Sunday, October 21, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೩


ಅಣ್ಣಾವ್ರ ಭಕ್ತ ಕುಂಬಾರದ ಒಂದು ದೃಶ್ಯ..

ಕುಂಬಾರ ಸಣ್ಣ "ಬಡಿಗೆ"ಯಿಂದ ಸಂತ ನಾಮದೇವರ ತಲೆಗೆ ಟಕ್  ಅಂತ ಬಡಿದು...ಸಂತ ಜ್ಞಾನದೇವರ ಕಡೆಗೆ ತಿರುಗಿ

"ಅಲ್ಪನಿಂದ ದೊಡ್ಡ ಮಾತು...ಸ್ವಾಮೀ ಇದು ಅರ್ಧ ಬೆಂದ ಮಡಿಕೆ" ಎನ್ನುತ್ತಾನೆ..

ಕೋಪಗೊಂಡ ನಾಮದೇವ ಅಲ್ಲಿಂದ ಹೊರಟು ತಕ್ಕ ಗುರುವಿನಾಶ್ರಯ ಹುಡುಕಾಟದಲ್ಲಿ  ತಿರುಗಿ ತಿರುಗಿ ಒಂದು ದೇವಸ್ಥಾನಕ್ಕೆ ಬಂದಾಗ....ಅಲ್ಲಿ ಶಿವಲಿಂಗದ ಮೇಲೆ ತನ್ನ ಕಾಲು ಇಟ್ಟುಕೊಂಡು ಯೋಗ ನಿದ್ರೆಯಲ್ಲಿರುವ ಒಬ್ಬ ವೃದ್ಧನನ್ನ ನೋಡುತ್ತಾನೆ.

ಕೋಪಗೊಂಡು ಬಯ್ಯುತ್ತಾನೆ...

ಆ ವಯೋವೃದ್ಧ.."ಶಿವನಿಲ್ಲದ ಜಾಗದಲ್ಲಿ ನನ್ನ ಕಾಲನ್ನು ಇಡು ..ನಿಶ್ಯಕ್ತಿಯಿಂದ ನನಗೆ ಎತ್ತಿಡಲು ಆಗುತ್ತಿಲ್ಲ" ..ಎಂದಾಗ

ನಾಮದೇವ..ಅದೇನು ಮಹಾ ಎಂದು..ಕಾಲನ್ನು ಶಿವನಿಲ್ಲದ ಸ್ಥಳದಲ್ಲಿ ಇಡಲು ಮುಂದಾಗುತ್ತಾನೆ..

ಆ ವೃದ್ಧರ ಕಾಲನ್ನು ಎಲ್ಲಿ ಇಟ್ಟರೂ  ಅಲ್ಲಿ ಒಂದು ಶಿವಲಿಂಗವಿರುತ್ತದೆ..ಆಗ ನಾಮದೇವನಿಗೆ ಜ್ಞಾನೋದಯವಾಗಿ
"ಅಯ್ಯೋ ನನ್ನ ಅಜ್ಞಾನವೇ.ಶಿವನಿಲ್ಲದ ಸ್ಥಳ ಇರುವುದೇ...ಆ ಜಾಗವೇ ನನ್ನ ತಲೆ.. ನನ್ನ ಅಂಧಕಾರಕ್ಕೆ ಧಿಕ್ಕಾರವಿರಲಿ" ಎಂದು ಗೋಳಿಡುತ್ತಾನೆ...ನಂತರ ಆ ಗುರುವಿನ ಕಾಲನ್ನು ತನ್ನ ತಲೆಯ ಮೇಲೆ ಇಟ್ಟುಕೊಳ್ಳುತ್ತಾನೆ.

