Wednesday, December 31, 2014

ಕುಮಾರ ಪರ್ವತ ಕಳಿಸಿದ, ಕಲಿಸಿದ ಪಾಠ.. ಆರನೇ ಬಾರಿ ಚಾರಣ

ಗೊಬ್ಬರದ ಗುಂಡಿಯೇ ವಾಸಿ.. ದುರ್ನಾತ ಇದ್ದರೂ.. ಸಸ್ಯ ಸಂಪತ್ತು ಚಿಗುರಲು ಕಾರಣವಾಗುತ್ತದೆ.. ನನ್ನ ತಲೆ ಅದಕ್ಕಿಂತ ಅತ್ತತ್ತ ಆಗಿತ್ತು.. ಯೋಚಿಸಿದ್ದು ಉಲ್ಟಾ.. ಅನಿಸಿದ್ದು ಉಲ್ಟಾ.. ಪ್ರೀತಿ ವ್ಯಕ್ತ ಪಡಿಸಿದ್ದು ಉಲ್ಟಾ.. ಎಲ್ಲಾ ಕಲಸು ಮೇಲೋಗರವಾಗಿತ್ತು.. ಕನ್ನಡಿ ನೋಡಿಕೊಂಡೆ.. ಮುಖದಲ್ಲಿ ಯಾವ ಭಾವವೂ ಬದಲಾಗಿಲ್ಲ.. ತಲೆ ನೋಡಿಕೊಂಡೆ ಹುಲುಸಾಗಿ ಬೆಳೆದ ತಲೆಗೂದಲನ್ನು ಕತ್ತರಿಸಿ ಆಗಿತ್ತು.. ಹೃದಯ ಮುಟ್ಟಿನೋಡಿಕೊಂಡೆ.. ಆತ್ಮೀಯರಿಗೆ ಮಿಡಿಯುತ್ತಿದ್ದ ಮನಸ್ಸು "ಲೋ ನಿನಗಾಗಿ ಮಿಡಿಯಲು ಶುರುಮಾಡಿಕೋ.. ನೀನಿದ್ದರೆ ಇತರರು ಇರುತ್ತಾರೆ.. ನೀನೆ ನೀನಾಗದೆ ಅವರಾದರೆ ನಿನಗೆ ಜಾಗವೇ ಇರೋಲ್ಲ.. ಇದುವರೆಗೂ ನೀ ಇತರರಿಗೆ ಬದುಕಿದ್ದು ಸಾಕು.. ಇನ್ನು ನೀನು ನಿನಗಾಗಿ ಬದುಕು.. " ಎಂದಿತು. 

ಅರೆ ಏನಾಗಿದೆ.. ನನಗೆ.. 

ನನ್ನ ಪ್ರೀತಿಯ ಕುಮಾರ ಪರ್ವತದ ತುತ್ತ ತುದಿಯಲ್ಲಿ ನನ್ನ ಮಾಮೂಲಿ ಧ್ಯಾನಕ್ಕೆ ಕೂರುವ ಮುನ್ನ ಮೇಲಿನ ಎಲ್ಲಾ ಸಾಲುಗಳು ಎಲ್ ಇ ಡಿ ಪರದೆಯ ಮೇಲೆ ಹಾದುಹೋಗುವಂತೆ ಜುಯ್ ಜುಯ್ ಅಂಥಾ ಓಡುತ್ತಿತ್ತು. 

