ಅದನ್ನೆಲ್ಲ ನೋಡಿದಾಗ ಇದು ತನ್ನ ಉಚ್ಚ್ರಾಯ ಸ್ಥಿತಿಯಲ್ಲಿದ್ದಾಗ ಯಾವ ಗತ್ತು ಗಾಂಭೀರ್ಯ ಹೊಂದಿತ್ತು ಎಂದು ಕಲ್ಪಿಸಿಕೊಳ್ಳಬಹುದು.


ಬೃಹದ್ ಬಾಗಿಲು
ಸುಂದರಜಾಗಕ್ಕೆ ಭೇಟಿ ನೀಡಬೇಕು ಎಂಬ ಆಸೆ ಈಡೇರಿದ ಸಮಾಧಾನ ಒಂದು ಕಡೆಯಾದರೆ ಮನುಜನ ಆಸೆ ಆಕಾಂಕ್ಷೆಗಳು ಬೆಳೆಯುತ್ತಲೇ ಅನೇಕ ಸುಂದರ ಕಟ್ಟಡಗಳು, ಸ್ಮಾರಕಗಳು, ಮಂದಿರಗಳು ಅನೈತಿಕ ಚಟುವಟಿಕೆಗೆ ಆಸರೆಯಾಗಿಬಿಡುತ್ತವೆ ಎನ್ನುವ ಬೇಸರ ಕಾಡುತ್ತದೆ. ಎಲ್ಲಿ ನೋಡಿದರು ಒಡೆದ ಬಾಟಲಿಗಳು, ಬೇಡವಾದ ಕೆಲ ಪದಾರ್ಥಗಳು, ನೋಡೋಕೆ ಅಸಹ್ಯ ಎನ್ನಿಸುವಂತೆ ಎಲ್ಲೆಂದರಲ್ಲಿ ಕಾಣ ಸಿಗುತ್ತದೆ. ಗೋಡೆಗಳ ಮೇಲೆಲ್ಲಾ ಪ್ರೇಮಿಗಳ ಕೆತ್ತನೆ ಕೆಲಸಗಳು ಬೇಸರ ತರಿಸುತ್ತವೆ. ಅನೇಕ ಸುಂದರ ಸ್ಮಾರಕಗಳನ್ನೂ ರಕ್ಷಿಸಲಾಗದ ನಾವೇ ಆರಿಸಿದ  ಸರಕಾರ ಇನ್ನು ಜನರ ಸುಖಕ್ಕೆ ಶ್ರಮಿಸುವುದೇ ಎಂಬ ಗೊಂದಲ ಕಾಡುತ್ತದೆ!

Shettihalli Church - Gorur Dam - Hassan

Planned plans may fail..but failed plans sometimes clicks!!!...too tricky words..!!!

Yes you are right..when I first heard about a structure submerged in the back waters of a dam, my instinct always wanted to capture those frames. But did not know exactly where this structure stood in the back waters.  Surfing for information, and few pictures here and there, gave me a half baked information about the church in a dam. Digging the bore-well for the information..my eyes lit with a 10000 watts light!!!. 

Arey! what is this? this place is so near to my native place, and also I had been to the dam back waters many times!. 

Okay okay..don't press Ctrl+F to search me, and hit me black and blue. Am talking about Shetty Halli Church, which will get submerged during the monsoon in the Gorur Dam, but surfaces to show its glory in the summer or when the water level is low. The Gorur dam was built by the Government around 1960 to reserve & re-serve the waters of the river Hemavathy for irrigation and drinking projects. 


The Shettihalli church in the Gorur Dam
As many write-ups,  and many wiki reveals that,  this church had been built in 1860 by the french missionaries for the people in  Hassan, Sakaleshapura and its surroundings.  During the summer, when the water level is low, any vehicle will go almost inside the church :-). The structure, and the landscape around gives a good feel.  Even though we feel disgusted,  when we see the campus is littered with broken bottles, @#$#@ things, but still the landscape amazes you, and so the church...standing in a crumbling state. 


One more shot from the other side
But if we are able to turn the wrist watch backwards, we can visualize the majestic structure, the village ambiance, crystal clear voice of the birds, fragrance of flowers.....the mother nature at her best!
As seen from the bed of the back waters
From the main road the church stands at a stone throw away distance, since the water level was too low, we reached comfortably at the door step (sorry no doors..it is an open air theater from all the sides!!).


One of the few towers still standing
 Since we are at the site in the glaring sun, the monument showed all its sides, the majestic entrance, the walls, the towers everything was amazing. 
Probably the main hall of the church

One more look

The tall wall as seen from the floor!
Even though the pieces of the structure scattered here and there, since it had lost its muscles, but still standing on the bones, it will be a photographer's delight all the way! 


