Monday, March 28, 2016

ಶ್ರೀ ವೆಂಕಟೇಶಾಯ ಮಂಗಳಂ!!! -

ಯಾರು ಯಾರು ನಮ್ಮ ಜೀವನದಲ್ಲಿ  ಹೆಜ್ಜೆ ಮೂಡಿಸುತ್ತಾರೆ ಮತ್ತು ಆ ಹೆಜ್ಜೆ ಗುರುತುಗಳಿಗೆ ಹೇಗೆ ಜೊತೆಯಾಗುತ್ತಾರೆ ಎನ್ನುವುದು  ಖಂಡಿತ ಒಂದು ಯಕ್ಷ ಪ್ರಶ್ನೆ.

ಈ ಪ್ರಶ್ನೆ ಮನದಲ್ಲಿ ಮೂಡಿದ್ದು ಬಹಳ ಬಹಳ ಹಿಂದೆ.. !

೧೯೮೪ ನೆ ಜೂನ್ ಮಾಸದಿಂದ ಜೊತೆ ಜೊತೆಯಾಗಿ ಓದಿ, ನಂತರ ಜೀವನದ ಕವಲು ದಾರಿ ಬೇರೆ ಬೇರೆಯಾದರೂ, ನಮ್ಮಲ್ಲಿದ್ದ ಸ್ನೇಹ ಎಂಬ ಹಡಗಿಗೆ ಹುಟ್ಟು ಹಾಕುತ್ತಲೇ ಇದ್ದದ್ದು ನಮ್ಮ ಗೆಳೆತನದ ಅಯಸ್ಕಾಂತ.

ನಾವು ಮಾಡಿದ ಸಾಹಸಗಳು ಅನೇಕ ಅನೇಕ.. ಲೆಕ್ಕವೇ ಇಲ್ಲ. ಅಂಥಹ ಒಂದು ಅದ್ಭುತ ಎನ್ನಿಸದಿದ್ದರೂ, ಬೇಸತ್ತ ಮನಸ್ಸಿಗೆ, ಕಾರ್ಯ ಕ್ಷೇತ್ರದ ದುಡಿಮೆಯಿಂದ ಕೊಂಚ ವಿರಾಮ ಬೇಕೆನಿಸಿದ್ದ ಮನಸ್ಸಿಗೆ ತಂಗಾಳಿಯಂತೆ ಬಂದು ಬೀಸಿದ್ದು ನಮ್ಮೆಲ್ಲರ ಇಷ್ಟ ದೈವ ತಿರುಪತಿ ವೆಂಕಟೇಶ್ವರನ ಆವಾಸ ತಾಣಕ್ಕೆ ಭೇಟಿ.

ಇದೊಂದು ಅಚಾನಕ್ ನಿರ್ಧಾರ. ಆದರೆ ನಮ್ಮ ಗೆಳೆತನದ ತಂಡದಲ್ಲಿ ಎಲ್ಲಾ ನಿರ್ಧಾರಗಳು ಅಚ್ಚರಿ ತರುವಂತಹವೇ. ಒಂದು ವಾರದ ಹಿಂದೆ ನಿಗದಿಯಾದ ಕಾರ್ಯಕ್ರಮ. ನಡೀರಲೇ ತಿರುಪತಿಗೆ ಹೋಗೋಣ. ಅಷ್ಟೇ!!!!

ಶುಕ್ರವಾರ ೨೫ನೆ ತಾರೀಕು ಹೊರಟೆ ಬಿಟ್ಟೆವು. ರಾತ್ರಿ ಹತ್ತು ಘಂಟೆಗೆ ದಾರಿಯ ಹೋಟೆಲ್ ಒಂದರಲ್ಲಿ ಊಟ ಮಾಡಿ ಹೊರಟ ದೇಹಕ್ಕೆ ಬೇಕಿದ್ದು ವಿಶ್ರಾಂತಿ, ಆದರೆ ಮನಸ್ಸಿಗೆ ಬೇಕಾಗಿದ್ದು ಮಾತು ಮಾತು, ಮನಸ್ಸೇ ಮರೆಸುವಂಥಹ ಮಾತು.

ಮಂಜಿಗಿಂತ ತಣ್ಣಗಿನ ವ್ಯಕ್ತಿತ್ವದ ಶಶಿ, ತಾನು ಅಂದುಕೊಂಡದ್ದನ್ನು ಮಾಡುವ ಭಗೀರಥನ ಮನಸ್ಸಿನಂತಹ  ಧೃಡತೆಯು ಜೆಎಂ, ಕಲ್ಲನ್ನು ಕರಗಿಸಿ ನಗಿಸುವ ನಗೆಯ ಸರದಾರ ವೆಂಕಿ ಹಾಗೂ ಇವರ ಅದ್ಭುತ ಸ್ನೇಹ ಲೋಕದೊಳಗೆ ನಾನು.

