Thursday, January 31, 2019

ನವ ಮಾಸ.. ನವ ವರ್ಷ.. ನವಮಿ ಕುಮಾರಪರ್ವತ ಶಿರಸಾ ನಮಾಮಿ!!!

ರಾಜನೋ ರಾಣಿನೊ.. ಹೆಡ್ ಆರ್ ಟೈಲ್.. ಈ ರೀತಿಯ ಗೊಂದಲಗಳಿದ್ದಾಗ.. ತಲೆ ಕೆರೆದುಕೊಂಡೆ.. ಹುಲುಸಾಗಿ ಬೆಳೆದಿದ್ದ ತಲೆಗೂದಲ ಮಧ್ಯೆ ಒಂದು ಉಪಾಯ ಹೊಳೆಯಿತು.. 

ಪ್ರತಿ ಬಾರಿಯೂ ವಿಭಿನ್ನ ಅನುಭವ ಕೊಡುವ ಚಾರಣವೇ.. ಅಥವಾ ನೆನಪುಗಳ ಮಾಲೆ ಹೊತ್ತ ಪ್ರವಾಸವೇ.. ಬೇರೆ ಮಾತೆ ಇಲ್ಲ.. ಚರಣದಿಂದ ಚಾರಣಕ್ಕೆ ಎನ್ನುವ ಮಾತೆ ನಿಂತಿತು...

ಶಂಕರ್ ಗುರು ಚಿತ್ರದಲ್ಲಿ ಅಣ್ಣಾವ್ರಿಗೆ ಜೀವನದ ಒಂದು ಘಟನೆ ಬಹಳ ದುಃಖ ಕೊಡುತ್ತಿರುತ್ತದೆ.. ಅದಕ್ಕೆ ಸೇವಕನಿಗೆ ದುಡ್ಡು ಕೊಟ್ಟು ಚಾವಟಿಯಲ್ಲಿ ಹೊಡೆಸಿಕೊಂಡು ದೇಹ ದಂಡಿಸುತ್ತಾ ಇರುತ್ತಾರೆ.. ಆಗ ಹೇಳುವ ಮಾತು "ಆತ್ಮ ಶುದ್ಧಿಗಾಗಿ ಈ ದೇಹಕ್ಕೆ ಪ್ರಾಯಶ್ಚಿತ್ತ ಅನಿವಾರ್ಯ.." ಸೂಪರ್ ಮಾತುಗಳು ..  ಹೌದು.. ಗೊಂದಲದ ಬೀಡಾದಾಗ ಪ್ರಕೃತಿಯೇ ಮದ್ದು ಎನ್ನುತ್ತದೆ ನನ್ನ ಸರಳ ಜೀವನದ ಸೂತ್ರ..

ಶಿಖರದ ತುತ್ತ ತುದಿ.. ಅದುವೇ ಚಾರಣದ ಗಮ್ಮತ್ತು 
ಕುಮಾರಪರ್ವತ ಮತ್ತು ನನ್ನ  ನಡುವೆ ನೆಡೆದ ಮಾತುಕತೆಯೇ ಈ ಬರಹದ ತಿರುಳು.. 

"ಏನ್ಲಾ ಶ್ರೀ.. ಒಂದು ವರ್ಷದಿಂದ ಈ ಕಡೆ ತಲೆ ಹಾಕಿಯೇ ಇಲ್ಲ ಏನ್ ಕತೆ"

"ಇಲ್ಲ ಕಣೋ ಕೆಪಿ.. ಬರಬೇಕು ಬರಬೇಕು ಅಂತಲೇ ಇದ್ದೆ.. ಕೆಲಸ ಕೆಲಸ.. ಅದು ಇದು ಅಂತ ಮುಳುಗಿ  ಹೋಗಿದ್ದೆ.. ೨೦೧೮ ಪೂರಾ ಹಾಗೆ ಕಳೆಯಿತು.. ಹಗ್ಗದ ಮೇಲಿನ ಇರುವೆ ನೆಡಿಗೆ ನನ್ನದು.. ಹಾಗಾಗಿ ಬರಲಿಕ್ಕೆ ಆಗಲಿಲ್ಲ ಕಣೋ.. "

