Tuesday, September 11, 2012

ಶ್ರೀ ರೇವಣಸಿದ್ದೇಶ್ವರ ಬೆಟ್ಟ + ಶ್ರೀ ಅಂಬೆಗಾಲು ಕೃಷ್ಣನ ದೇವಸ್ಥಾನ + ದ್ರಾಕ್ಷಾರಸದ ವಯ್ನ್ ಯಾರ್ಡ್ 09.09.2012


ಸಿರ್ಸಿ ಪ್ರವಾಸ ಕಾರಣಾಂತರಗಳಿಂದ  ಶಿರಸ್ಸಿನಿಂದ ಹಾರಿ ಹೋಯಿತು.

ಹೇಗಾದರೂ ಸರಿ ಭಾನುವಾರ  ಬೆಂಗಳೂರಿನಿಂದ ಹೊರಗೆ ಹೋಗಬೇಕು ಎನ್ನುವ ಸ್ನೇಹಿತರ ಒತ್ತಾಯ, ಅದಕ್ಕೆ ಪ್ರಶಾಂತ್ ಕೊಟ್ಟ ಉತ್ತರ ಶ್ರೀ ರೇವಣಸಿದ್ದೇಶ್ವರ ಬೆಟ್ಟ, ಮತ್ತು ಚನ್ನಪಟ್ಟಣದ ಬಳಿ ಇರುವ ದ್ರಾಕ್ಷಾರಸದ ವಯ್ನ್ ಯಾರ್ಡ್!