ಕಣ್ಣು ಮುಚ್ಚಿ ಕೂತೆ.. ಕೆಳಗಿನ ಪರದೆ ಕಂಡಿತು.. 
________________________________________________________________________________________________________________________________________________________________
ಗಾಬರಿ ಆದಿರಾ.. ಹೌದು ಇದೆ ದೃಶ್ಯ ಮುಚ್ಚಿದ ಕಣ್ಣ ಒಳಗಿನ ಪರದೆಯ ಮೇಲೆ ಮೂಡಿ ಬಂದದ್ದು. ಯಾವಾಗಲೂ ಅಪ್ಪ ಕಣ್ಣ ಮುಂದೆ ಬರುತ್ತಿದ್ದರು ಆಶೀರ್ವಾದದ ಭಂಗಿಯಲ್ಲಿ.. ಆದರೆ ಇಂದು ಯಾರೂ ಇಲ್ಲ.. ಏನೂ ಇಲ್ಲ.. ಖಾಲಿ ಖಾಲಿ ಬೆಳ್ಳಿ ಪರದೆ.. 
ನನ್ನ ಮಾರ್ಗದರ್ಶಿಯಂಥಹ ಗೆಳತಿ ನಿವಿ ಹೇಳಿದ್ದು.. ಶ್ರೀ ಇದು ಶುಭ ಸೂಚನೆ.. ನೀವು ಅಂದುಕೊಂಡಿದ್ದು ಸಾಧಿಸುತ್ತೀರಿ.. ನಿಮ್ಮ ಅಪ್ಪ ಸರಿಯಾಗಿ ಮಾರ್ಗದರ್ಶನ ನೀಡಿದ್ದಾರೆ.. ಸುಂದರ ವಸಂತ ನಿಮಗಾಗಿ ಕಾಯುತ್ತಿದೆ ಎಂದರು.. 

ನನ್ನ ಆಪ್ತ ಮಿತ್ರ ಹಾಗೂ ಸಹ ಚಾರಣಿಗ "ಸಂದೀಪ್" ಚಾರಣ ಮುಗಿದ ಮೇಲೆ ಹೇಳಿದ್ದು "ಶ್ರೀ.. ಆರಂಭದಲ್ಲಿಯೇ ಅಂದುಕೊಂಡೆ ನಿಮ್ಮ ಮೆದುಳು..  ಮೈ..  ಎರಡು ಹಾಳಾಗಿ ಹೋಗಿದೆ.. ಅದನ್ನ ಸರಿಮಾಡಿಕೊಳ್ಳಲು ಈ ಚಾರಣ ಸಿದ್ಧ ಮಾಡಿದ್ದೀರಿ ಅಲ್ಲವೇ .. ಮೇಲೆ ಕತ್ತೆತ್ತಿ ನೋಡಿದೆ.. ಪಡೆಯಪ್ಪ ಚಿತ್ರದಲ್ಲಿ ರಜನಿ ಹೊಡೆಯುವ ಸಲ್ಯೂಟ್ ಶೈಲಿಯಲ್ಲಿ ನನ್ನ ಅಪ್ಪ.. ಆಲ್ ದಿ ಬೆಸ್ಟ್ ಶ್ರೀ ಎಂದು ಹೇಳಿ ಸಲ್ಯೂಟ್ ಹೊಡೆದ ಹಾಗೆ ಅನ್ನಿಸಿತ್ತು.. ಹಾಗೆ ಸುಮ್ಮನೆ ಎರಡು ದಿನ ಹಿಂದಕ್ಕೆ ಹೋದೆ.. ಅನಾವರಣಗೊಂಡಿತ್ತು.. ಕುಮಾರ ಪರ್ವತದ ಚಾರಣದ ಹೂರಣ.. 
* * * * * *

೨೦೧೩ ನಂತರ ಅಲೆಮಾರಿಗಳು ತಂಡ ಎಲ್ಲಿಯೂ ಹೋಗಿರಲಿಲ್ಲ.. ಕುಮಾರಪರ್ವತ ಚಾರಣವೇ ಕಡೆಯದಾಗಿತ್ತು.. ನನ್ನ ಹಠ ಮತ್ತೆ ಅಲ್ಲಿಂದಲೇ ಶುರುಮಾಡೋಣ ಎಂದು.. ಎಂದಿನಂತೆ ಸಂದೀಪ್ ಜೊತೆಯಾದರು.. ಅವರ ಜೊತೆಯಲ್ಲಿ ದರ್ಶನ್ ನಾ ಬರುವೆ ಅಂದರು. . ಶುರುವಾಯಿತು ನಮ್ಮ ಪಯಣ.. 