"ರೀ ಈ ಶ್ರೀಕಾಂತ್ ಮಂಜುನಾಥ್ ಬರಿ ತಲೆ ಹರಟೆ ಕಣ್ರೀ..ಪ್ರವಾಸ ಕಥನ ಬರಿ ಅಂದ್ರೆ ಬರಿ ತಲೆ ಹರಟೆ ಮಾಡ್ತಾನೆ.ಏನು ನಾವೆಲ್ಲಾ ಸಿನಿಮಾ ನೋಡೋಲ್ವೆ ..ನಮಗೆ ಅಣ್ಣಾವ್ರ ಮೇಲೆ ಅಭಿಮಾನ ಇಲ್ಲವೇ..ಇನ್ನು ಇವನ ಬ್ಲಾಗನ್ನು ಬರಿ ಕಡೆ ಕೆಲವು ಸಾಲುಗಳನ್ನ ಮಾತ್ರ ನೋಡ್ಬೇಕು..ಮತ್ತು ಚಿತ್ರಗಳನ್ನು ಮಾತ್ರ ನೋಡಬೇಕು ....ಶುದ್ಧ ತಲೆಹರಟೆ ಬ್ಲಾಗಿದು" ಎಂದು ಕೊಳ್ಳಬೇಡಿ
(ಪ್ಲೀಸ್ ಪ್ಲೀಸ್...ಕೆಲವು ಸಿನಿಮಾಗಳು ಒಂದು ರೀತಿ ನನ್ನ ಜೀವನವನ್ನು ತುಂಬಾ ಬದಲಾಯಿಸಿದೆ :-) ಹಾಗಾಗಿ ಪ್ರತಿಯೊಂದು ಸಿನಿಮಾ ಧಾಟಿಯಲ್ಲೇ ಬರುತ್ತದೆ)

ಶ್ರೀ ಸಹಸ್ರ ಲಿಂಗ ಕ್ಷೇತ್ರಕ್ಕೆ ಕಾಲಿಟ್ಟಾಗ ನನಗೆ ಹೊಳೆದ ದೃಶ್ಯ ಇದು...
ನಮ್ಮ ಪ್ರಯಾಣದ ನಕಾಶೆ
ಬನವಾಸಿಯಲ್ಲಿ ಬಿಸಿ ಬಿಸಿ ಊಟ ಮಾಡಿ..ಶ್ರೀ ಸಹಸ್ರ ಲಿಂಗದ ಕ್ಷೇತ್ರಕ್ಕೆ ಕಾಲಿಟ್ಟೆವು..

ಶ್ರೀ ಸಹಸ್ರ ಲಿಂಗ ಕ್ಷೇತ್ರಕ್ಕೆ ಸ್ವಾಗತ ಫಲಕ!
ಬಯಲಲ್ಲಿರುವ ಕೈಲಾಸ ಎನ್ನಬಹುದು..ಸಂತ ನಾಮದೇವ ಇಲ್ಲಿಗೆ ಬಂದಿದ್ದರೇ ಇನ್ನಷ್ಟು ಗೊಂದಲಕ್ಕೆ ಒಳಗಾಗುತಿದ್ದದು ಸುಳ್ಳಲ್ಲ ..ಎಲ್ಲಿ ನೋಡಿದರೆ ಎಲ್ಲಿ ಕಣ್ಣ ಬಿಟ್ಟ ಕಡೆ, ಕಣ್ಣ ಮುಚ್ಚಿದೆಡೆ ಶಿವಮಯ..ನಂದಿಮಯ...


ಸೋಂದೆ ಅರಸರಿಗೆ ಮಕ್ಕಳಾಗದೆ ಇದ್ದಾಗ.ಕೆಲ ಋಷಿಮುನಿಗಳ ಸಲಹೆಯಂತೆ ಈ ಶಾಲ್ಮಲಾ ನದಿಯಲ್ಲಿ ಹಲವಾರು (ಸಹಸ್ರ) ಲಿಂಗಗಳನ್ನು ನಿರ್ಮಿಸಿ..ಪೂಜಿಸಿದ ಮೇಲೆ ಮಕ್ಕಳಾಯಿತು ಎಂದು ಗೋಡೆಯ ಮೇಲೆ ಬರೆದ ಒಂದು ಬರಹ ಸಾರುತ್ತದೆ..
ಕಾರಣ ಏನೇ ಇದ್ದರು ಇದು ಬಯಲು ಶಿವನ ಸಂಗ್ರಹಾಲಯ ಎಂದು ಹೇಳುವುದರಲ್ಲಿ ಅಡ್ಡಿಯಿಲ್ಲ.