ಅದೆಷ್ಟು ಮಾತಾಡಿದೆವೋ ಗೊತ್ತಿಲ್ಲ.. ಹಾಸ್ಯ, ಒಬ್ಬರ ಕಾಲನ್ನು ಒಬ್ಬರು ಎಳೆಯುವುದು, ೩೦ ವರ್ಷಗಳಾದರೂ ಹಂಚಿಕೊಂಡು, ಮಾತಾಡಿ ನಕ್ಕು ನಕ್ಕು ಸುಸ್ತಾಗಿದ್ದರೂ, ಅದೇ ವಿಷಯಗಳನ್ನು ಎಷ್ಟೇ ಬಾರಿ ಮಾತಾಡಿದ್ದರೂ, ಮತ್ತೆ ಮೆಲುಕು ಹಾಕಿ ಖುಷಿ ಪಡುತ್ತಿದ್ದೆವು.

ರಾತ್ರಿ ಪಯಣ ಯಾರಿಗೂ ಆಯಾಸ ಎನಿಸಲೇ ಇಲ್ಲಾ, ಕಾರಣ ಬಿಡುವಿಲ್ಲದ ಮಾತು, ಮತ್ತು ನಗು.

ವೆಂಕಟೇಶ್ವರನ ತಾಣದ ಬುಡವನ್ನು ತಲುಪಿದಾಗ ಬೆಳಗಿನ ಜಾವ ೩ ಘಂಟೆ. ಬೇಕಿದ್ದ ಪದಾರ್ಥಗಳನ್ನು ತೆಗೆದುಕೊಂಡು, ಕಾರನ್ನು ಬೆಟ್ಟದ ಬುಡದಲ್ಲಿ ನಿಲ್ಲಿಸಿ, ನಮ್ಮನ್ನು ಸುರಕ್ಷಿತವಾಗಿ ಹೊತ್ತು ತಂದ ನಮ್ಮ ಚೈತನ್ಯ ರಥದ ಬೆನ್ನಿಗೆ ಶಭಾಶ್ ಹೇಳಿ, ಬೇಗ ಬರುತ್ತೇವೆ ಎಂದು ಅದರ ಮೈ ಸವರಿ ಹೊರಟೆವು.

ಸುಮಾರು ಮೂರು ಘಂಟೆ ಪಯಣ, ಏಳು ಸುತ್ತಿನ ಬೆಟ್ಟವನ್ನು ಹತ್ತಿಯೇ ಬಿಟ್ಟೆವು. ದೇಹದಿಂದ ಬೆವರು ಸುರಿಯುತ್ತಿದ್ದರೂ, ಮನಸ್ಸು ಮಾತ್ರ ಬೆಳದಿಂಗಳ ಮಳೆಯಲ್ಲಿ ಮಿಂದ ಅನುಭವ ಪಡೆಯುತ್ತಿತ್ತು.


ಇಡಿ ಬೆಟ್ಟವನ್ನು ಹತ್ತುವಾಗ ಎಲ್ಲಿಯೂ ಬೇಸರ ಅನಿಸದೆ ನಮ್ಮನ್ನು ಕೈ ಹಿಡಿದು ನಡೆಸಿದ್ದು ದೈವ ಮತ್ತು ನಮ್ಮ ಕಲ್ಮಶವಿಲ್ಲದ ಗೆಳೆತನ.

ಬೆಟ್ಟವನ್ನು ಏರಿದ ಮೇಲೆ, ಶಶಿ ಮತ್ತು ವೆಂಕಿ ಇಬ್ಬರೂ ತಮ್ಮ ತಮ್ಮ ಹರಕೆಯ ರೂಪವಾಗಿ ತಮ್ಮ ತಮ್ಮ ಮುಡಿಯನ್ನು ನೀಡಿ ಬಂದರು. ಹಳೆಯ ಕಾಲದ ಚಿತ್ರಗಳ ಖಾಯಂ ಫೈಟರ್ "ಫೈಟರ್ ಶೆಟ್ಟಿ" ತರಹ ತಮ್ಮ ತಲೆಯನ್ನು ನುಣ್ಣಗೆ ಮಾಡಿಸಿಕೊಂಡು ಬಂದ ಇಬ್ಬರನ್ನು ನೋಡಿದಾಗ ಅನ್ನಿಸಿದ್ದು ಭೂಮಿಯಿಂದ ಕಾಣುವುದು ಒಂದೇ ಚಂದ್ರ ಅಂತ ಯಾಕೆ ಸುಳ್ಳು ಹೇಳುತ್ತಾರೆ ಎಂದು.

