Sunday, September 15, 2013

ಬೆಳ್ಳಿ ಮೋಡದ ಆಚೆಯಿಂದ ಮೂಡಿಬಂದ ಆಶಾಕಿರಣ....

"ಬಾರೋ ಬಾರಪ್ಪ... ಯಾಕೋ ಏನಾಯ್ತು!"

ನನ್ನ ಪ್ರೀತಿಯ ........ !

"ಶ್ರೀ ಯಾಕೋ ಈ ಜಾಗದಿಂದ ಬರೋಕೆ ಮನಸ್ಸೇ ಆಗ್ತಾ ಇಲ್ಲ.. ನೋಡು ಎದುರಿಗೆ ಕಾಣುವ ನೀರು..  ನೀರೋ.. ಅಥವಾ ಚಲನ ಚಿತ್ರ ಜಗತ್ತಿನ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಅವರನ್ನು ಹೃದಯ ಮಂದಿರದಲ್ಲಿಟ್ಟು ಪೂಜಿಸುತ್ತಿರುವ ಅವರ ಅಭಿಮಾನಿಗಳ ಆನಂದಭಾಷ್ಪವೋ.. ಅರಿವಾಗುತ್ತಿಲ್ಲ.. ಅದನ್ನು ದಾಟಲು ಬಹುಶಃ ಶ್ರೀ ಕೃಷ್ಣನನ್ನು ಹೊತ್ತು ಬಂದ ವಸುದೇವನಿಗೆ ದಾರಿ ಬಿಟ್ಟ ಯಮುನೆಯ ರೀತಿ ದಾರಿ ಬಿಟ್ಟರೆ ಮಾತ್ರ ನಾ ಬರಬಲ್ಲೆ..!"

ಈ ಮಾತುಗಳನ್ನು ನೀರಿನ ತೊರೆಯನ್ನು ದಾಟಲು ನಿಂತಾಗ ನನ್ನ ಪ್ರೀತಿಯ ಕಂದ ರಿಟ್ಜ್ ಕಾರು ಹೇಳಿದಂತೆ ಭಾಸವಾಯಿತು. ಮೈ ಕಂಪಿಸುತ್ತದೆ...  ಕಂಪಿಸಬಹುದು.... ಕಂಪಿಸಲೇಬೇಕು ಎನ್ನುವ ನೀತಿ ಅರಿವಾಗಿದ್ದು ಕಂಪಲಾಪುರದ ಶ್ರೀ ಮೋಹನ್ ಅವರ ಜೊತೆಯಲ್ಲಿ, ಚಿತ್ರ ಜಗತ್ತು ಕಂಡ ಶ್ರೇಷ್ಠ ನಿರ್ದೇಶಕ ಶ್ರೀ ಪುಟ್ಟಣ್ಣ ಕಣಗಾಲ್ ಹುಟ್ಟಿದ್ದರು ಎನ್ನಲಾಗುವ, ಒಂದು ತೋಟದ ಭಾಗವನ್ನು ನೋಡಿಕೊಂಡು ಬರುವಾಗ ಅನುಭವಿಸಿದ ಒಂದು ಅಸಾಧಾರಣ ಅನುಭವ!

ಆಸಕ್ತಿಯಿಂದ ವಿಷಯ ಹೇಳಲು ಬಂದ ಗ್ರಾಮಸ್ತರು 
"ಏನೂ.. ನಮ್ಮ ಪುಟ್ಟಣ್ಣನ ಬಗ್ಗೆ ಮಾಹಿತಿ ಬೇಕೇ.. ಬನ್ನಿ ಸರ್.. ಅವರು ನಡೆದಾಡಿದ, ಆಟವಾಡಿದ, ಹುಟ್ಟಿದ ತಾಣವನ್ನೆಲ್ಲ ತೋರಿಸುತ್ತೇನೆ" ಎಂದು ಹೆಮ್ಮೆಯಿಂದ ಬಂದ ಶ್ರೀಯುತರು ಹೇಳಿದ ಪ್ರತಿಮಾತುಗಳು ಮನದ ಪಟಲದಲ್ಲಿ ಪ್ರತಿಧ್ವನಿಸುತ್ತಿತ್ತು.
ಒಬ್ಬ ಅಭಿಜಾತ ನಿರ್ದೇಶಕನ ಬಗ್ಗೆ ಇವರೆಲ್ಲ ತೋರುತ್ತಿದ್ದ ಅಭಿಮಾನವನ್ನ  ನೋಡಿ ನನ್ನ ಕಣ್ಣುಗಳಲ್ಲಿ, ಹೃದಯದಲ್ಲಿ ಮುಂಗಾರು ಮಳೆಯ ಮೋಡಗಳು ಆವರಿಸಿಕೊಳ್ಳುತ್ತಿದ್ದವು.

"ನೋಡಿ ಸರ್ ಇಲ್ಲೇ.. ಈ ಜಾಗದಲ್ಲಿ ಒಂದು ಚಿಕ್ಕ ಮನೆಯಿತ್ತು.. ಇಲ್ಲೇ ನಮ್ಮ ಪುಟ್ಟಣ್ಣ ಹುಟ್ಟಿದ್ದು.. ನನಗೆ ಗೊತ್ತಿದ್ದ ವಿಷಯವನ್ನೆಲ್ಲ ಹೇಳಿದ ಮೇಲೆ ನನಗೆ ಆಗುತ್ತಿರುವ ಸಂತೋಷಕ್ಕೆ ನನ್ನ ಈ ನಗುವೇ ಸಾಕ್ಷಿ" ಎಂದರು ಈ ಮಹನೀಯರು.  ಚಿಕ್ಕ ಚೊಕ್ಕ ಮಾಹಿತಿ ಕೊಟ್ಟು ನಮ್ಮನ್ನು ಕಣಗಾಲ್ ಊರಿಗೆ ಬೀಳ್ಕೊಟ್ಟರು.

ಅವರಿಂದ ನಮ್ಮ ಊರಿಗೆ ಹೆಸರು ಬಂತು 
ಯಾಕೋ ಮೈ ಮನ ಸಣ್ಣಗೆ ಅದುರುತಿತ್ತು.

ಪುಟ್ಟಣ್ಣ ಹಾಗೂ ಅವರ ವಂಶಸ್ತರು ಬಾಳಿ ಬದುಕಿದ್ದ ಮನೆ

ಮೈ ಜುಮ್ ಎನ್ನಿಸುವಂತಹ ಚೌಕಟ್ಟಿನಲ್ಲಿ ನಾನು 
"ಗುರುಗಳೇ..  ಕಸ ತುಂಬಿಕೊಂಡು ಕಂಗೆಟ್ಟಿದ್ದ ಊರಿನ ಈ ದೇವಾಲಯದಲ್ಲಿ ಪುಟ್ಟಣ್ಣ ತಾನೇ ಪೊರಕೆ ತೆಗೆದುಕೊಂಡು ಬಂದು ಇಡಿ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ ಊರಿನ ಜನರಿಗೆ ಬುದ್ದಿ ಮಾತು ಹೇಳಿದ್ದು ಇಲ್ಲೇ" ಎಂದು ಒಂದು ದೇವಾಲಯವನ್ನು ತೋರಿದರು ನಮ್ಮ ಮೋಹನ್ ಸರ್.