ಬೆಳಗಿನ ಚುಮು ಚುಮು ಚಳಿಯಲ್ಲಿ ಮಂದಗತಿಯಲ್ಲಿ ಹೆಜ್ಜೆ ಹಾಕುತ್ತಾ ಚಾರಣದ ಆರಂಭಿಕ ತಾಣಕ್ಕೆ ಬಂದೆವು. ಮನದಲ್ಲಿ ವಂದಿಸಿದೆ. ಸೂರ್ಯ ರಶ್ಮಿ ಮೈ ಮೇಲೆ ಬಿದ್ದ ಹಾಗೆ ಆಯಿತು.. ಆಶೀರ್ವಾದ ಸಿಕ್ಕಿತು ಎಂದು ಹೊರಟೆ. 

ಮೂಕ ಮನಸ್ಸು.. ಬಳಲುವ ದೇಹ ಚಾರಣಕ್ಕೆ ಹೇಳಿ ಮಾಡಿಸಿದ ಜೋಡಿ: (ಮೊದಲನೇ ಪಾಠ)
ಕಾಡುತ್ತವೆ ಸರಮಾಲೆಯ ಕಷ್ಟಗಳು.. ಗಟ್ಟಿ ತನ ಇದ್ದಾಗ ಅದು ಮುಟ್ಟಲು ಬರುವುದಿಲ್ಲ 
ದೇಹ ಕೇಳುತ್ತಿರಲಿಲ್ಲ.. ಮನಸ್ಸು ಬಿಡುತ್ತಿರಲಿಲ್ಲ.. ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಸಾಗಿದೆವು. ಮೊದಲ ಕಾಡು ದಾರಿ ಆಯಾಸದಾಯಕವಾಗಿದ್ದರೂ.. ಹಾಸ್ಯವೂ ಎಂದಿನಂತೆ ಕಡಿಮೆ ಇದ್ದರೂ ಕೂಡ ಹುಮ್ಮಸ್ಸು ಕಡಿಮೆಯಾಗಿರಲಿಲ್ಲ.. ಜೊತೆಯಲ್ಲಿಯೇ ಹಾದಿ ನಮಗೋಸ್ಕರ ಹತ್ತಿರವಾಗುತ್ತಿದೆ ಎನ್ನಿಸಿತು. ಭೀಮನ ಕಲ್ಲಿಗೆ ಹೋಗುವಷ್ಟರಲ್ಲಿಯೇ ಬಸವಳಿದು ಹೋಗುತ್ತಿದ್ದ ನಾನು.. ಸ್ವಲ್ಪ ಹೊತ್ತಿನಲ್ಲಿಯೇ ಭೀಮನ ಕಲ್ಲಿನ ಮೇಲೆ ವಿರಮಿಸಿಕೊಳ್ಳುತ್ತಿದ್ದೆವು.. ನಂತರ ಅರಿವಾಯಿತು.. ಸಾಧಿಸಲು ಹೊರಟಾಗ ಮನಸ್ಸು ದೇಹ ಎರಡು ಹೇಗೆ ಇದ್ದರೂ ಗಂಡ ಹೆಂಡತಿಯ ಹಾಗೆ ಜೊತೆ ಜೊತೆಯಲ್ಲಿ ಸಾಗಿದರೆ ಮಾತ್ರ ಯಶಸ್ಸು ಶತಃ ಸಿದ್ಧ ಎಂದು. ಎಷ್ಟು ನಿಜ.. 