ಬೆಟ್ಟದ ಕೆಳಗಿನ ತಿರುಪತಿಯ ಹೋಟೆಲಿನಲ್ಲಿ ಒಂದು ಕೋಣೆ ಮುಂಗಡವಾಗಿ ಗೊತ್ತು ಪಡಿಸಿದ್ದದರಿಂದ, ಬೆಟ್ಟದ ಮೇಲಿನ ಬಸ್ಸಿನಲ್ಲಿ ಕೆಳಗೆ ಬಂದು, ಪ್ರಾತಃ ಕರ್ಮಗಳನ್ನು ಮುಗಿಸಿ ಹೊಟ್ಟೆಗೆ ಒಂದಷ್ಟು ಆಧಾರ ಮಾಡಿಕೊಂಡು ತಿಮ್ಮಪ್ಪನ ದರ್ಶನಕ್ಕೆ ಹೊರಟೆವು.

ಸುಮಾರು ೧೧.೪೫ಕ್ಕೆ ಹನುಮಂತನ ಬಾಲದಂತೆ ಇದ್ದ ಸರತಿ ಸಾಲಿನಲ್ಲಿ ನಿಂತೆವು.  ಸರಣಿ ರಜಗಳು, ಪ್ರಪಂಚದ ಎಲ್ಲಾ ಜನರನ್ನು ವೆಂಕಟರಮಣ ದರ್ಶನಕ್ಕೆ ಕಳುಹಿಸಿದ್ದಾರೆನೋ ಎನ್ನುವಂತೆ ಜನ ಸಂದಣಿ ಸೇರಿತ್ತು. ನಮಗೆಲ್ಲರಿಗೂ ಅರಿವಿತ್ತು ದರುಶನ ಒಂದೇ ದಿನದಲ್ಲಿ ಅಸಾಧ್ಯ ಎಂದು.  ಶ್ರೀನಿವಾಸನನ್ನು ನೆನೆಯುತ್ತಾ ಸರತಿಯಲ್ಲಿ ನಿಂತೆವು. ಬರೋಬ್ಬರಿ ೧೨ ತಾಸುಗಳ ನಂತರ ಶ್ರೀ ವೆಂಕಟೇಶ್ವರ ನಮಗೆ ದರ್ಶನವಿತ್ತು, ಅಭಯ ನೀಡಿದ.

ಈ ಅದ್ಭುತ ಮತ್ತು ಸುಂದರ ಯಾತ್ರೆಯಲ್ಲಿ ನಾನು ಶ್ರೀ ವೆಂಕಟೇಶ್ವರನ ಹತ್ತಿರ ಅವನದೇ ಆವಾಸ ಸ್ಥಾನದಲ್ಲಿ ಮಾತಾಡಲು
ಅವಕಾಶ ಸಿಕ್ಕಿತು. ನಮ್ಮಿಬ್ಬರ ಸಂಭಾಷಣೆ ನಿಮ್ಮ ಸನ್ನಿಧಾನಕ್ಕೆ ಲಭ್ಯ.. ಅದು ಇಂತಿವೆ.

ಮಾಮೂಲಿ ಅಕ್ಷರಗಳಲ್ಲಿ ಇರುವುದು ನನ್ನ ಮಾತುಗಳು, ದಪ್ಪನೆ ಅಕ್ಷರದಲ್ಲಿ ಇರುವುದು ನಮ್ಮೆಲ್ಲರ ಬಾಸ್ ಶ್ರೀ ವೆಂಕಟೇಶ್ವರನ ಮಾತುಗಳು.