ಸ್ಥಳ ಪುರಾಣ...ಅಂಗ್ಲ ಬಾಷೆಯಲ್ಲಿ.!!!
(ಶಿವಮೊಗ್ಗದ ಬಳಿ ಗಾಜನೂರು ಅಣೆಕಟ್ಟಿಗೆ ಹೋಗುವ ಮಾರ್ಗದಲ್ಲಿ ಹರನಕೆರೆ ಎನ್ನುವ ಜಾಗದಲ್ಲಿಯು ಇಂತಹ ಒಂದು ಕೌತುಕ ಕಾಣ ಸಿಗುತ್ತದೆ...ಅಲ್ಲಿ ಶಿವಲಿಂಗವನ್ನು ಇತ್ತು ಪೂಜಿಸುತ್ತಾರೆ.ಆದ್ದರಿಂದ ಅದಕ್ಕೆ ಹರಕೆರೆ, ಹರನಕೆರೆ, ಅಂತ ಗುರುತಿಸುತ್ತಾರೆ...ಅದೇ ಬಯಲಿನಲ್ಲಿ ಶಿವಮೊಗ್ಗದ ಶ್ರೀ ಕಾಶಿನಾಥ್ ಎನ್ನುವ ಮಹಾನ್ ಶಿಲ್ಪಿ ಒಂದು ಚಿಕ್ಕ ಕೈಲಾಸವನ್ನೇ ನಿರ್ಮಿಸಿದ್ದಾರೆ..ಶಿವ, ಪಾರ್ವತಿ, ಸಪ್ತ ಋಷಿಗಳು,  ಶಿವಗಣ,  ಗಣಪ, ಸುಬ್ರಮಣ್ಯ ಎಲ್ಲವು ಕಾಣ ಸಿಗುತ್ತದೆ...ಅವಕಾಶ ಇದ್ದಾಗ ಹೋಗಿ ಬನ್ನಿ)
ಬಯಲು ಶಿವ ಸಂಗ್ರಹಾಲಯ!!!
ಶಾಲ್ಮಲಾ ನದಿ ಸುಂದರವಾಗಿ ಹರಿಯುತಿತ್ತು...ಆ ಬಂಗಾರದ ಸೂಯನ ಕಿರಣಗಳು ವರ್ಣ ನೀರನ್ನು ಅಕ್ಷರಶಃ ಬಂಗಾರದ ದ್ರಾವಣವನ್ನಾಗಿ ಮಾಡಿತ್ತು..ಶಾಲ್ಮಲಾ ನದಿಯಾ ಪ್ರವಾಹ ಕಡಿಮೆ ಇದ್ದಾಗ ಇನ್ನಷ್ಟು ಲಿಂಗಗಳನ್ನು ಕಾಣಬಹುದು...


ಕಥೆ ಹೇಳಿ ಬೇಸರವಾಗಿ ಸಾಕಪ್ಪ ಎಂದುಕೊಂಡು ಮುಖ ತಿರುಗಿಸಿ ಕೊಂಡು ನಿಂತ ಬಸವನನ್ನು ನೋಡಿದಾಗ ನಂದಿ ನಿನ್ನ ಓಡಾಲಾಲದ ಶರಧಿಯಲ್ಲಿ ನಮ್ಮ ಗಾಳಕ್ಕೆ ಸಿಕ್ಕದೆ ಇರುವ ಇನ್ನೆಷ್ಟು ಇತಿಹಾಸ ಸಾರುವ ಮೀನುಗಳು ಇವೆಯೋ ಎನ್ನುವ ಭಾವ ತುಂಬಿ ಹರಿಯುತಿತ್ತು...

ಕಥೆ ಹೇಳಿ ಹೇಳಿ ಬೇಜಾರಾಗಿ ಬೆನ್ನು ಮಾಡಿ ಕುಳಿತ ಬಸವ..!