ಎಲ್ಲೋ ಇರುವ ಎರಡು ವಸ್ತುಗಳನ್ನು ಜೊತೆ ಮಾಡಿ ಉಪಾಯ ಕಂಡುಕೊಳ್ಳಿ  : (ಎರಡನೇ ಪಾಠ)
ಚಾರಣದಲ್ಲಿ ಎಂದಿಗೂ ಹೊಟ್ಟೆಗೆ ಮೋಸ ಮಾಡಿಕೊಳ್ಳದ ನಾವು.. ವಿಚಿತ್ರ ಸ್ಥಿತಿಯಲ್ಲಿ ಈ ಚಾರಣಕ್ಕೆ ಹೊರಟೆವು.. ಹಾದಿಯಲ್ಲಿ ಸಿಕ್ಕ ಸಹ ಚಾರಣಿಗರು ಮೊದಲ ಬಾರಿಗೆ ಎಂದರೂ.. ಅವರ ಸಿದ್ಧತೆ ಸಕತ್ತಾಗಿತ್ತು.. ಕುಮಾರಪರ್ವತದಲ್ಲಿ ಸಿಗುವ ಕಾಮಧೇನು ಭಟ್ಟರ ಮನೆ.. ಅಲ್ಲಿಗೆ ಹೋಗಿ ಅನ್ನವನ್ನು ತೆಗೆದುಕೊಂಡು ನಿಂತಾಗ.. ಬೇಕೇ ಬೇಡವೇ.. ಎನ್ನುವ ಗೊಂದಲ ಇತ್ತು. ಆದರೆ ಹೊಟ್ಟೆಯನ್ನೊಮ್ಮೆ ಸವರಿಕೊಂಡೇ.. ಬೇಕು ಶ್ರೀ ಎಂದಿತು.. ದೇಹವನ್ನು ದಂಡಿಸುವಾಗ ಮಧ್ಯೆ ಮಧ್ಯೆ ಅದಕ್ಕೆ ತುಸು ಉಪಚಾರವನ್ನು ಮಾಡಲೇ ಬೇಕು.. ಎಂದಿತು ಮನಸ್ಸು. ತೆಗೆದುಕೊಂಡದ್ದು ಒಳ್ಳೆಯದೇ ಆಯ್ತು... ಕಲ್ಲು ಮಂಟಪದ ಬಳಿ ಸಹಚಾರಣಿಗರು ತಂದಿದ್ದ ಪುಳಿಯೋಗರೆ ಗೊಜ್ಜು.. ಬಿಸಿ ಅನ್ನಕ್ಕೆ ಜಂಟಿಯಾಗಿ ನಿಂತು ಹೊಟ್ಟೆಯನ್ನು ಅರಳಿಸಿತು. ಕಷ್ಟಗಳನ್ನು ಸ್ವಲ್ಪ ಸ್ವಲ್ಪವೇ ನಿವಾರಿಸುತ್ತ ಹೋಗಬೇಕು.. ಆಗಲೇ ಕೆಲವು ಕಷ್ಟಗಳ ಜೊತೆಯಲ್ಲಿ ಕೆಲವು ಉಪಾಯಗಳು ಕೂಡ ಹೆಜ್ಜೆ ಹಾಕುತ್ತವೆ. 
ಒಮ್ಮೆ ಕಣ್ಣು ಬಿಟ್ಟರೆ ಸಾಕು.. 