ನನ್ನ ಎರಡನೇ ಕೂಸಿಗೆ ವರುಷದ ಸಂಭ್ರಮ, ನಾನು ಬರುತ್ತೇನೆ ಎಂದು ಕುಣಿದಾಡಿತು, ಸರಿ ಬೆಳಿಗ್ಗೆ ಸುಮಾರು ೬.೩೦ಕ್ಕೆ ಹೊರಟೆ, ದಾರಿಯಲ್ಲಿ ಸಂದೀಪ್ ಮತ್ತು ಪ್ರಶಾಂತ್ ರನ್ನು  ಹತ್ತಿಸಿಕೊಂಡು, ರಾಮನಗರದ ಕಡೆಗೆ ಪಯಣ ಶುರುವಾಯಿತು.  ಕಳೆದ ವಾರ ತಾನೇ ತನ್ನ ಆರೋಗ್ಯ ತಪಾಸಣೆಗೆ ಹೋಗಿದ್ದ ನನ್ನ ಕೂಸು..ಯಾವುದೇ ತೊಂದರೆ, ಅಡಚಣೆ ಕೊಡದೆ ಸರಾಗವಾಗಿ ನಮ್ಮನ್ನು ರೇವಣಸಿದ್ದೇಶ್ವರ ಬೆಟ್ಟದ ತಪ್ಪಲಿನಲ್ಲಿ ನಿಲ್ಲಿಸಿತು.
ದೇವಿ  ರೇಣುಕಾಂಬೆಯ  ದೇವಸ್ಥಾನ
ಕೆಲ ನಿಮಿಷಗಳಲ್ಲಿ ದೇವಿ  ರೇಣುಕಾಂಬೆಯ ದರುಶನ ಪಡೆದು ಹೊರಗೆ ಬಂದೆವು. ದೇವಸ್ಥಾನ, ಸುತ್ತ ಮುತ್ತಲು ಹಸುರಿನ ಹಾಸು, ಸುಂದರವಾದ ಉದ್ಯಾನವನ ಮನಸೆಳೆಯಿತು.. ಆದ್ರೆ ದೇವಸ್ಥಾನದಲ್ಲಿದ್ದ ಅರ್ಚಕರಿಗೆ ನಮಗಿಂತ  ದಿನಪತ್ರಿಕೆಯಲ್ಲಿದ್ದ ಸುದ್ದಿ ವಿಶೇಷ ಎನ್ನಿಸಿರಬೇಕು..ನಮ್ಮನ್ನು ನೋಡಲು ಇಲ್ಲ...ಮುಖ ಕೂಡ ತೋರಿಸಲಿಲ್ಲ...ಇನ್ನು ಮಂಗಳಾರತಿ, ತೀರ್ಥ  ದೂರವೇ ಉಳಿಯಿತು. ಹೊರಗೆ ಬಂದೆವು...ಅಲ್ಲಿಯ ಒಂದು ಅಂಗಡಿಯಲ್ಲಿದ್ದ ಸ್ಥಳೀಯರು ನಮ್ಮ ಕೈಲಿದ್ದ ಛಾಯ ಪೆಟ್ಟಿಗೆಯನ್ನು ನೋಡಿ..ಬನ್ನಿ ಸರ್ ನಿಮಗೆ ಏನು ಬೇಕು ಹೇಳುತ್ತೀವಿ ಅಂದ್ರು..ನಾನು ಏನು ಎಂದೇ..ನೀವು ಟಿ.ವಿ.೯ ರವರು ಅಲ್ವ..ಬನ್ನಿ ಹೇಳ್ತೇವೆ ಇಲ್ಲಿನ ವಿಶೇಷ ಅಂತ ಕೂಗಿದರು..(ನಮ್ಮ ಸುಂದರ ಹವ್ಯಾಸಕ್ಕೆ ಎಂತಹ .....ಹೆಸರು...ಹ ಹ) ನಾವು ನಮ್ಮ ತೊಂಭತ್ತು  ಹಲ್ಲುಗಳನ್ನ ತೋರಿಸಿ, ಬೇಡ ನಾವು ಚಾರಣಿಗರು ಎಂದು ಹೇಳಿ ಹೊರಟೆವು.
ಘಟ್ಟದ ರೀತಿಯಲ್ಲಿದ್ದ ರಸ್ತೆ!!
ಸುಮಾರು ೩೦೦-೪೦೦ ಮೀಟರ್ ಘಟ್ಟದ ರೀತಿಯಲ್ಲಿದ್ದ ರಸ್ತೆಯನ್ನು ಹತ್ತಿದ ಮೇಲೆ ಕೂಸನ್ನು ಅಲ್ಲಿಯೇ ನಿಲ್ಲಿಸಿ, ದೇವಸ್ಥಾನದ ಕಡೆಗೆ ಹೊರಟೆವು. ಎಲ್ಲ ಬೆಟ್ಟದ ತಾಣಗಳಂತೆ ಇಲ್ಲಿಯೂ ಕೋತಿಗಳ ಹಾವಳಿ ಅಪಾರ.  ನಿಧಾನವಾಗಿ, ಎಚ್ಚರಿಕೆಯಿಂದ ತುತ್ತ ತುದಿ ತಲುಪಲು ಶುರು ಮಾಡಿದೆವು..ನಮ್ಮ ಕೈಲಿದ್ದ ಆಟಿಕೆ ಅದರ ಕೆಲಸ ಮಾಡುತಿತ್ತು.ಇತರ ಪ್ರವಾಸಿಗರ ಹತ್ತಿರ ತರಲೆ ಮಾತಾಡುತ್ತ, ಅವರ ಊರು,ಕೇರಿಯ ಬಗ್ಗೆ ವಿಚಾರಿಸುತ್ತಾ ಹತ್ತಿದೆವು.
 ಶ್ರೀ ಭೀಮೇಶ್ವರ ದೇವಸ್ಥಾನ


ಕೆಲ ತಿಂಗಳುಗಳ ಮಕ್ಕಳಿಂದ ಹಿಡಿದು ಅತಿ ವಯಾಸ್ಸಾಗಿರುವರು ಇಲ್ಲಿಗೆ ಬರುತ್ತಾರೆ, ಬೆಟ್ಟ ಹತ್ತುತ್ತಾರೆ. ಬೆಟ್ಟದ ಮಧ್ಯಭಾಗದಲ್ಲಿ ಭೀಮೇಶ್ವರ ದೇವಸ್ಥಾನ (ಪಾಂಡವರು ವನವಾಸದಲ್ಲಿದ್ದಾಗ ಭೀಮನು ಇಲ್ಲಿ ಈಶ್ವರ ಲಿಂಗ ಪ್ರತಿಷ್ಠೆ ಮಾಡಿದನು ಎಂದೂ ನಂಬಿಕೆ ಇದೆ) ,  ಎಂದೂ ಬತ್ತದ ಕೊಳ ಇದೆ.  ಒಂದು ಹೆಬ್ಬಂಡೆಯ ಕೆಳಗೆ ಹೊಸ ಕಟ್ಟಡ ಅಥವಾ ದೇವಸ್ಥಾನ ಕಟ್ಟುವ ಕಾರ್ಯ ನಡೆಯುತ್ತಿತ್ತು.  ಮಧ್ಯಭಾಗದಿಂದ ರಾಮನಗರ, ಚನ್ನಪಟ್ಟಣದ ಸುತ್ತ ಮುತ್ತ ಇರುವ ಹಸಿರಿನ ಸಿರಿ, ಬೆಟ್ಟ ಗುಡ್ಡಗಳು ಚೆಲುವು ತನ್ನ ವಿಹಂಗಮ ನೋಟವನ್ನು ಕಾದಿರಿಸಿಕೊಂಡಿತ್ತು