ಶ್ರಮ ಇರುವೆಯ ಹಾಗೆ ಇರಬೇಕು.. ಸದಾ ಪರಿಶ್ರಮ ಇರಲೇಬೇಕು.. !!!
                                                                                                                      ******

"ಮೊದಲಾದರೆ ಬರ್ತಾ ಇದ್ದೆ. .ಈಗ ನಿನಗೆ ಕೊಬ್ಬು ಹೆಚ್ಚಾಗಿದೆ.. "

"ಹೌದು.. ಎಲ್ಲರೂ ಅದೇ ಹೇಳ್ತಾ ಇದ್ದಾರೆ.. ಪ್ಯಾಂಟ್ ಸೈಜ್ ದೊಡ್ಡದಾಗಿದೆ.. ಕೊಬ್ಬು ಇಳಿಸಬೇಕು.." ಜೋರಾದ ನಗು

"ಸರಿ.. ಈ ಚಾರಣ ನಿನಗೆ ವಿಶಿಷ್ಟ.. ಸರಿ ನೀ ಹೇಳು.. ಆಮೇಲೆ ಕೂತು ಮಾತಾಡೋಣ"


"ಸರಿ ಗುರು"
                                                      ****************



ಒಂದು ಸಣ್ಣ ಕಿಡಿ ಸಾಕು.. ದೀಪ ಬೆಳಗೋಕೆ .. ಹಾಗೆ ನನ್ನ ನೆಚ್ಚಿನ ಕುಮಾರಪರ್ವತದ ಚಾರಣಕ್ಕೆ ಹೊರಡಬೇಕು ಎಂದಾಗ.. ನನ್ನ ಶಾಲಾ ದಿನಗಳಿಂದಲೂ ಜೊತೆಯಾಗಿರುವ ಶಶಿ ಮತ್ತು ವೆಂಕಿ.. ಮತ್ತು ವೆಂಕಿಯ "ಹೆಂಡತಿ" ಸೌಮ್ಯ ... ನನ್ನ ಮುದ್ದು ತಂಗಿ ರಶ್ಮಿ ಅಣ್ಣ ನಾನು ಅಂದಳು   .ಇನ್ನೊಬ್ಬ ತಮ್ಮ ಚಿದಾನಂದ ಶ್ರೀಕಾಂತಣ್ಣ ನಾನೂ.. ಎಂದರು.. .. ಅಕ್ಕನ ಮಗ ಆದಿತ್ಯ ಜೊತೆಯಾದ...ಅಲೆಮಾರಿಗಳು ತಂಡದ ಗಿರಿ, ಅವರ ಗೆಳೆಯ ವಿನೋದ್..  . ಪುಟ್ಟ ಮಗುವಾಗಿದ್ದಾಗಿಂದಲೂ ನೋಡಿರುವ ಪುಟ್ಟ ಪುಟ್ಟ ಮುದ್ದು ತಂಗಿ ವಿಭಾ..ಇವರೆಲ್ಲ ಜೊತೆಯಾದರು.. ಕಡೆ ಘಳಿಗೆಯಲ್ಲಿ ಜೊತೆಯಾದ ನನ್ನ ಬ್ಲಾಗ್ ಮತ್ತು ಚಾರಣದ ಗುರು ರೋಹಿತ್..

ಹನ್ನೊಂದು ಮಂದಿ ಸಾಕೆ ಅಂದಾಗ.. ಮಂಜಣ್ಣ ನಾನೂ ಇದ್ದೀನಿ ಅಂತ ಸೇರಿಕೊಂಡಿದ್ದು ಗೆಳೆಯ ಕಿರಣ್ ವಟಿ ಮತ್ತು ಚಿಕ್ಕಪ್ಪ ಚಿಕ್ಕಪ್ಪ ಎನ್ನುತ್ತಾ ಸುತ್ತಲೇ ಸುತ್ತುತ್ತಿದ್ದ ಮುದ್ದು ಮಗು "ಸಿರಿ".. ಹದಿಮೂರು ವಾಹ್.. ಸೂಪರ್ ತಂಡ ಎನಿಸಿತು..

ಸುವರ್ಣ ಸಾರಿಗೆ ಪಯಣ ಅಯ್ಯೋ ಎನಿಸಬಹುದು .. ಆದರೆ ಆ ಗೌಜು, ಗದ್ದಲಗಳ ನಡುವೆ.. ಎಲ್ಲ ಕಡೆಯಿಂದಲೂ ಸದ್ದು ಮಾಡುವ ಬಸ್, ಗಾಳಿ ಬರ್ ಎನ್ನುತ್ತಾ ನುಗ್ಗುವ ಆ ಡಬ್ಬದ ಪಯಣ ಹೇಳಿದರೆ ಸಾಲದು ಅನುಭವಿಸಬೇಕು.. 

ಮೈಸೂರು ನಿಯೋ ಹೋಟೆಲಿನಲ್ಲಿ ಹೊಟ್ಟೆಗೆ ಸೇರುವಷ್ಟು ತಿಂಡಿ ತಿಂದು.. ಹೆಜ್ಜೆ ಹಾಕಿದಾಗ ಕುಮಾರಪರ್ವತ.. ನನ್ನ ನೆಚ್ಚಿನ ಕುಮಾರಪರ್ವತ ನನ್ನ ಹತ್ತಿರಕ್ಕೆ ಬರುತ್ತಿತ್ತು.. 

ತುಂಬು ಸಂತಸದಿಂದ ಹೊರಟ ತಂಡ. .
ಚಿತ್ರಕೃಪೆ - ಸೌಮ್ಯ ವೆಂಕಿ..
ಚಿತ್ರಿಸಿದ್ದು ರೋಹಿತ್ 

ಚಾರಣದ ಆರಂಭದ ಬಾಗಿಲಿನಲ್ಲಿ ಒಂದು ಸೆಲ್ಫಿ ಹೊಡೆದು.. ಹೊರಟೆವು.. ಗಿರಿ, ರೋಹಿತ್ ಮತ್ತು ವಿನೋದ್ ಹೆಜ್ಜೆ ಹಾಕುತ್ತಾ ಎಲ್ಲರಿಗಿಂತ ಮುಂದಕ್ಕೆ ಹೋದರು.. ಅವರ ಹಿಂದೆ ವೆಂಕಿ, ಸೌಮ್ಯ, ಶಶಿ, ವಿಭಾ, ಆದಿತ್ಯ, ಚಿದು ಹಿಂಬಾಲಿಸಿದರು.. ಕುಮಾರಪರ್ವತ ನನಗೆ ಹೊಸದಲ್ಲ.. ಹಾಗಾಗಿ ಧಾರಾಳಾವಾಗಿ ಮಾತಾಡುತ್ತ ನಾನು, ರಶ್ಮಿ, ಕಿರಣ್ ಮತ್ತು ಸಿರಿ ಹೆಜ್ಜೆ ಹಾಕಿದೆವು.. ಸಮಗ್ರ ಮಾತುಗಳು ನೆಡೆಯುತ್ತಲೇ ಇತ್ತು.. ಒಂದಾದ ಮೇಲೆ ಒಂದು ವಿಷಯ.. ಅಕ್ಷಯಪಾತ್ರೆಯಾಗಿತ್ತು. 

ಮಿಕ್ಕವರು ಮುಂದಕ್ಕೆ ಹೆಜ್ಜೆ ಹಾಕಿದ್ದರಿಂದ.. ನಮಗೆ ಅಂಕೆ ಶಂಕೆ ಯಾವುದೂ ಇರಲಿಲ್ಲ.. ಹಾಯಾಗಿ ಭೀಮನಕಲ್ಲಿನ ಹತ್ತಿರ ಸಿಗುವ ಝರಿಯಲ್ಲಿ ಒಂದಷ್ಟು ಹೊತ್ತು ಕಾಲ ಕಳೆದೆವು.. ಫೋಟೋಗಳು .. ಮಾತುಗಳು ಒಂದರ್ಧ ಘಂಟೆಯನ್ನು ನುಂಗಿ ನೀರು ಕುಡಿದವು. 

ಭಟ್ಟರ ಮನೆಗೆ ಬರುವಷ್ಟರಲ್ಲಿ "ಮರಿ ಅವರೆಲ್ಲ ಊಟ ಮಾಡ್ತಾ ಇದ್ದಾರೆ.. ಬೇಗ ಊಟ ಮಾಡಿ ಫಾರೆಸ್ಟ್ ಆಫೀಸ್ ಹತ್ರ ಬಾ.. ಟಿಕೆಟ್ ತಗೊಂಡಿರ್ತೀನಿ" ಅಂದ ರೋಹಿತ್.. ಸರ ಸರ ಊಟ ಮಾಡಿ ಹೊರಟೆವು.. 

"ಎಲ್ರಿ ನಿಮ್ಮ ಬ್ಯಾಗ್ ತೋರಿಸಿ.. ಊಟ ತಿಂಡಿ ನೀರು ಬಿಟ್ಟು ಬೇರೆ ಏನೂ ತೆಗೆದುಕೊಂಡು ಹೋಗುವ ಹಾಗಿಲ್ಲ.. " ಎನ್ನುತ್ತಾ ಅರಣ್ಯ ಸಿಬ್ಬಂಧಿಗಳು ತಪಾಸಣೆ ನೆಡೆಸಿ.. ಹೆಸರುಗಳನ್ನೆಲ್ಲ ಬರೆದುಕೊಂಡು.. ತಲೆಗೆ ೩೫೦ ರೂಪಾಯಿಗಳನ್ನು ಹಾಗೂ ಸೆಕ್ಯೂರಿಟಿ ಡೆಪಾಸಿಟ್ ಅಂತ ೧೦೦೦ ರೂಪಾಯಿಗಳನ್ನು ತೆಗೆದುಕೊಂಡರು.. ಲೆಕ್ಕ ಹಾಕಿ ನೋಡಿದ್ದ ಪ್ಲಾಸ್ಟಿಕ್ ಬಾಟಲುಗಳನ್ನು ಮತ್ತು ಸಂಜೆ ಆರು ಘಂಟೆಯೊಳಗೆ ಬರದಿದ್ದರೆ ೧೦೦೦ ರೂಪಾಯಿಗಳಿಗೆ ಮೇಲುಕೋಟೆ ನಾಮವೇ ಗಟ್ಟಿ ಎಂದು ಹೇಳಿದ್ದರು.. 
ಅಲೆಮಾರಿಗಳ ಚಾರಣ 

ರೋಹಿತ್, ವಿನೋದ್ ಮತ್ತು ಗಿರಿ ದೌಡಾಯಿಸಿದರು.. ಅವರ ಹಿಂದೆ ಮಿಕ್ಕವರು. .ನಾನು ಮತ್ತು ರಶ್ಮಿ ಮೆಲ್ಲನೆ ಹೆಜ್ಜೆ ಹಾಕುತ್ತಾ.. ಒಂದು ಹಂತಕ್ಕೆ ಬಂದು.. ಮುಂದೆ ಹೋಗಲು ಇಷ್ಟವಾಗದೇ (ಅಥವಾ ತ್ರಾಣವಿಲ್ಲದೆ) ಅಲ್ಲಿಯೇ ತಣ್ಣಗೆ ಕೂತು ಮಾತಾಡುತ್ತಾ ಕುಳಿತೆವು.. ನನ್ನ ಇಷ್ಟವಾದ ಜಾಗವದು.. ಬಿಸಿಲು ಕಾಯುವಷ್ಟು ಇರಲಿಲ್ಲವಾದರೂ ಸುಡುತ್ತಿತ್ತು.. ಹಾಗೆ ಹುಲ್ಲುಗಾವಲಿನಲ್ಲಿ ತಣ್ಣಗೆ ಮಲಗಿ ಒಂದು ನಿದ್ದೆ ತೆಗೆದೆ.. ರಶ್ಮಿ ಕೂಡ ಸ್ವಲ್ಪ ಹೊತ್ತು ನಿದ್ದೆ ಮಾಡಿ.. ತನ್ನ ಬಾಯಿಗೆ ವ್ಯಾಯಾಮ ಮಾಡಿಸಲು ಚಾರಣಕ್ಕೆ ಬಂದಿದ್ದ ಒಬ್ಬರ ಹತ್ತಿರ ಮಾತಾಡುತ್ತ ಕುಳಿತಿದ್ದಳು.. 

ನನಗೆ ಎಚ್ಚರವಾದ ಮೇಲೆ ತಂದಿದ್ದ ಚಪಾತಿಯನ್ನು ಇಬ್ಬರೂ ಹೊಟ್ಟೆ ತುಂಬುವಷ್ಟು ತಿಂದೆವು..   

ಅಷ್ಟರಲ್ಲಿ ನಮ್ಮ ಒಂದು ತಂಡ ಬಂದಿತು.. ಶೇಷಪರ್ವತದ ತಪ್ಪಲಿಗೆ ಹೋಗಿ.. ವಾಪಾಸ್ ಬಂದಿದ್ದರು.. ಮಾತುಕತೆ.. ಚಪಾತಿ.. ತಂದಿದ್ದ ತಿಂಡಿ.. ಮತ್ತಷ್ಟು ಫೋಟೋಗಳು.. ನಂತರ ಮೆಲ್ಲಗೆ ನೆಡೆಯುತ್ತಾ ಭಟ್ಟರ ಮನೆ ಕಡೆ ಹೆಜ್ಜೆ ಇಟ್ಟೆವು.. 
ಒಂದು ತಂಡ.. ಸಂತಸದಲ್ಲಿ 

ವೀಕ್ಷಣಾ ತಾಣದ ಬಳಿ ಮತ್ತೆ ಒಂದಷ್ಟು ಮಾತುಕತೆ.. ವಿನೋದ್, ರೋಹಿತ್ ಮತ್ತು ಗಿರಿ ಸುಳಿವಿರಲಿಲ್ಲ.. ಕತ್ತಲಾಗುತ್ತೆ ಅಂತ.. ನಾವೆಲ್ಲರೂ ಅರಣ್ಯ ಇಲಾಖೆ ಹತ್ತಿರ ಬಂದೆವು.. ಅಲ್ಲಿಯೂ ಕಾದರೂ ಉಪಯೋಗವಿಲ್ಲ.. ಅಲ್ಲಿದ್ದ ಸಿಬ್ಬಂದಿಗಳು ನಿಮ್ಮ ಬ್ಯಾಗ್ ತಗೊಂಡು ಹೊರಡಿ ಬಂದವರನ್ನು ನಾವು ಕಳಿಸುತ್ತೇವೆ.. ಎಂದು ನಮ್ಮನ್ನು ಸಾಗು ಹಾಕಿದರು.. 

ಕತ್ತಲಾಗಿತ್ತು .. ಭಟ್ಟರ ಮನೆ ಅಕ್ಷರಶಃ ಸಂತೆಯಾಗಿತ್ತು.. ಏನಿಲ್ಲವೆಂದರೂ ೩೦೦ ಮಂದಿಗೂ ಹೆಚ್ಚು.. ಆದರೆ ಅಲ್ಲಿ ಕಂಡ ಶಿಸ್ತು ಇಷ್ಟವಾಯಿತು.. ತಟ್ಟೆ ತೊಳೆದುಕೊಂಡು ಬರೋಕೆ ಸರತಿ ಸಾಲು,ಅನ್ನ ಸಾರು ಹಾಕಿಕೊಳ್ಳೋಕೆ ಸರತಿ ಸಾಲು.. ಮತ್ತೆ ತಟ್ಟೆ ತೊಳೆಯೋಕೆ ಸಾಲು.. ಇಷ್ಟವಾಯಿತು.. ಸರ್ ನಿಮ್ಮ ಊಟ ಆಯ್ತಾ.. ಆಗಿದ್ದರೆ ತಟ್ಟೆ ಕೊಡಿ ಸರ್.. ಅಂತ ಕೇಳುವವರು ಒಬ್ಬರಾದರೆ ..ಊಟ ಮುಗಿಯುವ  ಲಕ್ಷಣ ಕಂಡ ಕೂಡಲೇ.. ನಮ್ಮ ಹಿಂದೆ ಮುಂದೆ ಸುತ್ತಿ.. ತಟ್ಟೆ ತೊಳೆದಮೇಲೆ ನಮ್ಮ ಕೈಯಿಂದ ಅದನ್ನು ತೆಗೆದುಕೊಂಡು ಹೋಗುವವರು ಒಬ್ಬರಾದರೆ.. ಕೊಡಿ ಸರ್ ನಾನೇ ತೊಳೆದುಕೊಳ್ಳುತ್ತೇನೆ ಎನ್ನುವವರು ಇದ್ದರು.. ಇಬ್ಬರೂ ಮೂವರು ಒಂದೇ ತಟ್ಟೆಯಲ್ಲಿಯೇ ಊಟ ಮಾಡುತ್ತಿದ್ದದ್ದು ಕಂಡು ಬಂದಿತ್ತು.. ಹೊಟ್ಟೆ ಹಸಿವು ಮನುಜನನ್ನ ರಾಕ್ಷಸನ್ನಾಗಿ ಮಾಡುವುದು ನೋಡಿದ್ದೇ.. ಆದರೆ ಇಲ್ಲಿ ಮಾನವೀಯತೆಯೂ ಕಾಣುತ್ತಿತ್ತು... 

