Wednesday, October 31, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೭

ಶ್ರೀ ಮಹಾಗಣಪತಿಯ ದರ್ಶನದಿಂದ ನಾಡಿನ ನಾಣ್ಣುಡಿಯನ್ನು ಪರೀಕ್ಷಿಸುವ ಮನಸಾಯಿತು. ಗಣಪನ ಆಶೀರ್ವಾದ, ಲಕ್ಷಿ ಕಟಾಕ್ಷ ಎರಡು ಸೇರಿದರೆ ಇದೇನು ಕಷ್ಟದ ಕೆಲಸವಲ್ಲ ಎನ್ನಿಸಿತು. 

ಮೈಯಲ್ಲಿ ಸೊಕ್ಕಿದ್ದರೆ ಯಾಣ, ಜೇಬಲ್ಲಿ ರೊಕ್ಕವಿದ್ದರೆ ಗೋಕರ್ಣ..ಒಂದೇ ದಿನ ಸೊಕ್ಕು ರೊಕ್ಕ ಎರಡನ್ನು  ಒರೆಗೆ  ಹಚ್ಚೇಬಿಡುವ ತೀರ್ಮಾನ ಆಯಿತು. ನಮ್ಮ ಸಾರಥಿ ನಡೀರಿ ಸರ್ ನೀವು ಕರೆದಲ್ಲಿ ನಾ ಬರುವೆ ಎಂದರು.  ಸರಿ ನಮ್ಮ ಮನಸಿನಂತೆ ನಡೆಯುವ ಸಾರಥಿ ನಮಗೆ ಸಿಕ್ಕಾಗ ಇನ್ನೇನು ಸಮಸ್ಯೆ

ಸಿರ್ಸಿಯಿಂದ ಯಾಣಕ್ಕೆ  ಪಯಣ! 

ವಾಹನ ಸಿರ್ಸಿ ಕುಮಟ ಹಾದಿಯಲ್ಲಿ  ರಿವ್ವನೆ ಸಾಗುತಿತ್ತು...ಅಚಾನಕ್ ಸಾರಥಿ ಸುನೀಲ್ ಹೇಳಿದ್ರು "ಸರ್ ನೀವು ಓಡಿಸಿ ಸ್ವಲ್ಪ ದೂರ" ಎಂದು ಹೇಳಿ "ಶಿವರ್ಲೆ ಟವೇರ" ಗಾಡಿಯನ್ನು ಮಾರ್ಗ ಮಧ್ಯದಲ್ಲೇ ನಿಲ್ಲಿಸಿ ಬಿಟ್ಟರು. ನನಗೆ ಒಂದು ಕಡೆ ಅಳುಕು, ಇನ್ನೊಂದು ಕಡೆ ಏನಾದರೂ ಸಾಹಸ ಮಾಡುವ  ತವಕ. ಸರಿ ಸಾಧಿಸಿಬಿಡೋಣ ಅಂತ ಸಾರಥಿ ಜಾಗದಲ್ಲಿ ಕುಳಿತೆ ಬಿಟ್ಟೆ..ಒಂದಷ್ಟು ಕಿ.ಮಿ.ಗಳನ್ನೂ ಓಡಿಸಿದೆ ಮನಸಿಗೆ ಖುಷಿಯಾಯಿತು.  ನನ್ನ ಮಿತ್ರರು ಉಸಿರು ಬಿಗಿ ಹಿಡಿದು ಕೂತಿದ್ದು ಬೇರೆ ಕಥೆ.

ನಾ ಕೇಳಿದಂತೆ ಮೊದಲು ಸಿರ್ಸಿ ಕುಮಟ ಮಾರ್ಗದಲ್ಲಿ ಸಿಗುವ ಅನೆಗುಂದಿಯಿಂದ ಸುಮಾರು 16-17 ಕಿ.ಮಿ ಗಳಷ್ಟು ದೂರ ದುರ್ಗಮವಾದ ದಟ್ಟಕಾಡಿನಲ್ಲಿ ಇಂಬಳ (ಜಿಗಣೆ)ಗಳು ತುಂಬಿದ್ದ ಹಾದಿಯಲ್ಲಿ ನಡೆದೆ ಹೋಗಬೇಕಿತ್ತು. ಅದಕ್ಕೆ ಮೈಯಲ್ಲಿ ಸೊಕ್ಕಿದ್ದವರು ಮಾತ್ರ ಹೋಗಬಹುದು ಎಂಬ ನುಡಿಗಟ್ಟು ಹುಟ್ಟಿಕೊಂಡದ್ದು ಅನ್ನಿಸುತ್ತದೆ ..ನಂತರ ನಾಗರೀಕತೆ ಬೆಳೆದಂತೆಲ್ಲ ಆ ದೂರ ಕಡಿಮೆಯಾಗುತ್ತ ಬಂದಿತು. ಈಗ ಕೇವಲ 200-300 ಮೀಟರ್ ನಡೆದರೆ ಸಾಕು ಶಿಖರದ ಬುಡ ಮುಟ್ಟಬಹುದು. 

ವಾಹನ ನಿಲುಗಡೆ ಪ್ರದೇಶ..ಇಲ್ಲಿಂದ ಕೇವಲ ಮೀಟರ್ ಗಳ ದೂರದಲ್ಲಿ ಯಾಣ !

ವಾಹನ ನಿಲ್ಲಿಸುವ ಸ್ಥಳದಿಂದ ಕೆಲವೇ ಮೀಟರುಗಳ ಅಂತರದಲ್ಲಿ ನಿಂತಿತ್ತು ಭೈರವೇಶ್ವರ ಶಿಖರ..

ಭೈರವೇಶ್ವರ ಶಿಖರ..ಕಡಿದ ಮರದ ತುಂಡಿನಂತೆ ನಿಂತ ಭಂಗಿ

ಭೈರವೇಶ್ವರನ ಮುಖವನ್ನು ತೋರಿಸಲೆ ಎನ್ನುವಂತೆ  ಕನ್ನಡಿಯಂತೆ  ಎದೆಯುಬ್ಬಿಸಿ ಮುಗಿಲನ್ನು ಚುಂಬಿಸುವಂತೆ  ನಿಂತಿತ್ತು ಮೋಹಿನಿ ಶಿಖರ. 
ನಾನು ನಿಂತೇ ಎನ್ನುವ ಸೊಬಗಿನ ಮೋಹಿನಿ ಶಿಖರ 

ನನ್ನ ತಿಳುವಳಿಕೆಯಂತೆ ಸುರೇಶ ಹೆಬ್ಳೀಕರ್ರವರ ಆಗಂತುಕ ಸಿನಿಮಾದಲ್ಲಿ ಪ್ರಥಮ ಬಾರಿಗೆ ಯಾಣದಲ್ಲಿ  ಚಿತ್ರಿಕರಣವಾಯಿತು  ನಂತರ ನಮ್ಮೊರ ಮಂದಾರ ಹೂವೆ ಸಿನಿಮಾ.  ಆನಂತರ ಈ ತಾಣ ಇನ್ನಷ್ಟು ಪ್ರಸಿದ್ಧಿಗೆ ಬಂತು. 

ಪುರಾಣದಲ್ಲಿ ವಿವರಿಸಿರುವಂತೆ ಭಸ್ಮಾಸುರನ  ವಧೆ ಮಾಡಲು ವಿಷ್ಣು ಮೋಹಿನಿ ರೂಪದಲ್ಲಿ ಬರುತ್ತಾನೆ. ನೃತ್ಯ ಮಾಡುತ್ತಾ ಭಸ್ಮಾಸುರ ತನ್ನ ತಲೆಯ ಮೇಲೆ ಕೈಯನ್ನು ಇಟ್ಟುಕೊಳ್ಳುವಂತೆ ಭಂಗಿ ಪ್ರದರ್ಶನ ಮಾಡುತ್ತಾ ಹೋದಾಗ ಅವನು ಅಲ್ಲೇ ಸುಟ್ಟು ಭಸ್ಮವಾಗಿಬಿಡುತ್ತಾನೆ.  ಆ ಕಾರಣದಿಂದ ಇಲ್ಲಿಯ ಮಣ್ಣು ಕಪ್ಪಾಗಿದೇ ಎಂದು ಹೇಳುತ್ತಾರೆ. ಭಸ್ಮಾಸುರನ ಸಂಹಾರವಾದ ಮೇಲೆ ಶಿವ ಭೈರವೇಶ್ವರ ರೂಪದಲ್ಲಿಯೂ,  ಮತ್ತು ಮೋಹಿನಿ ರೂಪದಲ್ಲಿ ವಿಷ್ಣು ಮತ್ತು ಚಿಕ್ಕ ಚಿಕ್ಕ ಶಿಖರಗಳಾಗಿ ಶಿವಗಣಗಳು ಇಲ್ಲಿಯೇ ನೆಲೆಸುತ್ತಾರೆ.  

ಇಲ್ಲಿ ಪ್ರಧಾನವಾದ ಶಿಖರಗಳು ಭೈರವೇಶ್ವರ ಮತ್ತು ಮೋಹಿನಿ. ಪುರಾಣದ ಹಿನ್ನೆಲೆ ಕೂಡ ಸೊಗಸು, ನೈಸರ್ಗಿಕವಾಗಿಯೂ  ಕೂಡ ಈ ಸ್ಥಳ ನಮ್ಮನ್ನು ಮಂತ್ರ ಮುಗ್ಧರನ್ನಾಗಿ ಮಾಡುವುದು ಸುಳ್ಳಲ್ಲ.  ದೇವಸ್ಥಾನದಲ್ಲಿರುವ ಭೈರವೇಶ್ವರ ಲಿಂಗದ ಮೇಲೆ ಸದಾ ನೀರು (ತೀರ್ಥ) ಜಿನುಗುತ್ತಲೇ ಇರುವುದು ಇಲ್ಲಿನ ವಿಶೇಷ. 

ಶಿಖರದ ಬುಡದಲ್ಲಿರುವ ಶಿವಾಲಯ

ಅತ್ಯಂತ ರಮಣೀಯವಾಗಿ ಕಾಣುವ ಈ ಶಿಖರಗಳು ಚಾರಣಕ್ಕೂ, ಪ್ರವಾಸಿತಾಣವಾಗಿಯೂ, ಭಕ್ತಿ ಸಾರುವ ಕ್ಷೇತ್ರವಾಗಿಯೂ ಪ್ರಸಿದ್ಧಿಯನ್ನು ಹೊಂದಿದೆ.   ಭೈರವೇಶ್ವರ ಶಿಖರವನ್ನು ಒಮ್ಮೆ ಸುತ್ತಿಬರಲು ಅವಕಾಶವಿದೆ.   

ಅಲೆಮಾರಿಗಳ ಗುಂಪು ಗುಹೆಯ ಬುಡದಲ್ಲಿ

ಆ ಶಿಖರದ ಕೆಳಗೆ ನಿಸರ್ಗ ನಿರ್ಮಿತ ಗುಹೆ, ಅದರಲ್ಲಿ ನೆರಳು ಬೆಳಕಿನ ಆಟ, ಸುಂದರ ಕಲಾಕೃತಿ ಮೂಡಿಸಿರುವ ಕಲ್ಲುಗಳು, ಪ್ರತಿಧ್ವನಿ ಎಲ್ಲವೂ ಮನಸಿಗೆ ಮುದ ನೀಡುತ್ತವೆ

ಮುಗಿಲ ಚುಂಬಿಸುವ ಆಸೆಯಲಿ..ಶಿಖರ ಮತ್ತು ಮರಗಳಿಗೆ ಪೈಪೋಟಿ...

ಛಾಯಾಗ್ರಾಹಕರಿಗೆ ಈ ಗುಹೆಯೊಳಗಿನ ನೆರಳು ಬೆಳಕು ಹಬ್ಬವನ್ನೇ ಉಂಟು ಮಾಡುತ್ತದೆ. 


ಹಲ್ಲಿಯೋ ..ಮೊಸಳೆಯೋ ..ಒಟ್ಟಿನಲ್ಲಿ ನೆರಳು ಬೆಳಕಿನ ಆಟ 

ಒಂದು ಕಡೆ ಇಳಿಯಲು ಕಷ್ಟವಾಗಬಹುದೆಂದು ಹಗ್ಗವನ್ನು ಕಟ್ಟಿದ್ದಾರೆ, ಅದನ್ನು ಹಿಡಿದು ನಿಧಾನವಾಗಿ ಇಳಿಯಬಹುದು . ಚಾರಣದ ಮಜಾ ಕೊಡುತ್ತೆ ಈ ತಾಣ. 