***********************
ವೆಂಕಟೇಶ್ವರ ನಮಸ್ಕಾರ 
ನಮಸ್ಕಾರ ಶ್ರೀ , ಹೇಗಿದ್ದೀಯ 
ನಾನು ನಿನ್ನ ಆಶೀರ್ವಾದ, ಅಪ್ಪ ಅಮ್ಮನ ಹಾರೈಕೆ ಮತ್ತು ಬಂಧು ಮಿತ್ರರ ಹರಕೆಯಿಂದ ಸಂತುಷ್ಟನಾಗಿದ್ದೇನೆ. 
ಓಹೋ ಸುಂದರ ಅತಿ ಸುಂದರ 
ನನ್ನ ಕೆಲವು ಪ್ರಶ್ನೆಗಳಿಗೆನಿನ್ನಿಂದ ಉತ್ತರ ಬೇಕಿತ್ತು 
ಆಗಲಿ ಕೇಳು 
ಸುಂದರವಾದ ರಸ್ತೆಯಿದೆ, ವಾಹನಗಳ ಸೌಕರ್ಯ ಇದೆ, ಇಷ್ಟಿದ್ದರೂ ಬೆವರು ಸುರಿಸಿಕೊಂಡು, ಕೆಲವೊಮ್ಮೆ ತಮ್ಮ ತಮ್ಮ ಬಗ್ಗೆಯೇ ಬೇಸರ ಬಂದರೂ, ಅಯ್ಯೋ ಇದು ದೇವರ ಹರಕೆ ಎಂದು ಬೆಟ್ಟವನ್ನು ಏರಿ ಬರುವ ಕೆಲವು ಭಕ್ತರು, ಇನ್ನು ಕೆಲವರು ತಮ್ಮ ಹರಕೆಯನ್ನು ತೀರಿಸಲು ಬಂದರೆ, ಇನ್ನೂ ಕೆಲವರು ಅರೆ ಇಂದೊಂದು ಚಾರಣ ಅನ್ನಿಸುತ್ತದೆ, ಹೋಗಿಯೇ ಬಿಡೋಣ 
ಎನ್ನುತ್ತಾರೆ, ಇನ್ನಷ್ಟು ಮಂದಿ, ಅಯ್ಯೋ ನಮ್ಮ ಅಪ್ಪ ಅಮ್ಮ ಹರಕೆ ಮಾಡಿಕೊಂಡಿದ್ದರು, ಆದರೆ ಅವರಿಗೆ ತೀರಿಸಲು ಆಗಲಿಲ್ಲ ಹಾಗಾಗಿ ಅದರ ಋಣವನ್ನು ನಾನು ತಿರುಪತಿಗೆ ಯಾತ್ರೆ ಕೈಗೊಂಡು ತೀರಿಸುವೆನು ಎಂದು ಹೇಳುತ್ತಾ, ಬೆಟ್ಟವನ್ನು ಏರಿ ಬರುತ್ತಾರೆ. ದೇವ ನನ್ನ ಪ್ರಶ್ನೆ ಇಷ್ಟೇ "ನೀನೆ ಸೃಷ್ಟಿಸಿರುವ ಈ ಸೃಷ್ಟಿಯಲ್ಲಿ ಈ ರೀತಿಯ  ಭಿನ್ನ ಭಿನ್ನ ಆಲೋಚನೆಗಳು ಏಕೆ, ಮತ್ತು ಹೇಗೆ?
ಅಕ್ಕಿ ಒಂದೇ, ಆದರೆ ಅದರಿಂದ ತಯಾರಿಸುವ ಖಾದ್ಯ ಅನೇಕ ಬಗೆ ಅಲ್ಲವೇ, ಹಾಗೆ ಇದು ಕೂಡ!
ಆಹಾ.. ನನ್ನ ದೊಡ್ಡ ಪ್ರಶ್ನೆಗೆ ಎಂಥಹ  ಚುಟುಕಾದ ಉತ್ತರ.. .!
ಹೌದು ಶ್ರೀ, ದೊಡ್ಡ ಸಮಸ್ಯೆಗೆ ಪರಿಹಾರ ಯಾವಾಗಲೂ ಪುಟ್ಟದಾಗಿಯೇ ಇರುತ್ತದೆ!
ನಿನ್ನ ದರುಶನಕ್ಕೆ ಪ್ರಯಾಸ ಪಟ್ಟು ಬರುವ ಭಕ್ತಾದಿಗಳಿಗೆ ಆಹಾರ ಸಾಮಗ್ರಿ ನೀಡುವಾಗ, ನಾ ಗಮನಿಸಿದೆ, ತಿಂಡಿ,  ಊಟಗಳು,  ಪಾನೀಯಗಳು ಕಣ್ಣಿಗೆ ಕಾಣುವಷ್ಟು ಸನಿಹವಿದ್ದರೂ, ಕೆಲವರಿಗೆ ಲಭ್ಯವಾಯಿತು, ಇನ್ನು ಕೆಲವರಿಗೆ ಸಿಗಲೇ ಇಲ್ಲ, ಕೆಲವರಿಗೆ ಬೇಕಾದಕ್ಕಿಂತ ಹೆಚ್ಚೇ ಸಿಕ್ಕಿತು.. ಇದು ಹೇಗೆ, ಮತ್ತು ಯಾಕೆ?