ಪುಟ್ಟಣ್ಣನವರ ಮನೆಯ ಬೀದಿ 

ಪುಟ್ಟಣ್ಣನವರು ನೆಡೆದಾಡಿರಬಹುದಾದ ಈ ಭೂ ಮಾತೆಯನ್ನು ಒಮ್ಮೆ ಸ್ಪರ್ಶಿಸುವ ಮನಸ್ಸಾಯಿತು. ಮಳೆ ಬಂದು ರಾಡಿಯಾಗಿದ್ದ ನೆಲವನ್ನೊಮ್ಮೆ ಕೈಯಿಂದ ಮುಟ್ಟಿ ಆ ಮಹಾನ್ ಚೇತನಕ್ಕೆ ಒಮ್ಮೆ ಮನದಲ್ಲಿಯೇ ನಮನ ಸಲ್ಲಿಸಿದೆ.

ಸರ್ ಇದೆ ಮನೆಯಲ್ಲಿ ಸರ್ ಪುಟ್ಟಣ್ಣ ಬೆಳೆದದ್ದು.. ಎಂದು ಆ ಮನೆಯನ್ನು ತೋರಿದರು ಶ್ರೀ ಚಂದ್ರಶೇಖರ್.. "ಇಲ್ಲೇ ಕ್ಯಾಮೆರಾ ಇಟ್ಟು ಆ ಗುಡ್ದವನ್ನೆಲ್ಲ ಚಿತ್ರದಲ್ಲಿ ತೋರಿಸುತ್ತೇನೆ ಎಂದು ಆ ಊರಿನ ಜನತೆಗೆ ಹೇಳಿದ್ದ ಶ್ರೀ ಪುಟ್ಟಣ್ಣ ಇಂದು ಬರಿ ನೆನಪು ಮಾತ್ರ.
ಪುಟ್ಟಣ್ಣನವರ ಬಗ್ಗೆ ಅಪಾರ ಮಾಹಿತಿ ಇರುವ ಮೋಹನ್ ಸರ್ ಹಾಗೂ ಚಂದ್ರಶೇಖರ್ ಸರ್ 

ಇನ್ನೂ ಇಲ್ಲೇ ಸ್ವಲ್ಪ ಹೊತ್ತು ಕಣಗಾಲ್ ಊರಿನಲ್ಲಿ ಇರಬೇಕೆಂದು ಮನಸ್ಸು ಬಯಸಿದ್ದರೂ.. ನನ್ನ ಕಾರು ಹೇಳುತ್ತಿತ್ತು "ಶ್ರೀ ಬೇಗ ಬಾ ಮುಂದೆ ಕಾದಿದೆ ಒಂದು ಅಪರೂಪದ ದೃಶ್ಯ"

ಸುಂದರ ಪರಿಸರದಲ್ಲಿ ಕಾರು ಓಡುತ್ತಿತ್ತು.. ಸುತ್ತ ಮುತ್ತಲ ಪರಿಸರ ನೋಡುತ್ತಾ ಪುಟ್ಟಣ್ಣ ಯಾಕೆ ಪ್ರಕೃತಿ ಮಡಿಲಲ್ಲಿ ಹೆಚ್ಚಿನ ಚಿತ್ರಿಕರಣ ಮಾಡುತ್ತಿದ್ದರು ಎನ್ನುವ ಕುತೂಹಲದ ಪ್ರಶ್ನೆಗೆ....  ಮನ ಮಂದಿರದಲ್ಲಿ ಉತ್ತರ ಸಿಗುತ್ತಿತ್ತು.

ಪ್ರತಿಭೆ ಎಲ್ಲಿದ್ದರೂ ಬೆಳಕಿಗೆ  ಬರುತ್ತದೆ 

"ಸರ್ ಮಲ್ಲರಾಜಪುರದಲ್ಲಿ ಪುಟ್ಟಣ್ಣ ಅವರ ತಮ್ಮ ಇದ್ದಾರೆ ಅವರನ್ನು ಭೇಟಿ ಮಾಡಿ" ಎಂದರು ಪುಟ್ಟಣ್ಣ ಕಣಗಾಲ್ ಇದ್ದ ಮನೆಯ ನೆರೆಹೊರೆಯವರು.

ಇನ್ನು ತಡವೇಕೆ ಎಂದು ಒಮ್ಮೆ "MS (Maruti Suzuki) " ಕಡೆ ನೋಡಿದೆ.. MS ಕಣ್ಣು ಹೊಡೆದು ನಡಿ "SM" (Srikanth Manjunath) ಎಂದ.. ಭರ್ರನೆ ಪ್ರಕೃತಿ ಮಡಿಲಲ್ಲಿ ಸಾಗಿತ್ತು.. ಸುಮಾರು ಮುಸ್ಸಂಜೆಯ ಸಮಯ.. ಅವರಿವರನ್ನು ಕೇಳುತ್ತಾ ಒಂದು ಮನೆಯ ಮುಂದೆ ನಿಂತೆವು. ಅಂತು ಇಂತೂ ಮುಂದೆ ನಡೆಯಬೇಕಿದ್ದ ಒಂದು ಅಪರೂಪದ ರೋಮಾಂಚಕಾರಿ
ಸನ್ನಿವೇಶಕ್ಕೆ ಮನಸ್ಸು ಸಿದ್ಧವಾಗಿತ್ತು

ಸರ್ ನಾನೇ ಪುಟ್ಟಣ್ಣ ಕಣಗಾಲ್ ಅವರ  ತಮ್ಮ ನರಸಿಂಹ ಅಂತ ಹೇಳುತ್ತಾ ನಮ್ಮ ಕಡೆ ಕೈಮುಗಿದರು. ನಮಗೆ ದೇವರನ್ನೇ ಕಂಡಷ್ಟು ಸಂತಸ.
ನಾನೇ ಪುಟ್ಟಣ್ಣ ಕಣಗಾಲ್ ಅವರ  ತಮ್ಮ ನರಸಿಂಹ
ನಾವು ಕೈ ಮುಗಿದೆವು.ಸುಮಾರು ಎಪ್ಪತ್ತೊಂದು ವಸಂತದಲ್ಲಿ ಅನೇಕ ಏರು ಹಾದಿ.. ಇಳಿಜಾರು ಹಾದಿಗಳನ್ನೂ ಕಂಡಿದ್ದರೂ ಕುಗ್ಗದ ಜೀವನೋತ್ಸಾಹ, ಎದೆ ತಟ್ಟಿ ನಾ ಸ್ವಾಭಿಮಾನಿ ಎಂದು ಹೇಳಬೇಕಾಗೆ ಇಲ್ಲದ ಸಾಭಿಮಾನ, ಅಭಿಮಾನ ತುಂಬಿದ ಕಣ್ಣುಗಳು, ಹೇಳುವ ವಿಷಯಗಳಲ್ಲಿ ನಿಖರತೆ,  ಎಲ್ಲವೂ ನಮ್ಮ ಮನದಲ್ಲಿದ್ದ ಪುಟ್ಟಣ್ಣ ಕಣಗಾಲ್  ಎಂಬ ಒಂದು ಸುಂದರ ಮೂರ್ತಿಗೆ ಆನಂದ ಭಾಷ್ಪದಲ್ಲೇ ಅಭಿಷೇಕ ಮಾಡಲು ಮಾನಸಿಕವಾಗಿ ಸಿದ್ಧಪಡಿಸಲು ತಾಕತ್ ಇರುವ ಒಂದು ಸುಂದರ ಮನಸ್ಸಿನ ಸುಮಧುರ ಜೀವಿಯ ಮುಂದೆ ಆಸೀನರಾದೆವು. ಸಹಾಸ್ರಾಕ್ಷ  ಇಂದ್ರನೇ ಬಂದಿದ್ದರೂ ತನಗೆ ಸಿಕ್ಕ ಶಾಪವನ್ನು ಸಹಸ್ರ ಕಿವಿಗಳಿಗೆ ಬದಲಿಸಿಕೊಳ್ಳಲು ಪ್ರೇರೇಪಣೆ ನೀಡುವ ಸನ್ನಿವೇಶ.