ಬೆಟ್ಟ ಹತ್ತಿ ಮೇಲೆ ಬಂದಾಗ, ಒಂದು ದೊಡ್ಡ ಘಂಟೆ ನಮ್ಮನ್ನು ಸ್ವಾಗತಿಸಿತು.
ದೊಡ್ಡ ಘಂಟೆ
ಎದುರು ಬದರು ಎರಡು ಶಿವಲಿಂಗಗಳ ಚಿಕ್ಕ ದೇವಸ್ಥಾನ, ಅಲ್ಲಿಯೇ ಕೆಲ ಮೆಟ್ಟಿಲುಗಳನ್ನ ಇಳಿದರೆ ಸಿಗುವ ಶ್ರೀ ರೇವಣ ಸಿದ್ದೇಶ್ವರರ ದೇವಸ್ಥಾನ ಎಲ್ಲವು ಸೊಗಸಾಗಿದೆ.
 ಶ್ರೀ ರೇವಣ ಸಿದ್ದೇಶ್ವರರ  ದೇವಸ್ಥಾನ
ಸುಮಾರು ೬೦೦-೭೦೦ ವರುಷಗಳಿಂದ ಶ್ರೀ ರೇವಣ ಸಿದ್ದೇಶ್ವರ ಇಲ್ಲಿಯೇ ಸುತ್ತ ಮುತ್ತ ಇರುವ ಕೆಲ ಗುಹೆಗಳಲ್ಲಿ ತಪಸ್ಸು ಮಾಡುತಿದ್ದಾರೆ ಎಂದೂ ಅಲ್ಲಿನ ಜನತೆ ನಂಬುತ್ತದೆ, ಹಾಗು ಕಷ್ಟ, ಇಷ್ಟ ನೆರವೇರಿಸುವ ತಾಣ ಇದಾಗಿದೆ ಎನ್ನುವ ನಂಬಿಕೆಯಿಂದ ಭಕ್ತಾದಿಗಳು ಬರುತ್ತಾರೆ.

ಸುಮಾರು ಒಂದು ಘಂಟೆ ಬೆಟ್ಟದ ತುತ್ತ ತುದಿಯಲ್ಲಿ ಕಳೆದೆವು. ನಮ್ಮ ಪೆಟ್ಟಿಗೆ ತನ್ನ ಒಡಲು ತುಂಬಿಕೊಳ್ಳುತ್ತಿತ್ತು.  ಮನಸು ಸಂತಸದಿಂದ ಹಕ್ಕಿಯಾಗೆ ಹಾರಾಡುತ್ತಿತ್ತು. ಸಂದೀಪ್ ತಮ್ಮ ರಿಮೋಟಿನಿಂದ ಚಿತ್ರ ತೆಗೆಯುವ ಸಾಹಸ ಮಾಡಿದರು.

ಆನಂದಮಯ...ಪರಮಾನಂದಮಯ ಎನ್ನುತ್ತಾ..ರಾಮಾಪ್ರಮೇಯ ಮತ್ತು ಅಂಬೆಗಾಲು ಕೃಷ್ಣನ ದೇವಸ್ಥಾನಕ್ಕೆ ಬಂದೆವು. ಸುಮಾರು ಶತಮಾನಗಳು ಹಳೆಯದಾದ ಈ ದೇವಸ್ಥಾನ ಚನ್ನಪಟ್ಟಣದ ಹತ್ತಿರ ಇದೆ. ಹೆದ್ದಾರಿಯಿಂದ ಕೇವಲ ೧೦೦ ಮೀಟರ್ ದೂರದಲ್ಲಿರುವ ಈ ದೇವಸ್ಥಾನಕ್ಕೆ ಹೋಗಲಾಗಿರಲಿಲ್ಲ..ಇದೊಂದು ಸುವರ್ಣಾವಾಕಾಶ ಎಂದೂ ನುಗ್ಗಿದೆವು.