ಸುಡುವ ಜ್ಯೋತಿಯನ್ನೆ ಮನೆ ಬೆಳಗಲು ಉಪಯೋಗಿಸಿದರೆ: (ಮೂರನೇ ಪಾಠ)
ಕಲ್ಲು ಮಂಟಪದ ಮುಂದಿನ ಹಾದಿ ಬಲು ತ್ರಾಸದಾಯಕ.  ಏರು ಹಾದಿ, ನೆರಳಿಲ್ಲದ ಬಿರುಬಿಸಿಲಿನಲ್ಲಿ ನಡೆಯುವುದು ನಿಜಕ್ಕೂ ಸವಾಲಿನ ಗುರಿಯೇ ಹೌದು. ಆದರೂ ಆ ಬಿರು ಬಿಸಿಲಿನಲ್ಲಿ ತುಂಬಿದ ಹೊಟ್ಟೆ ಹೇಳಿತು.. ನಾ ಸಂತುಷ್ಟನಾಗಿದ್ದೇನೆ.. ನಾ ಇರುವೆ ನಿಮ್ಮ ಜೊತೆಯಲ್ಲಿ ನಡೆಯಿರಿ ಎಂದಿತು. ಒಳಗೆ ಜಠರಾಗ್ನಿ ತಣ್ಣಗಾಗಿತ್ತು.. ಹೊರಗೆ ಬಿಸಿಲಿನ ಬೆಂಕಿ ದೇಹವನ್ನು ಸುಡುತಿತ್ತು.  ಆಗ ಮನಕ್ಕೆ ಬಂದಿದ್ದು ವಜ್ರವನ್ನು ವಜ್ರದಿಂದ ಕತ್ತರಿಸಬಹುದಾದರೆ ಬೆಂಕಿಯನ್ನು ಬೆಂಕಿಯಿಂದ ಏಕೆ ಆರಿಸಲಾಗದು.. ಹಾಗೆಯೇ ಮನದ ಮೂಲೆಯಲ್ಲಿರುವ ಕಸವನ್ನು ರಸವನ್ನಾಗಿ ಮಾಡಿ ಆ ಕಸಕ್ಕೆ ಹೊಸದು ರೂಪ ಕೊಡಬಹುದು ಎನ್ನಿಸಿತು. ಆ ಬಿಸಿಲಿನಲ್ಲಿಯೇ ಮಲಗಿ ನಿದ್ದೆ ಮಾಡಿದೆ.. ಆಹಾ ಎಷ್ಟು ಸೊಗಸಾಗಿತ್ತು. ಬಿಸಿಲಿನ ಜಾಲಕ್ಕೆ ಒಳಗಿನ ಗೊಂದಲಮಯ ಮಿಕ ಶರಣಾಗಿತ್ತು.. ಹೊಸ ಉತ್ಸಾಹದಿಂದ ಮುಂದೆ ಸಾಗಿದೆ. ಕಷ್ಟಗಳು ಇರುತ್ತವೆ ಬರುತ್ತವೆ.. ಆದರೆ ಆ ಕಷ್ಟಗಳು ನಮ್ಮನ್ನು ಕತ್ತರಿಸಲು ಬಿಡದೆ ಅವಕ್ಕೆ ಇನ್ನಷ್ಟು ಕಷ್ಟಗಳನ್ನು ಕೊಟ್ಟು ಅವೇ ಬಡಿದಾಡುವಂತೆ ಮಾಡಿ.. ಹೊಸ ರೂಪ/ಉಪಾಯ ಕಂಡು ಕೊಳ್ಳಬೇಕು. 
ಎದುರಿಸಿ ನಿಲ್ಲಬೇಕು.. ಉರಿಯುವ ಸೂರ್ಯನು ಕೆಲಕಾಲ
 ಮರೆಯಾಗುತ್ತಾನೆ 

ಹಾದಿಯಲ್ಲಿ ಸಿಗುವ ಉತ್ಸಾಹದ ಚಿಲುಮೆಯನ್ನು ಚಿಮ್ಮು ಹಲಗೆಯಂತೆ ಬಳಸಬೇಕು: (ನಾಲ್ಕನೇ ಪಾಠ)
ಶೇಷ ಪರ್ವತದ ಹಾದಿಯಲ್ಲಿ ಮನಸ್ಸಿಗೆ ದೇಹಕ್ಕೆ ಬಯ್ದು ಬಿಡುವಷ್ಟು ಕೋಪ ಬರುತ್ತದೆ. ಏರು ಹಾದಿ, ಬಿರು ಬಿಸಿಲು, ಕಾಲುಗಳು ಪದ ಹೇಳುತ್ತಿರುತ್ತವೆ. ಬೆನ್ನಿನ ಮೇಲೆ ಭಾರ, ಸಾಕಪ್ಪ ಎನ್ನಿಸುತ್ತದೆ. ವಾಪಸ್ ಹೋಗಿ ಬಿಡೋಣ ಅನ್ನಿಸುವುದು ನಿಜವಾದ ಮಾತು. ಅಂಥಹ ಗೊಂದಲಮಯ ಸನ್ನಿವೇಶದಲ್ಲಿ ಸಿಗುತ್ತದೆ ಕಣಿವೆ ಪ್ರದೇಶ. ಆಹಾ ಆ ತಾಣದಲ್ಲಿ ಕೂತಾಗ, ಸುತ್ತಲಿನ ಕಣಿವೆ ಪ್ರದೇಶದಿಂದ ಅನೇಕ ಗಿಡ ಮೂಲಿಕೆ ಮರಗಳನ್ನು ಬಳಸಿಬರುವ ಗಾಳಿ ಮನಸ್ಸಿಗೆ ಹಾಯ್ ಎನ್ನಿಸುವಷ್ಟು ಆಹ್ಲಾದ ಕೊಡುತ್ತದೆ. ಆ ಕಣಿವೆ ಪ್ರದೇಶದಲ್ಲಿ ಕಾಣಿಸುವ ರುದ್ರ ಸೌಂದರ್ಯ ಎಂಥವರನ್ನು ಮೂಕನನ್ನಾಗಿಸಿ ಬಿಡುತ್ತದೆ. ಅಲ್ಲಿಯೇ ಕೊಂಚ ಹೊತ್ತು ಕೂತಾಗ ಅರಿವಾಗುವ ಸತ್ಯ, ಇಲ್ಲಿಯೇ ಇಂಥಹ ಸೌಂದರ್ಯ ನಮಗೋಸ್ಕರ ಇಟ್ಟಿರುವ ಕಾಣದ ಶಕ್ತಿ, ಈ ಸೌಂದರ್ಯವನ್ನು ನೋಡಿ ಮನಸ್ಸಿಗೆ ಸಂತೋಷ ಸಿಕ್ಕಾಗ, ಅದರ ನೆರಳಲ್ಲಿ ಸಾಗಿದರೆ ಗುರಿ ಕಾಲು ಬುಡದಲ್ಲಿ. ನಿಜ ಈ ಮಾತು, ಸಿಕ್ಕ ಅವಕಾಶವನ್ನು ಚಿಮ್ಮು ಹಲಗೆಯಂತೆ ಉಪಯೋಗಿಸಿ ನಮ್ಮ ಗುರಿಯತ್ತ ಧೈರ್ಯ ಮಾಡಿ ಸಾಗಬೇಕು.. ಆಗ ನಾ ಹೇಳಬಹುದು ಗೆಲುವು ನನ್ನದೇ. 
ಎದುರಿಗೆ ಬರುವ ಕಷ್ಟಗಳು ದೂರದ ಕನಸನ್ನು ನನಸು ಮಾಡುತ್ತವೆ 