Road map from Hassan
The family..!
Hardly about thirty minutes drive from the center of the Hassan, and the condition of the road is also good, except few stretches, and a few hours spent in this campus can bring the light in to the frames.   Since there is no near by shops, better to carry food and water but caution to be taken not to lit the place. Even though sitting late in the evening for the sunset is not advisable, but if we do with caution, it will provide some stunning magical show of light and shadow!!!

Tuesday, February 12, 2013

ಕೆ. ಆರ್ ಪೇಟೆಯಲ್ಲಿ..ಹೊಯ್ಸಳರ ಕಲೆಯ ಮಧ್ಯದಲ್ಲಿ


(ಅರಳುತ್ತಲೇ ಕಂಪನ್ನು ಸೂಸುತ್ತಿರುವ ಕನ್ನಡದ ಸುಮಧುರ ಇ-ಪತ್ರಿಕೆ "ಪಂಜು"ವಿನಲ್ಲಿ  ಪ್ರಕಟಣೆಗೊಂಡಿದೆ. 
ಸಹೋದರ ನಟರಾಜು ಹಾಗೂ "ಪಂಜು" ತಂಡಕ್ಕೆ ಧನ್ಯವಾದಗಳು!)

"ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು...ಅಪಾರ ಕೀರ್ತಿಯೇ"

ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಹೆಸರಾಗಿದ್ದ ಶ್ರೀ ಆರ್. ಎನ್. ನಾಗೇಂದ್ರ ರಾಯರು ದಿಗ್ದರ್ಶಿಸಿದ್ದ ಮಹತ್ವಾಕಾಂಕ್ಷೆಯ ಚಿತ್ರ ವಿಜಯನಗರದ ವೀರಪುತ್ರ ಚಿತ್ರದ ಕುದುರೆ ನಡಿಗೆಯ ತಾಳದ ಜನಪ್ರಿಯ ಗೀತೆ ಕೇಳಿದಾಗೆಲ್ಲ ಕರ್ನಾಟಕದಲ್ಲಿ ಶಿಲ್ಪಕಲೆಯು ಉನ್ನತ ಸ್ಥಾಯಿ ಮುಟ್ಟಿದ್ದ ಹೊಯ್ಸಳ ಅರಸರ ಕಲೆಯು ನೆನಪಿಗೆ ಬರುತ್ತದೆ.  

ಡಿಸೆಂಬರ್ ೨೯ನೆ ತಾರೀಕು ಹಾಸನದಿಂದ ಮೈಸೂರಿಗೆ ಹೋಗಬೇಕಿತ್ತು..ಕರುನಾಡಿನ ಎಲ್ಲಾ ಸ್ಥಳಗಳು ಕೈ ರೇಖೆಯಂತೆ ಗುರುತು ಇಟ್ಟುಕೊಂಡಿರುವ "ನಿಮ್ಮೊಳಗೊಬ್ಬ ಬಾಲೂ" ಬ್ಲಾಗ್  ಖ್ಯಾತಿಯ ಬಾಲೂ ಸರ್ ಗೆ ಫೋನಾಯಿಸಿದೆ....ಚಕ ಚಕ ಅಂತ...ಒಂದು ಸಿದ್ಧ ಪ್ಲಾನ್ ಹೇಳಿಯೇ ಬಿಟ್ಟರು...ಚನ್ನರಾಯಪಟ್ಟಣ ಆದ ಮೇಲೆ ಬಲಕ್ಕೆ ತಿರುಗಿ ಕೆ.ಆರ್. ಪೇಟೆ ಕಡೆ ತಿರುಗಿಸಿರಿ...ಅಂತ...ಸರಿ ಗುರುಗಳ ಮಾರ್ಗದರ್ಶನದಲ್ಲಿ ಮುಂದುವರೆಯಿತು..ನಮ್ಮ ಗಾಡಿ.