 ಶ್ರೀ ರಾಮಾಪ್ರಮೇಯ ಮತ್ತು  ಶ್ರೀ  ಅಂಬೆಗಾಲು  ಕೃಷ್ಣನ ದೇವಸ್ಥಾನ 

ಅಣ್ಣಾವ್ರಿಗೆ ಶ್ರಾವಣ ಬಂತು   ಚಿತ್ರದಲ್ಲಿ ಆದ ಅನುಭವ ನನಗಾಯ್ತು.
ಅಲ್ಲಿಗೆ ಬಂದಾಗ, ಅಣ್ಣಾವ್ರಿಗೆ ಶ್ರಾವಣ ಬಂತು ಚಿತ್ರದಲ್ಲಿ ತೋರಿಸಿದ ಅನುಭವ ನನಗಾಯ್ತು..ಇಲ್ಲಿಗೆ ಬಂದಿದ್ದೇನೆ, ಇದೆ ಜಾಗದಲ್ಲಿ ನನ್ನ ವಾಹನ ನಿಲ್ಲಿಸಿದ್ದೇನೆ ಎನ್ನುವ ಭಾವ..ಇದನ್ನು ನನ್ನಿಬ್ಬರ ಸ್ನೇಹಿತರಲ್ಲಿ ಹೇಳಿದೆ..ಅವರು ಒಹ್ ಹೌದಾ!  ಎಂದರು...ಮೊದಲೇ ತರಲೆ ಮಾಡುವ ನಾನು, ನನ್ನ ಭಾವನೆ ಅವರಿಗೆ ಇನ್ನೊಂದು ಹಾಸ್ಯವಾಗಿ ತೋರಿತೇನೋ ಅಥವಾ ಇರಬಹುದು...ಅವನನ್ನು ಸುಮ್ಮನೆ ಆ ಭಾವದಲ್ಲಿ ತೆಲಿಬಿಡೋಣ ಎಂದೂ ಸುಮ್ಮನಾದರೋ!!! "ಜನ್ಮಾಂತರ" ಕಾರ್ಯಕ್ರಮದ ರೂವಾರಿಗಳೇ ಹೇಳಬೇಕು.

ದೇವಸ್ಥಾನ ತುಂಬಾ ಇಷ್ಟವಾಯಿತು, ನನ್ನ ಪ್ರೇರಕ ಶಕ್ತಿ ಅಂಬೆಗಾಲಿನಲ್ಲಿ ಪ್ರತಿಷ್ಟಾಪನೆಯಾಗಿರುವುದು ಇಲ್ಲಿನ ವಿಶೇಷ.  ಶ್ರೀ ಪುರಂದರದಾಸರು ಇಲ್ಲಿಯೇ "ಜಗದೋದ್ಧಾರನ ಆಡಿಸಿದಳೇಶೋಧೆ" ಎನ್ನುವ ಹಾಡನ್ನು ರಚಿಸಿದರು ಎಂದೂ ಇಲ್ಲಿನ ಐತಿಹ್ಯ ಹೇಳುತ್ತೆ.  ತುಂಬಾ ಸೊಗಸಾದ ದೇವಾಲಯ. ಶ್ರೀ ರಾಮಾಪ್ರಮೇಯ , ಶ್ರೀ ಅರವಿಂದಾವಲ್ಲಿ ದೇವಸ್ಥಾನಗಳು ಇದೆ.

ಅಲ್ಲಿಂದ ಮುಂದಿನ ಪಯಣ ಹೆರಿಟೇಜ್ ಗ್ರೇಪ್ಸ್ ವಯ್ನ್ ಯಾರ್ಡ್ಗೆ ಹೋದೆವು. ಮೈಸೂರ್ ಹೆದ್ದಾರಿಯಲ್ಲಿರುವ ಚನ್ನಪಟ್ಟಣದ ಆದ ಮೇಲೆ ಸಿಗುವ ಹೋಟೆಲ್ ಕದಂಬಂಗೆ ಮುಂಚೆ ಎಡ ತಿರುವು ಪಡೆದು ಸುಮಾರು ೩-೪ ಕಿ.ಮಿ.ಹಳ್ಳಿದಾರಿಯಲ್ಲಿ ಸಾಗಿ, ನಂತರ ಎಡ ಬದಿ ತಿರುಗಿ ಸುಮಾರು ಒಂದು ಕಿ.ಮಿ.ಒಳಗೆ ಹೋದರೆ ಸಿಗುತ್ತೆ. ಅಲ್ಲಿನ ವಯ್ನ್ ತಯಾರಿಸುವ ಘಟಕಕ್ಕೆ ಕರೆದುಕೊಂಡು ಹೋಗಲು ೧೫೦/- ಟಿಕೆಟ್ ಪಡೆಯಬೇಕು. ಸುಮಾರು ೨೦ ನಿಮಿಷಗಳ ದೃಶ್ಯಾವಳಿ, ಘಟಕದಲ್ಲಿ ಒಂದು ಸುತ್ತು, ಹಾಗೂ ರುಚಿ ನೋಡಲು ಐದು ಬಗೆಯ ವಯ್ನ್ ಕೊಡುತ್ತಾರೆ. ಬೇಕಾದ ರುಚಿಯ ವಯ್ನನ್ನು ಕೊಳ್ಳಬಹುದು ಕೂಡ.

ಬರಿ ರುಚಿಯೊಂದನ್ನೇ ಅಲ್ಲದೆ, ವಯ್ನನ್ನು ಕುಡಿಯುವ ಗ್ಲಾಸ್ಸನ್ನು ಹೇಗೆ ಹಿಡಿಕೊಳ್ಳಬೇಕು (ಹೌದು ಪ್ರತಿ ವಿಧದ ವಯ್ನನ್ನು ಕುಡಿಯುವಾಗ ಗ್ಲಾಸ್ ಹಿಡಿಯುವ ರೀತಿ ಬೇರೆ ಇರುತ್ತಂತೆ....ಒಳಗೆ ಹೋದಮೇಲೆ ಮಾಡುವ ಕೆಲಸ ಒಂದೇ...ಆದ್ರೆ ಅದಕ್ಕೆ ಇರುವ ರೀತಿ ರಿವಾಜುಗಳು ನನ್ನತ ಮುಕ್ಕನಿಗೆ ತಮಾಷೆಯಾಗಿ ಕಂಡಿತು).



ಘಟಕದಲ್ಲಿನ ಪ್ರವಾಸ, ಪರಿಸರ, ದ್ರಾಕ್ಷಿ ಬೆಳೆಯುವ ರೀತಿ, ಅದನ್ನು ರಸ ಮಾಡಿ, ವಯ್ನ್ ರೂಪಕ್ಕೆ ತರುವ ಯಂತ್ರಗಳು ಎಲ್ಲವನ್ನು ಸೂಕ್ಷ್ಮವಾಗಿ ವಿವರಿಸಿದರು.  ಕುಡಿಯದ ನನಗೆ ಇದರ ವಿವರಣೆ ಆಶ್ಚರ್ಯ, ಮತ್ತು ಸಂತಸ ಎರಡೂ ನನಗೆ  ಮತ್ತನ್ನು ತಂದಿತ್ತು.




ಅವರಿಗೆ ವಂದನೆಗಳನ್ನು ಸಲ್ಲಿಸಿ, ನಾವು ಹೊರಟೆವು.