ಗುರಿ ಮುಂದಿದ್ದಾಗ.. ವಿರಮಿಸಬಾರದು: (ಐದನೇ ಪಾಠ)
ಹೆಜ್ಜೆ ಹೆಜ್ಜೆ ಇಡುತ್ತ ಕೃಷ್ಣ ಗೋಕುಲವನ್ನೆಲ್ಲ ಸುತ್ತಿ ಬಂದಾ ಹಾಗೆ, ನಾವು ಹೆಜ್ಜೆ ಹೆಜ್ಜೆ ಅಡಿಯಿಟ್ಟು ಶೇಷಪರ್ವತದ ತುತ್ತ ತುದಿಗೆ ಬಂದು ನಿಂತೆವು. ಸುತ್ತಲು ವಿಹಂಗಮ ದೃಶ್ಯ. ನಾವು ಹತ್ತಿ ಬಂದ ಹಾದಿಯನ್ನು ಒಮ್ಮೆ ಅವಲೋಕನ ಮಾಡಿದೆವು. ಸೂರ್ಯಾಸ್ತ ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ಆದರೆ ನಮ್ಮ ಗುರಿ ಇದ್ದದ್ದು ಕುಮಾರ ಪರ್ವತದ ತುತ್ತ ತುದಿ ಮತ್ತು ಅಂದಿನ ರಾತ್ರಿ ಅಲ್ಲಿಯೇ  ಕಳೆಯುವುದು. ನೀರಿಲ್ಲ ಎಂದು ಅರಿವಾಯಿತು, ಮುಂದೆ ನೀರು ಸಿಗುವ ಲಕ್ಷಣಗಳು ಇರಲಿಲ್ಲ. ಆದರೆ ನಮ್ಮ ಗುರಿ ಇದ್ದದ್ದು ತುತ್ತ ತುದಿಯಲ್ಲಿ ನಮ್ಮ ವಿಶ್ರಾಂತಿ ಎಂದು. ಜೊತೆಯಲ್ಲಿ ತಂದಿದ್ದ  ಗುಡಾರಗಳು ನಮ್ಮನ್ನು ಹೊರಗೆ ಬಿಡಿ ಎಂದು ಕಿರುಚಿಕೊಳ್ಳುತ್ತಿದ್ದವು. ಭಾರವಾದ ಹೆಜ್ಜೆಯನ್ನು ಮತ್ತೆ ಮುಂದಡಿ ಇಡಲು ಶುರುಮಾಡಿದೆವು. ಗುರಿ ಮುಂದೆ ಕಾಣುವಾಗ ಕೊಂಚ ವಿಶ್ರಾಂತಿ ಬಾಳಿನ ಗುರಿಯನ್ನು ಬದಲಿಸಿಬಿಡುತ್ತದೆ ಅಥವಾ ಗುರಿ ದಾರಿ ಕಾಣದೆ ಮಂಕಾಗಿ ಬಿಡುತ್ತದೆ. 

ಬಣ್ಣ ಬಣ್ಣದ ಹೊಂಗಿರಣಗಳು - ಅವಕಾಶಗಳ ಸುರಿಮಳೆ 


ಪಟ್ಟ ಶ್ರಮಕ್ಕೆ ಪ್ರತಿ ಫಲ ಇದ್ದೆ ಇದೆ. : (ಆರನೇ ಪಾಠ)
ಕೊರೆಯುವ ಚಳಿ, ಸುಮಾರಾಗಿ ತುಂಬಿದ ಹೊಟ್ಟೆ, ಇನ್ನೂ ಹಸಿವು, ಆಯಾಸ ಎಂದು ಹೇಳುತ್ತಿದ್ದ ದೇಹ, ಎಲ್ಲವೂ ನಮ್ಮನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿತ್ತು. ಆದರೆ ಬೆಳಗಿನ ಸೂರ್ಯಾಸ್ತ ನೋಡಲು ಹಾತೊರೆಯುತ್ತಿತ್ತು.  ಆದರೆ ಆ ಚಳಿಗೆ ದೇಹದ ಮೂಳೆಯೇ ನಡುಗುತ್ತಿತ್ತು ಅಂದರೆ ತಪ್ಪಲ್ಲಾ. ಸಿಕ್ಕ ಎಲ್ಲಾ ತಿನ್ನುವ ಪದಾರ್ಥಗಳನ್ನು ತಿಂದು ಮುಗಿಸಿ ಮೆಲ್ಲಗೆ ಗುಡಾರದ ಒಳಗೆ ನುಗ್ಗಿದೆವು. ನನ್ನ ಮತ್ತು ಸಂದೀಪ್ ಬಳಿ ಮಲಗುವ ಚೀಲವಿತ್ತು, ಆದರೆ ದರ್ಶನ್ ಪಾಪ ಚಳಿಯಿಂದ ರಾತ್ರಿ ಇಡಿ ನಡುಗುತ್ತಾ ಕಳೆದರು, ಗುಡಾರದ ಒಳಗೆ ಮಲಗಿದ್ದೆವು ಅನ್ನುವುದಷ್ಟೇ ನಮಗೆ ಶ್ರೀ ರಕ್ಷೆಯಾಗಿತ್ತು..ಬೆಳಿಗ್ಗೆ ಎಂದು ಆಗಸವನ್ನು ಹಾಗೆ ನೋಡಿದಾಗ, ಕಲಾವಿದ ತನ್ನ ಕುಂಚದಿಂದ ಅರಳಿಸಿದ ವರ್ಣಭರಿತ ಆಗಸವನ್ನು ನೋಡಿದಾಗ ಅಬ್ಬಬ್ಬ ಎನ್ನಿಸಿತು. ಇದುವರೆಗೂ ಪಟ್ಟ ಪರಿಶ್ರಮ ಸಾರ್ಥಕ ಅನ್ನಿಸಿದ್ದು ಈಗಲೇ. ಶ್ರಮ ಪಡಲೇಬೇಕು, ಶ್ರಮ ಪಟ್ಟಷ್ಟು ಅದರ ಸವಿ ರುಚಿಯಾಗಿರುತ್ತದೆ. 
ಚಿತ್ರಕೃಪೆ - ಸಂದೀಪ್ 