ಆ ನದಿಯಲ್ಲಿದ್ದ ಶಿವಲಿಂಗಗಳು ಹೇಗೆ ನಿರ್ಮಿತವಾದವು ಎಂದು ಆಶ್ಚರ್ಯ ಪಡುತಿದ್ದೀರ ..ಪಾಪ ಆ ಬಸವಣ್ಣ ಕತೆ ಹೇಳಿ ಹೇಳಿ ಆ ಕಡೆ ಮುಖ ಮಾಡಿಕೊಂಡು ಕೂತಿದ್ದಾನ..ಇರಲಿ ಬಿಡಿ.ಅವನು ಹೇಳಿದ ಕತೆ ಕೇಳಿ..ನಾನು ನಿಧಾನವಾಗಿ ಮೆಟ್ಟಿಲನ್ನು ಹತ್ತಿ ಇಲ್ಲಿ ನೆರಳಲ್ಲಿ ಬಂದು ಕೂತಿದ್ದೇನೆ...ಬನ್ನಿ ನನ್ನ ಕೈಲಾದ ಮಟ್ಟಿಗೆ ಹೇಳುತ್ತೇನೆ..ಎಂದು ಆಹ್ವಾನ ಕೊಡುತ್ತಿದೆ ಎನ್ನುವ ಹಾಗೆ ಸಾವಾಧಾನವಾಗಿ ಕುಳಿತ ಬಸವ ಹೀಗೆ ಒಂದೇ ಎರಡೇ ನೂರಾರು ಬಸವಗಳು ಶಿವಲಿಂಗಕ್ಕೆ ಪೈಪೋಟಿ ನೀಡುತ್ತ ನಿಂತಿವೆ.


ಎಷ್ಟು ಹೇಳಿದರು ಮುಗಿಯೊಲ್ಲ ಅನ್ನುವ ಬಸವ...!
ಶಿವ ಪಾರ್ವತಿಗೆ "ಸ್ವಾಮಿ ಪೂಜೆಗೆ ಅರಿಶಿನ ಕುಂಕುಮ ತರುತ್ತೇನೆ ಅಂದ್ರೆ ..ಶಿವನು...ಇಲ್ಲ ಶಿವೆ.ನೋಡಲ್ಲಿ ನಮ್ಮ ಸೂರ್ಯದೇವ ತನ್ನ ಕಿರಣಗಳಿಂದ ನೀರನ್ನೇ ಬಂಗಾರದ ವರ್ಣಕ್ಕೆ ತಿರುಗಿಸಿಬಿಟ್ಟಿದ್ದಾನೆ......ಬಂಗಾರದ ನೀರಿನಲ್ಲಿ ಮುಳು ಮುಳುಗಿ ಏಳುತ್ತಾ ನನ್ನ ವಿಭೂತಿಯೆಲ್ಲ ಹರಿದು ಇಲ್ಲೇ ದೂರದಲ್ಲಿ ವಿಭೂತಿ ಜಲಪಾತವಾಗಿಬಿಟ್ಟಿದೆ.ಎನ್ನುವ  ಹಾಗೆ ಆ ಸಂಜೆಯ ಮೋಹಕ ಬೆಳಕಿನಲ್ಲಿ ಶಿವಲಿಂಗಗಳೆಲ್ಲವೂ ಸುವರ್ಣಾಭಿಷೇಕದಿಂದ ಮಿನುಗಿತ್ತಿದ್ದವು..

ಬಂಗಾರದ ನೀರಲ್ಲಿ ಮೀಯುತ್ತಿರುವ ಶಿವಲಿಂಗಗಳು !
ಶಾಲ್ಮಲಾ ನದಿಗೆ (ಗಂಗೆ) ಒಂದು ಕಡೆ ತನ್ನ ಪತಿಗೆ ಅಭ್ಯಂಜನದ ಖುಷಿ..ಇನ್ನೊಂದೆಡೆ ಪಾರ್ವತಿದೇವಿಯಾ ಮೆಚ್ಚುಗೆ ನೋಟ..ಪೂಜೆಗೆ ಕಾವಲಾಗಿ ನಂದಿ ಆಹಾ ಇದು ಅಲ್ಲವೇ ಭೂಕೈಲಾಸ ಎನ್ನುತ್ತಾ ಜುಳು ಜುಳು ಎನ್ನುತ್ತಾ ಘಂಟಾ ನಾದ ಮಾಡಿ ಶಿವ ಪೂಜೆ ಸಲ್ಲಿಸುತ್ತಿದ್ದಳು...

ಏಕಾಂಗಿ ನೀರಲ್ಲಿ ಈಜುತ್ತಿರುವ ಶಿವ!!!