ಮೂರು ಜಾಗಗಳು ಒಂದಕ್ಕಿಂತ ಒಂದು ವಿಭಿನ್ನ...
ಮೊದಲನೆಯದು ಎತ್ತರದಲ್ಲಿ ತಪಸ್ಸು ಮಾಡಿ ಸಿದ್ಧಿಗಳಿಸಿದ ಸಿದ್ಧರ ತಾಣ,
ಎರಡನೆಯದು ಎಲ್ಲೋ ಹುಟ್ಟಿ ಉನ್ನತ ವ್ಯಕ್ತಿತ್ವದಿಂದ ಅಮರಗೀತೆ ಭಗವದ್ಗೀತೆ ಕೊಟ್ಟ ಗೀತಾಚಾರ್ಯ ಶ್ರೀ ಕೃಷ್ಣ ತನ್ನ ಗುಣಗಳಿಂದ, ಸಂದೇಶಗಳಿಂದ ಎತ್ತರಕ್ಕೇರಿರುವ ದೇವತಾ ಪುರುಷನ  ತಾಣ
ಮೂರನೆಯದು ಅತಿ ಕಡಿಮೆ ಎತ್ತರದಲ್ಲಿ ಅಥವಾ ನೆಲಮಟ್ಟದಲ್ಲೇ ಬೆಳೆದು ತನ್ನ ರಸದಿಂದ ಮತ್ತಿನ ಎತ್ತರಕ್ಕೆ ಏರಿಸುವ ಘಟಕ..

ಒಟ್ಟಿನಲ್ಲಿ ಊಂಚೆ ಲೋಗ್ ಊಂಚೆ ಪಸಂದ್ ಎನ್ನುವ ಹಾಗೆ..ನಾವೆಲ್ಲರೂ ಕೆಲ ಘಂಟೆಗಳು ಎತ್ತರ ಮುಟ್ಟಿ ಬಂದಿದ್ದೆವು!!!

14 comments:

  1. ಶ್ರೀಕಾಂತ್ ಒಳ್ಳೆಯ ತಾಣಗಳನ್ನು ಪರಿಚಯ ಮಾಡಿದ್ದೀರಿ , ಛಾಯಾಚಿತ್ರಗಳು ಚೆನ್ನಾಗಿ ಮೂಡಿವೆ. ಒಂದು ದಿನದ ಪ್ರವಾಸಕ್ಕೆ ಇಲ್ಲಿಗೆ ತೆರಳಲು ಅಡ್ಡಿಯಿಲ್ಲ . ಒಳ್ಳೆಯ ನಿರೂಪಣೆ ಥ್ಯಾಂಕ್ಸ್ ನಿಮಗೆ
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  2. ಸುಂದರ ಲೇಖನ.....ಒಂದು ಉತ್ತಮ ಪ್ರವಾಸಯೋಗ್ಯ ಸ್ಥಳವನ್ನು ಪರಿಚಯಿಸಿದ್ದೀರಿ...ನಮ್ಮೊಡನೆ ನಿಮ್ಮ ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು...ಚಿತ್ರಗಳು ಸೂಪರ್....

    ReplyDelete
  3. ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ ಸರ್... ಸುಂದರವಾದ ಪ್ರವಾಸತಾಣಗಳ ಬಗ್ಗೆ ನಿಮ್ಮದೇ ಅನುಭವಗಳ ಮೂಲಕ ವರ್ಣಿಸಿದ್ದಿರಿ...

    ReplyDelete
  4. ಸುಂದರ ಲೇಖನ ಶ್ರೀಕಾಂತ್... ರೇವಣ ಸಿದ್ದೇಶ್ವರ ದೇವಸ್ಥಾನ ನಮ್ಮ ಮನೆದೇವಸ್ಥಾನ ಸದಾ ಭೇಟಿ ಕೊಡುತ್ತೇವೆ. ಹಾಗೆ ಅಂಬೆಗಾಲು ಕೃಷ್ಣನ ದೇವಸ್ಥಾನ ತುಂಬಾ ಚೆನ್ನಾಗಿದೆ ಕಳೆದಬಾರಿ ಊರಿಗೆ ಹೋದಾಗ ನೋಡಿದ್ದೆ ಆದರೆ ಹೆರಿಟೇಜ್ ಗ್ರೇಪ್ಸ್ ವಯ್ನ್ ಯಾರ್ಡ್ಗೆಇದರ ಬಗ್ಗೆ ಕೇಳಿರಲಿಲ್ಲ ಒಳ್ಳೆಯ ಮಾಹಿತಿಗೆ ಧನ್ಯವಾದಗಳು

    ReplyDelete
  5. ಒಳ್ಳೆಯ ಪ್ರವಾಸಿಗ ನೀವು. ಚಾರಣಗಳನ್ನು ಹೊರತು ಪಡಿಸಿ. ನನ್ನನ್ನೂ ಪ್ರವಾಸಕ್ಕೆ ಕರಿಯಿರಪ್ಪಾ. ನಿಮ್ಮ ಸಂಗಡ ದೇಶ ಸುತ್ತಿದರೆ ನಾನೂ ಕಲಿಯುತ್ತೇನೆ ತುಸು ಲೌಕಿಕ.