ಶ್ರೀ, ನಿನ್ನ ಮೊಬೈಲ್ ನಲ್ಲಿ ಕೆಲವೊಮ್ಮೆ ನಿನಗೆ ಸಿಗುವ ಸಿಗ್ನಲ್ ತರಹ, ನೀ ಗೋಪುರದ ಹತ್ತಿರ ಇದ್ದರೆ ಚೆನ್ನಾಗಿ ಸಿಗ್ನಲ್ ಸಿಗುತ್ತದೆ, ಇಲ್ಲವಾದರೆ ಇಲ್ಲಾ. ನಿನಗೆ ಗೋಪುರ ಕಂಡರೆ ಸಾಲದು, ಸಿಗ್ನಲ್ ಸಿಗಬೇಕು..! 
ಯಪ್ಪಾ, ಎಷ್ಟು ಸುಂದರ ದೇವ ನಿನ್ನ ಉತ್ತರ... 
:-)
ದೇವ, ನಿನ್ನ ದರುಶನಕ್ಕೆ ಕಾಯುತ್ತಾ ನಿಂತಾಗ, ಎಷ್ಟೋ ಜನ ಭಕ್ತಾದಿಗಳು, ಇದೆಲ್ಲಾ ಯಾಕೆ, ಇಷ್ಟೆಲ್ಲಾ ಕಷ್ಟ ಪಟ್ಟು  ದರುಶನ ಮಾಡಬೇಕೆ, ಆ ಸಾಲಿನಲ್ಲಿ ನಿಂತಾಗ ಕಣ್ಣಾರೆ ಕಾಣುವ  ಎಷ್ಟೋ ಬೇಡದ ವಿಚಾರಗಳು, ಕೆಲವೊಮ್ಮೆ ಅಧಿಕಾರಶಾಯಿಗಳು ನಡೆಸುವ ದರ್ಪ, ಇವೆಲ್ಲಾ ನೋಡಿದಾಗ ಅರೆ ಇಷ್ಟೆಲ್ಲಾ ನಡೆಯುತ್ತೆ, ಆದರೂ ಮತ್ತೆ ಮತ್ತೆ ಜನ ನಿನ್ನ ದರುಶನಕ್ಕೆ ಬರುತ್ತಾರಲ್ಲ.. ?
ಶ್ರೀ, ದಿನಕರ ಮೇಲೆ ಏರುತ್ತಾ ಹೋದ ಹಾಗೆ ಶಾಖ ಹೆಚ್ಚು, ಪ್ರಖರತೆ ಹೆಚ್ಚು, ಆದರೆ, ಮಧ್ಯಾನ್ಹದ ಸೂರ್ಯನನ್ನು  ನೋಡುವುದಿಲ್ಲ, ಆದರೆ ಮುಂಜಾನೆಯ ಮತ್ತು ಸಂಜೆಯ ರವಿಯನ್ನು ನೋಡಲು ಜನ ಹಾತೊರೆಯುತ್ತಾರೆ. ಅರ್ಥವಾಯಿತೇ ಹಾಗೆ ತಮಗೆ ಯಾವುದು ಬೇಕೋ ಅದನ್ನು ಮಾತ್ರ ನನ್ನ ಭಕ್ತಾದಿಗಳು ನೋಡಲು ಬರುತ್ತಾರೆ. 
ಸವಾಲಿಗೆ ಒಂದು ಜವಾಬು.. ! 
ಶ್ರೀ.. ನಾ ಒಂದು ಪ್ರಶ್ನೆ ಕೇಳುತ್ತೇನೆ.. ಉತ್ತರ ನೀಡುವೆಯ... !
ಮಹಾ ಮಹಿಮಾ, ನಿನ್ನ ಪ್ರಶ್ನೆಗೆ ನಾ ಉತ್ತರ ಹೇಳುವಷ್ಟು ಯೋಗ್ಯತೆ ಇಲ್ಲಾ ನನಗೆ.. ನಿನ್ನ ಆಶೀರ್ವಾದ.. ಪ್ರಯತ್ನ ಮಾಡುತ್ತೇನೆ. 
ನೂಕು ನುಗ್ಗಲು, ಜನರ ಜಾತ್ರೆ, ಕೂಗುತ್ತಿರುವ ಸಿಬ್ಬಂಧಿ ಇವುಗಳ ಮಧ್ಯೆ ನೀ ನನ್ನನ್ನು ಕೆಲವೇ ಕ್ಷಣಗಳ ಮಟ್ಟಿಗೆ ಕಣ್ಣಲ್ಲಿ ತುಂಬಿಕೊಂಡೆ ಅದರ ಬಗ್ಗೆ ನಿನ್ನ ಅಭಿಪ್ರಾಯ ಹೇಳು.