ಧನ್ಯನಾದೆ ಎಂದು ಭಾವುಕರಾದ ಬಾಲೂ ಸರ್ 
ಪುಟ್ಟಣ್ಣ ಅವರ ಸಹೋದರರಾದ ಶ್ರೀ ನರಸಿಂಹನವರು ಸುಮಾರು ಎರಡು ಘಂಟೆಗಳ ಕಾಲ ನಮ್ಮನ್ನು ಅಕ್ಷರಶಃ ೪೦ ವರ್ಷಗಳಷ್ಟು ಹಿಂದಕ್ಕೆ ಅನಾಮತ್ತಾಗಿ ಕರೆದೊಯ್ದಿದ್ದರು. ಪುಟ್ಟಣ್ಣ ಅವರ ಆರಂಭಿಕ ಸಾಹಸಮಯ, ಯಾತನಮಯ ಬದುಕು, ಶ್ರದ್ಧೆ, ನಿಷ್ಠೆ, ನಿರ್ದೇಶನ ಮಾಡಲು ಸುಮಾರು ೨೩ ವರ್ಷಗಳಷ್ಟು ಕಾಲ ಪಟ್ಟ ಶ್ರಮ, ಬೆಳ್ಳಿ ಮೋಡ ಚಿತ್ರ ಮಾಡಲು ಪಟ್ಟ ಪಾಡು, ಎಲ್ಲ ದೃಶ್ಯಗಳನ್ನು ಕಾಲನ ವಾಹನದಲ್ಲಿ ಕೂತು ಒಮ್ಮೆ ಹಿಂದಕ್ಕೆ ಹೋಗಿ ಅಲ್ಲಿಯೇ ನಿಂತು ಕಣ್ಣಾರೆ ನೋಡಿದಷ್ಟು ನಿಖರತೆಯಿಂದ ವರ್ಣಿಸಿದರು.

ನನ್ನ ಜೀವನದಲ್ಲಿ ಚಿನ್ನದ ಚೌಕಟ್ಟಿನಲ್ಲಿಲ್ಲಿಡಬೇಕಾದ ಚಿತ್ರ 

ಅವರ ನಿರರ್ಗಳ ಮಾತು ಮುಗಿದಾಗ

"ತುಲಾ ಮಾಸೇತು ಕಾವೇರಿ
ಸರ್ವಾತೀರ್ಥಾಶ್ರಿತಾ  ನದಿ
ಪಂಚ ಪಾತಕ ಸಂಹರ್ತ್ರಿ ವಾಜಿನೇದ ಫಲಪ್ರದ
ಭಕ್ತಾನುಕಂಪೇ ಮುನಿಭಾಗ್ಯ  ಲಕ್ಷ್ಮಿ
ನಿತ್ಯೆ  ಜಗನ್ಮಂಗಳದಾನಶೀಲೇ
ನಿರಂಜನೆ  ದಕ್ಷಿಣದೇಶ  ಗಂಗೆ
ಕಾವೇರಿ ಕಾವೇರಿ ಮಮ ಪ್ರಸೀದ"   

ಎಂದು ಕಣ್ಣಲ್ಲಿ ಹರಿಯುತ್ತಿದ್ದಳು. ಪುಟ್ಟಣ್ಣ ಮತ್ತು ಸಹೋದರರರು ಬಲು ಪ್ರೀತಿ ಗೌರವ ತೋರುವ ಕಾವೇರಿ ನದಿ ನನ್ನ ಕಣ್ಣಲ್ಲಿ ಕಂಡದ್ದು ಅನುಭವಿಸಿದ ಮೇಲೆ ನನಗೆ ನಾನೇ ಧನ್ಯ ಎಂದಿತು ಮನಸ್ಸು.

ಬ್ಲಾಗ್ ಲೋಕ ಪುಟ್ಟಣ್ಣನವರ ಸಹೋದರ ಅವರ ಜೊತೆಯಲ್ಲಿ 

ನಾನು ನಾನಾಗಿರಲಿಲ್ಲ.. ಬಾಲೂ ಸರ್, ಮೋಹನ್ ಸರ್,  ಅಲೆಮಾರಿಗಳು ಗುಂಪಿನ ಪ್ರತಿ ಪ್ರವಾಸದಲ್ಲೂ ನನ್ನ ಜೊತೆ ಕೈಜೋಡಿಸುವ ಸಂದೀಪ್ ಎಲ್ಲರೂ ಅವರವರ ಅಭಿಪ್ರಾಯ, ಅನಿಸಿಕೆ ಹೇಳುತ್ತಿದ್ದರು, ನನ್ನ ಮನಸ್ಸು ಇನ್ನು ಎಪ್ಪತ್ತರ ದಶಕದಲ್ಲಿ ಪುಟ್ಟಣ್ಣ ಅವರ ಸುತ್ತ ಮುತ್ತಲೇ ಓಡಾಡುತ್ತಿತ್ತು.

"ಗುರೂಜಿ ಕಂ ಬ್ಯಾಕ್ ಪ್ಲೀಸ್.. ಕಂ ಬ್ಯಾಕ್ ಪ್ಲೀಸ್" ಎಂದರು ಬಾಲೂ ಸರ್..