    ReplyDelete
  6. ಬಾಲು ಸರ್..ಪ್ರವಾಸದ ರಾಜ ನೀವು..ನಿಮ್ಮ ಪ್ರತಿಕ್ರಿಯೆ ಬಹಳ ಸಂತಸ ತಂದಿತು. ಇಂದಿನ ಬಿಡುವಿಲ್ಲದ ವಾರಗಳ ಮಧ್ಯೆ, ಒಂದು ದಿನದ ಪ್ರವಾಸ ಖಂಡಿತ ಒಳ್ಳೆಯ ಹುಮ್ಮಸ್ಸು ತಂದು ಕೊಡುತ್ತೆ..ಧನ್ಯವಾದಗಳು ನಿಮಗೆ..

    ReplyDelete
  7. ಅಶೋಕ್ ಸರ್...ತುಂಬಾ ಖುಷಿಯಾಯಿತು ನಿಮಗೆ ಲೇಖನ ಮೆಚ್ಚುಗಿಯಾಗಿದ್ದರ ಪ್ರತಿಕ್ರಿಯೆಗಾಗಿ...ಧನ್ಯವಾದಗಳು..

    ReplyDelete
  8. ಫ್ರೆಂಡ್ ನಿಮ್ಮ ಪ್ರತಿಕ್ರಿಯೆ ನಾನು ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ..ಧನ್ಯವಾದಗಳು..

    ReplyDelete
  9. "ಮನಸು"
    ಮೇಡಂ ನಿಮ್ಮ ಮನೆದೇವರ ವಿಚಾರ ಹೇಳಿದ್ದು ಸಂತಸ ತಂದಿತ್ತು..ಹೌದು ರೇವಣ ಸಿದ್ದೇಶ್ವರ ಬೆಟ್ಟ, ಭಕ್ತಿ , ಶಕ್ತಿ ಎರಡನ್ನು ಕೊಡುತ್ತದೆ..ಧನ್ಯವಾದಗಳು

    ReplyDelete
  10. ಬದರಿ ಸರ್..ಧನ್ಯವಾದಗಳು ನಿಮಗೆ..ಖಂಡಿತ ಒಮ್ಮೆ ನಿಮ್ಮ ಜೊತೆಯಲ್ಲಿ ಹೊರಗೆ ಪ್ರವಾಸ ಮಾಡುವ..

    ReplyDelete
  11. ಆತ್ಮೀಯ ಶ್ರೀಕಾಂತ,
    ಸುಂದರ ಲೇಖನ.....ಒಂದು ಉತ್ತಮ ಪ್ರವಾಸಯೋಗ್ಯ ಸ್ಥಳದ ಪರಿಚಯ..ನಿನ್ನ ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು...ಚಿತ್ರಗಳಂತೂ ಸೂಪರ್....

    ReplyDelete
  12. ಧನ್ಯವಾದಗಳು ಚಿಕ್ಕಪ್ಪ...ಪ್ರಯಾಸವನ್ನು ಮರೆಸುವ ಪ್ರವಾಸ ಸದಾ ನೆಮ್ಮದಿ ಕೊಡುತ್ತದೆ..

    ReplyDelete
  13. ತುಂಬಾ ಚಂದ ನಿರೂಪಣೆ ಶ್ರೀಕಾಂತ್, ಮೊದಲ ಬಾರಿ ಭೇಟಿ ಕೊಟ್ಟದ್ದು ನಿಮ್ಮ ಬ್ಲಾಗಿಗೆ, ಇನ್ನು ಬರುತ್ತಿರುತ್ತೇನೆ

    ReplyDelete
  14. ಪ್ರೀತಿಯ ಅಭಿಜ್ಞ..ನನ್ನ ಲೋಕಕ್ಕೆ ಸ್ವಾಗತ..ಧನ್ಯವಾದಗಳು ನಿಮಗೆ

    ReplyDelete