ಹಗ್ಗ ಹಿಡಿದು ಇಳಿಯುವ ಸಾಹಸದಲ್ಲಿ ನಮ್ಮ ತಂಡ 

ಸುಮಾರು ಹೊತ್ತು ಕ್ಯಾಮೆರ ಕೈಚಳಕ ಪ್ರದರ್ಶಿಸಿ ಗುಹೆಯನ್ನು ಒಂದು ಸುತ್ತು ಸುತ್ತಿ ಧಣಿವಾದ ಮೇಲೆ,  ಅಲ್ಲಿಯೇ ಇದ್ದ ಒಂದು ಅಂಗಡಿಯಲ್ಲಿ ಕಷಾಯ, ಚುರುಮುರಿ ಎಲ್ಲ ಮೆದ್ದ ಮೇಲೆ ಮೈ ಮನ ಎರಡು "ಇದು ಹಕ್ಕಿಯಲ್ಲ.... ಆದ್ರೆ ಹಾರ್ತೈತಲ್ಲ" ಎಂದು ಹಾಡಲು ಶುರು ಮಾಡಿದವು. 

ಬಂದ ಕಾಡು ಹಾದಿಯಲ್ಲಿ ತಿರುಗಿ ನೋಡಿದಾಗ!

ಮುಂದಿನ ಪಯಣ ಇನ್ನಷ್ಟು ರೋಚಕವಾಗಿತ್ತು, ದಾರಿಯಲ್ಲಿ ವಿಭೂತಿ ಜಲಪಾತಕ್ಕೆ ದಾರಿ ಎನ್ನುವ ಸೂಚನೆಗನುಸಾರ ಕಾಡಿನಲ್ಲಿ ಮತ್ತೆ ಹೊಕ್ಕೆವು. ಯಾಣದಿಂದ  ಕುಮಟ, ಗೋಕರ್ಣ ಹಾದಿಯಲ್ಲಿ ಸುಮಾರು 8 ಕಿ.ಮಿ ಕಳೆದ ಮೇಲೆ ಎಡಕ್ಕೆ ತಿರುಗಿದರೆ ವಿಭೂತಿ ಜಲಪಾತ, ಬಲಕ್ಕೆ ಹೋದರೆ ಕುಮಟ, ಗೋಕರ್ಣಕ್ಕೆ ಹೋಗುತ್ತದೆ. ಸೂಚನಾ ಫಲಕದ ಹತ್ತಿರ ಎಡಗಡೆ ತಿರುಗಿ ಸುಮಾರು 1-2 ಕಿ.ಮಿ.ಒಳಗೆ ಹೋಗಿ ವಾಹನ ನಿಲುಗಡೆಯಾದ ಮೇಲೆ..ಸುಮಾರು ಒಂದು-ಒಂದೂವರೆ ಕಿ.ಮಿ.ನಷ್ಟು ನೆಡೆದು ಸಾಗಬೇಕು.  ಭೋರ್ಗರೆಯುತ್ತಾ ಎರಡು ಹಂತದಲ್ಲಿ ಧುಮುಕುವ ಜಲಾರಾಶಿಯೇ ವಿಭೂತಿ ಜಲಪಾತ.  

ಬೆಳ್ಳನೆ ಹಾಲಿನ ಧಾರೆ!!!
ಜಲಪಾತದ ಮಧ್ಯೆ ಸಣ್ಣ ಸುಣ್ಣದ ಕಲ್ಲಿನ ಮೇಲೆ ಹರಿಯುವ ನೀರು ವಿಭೂತಿಯಂತೆ ಬೆಳ್ಳಗಿರುವುದು  ಈ ಹೆಸರಿಗೆ ಕಾರಣ ಎನ್ನುವುದು ಸ್ಥಳೀಯರ ಮಾತು.  
ವಿಭೂತಿ ಜಲಪಾತದ ಧಾರೆ
ಇಲ್ಲಿ ಅಪಾಯವಿಲ್ಲದೆ ನೀರಲ್ಲಿ ಇಳಿಯಬಹುದು..ನೀರು ದಣಿದ ದೇಹಕ್ಕೆ ಒಂದು ಸುಂದರ ಅನುಭವ ಕೊಡುತ್ತದೆ.  

(ಸಶೇಷ)

Tuesday, October 30, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೬

ಹೋಟೆಲ್ ಮಧುವನದ ಶ್ರೀ ಪ್ರಕಾಶ್ ಅವರಿಂದ ಮಾರ್ಗಸೂಚಿ ಪಡೆದು, ವಿಘ್ನವಿನಾಶಕ ಸಿರ್ಸಿ ಮತ್ತು ಸುತ್ತ ಮುತ್ತಲ ಸ್ಥಳದಲ್ಲಿ ಶಕ್ತಿ ದೇವರು ಎಂದು ಹೆಸರಾದ ದೊಡ್ಡ ಗಣಪತಿ ದೇವಸ್ಥಾನಕ್ಕೆ ಹೋದೆವು.

ಆಶ್ಚರ್ಯ ಎನ್ನುವಂತೆ, ದೇವಸ್ಥಾನ ಒಂದು ಭವ್ಯ ಮನೆಯ ಹಾಗೆ ಇದ್ದದ್ದು.  ನಾವು ಅನುಮಾನದಿಂದಲೇ ಆ ಕಟ್ಟಡದ ಮೆಟ್ಟಿಲು ಹತ್ತಿದಾಗ ಎದುರಿಗೆ ಒಂದು ದೊಡ್ಡ ಗಣಪ ಕೂತಿದ್ದ,  ದೇವರ ಮೂರ್ತಿ ಬಹು ಆಕರ್ಷಕವಾಗಿತ್ತು.

ಶ್ರೀ ಮಹಾಗಣಪತಿಯ ದೇವಸ್ಥಾನ ಪಾರ್ಶ್ವ ನೋಟ 

 ಇಟ್ಟಿಗೆ ಸಿಮೆಂಟ್ ಬ್ಲಾಗಿನ ಪ್ರಕಾಶ್ ಹೆಗಡೆಯವರು ಹೇಳಿದ್ರು ಈ ದೇವಸ್ಥಾನದ ಬಗ್ಗೆ.  ಸಿರ್ಸಿ ಸುತ್ತ ಮುತ್ತ ಜನರು ತಮ್ಮ ಕಾರ್ಯಗಳಿಗೆ ಮುನ್ನ ಈ ಗಣಪನನ್ನು ನೆನೆಯುವುದು, ಹರಕೆ ಕಟ್ಟಿಕೊಳ್ಳುವುದು, ಕೆಲಸ ಕಾರ್ಯಗಳು ನೆರವೇರಿದ ಮೇಲೆ ಹರಕೆಯನ್ನು ಸಲ್ಲಿಸುವುದು ಮುಂತಾಗಿ ಹೇಳಿದ್ದರು.  ಲೇವಾದೇವಿ, ಭೂಮಿ ಕೊಡು ಕೊಳ್ಳುವಿಕೆ, ಹಣಕಾಸಿನ  ವಹಿವಾಟು ವ್ಯವಹಾರ ಎಲ್ಲದಕ್ಕೂ ಗಣಪನ ಪೂಜೆಯೇ ಇಲ್ಲಿ ಪ್ರಥಮ ಎಂದು ಹೇಳಿದ್ದರು.  ಅಂದುಕೊಂಡ ಕಾರ್ಯ ನೆರವೆರಿಸುವಷ್ಟು ಮನೋಸ್ಥೈರ್ಯವನ್ನು ಶ್ರೀ ಮಹಾಗಣಪತಿ ಕೊಡುವನು ಎನ್ನುವ ನಂಬಿಕೆ ಇಲ್ಲಿನ ಪ್ರಾಂತ್ಯದಲ್ಲಿ ಜಾಸ್ತಿ.

ಶ್ರೀ ಮಹಾಗಣಪತಿಯ ದೇವಸ್ಥಾನ ಪಾರ್ಶ್ವ ನೋಟ 

ಮೊದಲೇ ಗಣಪನ ಬಗ್ಗೆ ತುಂಬಾ ಒಲವಿರುವ ನನಗೆ, ಈ ಮಾತುಗಳು ಇನ್ನಷ್ಟು ಹುಮ್ಮಸ್ಸನ್ನು ಕೊಟ್ಟಿತು, ನಮ್ಮ ಹುಡುಗರನ್ನು ಕರೆದುಕೊಂಡು ಈ ಗಣಪನ ಸನ್ನಿಧಾನಕ್ಕೆ ಬಂದು ಕೂತಾಗ ಚಂಡಮಾರುತದ ಅಲೆಗಳಿಗೆ ತೂರಾಡುತಿದ್ದ  ಮನಸಲ್ಲಿ ಏನೋ ಒಂದು ತರಹ ಪ್ರಶಾಂತತೆ, ನೆಮ್ಮದಿ ಕಾಣ ತೊಡಗಿತು.


ದೇವಸ್ಥಾನದ ಮುಂಭಾಗ ಮತ್ತು ಮುಖ್ಯ ದ್ವಾರ 

ದೇವಸ್ಥಾನದ ಸುತ್ತ ಮುತ್ತಲಿನ ಪರಿಸರವನ್ನು ಕ್ಯಾಮೆರ ತನ್ನ ಹೊಟ್ಟೆಗೆ ಸೇರಿಸಿಕೊಳ್ಳುತ್ತಿತ್ತು..ಅಲ್ಲಿಗೆ ಬಂದ ಓರ್ವ "ದೇವರ ಮೂರ್ತಿಯನ್ನು ಚಿತ್ರಿಸಿ ಕೊಳ್ಳಿ" ಅಂದಾಗ, ನಾನೇ ಬೇಡ..ದೇವರ ಚಿತ್ರ ಬೇಡ ಅಂದೇ..ಇಲ್ಲ ಸರ್ ನಾನು ದೇವಸ್ಥಾನದವನೇ, ಫೋಟೋ ತೆಗೆದುಕೊಳ್ಳಬಹುದು ಅಂದ್ರು..ಅಳುಕಿನಿಂದಲೇ ಮತ್ತೆ ದೇವಸ್ಥಾನದ ಒಳಗೆ ಹೋದೆ, ಮತ್ತೆ ಅಲ್ಲಿನ ಅರ್ಚಕರನ್ನು ಕೇಳಿದೆ,  ತಗೊಳ್ಳಿ ತೊಂದರೆ ಇಲ್ಲ ಅಂದ್ರು.

ದೇವಸ್ಥಾನದ ಭವ್ಯ ಒಳಾಂಗಣ 
ಗಣಪನ ಗರ್ಭಗುಡಿ 

 ಸರಿ ಗಣಪನನ್ನು ನನ್ನ ಕ್ಯಾಮೆರಾದಲ್ಲಿ ಹಲವಾರು ಕೋನದಲ್ಲಿ ಚಿತ್ರೀಕರಿಸಿಕೊಂಡು ಹೊರಗೆ ಬರುವಾಗ ಗಣಪನಿಗೆ ನಾನು ಅಂದುಕೊಂಡ ಕಾರ್ಯ ನೆರವೇರಿದ ಮೇಲೆ ನನ್ನ ಮಡದಿ,  ಹಾಗೂ ಮಗಳಿಗೆ ನಿನ್ನ ದರುಶನ ಮಾಡಿಸುತ್ತೇನೆ ಪ್ರಭು ಎಂದು ವಾಗ್ಧಾನ ಮಾಡಿ ಹೊರಗೆ ಬಂದೆ..

ವಿಘ್ನ ವಿನಾಶಕ ಶ್ರೀ ಮಹಾಗಣಪತಿ

ಮಾರಿಕಾಂಬೆ ದೇವಾಸ್ಥಾನದಿಂದ ಮಹಾಗಣಪನ ಗುಡಿಗೆ ನಕಾಶೆ 


ಸಿರ್ಸಿ ಪಟ್ಟಣದಿಂದ ಯಾಣಕ್ಕೆ ಹೋಗುವ ಮಾರ್ಗದಲ್ಲೇ ಸಿರ್ಸಿಯ ಹೃದಯ ಭಾಗದಲ್ಲೇ ಇರುವ ಈ ದೇವಸ್ಥಾನ ಬಹು ಭಕ್ತರನ್ನು ಆಕರ್ಷಿಸುತ್ತಿದೆ.  

(ಸಶೇಷ)

Monday, October 29, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೫

ಸಾತೊಡ್ಡಿ ಜಲಪಾತದ ದೃಶ್ಯ ವೈಭವಕ್ಕೆ ಮರುಳಾಗಿ ಮತ್ತೆ ವಾಸ್ತವ ಲೋಕಕ್ಕೆ ಬಂದಾಗ ವೇಳೆ ಸುಮಾರು ಎಂಟು ಘಂಟೆಯಾಗಿತ್ತು. ಒಂದು ಹುಚ್ಚು ಧೈರ್ಯ ಮನಸನ್ನು ಆವರಿಸಿತ್ತು.  ಶನಿವಾರದ ರಾತ್ರಿ ಕಳೆಯೋಕೆ ಸ್ವಲ್ಪ ಹೊತ್ತು ಹೋಟೆಲ್ ರೂಮಿಗಾಗಿ ಹುಡುಕಾಡಿದೆವು .

ಸಾತೊಡ್ಡಿಯ ಕಾಡಿನ ಹಾದಿ ನಿಜವಾಗಿಯೂ ಒಂದು ದುರ್ಗಮ ಹಾದಿ, ಸುವ್ಯವಸ್ಥಿತ ಕಾರುಗಳು ಅಲ್ಲಿಗೆ ಹೋಗಲು ಬಹಳ ಶ್ರಮ ಪಡಬೇಕು..ದ್ವಿಚಕ್ರ ವಾಹನಗಳು ಉತ್ತಮ, ಇಲ್ಲವೇ ಜೀಪ್ ಗಳು ಕೂಡ ಉತ್ತಮ..ಮಿಕ್ಕಿದ ವಾಹನಗಳು ಯಾವಾಗ ಕೈಕೊಡುತ್ತವೆ ಎನ್ನುವುದು ತಿಳಿಯೋಲ್ಲ.

ಆ ಕತ್ತಲ ಹಾದಿಯಲ್ಲಿ ಬಸವಳಿದು ಬಂದಾಗ ನಮಗೆ ಆ ಅಮಾವಾಸ್ಯೆಯ ರಾತ್ರಿಯಲ್ಲಿ ಸಿಕ್ಕಿದ್ದು "ಪ್ರಕಾಶ"ಮಾನವಾದ ದೀಪಗಳು.  ಇಟ್ಟಿಗೆ ಸಿಮೆಂಟ್ ಬ್ಲಾಗಿನ ಪ್ರಕಾಶ ಹೆಗಡೆಯವರು ಮಧುವನ ಹೋಟೆಲಿನ ಮಾಲೀಕರು ಶ್ರೀ ವಿಶ್ವ ಅವರನ್ನು ಸಂಪರ್ಕಿಸಿ ನಮಗೆ ತಂಗಲು ವ್ಯವಸ್ಥೆ ಮಾಡಿದರು. ಅಲ್ಲಿಗೆ ಹೋದಾಗ ನಮ್ಮನ್ನು ಆದರದಿಂದ ಬರಮಾಡಿಕೊಂಡ ಶ್ರೀ ಪ್ರಕಾಶ್  ಅವರು ಮತ್ತು ಪ್ರಕಾಶ್ ಹೆಗಡೆ ಇಬ್ಬರು ಬಂಧುಗಳು ಎಂದು ತಿಳಿಯಿತು..


ಶ್ರೀ ವಿಶ್ವ ಅವರ ಮಾಲಿಕತ್ವದ ಹೋಟೆಲ್ ಮಧುವನ 

ಶ್ರೀ ವಿಶ್ವ ಅವರ ಮಾಲಿಕತ್ವದ ಹೋಟೆಲ್ ಮಧುವನ 

ಪ್ರಕಾಶ್ ಹೆಗಡೆ ನನಗೆ ಕರೆ ಮಾಡಿ, "ಶ್ರೀಕಾಂತ್ ನಿಮಗೆ ಹೋಟೆಲ್ ಮಧುವನದಲ್ಲಿ ತಂಗಲು ವ್ಯವಸ್ಥೆ ಮಾಡಿದ್ದೇನೆ, ನಿಮ್ಮ ಹೆಸರು ಹೇಳಿದ್ದೇನೆ ಅಲ್ಲಿ ಹೋಗಿ ನನ್ನ ಹೆಸರು ಹೇಳಿ ಪರಿಚಯ ಮಾಡಿಕೊಳ್ಳಿ ನಿಮಗೆ ಅನುಕೂಲ ಮಾಡಿಕೊಡುತ್ತಾರೆ" ಎಂದರು. ಕತ್ತಲಿನ ಹಾದಿಯಲ್ಲಿ ತೋರಿದ ಒಂದು ಬೆಳಕು ನಮ್ಮ ದೇಹಕ್ಕೆ ಬೇಕಾದ ವಿಶ್ರಾಂತಿ ಕೊಟ್ಟಿತು.

ತುಂಬಾ ಮೃದು ಮಾತಿನ "ಪ್ರಕಾಶ್" ಏನು ಯೋಚನೆ ಮಾಡಬೇಡಿ ನಿಮ್ಮ ಆರು ಮಂದಿಗೆ ವ್ಯವಸ್ಥೆ ಮಾಡಿದ್ದೇನೆ, ಹೋಟೆಲ್ ನಲ್ಲಿ ಊಟ ಮುಗಿಯುವ ಮುನ್ನಾ ಹೋಗಿ ಊಟ ಮಾಡಿ ಬನ್ನಿ ನಂತರ ಮಾತಾಡುವ" ಎಂದರು.

ಶ್ರೀ ಪ್ರಕಾಶ್ 

ಪಕ್ಕದಲ್ಲೇ ಇದ್ದ ಹೋಟೆಲ್ ನಲ್ಲಿ ಉತ್ತರ ಭಾರತದ ಶೈಲಿಯ ಊಟ ಮಾಡಿ, ಹೊಟ್ಟೆ ತುಂಬಿಕೊಂಡ ನಂತರ ಸಿಕ್ಕದ್ದು ಸೊಗಸಾದ ಕೋಣೆಗಳು.  ಧಣಿದ ದೇಹಕ್ಕೆ ಇದಕ್ಕಿಂತ ಅನುಕೂಲ ಬೇಕೇ.  ಮತ್ತೆ ನಾನು ಕೆಳಗೆ ಬಂದಾಗ , ಪ್ರಕಾಶರವರು ಊಟ ಮಾಡುತಿದ್ದರು, ಬೇಸರ ಮಾಡಿಕೊಳ್ಳದೆ, ನಮ್ಮ ನಾಳಿನ ಕಾರ್ಯಕ್ರಮವನ್ನು ವಿಚಾರಿಸಿ, ಅನುಕೂಲವಾದ ಮಾಹಿತಿ ಕೊಟ್ಟರು, ಮೊದಲು ಎಲ್ಲಿಗೆ ಹೋಗಬೇಕು, ನಂತರ ಎಲ್ಲಿಗೆ, ಬೆಂಗಳೂರಿಗೆ ಹೋಗಬೇಕಾದರೆ ಎಷ್ಟು ಹೊತ್ತಿಗೆ ಹೊರಡಬೇಕು , ಊಟವೆಲ್ಲಿ ಮಾಡಬೇಕು ಹೀಗೆ  ಒಂದು ದಿನಚರಿ ಪಟ್ಟಿಯನ್ನೇ ನಮಗೆ ಸಿದ್ಧಮಾಡಿಕೊಟ್ಟರು.

ಶ್ರೀ ಪ್ರಕಾಶ್ ಜೊತೆಯಲ್ಲಿ ನಮ್ಮ ಅಲೆಮಾರಿಗಳು ತಂಡ!

ಮನಸು ಹಾರಾಡಿತು, ಕಾಣದ ಊರಿನಲ್ಲಿ, ಕೇವಲ ಬ್ಲಾಗ್ ಲೋಕದಲ್ಲಿ ಸಂಪರ್ಕ ಇರುವ ಅಮೂಲ್ಯ ಸ್ನೇಹಿತರಿಂದ ಅಮೂಲ್ಯವಾದ ಆದ್ರೆ ಬೆಲೆ ಕಟ್ಟಲಾರದ ಸಹಾಯ ಮನಸನ್ನು ಮೂಕನನ್ನಾಗಿಸಿತು. ಹೋಟೆಲ್ ಮಧುವನದ ಮಾಲೀಕರಾದ  ಶ್ರೀ ವಿಶ್ವ ಅವರಿಗೂ..ಹಾಗೂ  ಇಬ್ಬರು ಪ್ರಕಾಶ್ ರಿಗೂ ಮನಸಲ್ಲಿ ವಂದಿಸುತ್ತಾ ನಿದ್ರಾ ಲೋಕಕ್ಕೆ ಜಾರಿದೆವು.

ಬೆಳಿಗ್ಗೆ ಎದ್ದು, ಅವರ ಜೊತೆ ಇನ್ನಷ್ಟು ಹರಟಿದೆವು, ಮನಸಿಗೆ ಸಂತೋಷವಾಯಿತು ಅವರ ಸತ್ಕಾರ ಕಂಡು, ಜೊತೆಯಲ್ಲಿ ನೆನಪಿಗಾಗಿ ಒಂದಷ್ಟು ಚಿತ್ರಗಳನ್ನು ಅವರ ಜೊತೆ ತೆಗಿಸಿಕೊಂಡು ಅವರಿಂದ ಬೀಳ್ಕೊಟ್ಟೆವು.

ಶನಿವಾರದ ಇರುಳನ್ನು ಸುಮಧುರವಾಗಿ ಕಳೆಯಲು ಸಹಾಯ ಮಾಡಿದ ಶ್ರೀ ವಿಶ್ವ , ಶ್ರೀ ಪ್ರಕಾಶ್ , ಮತ್ತು ಶ್ರೀ ಪ್ರಕಾಶ್  ಹೆಗಡೆ ಅವರಿಗೆ ಈ ಬ್ಲಾಗಿನ ಲೇಖನ ಅರ್ಪಿತ, ಮತ್ತು ನಮ್ಮ "ಅಲೆಮಾರಿಗಳು" ತಂಡದ ಪರವಾಗಿ ಧನ್ಯವಾದಗಳನ್ನು ಈ ಮೂಲಕ ಅರ್ಪಿಸುತ್ತಿದ್ದೇನೆ

(ಸಶೇಷ)

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೪

ಗಂಗಾವತರಣದಲ್ಲಿ ಶಿವ ತನ್ನ ಜಟೆಯನ್ನು ಬಿಚ್ಚಿ ಗಂಗೆಯನ್ನು ಸೆರೆ ಹಿಡಿದು ನಿಂತಾಗ...
ಭಗೀರಥ ಮಹಾರಾಜ  "ಇಳಿದು ಬಾ ತಾಯಿ ಇಳಿದು ಬಾ..ಹರನ ಜಡೆಯಿಂದ" ಎಂದು ಹಾಡು ಹೇಳಲು ನಿಲ್ಲುತ್ತಾನೆ...