ಶಿವಗಣದ ಜೊತೆ ಬೆಂಗಳೂರಿನಿಂದ ಬಂದ (ವಾ)ನರ ಗುಂಪು ಈ ಪ್ರಕೃತಿಯ ಓಕುಳಿ ಆಟಕ್ಕೆ ಸಾಕ್ಷಿ ಎನ್ನುವಂತೆ ಸಂತಸ ಪದುತಿದ್ದವು...ನೀರೋ..ಇಲ್ಲ ಕೋಲಾರದ ಗಣಿಯಿಂದ ತೆಗೆದ ಚಿನ್ನವನ್ನು ತೊಳೆದು ಹರಿದು ಬಂದ ನೀರೋ ಅನ್ನುವ ಹಾಗೆ ಥಳ ಥಳ ಹೊಳೆಯುತ್ತಿದ್ದ ಶಾಲ್ಮಲೆಯನ್ನು ನೋಡಿ...ಅರೆ..ಶಿವನು ತನ್ನ ಮಡದಿ ಗಂಗೆ ಪಾರ್ವತಿಗೆ ಆಚಾರಿ ಸೂರ್ಯನಿಗೆ ಹೇಳಿಮಾಡಿಸಿದ ಬಂಗಾರದ ಹರಿವಾಣವೇ ಎನ್ನುವಂತೆ  ಇಡಿ ನದಿ ಬಂಗಾರದ ತಟ್ಟೆಯ ಹಾಗೆ ಗೋಚರವಾಯಿತು...
ಬಂಗಾರದ ನೀರು ಬೇಕೇ ಅಭಿಷೇಕಕ್ಕೆ!!!
ಕಣ್ಣು ತುಂಬಾ ತುಂಬಿಕೊಂಡು..ಹಾಗೆ ಮನಸು ಭಕ್ತಿ ಭಾವದಿಂದ ಮನಸು ತೂಗಾಡುತಿತ್ತು....ತನ್ನ ಪೂಜಾ ಕೈಂಕರ್ಯ ಮುಗಿಸಿ ನಾನು ಹೊರಟೆ ಎಂದು ಇನ್ನೊಂದು ದಿಕ್ಕಿಗೆ ಮುಖ ಮಾಡಿ ಶಾಲ್ಮಲೆ ಹರಿಯುತ್ತಾ ಸಾಗಿದಳು...

ನದಿಯ ಇನ್ನೊಂದು ಮುಖ!!!
ನಿಧಾನವಾಗಿ ಮೆಟ್ಟಿಲ ಹತ್ತಿ ಮೇಲೆ ಬಂದು ನೋಡಿದಾಗ.ಅಲ್ಲೊಂದು ತೂಗು ಸೇತುವೆ ಓಲಾಡುತಿತ್ತು..ಸ್ನೇಹಕ್ಕೆ ಒಂದೇ ಮಾತು..ಅದರ ಕಾವಲಿಗೆ ಒಂದೇ ಸೇತುವೆ ಎನ್ನುವಂತೆ..ಶಾಲ್ಮಲೆ ಎರಡು ತಟದ ಜನರನ್ನು ಒಂದು ಗೂಡಿಸಲು ತನ್ನ ಮೇಲೆ ಒಂದು ತೂಗಾಡುವ ಸೇತುವೆ ನಿರ್ಮಿಸಿಕೊಂಡಿದ್ದಾಳೆ..
ತೂಗು ಸೇತುವೆ 
ತಣ್ಣಗೆ ಹರಿಯುತ್ತಿರುವ ಶಾಲ್ಮಲಾ ನದಿ..
ಆ ನದಿಯ ಮೇಲೆ ಮಾನವರು, ಜಾನುವಾರುಗಳು, ವಾಹನಗಳು ಎಲ್ಲವನ್ನು ಹೊತ್ತು ಸಾಗುತ್ತ ಆನಂದದಿಂದ ತೊನೆದಾಡುವಾಗ..ಆ ಸೇತುವೆ ಮೇಲೆ ನಿಂತ್ ನೋಡುತ್ತಾ ನಿಂತಿದ್ದ ನಮ್ಮನ್ನು ಕಂಡು ಶಾಲ್ಮಲೆ ಒಂದು ತೊಟ್ಟು ಆನಂದ ಭಾಷ್ಪವನ್ನು ನಮ್ಮ ಪರವಾಗಿ ಶಿವನಿಗೆ ಅರ್ಪಿಸಿದಂತೆ ಖಂಡಿತು...
ದಾರಿ ಇದ್ದರೆ ಸಾಕು.ನಾವು ಬಂದ್ವಿ...
 ಬೈಕ್ ಗಳು ರಿವ್ವನೆ ಸಾಗುತಿದ್ದವು...ತೂಗು ಸೇತುವೆ ಮೇಲೆ ನಿಂತು ನದಿಯ ಸೌಂದರ್ಯ ಸವಿಯುವುದು, ಗಾಳಿ ಮೇಲೆ ತೇಲಿಬರುವ ಶಿವನ ಧ್ಯಾನ ಗಾನ, ಎಲ್ಲವು ಮಂತ್ರ ಮುಗ್ಧರನ್ನಾಗಿ ಮಾಡುವುದು ಈ ಕ್ಷೇತ್ರದ ವಿಶೇಷ..