ಸದ್ಯ, ನೀ ಪ್ರಶ್ನೆ ಕೇಳಲಿಲ್ಲ, ಬದಲಿಗೆ ಅಭಿಪ್ರಾಯ ಕೇಳುತ್ತಿರುವೆ ..! 
ಇದನ್ನು ಹೇಳು ಆಮೇಲೆ ಪ್ರಶ್ನೆ ಕೇಳುವೆ
ವೆಂಕಟ.. ಸರತಿ ಸಾಲಿನ ಕಡೆ ಮಗ್ಗಲಿಗೆ ನುಗ್ಗಿದಾಗ, ಭಕ್ತಾದಿಗಳ "ಗೋವಿಂದ ಗೋವಿಂದ" ಉದ್ಗಾರ ವಿದ್ಯುತ್ ಸಂಚಾರ ಮಾಡಿತ್ತು, ಆ ಕ್ಷಣದಲ್ಲಿ ಆಯಾಸ ಎನ್ನುವುದೇ ಅರಿವಾಗಲಿಲ್ಲ, ಜೊತೆಯಲ್ಲಿ ಹೆಜ್ಜೆ ಹೆಜ್ಜೆಗೆ ನಿನ್ನ ನಾಮಸ್ಮರಣೆ ಮಾಡುತ್ತಾ ನಾ ಆ ನೂಕು ನುಗ್ಗಲಿನಲ್ಲಿ ಹೋಗಿ ನೀ ನನ್ನ ಕಣ್ಣ ಮುಂದೆ ಕಂಡಾಗ ಇಡಿ ಆಯಾಸ ಮಾಯ. ಸುಮಾರು ಒಂದು ದಿನ ಪಟ್ಟ, ಶ್ರಮ ಆಯಾಸ, ಕೋಪ, ವ್ಯಸನ, ಪ್ರಾಪಂಚಿಕ ಸಮಸ್ಯೆಗಳು, ಎಲ್ಲವೂ ಭಾಸ್ಕರನ ಕಂಡು ಆವಿಯಾಗುವ ಮಂಜಿನ ಹನಿಯ ಹಾಗೆ ಮಾಯವಾಯಿತು. 
ಆ ಕ್ಷಣದಲ್ಲಿ ನೀ ಕಂಡ ಭವ್ಯವಾದ ದೃಶ್ಯ ನನಗೆ ಗೊತ್ತು.. ಆದರೆ ಇದನ್ನು ನಿನ್ನ ಓದುಗರಿಗೆ ಹೇಳುವೆಯ?
ಶ್ರೀ ವೆಂಕಟೇಶ್ವರ.. (ಸ್ವಲ್ಪ ಹೊತ್ತು ಮಾತಿಲ್ಲ)..... 
ದೇವ ನಿನ್ನ ದರುಶನ ಪಡೆದು ಹೊರಬಂದೆ... ದೇಹ ದಣಿದಿತ್ತು.. ನಿನ್ನ ದರುಶನದಿಂದ ಆಯಾಸ ಪ್ರವಾಸ ಕೈಗೊಂಡಿತು. ಮನಸ್ಸು ಹೂವಿನ ಹಾಗೆ ಆಗಿತ್ತು. ನನ್ನ ಸ್ನೇಹಿತರ ಜೊತೆ ದೇಗುಲದಿಂದ ಪ್ರಾಂಗಣಕ್ಕೆ ಬಂದು ಕುಳಿತೆ. ಆಗಸದ ಕಡೆ ಒಮ್ಮೆ ನೋಡಿದೆ.. ಕ್ಷಣಕಾಲ ಕಣ್ಣು ಮುಚ್ಚಿದೆ. ಮುಚ್ಚಿದ ಕಣ್ಣಿನ ಮುಂದೆ ಬಿಳಿ ಪರದೆ ಮೂಡಿತು. ಆ ಪರದೆಯಲ್ಲಿ ಒಂದು ಚೈತನ್ಯದ ಚಿಲುಮೆ ಚಿಮ್ಮುತ್ತಿತ್ತು. ಬಗೆ ಬಗೆಯಾಗಿ ಎತ್ತರ ಎತ್ತರಕ್ಕೆ ಚಿಮ್ಮುತ್ತಿತ್ತು. ಆ ಚಿಲುಮೆಯ ತುದಿಯಲ್ಲಿ ಒಂದು ಭವ್ಯವಾದ ಆಕಾರ, ನಗುಮೊಗದ ಮುದ್ದು ಮೊಗ.. ಅರೆ ಅರೆ ಇದು  ನನ್ನ ಅಪ್ಪನ ಮುಖ.. ಕಣ್ಣಿನ ಒಳಗೆ ಕಡಲು ಉಕ್ಕುತ್ತಿತ್ತು. ಕಣ್ಣಿಂದ ಆ ಕಡಲಿನ ಅಲೆಗಳು ಹೊರಬರುತ್ತಿದ್ದವು. ಸುಮಾರು ಮೂರು ನೂರು ಸೆಕೆಂಡ್ಸ್ ಹಾಗೆ ಕಣ್ಣು ಮುಚ್ಚಿ ಕೂತಿದ್ದೆ. ಮನಸ್ಸು ಮಾನಸ ಸರೋವರವಾಗಿತ್ತು. ಪ್ರಶಾಂತವಾಗಿತ್ತು.  ನಿದ್ದೆ ಇಲ್ಲದೆ ಬಾಡಿ, ಕೆಂಪಾಗಿದ್ದ ಕಣ್ಣುಗಳನ್ನು ಒಮ್ಮೆ ಮುಚ್ಚಿ ತೆಗೆದರೆ ಕಣ್ಣೊಳಗೆ ಬೆಂಕಿ ಇಟ್ಟ ಅನುಭವ ಆಗುತ್ತಿದ್ದ ಸ್ಥಿತಿಯಿಂದ ಕಣ್ಣೊಳಗೆ ಮಂಜಿನ ಪರ್ವತ ಇದ್ದ ಹಾಗೆ ತಣ್ಣಗಿನ ಅನುಭವ. 
ಧಾರಾಕಾರ ಕಣ್ಣೀರು ಹರಿದ ಮೇಲೆ, ಕರಗಳಿಂದ ಕಣ್ಣೀರನ್ನು ಒರೆಸಿಕೊಂಡೆ, ಸ್ನೇಹಿತರಿಗೆ ಕಾಣದ ಹಾಗೆ ಕಣ್ಣನ್ನು ಒರೆಸಿಕೊಂಡು ಮತ್ತೆ ಕೂತಾಗ ಒಂದು ಅದ್ಭುತ ಅನುಭವ ನನ್ನ ಮನದಲ್ಲಿ. ಕೈ ಎತ್ತಿ ಪ್ರಾರ್ಥಿಸಿದೆ.. 
"ದೇವ ನಾ ಪ್ರೀತಿ ಮಾಡುವ ಜನಗಳು, ಮತ್ತು ನನ್ನನ್ನು ಪ್ರೀತಿ ಮಾಡುವ ಜನಗಳು ಸದಾ ಸುಖವಾಗಿರಲಿ. ನನ್ನನ್ನು ಇಷ್ಟ ಪಡುವ ಬಂಧು ಮಿತ್ರರ ಅಭಿಮಾನದ ಸರೋವರದಲ್ಲಿ ಮೀಯುತ್ತಿರುವ ನನಗೆ ಅಹಂ ಎನ್ನುವ ಕೂಪಕ್ಕೆ ಎಂದೂ ನಾ ಬೀಳದಿರುವ ಹಾಗೆ ನೋಡಿ ಕೊಳ್ಳುವ ಹೊಣೆ ನಿನ್ನದು.  
ಶ್ರೀ ಶ್ರೀ ಶ್ರೀ.. ಇದು ಕಣೋ ಮಾತು ಎಂದರೆ. ತುಂಬಾ ತುಂಬಾ ಖುಷಿ ಆಯಿತು. ನೀ ಏನೂ ಕೇಳುವುದೇ ಬೇಡ, ನಿನಗೆ ಅಂತ ನಾ ಕೊಟ್ಟಿರುವ ಮಿತ್ರರು (ಫೇಸ್ಬುಕ್, ವ್ಹಾಟ್ಸಪ್, ಬ್ಲಾಗ್) ಸದಾ ನಿನ್ನ ನೆರಳಾಗಿ ಜೊತೆಯಾಗಿರುತ್ತಾರೆ. ಅವರಿಂದ ನೀನು, ನಿನ್ನಿಂದ ಅವರು ಸದಾ ಖುಷಿಯಾಗಿರುತ್ತಾರೆ.. ಶುಭವಾಗಲಿ, ಮತ್ತು ನಿನ್ನ ಕೆಲವು ಅಚಲ ನಿರ್ಧಾರಕ್ಕೆ ನನ್ನ ಅನುಗ್ರಹ ಇದೆ. ಕೈ ತೆಗೆದುಕೊಂಡಿರುವ ಸಾಹಸವನ್ನು ಖಂಡಿತ ಇಡೇರಿಸುವ ಧೈರ್ಯ, ಸ್ಫೂರ್ತಿ, ಶಕ್ತಿ ನಿನಗೆ ಕರುಣಿಸಿದ್ದೇನೆ... ಶುಭವಾಗಲಿ 
******************
"ನಿನ್ನ ಮೊಬೈಲ್ ಅಲರಾಂ ಸದ್ದನ್ನು ನಿಲ್ಲಿಸು"