ನಿಧಾನವಾಗಿ ಮನಸ್ಸು ತಹಬದಿಗೆ ಬಂದು ಸಂಗೀತ ಗ್ರಾಮ ರುದ್ರ ಪಟ್ಟಣಕ್ಕೆ ಹೊರಟಿತು. ಅರ್ಚಕರಿಗೆ ಕರೆ ಮಾಡಿ ಕಾಯುತ್ತಾ ಕುಳಿತೆವು. ಕೆಲ ಸಮಯದ ನಂತರ ಬಾಗಿಲನ್ನು ಸರಿಸಿ ಒಳಹೋದಾಗ ಕಂಡದ್ದು ಬೃಹದಾಕರವಾದ ವೀಣಾ ಮಂದಿರ.. ಕಟ್ಟಡ ವಿನ್ಯಾಸಗಾರರ ಚಾಕಚಕ್ಯತೆಯ ಕರಗಳಲ್ಲಿ ಅರಳಿದ ಸುಂದರ ಭವನ ಈ ವೀಣಾ ಮಂದಿರ. ವೀಣೆಯ ಆಕೃತಿಯಲ್ಲಿ ನಿರ್ಮಿತಗೊಂಡಿರುವ ಈ ಮಂದಿರದಲ್ಲಿ ಸಂಗೀತವನ್ನೇ ಉಸಿರಾಗಿಸಿಕೊಂಡ ದಾಸಶ್ರೇಷ್ಟರ ಮೂರ್ತಿಯ ಸುಂದರ ಕೆತ್ತನೆಗಳು ಕಂಡು ಬರುತ್ತವೆ. ನಡುವೆ ಸಂಗೀತ ಅಧಿದೇವತೆ ಶಾರದೆಯ ಸುಂದರ ಮೂರ್ತಿ. ಪ್ರತಿ ಮೂರ್ತಿಯ ಮುಂದೆ ನಿಂತು ನಮಸ್ಕರಿಸಿದಾಗ ಮುದ್ರಿತ ಧ್ವನಿಯ ಮೂಲಕ ಆ ಸಂಗೀತ ಸಾಧಕರ ಸ್ಥೂಲ ಪರಿಚಯ ನಮಗಾಗುತ್ತದೆ. ಸಂಗೀತದಲ್ಲಿ ಮಂತ್ರ ಹೇಳಿ ಪೂಜೆಸಲ್ಲಿಸುವ ವಿಶಿಷ್ಟ ವಿಧಾನವಷ್ಟೇ ಅಲ್ಲದೆ ಈ ಇಡಿ ಗ್ರಾಮವೇ ಸಂಗೀತ ಗ್ರಾಮ ಎಂದು ಹೆಸರಾಗಿದೆ. ಮನೆ ಮನದಲ್ಲೂ ಸಂಗೀತವನ್ನೇ ಉಸಿರಾಗಿಸಿಕೊಂಡ ಈ ಗ್ರಾಮ ಕರುನಾಡಿನ ವಿಶಿಷ್ಟ ಕಾಣಿಕೆ ಎನ್ನಬಹುದು.

ರುದ್ರಪಟ್ಟಣ ಸುಂದರ ಮಂದಿರ 

ವೀಣಾ ಭವನ 

ಮೋಹನ್ ಸರ್ ಅವರ ಮನೆಯಲ್ಲಿ ರಾತಿ ಭೋಜನಕ್ಕೆ ಸಿದ್ಧತೆಯಾಗಿದ್ದರಿಂದ ಪಿರಿಯಪಟ್ಟಣಕ್ಕೆ ಬಂದು, ಅವರ ತುಂಬು ಸಂಸಾರದ ಜೊತೆಯಲ್ಲಿ ಕೆಲವು ಆತ್ಮೀಯ ಕ್ಷಣಗಳನ್ನು ಕಳೆದು ಭೂರಿ ಭೋಜನವನ್ನು ಉಂಡು ಬಾಲೂ ಸರ್ ಅವರ ಮೈಸೂರಿನ ಮನೆಗೆ ತಲುಪಿದಾಗ ಘಂಟೆ ರಾತ್ರಿ ೧೧.೩೦ ಎಂದು ಕಿರುಚಿತು. ಹಾಸಿಗೆಗೆ ಹಾಗೆ ತಲೆಕೊಟ್ಟು ಒಮ್ಮೆ rewind ಗುಂಡಿಯನ್ನು ಒತ್ತಿದೆ.

"ಶ್ರೀಕಾಂತ್ ... ನಾನು ರೆಡಿ..ಹೊರಡೋಣ" ಎಂದರು ಸಂದೀಪ್. ಮೈಸೂರು ರಸ್ತೆಯ ದೀಪಾಂಜಲಿ ನಗರದ ಬಳಿಯಿಂದ ಸಂದೀಪ್ ಅವರನ್ನು ಕರೆದುಕೊಂಡು ಮೈಸೂರಿಗೆ ಧಾವಿಸಿತು ನನ್ನ ಮೆಚ್ಚಿನ ರಿಟ್ಜ್. ದಾರಿಯಲ್ಲಿ ಮದ್ದೂರಿನ ಕದಂಬಂನಲ್ಲಿ  ಉಪಹಾರ ಮುಗಿಸಿಕೊಂಡು ಮೈಸೂರಿಗೆ ಬಂದಾಗ ಘಂಟೆ ಬೆಳಿಗ್ಗೆ ಸುಮಾರು ೯.೩೦.

ಬಾಲೂ ಸರ್ ಅವರ ತಾಯಿ, ಮಡದಿ ಅವರ ಜೊತೆಯಲ್ಲಿ ಉ. ಕು. ಸಾಂ ಮುಗಿಸಿ, ಕಾಫಿ ಹೀರಿ ಪಿರಿಯಪಟ್ಟಣದಲ್ಲಿರುವ
ಶ್ರೀ ಕಂಪಲಾಪುರ ಮೋಹನ್ ಅವರ ಮನೆಗೆ ಬಂದೆವು. ಆಗ ಸಮಯ ಸುಮಾರು ೧೧.೩೦.

ಮೋಹನ್ ಸರ್ ಅವರ ಪರಿಚಯ, ಅವರ ದಾರಿ ದೀಪ ಪತ್ರಿಕೆಯ ವಾರ್ಷಿಕೋತ್ಸವ, ಪುಟ್ಟಣ್ಣನವರ ಜೊತೆಯಲ್ಲಿನ ಒಡನಾಟ, ಮೋಹನ್ ಸರ್ ಅವರಿಗೆ ಬಂದ ಪ್ರಶಸ್ತಿಗಳು, ಅಭಿಮಾನ ಪತ್ರಗಳ ಕಡೆ ಕಣ್ಣು ಹಾಯಿಸಿ ಇಂತಹ ಸುಮಧುರ ಮನಸ್ಸಿನ ಸಾಧಕರ ಪರಿಚಯ ಮಾಡಿಕೊಟ್ಟ ಬಾಲೂ ಸರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದೆವು. ಯಾವ ಫಲಾಫಲಗಳ ನಿರೀಕ್ಷೆಯಿಲ್ಲದೆ, ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿರುವ ಹಾಗು ಕವಿಗಳನ್ನು ಪ್ರೋತ್ಸಾಹಿಸುವ, ಕನ್ನಡ ಬೆಳೆಸುವ, ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಹಮ್ಮಿಕೊಂಡು ಸಾಗುತ್ತಿರುವ ಮನೆ ಮನೆಯಲ್ಲಿ ಕವಿಗೋಷ್ಠಿ ಕಾರ್ಯಕ್ರಮ ತಿಂಗಳಿಗೆ ಒಂದರಂತೆ ಸುಮಾರು ೧೭೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ದಾಟಿ ಮುಂದುವರೆಯುತ್ತಿರುವ ಇವರ ಸಾಧನೆಗೆ ನಮ್ಮ ಅನಂತ ನಮಸ್ಕಾರಗಳು. 

ಸರಳ ವಿರಳ ಜೀವಿ ಪುಟ್ಟಣ್ಣ ನವರ ಒಡನಾಟದ ಪುಣ್ಯ ಕಂಡ ಶ್ರೀ ಕಂಪಲಾಪುರ ಮೋಹನ್ 

ಮೋಹನ್ ಸರ್ ಜೊತೆಯಲ್ಲಿ ಬ್ಲಾಗ್ ಲೋಕದ ಮಂದಿ 
ನಮಗೆ ಇನ್ನೊಂದು ಆಶ್ಚರ್ಯ ಕಾದಿದ್ದು....  ನಮಗೆ ಅರಿವಿಗೆ ಬರಲೇ ಇಲ್ಲ. ಸರ್ಕಾರಿ ಪದವಿ ಪೂರ್ವ ಶಾಲೆಯಲ್ಲಿ NSS ವಿಭಾಗದ ವಾರ್ಷಿಕೋತ್ಸವದ ಸಮಾರಂಭಕ್ಕೆ ನಾವು ಹೋದೇವು. ಮೋಹನ್ ಸರ್ ಅವರನ್ನು ಆಹ್ವಾನಿಸಿದ್ದರು. ಹೂವಿನ ಜೊತೆಯಲ್ಲಿ ನಾರು ಸ್ವರ್ಗಕ್ಕೆ ಎನ್ನುವ ಹಾಗೆ ನಮಗೂ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶಮಾಡಿಕೊಟ್ಟು, ವಿಧ್ಯಾರ್ಥಿನಿಯರೇ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಈ ಸುಂದರ ಕಾರ್ಯಕ್ರಮದಲ್ಲಿ ಕೆಲ ಸಮಯ ಕಳೆದದ್ದು ನಿಜಕ್ಕೂ ಒಂದು ಅನರ್ಘ್ಯ ಅನುಭವ.  ಸುಂದರ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿದ್ದ ಶ್ರೀ ಮೋಹನ್ ಅವರು, ಉದ್ಘಾಟನೆ ಮಾಡಿದ ಬಾಲೂ ಸರ್. ವಿಜಯವಾಣಿ ಪತ್ರಿಕೆಯ ಪತ್ರಕರ್ತರು, ಪ್ರಾಂಶುಪಾಲರು, ಉಪಾಧ್ಯಾಯರು ಉಪಸ್ಥಿತ ಸಭೆಯಲ್ಲಿ ಮಾತಾಡಿದ, ಹಾಡಿದ ವಿಧ್ಯಾರ್ಥಿನಿಯರು ಅಭಿನಂದನೆಗೆ ಅರ್ಹರು. ಅಲ್ಲಿಂದ ಬೀಳ್ಕೊಡುವ ಮುನ್ನ ರುಚಿಯಾದ ಪಲಾವ್ ನೀಡಿದ ಕಾರ್ಯಕ್ರಮ ರೂವಾರಿಗಳಿಗೆ ಎಷ್ಟು ಧನ್ಯವಾದಗಳನ್ನು ಸಲ್ಲಿಸಿದರು ಕಡಿಮೆಯೇ. 

ನಗಬೇಡಿ ಮೋಹನ್ ಸರ್ ... ಏನ್ ಸರ್ ಹೀಗೆ ಮಾಡಿಬಿಟ್ರಿ ..! 

ಸುಂದರ ಸಮಾರಂಭ 

ಶಾಲೆಯ ಆವರಣ.. ಇಷ್ಟವಾಯಿತು 

ಅಲ್ಲಿಂದ ಮುಂದೆ ಹೋರಟ ನಾವು ಬಂದದ್ದು ರಾಜಬಿಳಗುಲಿ ಎಂಬ ಗ್ರಾಮಕ್ಕೆ. ಪುಟ್ಟಣ್ಣ ಅವರ ತಾಯಿಯ ತವರೂರು. ಇಲ್ಲಿಯೇ ಪುಟ್ಟಣ್ಣನವರ ಸಹೋದರ ಕಣಗಾಲ್ ಪ್ರಭಾಕರ ಶಾಸ್ತ್ರಿ ಹುಟ್ಟಿದ್ದು ಎನ್ನಲಾಗುತ್ತದೆ. ಅಲ್ಲಿಂದ ಮುಂದೆ ಹೊರಟ ನಮಗೆ ಸಿಕ್ಕದ್ದು ಇನ್ನೊಬ್ಬ ಸಾಧಕರ ಸಮಾಗಮ. 
ಸಾಧಕ ಶ್ರೀ ಲಕ್ಶ್ಮಣ ಮತ್ತು ಅವರ ನೆಚ್ಚಿನ ಮೋಹನ್ ಸರ್ 
ಹಳ್ಳಿಯಲ್ಲಿ ಇದ್ದು ಕನ್ನಡದಲ್ಲಿ ಎಂ ಎ ಮುಗಿಸಿ ಆರ್ಥಿಕ ಶಕ್ತಿ ಕೊಡುವ ಯಾವ ಉದ್ಯೋಗವನ್ನು ಅರಸದೆ ಸುತ್ತ ಮುತ್ತಲ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎನ್ನುವ ಅಭಿಲಾಷೆಯಿಂದ ಪ್ರಾರಂಭಿಸಿದ ಶಾಲೆಯಲ್ಲಿ ಇಂದು ಸುಮಾರು ೬೦೦ ಮಕ್ಕಳು ಓದುತ್ತಿದ್ದಾರೆ. ಜೊತೆಗೆ ಹತ್ತನೇ ತರಗತಿಯ ಪರೀಕ್ಷೆಗಳಲ್ಲಿ ನೂರು ಪ್ರತಿಶತ ಉತ್ತಿರ್ಣ ಶ್ರೇಣಿ ಹೊಂದಿರುವುದು ಈ ಶಾಲೆಯ ಹೆಗ್ಗಳಿಕೆ ಎನ್ನಬಹುದು. ಸರಳ ವಿರಳ ಜೀವಿ ಶ್ರೀ ಲಕ್ಷ್ಮಣ ಅವರಿಗೆ ನಮ್ಮೆಲ್ಲರ ಕಡೆಯಿಂದ ಅಭಿನಂದನೆಗಳನ್ನು ಸಲ್ಲಿಸಿ ಕಣಗಾಲ್ ಕಡೆಗೆ ದೌಡಾಯಿಸಿದೆವು. 
ಶ್ರೀ ಲಕ್ಷ್ಮಣ ಅವರ ಶಾಲೆ 

ಶ್ರೀ ಲಕ್ಷ್ಮಣ ಅವರ ಶಾಲೆ 

ಮನಸ್ಸು "ನೋಡು ಶ್ರೀ.. rewind ಟೇಪ್ ಮುಗಿದಿದೆ... ಇಲ್ಲಿಂದ ಮುಂದೆ ಹೇಳಬೇಕಾದ ವಿಷಯವನ್ನು ಈ ಲೇಖನದ ಆರಂಭದಲ್ಲೇ ಹೇಳಿದ್ದೇನೆ.. ಇನ್ನೊಮ್ಮೆ ಕಂಪ್ಯೂಟರಿನ ಆ ಇಲಿಯನ್ನು ಮೇಲಕ್ಕೆ ಕೊಂಡೊಯ್ದರೆ ಮತ್ತೆ ಮೊದಲಿಂದ ವಿಷಯ ಅರಿವಾಗುತ್ತೆ" ಎಂದು ಹೇಳಿತು.  

ಮುಂಜಾನೆ ಕಾರಿನ ಹತ್ತಿರ ಬಂದು ನಿಂತೇ.. ಕುಕ್ಕ್ ಕುಕ್ಕ್ ಎಂದು ಸದ್ದು ಮಾಡುತ್ತಾ ಬಾಗಿಲನ್ನು ತೆರೆದು ದಂತಪಂಕ್ತಿತೋರಿಸಿತು. "ಶ್ರೀ ಏನೇ ಹೇಳು ಈ ಪ್ರವಾಸ ನನ್ನ ಮನಪಟಲದಲ್ಲಿ ಉಳಿಯಲು ಬೇಕಾದಷ್ಟು ಕಾರಣಗಳಿವೆ.. ನೋಡಿಲ್ಲೇ ಇಲ್ಲೇ dashboard ನಲ್ಲಿ ಬರೆದಿದ್ದೇನೆ ಎಂದಿತು. ನಾನು ಕುತೂಹಲದಿಂದ ಇಣುಕಿ ನೋಡಿದೆ.. ಹಲ್ಲು ಬಿಟ್ಟೆ.. ಸ್ಟೀರಿಂಗ್ ಅನ್ನು ಗಟ್ಟಿಯಾಗಿ ತಬ್ಬಿಕೊಂಡು.. ಕಾರಿಗೆ ಒಂದು ಸುತ್ತು ಬಂದು.... ಒಂದು ಸಿಹಿ ನಗೆಯನ್ನು ಬೀರಿದೆ.... ಒಂದು ಬಾರಿ ಕಣ್ಣು ಮಿಟುಕಿಸಿ ನಮ್ಮನ್ನು ಕರೆದೊಯ್ದು ಬಂದ ಕಾರು ಮತ್ತೆ ನಿಂತದ್ದು ಬೆಂಗಳೂರಿನ ವಿಜಯನಗರದಲ್ಲಿ... 

ಕಾರಿನ ಡ್ಯಾಶ್ ಬೋರ್ಡ್ನಲ್ಲಿ ಕಂಡ ವಿಷಯಗಳು :-

೧. ಶ್ರೀ ಪುಟ್ಟಣ್ಣ ನಭೂತೋ ನಭವಿಷ್ಯತಿ 

ಶ್ರೀ ಪುಟ್ಟಣ್ಣ ನಭೂತೋ ನಭವಿಷ್ಯತಿ 
೨. ಶ್ರೀ ಕಂಪಲಾಪುರ ಮೋಹನ್ ಅವರ ಆಸಕ್ತಿ, ತನಗೆ ಗೊತ್ತಿರುವ ವಿಚಾರವನ್ನು ಇತರರಿಗೆ ತಿಳಿಸುವ ತವಕ ಅಭಿನಂದನೀಯ 
೩. ಶ್ರೀ ಲಕ್ಷ್ಮಣ ಅವರ ಶಿಕ್ಷಣ ಕ್ಷೇತ್ರದ ಕ್ರಾಂತಿಕಾರಕ ದಾಪುಗಾಲು ಮತ್ತು ಪರಿಶ್ರಮ
೪. ಶ್ರೀ ನರಸಿಂಹ ಶಾಸ್ತ್ರಿಯವರ ಕುಗ್ಗದ ಜೀವನೋತ್ಸಾಹ, ವಿಚಾರಗಳನ್ನು ಹೇಳುವಲ್ಲಿ ನಿಖರತೆ, ಕರಾರುವಾಕ್ಕಾಗಿ, ಮತ್ತು ಆಸಕ್ತಿದಾಯಕವಾಗಿ ವಾಸ್ತವಿಕ ಘಟನೆಗಳನ್ನು ಹೇಳುವ ಶೈಲಿ 
೫. ಈ ಇಡಿ ಕಾರ್ಯಕ್ರಮದ ರೂವಾರಿ ಬಾಲೂ ಸರ್ ಅವರ ಸರಳತೆ 
೬. ಶ್ರೀಕಾಂತ್ ನೀವು ಯಾವುದೇ ಪ್ರವಾಸಕ್ಕೆ ಕರೆಯಿರಿ ನನ್ನದು ಡೀಫಾಲ್ಟ್ ಆನ್ಸರ್ ಎನ್ನುತ್ತಾ .. ಇದು ಸೇರಿ ಅಲೆಮಾರಿಗಳು ತಂಡದ ಅವಿರತ ೨೬ನೆ ಪ್ರವಾಸಕ್ಕೆ ಸಂದೀಪ್ ನನ್ನ ಜೊತೆಯಲ್ಲಿ ಕೈಗೂಡಿಸಿದ್ದು
೭. ಈ  ಲೇಖನವನ್ನು ಇ(ಕ)ಷ್ಟ ಪಟ್ಟು ಓದುವ ಎಲ್ಲಾ ನನ್ನ ಆತ್ಮೀಯ ಓದುಗರಿಗೆ ನನ್ನ ಧನ್ಯವಾದಗಳು. 

24 comments:

  1. ಶ್ರೀ ಕಾಂತ್ ನಿಮ್ಮ ಲೇಖನ ದೇವಾಲಯಕ್ಕೆ ಕಳಸ ಇದ್ದಂತೆ , ನಿಮ್ಮ ಬರೆಯುವ ಮೋಡಿಗೆ ನಾವೆಲ್ಲಾ ಬೆರಗಾಗುತ್ತೇವೆ , ಒಂದು ವಿಚಾರದ ಹಿಂದೆ ಬಿದ್ದು ಅದನ್ನು ಸಾಕ್ಷೀಕರಿಸಿಕೊಳ್ಳುವ ನಿಮ್ಮ ಛಲಕ್ಕೆ ನಮೋ ನಮಃ . ನಿಮ್ಮೊಂದಿಗೆ ಒಂದು ಸುಂದರ ದಿನ ಕಳೆದದ್ದು ನನ್ನ ಭಾಗ್ಯ .

    ReplyDelete
    Replies
    1. ಬಾಲೂ ಸರ್ ನಿಮ್ಮ ಶ್ರಮದ ಫಲ ನಾನು ನೋಡಬೇಕು ಅಂದು ಕೊಂಡಿದ್ದನ್ನ ಸಾಧಿಸಲು ನೀವು ನಿಂತಿರಿ ಅದಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು

      Delete
  2. ಶ್ರೀಕಾಂತ್ ನಿಜಕ್ಕೂ ಮನಸ್ಸು ಹೇಳುತಿದೆ ನೀನು ಹೋಗಿ ನೋಡು ಪುಟ್ಟಣ್ಣ ನವರ ಊರನ್ನು ಎಂದು... ಎಂಥಾ ಅದೃಷ್ಟವಂತರು ನೀವು. ಸದಾ ವಿಶೇಷಗಳನ್ನೇ ನಮಗೆಲ್ಲರಿಗೂ ಮಾಹಿತಿ ಪೂರಕವಾಗಿ ನೀಡುತ್ತಲೇ ಬಂದಿದ್ದೀರಿ. ಧನ್ಯೋಸ್ಮಿ.

    ReplyDelete
    Replies
    1. ಅಕ್ಕಯ್ಯ ಸೂಪರ್.. ಬಾಲೂ ಸರ್ ಜೊತೆ ಇದ್ದಾಗ ಪ್ರಪಂಚ ತೀರ ಚಿಕ್ಕದಾಗಿಬಿಡುತ್ತೆ. ಅವರಿಂದ ನಾನು ನೋಡುವ ಹಾಗೆ ಆಯಿತು. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಅಕ್ಕಯ್ಯ

      Delete
  3. ಬಾಲು ಸರ್ ಫೋನ್ ಮಾಡಿ ಎಲ್ಲ ಹೇಳಿದರು.. ನಾನು ಈ ಸುಂದರ ಕ್ಷಣಗಳನ್ನು ಮಿಸ್ ಮಾಡಿಕೊಂಡೆ ಅನಿಸುತ್ತಿದೆ ಈಗ .. ರುದ್ರ ವೀಣೆಯಂತಿರುವ ಆ ಕಟ್ಟಡ ಇರುವ ಸಂಗೀತ ಗ್ರಾಮ ಬಹಳ ಹೆಸರು ವಾಸಿ ಸಂಗೀತಗಾರರ ಜನ್ಮ ಸ್ಥಳ ಕೂಡ .. ಒಟ್ಟಾರೆ ನಿಮ್ಮ ಪ್ರವಾಸ ಅರ್ಥಪೂರ್ಣವಾಗಿದೆ.. ಈ ಲೇಖನ ಓದಿ ತುಂಬ ಖುಷಿ ಆಯಿತು ಸರ್

    ReplyDelete
    Replies
    1. ಮತ್ತೊಮ್ಮೆ ಅವಕಾಶ ಇದ್ದೆ ಇದೆ ಗಿರೀಶ್. ಕನ್ನಡಿಗರು ನೋಡಲೇಬೇಕಾದ ಸ್ಥಳ ಅದು. ಅಂಥಹ ನಿರ್ದೇಶಕ ಮತ್ತೊಮ್ಮೆ ಹುಟ್ಟಿ ಬರೋಲ್ಲ. ಸುಂದರ ಪ್ರತಿಕ್ರಿಯೆ ನಿಮ್ಮದು ಧನ್ಯವಾದಗಳು

      Delete
  4. Hi Srikanth,
    Excellent, I was waiting for the post & updates.
    ನಿಮ್ಮದೇ ಶೈಲಿಯ ನಿರೂಪಣೆಯಲ್ಲಿ ಸೊಗಸಾದ ಲೇಖನ....
    ಅದೃಷ್ಟವ೦ತರು ನೀವುಗಳೆ....
    ಮಾಹಿತಿಗೆ ಧನ್ಯವಾದಗಳು....
    ಪುಟ್ಟಣ್ಣರವರ ಜೀವನ ಕ್ಷಣಗಳನ್ನು ಸೆರೆಹಿಡಿದಿರುವ ತಾವು, ನಮ್ಮ ಜೊತೆಗೆ ಹ೦ಚಿಕೊಳ್ಳಬೇಕಾಗಿ ವಿನ೦ತಿ.....
    As I said, I equally appreciate your Passion & Balu Sir's simplicity!

    ReplyDelete
    Replies
    1. ಹುಚ್ಚು ಮನಸ್ಸು.. ನನ್ನದು.. ಏನೋ ಯೋಚನೆ ಭಗವಂತನ ದಯೆ.. ಸಹೃದಯ ಸ್ನೇಹಿತರ ಬೆಂಬಲ ಇಂತಹ ಹುಚ್ಚು ಆಸೆಗಳನ್ನ ನೆರವೇರಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಸೂಪರ್ ರೂಪ ಇಷ್ಟವಾಯಿತು ನಿಮ್ಮ ಪ್ರತಿಕ್ರಿಯೆ.

      Delete
  5. Replies
    1. Thank you Sandeep..you stood with me in all the trips..and also this golden moment of life as well. I should say a big thank you for your wonderful simplicity.

      Delete
  6. ಮೊದಲು ಈ ಕಾಂಗ್ರೆಸ್ 'ಐ' ಪಕ್ಷದ ಕ್ಷಮಾದಾನದ ಅರ್ಜಿ ಸ್ವೀಕಸಿರಿ. ಕೆಲ ಬಾಹುಳ್ಯ ಮತ್ತು ಲಕ್ವ ಹೊಡೆದ ಲಕ್ಕಿಲ್ಲದ ಈ ಹಣೆಯ ಬರಹದ ಕಾರಣ ನಿಮ್ಮ ಜೊತೆ ನಾನು ಬರಲಾಗಲಿಲ್ಲ. ಆದರೂ ಈ ಬರಹ ಮತ್ತು ಉತ್ತಮ ಚಿತ್ರಗಳು ನನ್ನನ್ನು ನಿಮ್ಮ ಜೊತೆ ಯಾನ ಮಾಡಿಸಿತು. ಶ್ರೀಮಾನ್ ಮತ್ತು ಬಾಲಣ್ಣ ಉಘೇ ಉಘೇ.

    ೧. ಶ್ರೀ ಪುಟ್ಟಣ್ಣ ನಭೂತೋ ನಭವಿಷ್ಯತಿ : ಅವರು ನೀಡಿರುವ ಚಿತ್ರಗಳು ಸರ್ವ ಕಾಲೀನ ಸಿನಿಮಾ ವಿದ್ಯಾರ್ಥಿಯ ಪಠ್ಯ ಪುಸ್ತಕಗಳು.

    ೨. ಶ್ರೀ ಕಂಪಲಾಪುರ ಮೋಹನ್ ಅವರ ಆಸಕ್ತಿ, ತನಗೆ ಗೊತ್ತಿರುವ ವಿಚಾರವನ್ನು ಇತರರಿಗೆ ತಿಳಿಸುವ ತವಕ ಅಭಿನಂದನೀಯ : ಇಂತಹ ಮಿತ್ರರೇ ಅಪರೂಪ.

    ೩. ಶ್ರೀ ಲಕ್ಷ್ಮಣ ಅವರ ಶಿಕ್ಷಣ ಕ್ಷೇತ್ರದ ಕ್ರಾಂತಿಕಾರಕ ದಾಪುಗಾಲು ಮತ್ತು ಪರಿಶ್ರಮ : ಪ್ರತಿ ಹಳ್ಳಿಯಲ್ಲೂ ಇಮ್ತೋಬ್ಬ ನಿಸ್ವಾರ್ಥಿ ಉದಯವಾಗಲಿ.

    ೪. ಶ್ರೀ ನರಸಿಂಹ ಶಾಸ್ತ್ರಿಯವರ ಕುಗ್ಗದ ಜೀವನೋತ್ಸಾಹ, ವಿಚಾರಗಳನ್ನು ಹೇಳುವಲ್ಲಿ ನಿಖರತೆ, ಕರಾರುವಾಕ್ಕಾಗಿ, ಮತ್ತು ಆಸಕ್ತಿದಾಯಕವಾಗಿ ವಾಸ್ತವಿಕ ಘಟನೆಗಳನ್ನು ಹೇಳುವ ಶೈಲಿ : ನೆರಳಲಿದ್ದ ಪ್ರತಿಭೆ ಈಗ ಅನಾವರಣವಾಯಿತು.

    ೫. ಈ ಇಡಿ ಕಾರ್ಯಕ್ರಮದ ರೂವಾರಿ ಬಾಲೂ ಸರ್ ಅವರ ಸರಳತೆ : ಇದೇ ಇದೇ ನಮ್ಮ ಬ್ಲಾಗಿಗರ ಮುಕುಟ ಮಣಿಯ ವ್ಯಾಖ್ಯಾನ.

    ೬. ಶ್ರೀಕಾಂತ್ ನೀವು ಯಾವುದೇ ಪ್ರವಾಸಕ್ಕೆ ಕರೆಯಿರಿ ನನ್ನದು ಡೀಫಾಲ್ಟ್ ಆನ್ಸರ್ ಎನ್ನುತ್ತಾ .. ಇದು ಸೇರಿ ಅಲೆಮಾರಿಗಳು ತಂಡದ ಅವಿರತ ೨೬ನೆ ಪ್ರವಾಸಕ್ಕೆ ಸಂದೀಪ್ ನನ್ನ ಜೊತೆಯಲ್ಲಿ ಕೈಗೂಡಿಸಿದ್ದು : ಅಲೆಮಾರಿಗಳು ನೂರ್ಕಾಲ ಚಾರಣೋತ್ಸಹದಲಿ ನಲಿಯಲಿ.

    ೭. ಈ ಲೇಖನವನ್ನು ಇ(ಕ)ಷ್ಟ ಪಟ್ಟು ಓದುವ ಎಲ್ಲಾ ನನ್ನ ಆತ್ಮೀಯ ಓದುಗರಿಗೆ ನನ್ನ ಧನ್ಯವಾದಗಳು : ಪ್ರಸ್ತುತಪಡಿಸಿದ ನಿಮಗೂ ಸಹ.

    ReplyDelete
    Replies
    1. ಬದರಿ ಸರ್ ಬೇಗ ಪಕ್ಷ ಬದಲಿಸಿ ಯಾಕೆ ಅಂದರೆ ಮಹಾಲಯ ಅಮಾವಾಸ್ಯೆ ಹತ್ತಿರ ಬರುತ್ತಿದೆ. ಇರಲಿ ಇರಲಿ ನಾನೂ ವೀರ ಪ್ರತಿಜ್ಞೆ ಮಾಡಿದ್ದೀನೆ ನಿಮ್ಮನ್ನ ಪ್ರ(ಯಾ)ವಾಸಕ್ಕೆ ಕರೆದುಕೊಂಡು ಹೋಗಲೇ ಬೇಕು. ಸುಂದರ ವಿಶ್ಲೇಷಣೆ ನಿಮ್ಮದು ಧನ್ಯವಾದಗಳು

      Delete
  7. ನೀವು ನೋಡಿದ ಸ್ಥಳಗಳಲ್ಲದೆ ಅಲ್ಲಿನ ವಿಶೇಷತೆಗಳನ್ನು ಚೆನ್ನಾಗಿ ತಿಳಿಸಿದ್ದಿರಿ .
    ಎಲ್ಲದರಲ್ಲೂ ಚೈತನ್ಯವನ್ನು ಕಾಣುವ ನಿಮ್ಮ ಗುಣ ಅನುಕರಣೀಯ

    ReplyDelete
    Replies
    1. ನಮ್ಮ ಮನಸ್ಸು ನಮ್ಮ ಕನಸು ನಮ್ಮೊಳಗೇ ಇದ್ದಾಗ ಪ್ರತಿ ಕಣದಲ್ಲೂ ಚೈತನ್ಯ ಕಾಣುತ್ತದೆ ಇದು ನನ್ನ ಅನುಭವ ಸಹೋದರಿ. ಹಾಗಾಗಿ ಪ್ರತಿ ಕಣದಲ್ಲೂ ಜೀವಿ ಕಾಣುತ್ತದೆ. ಸುಂದರ ಪ್ರತಿಕ್ರಿಯೆಗಾಗಿ ಧನ್ಯವಾದಗಳು

      Delete
  8. speechless... sundara niroopane...

    tilidukonda vishyagalu saakashtu....

    ReplyDelete
    Replies
    1. Thank you SP... Wanted to write every bit..but somehow i controlled myself...Thank you for reading and commenting it out.

      Delete
  9. ಸೂಪರ್ ಶ್ರೀಕಾಂತಣ್ಣಾ ....

    ಅದೆಷ್ಟು ಚಂದದಿ ನಿಮ್ಮಭಿಮಾನವ ಹೇಳಿದ್ದೀರ ..ಇಷ್ಟ ಆಯ್ತು ...
    ನೀವು ,ಬಾಲು ಸರ್ ಕಾಂಬಿನೇಷನ್ ಎಲ್ರಿಗೂ ಇಷ್ಟ ಆಗ್ಲೇ ಬೇಕು ಬಿಡಿ .

    ReplyDelete
    Replies
    1. ಧನ್ಯವಾದಗಳು ಪುಟ್ಟಿ.. ನೋಡಿದ ಸ್ಥಳ ನೋಡಬೇಕಾದ ಸ್ಥಳ ಇವುಗಳ ಬಗ್ಗೆ ನನಗೆ ತಿಳಿಯದೆ ಆಸಕ್ತಿ ಮೂಡಿಸಿದ್ದು ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳು. ಅವರು ಓಡಾಡಿದ ಸ್ಥಳದಲ್ಲಿ ಹೆಜ್ಜೆ ಇಟ್ಟಾಗ ನನಗರಿವಿಲ್ಲದೆ ಮೈ ಕಂಪಿಸಿದ್ದು ಸುಳ್ಳಲ್ಲ. ಸುಂದರ ಪ್ರತಿಕ್ರಿಯೆ ನಿನ್ನದು

      Delete
  10. ಕಣ್ಣಿಗೆ ಕಟ್ಟುವಂತೆ ನಿಮ್ಮ ಅನುಭವವನ್ನು ಚಿತ್ರಿಸಿದ್ದೀರಿ. ನಿಮ್ಮೊಂದಿಗೆ ಅಲ್ಲಿ ಇದ್ದು ಎಲ್ಲವನ್ನು ನೋಡಿದ ಹಾಗಾಯಿತು. ಸೂಪರ್ :)

    ReplyDelete
    Replies
    1. ಧನ್ಯವಾದಗಳು ನಿವಿ. ತುಂಬಾ ವರ್ಷಗಳ ಹಂಬಲ ನೆರವೇರಿದ ಕ್ಷಣ. ತುಂಬಾ ಖುಷಿ ಪಟ್ಟು ಬರೆದ ಲೇಖನ ನಿಮಗೆ ಇಷ್ಟವಾಗಿದ್ದು ನನಗೆ ಸಂತೋಷವಾಯಿತು

      Delete
  11. Puttana navara haage yeshto yelemareya kayeegala haage iruva yogigalanna parichayeesiddiri.

    ReplyDelete
    Replies
    1. Thank you for the comment Sagar sir...and welcome to my world..!

      Delete