ಅರೆ ಇದೇನು ಸಹಸ್ರ ಲಿಂಗ ನೋಡಿ ಇವನಿಗೆ ತಲೆ ತಿರುಗಿತೆ ಎನ್ನುವಷ್ಟರಲ್ಲಿ.... ನಮ್ಮ ಅಲೆಮಾರಿಗಳು ತಂಡದ ಖಾಯಂ ಸದಸ್ಯ "Between the Books" ಬ್ಲಾಗಿನ ಸಂದೀಪ್ ಹೇಳಿದ್ದು..."ಶ್ರೀಕಾಂತ್ ನಮ್ಮ ಅಲೆಮಾರಿಗಳು ತಂಡ ಸಾತೊಡ್ಡಿ ಜಲಪಾತದ ದಾರಿಯನ್ನು ಸಂಜೆಯ ಇರುಳು ಬೆಳಕಿನಲ್ಲಿ ನೋಡಿ ಸವಿಯಬೇಕು ಎನ್ನುವುದು ನನ್ನ ಬಯಕೆ" ನೆನಪಿಗೆ ಬಂತು. ಸಾರಥಿಗೆ ಹೇಳಿದೆ."ನಡೀರಿ ಸುನೀಲ್ ಸಾತೊಡ್ಡಿ ಜಲಪಾತಕ್ಕೆ ಹೋಗೋಣ"
ಸಾತೊಡ್ಡಿ ಜಲಪಾತಕ್ಕೆ ಪಯಣದ ಹಾದಿ!
ಸಿರ್ಸಿಯಿಂದ ಯೆಲ್ಲಾಪುರ ತಲುಪಿ ಅಲ್ಲಿಂದ ಬಲಕ್ಕೆ ತಿರುವು ತೆಗೆದುಕೊಂಡು ಸಾಗಿದರೆ ಸಿಗುತ್ತೆ ಸಾತೊಡ್ಡಿ ಜಲಪಾತಕ್ಕೆ ಹಾದಿ. ಮಾಗೋಡ್ ಜಲಪಾತ ಮತ್ತು ಜೇನುಕಲ್ಲು ಗುಡ್ಡದ ವೀಕ್ಷಣ ಸ್ಥಳವನ್ನು ಕೈ ಬಿಟ್ಟೆವು,  ಕಾರಣ, ಸಾತೊಡ್ಡಿ ಜಲಪಾತ ಕಾಡು ದಾರಿಯಲ್ಲಿ ಹಾದು ಹೋಗಬೇಕಿತ್ತು ಮತ್ತು ಆರು ಘಂಟೆ ಆದ ಮೇಲೆ ಆ ಜಲಪಾತ ವೀಕ್ಷಣೆಗೆ ಅವಕಾಶವಿರಲಿಲ್ಲ.

ಸಂದೀಪ್ ಹೇಳಿದಂತೆ ಆ ಕಾಡು ದಾರಿ ನಿಜವಾಗಲೂ ಸಂಜೆಯ ಇರುಳು ಬೆಳಕಿನಲ್ಲೇ ಇತ್ತು..ನಾವು ಹೋದಾಗ ಸುಮಾರು ಐದು ಘಂಟೆ..ಆದ್ರೆ ಆಗಲೇ ಸೂರ್ಯಾಸ್ತವಾದಂತೆ ಕತ್ತಲು ತನ್ನ ದಾಳಿ ಇಟ್ಟಿರುವ ಕುರುಹುಗಳು ಇದ್ದವು..
ಕೊಡಸಳ್ಳಿ ಅಣೆಕಟ್ಟಿನ ಹಿನ್ನೀರಲ್ಲಿ ಮುಳುಗುತ್ತಿರುವ ಸೂರ್ಯ
ನಮ್ಮ ಸಾರಥಿ ಸುನೀಲ್ ಇಂತಹ ಜಾಗಗಳನ್ನು ಬಲು ಇಷ್ಟ ಪಡುತ್ತಾರೆ ಹಾಗು ಇಂತಹ ಸಾಹಸ ಜಾಗಗಳಲ್ಲಿ ಅವರ ಡ್ರೈವಿಂಗ್ ಬಗ್ಗೆ ನಮಗೆ ಬಲು ವಿಶ್ವಾಸ..ನಗುತ್ತ ನಲಿಯುತ್ತ ಆ ಇಳಿಜಾರಾದ ಕಾಡಿನ ಹಾದಿಯನ್ನು ಇಳಿಯುತ್ತ ಸಾಗಿತು ನಮ್ಮ ವಾಹನ..
ಎಲ್ಲಿ ನೋಡಿದರು ಹಸಿರು ಹೊದಿಕೆ ಹೊದ್ದು ಮಲಗಿದ್ದಳು ಪ್ರಕೃತಿ ಮಾತೆ

ಸೂರ್ಯ ತನ್ನ ಮನೆಗೆ ಪಯಣ ಬೆಳೆಸುತಿದ್ದ...ಕೊಡಸಳ್ಳಿ ಅಣೆಕಟ್ಟಿನ ಹಿನ್ನೀರು ಸುಂದರವಾಗಿ ಕಾಣುತಿತ್ತು..ಜಲಪಾತದ ನೀರು ಅಣೆಕಟ್ಟಿಗೆ ಹರಿದು ಸಾಗುವ ದೃಶ್ಯ ಮನಮೋಹಕವಾಗಿತ್ತು..ಸೂರ್ಯ ತನ್ನ ಮನೆಗೆ ಹೋಗುವ ಮೊದಲು ಹಿನ್ನೀರನ್ನು ಬಂಗಾರದ ನೀರಾಗಿ ಮಾಡಿದ್ದ...ಅದರ ಸೊಗಸು ನೋಡಿಯೇ ಸವಿಯಬೇಕು..ನಮ್ಮ ಕ್ಯಾಮೆರ ಹೊಟ್ಟೆ ಹಸಿವು.. ಇನ್ನಷ್ಟು ಬೇಕು..ಎಂದು ದಯನೀಯವಾಗಿ ಬೇಡುತಿತ್ತು ...ಆದ್ರೆ ಸಮಯದ ಅಭಾವವಿದ್ದ ಕಾರಣ..ವಾಹನದಿಂದಲೇ ಒಂದೆರಡು ಚಿತ್ರಗಳನ್ನು ಸೆರೆಹಿಡಿದು ಸಾಗಿದೆವು.
ಜಲಪಾತ ವೀಕ್ಷಣೆಗೆ ಕೆಲವು ಸೂಚನೆಗಳು 
 ನಮ್ಮ ವಾಹನ ನಿಂತಾಗ, ಅಲ್ಲಿ ಒಂದು ಪುಟ್ಟ ಮಗು "ಟಿಕೆಟ್ ಟಿಕೆಟ್" ಎಂದು ಸುಮಧುರ (?) ಧ್ವನಿಯಲ್ಲಿ ಕೂಗಿತು...ನಾನು "ಟಿಕೆಟ್ ಟಿಕೆಟ್..ಆರು ಟಿಕೆಟ್ ಕೊಡು ಪುಟ್ಟಿ" ಅಂದೇ.ಅಲ್ಲಿದ್ದ ಆ ಮಗುವಿನ ತಾಯಿ ತನ್ನೆಲ್ಲ ಮೊವತ್ತೆರಡು  ದಂತಗಳನ್ನು ತೋರಿಸಿ..ಮೂವತ್ತು ರುಪಾಯಿ ಅಂದರು..
ಕೈ ಬೀಸಿ ಕರೆದಳು ತಾಯಿ ಸಾತೊಡ್ಡಿ ಜಲಪಾತ 
ನಿಜವಾಗಲು ಸಂದೀಪ್ ಮಾತು ನಿಜವಾಗಿತ್ತು..ಆ ಕಾಡಿನ ಹಾದಿ, ಜಲಪಾತ ತಲುಪಲು ಸಾಗುವ ಸುಮಾರು ಅರ್ಧ ಕಿ.ಮಿ.ಮಾರ್ಗ ಸೊಗಸಾಗಿತ್ತು..ನಮ್ಮ ಕ್ಯಾಮೆರಾಗೆ ಹೆಚ್ಚಿನ ಅವಕಾಶ ಕೊಡದೆ.ನಾವು ಜಲಪಾತದ ಬುಡಕ್ಕೆ ಸಾಗಿದೆವು..

ಜಲಪಾತದ ಬುಡಕ್ಕೆ ಸಾಗುವ ಹಾದಿಯಲ್ಲಿ ತಿಂಡಿ ತಿನಿಸಿಗೆ ಅವಕಾಶವಿತ್ತು..ಮೊದಲೇ ಹೇಳಿದರೆ ಊಟ, ಪಲಾವ್ ಕೂಡ ಸಿದ್ಧ ಮಾಡುತ್ತೇವೆ ಎನ್ನುವ ಫಲಕ ಇತ್ತು..ಸಮಯವಿಲ್ಲದ ಕಾರಣ ಅಲ್ಲಿಗೆ ಭೇಟಿ ಕೊಡಲು ಅವಕಾಶವಿರಲಿಲ್ಲ..
ಹೊಟ್ಟೆ ತುಂಬಿಸಿಕೊಳ್ಳಲು ಇಲ್ಲಿ...ಕಣ್ಣು ತುಂಬಿಸಿಕೊಳ್ಳಲು ಇನ್ನರ್ಧ ಕಿಮೀ ಗಳ ಹಾದಿ 
ಆ ಗಂಗಾವತರಣದ ದೃಶ್ಯಗಳನ್ನು ನನ್ನ ಮಾತಿಗಿಂತಲೂ ಚಿತ್ರಗಳೇ ಚೆನ್ನಾಗಿ ವರ್ಣಿಸುತ್ತವೆ..
ದೂರದಲ್ಲಿ ಕೈ ಬೀಸುತ್ತ ಹರಿ ಬೀಳುವ ಜಲಧಾರೆ!!
ಆ ಹಸಿರಿನ ಹೊದಿಕೆ ಹೊದ್ದ ಆ ಕಣಿವೆಯಲ್ಲಿ ಬೂದು ಬಣ್ಣದ ಬಂಡೆಗಳು ಸೆರಗಿಗೆ ಸುಂದರ ನೆರಿಗೆಯನ್ನು ಕೊಟ್ಟರೆ.ತಿಳಿ ಹಾಲಿನ ಜಲಪಾತ ಒಳ್ಳೆಯ ಜರಿಯನ್ನು  ಕೊಟ್ಟಿತ್ತು..ಆ ಸುಂದರ ದೃಶ್ಯ ಮನಮೋಹಕ..


ಈ ಜಲಪಾತವನ್ನು ಅತಿ ಹತ್ತಿರದಿಂದ ಹಾಗೂ ಅತಿ ಕಡಿಮೆ ಎತ್ತರದಿಂದ ಅಗಲವಾಗಿ ಸುರಿಯುವ ಜಲಧಾರೆ ಎಂದರೆ ತಪ್ಪಿಲ್ಲ...ನೀವೇ ನೋಡಿ..
ಹಾಲು ಹಾಲಾಗಿ ಬೀಳುವ ಪರಿ 
 ಎಷ್ಟು ನೋಡಿದರು ಸಾಲದು..ಪ್ರತಿಬಾರಿಯೂ ತನ್ನ ಹೊಸತನ ಬಿಚ್ಚಿಡುವ ಜಲಪಾತ !!!
ಸುಂದರ ಜಲಧಾರೆ...
 ನಾವು ಹೊರಡುವಾಗ.... ಭಾನು "ನಾ ಹೊರಟೆ..ನಿಮಗಾಗಿ ಬಾನನ್ನು ರಂಗು ರಂಗಾಗಿ ಮಾಡಿದ್ದೇನೆ" ಎಂದು ಹೇಳಿದ!!
 "ಭಾನು"ವಿನಿಂದ ರಂಗಾದ "ಬಾನು"!
ಮೊದಲಬಾರಿಗೆ ನನ್ನಲ್ಲಿ ಮೌನ ಮಾತನ್ನು ಸೋಲಿಸಿತು..ಆ ದೃಶ್ಯ ವ್ಯಭವ ನನ್ನನ್ನು ಮೂಕನನ್ನಾಗಿ ಮಾಡಿತ್ತು.  ಸುಂದರ ಜಲಪಾತ, ಪ್ರಾಯಶಃ ಬಲು ಸಾಹಸದ ಹಾದಿಯಾಗಿದ್ದರಿಂದ ಜಲಪಾತದ ಸುತ್ತಾ ಮುತ್ತಾ ಕಸ ಕಡ್ಡಿಗಳು ಕಡಿಮೆ ಇದ್ದವು ಮತ್ತು ಜಲಪಾತವು ಸುಂದರವಾಗಿತ್ತು..ನೀರಲ್ಲಿ ಇಳಿಯುವ ಸಾಹಸದ ಸಾಧ್ಯತೆಗಳು ಕಡಿಮೆ ಇರುವುದು ಈ ಜಲಪಾತವನ್ನು ಸ್ವಚ್ಛವಾಗಿಡಲು ಸಹಾಯ ಮಾಡಿದೆ ಅನ್ನಿಸಿತು. ಯೆಲ್ಲಪುರಕ್ಕೆ ನಮ್ಮ ಪಯಣ ಕತ್ತಲಿನಲ್ಲಿ ಸಾಗಿತ್ತು.ನಮ್ಮ ಸಾರಥಿ ಸುನೀಲ್ ಜಾಗರೂಕತೆಯಿಂದ ನಿಧಾನವಾಗಿ ವಾಹನ ಚಲಿಸುತ್ತಿದ್ದರು..ಮಾತು ಸಾಗಿತ್ತು..ಸುನೀಲ್ "ಸರ್ ನಿಮ್ಮ ಜೊತೆ ಬಂದ್ರೆ..ಕಾಣದೆ ಇರುವ ಜಾಗವನ್ನು ತೋರಿಸುತ್ತೀರಿ..ಸೂಪರ್ ಸರ್ ನಿಮ್ಮ ಗುಂಪು ಎಂದರು"

ಯೆಲ್ಲಾಪುರದ ಚೆಕ್-ಪೋಸ್ಟ್ ಬಳಿ  ಇದ್ದ ಒಂದು ಅಂಗಡಿಯಲ್ಲಿ ಜಲ್ಜೀರ, ಐಸ್ ಕ್ರೀಂ, ಬೋಟಿ ಬಿಸ್ಕೆಟ್, ಕಾಫಿ ಟೀ, ಎಲ್ಲವು ಸೊಗಸಿತ್ತು. ನಮ್ಮ ಮುಂದಿನ ಗುರಿ ಇದ್ದದ್ದು ರಾತ್ರಿಗೆ ವಾಸ್ತವ್ಯದ ವ್ಯವಸ್ಥೆ ..ಅದು ಒಂದು ಸುಂದರ ಕಥೆ..

(ಸಶೇಷ)

Sunday, October 21, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೩


ಅಣ್ಣಾವ್ರ ಭಕ್ತ ಕುಂಬಾರದ ಒಂದು ದೃಶ್ಯ..

ಕುಂಬಾರ ಸಣ್ಣ "ಬಡಿಗೆ"ಯಿಂದ ಸಂತ ನಾಮದೇವರ ತಲೆಗೆ ಟಕ್  ಅಂತ ಬಡಿದು...ಸಂತ ಜ್ಞಾನದೇವರ ಕಡೆಗೆ ತಿರುಗಿ

"ಅಲ್ಪನಿಂದ ದೊಡ್ಡ ಮಾತು...ಸ್ವಾಮೀ ಇದು ಅರ್ಧ ಬೆಂದ ಮಡಿಕೆ" ಎನ್ನುತ್ತಾನೆ..

ಕೋಪಗೊಂಡ ನಾಮದೇವ ಅಲ್ಲಿಂದ ಹೊರಟು ತಕ್ಕ ಗುರುವಿನಾಶ್ರಯ ಹುಡುಕಾಟದಲ್ಲಿ  ತಿರುಗಿ ತಿರುಗಿ ಒಂದು ದೇವಸ್ಥಾನಕ್ಕೆ ಬಂದಾಗ....ಅಲ್ಲಿ ಶಿವಲಿಂಗದ ಮೇಲೆ ತನ್ನ ಕಾಲು ಇಟ್ಟುಕೊಂಡು ಯೋಗ ನಿದ್ರೆಯಲ್ಲಿರುವ ಒಬ್ಬ ವೃದ್ಧನನ್ನ ನೋಡುತ್ತಾನೆ.

ಕೋಪಗೊಂಡು ಬಯ್ಯುತ್ತಾನೆ...

ಆ ವಯೋವೃದ್ಧ.."ಶಿವನಿಲ್ಲದ ಜಾಗದಲ್ಲಿ ನನ್ನ ಕಾಲನ್ನು ಇಡು ..ನಿಶ್ಯಕ್ತಿಯಿಂದ ನನಗೆ ಎತ್ತಿಡಲು ಆಗುತ್ತಿಲ್ಲ" ..ಎಂದಾಗ

ನಾಮದೇವ..ಅದೇನು ಮಹಾ ಎಂದು..ಕಾಲನ್ನು ಶಿವನಿಲ್ಲದ ಸ್ಥಳದಲ್ಲಿ ಇಡಲು ಮುಂದಾಗುತ್ತಾನೆ..

ಆ ವೃದ್ಧರ ಕಾಲನ್ನು ಎಲ್ಲಿ ಇಟ್ಟರೂ  ಅಲ್ಲಿ ಒಂದು ಶಿವಲಿಂಗವಿರುತ್ತದೆ..ಆಗ ನಾಮದೇವನಿಗೆ ಜ್ಞಾನೋದಯವಾಗಿ
"ಅಯ್ಯೋ ನನ್ನ ಅಜ್ಞಾನವೇ.ಶಿವನಿಲ್ಲದ ಸ್ಥಳ ಇರುವುದೇ...ಆ ಜಾಗವೇ ನನ್ನ ತಲೆ.. ನನ್ನ ಅಂಧಕಾರಕ್ಕೆ ಧಿಕ್ಕಾರವಿರಲಿ" ಎಂದು ಗೋಳಿಡುತ್ತಾನೆ...ನಂತರ ಆ ಗುರುವಿನ ಕಾಲನ್ನು ತನ್ನ ತಲೆಯ ಮೇಲೆ ಇಟ್ಟುಕೊಳ್ಳುತ್ತಾನೆ.

"ರೀ ಈ ಶ್ರೀಕಾಂತ್ ಮಂಜುನಾಥ್ ಬರಿ ತಲೆ ಹರಟೆ ಕಣ್ರೀ..ಪ್ರವಾಸ ಕಥನ ಬರಿ ಅಂದ್ರೆ ಬರಿ ತಲೆ ಹರಟೆ ಮಾಡ್ತಾನೆ.ಏನು ನಾವೆಲ್ಲಾ ಸಿನಿಮಾ ನೋಡೋಲ್ವೆ ..ನಮಗೆ ಅಣ್ಣಾವ್ರ ಮೇಲೆ ಅಭಿಮಾನ ಇಲ್ಲವೇ..ಇನ್ನು ಇವನ ಬ್ಲಾಗನ್ನು ಬರಿ ಕಡೆ ಕೆಲವು ಸಾಲುಗಳನ್ನ ಮಾತ್ರ ನೋಡ್ಬೇಕು..ಮತ್ತು ಚಿತ್ರಗಳನ್ನು ಮಾತ್ರ ನೋಡಬೇಕು ....ಶುದ್ಧ ತಲೆಹರಟೆ ಬ್ಲಾಗಿದು" ಎಂದು ಕೊಳ್ಳಬೇಡಿ
(ಪ್ಲೀಸ್ ಪ್ಲೀಸ್...ಕೆಲವು ಸಿನಿಮಾಗಳು ಒಂದು ರೀತಿ ನನ್ನ ಜೀವನವನ್ನು ತುಂಬಾ ಬದಲಾಯಿಸಿದೆ :-) ಹಾಗಾಗಿ ಪ್ರತಿಯೊಂದು ಸಿನಿಮಾ ಧಾಟಿಯಲ್ಲೇ ಬರುತ್ತದೆ)

ಶ್ರೀ ಸಹಸ್ರ ಲಿಂಗ ಕ್ಷೇತ್ರಕ್ಕೆ ಕಾಲಿಟ್ಟಾಗ ನನಗೆ ಹೊಳೆದ ದೃಶ್ಯ ಇದು...
ನಮ್ಮ ಪ್ರಯಾಣದ ನಕಾಶೆ
ಬನವಾಸಿಯಲ್ಲಿ ಬಿಸಿ ಬಿಸಿ ಊಟ ಮಾಡಿ..ಶ್ರೀ ಸಹಸ್ರ ಲಿಂಗದ ಕ್ಷೇತ್ರಕ್ಕೆ ಕಾಲಿಟ್ಟೆವು..

ಶ್ರೀ ಸಹಸ್ರ ಲಿಂಗ ಕ್ಷೇತ್ರಕ್ಕೆ ಸ್ವಾಗತ ಫಲಕ!
ಬಯಲಲ್ಲಿರುವ ಕೈಲಾಸ ಎನ್ನಬಹುದು..ಸಂತ ನಾಮದೇವ ಇಲ್ಲಿಗೆ ಬಂದಿದ್ದರೇ ಇನ್ನಷ್ಟು ಗೊಂದಲಕ್ಕೆ ಒಳಗಾಗುತಿದ್ದದು ಸುಳ್ಳಲ್ಲ ..ಎಲ್ಲಿ ನೋಡಿದರೆ ಎಲ್ಲಿ ಕಣ್ಣ ಬಿಟ್ಟ ಕಡೆ, ಕಣ್ಣ ಮುಚ್ಚಿದೆಡೆ ಶಿವಮಯ..ನಂದಿಮಯ...


ಸೋಂದೆ ಅರಸರಿಗೆ ಮಕ್ಕಳಾಗದೆ ಇದ್ದಾಗ.ಕೆಲ ಋಷಿಮುನಿಗಳ ಸಲಹೆಯಂತೆ ಈ ಶಾಲ್ಮಲಾ ನದಿಯಲ್ಲಿ ಹಲವಾರು (ಸಹಸ್ರ) ಲಿಂಗಗಳನ್ನು ನಿರ್ಮಿಸಿ..ಪೂಜಿಸಿದ ಮೇಲೆ ಮಕ್ಕಳಾಯಿತು ಎಂದು ಗೋಡೆಯ ಮೇಲೆ ಬರೆದ ಒಂದು ಬರಹ ಸಾರುತ್ತದೆ..
ಕಾರಣ ಏನೇ ಇದ್ದರು ಇದು ಬಯಲು ಶಿವನ ಸಂಗ್ರಹಾಲಯ ಎಂದು ಹೇಳುವುದರಲ್ಲಿ ಅಡ್ಡಿಯಿಲ್ಲ.

ಸ್ಥಳ ಪುರಾಣ...ಅಂಗ್ಲ ಬಾಷೆಯಲ್ಲಿ.!!!
(ಶಿವಮೊಗ್ಗದ ಬಳಿ ಗಾಜನೂರು ಅಣೆಕಟ್ಟಿಗೆ ಹೋಗುವ ಮಾರ್ಗದಲ್ಲಿ ಹರನಕೆರೆ ಎನ್ನುವ ಜಾಗದಲ್ಲಿಯು ಇಂತಹ ಒಂದು ಕೌತುಕ ಕಾಣ ಸಿಗುತ್ತದೆ...ಅಲ್ಲಿ ಶಿವಲಿಂಗವನ್ನು ಇತ್ತು ಪೂಜಿಸುತ್ತಾರೆ.ಆದ್ದರಿಂದ ಅದಕ್ಕೆ ಹರಕೆರೆ, ಹರನಕೆರೆ, ಅಂತ ಗುರುತಿಸುತ್ತಾರೆ...ಅದೇ ಬಯಲಿನಲ್ಲಿ ಶಿವಮೊಗ್ಗದ ಶ್ರೀ ಕಾಶಿನಾಥ್ ಎನ್ನುವ ಮಹಾನ್ ಶಿಲ್ಪಿ ಒಂದು ಚಿಕ್ಕ ಕೈಲಾಸವನ್ನೇ ನಿರ್ಮಿಸಿದ್ದಾರೆ..ಶಿವ, ಪಾರ್ವತಿ, ಸಪ್ತ ಋಷಿಗಳು,  ಶಿವಗಣ,  ಗಣಪ, ಸುಬ್ರಮಣ್ಯ ಎಲ್ಲವು ಕಾಣ ಸಿಗುತ್ತದೆ...ಅವಕಾಶ ಇದ್ದಾಗ ಹೋಗಿ ಬನ್ನಿ)
ಬಯಲು ಶಿವ ಸಂಗ್ರಹಾಲಯ!!!
ಶಾಲ್ಮಲಾ ನದಿ ಸುಂದರವಾಗಿ ಹರಿಯುತಿತ್ತು...ಆ ಬಂಗಾರದ ಸೂಯನ ಕಿರಣಗಳು ವರ್ಣ ನೀರನ್ನು ಅಕ್ಷರಶಃ ಬಂಗಾರದ ದ್ರಾವಣವನ್ನಾಗಿ ಮಾಡಿತ್ತು..ಶಾಲ್ಮಲಾ ನದಿಯಾ ಪ್ರವಾಹ ಕಡಿಮೆ ಇದ್ದಾಗ ಇನ್ನಷ್ಟು ಲಿಂಗಗಳನ್ನು ಕಾಣಬಹುದು...


ಕಥೆ ಹೇಳಿ ಬೇಸರವಾಗಿ ಸಾಕಪ್ಪ ಎಂದುಕೊಂಡು ಮುಖ ತಿರುಗಿಸಿ ಕೊಂಡು ನಿಂತ ಬಸವನನ್ನು ನೋಡಿದಾಗ ನಂದಿ ನಿನ್ನ ಓಡಾಲಾಲದ ಶರಧಿಯಲ್ಲಿ ನಮ್ಮ ಗಾಳಕ್ಕೆ ಸಿಕ್ಕದೆ ಇರುವ ಇನ್ನೆಷ್ಟು ಇತಿಹಾಸ ಸಾರುವ ಮೀನುಗಳು ಇವೆಯೋ ಎನ್ನುವ ಭಾವ ತುಂಬಿ ಹರಿಯುತಿತ್ತು...

ಕಥೆ ಹೇಳಿ ಹೇಳಿ ಬೇಜಾರಾಗಿ ಬೆನ್ನು ಮಾಡಿ ಕುಳಿತ ಬಸವ..!


ಆ ನದಿಯಲ್ಲಿದ್ದ ಶಿವಲಿಂಗಗಳು ಹೇಗೆ ನಿರ್ಮಿತವಾದವು ಎಂದು ಆಶ್ಚರ್ಯ ಪಡುತಿದ್ದೀರ ..ಪಾಪ ಆ ಬಸವಣ್ಣ ಕತೆ ಹೇಳಿ ಹೇಳಿ ಆ ಕಡೆ ಮುಖ ಮಾಡಿಕೊಂಡು ಕೂತಿದ್ದಾನ..ಇರಲಿ ಬಿಡಿ.ಅವನು ಹೇಳಿದ ಕತೆ ಕೇಳಿ..ನಾನು ನಿಧಾನವಾಗಿ ಮೆಟ್ಟಿಲನ್ನು ಹತ್ತಿ ಇಲ್ಲಿ ನೆರಳಲ್ಲಿ ಬಂದು ಕೂತಿದ್ದೇನೆ...ಬನ್ನಿ ನನ್ನ ಕೈಲಾದ ಮಟ್ಟಿಗೆ ಹೇಳುತ್ತೇನೆ..ಎಂದು ಆಹ್ವಾನ ಕೊಡುತ್ತಿದೆ ಎನ್ನುವ ಹಾಗೆ ಸಾವಾಧಾನವಾಗಿ ಕುಳಿತ ಬಸವ ಹೀಗೆ ಒಂದೇ ಎರಡೇ ನೂರಾರು ಬಸವಗಳು ಶಿವಲಿಂಗಕ್ಕೆ ಪೈಪೋಟಿ ನೀಡುತ್ತ ನಿಂತಿವೆ.


ಎಷ್ಟು ಹೇಳಿದರು ಮುಗಿಯೊಲ್ಲ ಅನ್ನುವ ಬಸವ...!
ಶಿವ ಪಾರ್ವತಿಗೆ "ಸ್ವಾಮಿ ಪೂಜೆಗೆ ಅರಿಶಿನ ಕುಂಕುಮ ತರುತ್ತೇನೆ ಅಂದ್ರೆ ..ಶಿವನು...ಇಲ್ಲ ಶಿವೆ.ನೋಡಲ್ಲಿ ನಮ್ಮ ಸೂರ್ಯದೇವ ತನ್ನ ಕಿರಣಗಳಿಂದ ನೀರನ್ನೇ ಬಂಗಾರದ ವರ್ಣಕ್ಕೆ ತಿರುಗಿಸಿಬಿಟ್ಟಿದ್ದಾನೆ......ಬಂಗಾರದ ನೀರಿನಲ್ಲಿ ಮುಳು ಮುಳುಗಿ ಏಳುತ್ತಾ ನನ್ನ ವಿಭೂತಿಯೆಲ್ಲ ಹರಿದು ಇಲ್ಲೇ ದೂರದಲ್ಲಿ ವಿಭೂತಿ ಜಲಪಾತವಾಗಿಬಿಟ್ಟಿದೆ.ಎನ್ನುವ  ಹಾಗೆ ಆ ಸಂಜೆಯ ಮೋಹಕ ಬೆಳಕಿನಲ್ಲಿ ಶಿವಲಿಂಗಗಳೆಲ್ಲವೂ ಸುವರ್ಣಾಭಿಷೇಕದಿಂದ ಮಿನುಗಿತ್ತಿದ್ದವು..

ಬಂಗಾರದ ನೀರಲ್ಲಿ ಮೀಯುತ್ತಿರುವ ಶಿವಲಿಂಗಗಳು !
ಶಾಲ್ಮಲಾ ನದಿಗೆ (ಗಂಗೆ) ಒಂದು ಕಡೆ ತನ್ನ ಪತಿಗೆ ಅಭ್ಯಂಜನದ ಖುಷಿ..ಇನ್ನೊಂದೆಡೆ ಪಾರ್ವತಿದೇವಿಯಾ ಮೆಚ್ಚುಗೆ ನೋಟ..ಪೂಜೆಗೆ ಕಾವಲಾಗಿ ನಂದಿ ಆಹಾ ಇದು ಅಲ್ಲವೇ ಭೂಕೈಲಾಸ ಎನ್ನುತ್ತಾ ಜುಳು ಜುಳು ಎನ್ನುತ್ತಾ ಘಂಟಾ ನಾದ ಮಾಡಿ ಶಿವ ಪೂಜೆ ಸಲ್ಲಿಸುತ್ತಿದ್ದಳು...

ಏಕಾಂಗಿ ನೀರಲ್ಲಿ ಈಜುತ್ತಿರುವ ಶಿವ!!!

ಶಿವಗಣದ ಜೊತೆ ಬೆಂಗಳೂರಿನಿಂದ ಬಂದ (ವಾ)ನರ ಗುಂಪು ಈ ಪ್ರಕೃತಿಯ ಓಕುಳಿ ಆಟಕ್ಕೆ ಸಾಕ್ಷಿ ಎನ್ನುವಂತೆ ಸಂತಸ ಪದುತಿದ್ದವು...ನೀರೋ..ಇಲ್ಲ ಕೋಲಾರದ ಗಣಿಯಿಂದ ತೆಗೆದ ಚಿನ್ನವನ್ನು ತೊಳೆದು ಹರಿದು ಬಂದ ನೀರೋ ಅನ್ನುವ ಹಾಗೆ ಥಳ ಥಳ ಹೊಳೆಯುತ್ತಿದ್ದ ಶಾಲ್ಮಲೆಯನ್ನು ನೋಡಿ...ಅರೆ..ಶಿವನು ತನ್ನ ಮಡದಿ ಗಂಗೆ ಪಾರ್ವತಿಗೆ ಆಚಾರಿ ಸೂರ್ಯನಿಗೆ ಹೇಳಿಮಾಡಿಸಿದ ಬಂಗಾರದ ಹರಿವಾಣವೇ ಎನ್ನುವಂತೆ  ಇಡಿ ನದಿ ಬಂಗಾರದ ತಟ್ಟೆಯ ಹಾಗೆ ಗೋಚರವಾಯಿತು...
ಬಂಗಾರದ ನೀರು ಬೇಕೇ ಅಭಿಷೇಕಕ್ಕೆ!!!
ಕಣ್ಣು ತುಂಬಾ ತುಂಬಿಕೊಂಡು..ಹಾಗೆ ಮನಸು ಭಕ್ತಿ ಭಾವದಿಂದ ಮನಸು ತೂಗಾಡುತಿತ್ತು....ತನ್ನ ಪೂಜಾ ಕೈಂಕರ್ಯ ಮುಗಿಸಿ ನಾನು ಹೊರಟೆ ಎಂದು ಇನ್ನೊಂದು ದಿಕ್ಕಿಗೆ ಮುಖ ಮಾಡಿ ಶಾಲ್ಮಲೆ ಹರಿಯುತ್ತಾ ಸಾಗಿದಳು...

ನದಿಯ ಇನ್ನೊಂದು ಮುಖ!!!
ನಿಧಾನವಾಗಿ ಮೆಟ್ಟಿಲ ಹತ್ತಿ ಮೇಲೆ ಬಂದು ನೋಡಿದಾಗ.ಅಲ್ಲೊಂದು ತೂಗು ಸೇತುವೆ ಓಲಾಡುತಿತ್ತು..ಸ್ನೇಹಕ್ಕೆ ಒಂದೇ ಮಾತು..ಅದರ ಕಾವಲಿಗೆ ಒಂದೇ ಸೇತುವೆ ಎನ್ನುವಂತೆ..ಶಾಲ್ಮಲೆ ಎರಡು ತಟದ ಜನರನ್ನು ಒಂದು ಗೂಡಿಸಲು ತನ್ನ ಮೇಲೆ ಒಂದು ತೂಗಾಡುವ ಸೇತುವೆ ನಿರ್ಮಿಸಿಕೊಂಡಿದ್ದಾಳೆ..
ತೂಗು ಸೇತುವೆ 
ತಣ್ಣಗೆ ಹರಿಯುತ್ತಿರುವ ಶಾಲ್ಮಲಾ ನದಿ..
ಆ ನದಿಯ ಮೇಲೆ ಮಾನವರು, ಜಾನುವಾರುಗಳು, ವಾಹನಗಳು ಎಲ್ಲವನ್ನು ಹೊತ್ತು ಸಾಗುತ್ತ ಆನಂದದಿಂದ ತೊನೆದಾಡುವಾಗ..ಆ ಸೇತುವೆ ಮೇಲೆ ನಿಂತ್ ನೋಡುತ್ತಾ ನಿಂತಿದ್ದ ನಮ್ಮನ್ನು ಕಂಡು ಶಾಲ್ಮಲೆ ಒಂದು ತೊಟ್ಟು ಆನಂದ ಭಾಷ್ಪವನ್ನು ನಮ್ಮ ಪರವಾಗಿ ಶಿವನಿಗೆ ಅರ್ಪಿಸಿದಂತೆ ಖಂಡಿತು...
ದಾರಿ ಇದ್ದರೆ ಸಾಕು.ನಾವು ಬಂದ್ವಿ...
 ಬೈಕ್ ಗಳು ರಿವ್ವನೆ ಸಾಗುತಿದ್ದವು...ತೂಗು ಸೇತುವೆ ಮೇಲೆ ನಿಂತು ನದಿಯ ಸೌಂದರ್ಯ ಸವಿಯುವುದು, ಗಾಳಿ ಮೇಲೆ ತೇಲಿಬರುವ ಶಿವನ ಧ್ಯಾನ ಗಾನ, ಎಲ್ಲವು ಮಂತ್ರ ಮುಗ್ಧರನ್ನಾಗಿ ಮಾಡುವುದು ಈ ಕ್ಷೇತ್ರದ ವಿಶೇಷ..

ಬರಿ ಭಕ್ತಿಯೊಂದೇ ಅಲ್ಲ.ಸೌಂದರ್ಯ, ಪ್ರಕೃತಿಯ ನಿಗೂಡ ರಹಸ್ಯ,  ಜುಳು ಜುಳು ನದಿ, ತೂಗು ಸೇತುವೆ, ಇತಿಹಾಸ ಎಲ್ಲವು ಮನಸಿಗೆ ಪ್ರಶಾಂತ ಭಾವ ತರುತ್ತದೆ..

(ಸಶೇಷ...)

Tuesday, October 16, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೨

ಕರುನಾಡ ತಾಯಿಗೆ ಸರಿಯಾದ ಬೈತಲೆ ಇಲ್ಲ.ತಲೆಯ ಮೇಲೆ ಬರಿ ಹಳ್ಳ ದಿಣ್ಣೆಗಳು ಅನ್ನುವ ಮಾತು ಕೇಳಿ ಕೇಳಿ ಸಾಕಾಗಿತ್ತು..