ಅರಿ ಷಡ್ವರ್ಗಗಳು ನಮ್ಮನ್ನು ಕಾಡಿ ಹಿಂಡಿ ಹಿಪ್ಪೆ ಮಾಡುತ್ತದೆ. ಆದರೆ ಅದನ್ನೇ ನಮಗೆ ಬೇಕಾದಂತೆ ಉಪಯೋಗಿಸಿಕೊಂಡು ಅವುಗಳನ್ನು ಮೆಟ್ಟಿ ನಿಲ್ಲುತ್ತಾ, ನಮ್ಮ ಗುರಿಯತ್ತ ಸಾಗಲೇ ಬೇಕು. ಆಗ ಅರಿಗಳು ವರ್ಗವಾಗಿ ದಾರಿ ಕೊಡುತ್ತಾ ನಮ್ಮ ಸಾಧನೆಗೆ ಬೆನ್ನೆಲುಬಾಗಿ ನಿಲ್ಲುತ್ತವೆ. 

ಇಂಥಹ ಒಂದು ಸುಂದರ ಸಂದೇಶವನ್ನು ಕುಮಾರಪರ್ವತ ನನಗಾಗಿ ಕಾದಿರಿಸಿತ್ತೇನೋ ಅನ್ನಿಸಿತು. ಹೌದು ಮೇಲೆ ಕಲಿತ ಆರು ಪಾಠಗಳು ಒಂದಕ್ಕಿಂತ ಒಂದು ತಾಳ ಮೆಳೈಸಿಕೊಂಡು ಒಲವಿನ ಉಡುಗೊರೆಯಾಗಿ ನಮ್ಮ ಮುಂದೆ ಬಂದು ನಿಲ್ಲುತ್ತದೆ. 

ಬಳಲಿ ಬೆಂಡಾಗಿದ್ದ ಮನಸ್ಸು ಮತ್ತು ದೇಹ ಈ ಚಾರಣ ಮುಗಿದಮೇಲೆ ಹೂವಿನ ಮೇಲೆ ಮಂಜಿನ ಹನಿ ಬಿದ್ದ ಹಾಗೆ ನಸು ನಗುತ್ತಾ ಬಂದದ್ದು ನನ್ನ ಮನಸ್ಸಿಗೆ ಮತ್ತು ದೇಹಕ್ಕೆ ತಂಪೆರೆದಂತೆ ಆಯಿತು. 

ಕುಮಾರಪರ್ವತವೆ ಎಂಥಹ ಶುಭ ಸಂದೇಶ ಮತ್ತು ಪಾಠ ನೀ ಕಳಿಸಿದ್ದು. ನಿನಗೆ ನನ್ನ ಕಡೆಯಿಂದ ಸಲಾಂ. ಮತ್ತೆ ಬರುವೆ ಏಳನೇ ಬಾರಿಗೆ.