ಇಷ್ಟೆಲ್ಲಾ ಆಗುವ ಹೊತ್ತಿಗೆ ರೋಹಿತ್, ಗಿರಿ ಮತ್ತು ವಿನೋದ್ ಬಂದರು.. ಕುಮಾರಪರ್ವತದ ತುತ್ತ ತುದಿಯನ್ನು ತಲುಪಿದ ಖುಷಿ ಮತ್ತು ತೃಪ್ತಿ ಅವರ ಮೊಗದಲ್ಲಿ ಕಾಣುತ್ತಿತ್ತು.. !

ಶಿಖರವೇರಿದ ಸಂತಸದಲ್ಲಿ ತ್ರಿಮೂರ್ತಿಗಳು 



ಮರಿ ಗಿರಿ ವಿನೋದ 
ವಿಭಾ,ರಶ್ಮಿ, ಸೌಮ್ಯ ಮತ್ತು ಸೌಮ್ಯ ಅವರ ಪತಿರಾಯ ವೆಂಕಿಯನ್ನು ಒಂದು ಟೆಂಟ್ ಒಳಗೆ ಮಲಗೋಕೆ ಹೇಳಿದೆವು.. ಆದಿತ್ಯ, ರೋಹಿತ್ ಮತ್ತು ಗಿರಿ ಇನ್ನೊಂದು ಟೆಂಟ್.. ವಿನೋದ್, ನಾನು, ಚಿದು ಮತ್ತು ಶಶಿ ಮಲಗುವಚೀಲದೊಳಗೆ ಜಾರಿಕೊಂಡು ಮುಂದಿನ ದಿನಕ್ಕೆ ಅಣಿಯಾಗಲು ಮಲಗಿದೆವು.. 
ಉಳಿದಿದ್ದು ಇಲ್ಲಿ ಶ್ರೀ 


ಬೆಳಗಾದಾಗ 


ಶ್ರೀ ಇಲ್ಲಿ ಕೂಕ್ ಎಂದ ಮರಿ 
ಬೆಳಿಗ್ಗೆ ತುಸು ಬೇಗ ಎದ್ದು.. ನಾನು ಒಂದು ಪುಟ್ಟ ವಾಕಿಂಗ್ ಹೋಗಿದ್ದೆ.. ಒಂದಷ್ಟು ಫೋಟೋ ಸಿಕ್ಕಿದವು.. ಒಬ್ಬೊಬ್ಬರೇ ನಿತ್ಯ ಕರ್ಮಗಳನ್ನು ಮುಗಿಸಿ.. ತಿಂಡಿ ತಿಂದು.. ಟೆಂಟ್ ಮಡಿಸಿ.. ಭಟ್ಟರಿಗೆ ನಮಸ್ಕಾರ ತಿಳಿಸಿ ಕುಕ್ಕೆಗೆ ಇಳಿಯೋಕೆ ಶುರುಮಾಡಿದೆವು.. 
ಚಾರಣದ ತಂಡ ಅನ್ನದಾತರ ಜೊತೆಯಲ್ಲಿ 

ಗಿರಿ ತುರ್ತು ಪರಿಸ್ಥಿತಿ ಇದ್ದದರಿಂದ ಬೇಗ ಬೇಗ ಇಳಿದು ಹೋದ.. ಅವನ ಹಿಂದೆ ವಿನೋದ್ ಇಳಿದು ಹೋದರು.. ಮಿಕ್ಕವರು ತಮ್ಮ ತಮ್ಮ ಸಮಯ ತೆಗೆದುಕೊಂಡು ಕೆಳಗೆ ಇಳಿದಾಗ ಉಸ್ಸಪ್ಪ ಎನ್ನುವ ನಿಟ್ಟುಸಿರು ಒಂದು ಕಡೆ.. ಇನ್ನೊಂದು ಕಡೆ ಅಮೋಘ ಸಮಯ ಕಳೆದ ಖುಷಿ.. 

ಸ್ನಾನಾದಿಗಳಿಗೋಸ್ಕರ ಒಂದು ಪುಟ್ಟ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು..ಸರ ಸರ ಎಲ್ಲರೂ ಸಿದ್ಧವಾದರು.. ಅಷ್ಟರಲ್ಲಿ ಕಿರಣ್ ಮತ್ತು ಸಿರಿ ಜೊತೆಯಾದರು... ಒಂದು ಅರ್ಧ ಘಂಟೆ.. ದೇವಸ್ಥಾನದ ಬಾಗಿಲಲ್ಲಿ ಇದ್ದೆವು.. 

ಸುಬ್ರಮಣ್ಯ ಸ್ವಾಮಿಯ ಮತ್ತು ಆದಿ ಸುಬ್ರಮಣ್ಯ ಸ್ವಾಮಿಯ ದರ್ಶನ.. ಹೋಟೆಲಿನಲ್ಲಿ ಕಾಫಿ, ಬೋಂಡಾ, ಮಸಾಲೆ ಪುರಿ.. ಗಡ್ ಬಡ್ ಐಸ್ಕ್ರೀಮ್.. ದೇವಸ್ಥಾನದ ಊಟ. ಆಹಾ.. ಭಾನುವಾರ ಸಂಜೆ ಸಕತ್ತಾಗಿಯೇ ಕಳೆಯಿತು.. 
ನಾವು ಒಂದು.ಒಂದು . ಹನ್ನೊಂದು 
ಬಸ್ ನಿಲ್ದಾಣಕ್ಕೆ ಹೊರಡುವಾಗ ಕಿರಣ್ ಮತ್ತು ಸಿರಿಗೆ ಬೈ ಹೇಳಿ.. ಬಸ್ಸಿನಲ್ಲಿ ಕೂತಾಗ ಸುಂದರವಾದ ೪೮ ಘಂಟೆಗಳನ್ನು ಕಳೆದ ಸಂತೃಪಿ ಎಲ್ಲರ ಮೊಗದಲ್ಲಿ.. !!!

****

"ಕೆಪಿ ತಮಾಷೆ ಗೊತ್ತಾ .. ಅಲೆಮಾರಿಗಳ, ಚಡ್ಡಿ ದೋಸ್ತುಗಳ,  ಮತ್ತು ಮಮಕಾರ ಹೊತ್ತ ಅಣ್ಣ ತಂಗಿ ತಮ್ಮಂದಿರ ಮತ್ತು ಬಂಧಗಳ ಸೊಗಸಾದ ಸಂಗಮವಾಗಿತ್ತು ಕಣೋ ... "



ಬೆಂದು ಪಕ್ವವಾದಗಲೇ  ಚಾರಣ ಸುಖ ಅನ್ನಿಸೋದು 


"ಹೌದು ಶ್ರೀ .. ಇದೊಂತರಹ ಮಜಾ ಇತ್ತು... ಸ್ಫೂರ್ತಿ ಇದ್ದ ಕೆಲವರು.. ದೈಹಿಕ ಶಕ್ತಿ ಇದ್ದ ಕೆಲವರು... ಮನೋಧೈರ್ಯ ಇದ್ದವರು ಕೆಲವರು.. ಕಲ್ಲು ಬಂಡೆಯನ್ನು ಅಲುಗಾಡಿಸುವ ಮಾತಿನ ಛಾತಿ ಇದ್ದವರು.. .ತಣ್ಣಗೆ ಇದ್ದುಕೊಂಡೇ ಧಮ್ ಎನ್ನಿಸುವ ಒನ್ ಲೈನರ್ ಹೇಳುವ, ಎಲ್ಲರೂ ಅಪವಾದ ಹೇರಿದರೂ ನಗು ನಗುತ್ತಾ ಹೆಜ್ಜೆ ಹಾಕುವ.. ಪತಿಯೊಡನಿದ್ದರೆ ನಾನು ಒಬ್ಬ ಸಿಪಾಯಿ ಎನ್ನುವವರು ಹೀಗೆ ಒಂದು ಅದ್ಭುತ ಸದಸ್ಯರ ತಂಡವಾಗಿತ್ತು.. ಆದರೂ... "

