Sunday, October 22, 2017

ಶ್ರೀ ವೆಂಕಟೇಶಾಯ ಮಂಗಳಂ - ಇನ್ನೊಂದು ಆವೃತ್ತಿ

"ಟೀ  ತಿರುಪತಿಗೆ ಹೋಗ್ತಾ ಇದ್ದೀನಿ"

"ಕಾಲು ಮುರಿದು ಕೂರಿಸ್ತೀನಿ.. ಆ ಊರು ಈ ಊರು ಚೀಲೂರು  ಅಂತ ಸುತ್ತುತ್ತಾ ಇರಿ" ಉಗ್ರಳಾಗಿದ್ದಳು

"ಇಲ್ಲಾ ಟೀ ಜೆ ಎಂ ಜರ್ಮನಿ ಇಂದ ಬಂದಿದ್ದಾನೆ.. ಅವನ ಜೊತೆ ಎಲ್ಲರೂ ಹೋಗ್ತಾ ಇದ್ದೀನಿ.. ಮನೆದೇವರು ಆಲ್ವಾ ಟೀ"

ಸ್ವಲ್ಪ ಮೆತ್ತಗಾದಳು... "ನಾವೂ ಬರ್ತೀವಿ.. ಆದರೆ ನನಗೆ ಬರೋಕೆ ಆಗಲ್ಲ.. ಶೀತಲ್ ಗೆ ನೆಡೆಯೋಕೆ ಆಗಲ್ಲ.. .. ಹೋಗಿ ಬನ್ನಿ ಶ್ರೀ... ಮನೆದೇವರ ಕೃಪೆ ಸದಾ ಇರಲಿ. ಆದರೆ ಒಂದು ಷರತ್ತು.. "

"ನನಗೆ ಗೊತ್ತು ಟೀ ನಿನಗೆ ಬರೋಕೆ ಆಗಲ್ಲ.. ಶೀತಲ್ ನ ಮುಂದಿನ ವರ್ಷ ಕರ್ಕೊಂಡು ಹೋಗಿ ಬರ್ತೀನಿ.. .. ಸರಿ ಅದೇನೋ ಷರತ್ತು ಅಂದೆಯಲ್ಲ ಏನದು?"

"ಪ್ರತಿ ಲೇಖನ ಏನಾದರೂ ಬರೆದು ಬಿಸಾಕ್ತಾ ಇರ್ತೀರ.. ಬೈಕು, ಕಾರು, ನಿಮ್ಮ ಮೊಬೈಲ್, ಕ್ಯಾಮೆರಾ ಎಲ್ಲವೂ ಕಥೆ ಹೇಳುತ್ತವೆ ನಿಮಗೆ.. ಅದನ್ನು ನೀವು ಬರೀತೀರಿ.. ಈ ಲೇಖನ ನಾ ಹೇಳುತ್ತೀನಿ.. ನೀವು ಬರೀರಿ"  ಜೋರಾಗಿ ನಗಲು ಶುರು ಮಾಡಿದಳು..

"ಏನೂ.. ನೀ ಹೇಳ್ತೀಯ.. ನಾ ಬರೆಯೋದೇ.. ಸೂಪರ್ ಸೂಪರ್ ಟೀ .. ನನಗೆ ನಂಬೋಕೆ ಆಗ್ತಾ ಇಲ್ಲ"

"ನಂಬೋಕೆ ಏನಾಗಿದೆ..  ಒಮ್ಮೆ ಚಿಗಟಿಕೊಳ್ಳಿ".. ಇನ್ನೊಮ್ಮೆ ನಕ್ಕಳು..

"ಸರಿ ಟೀ.. ನೀ ಇಷ್ಟು ಹೇಳ್ತಾ ಇದ್ದೀಯ ಎಂದರೆ ಸರಿ.. ಶುರು ಮಾಡೋಣ.. " ಮೆಲ್ಲಗೆ ಅವಳಿಗೆ ಕಾಣದ ಹಾಗೆ ಒಮ್ಮೆ ಚಿಗಟ್ಟಿಕೊಂಡೆ.. ಕನಸಾಗಿರಲಿಲ್ಲ..

ಟೀ ಉವಾಚ.. ಇನ್ನು ಮುಂದೆ ಅವಳ ಪದಗಳಲ್ಲಿ ಈ ಲೇಖನ
                                                               *************************


ಶ್ರೀ ನಿನಗೆ ಯಾವಾಗಲೂ ಬಯ್ಯುತ್ತಲೇ ಇರುವ ವೆಂಕಿಗಾಗಿ ಬಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಕಾಯುತ್ತ ಕುಳಿತಿದ್ದೆ.. ನಿನ್ನ ತಲೆ ಮಧುರ ನೆನಪುಗಳ ತವರೂರಾಗಿತ್ತು.. ನೀ ಮೊಬೈಲ್ ತೆಗೆದು ಒಂದು ಫೋಟೋ ತೆಗೆದು.. ಅವರಿಗೆ ಕಳಿಸಿದೆ.. ನಿನಗೆ ಯಾವಾಗಲೂ ಬಯ್ತಾ ಇದ್ರೂ.. ಸಮಯಕ್ಕೆ ಸರಿಯಾಗಿ ಬರೋಲ್ಲ ಅಂತ.. ಆದರೆ ಇಂದು ನಾ ಸಮಯದ ಬೆನ್ನೇರಿ ನಾನೇ ಕೂತಿದ್ದರಿಂದ ನಿನ್ನ ಸಮಯ ಸರಿಯಾಗಿರಲೇ ಬೇಕು.. ಅಲ್ಲವಾ.. ಅದಕ್ಕೆ ನೀ ನಿಗದಿಯಾದ ಸಮಯಕ್ಕೆ ಮುಂಚೆಯೇ ಬಂದು ಕುಳಿತಿದ್ದೆ.. ಅವರಾರು ನಂಬಲು ಆಗುತ್ತಿರಲಿಲ್ಲ .. ಆದರೆ ನೀ ಬಂದಿದ್ದೆ..

"ಎಲ್ಲೋ ಈ ಶ್ರೀಕಿ ಅವನಿಗೆ ಹುಡುಕ್ತಾ ಇದ್ದೀನಿ.. " ವೆಂಕಟಾಚಲ ಸಂಕಟಾಚಲ ಮೊಬೈಲಿನಲ್ಲಿ ಮಾತಾಡುತ್ತಾ  ಮಾತಾಡುತ್ತಾ ಬರುತ್ತಿದ್ದ.. .. "ಶ್ರೀ ಅಲ್ಲಿ ನೋಡು ವೆಂಕಿ ಬರ್ತಾ ಇದ್ದಾನೆ.. ಹೋಗು ಅವನ ಬೆನ್ನ ಮೇಲೆ ಎರಡು ಬಿಡು ಸರಿಯಾಗಿ.. ಯಾವಾಗಲೂ ನಿನ್ನ ಗೋಳು ಹುಯ್ಕೋತಾ ಇರ್ತಾನೆ.. ಲೇಟ್ ಆಗಿ ಬರ್ತೀಯ ಅಂತ .. ಇವತ್ತು ಅವ್ನೆ ಲೇಟ್.. ಬಿಡು ನೀನು ಅವನಿಗೆ ನಾ ಇದ್ದೀನಿ ನಿನ್ನ  ಜೊತೆ"

ವೆಂಕಿ ತಿರುಗೋದಕ್ಕೂ ಶ್ರೀ ಅವನ ಬೆನ್ನಿಗೆ ಒಂದು ಬಿಡೋಕೂ ಸರಿಯಾಯಿತು.. "ಲೋ ಇಲ್ಲೇ ಇದ್ದಾನೆ ಕಣೋ ಸಿಕ್ದಾ... ಬೇಗ ಬಾರಲೋ.. "

"ಶ್ರೀಕಿ.. ತಗೋ" ವೆಂಕಿ ಕೊಟ್ಟ ರಸ್ಕ್ ಒಮ್ಮೆ ಶ್ರೀ ನನಗೆ ತೋರಿಸಿ ತಿನ್ನಲು ಶುರು ಮಾಡಿದ.. ಕೆ ಆರ್ ಪುರಂ ಸೇತುವೆ ಹತ್ತಿರ ಹೋಗಿ ಇಬ್ಬರೂ ನಿಂತರು..

ಜೊತೆಯಲ್ಲಿ ಮಾತು ಕತೆ... ಜೆ ಎಂ ಮತ್ತು ಶಶಿಗೆ ಒಂದಷ್ಟು ಬೈಗುಳ.. ನೆಡೆದೆ ಇತ್ತು.. ಮಧ್ಯೆ ಮಧ್ಯೆ ಕಾರಣಾಂತರಗಲಿಂದ  ಲೋಕಿಗೂ ಅರ್ಚನೆ ನೆಡೆಯಿತು..

"ಬಿಡು ಶ್ರೀ.. ಬಿಡು ವೆಂಕಿ.. ಆ ಲೋಕಿಗೆ ಯಾವಾಗಲೂ ಏನಾದರೂ ತರಲೆ ಕೆಲಸ ಇದ್ದೆ ಇರುತ್ತೆ.. ನೀವೆಲ್ಲರೂ ಹೋಗಿ ಬನ್ನಿ.. "

"ಫೇಮ್ ಫೇಮ್ .. .. ಇದೇನಾ ಶಶಿಯ ಹೊಸ ಕಾರು ಶ್ರೀ"

"ಹೌದು ಟೀ.. ಹೋದ ತಿಂಗಳು  ತಗೊಂಡ.. ಚೆನ್ನಾಗಿದೆ ಆಲ್ವಾ ಟೀ"

"ನನಗಿಷ್ಟವಾದ ಬಣ್ಣ.. ಶ್ರೀ ನಿನಗೂ ಇಷ್ಟ ಆಲ್ವಾ.. "

"ಹೌದು ಟೀ.. "

ಶಶಿಯ ಹೊಸ ಕಾರು ಬಂತು.. ಶ್ರೀ ತುಂಬಾ ಚೆನ್ನಾಗಿದೆ ಅಲ್ವ.. ಶಶಿ ಒಳ್ಳೆಯ ಕಾರು.. ಸಕ್ಕತಾಗಿದ್ದೆ.. ಜೆ ಎಂ ಚೆನ್ನಾಗಿದೀಯ.. ಹೇಗಿತ್ತು ಇಂಡಿಯಾದ ಪ್ರವಾಸ... ಸ್ವಲ್ಪ ಸಣ್ಣಗಾಗಿದ್ದೀಯ.. ಸಮತಾ ಹೇಗಿದ್ದಾಳೆ .. ಧನುಷ್ ಸ್ಕೂಲ್ ಶುರು ಆಯ್ತು ಆಲ್ವಾ.. ಶಶಿ ಪ್ರತಿಭಾ ಹೇಗಿದ್ದಾಳೆ.. ಅವಳ ಹತ್ತಿರ ಮಾತಾಡೋಕೆ ಆಗ್ತಾ ಇಲ್ಲ.. ಒಮ್ಮೆ ಮಾತಾಡುವೆ.. ವೆಂಕಿ ಸೌಮ್ಯ ಹೇಗಿದ್ದಾಳೆ..ಸುಖಿ ಹೇಗಿದ್ದಾಳೆ.. ಸೌಮ್ಯ ಅವರ ಅಪ್ಪ ಹುಷಾರಾಗಿದ್ದಾರಾ.. ಸುಚಿ ಪಾಪು ನಾಮಕರಣ ಆಯ್ತಾ?"

"ಯೇ ಟೀ.. ಒಂದೇ ಸಮನೇ ಅಷ್ಟು ಪ್ರಶ್ನೆ ಕೇಳಿದರೆ ಅವರೆಲ್ಲ ಹೇಗೆ ಉತ್ತರ ಕೊಡುತ್ತಾರೆ .. ನಿಧಾನವಾಗಿ ಒಂದೊಂದೇ ಪ್ರಶ್ನೆ ಒಬ್ಬೊಬ್ಬರಿಗೆ ಕೇಳು"

"ಲೋ ಶ್ರೀಕಿ ನೀ ಸ್ವಲ್ಪ.. @#$#$#@$@ .. ನೀನು  " ವೆಂಕಿ ಮಾಮೂಲಿನಂತೆ ಶ್ರೀಕಿಗೆ ಒಂದು ಬಿಟ್ಟಾ..

ಶಶಿ, ಜೆ ಎಂ, ವೆಂಕಿ ನಾ ಕೊಟ್ಟ ಪ್ರಶ್ನೆ ಪತ್ರಿಕೆಗೆ ಉತ್ತರಿಸಿದರು...

ದಾರಿಯುದ್ದಕ್ಕೂ ಈ ನಾಲ್ವರು ಕಪಿಗಳಾಗಿದ್ದರು.. ಬರಿ ತರಲೆ ತರಲೆ.. ನನಗೂ ಇವರ ಮಾತುಗಳನ್ನು ಕೇಳುವ ಅವಕಾಶ ಸಿಕ್ಕಿತು... ಮೊದಲೇ ಕಪಿಗಳಾಗಿದ್ದ ಈ ನಾಲ್ಕು ಮಂದಿ.. ಯಾರಂಕುಶವಿಲ್ಲದಿದ್ದರೂ ಎಲ್ಲೇ ಮೀರದೆ ಆಡುತ್ತಿದ್ದ ಮಾತುಗಳು  ಸರಾಗವಾಗಿ ಸಾಗುತಿತ್ತು..

"ತಿರುಪತಿ...  ಯಾವಾಗಲೂ ನಮ್ಮ ಸಿದ್ಧತೆಗಳು ಏನೇ ಇದ್ದರೂ.. ಅಲ್ಲಿ ತಿರುಪತಿ ತಿಮ್ಮಪ್ಪನ ಉದ್ದೇಶ.. ಅವರ ರೂಪು ರೇಷೆಗಳು ಅವರ ಯೋಜನೆಗಳು ಯಾವಾಗಲೂ ಭಿನ್ನ.. ನಾವು ಊಹಿಸಲಾರದ ತಿರುವುಗಳು ಸಿಗುತ್ತವೆ.. ಅದೇ ತಿರುಪತಿ ವಿಶೇಷ.. ಆಲ್ವಾ ಶ್ರೀ.. "

ಹೌದು ಟೀ.. ನೀನೆ ನೋಡಿದ ಹಾಗೆ ನಿನ್ನ ಜೊತೆಯ ಮೂರು ತಿರುಪತಿಗೆ ಪಯಣಗಳು ಅನುಭವ ಕೊಟ್ಟಿದೆ.. ಹಾಗೆಯೇ ಕಳೆದ ವರ್ಷದ ೭೦೦ ಕ್ಷಣಗಳು ತಿಮ್ಮಪ್ಪನ ಜೊತೆಯಲ್ಲಿ ಮಾತುಕತೆ ವಿಶೇಷವಾಗಿತ್ತು.. ಸರಿ ಮುಂದುವರೆಸು ಟೀ"

"ನಾ ನಿಮ್ಮೆಲ್ಲರಿಗಿಂತ ತಿಮ್ಮಪ್ಪನ ಜೊತೆ ಬೇಗ ಹೋಗಿದ್ದರಿಂದ .. ಅವನ ಜೊತೆಯಲ್ಲಿ ೭೦೦ ಕ್ಷಣಗಳು ಮಾತುಕತೆ ನಿನಗೆ ಹೇಳ್ತಾ ಇರ್ತೀನಿ .. ಜೊತೆಯಲ್ಲಿ ನಿಮ್ಮೆಲ್ಲರ ಪ್ರವಾಸದ ವಿವರಗಳನ್ನು ಹೇಳ್ತಾ ಇರ್ತೀನಿ ಆಗಬಹುದೇ ಶ್ರೀ?"

"ನಿನ್ನ ಇಷ್ಟ ಟೀ.. ಈ ಲೇಖನ ನೀನೆ ಹೇಳಿದಂಗೆ ಬರೀತಾ ಇರ್ತೀನಿ ಅಷ್ಟೇ ನನ್ನ ಕೆಲಸ ಮುಂದುವರೆಸು"

"ನನಗೆ ವೆಂಕಟೇಶ್ವರನ ಹತ್ತಿರ ಮಾತಾಡಬೇಕಿತ್ತು .. ಕೈಮುಗಿದು ಪ್ರಾರ್ಥಿಸಿದೆ .. ಶ್ರೀ ಓಂ ನಮೋ ವೆಂಕಟೇಶಾಯ ನಮಃ.. ಓಂ ನಮೋ ನಾರಾಯಣಾಯ ನಮಃ.. "

ದೇದೀಪ್ಯಮಾನವಾದ ಜ್ಯೋತಿ ಕಾಣಿಸಿತು .. ಒಂದು ಕೈಯಲ್ಲಿ ಆಶೀರ್ವಾದದ  ಕಮಲದ ಹೂವು.. ಇನ್ನೊಂದು ಕೈಯಲ್ಲಿ ಶಂಖ.. ಒಂದು ವಿಭಿನ್ನವಾದ ವಸ್ತ್ರ ತೊಟ್ಟ ಸುಂದರ ಆಕೃತಿ ಕಾಣಿಸಿತು..

ಮೆಲ್ಲನೆ ಮಾತುಗಳು ಕೇಳಿಸಿತು " ಹೇಗಿದ್ದೀಯಾ.. ಏನು ಸಮಾಚಾರ .. ನನ್ನ ನೆನಪಿಸಿಕೊಂಡ ಕಾರಣವೇನು.. ನಿನಗೆ ೭೦೦ ಕ್ಷಣಗಳನ್ನು ಕೊಟ್ಟಿದ್ದೇನೆ.. ನಿನ್ನ ಮಾತು ಶುರುಮಾಡು.. "

ಮೆಲ್ಲನೆ ಕಣ್ಣುಗಳನ್ನು ತೆರೆದು ನಾ ಕೇಳಿದ ಮೊದಲ ಪ್ರಶ್ನೆ

"ಇಲ್ಲಿಗೆ ಬರುವ ಭಕ್ತಾದಿಗಳು ಏನೇನೂ ಯೋಜನೆ ಹಾಕಿಕೊಂಡು ಬರುತ್ತಾರೆ .. ಆದರೆ ನಿನ್ನ ಯೋಜನೆಗಳಿಗೆ ಅವರು ತಲೆಬಾಗಲೇ ಬೇಕಾಗುತ್ತದೆ.. ಆದರೆ ನಿನ್ನ ಯೋಜನೆಗಳು ಯಾವಾಗಲೂ ಅವರಿಗೆ ನೇರವಾಗಿರುತ್ತದೆ.. ಇದು ಹೇಗೆ?"

"ನೋಡಮ್ಮ.. ಭಕ್ತಾದಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಯೋಜನೆಗಳನ್ನು ಸಿದ್ಧಮಾಡಿಕೊಂಡು ಬರುತ್ತಾರೆ.. ಆದರೆ ನಾ ಇಲ್ಲಿ ಬರುವ ಎಲ್ಲಾ ಭಕ್ತಾದಿಗಳ ಬಗ್ಗೆ ಯೋಚನೆ ಮಾಡಬೇಕಲ್ಲ.. ಹಾಗಾಗಿ ಎಲ್ಲರಿಗೂ ಒಳಿತಾಗುವಂತೆ ನಾ ಯೋಜಿಸಿ ದರುಶನ ನೀಡುತ್ತೇನೆ.... ಕಡೆಯಲ್ಲಿ ಒಂದೇ ಮಾತು ಎಂದರೆ.. ಸರ್ವೇ ಜನೋ ಸುಖಿನೋ ಭವಂತು.. ಇದೆ ನನ್ನ ಮಂತ್ರ"

ಅರೆ ಶ್ರೀ ವೆಂಕಿ ಶಶಿ ಜೆಎಂ ಬಂದರು.. ಕಾರನ್ನು ನಿಲ್ದಾಣದಲ್ಲಿ ಬಿಟ್ಟು.. ಹೆಜ್ಜೆ ಹಾಕುತ್ತಿದ್ದಾರೆ.. `೧೨.೩೦ ರಾತ್ರಿ.. ಆಗಲೇ ಮೆಟ್ಟಿಲುಗಳ ಬಳಿ ಜನಸಾಗರ ಸೇರಿದೆ.. ಅಯ್ಯೋ ಇದೇನಿದು.. ಒಂದು ದಿನಕ್ಕೆ ಬರಿ ೧೪೦೦೦ ಯಾತ್ರಿಗಳಿಗೆ ಮಾತ್ರ ಅವಕಾಶ ಅಂತ ಫಲಕ ಹಾಕಿದ್ದಾರೆ .. ಓಹ್ ಇವರಿಗೆ ದರುಶನ ಹೇಗಪ್ಪಾ ಸಾಧ್ಯ.. ಫಲಕದಲ್ಲಿದ್ದ ಸಂಖ್ಯೆಗಳು ಬದಲಾಗುತ್ತಲೇಇದ್ದವು .. ಇತ್ತ ಕಡೆ "ಗೋವಿಂದ ಗೋವಿಂದ" ಅಂತ ಭಕ್ತಾದಿಗಳು ಕೂಗುತ್ತಲೇ ಇದ್ದಾರೆ..

ಪಾಪ ಶ್ರೀ ಸುಸ್ತಾಗುತ್ತಿದ್ದಾನೆ.. ವೆಂಕಿ ಓಟದ ಸ್ಪರ್ಧೆಯಂತೆ ಓಡೋಡಿ ಹೋಗುತ್ತಿದ್ದಾನೆ.. ಶಶಿ ಮತ್ತು ಜೆಎಂ ಶ್ರೀಕಿಯನ್ನು ಮಗುವಿನ ತರಹ ನೋಡಿಕೊಂಡು .. ಅವನಿಗಾಗಿ ಕಾಯುತ್ತಾ ಜೊತೆಯಲ್ಲಿ ಕರೆದೊಯ್ಯಲು ನಿಲ್ಲುತ್ತಿದ್ದರು...

ಗಾಳಿಗೋಪುರದ ತನಕ ಇದೆ ಮುಂದುವರೆಯಿತು....  ಗಾಳಿಗೋಪುರದ ಹತ್ತಿರ ಕಾಯುತ್ತ ನಿಂತಿದ್ದ ವೆಂಕಿಗೆ ಎಲ್ಲರೂ ಒಂದು ಬಿಟ್ಟು.. ತಕ್ಷಣ ಕೊಟ್ಟಾ ದರುಶನದ ದಿವ್ಯ ದರ್ಶನದ ಚೀಟಿಗೆ  ದರುಶನದ ಸಮಯ ಲಗತ್ತಿಸಿಕೊಂಡು ಮುಂದುವರೆದರು...

ಶ್ರೀಗೆ.. ಹಿಂದಿನ ಯಾತ್ರೆಯ ನೆನಪು ಒತ್ತರಿಸಿಬರತೊಡಗಿತ್ತು.. ಕಣ್ಣೀರು ಬರುವುದು ಹಿಂದಕ್ಕೆ ಹೋಗುವುದು ನೆಡೆಯುತ್ತಲೇ ಇತ್ತು.. ನಾನು ಶ್ರೀಗೆ ಇಲ್ಲಾ ನಾ ಬರೋಕೆ ಆಗಲ್ಲ ಅಂದಿದ್ದರು.. ಅವನೇ ಹುರಿದುಂಬಿಸಿ.. ಉತ್ಸಾಹ ತುಂಬುತ್ತಾ ನನ್ನನ್ನು ಮೆಟ್ಟಿಲುಗಳನ್ನು ಹತ್ತಿಸಿ ಕರೆದೊಯ್ದಿದ್ದ.. ಕೆಲವೊಮ್ಮೆ ನಾ ಕೂಗಾಡಿದ್ದು ಉಂಟು. ನಾ ಬರೋಕೆ ಆಗಲ್ಲ ಅಂತ.. ಆದರೆ ಶಾಂತ ಸ್ವಭಾವದಿಂದ ನನ್ನ ನಗಿಸಿ, ಮುಂದಕ್ಕೆ ಕರೆದೊಯ್ದಿದ್ದ... ಈ ನೆನಪುಗಳು ಅವನ ಕಣ್ಣುಗಳನ್ನು ಮಂಜಾಗಿಸಿತ್ತು..

ಶ್ರೀ ತನ್ನ ಮೊಬೈಲ್ನಲ್ಲಿ ಏನೋ ದಾಖಲಿಸುತ್ತಿದ್ದ... ವೆಂಕಿ ..ಲೋ ಶ್ರೀಕಿ ಬಾರೋ ಬೇಗ ಅಂದಾಗ.. ಶಶಿ ಹೇಳಿದ್ದು ಖುಷಿಕೊಟ್ಟಿತು .. ಅವನಿಗೆ ಬ್ಲಾಗ್ ಬರೆಯುವ ಹುಚ್ಚು ಬಂದಿದೆ.. ಆ ಫ್ಲೋ ಮಿಸ್ ಆಗುತ್ತೆ ಅಂತ.. ಬರ್ತಾನೆ ನಿಧಾನವಾಗಿ ಹೋಗುತ್ತಿರೋಣ ಅಂದ..

ಇಷ್ಟು ಅದ್ಭುತವಾಗಿ ಅರ್ಥ ಮಾಡಿಕೊಂಡಿದ್ದಾರೆ ಶ್ರೀಯನ್ನು ಎಂದು ಖುಷಿಯಾಯಿತು..

"ಕಣ್ಣುಗಳಲ್ಲಿ ನೆನಪಿನ ಬಲೂನು
ನೀರಿನಿಂದ ತುಂಬಿತ್ತು
ಇನ್ನೇನು ಒಡೆದು ಬಲೂನಿನ ನೀರು
ಹೊರಗೆ ಬರಬೇಕು..
ಕಾಣದ ಕೈ ಅದನ್ನು ತಡೆದು ಹೇಳಿತು
ಶ್ರೀ ನಾ ಇರುವೇ ನಿನ್ನ ಜೊತೆ
ಕಣ್ಣಿನ ಬಲೂನು ಬರಿ ಆನಂದ ಭಾಷ್ಪ ಸುರಿಸಬೇಕು"

ಶ್ರೀ ನಿನಗೆ ನನ್ನ ಅಪ್ಪುಗೆ ಬೇಕು ಅನ್ನಿಸಿತ್ತು..ಅಲ್ಲವೇ ..ಇಗೋ ಒಂದು ಅಪ್ಪುಗೆ ನಿನಗೆ..

ಶ್ರೀಯ ಕಣ್ಣುಗಳಲ್ಲಿ ಆ ಹನಿಗಳು ಹಾಗೆಯೇ ಇಂಗಿ ಹೋಯಿತು ..

ಓಡುತ್ತಾ ಹೋಗಿ ಜೆಎಂ.. ಶಶಿ ಮತ್ತು ವೆಂಕಿಯನ್ನು ಶ್ರೀ ಸೇರಿದ..

ಏನಾಯಿತೋ ಅಂತ ವೆಂಕಿ ಕೂಗಿದ..

ಏನೂ ಇಲ್ಲ ಕಣೋ..

ಕಾಫಿ ಕುಡಿಯುತ್ತ ನಿಂತಿದ್ದರು.. ಶ್ರೀ ಕಣ್ಣುಗಳಲ್ಲಿ ಮತ್ತೆ ಆಣೆಕಟ್ಟು ಒಡೆದು ಹೋಗುವಂತೆ ಜಲ ಪ್ರವಾಹ ಬರುತ್ತಲಿತ್ತು... ಮೆಲ್ಲಗೆ ಮುಖ ಆ ಕಡೆಮಾಡಿಕೊಂಡು ಅವರಿಗೆ ಕಾಣದಂತೆ ತನ್ನ ಕರವಸ್ತ್ರದಿಂದ ತಡೆದು ಮತ್ತೆ ತನ್ನ ಕೀಟಲೆ ಮಾತುಗಳಿಗೆ ಶರಣಾದ..

ಅಲ್ಲಿಂದ ಮುಂದೆ.. ಸರ ಸರ ನೆಡೆಯಲು ಶುರು ಮಾಡಿದರು..

"ನಮೋ ವೆಂಕಟೇಶಾಯ ನಮಃ.. ಪಾಪ ಪುಣ್ಯ ಅಂತೆಲ್ಲಾ ಹೇಳುತ್ತಾರಲ್ಲ.. ಇವರೆಲ್ಲರಿಗಿಂತ ಮುಂಚೆ ಬಂದು ದರುಶನಕ್ಕೆ ನಿಂತವರಿಗೆ ತಡವಾಗಿತ್ತು.. ಇವರ ನಂತರ ಬಂದು ನಿಂತವರಿಗೆ ದರುಶನ ಸ್ವಲ್ಪ ಬೇಗ ಆಯಿತು.. ಇದರ ಮಧ್ಯೆ ಅನೇಕ ಮಂದಿ ನಾವು ನಿಂತಿದ್ದ ಸಾಲಿನ ಪಕ್ಕದಿಂದ ಹೊರಗೆ ಹೋಗುತ್ತಿದ್ದರು.. ಇದೆಲ್ಲ ಏನೂ ಅರ್ಥವಾಗಲಿಲ್ಲ?"

"ನಾ ಪ್ರತಿಯೊಬ್ಬರಿಗೂ ದರುಶನ ಕೊಡಬೇಕೆಂದು ಸಮಯ ಕೊಟ್ಟಿರುತ್ತೇನೆ.. ಅದಕ್ಕೆ ಸರಿಯಾದ ಸಮಯಕ್ಕೆ ಬಂದು ಸರತಿ ಸಾಲಿನಲ್ಲಿ ನಿಲ್ಲಬೇಕು.. ಆಗ ಬೇಡದ ಒತ್ತಡ ನಿವಾರಣೆಯಾಗುತ್ತದೆ.. ಹೇಗೂ ಸಮಯಕೊಟ್ಟಿದ್ದಾರೆ ಅಂತ ಆರಾಮಾಗಿ ಹೋದಾಗ ಅವರಿಗೆ ದರುಶನ ತಡವಾಗುತ್ತದೆ.. ಇನ್ನೂ ಕೆಲವರೂ ತುಂಬಾ ಬುದ್ದಿವಂತರಾಗಿ ಅಗತ್ಯಕ್ಕಿಂತ ಮುಂಚೆಯೇ ಬಂದು ನಿಲ್ಲುತ್ತಾರೆ... ಆಗಲೂ ಅವರು ಹೆಚ್ಚು ಹೊತ್ತು ಕಾಯಬೇಕಾಗುತ್ತದೆ.. ಸಮಯಕ್ಕೆ ನಾವು ಕಾಯಬೇಕೆ ಹೊರತು ಸಮಯ ನಮಗೆ ಕಾಯುವುದಿಲ್ಲ  ಅಲ್ಲವೇ.. ಇನ್ನೂ ಕೆಲವರಿಗೆ ನಿಗದಿಯಾದ ಸಮಯಕ್ಕೆ ಕೊಂಚ ತಡವಾಗಿ ಬಂದು.. ಅವರಿಗಿಂತ ಮುಂಚೆ ನಿಂತಿದ್ದವರಿಗಿಂತ ಮುಂಚೆ ದರುಶನ ಆಗುತ್ತೆ ಅದಕ್ಕೆ ಕಾರಣ ಆಮೆ ಮತ್ತು ಮೊಲದ ಓಟದ ಬಗ್ಗೆ ನಿನಗೆ ಗೊತ್ತಿದೆ ಅಲ್ಲವೇ.. ಆ ರೀತಿಯಲ್ಲಿ ನೆಡೆಯುತ್ತದೆ.. ಸಮಯದ ಜೊತೆಯಲ್ಲಿ ಹೆಜ್ಜೆ ಹಾಕಿದವರಿಗೆ ಯಶಸ್ಸು  ಕಟ್ಟಿಟ್ಟ ಬುತ್ತಿ.."

ಓಹ್ ಹೌದು.. ಶ್ರೀ ಯಾವಾಗಲೂ ಇಷ್ಟ ಪಡುವ ರಾಜಕುಮಾರ್ ಚಿತ್ರದ ಒಂದು ಹಾಡು
"If you come today, its too early
If you come tomorrow, its too late
You pick the time
tick tick tick tick tick tick"

"ನಿಜ ಕಣಮ್ಮ.. ನಿನ್ನ ಮಾತು ನಿಜ"

ಶ್ರೀ ಬೆವರಿನ ಮುದ್ದೆಯಾಗಿದ್ದ.. ಜೊತೆಯಲ್ಲಿ ಮಿಕ್ಕವರು ಕೂಡ.. ಮೆಟ್ಟಿಲ ಮೇಲೆ ೩೫೫೦ ಅಂತ ತೋರಿದಾಗ ಎಲ್ಲರೂ ಉಫ್ ಎಂದು ನಿಟ್ಟುಸಿರು ಬಿಟ್ಟು.. ಅಲ್ಲಿ ಉರಿಯುತ್ತಿದ್ದ ಕರ್ಪೂರದ ರಾಶಿಗೆ ಕೈಮುಗಿದು ತಮ್ಮ ತಮ್ಮ ಪ್ರಾರ್ಥನೆ ಮಾಡಿಕೊಂಡರು..

ಅಲ್ಲಿಯೇ ಬಸ್ಸು ಬಂದಿತು.. ಬಸ್ಸಿನಲ್ಲಿ ತುಂಬಾ ಜಾಗವಿರಲಿಲ್ಲ..ವೆಂಕಿ ಮತ್ತು ಜೆಎಂ ಗೆ ಜಾಗ ಸಿಕ್ಕಿತು. ಶಶಿ ಮತ್ತು ಶ್ರೀ ಇಬ್ಬರೂ ಬಸ್ಸಿನ ಮೆಟ್ಟಿಲುಗಳ ಮೇಲೆ ಕೂತರು.. ಎಲ್ಲರೂ ಅಲ್ಲಿಯೇ ಕುಳಿತುಕೊಳ್ಳಬೇಕು ಎಂದು ಆಸೆಯಾಯಿತು.. ಸರಿ ಜೆಎಂ ಮತ್ತು ವೆಂಕಿ ಕೂಡ ಅಲ್ಲಿಗೆ ಬಂದರು..

ಶ್ರೀ ಹೇಳಿದ ಬಹಳ ವರ್ಷಗಳ ನಂತರ ಈ ರೀತಿಯ ಪಯಣ ಖುಷಿ ಕೊಡುತ್ತದೆ.. ರಾಮನಗರಕ್ಕೆ ಹೋದಾಗ ಅನೇಕ ಬಾರಿ ಹೀಗೆ ಬಂದಿದ್ದೆವು ಅಂತ ವೆಂಕಿ ಕೂಡ ಹೇಳಿದ.. ಮಧ್ಯೆ ಮಧ್ಯೆ ತೂಕಡಿಕೆ.. ಆಯಾಸವಾಗಿತ್ತು.. ೪ ಘಂಟೆಗಳಲ್ಲಿ ಬೆಟ್ಟ ಹತ್ತಿದ್ದ ಇವರಿಗೆಲ್ಲ.. ಯಾವಾಗ ಹೋಟೆಲ್ ತಲುಪುತ್ತೇವೋ ಎನ್ನುವ ತವಕವಿತ್ತು .. ಸ್ವಲ್ಪ ತೂಕಡಿಕೆ.. ಸ್ವಲ್ಪ ಎಚ್ಚರ.. ಸಾಗಿತ್ತು ಪಯಣ...

ಅಲಿಪಿರಿ ಅಲಿಪಿರಿ ಅಂತ ಡ್ರೈವರ್ ಕೂಗಿದಾಗ ಅರೆ ಬರೇ ನಿದ್ದೆಯಲ್ಲಿಯೇ ಇಳಿದು ಕಾರಿನತ್ತ ಹೆಜ್ಜೆ ಹಾಕಿದರು..

ಹೋಟೆಲಿಗೆ ಬಂದು.. ಉಫ್ ಅಂತ ಕಾಲು ಚಾಚಿಕೊಂಡು ಮಲಗಿದ್ದು ಗೊತ್ತು ಅಷ್ಟೇ.. ಜೆಎಂ ೬.೩೦ ಕ್ಕೆ ಅಲಾರಾಂ ಇಟ್ಟುಕೊಂಡಿದ್ದ.. ಶ್ರೀ ತನ್ನ ಉರಿಯುತ್ತಿದ್ದ ಕಣ್ಣುಗಳಿಗೆ ಡ್ರಾಪ್ಸ್ ಹಾಕಿಕೊಂಡು ಮಲಗಿದ.. ಶಶಿ ಆಗಲೇ ನಿದ್ರಾದೇವಿಗೆ ಶರಣಾಗಿದ್ದ.. ವೆಂಕಿ ಅವನ ಜೊತೆ ಹಠಕ್ಕೆ ಬಿದ್ದು ನಿದ್ದೆಗೆ ಜಾರಿದ್ದ..

ಅಲಾರಾಂ ಹೊಡೆದ ತಕ್ಷಣ ಸರತಿಯಂತೆ ಜೆಎಂ, ಶ್ರೀ, ಶಶಿ, ವೆಂಕಿ ಎದ್ದು ಸ್ನಾನ ಮಾಡಿ ಸಿದ್ಧವಾದರು.. ಜೆಎಂ ಅಷ್ಟೊತ್ತಿಗೆ ಹೋಟೆಲಿನಲ್ಲಿ ಬೆಳಗಿನ ಉಪಹಾರ ಸಿಗುತ್ತಾ ಅಂತ ಕೇಳಿಕೊಂಡು ಬಂದ ಅಷ್ಟರಲ್ಲಿ ಶಶಿ ತನ್ನ ಮಾವ ಅವರಿಗೆ ಕರೆ ಮಾಡಿ ಬೇರೆ ಕಡೆ ಹೋಗೋಣ ಅಂತ ನಿರ್ಧರಿಸಿದ..

ಉಪಹಾರವನ್ನು ಊಟದ ರೀತಿಯಲ್ಲಿ ಮಾಡಿದೆವು .. ಕೊಟ್ಟ ಹಣಕ್ಕೆ ಮೋಸವಾಗಬಾರದು ಮತ್ತೆ ದರುಶನ ಎಷ್ಟು ಹೊತ್ತು ಆಗುತ್ತೋ.. ಎನ್ನುವ ಆತಂಕ ಇದ್ದದರಿಂದ ಹೊಟ್ಟೆಗೆ ಸರಿಯಾಗಿ ಆಹಾರ ತುಂಬಿಕೊಳ್ಳಲು ಸಿದ್ಧರಾಗಿದ್ದವುರು ...  ಹೊಟೇಲಿಂದ ಹೊರಗೆ ಬಂದಾಗ ಹೆಬ್ಬಾವಿನ ತರಹ ಆಗಿದ್ದರು ..

ದರುಶನಕ್ಕೆ ನಿಗದಿಯಾದ ಸಮಯಕ್ಕೆ ನಿಂತರು.. .. ಸರತಿ ಸಾಲು ತುಸು ವೇಗದಿಂದ ಸಾಗಿದ್ದರಿಂದ.. ಹತ್ತಕ್ಕೆ ನಿಂತವರು ಮುಂದಿನ ನಾಲ್ಕು ಘಂಟೆಗಳಲ್ಲಿ ಹೊರಗೆ ಬಂದಿದ್ದರು.. ದಿವ್ಯ ದರ್ಶನ ನಿಜವಾಗಿಯೂ ದಿವ್ಯವಾಗಿತ್ತು..

ತಮ್ಮ ತಮ್ಮ ಪ್ರಾರ್ಥನೆಗಳು ಸಲ್ಲಿಸಿದ ಮೇಲೆ.. ಎಲ್ಲರ ಅಭಿಮತ ಒಂದೇ ಆಗಿತ್ತು... ಬೆಟ್ಟದ ಕೆಳಗೆ ಹೋಗಿ ಊಟ ಮಾಡುವುದು.. ಆದರೆ ಬೆಟ್ಟದ ಬುಡಕ್ಕೆ ಬಂದಾಗ ಊಟ ಮುಂದಕ್ಕೆ ಹಾಕಬಹುದು ಎನ್ನಿಸಿತ್ತು.. ಯಾಕೆಂದರೆ ಹೆಬ್ಬಾವಿನ ಮದ ಇನ್ನೂ ಇಳಿದಿರಲಿಲ್ಲ.. ಚಿತ್ತೂರಿನ ತನಕ ತಲುಪಿ ಏನಾದರೂ ಲಘು ಉಪಹಾರ  ಮಾಡೋಣ ಅನ್ನಿಸಿ... ಶಶಿ ಕಾರಿನ ಚುಕ್ಕಾಣಿ ಹಿಡಿಡಿದ್ದ..

ಲಘು ಉಪಹಾರ ಮಾಡುತ್ತಾ ಕೂತಿದ್ದಾಗ ಎಲ್ಲರೂ ಮನೆಗೆ ಕರೆ ಮಾಡಿ ಎಷ್ಟು ಹೊತ್ತಿಗೆ ತಲುಪಬಹುದು ಎಂದು ಹೇಳಿದರು.. ಇಲ್ಲಿನ ಮುಂದಕ್ಕೆ ವೆಂಕಿ ಕಾರಿನ ಚಾಲಕನಾಗಿದ್ದ .. ಹೊಸ ಕಾರು ಹೊಸ ಉತ್ಸಾಹ.. ಆರಾಮಾಗಿತ್ತು..

"ವೆಂಕಟೇಶ್ವರ.. ಈ ನಾಲ್ವರು ಅದ್ಭುತ ಹುಡುಗರ ಪಯಣ ಸುಖಕರವಾಗಿತ್ತು.. ಅವರ ಯೋಜನೆಯಂತೆ ತುಸು ಬದಲಾವಣೆ ಬಿಟ್ಟರೆ..ಪಯಣ, ದರುಶನ, ಊಟ, ಉಪಹಾರ ಅಂದುಕೊಂಡ ರೀತಿಯಲ್ಲಿಯೇ ಆಗಿತ್ತು.. ಎಲ್ಲರಿಗೂ ಇದೆ ಆಶ್ಚರ್ಯ ಹೇಗೆ ಇದು ಎಂದು.. "

"ನೋಡ್ರಪ್ಪಾ.. ನಿಮ್ಮ ಯೋಜನೆ ತಪ್ಪು ನನ್ನದು ಸರಿ ಎನ್ನುವ ತತ್ವವೂ ನನ್ನದಲ್ಲ.. ನೀವು ಸರಿ ನಾನೇ ನಿಮಗೆ ನಿಮ್ಮ ಯೋಜನೆಗಳನ್ನು ಬದಲಿಸುತ್ತೇನೆ ಎನ್ನುವ ವಾದವೂ ಅಲ್ಲ.. ನೀವೆಲ್ಲ ಶ್ರದ್ದೆ ಭಕ್ತಿಗಳಿಂದ ನನ್ನ ನೋಡಲು ಬರುತ್ತೀರಾ.. ಶಶಿ ತನ್ನ ಉಗ್ರ ಸ್ವರೂಪ ಬಿಟ್ಟಿದ್ದ.. ವೆಂಕಿಯ ತರಲೆಗಳು ಕಡಿಮೆ ಇದ್ದವು.. ಯಾವಾಗಲೂ ಕಡಿಮೆ ಮಾತಾಡುವ ಜೆಎಂ ತನ್ನ ಇಂದಿನ ಅರೆ ಮೌನವನ್ನು ಕಾಪಾಡಿಕೊಂಡಿದ್ದ.. ಇನ್ನೂ ಶ್ರೀ ಬಗ್ಗೆ ಏನೂ ಹೇಳಲಿ.. ಅವನ ಬ್ಲಾಗ್ ಲೋಕವನ್ನು ನಾ ನೋಡಿದ್ದೇನೆ.. ಎಲ್ಲರ ಮನೋಸ್ಥೈರ್ಯ ಇಷ್ಟು ಬಲವಾಗಿದ್ದಾಗ ದೈವ ಸಹಾಯ ಇದ್ದೆ ಇರುತ್ತದೆ.. ನೋಡು ಅವರೆಲ್ಲರೂ ಸರಿ ಸುಮಾರು ರಾತ್ರಿ ೧೧.೩೦ ಹೊತ್ತಿಗೆ ತಮ್ಮ ತಮ್ಮ ಮನೆ ಸೇರಿಸುತ್ತೇನೆ ಎಂದು ಅಂದುಕೊಂಡಿದ್ದೆ.. ಸರಿಯಾಗಿ ಎಲ್ಲರೂ ಅವರ ಮನೆಗೆ ಸೇರಿದ್ದಾರೆ.. ಸರಿ ನಾ.. ನೋಡು ಇನ್ನೂ ೩೦ ಕ್ಷಣಗಳು ಬಾಕಿ ಇವೆ. ಏನಾದರೂ ಹೇಳುವುದಿದ್ದರೆ ಹೇಳಿಬಿಡು"

"ಓಂ ನಮೋ ನಾರಾಯಣಾಯ ನಮಃ.. ಶ್ರೀ ಗೆ ಮತ್ತು ಶೀತಲ್ ಇಷ್ಟ ಪಡುವ ಹಾಡು ನಮ್ಮ ಮಕ್ಕಳು ಚಿತ್ರದ "ನಿನ್ನೊಲುಮೆ ನಮಗಿರಲಿ ತಂದೆ.. ಕೈಹಿಡಿದು ನೀ ನೆಡೆಸು ಮುಂದೆ" ಇಷ್ಟೇ ನಾ ಹೇಳುವುದು.. ನಿನ್ನ ಅನುಗ್ರಹವಿರುವ ಸದನ ಎಂದೂ ಸಂತಸದಲ್ಲಿರಲಿ.. "

"ತಥಾಸ್ತು.. ಮನೋಬಲ ಸಿದ್ಧಿರಸ್ತು.. ಇಷ್ಟಾರ್ಥ ಸಿದ್ಧಿರಸ್ತು.. "

ದೇದೀಪ್ಯವಾದ ಬೆಳಕು ಸಣ್ಣದಾಗುತ್ತಾ ಟೀ ಒಳಗೆ ಸೇರಿಕೊಂಡಿತು..

                                                                          ******
ಶ್ರೀ ಹೇಗಿತ್ತು.. ಚೆನ್ನಾಗಿತ್ತಾ.. ನನ್ನ ಮನಸ್ಸಿಗೆ ಬಂದ ಹಾಗೆ ಹೇಳಿದೆ.. ಓದುಗರಿಗೆ ಇಷ್ಟವಾಗುತ್ತೋ ಇಲ್ಲವೋ ಗೊತ್ತಿಲ್ಲ.. ಆದರೆ ನನ್ನ ಹಳೆಯ ನೆನಪುಗಳು ಹಾಗೆಯೇ ಕಣ್ಣ ಮುಂದೆ ಬಂದು ನನಗೆ ತೋಚಿದ ರೀತಿಯಲ್ಲಿ ಹೇಳಿದೆ..

ಪ್ರೀತಿಯ ಶ್ರೀ ಲೇಖನದ ಓದುಗರೇ.. ಇದು ಶ್ರೀ ಶೈಲಿಯಲ್ಲ.. ನಾ ಹೇಳಿದೆ...  ಅವನು ಬರೆಡಿದ್ದಾನೆ.. ನಿಮಗೆ ಖುಷಿ ಅನಿಸಿದರೆ ನಿಮಗೆ ಅನಿಸಿದ್ದು ಹೇಳಿ (ಸರಿ ತಪ್ಪು ಏನಿದ್ದರೂ ಸರಿ).. ನನ್ನ ಶ್ರೀ ನಿಮ್ಮೆಲ್ಲರ ಜೊತೆಯಲ್ಲಿ ಸದಾ ಇರುತ್ತಾನೆ .. ಅವನ ಜೊತೆಯಲ್ಲಿ ನಾ ಇರುತ್ತೇನೆ.. ಓಕೆ ನಾ..

ಜೆಎಂ ತನ್ನ ಮೊಬೈಲ್ನಿಂದ ತೆಗೆದ ಚಿತ್ರಗಳನ್ನು ನಿಮಗಾಗಿ ಹಂಚಿಕೊಳ್ಳುತ್ತಿದ್ದೇನೆ..
ಇವರು ಹೀಗೆ ಇರೋದು.. ತರಲೆ ಗ್ಯಾಂಗ್

ನಾಚಿ ನೀರಾದ ವೆಂಕಿ.. 

ನಾಲ್ಕು ತರಲೆಗಳು ಒಂದು ಚಿತ್ರದಲ್ಲಿ 

ಹೆಬ್ಬಾವಿನ ತರಹ ಆಗಿದ್ದು ಇಲ್ಲೇ.. ಸೂಪರ್ ಉಪಹಾರ.
ಪೈ ವೈಸರಾಯ್ ಹೋಟೆಲ್ ತಿರುಪತಿ 

ಫುಲ್ ಎನರ್ಜಿ... ದರುಶನಕ್ಕೆ ಸಿದ್ಧ 
"ಶ್ರೀ ಮತ್ತೆ ಹೇಳುತ್ತಿದ್ದೇನೆ.. ನಿನ್ನ ಕಣ್ಣಿನ ಬಲೂನು ಗಟ್ಟಿ ಮಾಡಿಕೊ.. ನಿನ್ನ ಕಣ್ಣುಗಳಲ್ಲಿ ನನ್ನನ್ನೇ ಕಾಣುತ್ತೇನೆ.. ಬಿಂದುಗಳಲ್ಲಿ ನಾನಿದ್ದಾಗ ಜಾರಿ ಹೋಗದಂತೆ ತಡೆಯುವುದು ನಿನ್ನ ಜವಾಬ್ಧಾರಿ.. ಸರಿ ನಾ ಬರುತ್ತೇನೆ.. "

ನಾ ನೋಡುತ್ತಲೇ ಇದ್ದೆ.. ಜೊತೆಯಲ್ಲಿ ಓಡಾಡುತ್ತಿದ್ದವಳು.. ಕಣ್ಣಿಗೆ ಕಾಣುತ್ತಿದ್ದವಳು ನನ್ನ ಕಣ್ಣುಗಳಿಂದ ಒಳಗೆ ಸೇರಿ ನನ್ನ ಹೃದಯ ಕಮಲದಲ್ಲಿ ಐಕ್ಯವಾದಳು.. !

8 comments:

  1. Super blog Maga... great narration and padagala upayoga excellent

    ReplyDelete
  2. Sri super no words to express

    ReplyDelete
  3. ತಮಾಷೆಗೆ ತರಲೆಯಾಗಿ, ಮೌನಕ್ಕೆ ಹರಟೆಯಾಗಿ, ಹೆಜ್ಜೆಗೆ ಜೊತೆಯಾಗಿ, ಸಂತೋಷಕ್ಕೂ ಮಿಗಿಲಾಗಿ, ನಗುವಿಗೆ ನೆವವಾಗಿ.ನೆನಪುಗಳಿಗೆ ಸಾಕ್ಷಿಯಾಗಿ...
    ಶ್ರೀ, ಶಶಿ, ವೆಂಕಿ, ಜೆ ಎಂ, ನಿಮ್ಮ ಸ್ನೇಹ ಕೊ‌ನೆ ಇರದ ಪರಿಧಿಯಾಗಿ ಹೀಗೆ ಇರಲಿ..
    ಕಳೆದ ಕ್ಷಣಗಳ ನೆನಪಾಗಿ ಕಣ್ಣಂಚಲಿ ಒಸರುವ ತೇವ ತಡೆದು ಕಾಣದ ಕೈಗಳ ಶಕ್ತಿ ನಿಮ್ಮ ಕೈ ಹಿಡಿದು ಮನೆದೇವರ ಅನುಗ್ರಹ ಮನೆ ಮಂದಿಗೆಲ್ಲಾ ಇರಲಿ..
    "ಈ ಮನೆಯು ಎಂದೆಂದು ನಗುವಂತೆ ನೀ ಮಾಡು" ಅಂತ ನಿಮ್ಮೋಂದಿಗೆ ಪ್ರಾರ್ಥಿಸಿದಂತೆ ಓದುತ್ತಾ ಒಮ್ಮೆ ಅನುಭವವಾಯ್ತು.. ನಿಮ್ಮ ಜೀವದಲ್ಲಿ ಬೆರೆತಿರುವ ಜೀವವೊಂದು
    ದೇವರನ್ನು ಮಾತಿಗೆ ಎಳೆದು ಮನ ಮುಟ್ಟುವಂತೆ ಬರೆಸಿದ್ದು ಇಷ್ಟವಾಯ್ತು..

    ReplyDelete
    Replies
    1. ಧನ್ಯವಾದಳು ಎಂ ಎಸ್ ಹೃದಯದ ಮಾತುಗಳು ನಿನ್ನ ಪ್ರತಿಕ್ರಿಯೆಯಲ್ಲಿ ಮೂಡಿ ಬಂದಿದೆ.. ಧನ್ಯೋಸ್ಮಿ

      Delete
  4. Beautiful narration! Long live friendship...

    ReplyDelete