ಕಿಕ್ಕೇರಿಗಿಂತ ಮುಂಚೆ  ಕಾರನ್ನು ನಿಲ್ಲಿಸಿ ಮತ್ತೆ ಫೋನ್ ಹಚ್ಚಿದೆ..ಕುರುಡನಿಗೂ ದಾರಿ ಗೊತ್ತಾಗಬೇಕು..ಹಾಗೆ ಅಚ್ಚುಕಟ್ಟಾಗಿ ದಾರಿ ಹೇಳಿದರು. ಗೋವಿಂದನ ಹಳ್ಳಿ ಮಾರ್ಗದಲ್ಲಿ ಓಡಿತು ನಮ್ಮ ರಥ...ಸುಮಾರು ೩-೪ ಕಿ.ಮಿ. ಸಾಗುತ್ತ ಹಳ್ಳಿಯ ಸೊಬಗನ್ನು ಸವಿಯುತ್ತ, ಹೊಲ ಗದ್ದೆಗಳ ರಾಶಿ ರಾಶಿ ಜಮೀನನ್ನು ನೋಡುತ್ತಾ ನಿಧಾನವಾಗಿ ಸಾಗಿದೆ. ಬಲ ಭಾಗದಲ್ಲಿ ಒಂದು ಫಲಕ ಕಾಣಿಸಿತು...ಮತ್ತು ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಎಡಗಡೆ ಎಂದು ಬಾಣದ ಗುರುತು ಇತ್ತು...


ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ದಾರಿ 
ಎಡಕ್ಕೆ ತಿರುಗಿ ಸೀದಾ ಒಂದು ೩೦೦ ಮೀಟರ್  ಬಂದಾಗ ಸಿಕ್ಕಿತು ಒಂದು ಸುಂದರ ಹೊಯ್ಸಳ ಕಲೆಯ ದೇವಾಲಯ...ಮನಕ್ಕೆ ಆಹಾ ಎನ್ನಿಸಿತು..ಅಚ್ಚುಕಟ್ಟಾಗಿ ಸುತ್ತಲು ಕಬ್ಬಿಣದ ತಂತಿಗಳ 
ಕಾಂಪೌಂಡ್ ನಿಂದ ಸುತ್ತುವರೆದು, ಹಸಿರು ಹುಲ್ಲು ಹಾಸಿನ ಮಧ್ಯೆ ಇದ್ದ ದೇವಾಲಯ ಸುಂದರವಾಗಿ ಕಂಡಿತು. ಸುಮಾರು ೧೨೩೦ರ ಆಸುಪಾಸಿನಲ್ಲಿ ನಿರ್ಮಾಣವಾದ ದೇವಾಲಯ  ಸಹಜವಾಗಿಯೇ ಹೊಯ್ಸಳರ ಕಾಲದ ಶಿಲ್ಪಿಗಳ ಕೈ ಚಳಕವನ್ನು ಅನಾವರಣ ಮಾಡಿತ್ತು. 


ಸುಂದರ ಆವರಣದೊಳಗೆ ಶಿಲ್ಪಿಗಳ ಕೈಚಳಕ
ನಿಧಾನವಾಗಿ ಕ್ಯಾಮೆರ ಹೊಟ್ಟೆಗೆ ಚಿತ್ರಗಳನ್ನು ತುಂಬಿಸುತ್ತಾ ಒಳಗೆ ಸಾಗಿದೆ. ಅಲ್ಲಿಯ ಕೂತಿದ್ದ ಒಬ್ಬರು ಒಳಗೆ ಬಂದು ದೇವಾಲಯದ ಪರಿಚಯ ಮಾಡಿಕೊಟ್ಟರು. ಒಂದೇ ದೇವಾಲಯದಲ್ಲಿ ಐದು ಶಿವಲಿಂಗದ ದರ್ಶನ ಬಲು ಅಪರೂಪ ಎಂದು ಹೇಳಿದರು. 
ಮೋಡಗಳ ಪರದೆಯಲ್ಲಿ ದೇವಸ್ಥಾನ
ಈಶಾನ್ಯೇಶ್ವರ, ತತ್ಪುರುಶೇಶ್ವರ, ಅಘೋರೇಶ್ವರ, ವಾಮದೇವೇಶ್ವರ ಮತ್ತು                                     ಸಧ್ಯೋ ಜಾತೇಶ್ವರ ಹೀಗೆ ಐದು ಬಗೆಯ ಹೆಸರಿನ ಶಿವಲಿಂಗಗಳಿಗೆ ಪ್ರತ್ಯೇಕ ಗುಡಿಗಳು, ಮತ್ತು ಅದಕ್ಕೆ ಸರಿಯಾಗಿ ಎದುರಿಗೆ ನಂದಿಗಳು ಇವೆ. ದೇವಸ್ಥಾನದ ಒಳಗೆ ಅಪ್ಪಣೆ ಪಡೆದು ಒಂದೆರಡು ಚಿತ್ರಗಳನ್ನು ಸೆರೆ ಹಿಡಿದು ಕೊಂಡೆ. ಅದರಲ್ಲೂ ಸಾಲು ಸಾಲು ಕಂಬಗಳ ಚಿತ್ರ ಮನಸಿಗೆ ಇಷ್ಟವಾಯಿತು. ಚಾಮುಂಡೇಶ್ವರಿ ವಿಗ್ರಹ, ಸುಬ್ರಮಣ್ಯ ವಿಗ್ರಹ, ಗಣಪತಿ ಎಲ್ಲವು ಸುಂದರವಾದ ಕೆತ್ತನೆಗಳಿಗೆ ಸಾಕ್ಷಿಯಾಗಿದ್ದವು. 


ರೈಲನ್ನು ನೆನಪಿಸುವಂತಹ ಸಾಲು ಸಾಲು ಕಂಬಗಳು 
ಹೊರಾಂಗಣವನ್ನು ಸುತ್ತಿ ಬಂದಾಗ ನೀಲಾಕಾಶದಲ್ಲಿ ಹತ್ತಿಯ ಹಾಗೆ ಹಿಂಜಿ ನಿಂತ ಮೋಡಗಳ ಹಿನ್ನೆಲೆಯಲ್ಲಿ ದೇವಾಲಯ ಇನ್ನಷ್ಟು ಸುಂದರವಾಗಿ ಕಂಡಿತು. 
ಮನಸಾರೆ ಚಿತ್ರಗಳನ್ನು ಸೆರೆಹಿಡಿದು ಅಲ್ಲಿಂದ ಹೊರಟೆವು, ಇನ್ನೊಂದು ಅದ್ಭುತ ಶಿಲ್ಪಕಲಾ ಗುಡಿಯ ಕಡೆಗೆ. 
ಸುಂದರ ಆವರಣ!
ಕೆ.ಆರ್. ಪೇಟೆ ಹತ್ತಿರ ಬಂದು ಮತ್ತೆ ಗುರುಗಳಿಗೆ ಫೋನಾಯಿಸಿದೆ. ಅಲ್ಲಿಯೇ ಹೊಸಹೊಳಲು ದೇವಸ್ಥಾನಕ್ಕೆ ದಾರಿ ಕೇಳಿ ಸುಮಾರು ಒಂದೆರಡು ಕಿ.ಮಿ ಹೋದರೆ ನಿಮಗೆ ದೇವಾಲಯ ಸಿಗುತ್ತೆ ಅಂತ ಹೇಳಿದರು. ನಿಧಾನವಾಗಿ ಚಲಿಸುತ್ತ ದಾರಿ ಕೇಳಿಕೊಂಡು ಹೋದಾಗ..ಮುಖ್ಯ ರಸ್ತೆಯಲ್ಲಿಯೇ ಒಂದು  ಕಮಾನು ನಮ್ಮನ್ನು ಸ್ವಾಗತಿಸಿತು. ಹೊಸಹೊಳಲು ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಸ್ವಾಗತ ಎಂದು. 
ಹೊಸಹೊಳಲಿನ ಶ್ರೀ ಲಕ್ಷ್ಮಿ ನರಸಿಂಹ ದೇವಾಸ್ಥಾನ 
ಬೇಲೂರಿನ ಪ್ರತಿ ಕೃತಿಯಂತೆ ಕಂಡು ಬಂದ ಈ ದೇವಾಲಯದ ಮುಂಬಾಗ ನವಿಕರಣಗೊಂಡಿದ್ದರೂ, ಹೊಯ್ಸಳರ ಶಿಲ್ಪಿಗಳು ಪ್ರಭುತ್ವ ಮೆರೆದ ಇನ್ನೊಂದು ಕಲಾ ದೇಗುಲ ನಮ್ಮ ಮನಸಿಗೆ ಸಂತಸದ ಕಡಲನ್ನೇ ತಂದಿತ್ತು.   ಮಧ್ಯಾಹ್ನದ ಸಮಯ ಹತ್ತಿರ ಬಂದಿತ್ತು, ದೇವಾಲಯದ  ಕದ ಹಾಕುವ ಮುಂಚೆ ದೇವರ ದರ್ಶನ ಮಾಡಿದೆವು. ಅಲ್ಲಿಯ ಅರ್ಚಕರು ಅಲ್ಲಿಯ ಗರ್ಭ ಗುಡಿಯ ಕೆತ್ತನೆಗಳ ಬಗ್ಗೆ ಉಪಯುಕ್ತ ಮಾಹಿತಿ ಕೊಟ್ಟರು.


ಸುಂದರ ಕೆತ್ತನೆಗಳ ಆವರಣ
 ಶ್ರೀ ಲಕ್ಷ್ಮಿ ನಾರಾಯಣ, ಶ್ರೀ ಲಕ್ಷ್ಮಿ ನರಸಿಂಹ, ಶ್ರೀ ವೇಣು ಗೋಪಾಲ ಮೂರ್ತಿಗಳು ತುಂಬಾ ಮುದ್ದಾಗಿದ್ದವು, ಸುಂದರವಾದ ನವರಂಗ, ಅಮೋಘ  ಕುಸುರಿ ಕೆಲಸವನ್ನು ಹೊಂದಿದ್ದ ಕಂಬಗಳು ಒಂದಕ್ಕಿಂತ ಒಂದು ಸೊಗಸಾಗಿದ್ದವು. ಇದನ್ನು ಮನದಣಿಯೆ ನೋಡಬೇಕು. 
ಕ್ಯಾಮೆರಾದಲ್ಲಿ ಆದಷ್ಟು ತುಂಬಿಕೊಂಡು ಹೊರಗೆ ಬಂದೆ. 


ಶಿಲ್ಪಿಗಳ ಕೈಚಳ ಅಮೋಘ!
  ಸುಮಾರು ೧೨೫೦ ರ ಆಸುಪಾಸಿನಲ್ಲಿ ನಿರ್ಮಾಣವಾದ ದೇವಾಲಯವನ್ನು ಸುಂದರವಾಗಿ ರಕ್ಷಿಸಿದ್ದಾರೆ ಮತ್ತು ನೋಡಿಕೊಂಡಿದ್ದಾರೆ. ದೇವಾಲಯವನ್ನು ಒಂದು ಸುತ್ತು ಹಾಕಿದರೆ ನಮಗೆ ಅರಿವಿಲ್ಲದೆ ಸುಮಾರು ೮೦೦-೯೦೦ ವರ್ಷಗಳ ಹಿಂದೆ ಹೋಗಿಬಿಡುತ್ತೇವೆ. ಅಷ್ಟು ಸುಂದರ ಮೂರ್ತಿಗಳು, ಕುಸುರಿ ಕೆತ್ತನೆ, ಆಹಾ ಪದಗಳಲ್ಲಿ ಬಣ್ಣಿಸಲಾಗದು.  


ಪ್ರತಿ ಸಾಲಿನಲ್ಲೂ ಶಿಲ್ಪಿಗಳ ನೈಪುಣ್ಯ ಎದ್ದು ಕಾಣುತ್ತದೆ 

ಹೊಯ್ಸಳ ಶಿಲ್ಪಕಲೆ ಎಂದರೆ ಬೇಲೂರು ಹಳೇಬೀಡು ಅಷ್ಟೇ ಅಲ್ಲ..ಇಂತಹ ಅನೇಕ ಅಮೋಘ ಕೆತ್ತನೆಗಳು ಹಾಸನ, ಮೈಸೂರು, ಮಂಡ್ಯ, ಚಿಕಮಗಳೂರು, ಭದ್ರಾವತಿ, ಶಿವಮೊಗ್ಗ, ಹರಿಹರ,  ಹೀಗೆ ಅನೇಕ ಕಡೆ ಸಿಗುತ್ತದೆ. ಹೊಯ್ಸಳರಸರ ಕಾಲದ ಕೆತ್ತನೆ ಕಂಡು ಬರುವ ಇಲ್ಲಾ ದೇವಾಲಯಗಳನ್ನು ನೋಡುವ ತವಕ, ಉತ್ಸಾಹವಿದೆ.  ಭಗವಂತನ  ಅನುಗ್ರಹವಿದ್ದರೆ ಸಾಧ್ಯವಾಗುತ್ತದೆ ಎನ್ನುವ ಆಶಾಭಾವ ಹೊತ್ತು ದೇವಸ್ಥಾನದಿಂದ ಹೊರಟೆವು. 


ಪ್ರತಿಮೆಗಳು, ಅಲಂಕಾರ ಒಂದಕ್ಕೊಂದು ವಿಭಿನ್ನ...ಸುಂದರ

ಎರಡು ಸುಂದರ ದೇವಾಲಯಗಳನ್ನು ಭೇಟಿ ಮಾಡಲು ಮಾರ್ಗದರ್ಶನ ನೀಡಿದ ಬಾಲೂ ಸರ್ ಅವರಿಗೆ ಧನ್ಯವಾದ ತಿಳಿಸುತ್ತ ಈ ಲೇಖನವನ್ನು ಅವರಿಗೆ ಅರ್ಪಿಸುತ್ತಿದ್ದೇನೆ. ಧನ್ಯವಾದಗಳು ಬಾಲೂ ಸರ್.