ಸೂರ್ಯ ಅಸ್ತಮಿಸುತ್ತಿಲ್ಲ.. ಬದಲಿಗೆ ನಾ ಮತ್ತೆ ಬರುತ್ತೀನಿ ಎನ್ನುತ್ತಿದ್ದಾನೆ 
"ಏನಪ್ಪಾ ಆದರೂ.. ಗೊತ್ತು ಬಿಡು.. ನಾನು ಶಿಖರ ತಲುಪಬೇಕಿತ್ತು ಅಂತ ತಾನೇ.. ಆಗಲೇ ಹೇಳಿದ್ದೆನಲ್ಲ.. ನಾನು ಮಾನಸಿಕವಾಗಿ ಸಿದ್ಧವಾಗಿ ಬಂದಿದ್ದೆ.. ಎಲ್ಲಿ ತನಕ ಆಗತ್ತೋ ಅಲ್ಲಿ ತನಕ ಅಂತ.. ಸಾಕು ಎನಿಸಿತು.. ಜೊತೆಯಲ್ಲಿ ತಂಗಿಯನ್ನು ಒಬ್ಬಳೇ ಬಿಟ್ಟು ಬರುವುದು ಹೇಗೆ.. ಅವಳೇನೋ ಕಲ್ಲನ್ನು ಮಾತಾಡಿಸಿ ಬರುತ್ತಾಳೆ.. ಆದರೆ ನನ್ನ ಜೊತೆ ಕಳಿಸಿದ ಮೇಲೆ.. ನನ್ನ ಜವಾಬ್ಧಾರಿ ಅಲ್ಲವೇ.. 
ಎಲ್ಲರೂ ಕುಮಾರಪರ್ವತದ ತುತ್ತ ತುದಿ ತಲುಪಿದ್ದರೇ ಸೊಗಸಾಗಿತ್ತು.. ಇರಲಿ ಬಿಡು..  ಮತ್ತೊಮ್ಮೆ ನಿನ್ನ ಮಡಿಲಿಗೆ ಬರುತ್ತೇನೆ.. "
ನಿನಗಾಗಿ ಹೀಗೆ ಕಾಯುತ್ತಿರುವೆ ಎಂದ ಕೆಪಿ.. !!!

"ಶ್ರೀ ನಾನೂ ನಿನಗೆ ಕಾಯುತ್ತೇನೆ.. ಇನ್ನೊಂದು ಸುಂದರ ತಂಡವನ್ನು ಎದುರು ನೋಡುತ್ತಾ.. "

"ಬೈ ಕೆಪಿ ಸಿಗೋಣ ಮತ್ತೆ ಅಕ್ಟೋಬರ್ ಮಾಸದಲ್ಲಿ.. "

ಮೈಕೈ ತೊಳೆದು ಸಜ್ಜಾಗಲು ನಿಂತ ಕೆಪಿ 

ಕೆಪಿ ಒಮ್ಮೆ ಹಲ್ಲು ಬಿಟ್ಟು ಆಕಳಿಸಿತು. ತನ್ನ ಮೈಯಲ್ಲಿ ಪ್ಲಾಸ್ಟಿಕ್ ಕಸಗಳು ಕಡಿಮೆಯಾದ ಖುಷಿಯಲ್ಲಿ.. ಮಳೆಗಾಲದ  ಕಾಲವನ್ನು ಎದುರು ನೋಡುತ್ತಾ ಮತ್ತೆ ಮೈತೊಳೆದುಕೊಂಡು ಮತ್ತೆ ಹಸಿರಾಗಲು ಕೆಪಿ ಕಾಯುತ್ತಿತ್ತು.. ಆ ಹಸಿರಾದ ನೆನಪನ್ನು ಹೊತ್ತು ನಾವು ಮಾಯಾನಗರಿಯ ಕಡೆಗೆ ಪಯಣ ಬೆಳೆಸಿದೆವು.. ಮತ್ತೊಮ್ಮೆ ಅಕ್ಟೋಬರ್.. ಮತ್ತೊಮ್ಮೆ ಕೆಪಿ.. !!!

No comments:

Post a Comment