ಕಣ್ಣು ಬಿಟ್ಟೆ, ದೇವಾಲಯದಲ್ಲಿ ಕಂಡು ಅನುಭವಿಸಿದ ಘಟನೆಗಳೆಲ್ಲ ಹಾಗೆ ಮತ್ತೊಮ್ಮೆ ಕನಸ್ಸಲ್ಲಿ ಮೂಡಿ ಬಂದಿತ್ತು. ಶಶಿಯ ಮಾತುಗಳು ಎಚ್ಚರ ಗೊಳಿಸಿದವು. ನಂತರ ಪಟ ಪಟ ಎಂದು ಒಬ್ಬೊಬ್ಬರಾಗಿ ಸ್ನಾನ ಮುಗಿಸಿ, ಬೆಳಗಿನ ಉಪಹಾರ ಮುಗಿಸಿ ಬೆಂಗಳೂರಿನ ಹಾದಿ ಹಿಡಿದೆವು. 


ಇಡಿ ಪ್ರವಾಸದ ಅತ್ಯುತ್ತಮ ಅಂಶಗಳು
೧) ಬಹಳ ವರ್ಷಗಳ ನಂತರ, ನಾವು ನಾಲ್ಕು ಜನ ಮಸ್ತ್ ಪ್ರಯಾಣ ಮಾಡಿದ್ದು
೨)  ಮಾತು ಮಾತು ಮಾತು..
೩) ವೆಂಕಿಯ ಅದ್ಭುತ ವಾಹನ ಚಾಲನೆ.. ರಾತ್ರಿ ನಿದ್ದೆಗೆಟ್ಟು ಕಾರು ಚಲಾಯಿಸಿದ್ದು, ಮತ್ತೆ ದೇಹ ಶ್ರಮ, ಮತ್ತೆ ಹನ್ನೆರಡು ಘಂಟೆಗಳ ಸರತಿಯಲ್ಲಿ ನಿಂತು ದೇಹ  ಎಂದಿದ್ದರೂ, ಮಾರನೆ ದಿನ ತುಸು ನಿದ್ದೆ ಮಾಡಿ ಎದ್ದ ಮೇಲೆ ಮತ್ತೆ ವಾಹನ ಚಾಲನೆ. ವೆಂಕಿ ನಿನಗೆ ಒಂದು ಹಾಟ್ಸ್ ಆಫ್
೪) ಮಂಜಿನಂತೆ ತಣ್ಣಗಿನ ಶಶಿ, ತನ್ನ ಹೆಸರಿಗೆ ವಿರುದ್ಧವಾಗಿ ಶಶಿಯಿಂದ ಸೂರ್ಯನಂತೆ ಬುಸು ಬುಸುಗುಟ್ಟಿದ್ದು
೫) ಜೆ ಎಂ ತಣ್ಣಗಿನ ಮಾತುಗಳು, ವೆಂಕಿಯನ್ನು ಗೋಳು ಹುಯ್ದುಕೊಂಡು ತಮಾಷೆ ಮಾಡಿದ್ದು.
೬) ಆಂಧ್ರದ ಬಸ್ಸಿನ ಚಾಲಕ ಬೆಟ್ಟದಿಂದ ಕೆಳಗೆ ಇಳಿಯುವಾಗ ನಮ್ಮೆಲ್ಲರನ್ನೂ ಸೀಟಿನ ಅಂಚಿಗೆ ತಂದು ಕೂರಿಸಿದ ರೋಮಾಂಚಕಾರಿ ವಾಹನ ಚಾಲನೆ.
೭) ರೆನೋಲ್ಟ್ ಡಸ್ಟರ್ ಅತ್ಯುತ್ತಮ ಸ್ಪ್ರಿಂಗ್ ಆಕ್ಷನ್.
೮)  ಸಾಲು ಸಾಲು ರಜವಿದ್ದರೂ, ಆಯಾಸವೆನಿಸುವ ಪ್ರವಾಸ ಆಗಿದ್ದರೂ ದೇವರ ದರ್ಶನ ಆದ ಮೇಲೆ ಸಿಕ್ಕ ಅದ್ಭುತ ಅನುಭವ.

ಸುಮಾರು  ಹದಿನೈದು ತಿಂಗಳಾದ ಮೇಲೆ ಈ ನನ್ನ ಪ್ರವಾಸಿ ಬ್ಲಾಗಿಗೆ ಮತ್ತೆ  ಕೊಟ್ಟಿದ್ದು ಈ ಲೇಖನದ ಮೂಲಕ ಎನ್ನುವ ಒಂದು ಸಂತೃಪ್ತಿ ನನಗೆ..

ಓದಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ..

"ಶ್ರೀ ವೆಂಕಟೇಶಾಯ ಮಂಗಳಂ!!! "