ಮೈಸೂರು ರಸ್ತೆಯಲ್ಲಿ ಸಂದೀಪ್ ಮತ್ತು ನಾನು ಗಾಡಿ ಹತ್ತಿ ಶುರುವಾದ ನಮ್ಮ ಪಯಣ, ಕೋರಮಂಗಲದ ಅಗರದಲ್ಲಿ ಪ್ರಶಾಂತ್, ಮಾರತ್ ಹಳ್ಳಿಯ ಬಳಿ ಲತೇಶ್ , ಹೆಬ್ಬಾಳದ ಮೇಲು ರಸ್ತೆಯ ಕೆಳಗೆ ರಘು ಹತ್ತಿದ ಮೇಲೆ ಭರದಿಂದ ತುಮಕೂರು  ರಸ್ತೆಯ ಗೊರಗುಂಟೆ  ಪಾಳ್ಯಕ್ಕೆ ಬರುವ ತನಕವೂ ಈ ಮೇಲಿನ ನುಡಿ ಸರಿ ಅನ್ನಿಸಿತು...!

ಹೌದು ಕರುನಾಡಿನ ತಾಯಿಗೆ ಸರಿಯಾದ ಬೈತಲೆ ಬೇಕು..!

ತುಮಕೂರು ರಸ್ತೆಯ ಮೇಲು ರಸ್ತೆ ಹತ್ತಿದೆವು...ಅಬ್ಬ..ನಮ್ಮ ಸಾರಥಿ "ಸುನೀಲ್" ಅವರ ನಾಗಾಲೋಟ ಶುರುವಾಯಿತು..ನೆಲಮಂಗಲ,  ತುಮಕೂರು, ಹಿರಿಯೂರು,   ಚಿತ್ರದುರ್ಗ, ದಾವಣಗೆರೆ, ರಾಣಿಬೆನ್ನೂರ್ ,  ಹಾವೇರಿ..ಆಹಾ ಎಂತಹ ರಸ್ತೆ...ಅಮೋಘವಾದ ರಸ್ತೆಯಲ್ಲಿನ ಪಯಣ..ಮೇಲಿನ ಮಾತನ್ನು ಸುಳ್ಳು ಮಾಡಿತು.

ಹಾನಗಲ್ ಮೂಲಕ ಸಿರ್ಸಿ  ಹೊರಟಿತ್ತು ನಮ್ಮ ಪಯಣ...ಅಚಾನಕ್ಕಾಗಿ

"ಪ್ರಶಾಂತ್..ಪ್ರಶಾಂತ್" ಅಂದೇ

"ಎಸ್ ಬಡ್ಡಿ...ವೀ ಕೆನ್ ಟೇಕ್ ಬಾತ್ ಹಿಯರ್ " ಅಂದ...
ಪ್ರಕೃತಿ ಮಾತೆ ಹಸಿರ ಸೀರೆಯುಟ್ಟು ಸ್ವಾಗತ ಕೋರಿದಳು

ಪಯಣಿಸಿ ದಣಿದ ಮೈ ಮನಕ್ಕೆ ಮುದ ನೀಡಲು ಸಿಕ್ಕ ನೀರು...
ಸೊಗಸಾದ ಸ್ನಾನವಾಯಿತು...ವಾಹನ ಸಿರ್ಸಿ ಊರಿನ ಸತ್ಕಾರ್ ಹೋಟೆಲ್ ಮುಂದೆ ನಿಂತಿತು.
ದಿಗ್ವಾಸ್ ಹೇಳಿದಂತೆ...ಮಸಾಲಾ ದೋಸೆಯನ್ನು ಹೊಟ್ಟೆಗೆ ಇಳಿಸಿ ಗ್ರಾಮ ದೇವತೆಯಂತೆ ನೆಲೆ ನಿಂತಿರುವ "ಮಾರಿಕಾಂಬ" ದೇವಸ್ಥಾನಕ್ಕೆ ಮನಸು ಮತ್ತು ದೇಹ ಎರಡು ಹೊಕ್ಕಿತು..(ಪ್ರಕಾಶಣ್ಣ, ಆಶಾ ಅತ್ತಿಗೆ ಬಾಲೂ  ಸರ್ ಈ ದೇವಸ್ಥಾನದ ಬಗ್ಗೆ ಹೇಳಿದ್ದರು)

ಹಲವಾರು ವರ್ಷಗಳ ಹಿಂದೆ ಮೊದಲ ಬಾರಿಗೆ ಮಾರಿಕಾಂಬ ದೇವಸ್ಥಾನದ ಚಿತ್ರ ನೋಡಿದಾಗ..ಜೈಪುರದ ಹವಾ ಮಹಲ್ ನೆನಪಿಗೆ ಬಂದಿತ್ತು ಮೊದಲ ಬಾರಿಗೆ ಕಣ್ಣಿಂದ ನೋಡಿ ದರ್ಶನ ಪಡೆಯುವ ಭಾಗ್ಯ.
ಮಾರಿಕಾಂಬ ದೇವಸ್ಥಾನ - ಜೈಪುರದ ಹವಾ ಮಹಲ್ !!!!
ದೇವಸ್ಥಾನ ಬಲು ಸೊಗಸಾಗಿದೆ..ಅಂಗಳದ ವಿನ್ಯಾಸ, ಒಳಗಿನ ಸಭಾ ಮಂಟಪ, ಅಲ್ಲಿ ದೇವಿಯ ವಿವಿಧ ಶಕ್ತಿಗಳ ಪ್ರತಿರೂಪದ ಚಿತ್ರ..ಆಹಾ ಸೊಗಸೇ ಸೊಗಸು...

ಮೆಲ್ಲನೆ ಸೌಂದರ್ಯ ಭಕ್ತಿ ಎರಡು ಮೇಳೈಸಿರುವ ದೇವಾಲಯವನ್ನು ನೋಡುತ್ತಾ ಒಳಗೆ ಹೋದಾಗ ಕಂಡಿದ್ದು ದೇವಿ                    ಶ್ರೀ ಮಾರಿಕಾಂಬೆ..

ಆಪ್ತಮಿತ್ರದಲ್ಲಿ ರಾಮಚಂದ್ರ ಆಚಾರ್ಯರು ನೆಲ ಮೆಟ್ಟಿ ದೊಡನೆ ಸಿಗುವ ಮಿಂಚಿನ ಸಂಚಾರ ನನ್ನ
ಮೈಯೊಳಗೂ ಸುಳಿದಾಡಿದ ಅನುಭವವಾಯಿತು.ಕೆಲ ನಿಮಿಷ ದೇವಿಯನ್ನು ಕಣ್ಣು ತುಂಬಾ ತುಂಬಿಕೊಂಡು ಕೆಲ ನಿಮಿಷಗಳು ಹಾಗೆ ಮೈ ಮರೆತು ಧ್ಯಾನ ಮಾಡಿದಾಗ, ಸುಮಾರು 450 ಕಿ.ಮಿ. ಪ್ರಯಾಣದ ಆಯಾಸ ಹಾಗೆಯೇ ಗಾಳಿಯಲ್ಲಿ ಲೀನವಾಯಿತು.

ಅಲ್ಲಿಯೇ ಇದ್ದ ದೇವಾಲಯದ ಸಿಬ್ಬಂಧಿಯನ್ನು ಚಿತ್ರ ತೆಗೆಯುವ ಬಗ್ಗೆ ಕೇಳಿ ಅಪ್ಪಣೆ ಪಡೆದು.ದೇವಾಲಯದ ಸುತ್ತ ತಿರುಗಾಡಿ ಮನಸಿಗೆ ಮತ್ತು ಕ್ಯಾಮೆರಾದ ಹೊಟ್ಟೆಗೆ ಹಿಡಿಸುವಷ್ಟು ಚಿತ್ರಗಳನ್ನು ತೆಗೆದುಕೊಂಡು ಇನ್ನೊಮೆ  ನನ್ನಾಕೆ ಮತ್ತು ನನ್ನ ಸ್ನೇಹಿತೆಯನ್ನು (ಮಗಳು) ಮಾರಿಕಾಂಬೆಯ ದರುಶನಕ್ಕೆ ಕರೆದುಕೊಂಡು ಬರುವ ನಿರ್ಧಾರವನ್ನು ತೆಗೆದುಕೊಂಡು ಹೊರಗೆ ಬಂದೆ ಅಥವಾ ಹೊರಗೆ ಕಾಲಿಟ್ಟೆ!!!

ಭಕ್ತಿ ಇತ್ತು, ಸೌಂದರ್ಯ ಇತ್ತು, ಕಲೆ ಇತ್ತು, ಬಲೆ ಇತ್ತು, ಶಕ್ತಿ ಇತ್ತು, ಲಾಲಿತ್ಯ ಇತ್ತು...ಆಹಾ ಮತ್ತೊಮ್ಮೆ ಭೇಟಿ ನೀಡುವ ಅವಕಾಶ ಶೀಘ್ರ ಬರಲಿ ಎಂದು ಪ್ರಾರ್ಥಿಸುತ್ತೇನೆ...

ಶ್ರೀ ಮಾರಿಕಾಂಬೆಯ ಇತಿಹಾಸ ದೇವಾಲಯದ ನಿರ್ಮಾಣ, ಪೂಜಾ ವಿಧಿ ವಿಧಾನ, ಎಲ್ಲವೂ "ಶಿರಸಿ ಸಿರಿದೇವಿ ಶ್ರೀ ಮಾರಿಕಾಂಬೆ" ಎನ್ನುವ ದೇವಾಲಯ ಹೊರತಂದಿರುವ ಕಿರು ಹೊತ್ತಿಗೆಯಲ್ಲಿ ಲಭ್ಯವಿದೆ..ಇದರ ಬೆಲೆ ಕೇವಲ ಹದಿನೈದು ರೂಪಾಯಿಗಳು ಆದರೆ ಕೊಡುವ ಮಾಹಿತಿ ಬೆಲೆ ಕಟ್ಟಲಾಗದ್ದು!

ದೇವಿಯಾ ವಿಗ್ರಹ ಅನುಪಮವಾಗಿದೆ...ಹೊತ್ತಿಗೆಯಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ.ದೇವಿಯಾ ಮೂರ್ತಿ ಮರದಿಂದ ಕೂಡಿದ್ದು ಅದು ಬಿಡಿಯಾಗಿ ಒಂದು ಪೆಟ್ಟಿಗೆಯಲ್ಲಿ ಕೆರೆಯಲ್ಲಿ ಸಿಕ್ಕಿತು..ಅದರ ವಿವರ ಹೊತ್ತಿಗೆಯಲ್ಲಿ ತುಂಬಾ ರಮಣೀಯವಾಗಿ ವಿವರಿಸಿದ್ದಾರೆ.

ಅಲ್ಲಿನ ಚಿತ್ರಗಳು ನಿಮಗಾಗಿ..ನಿಮ್ಮೆಲ್ಲರಿಗಾಗಿ...ಎಲ್ಲಿ ಮಾತೆಯೋ ಅಲ್ಲಿ ಪ್ರೀತಿ...ಅಪರೂಪದ ಯಜ್ಞ ಕುಂಡ 

ಗೋಡೆಯ ಮೇಲಿನ ಚಿತ್ರ...ಸೊಗಸು

ಬಲೆ..ಗೋಪುರದ ಕೆಳಗೆ ಬಲೆ..

ನರಸಿಂಹ-ಹಿರಣ್ಯಕಶಿಪು  ಕದನ ಮತ್ತು ಸಂಹಾರಶಕ್ತಿ..!!!

ಸೌಂದರ್ಯ!!!

ಲಾಲಿತ್ಯ!!!


ಧ್ಯಾನ ಮಾಡುತಿದ್ದಾಗ ದೇವಿ ಮಾರಿಕಾಂಬೆ ಕಿವಿಯ ಬಳಿ  ಪಿಸುಗುಟ್ಟಿದ ಅನುಭವವಾಯಿತು.."ಮಗೂ ..ನನ್ನ ಮೂರ್ತಿಯ ಆಗಮನ ಈ ಊರಿಗೆ ಸುಮಾರು ನಾನೂರು ವರುಷಗಳ ಹಿಂದೆ ಆಯಿತು..ಶಕ್ತಿ ದೇವತೆಯಾಗಿ ಇಲ್ಲಿ ನೆಲೆಸಿದ್ದೇನೆ...ನಮ್ಮ ಕರುನಾಡಿನ ಮೊದಲ ರಾಜ "ಕದಂಬ" ಚಕ್ರವರ್ತಿ ಮಯೂರ ವರ್ಮನ ಬನವಾಸಿಯನ್ನು ನೋಡುವುದಿಲ್ಲವೇ...ಅಲ್ಲಿನ ಚರಿತ್ರೆ ನಿನಗೆ ಬೇಡವೇ...ಅಲ್ಲಿನ ಚಿತ್ರ ತೆಗೆಯುದಿಲ್ಲವೇ..ಆ ಸ್ಥಳ ಸುಮಾರು 1800 ವರ್ಷಗಳ ಹಿಂದಿನ ಇತಿಹಾಸ ಹೇಳುತ್ತೆ.ಹೊರಡು ಮಗು ಬನವಾಸಿಯ ಕಡೆಗೆ ನಿನ್ನ ಪಯಣ.ಶುರುವಾಗಲಿ"

ಅರೆ ಇದೇನು ಮಯೂರ ಚಿತ್ರದ ಸಂಭಾಷಣೆಯಂತೆ ಇದೆಯಲ್ಲ ಎಂದು ಕಣ್ಣು ತೆಗೆದು ನೋಡಿದೆ..ಕೆಳಗಿನ ದೃಶ್ಯ ಕಣ್ಣ ಮುಂದೆ ಹಾಗೆ ಬಂದು ಹೋಯಿತು..ಮನಸ್ಸು ದೇಹ ಎರಡು ಬನವಾಸಿಯ ಇತಿಹಾಸ ಪ್ರಸಿದ್ಧ ಶ್ರೀ ಮಧುಕೇಶ್ವರನ ದೇವಸ್ಥಾನ ಮುಂದೆ ಮಂಡಿಯೂರಿ ನಿಂತಿತ್ತು..ಮೈ-ಮನ ಹಾಗೆ ಸಣ್ಣಗೆ ಕಂಪಿಸಿತು..ಎಂಥಹ ಭಾಗ್ಯ ನನ್ನದು ಕದಂಬ ಚಕ್ರವರ್ತಿ ನೆಡೆದಾಡಿದ್ದ ಭೂಮಿಯ ಸ್ಪರ್ಶ ನನಗೆ ಸಿಕ್ಕಿದ್ದು!!!

ದೇವಾಲಯದ ಶ್ರೀ ಮಧುಕೇಶ್ವರ ಜೇನು ತುಪ್ಪದ ಬಣ್ಣದ ಲಿಂಗ ರೂಪಿಯಾಗಿ ಮನಸೆಳೆಯುತ್ತಾನೆ..ದೇವಾಲಯದ ವಾಸ್ತು ಶಿಲ್ಪ ಕಣ್ಮನ ತುಂಬಿಸುತ್ತದೆ.ಇದನ್ನ ಪಟ್ಟಿ ಮಾಡುತ್ತಾ ಹೋದರೆ ಅದೇ ಒಂದು ಚರಿತ್ರೆಯಾಗುತ್ತದೆ.

ಸುಮಾರು ನಾಲ್ಕು ವಿವಿಧ ಹಂತಗಳಲ್ಲಿ ರಾಜಾರಾಳ್ವಿಕೆಯಲ್ಲಿ  ದೇವಸ್ಥಾನ ಅಭಿವೃದ್ಧಿ ಹೊಂದಿದೆ.
ಬನವಾಸಿ ದೇವಾಲಯ
ಮಧುಕೇಶ್ವರ ಲಿಂಗರೂಪ ಗಮನ ಸೆಳೆಯುತ್ತದೆ

ಈಶ್ವರನ ಎದುರು ಕಂಬಗಳ ಸಾಲಿನ ಮಧ್ಯೆ ಕುಳಿತಿರುವ ನಂದಿಯ ಮುಖ ಸ್ವಲ್ಪ ತಿರುಗಿರುವುದು ವಿಶೇಷ..
ಒಂದು ಕಣ್ಣಲ್ಲಿ ಈಶ್ವರನನ್ನು ಇನ್ನೊಂದು ಕಣ್ಣಲ್ಲಿ ಮಾತೆ ಪಾರ್ವತಿಯನ್ನು ನೋಡುತಿರುವಂತೆ ಭಾಸವಾಗುತ್ತದೆ
ಸುಂದರ ಕಲಾಕೃತಿ ಗರುಡ ಗಂಭ

ಶಿವ ಪಾರ್ವತಿಯನ್ನ ನೋಡುತ್ತಿರುವ ನಂದಿ

ಶಿವ ಪಾರ್ವತಿಯನ್ನ ನೋಡುತ್ತಿರುವ ನಂದಿ
ಕಲ್ಲು ಕಂಬಗಳ ಸಾಲು..ಮತ್ತು ಕಂಬಗಳಲ್ಲಿ ನಮ್ಮ ಬಿಂಬ ಎರಡು ಬಿಂಬಗಳು ಕಾಣುವುದು ವಿಶೇಷ.. ಕಂಬಗಳ ಕೆತ್ತನೆ ಉಬ್ಬುಕನ್ನಡಿ/ತಗ್ಗುಕನ್ನಡಿ ಮಾದರಿಯಲ್ಲಿ ಇರುವುದು ಇದಕ್ಕೆ ಕಾರಣ.

ಗರ್ಭ ಗೃಹದ ಹೊರಗೆ ಇರುವ ಕಲ್ಲು ಮಂಟಪ ಮನಸೆಳೆಯುತ್ತದೆ.ಮೂರು ಲೋಕಗಳನ್ನು ತೋರುವ (ಪಾತಾಳ, ಮಾನವಲೋಕ,  ದೇವಲೋಕ) ಕೆತ್ತನೆ ಸುಂದರವಾಗಿದೆ
ಸುಂದರ ಕಲ್ಲು ಮಂಟಪ..ಮೂರು ಲೋಕಗಳ ವೀಕ್ಷಣೆ..ಅದರ ಪಕ್ಕದ ಗೋಡೆಯಲ್ಲಿ ಕೆತ್ತಿರುವ ಕಡಲೆ ಹನುಮ,  ಕಬ್ಬಿನ ಹನುಮ ಗಮನ ಸೆಳೆಯುತ್ತದೆ

ದೇವಾಲಯದಿಂದ ಹೊರಗೆ ಬಂದರೆ ಸುತ್ತಲು ಅಷ್ಟ ದಿಕ್ಪಾಲಕರು, ಶಿವ ಲಿಂಗದ ವಿವಿಧ ರೂಪಗಳು, ಚಿಂತಾಮಣಿ ಗಣಪ, ಡುಂಡಿರಾಜ ಗಣಪ ಗಮನ ಸೆಳೆಯುತ್ತವೆ


ಒಂದೇ ಶಿಲ್ಪದಲ್ಲಿ ಎರಡು ಮೂರು ಪ್ರಾಣಿಗಳ ಕೆತ್ತನೆ ಸುಂದರ...


ಶಿಲ್ಪಿಯ ಕೈಚಳಕ ..ಒಂದೇ ಮೂರ್ತಿಯಲ್ಲಿ ಎರಡು ಪ್ರಾಣಿಗಳು


ಅರ್ಧ ಗಣಪತಿ ವಿಶೇಷ ಇಲ್ಲಿ..ಉಳಿದರ್ದ ಕಾಶಿಯಲ್ಲಿದೆ ಎಂದು ಹೇಳುತ್ತಾರೆಅರ್ಧ ಗಣಪತಿ

ಒಂದೇ ಕಲ್ಲಿನಲ್ಲಿ ಕಡೆದ /ಕೆತ್ತಿದ  ಮಂಟಪ  

ಒಂದೇ ಕಲ್ಲಿನಲ್ಲಿ ಕಡೆದ /ಕೆತ್ತಿದ  ಮಂಟಪ  

ಒಂದೇ ಕಲ್ಲಿನಲ್ಲಿ ಕಡೆದ /ಕೆತ್ತಿದ  ಮಂಟಪ  

ಒಂದೇ ಕಲ್ಲಿನಲ್ಲಿ ಕಡೆದ /ಕೆತ್ತಿದ  ಮಂಟಪ  
ಒಂದೇ ಕಲ್ಲಿನಲ್ಲಿ (ಬಂಡೆಯಲ್ಲಿ) ಕೆತ್ತಿದ ಕಲ್ಲಿನ ಮಂಟಪ ಸೊಗಸಾಗಿದೆ, ಕೆತ್ತನೆ, ಕುಸುರಿ ಕೆಲಸಗಳು ವಾಹ್  ಎನ್ನುವಂತೆ ಮಾಡುತ್ತದೆ. ಅಲಂಕರಿಸಲು ದೀಪಗಳನ್ನು ತೂಗು ಹಾಕಲು ವ್ಯವಸ್ಥೆ ಕೂಡ ಇದೆ.  ಶಿವರಾತ್ರಿಯಲ್ಲಿ ಇದರ ಅಲಂಕಾರ ಗಮನ ಸೆಳೆಯುತ್ತದೆ ಅಂದರು ಅಲ್ಲಿನ ಸ್ಥಳಿಯರು

ಮಾತಾ ಪಾರ್ವತಿಯ ದೇವಸ್ಥಾನ ಕೂಡ ಸೊಗಸಾಗಿದೆ..ಆ ದೇವಾಲಯದ ನಾಲ್ಕು ದಿಕ್ಕಿನಿಂದಲೂ ಹೊರಗೆ ಹೋಗಬಹುದು.  ಅದರ ಸುತ್ತಲು ಪ್ರತಿ ದಿಕ್ಕಿನ ಅಧಿಪಾಲಕರನ್ನು  ಚಿಕ್ಕ ಚಿಕ್ಕ ಗುಡಿಯಲ್ಲಿರುವುದು ಹಾಗು ಒಂದೇ ಸ್ಥಳದಲ್ಲಿ ಅಷ್ಟ ದಿಕ್ಪಾಲಕರು ಇರುವುದು ವಿಶೇಷ ಎಂದು ಹೇಳುತ್ತಾರೆ.

ಹೊರಗೆ ಎರಡು ರಥಗಳು ದೇವಸ್ಥಾನದ ರಾಜ ಬೀದಿಯನ್ನು  ನೋಡುತ್ತಾ ತನ್ನ ಅಲಂಕರಿಸಲು ಬರುವ ಘಳಿಗೆಗಳಿಗೆ ಕಾಯುತ್ತಿದೆ ಅನ್ನಿಸುತ್ತೆ...ಆ ರಥವನ್ನು ಅಲಂಕರಿಸುವ ವಿಧಾನ, ರಥವನ್ನು ಎಳೆಯಲು ಬಳಸುವ ಹಗ್ಗ ಎಲ್ಲವನ್ನು ತಿಳಿದಾಗ ರೋಮಾಂಚನದ ಅನುಭವ ನಮಗಾಯಿತು.


ಇನ್ನೇನು ಬನವಾಸಿಯಿಂದ ಹೊರಗೆ ಬರೋಣ ಅನ್ನುವಷ್ಟರಲ್ಲಿ ಅರ್ಚಕರು ಪ್ರಸಾದದ ವ್ಯವಸ್ಥೆ ಇದೆ ದಯವಿಟ್ಟು ಊಟ ಮಾಡಿಕೊಂಡು ಹೋಗಬೇಕು ಅಂದರು.. ಮೊದಲೇ ಹೊಟ್ಟೆ ಕಾದು  ಕಬ್ಬಿಣ ಆಗಿತ್ತು...ದಪ್ಪಕ್ಕಿ ಅನ್ನ , ತಿಳಿಯಾದ ತರಕಾರಿ ಭರಿತ ಸಾರು, ಉಪ್ಪಿನಕಾಯಿ, ಮಜ್ಜಿಗೆ ಎಲ್ಲವು ಆ ಬಿಸಿಲಿಗೆ ತಣ್ಣಗೆ ಹೊಟ್ಟೆಗೆ ಸೇರಿದವು..

ಬಿಸಿ ಬಿಸಿ ಊಟ ಮುಗಿಸಿ ವಾಹನದಲ್ಲಿ ಕೂತಾಗ ಹಾಗೆ ಕಣ್ಣ ಮುಂದೆ ಅಣ್ಣಾವ್ರ "ಮಯೂರ ಚಿತ್ರ, ಸಂಭಾಷಣೆ ಎಲ್ಲವು ಸುಳಿದಾಡುತಿದ್ದವು!!!

ಪಯಣಿಸಿದ ಮಾರ್ಗ..ಸಿರ್ಸಿ - ಮಾರಿಕಾಂಬ ದೇವಸ್ಥಾನ - ಬನವಾಸಿ
ಪಯಣಿಸಿದ ಮಾರ್ಗ

                                                                                                                                            (ಸಶೇಷ)