ಬರಿ ಭಕ್ತಿಯೊಂದೇ ಅಲ್ಲ.ಸೌಂದರ್ಯ, ಪ್ರಕೃತಿಯ ನಿಗೂಡ ರಹಸ್ಯ,  ಜುಳು ಜುಳು ನದಿ, ತೂಗು ಸೇತುವೆ, ಇತಿಹಾಸ ಎಲ್ಲವು ಮನಸಿಗೆ ಪ್ರಶಾಂತ ಭಾವ ತರುತ್ತದೆ..

(ಸಶೇಷ...)

6 comments:

  1. ಪ್ರೀತಿಯ ಶ್ರೀಕಾಂತ್ ಸರ್ ನಿಮ್ಮ ಪ್ರವಾಸದ ಚಿತ್ರಗಳು ಮನಸಿಗೆ ಮುದ ಕೊಡುತ್ತವೆ.ಮೂರನೇ ಕಂತಿನಲ್ಲಿ ಸಹಸ್ರಲಿಂಗ ಕ್ಷೇತ್ರದ ಬಗ್ಗೆ ಬರೆದು ನಿಮ್ಮ ಅನುಭವ ಹಂಚಿಕೊಂಡಿದ್ದೀರಿ , ಇನ್ನೂ ಇಂತಹ ಅನುಭವಗಳು ನಿಮ್ಮ ಬತ್ತಳಿಕೆಯಲ್ಲಿ ಅಡಗಿದೆ, ಅವುಗಳನ್ನು ಪ್ರಯೋಗಿಸಿ ಸಾರ್ ನಾವೆಲ್ಲಾ ಕಾಯುತ್ತಿದ್ದೇವೆ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  2. ಭಕ್ತ ಕುಂಬಾರ ಚಿತ್ರವನ್ನು ನೆನೆಸಿದ್ದು ಸಕಾಲಿಕವಾಗಿದೆ ಬಾಸೂ.

    ಕಥೆ ಹೇಳಿ ಹೇಳಿ ಬೇಜಾರಾಗಿ ಬೆನ್ನು ಮಾಡಿ ಕುಳಿತ ಬಸವ ಶೀರ್ಶಿಕೆ ಅಮೋಘವಾಗಿದೆ.

    ಒಳ್ಳೆಯ ಸಚಿತ್ರ ಪ್ರವಾಸ ಕಥನ ಮುಂದುವರೆಸಿರಿ.

    ReplyDelete
  3. ಬಾಲೂ ಸರ್..ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು..ನೀವು ಅಭಿಪ್ರಾಯ ಪಟ್ಟ ಹಾಗೆ ಇನ್ನಷ್ಟು ಅನುಭವಗಳನ್ನು ಸೇರಿಸಿದ್ದೇನೆ..ಧನ್ಯವಾದಗಳು..

    ReplyDelete
  4. ಬದರಿ ಸರ್..ಸಿನೆಮಾದಿಂದ ಜೀವನವೋ ..ಜೀವನಕ್ಕಾಗಿ ಸಿನಿಮಾವೋ ಅನ್ನುವ ತರ್ಕ ಬಂದಾಗ..ಮೊದಲನೇ ಉತ್ತರ ನನ್ನ ಬಾಳಿಗೆ ದಾರಿ ದೀಪವಾಗುತ್ತದೆ.ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.

    ReplyDelete
  5. ಶಿವಸಂಗ್ರಹಾಲಯ, ಬಸವ, ತೂಗುಸೆತುವೆ ಇಷ್ಟ ಆಯ್ತು

    ReplyDelete
  6. ಸುದೀಪ..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete