Wednesday, January 16, 2013

ಕುಮಾರ ಪರ್ವತ ಚಾರಣ - ೨೦೧೩ರ ಜನವರಿ ೫-೬!

"ಸಿಂಧೂರ ಲಕ್ಷ್ಮಣನೆಂದರೆ ಸಾಕು ಶೌರ್ಯವು ಮೈಯಲ್ಲಿ ತುಂಬುವುದು" ಸಿಂಧೂರ ಲಕ್ಷಣ ಚಿತ್ರದ ಮೈನವಿರೇಳಿಸುವ ಗೀತೆಯ ಹಾಗೆ ಕುಮಾರ ಪರ್ವತ ಎಂದರೆ ಸಾಕು ಅರ್ಧ ರಾತ್ರಿಯಲ್ಲೂ ಕೂಡ ಏನೋ ಒಂದು ಹೊಸತನ ಮೈ ಮನಸನ್ನು ಆವರಿಸಿಕೊಳ್ಳುತ್ತದೆ.

ವರ್ಷ ೨೦೧೨ ಆರಂಭದಲ್ಲಿ ಇಲ್ಲಿಂದಲೇ ಶುರುಮಾಡಿದ ಅಲೆಮಾರಿಗಳ ಪ್ರವಾಸ, ವರ್ಷಾಂತ್ಯದಲ್ಲಿ ಇಲ್ಲಿಯೇ ಮುಗಿಸುವ ಆಸೆ ಕೈಗೂಡಲಿಲ್ಲ. ಆದರೇನು ಕುಮಾರ ಪರ್ವತ ಚಾರಣ ಎಂದರೆ ನಮ್ಮ ಅಲೆಮಾರಿಗಳ ತಂಡ ಕೊಡುವ ಉತ್ತರ ಒಂದೇ "ಹೋಗೋಣ"

ಈ ಬಾರಿ ಸಂದೀಪ್, ಪ್ರಶಾಂತ್  ಗಿರೀಶ್, ರವಿಕಾಂತ್, ದರ್ಶನ್ ನನ್ನನ್ನು ಜೊತೆಗೂಡಿದರು. ಆರು ಮಂದಿ ಶುಕ್ರವಾರ ರಾತ್ರಿ ೮.೫೦ಕ್ಕೆ ಬಸ್ಸಿನಲ್ಲಿ ಕೂತಾಗ ಒಂದು ರೀತಿಯ ಸಂತಸಭರಿತ ಕುತೂಹಲ. ಪ್ರತಿಬಾರಿಯೂ ಹೊಸ ಅನುಭವ ಕೊಡುತಿದ್ದ ಪರ್ವತ ಈ ಬಾರಿ ತನ್ನೊಡಲಲ್ಲಿ ಏನು ಹುದುಗಿಸಿಕೊಂಡಿದೆಯೋ ಎನ್ನುವ ತವಕ.

ಶನಿವಾರ ಬೆಳಿಗ್ಗೆ  ಐದಕ್ಕೆ ಕುಕ್ಕೆ ಸುಬ್ರಮಣ್ಯದ ನಿಲ್ದಾಣದಲ್ಲಿ ಬಸ್ ನಿಂತಾಗಷ್ಟೇ ಎಚ್ಚರ.  ಬ್ಯಾಗ್ಗಳನೆಲ್ಲ ಒಟ್ಟು ಗೂಡಿಸಿಕೊಂಡು ಬೆಳಗಿನ ಉಪಹಾರಕ್ಕೆ ಬಂದೆವು. ಆಗಲೇ ಅನೇಕ ತಂಡಗಳು ಚಾರಣಕ್ಕೆ ಹೊರಡಲು ಸಿದ್ಧವಾಗಿದ್ದವು.  ಲಘು ಉಪಹಾರ ಮುಗಿಸಿ ಹೆಜ್ಜೆ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ ಅಲೆಮಾರಿಗಳು ತಂಡದ ರಜತ ಸಂಭ್ರಮದ ಚಾರಣಕ್ಕೆ (ಹೌದು ಅಲೆಮಾರಿಗಳ ತಂಡದ ಇಪ್ಪತೈದನೆಯ ಯಾನ ಇದು) ಚಾಲನೆ ನೀಡಿದೆವು.

ಮೊದಲ ಹಂತದ ಚಾರಣ - ಭೀಮನ ಕಲ್ಲು

ಮಾತು ಕಮ್ಮಿ ಹೆಜ್ಜೆ ಹೆಚ್ಚು ಎನ್ನುತ್ತಾ ಸದ್ದಿಲ್ಲದೇ ಮೊದಲ ಐದು ಕಿ.ಮಿ. ಗಳನ್ನೂ ಸಾಗುವ ಉತ್ಸಾಹ ತೋರಿದೆವು. ಕಾಡಿನ  ಏರು ಹಾದಿ ತ್ರಾಸದಾಯಕವಾಗಿತ್ತು. ಆದ್ರೆ ಉತ್ಸಾಹ ಇಮ್ಮಡಿಸುತಿತ್ತು.  ಸುಸ್ತಾದಗಲೆಲ್ಲ ಕೊಂಚ ವಿಶ್ರಾಂತಿ, ಕೊಂಚ ತಿನಿಸು, ಹರಟೆ ತಮಾಷೆ ಮಾತುಗಳು, ಹೊಸ ಹುಡುಗು ದರ್ಶನ್ ಹುಮ್ಮಸ್ಸಿನಲ್ಲಿ ಚಿತ್ರಗಳನ್ನು ತೆಗೆಯುತ್ತ ಇನ್ನಷ್ಟು ಹುರುಪನ್ನು ತುಂಬುತ್ತಿದ್ದರು. ಸುಮಾರು ೨.೫ ಕಿ.ಮಿ.ಗಳು ನಡೆದು ಭೀಮನ ಕಲ್ಲು ತಲುಪಿದಾಗ ಅಲ್ಲಿದ್ದ ತಂಡದ ಜೊತೆ ಮಾತಾಡಿ, ಅವರು ಹೋದ ಮೇಲೆ ಆ ಬೃಹತ್ ಬಂಡೆಯ ಮೇಲೆ ನಮ್ಮ ತ್ರಾಣಗೊಂಡಿದ್ದ ದೇಹವನ್ನು ಹಾಗೆ ಗಾಳಿಗೆ ಮೈಯೊಡ್ಡಿ ವಿರಮಿಸಿದೆವು.

ಎರಡನೇ ಹಂತ - ಪುಷ್ಪಗಿರಿಯ ಹುಲ್ಲುಗಾವಲು
ಅಂದು ಕೊಂಡಂತೆ ಸರಿ ಸುಮಾರು ಬೆಳಗಿನ ೯.೩೦ರ ಸಮಯಕ್ಕೆ ಪುಷ್ಪಗಿರಿ ಹುಲ್ಲುಗಾವಲಿನ ತಾಣಕ್ಕೆ ಬಂದೆವು. ಕೊಂಚ ದೀರ್ಘ ವಿಶ್ರಾಂತಿ ಬೇಕು ಎಂದು ಬಯಸಿದ್ದರಿಂದ ಅಲ್ಲಿಯೇ ಕುಳಿತು ದಣಿವಾರಿಸಿಕೊಳ್ಳುತ್ತ ತಂದಿದ್ದ ಕ್ಯಾರೆಟ್, ಸೌತೆಕಾಯಿ, ಬಿಸ್ಕೆಟ್, ಬ್ರೆಡ್ ಖಾಲಿ ಮಾಡಿದೆವು. ಕಳೆದ ಬಾರಿ ಇದೆ ಜಾಗದಲ್ಲಿ ಕುಳಿತು ಹರಟಿದ ಸುಂದರ ಕ್ಷಣಗಳನ್ನು ಮೆಲುಕು ಹಾಕುತ್ತ ಮತ್ತೆ ಮುಂದೆ ಹೊರಟೆವು.
ದೂರದ ಬೆಟ್ಟ ನುಣ್ಣಗೆ! ಮೊದಲ ಝಲಕ್ !!!

ಮೂರನೇ ಹಂತ - ಅರಣ್ಯ ಇಲಾಖೆ ಕಚೇರಿ 
ಎಲ್ಲರೂ ಒಂದೇ ನಿರ್ಧಾರಕ್ಕೆ ಬಂದೆವು..ಭಟ್ಟರ ಮನೆಯಲ್ಲಿ ನಾಳೆ ಊಟ ಮಾಡುವ ಎಂದು. ಸರಿ ನಿಧಾನವಾಗಿ ಸುಸ್ತಾದ ಕಾಲುಗಳನ್ನು ಎಳೆದುಕೊಂಡು ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಅರಣ್ಯ ಇಲಾಖೆಯ ಕಚೇರಿಯ ಕಡೆ ನಡೆದೆವು. ಚಾರಣ ಮಾಡಬೇಕಿದ್ದ ಪರ್ವತ ತುತ್ತ ತುದಿ ಕಾಣುವ ಇಲ್ಲಿನ ನೋಟ ಮನೋಹರ. ದರ್ಶನ್, ಗಿರೀಶ್, ರವಿ ಕಾಂತ್ ಉತ್ಸುಕರಾಗಿದ್ದರು.  ಕಚ ಕಚ ಅಂತ ಕೆಲ ಚಿತ್ರಗಳನ್ನು ಕ್ಯಾಮೆರ ಪೆಟ್ಟಿಗೆಯೊಳಗೆ ಸೆರೆ ಹಿಡಿದಾಗಿತ್ತು.  "ಅಗೋ ನೋಡಿ ಭಟ್ಟರ ಮನೆ" ಎಂದ ತಕ್ಷಣ ಇನ್ನೊಮ್ಮೆ ಕ್ಯಾಮೆರ ಸದ್ದು ಮಾಡಿತು. ಕಚೇರಿ ಹತ್ತಿರ ನಿಧಾನವಾಗಿ ಬರುತಿದ್ದಾಗ ಅರಣ್ಯಾಧಿಕಾರಿ ಕುಕ್ಕೆಗೆ ಹೊರಟಿದ್ದರು. ನಮ್ಮನ್ನು ನೋಡಿದ ತಕ್ಷಣ
"ಓಹ್ ನಮಸ್ಕಾರ ಚೆನ್ನಾಗಿದ್ದೀರಾ, ಏನೋ ಈ ಸಲ ಬಹಳ ಹೊತ್ತು ಮಾಡಿಬಿಟ್ರಲ್ಲ. ಡಿಸೆಂಬರ್ ತಿಂಗಳಲ್ಲಿ ಬರುತ್ತೀರಾ ಎಂದು ಕೊಂಡಿದ್ದೆ"
"ನಮಸ್ಕಾರ ಸರ್..ನಾವು ಚೆನ್ನಾಗಿದ್ದೇವೆ..ಹೌದು ಬರಬೇಕಿತ್ತು...ಹುಡುಗರಿಗೆ ರಜ ಇರಲಿಲ್ಲ ಹಾಗಾಗಿ ತಡವಾಯಿತು"
"ಒಳ್ಳೇದು ಒಳ್ಳೆ ಸಮಯಕ್ಕೆ ಬಂದಿದ್ದೀರಿ...ಬನ್ನಿ ತಿಂಡಿ ತಿನ್ನೋದಾದ್ರೆ ನೋಡಿ ಅಲ್ಲಿ ಸೊಂಪಾಗಿ ನೆರಳಿದೆ..ಅಲ್ಲೇ ಕುಳಿತು ವಿಶ್ರಾಂತಿ ತೆಗೆದುಕೊಂಡು ನಿಧಾನವಾಗಿ ಹೋಗಿ..ನನಗೆ ಸ್ವಲ್ಪ ಕೆಲಸ ಇದೆ ಕುಕ್ಕೆ ಹೋಗ್ತಾ ಇದ್ದೀನಿ...ನಮ್ಮ ಹುಡುಗ ಇದ್ದಾನೆ ನಿಮಗೆ ಏನಾದರು ಅನುಕೂಲ ಬೇಕು ಅಂದ್ರೆ ಮಾಡಿಕೊಡ್ತಾನೆ:
ಇಷ್ಟು ಆತ್ಮೀಯವಾಗಿ ಮಾತಾಡಿಸುವ ವ್ಯಕ್ತಿ ಈ ಕಾಡಿನಲ್ಲಿ ಸಿಕ್ಕಾಗ ಸುಸ್ತಾದ ದೇಹಕ್ಕೆ ಮತ್ತೆ ಉಲ್ಲಾಸ ತುಂಬಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ ಅಲ್ಲವೇ.
ಗಿರೀಶ್ ತಂದಿದ್ದ ಖಡಕ್ ರೋಟಿ, ಮೊಸರು, ಉಪ್ಪಿನಕಾಯಿ, ದರ್ಶನ್ ತಂದಿದ್ದ ಚಪಾತಿ ಎಲ್ಲ ಅನಾಯಾಸವಾಗಿ ತಮ್ಮ ಪೂರ್ವ ನಿರ್ಧಾರಿತ ಗುರಿ ಸೇರಿದವು. ಒಂದು ಹದಿನೈದು ನಿಮಿಷ ನಿದ್ದೆ ಮಾಡಿ ಸುಮಾರು ೧೨.೦೦ ಘಂಟೆಗೆ ಮುಂದಿನ ಮಹಾನ್ ಯಾನಕ್ಕೆ ಹೊರಟೆವು.

ನಾಲ್ಕನೆ ಹಂತ - ಕಲ್ಲು ಮಂಟಪ 
ಕುಮಾರ ಪರ್ವತ ಚಾರಣ ಸಾಮಾನ್ಯವಾಗಿ ಕಠಿಣ ಅನ್ನುವ ಪದ ಉಪಯೋಗಕ್ಕೆ ಬರುವುದು ಇಲ್ಲೇ.  ಸೂರ್ಯ ತನ್ನ ಮನೆಯಲ್ಲಿರುವ ಒಲೆಯನ್ನು ಉರಿಸುತ್ತಾ ಅತಿ ಹೆಚ್ಚು ಶಾಖ ಹೊಮ್ಮಿಸುವ ಸಮಯ ಇದಾಗಿರುತ್ತೆ. ನೆರಳಿಗೆ ಒಂದು ಗಿಡ ಮರವಿರುವುದಿಲ್ಲ, ಮತ್ತೆ ಏರು ಹಾದಿ ದೇಹದಲ್ಲಿನ ಶಕ್ತಿಯನ್ನು ಉಡುಗಿಸಿಬಿಡುತ್ತದೆ . ಸಾಕಪ್ಪ ಈ ಪರ್ವತದ ಸಹವಾಸ ಎನ್ನುವಷ್ಟು ಹತಾಶೆ ಮೂಡಿಸುತ್ತದೆ ಇದಕ್ಕೆ ನಿದರ್ಶನವಾಗಿ ಇನ್ನೊಂದು ತಂಡದಲ್ಲಿ ಬಂದಿದ್ದ ಮೂರು ನಾಲ್ಕು ಹುಡುಗಿಯರು ಅವರನ್ನು ಕರೆದುಕೊಂಡು ಬಂದಿದ್ದ ಆ ತಂಡದ ನಾಯಕನಿಗೆ ಹಿಗ್ಗಾ ಮುಗ್ಗಾ ಬಯ್ತ ಇದ್ದರು! ಈ ಬಿಸಿಲು, ನೆರಳಿಲ್ಲ..ಎಷ್ಟು  ನೀರು ಕುಡಿದರೂ ಸಾಕಾಗೊಲ್ಲ, ಸಮತಟ್ಟಾದ ಹಾದಿಯಿಲ್ಲ ಅಂತ ಸಹಸ್ರನಾಮಾರ್ಚನೆ ಮಾಡುತ್ತಿದ್ದರು.

ನಮ್ಮ ಜೊತೆ ಬಂದಿದ್ದ ಮಿಕ್ಕೆಲ್ಲರೂ ಹುಮ್ಮಸ್ಸಿನಿಂದ ನಿಧಾನವಾಗಿ ಕಲ್ಲು ಮಂಟಪದೆಡೆಗೆ ಸಾಗುತಿದ್ದರು. ನನಗೆ ತುಂಬಾ ಸುಸ್ತಾಗುತಿತ್ತು. ಒಂದು ನಿಮಿಷ ಸಾಕಪ್ಪ...ಈ ಬಾರಿ ಆಗೋಲ್ಲ.ವಾಪಸ್ ಭಟ್ಟರ ಮನೆಯಲ್ಲಿ ಇರ್ತೀನಿ ನೀವು ಹತ್ತಿ ಬನ್ನಿ ಎಂದು ಕೂಗಿ ಹೇಳುವ ಆಸೆಯಾಗುತ್ತಿತ್ತು. ಆದ್ರೆ ಅವರು ನನ್ನಿಂದ ತುಸು ದೂರದಲ್ಲಿದ್ದರೂ. ಮತ್ತೆ ನಾನೇ ಈ ಚಾರಣಕ್ಕೆ ಹೋಗೋಣ ಅಂತ ಎಲ್ಲರನ್ನು ಕರೆದು ನಾನೇ ಹಿಂದೆ ಬಂದರೇ....ಛೆ ಛೆ ಏನು ಮಾಡೋದು ಅನ್ನುವಾಗ ತಲೆಗೆ ಬಂದದ್ದು...

"ಆಗದು ಎಂದು.... ಕೈಲಾಗದು ಎಂದು
ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವೂ ಮುಂದೆ"

ಮೂರು ಅಣ್ಣಂದಿರು ....ನನ್ನ ಅಣ್ಣ ( ಅಪ್ಪ ), ನಮ್ಮ ಅಣ್ಣ (ಅಣ್ಣಾವ್ರು ), ಬಾಲಣ್ಣ (ಕನ್ನಡ ಚಿತ್ರನಟ ಬಾಲಕೃಷ್ಣ)  ನೆನಪಿಗೆ ಬಂದರು, ಮೂವರಿಗೂ ಮನದಲ್ಲಿಯೇ ವಂದಿಸಿ ನಿಮ್ಮ ಛಲ, ಸಾಹಸ ಮನೋಭಾವದ ಒಂದು ಅಂಶ ನನಗೆ ಕೊಡಿ ಎಂದು ಬೇಡುತ್ತಾ ಹತ್ತಲು ಶುರು ಮಾಡಿದೆ...ಆಶ್ಚರ್ಯ...ಅನಾಯಾಸವಾಗಿ ಕಲ್ಲು ಮಂಟಪದೆಡೆಗೆ ಸಾಗುತ್ತ ಹೋದೆ...
ಸಂದೀಪ್ ಹೇಳಿದ್ರು "ಶ್ರೀಕಾಂತ್..ಇ-ಮೇಲ್ ನಲ್ಲಿ ೨.೩೦ಕ್ಕೆ ಕಲ್ಲು ಮಂಟಪ ಅಂತ ಹಾಕಿದ್ರಿ...ನೋಡಿ ಸಮಯ ಈಗ ಸರಿಯಾಗಿ ೨.೩೦ ಅಂದಾಗ...ಮನಸ್ಸು ಹಾರಾಡುತ್ತಿತ್ತು!

ಐದನೇ ಹಂತ - ಶೇಷ ಪರ್ವತ
ಗಿರೀಶ್, ದರ್ಶನ್ "ಸರ್ ಅದೇನಾ ಕುಮಾರಪರ್ವತ? "
"ಇಲ್ಲ ಗಿರಿ ಅದು ಶೇಷ ಪರ್ವತ..ಅದನ್ನು ದಾಟಿ ಹೋದರೆ ಸಿಗುತ್ತೆ ಕುಮಾರಪರ್ವತ "
"ಮತ್ತೆ ಎಲ್ಲಿ ಉಳಿಯೋದು, ಎಲ್ಲಿ ಮಲಗೋದು"
"ಏನು ಯೋಚನೆ ಬೇಡ..ಎಲ್ಲರಿಗೂ ಸುಸ್ತಾಗಿದೆ...ಶೇಷಪರ್ವತ ಸುಮಾರು ೪.೩೦ - ೫.೦೦ ಘಂಟೆಗೆ ತಲುಪುತ್ತೇವೆ. ಅಲ್ಲಿಂದ ಒಂದು ಐದು ನಿಮಿಷ ನಡೆದರೆ ಕಾಡು ಸಿಗುತ್ತೆ...ಅಲ್ಲಿಯೇ ನಮ್ಮ ಬಿಡಾರ ಹೂಡಿ ಬಿಡೋಣ..ಚೆನ್ನಾಗಿ ಊಟ ಮಾಡಿ..ರಾತ್ರಿ ಮಲಗಿ ಬೆಳಿಗ್ಗೆ ಹೊಸ ಹುರುಪಿಂದ ಕುಮಾರಪರ್ವತಕ್ಕೆ ಹೋಗುವ.."
ಸಂದೀಪ್, ಪ್ರಶಾಂತ್ ಕೂಡ ಇದು ಸರಿಯಾದ ಯೋಚನೆ ಎಂದರು.
ಮುಂದಿನ ಮಾರ್ಗ ತುಂಬಾ ಕಡಿದಾಗಿತ್ತು. ಇಲ್ಲಿಯ ತನಕ ಬಂದಾಗಿದೆ..ಇನ್ನೂ ಹಿಂದಕ್ಕೆ ಹೋಗುವ ಮಾತೆ ಇರಲಿಲ್ಲ..ನಿಧಾನವಾಗಿ ಶೇಷಪರ್ವತದ ತುದಿಯಲ್ಲಿ ನಿಂತಾಗ ಸುಮಾರು ಐದು ಘಂಟೆ. ಸೂರ್ಯ ಅಸ್ತಮಿಸಲು ಸಿದ್ದವಾಗುತಿದ್ದ!
ಆನಂದದ ಸಮಯ - ಅಲೆಮಾರಿಗಳು ಹಕ್ಕಿಗಳ ಹಾಗೆ ಹಾರಾಡುವ ಸಮಯ !

ಆರನೇ ಹಂತ - ಬಿಡಾರ - ಊಟ - ನಿದ್ದೆ 
ಪ್ರಶಾಂತ್ ಮತ್ತು ನಾನು ತಂದಿದ್ದ ಬಿಡಾರಗಳನ್ನು ಬಿಚ್ಚಿ ಸಿದ್ದ ಮಾಡುತಿದ್ದೆವು, ಗಿರೀಶ್, ದರ್ಶನ್ ಸಂದೀಪ್ ಸಹಾಯಕ್ಕೆ ಬಂದರು. ರವಿ ಅದಕ್ಕೆ ಬೇಕಾದ ಅನುಕೂಲ ಮಾಡುತ್ತಾ, ರಾತ್ರಿ ಒಲೆಗೆ ಬೇಕಾದ ಸೌದೆಗಳನ್ನು ಒಟ್ಟು ಗೂಡಿಸುತ್ತಿದ್ದರು. ಮೊದಲಿಗೆ ನಮ್ಮ ಗುಡಾರ ಸಿದ್ಧವಾಯಿತು. ಕಟ್ಟಿಗೆ, ಒಣಗಿದ ಎಲೆ, ಒಲೆ ಕೂಡ ಸಿದ್ಧವಾಯಿತು. ಇನ್ನು ಬೇಕಾಗಿದ್ದು ನೀರು.
ಪ್ರಶಾಂತ್ ಗುಡಾರವನ್ನು ನೋಡಿಕೊಳ್ಳುವ ಹೊಣೆ ಹೊತ್ತುಕೊಂಡ...ಸಂದೀಪ್ ಸೂರ್ಯಾಸ್ತದ ಚಿತ್ರ ತೆಗೆದುಕೊಂಡು ಬರ್ತೀನಿ ಅಂತ ಹೋದರು..ಮಿಕ್ಕ ನಾಲ್ವರು ನೀರು ತರಲೆಂದು ಹೊರಟೆವು. ಸಂಜೆಯ ಸಮಯ..ದಿನವಿಡೀ ಬಿರು ಬಿಸಿಲಿನಲ್ಲಿ ನೆಡೆದು ಹಣ್ಣಾಗಿದ್ದ ದೇಹಕ್ಕೆ ಮುಸ್ಸಂಜೆಯ ತಂಗಾಳಿ ಮುದ ತರುತ್ತಿತ್ತು. ಇದ್ದ ಬಾಟಲಿಗಳು ನೀರಿನಿಂದ ತುಂಬಿ ತುಳುಕುತ್ತಿತ್ತು.

ಓಲೆ ಹಚ್ಚಿ ಪಾತ್ರೆ ಇಟ್ಟಿದ್ದೆ ತಡ...ಎಂ.ಟಿ.ಆರ್ ನ ಸಿದ್ಧಪಡಿಸಿದ ಊಟಕ್ಕೆ ನಾಲಿಗೆ ಕಾತರಿಸುತಿತ್ತು.  ಒಂದೊಂದೇ ಪ್ಯಾಕೆಟ್ ಅಂತ ಸುಮಾರು ೧೨ ಪ್ಯಾಕ್ಕೆಟ್ಗಳು ಎಲ್ಲರ ಹೊಟ್ಟೆಯೊಳಗೆ ಶಿವೈಕ್ಯ ಹೊಂದಿತು. ಸ್ವಲ್ಪ ಚೇತನ ಬಂದ ಮೇಲೆ ಮತ್ತೆ ಹರಟಲು ಶುರು ಮಾಡಿದೆವು.
ಊಟದ ಸಮಯ...ಬಿಸಿ ಬಿಸಿ ಊಟ...ಆಹಾ...!

ಇಲ್ಲಿಯ ತನಕ ಬ್ಯಾಗಿನಲ್ಲಿ ಸುಮ್ಮನೆ ಕೂತಿದ್ದ ಕ್ಯಾಮೆರ ನಿಧಾನವಾಗಿ ಹೊರಬಂದು ಸದ್ದು ಮಾಡಲು ಶುರುಮಾಡಿತು. ನಮ್ಮ ಹೊಟ್ಟೆ ತುಂಬಿತ್ತು..ಕ್ಯಾಮೆರಗೂ ಹೊಟ್ಟೆ ತುಂಬಿಸಿ ಸಂತಸ ನಿದ್ರೆಗೆ ನಮ್ಮನ್ನು ಅರ್ಪಿಸಿಕೊಂಡೆವು.
ಬೆಳಗಿನ ಚಳಿಗೆ ಬಿಸಿ ಬಿಸಿ ಬಿಸಿಸೂಪ್  ಕುಡಿದ ಆ ಕ್ಷಣ !!!

ಏಳನೇ ಹಂತ - ಕುಮಾರ ಪರ್ವತ
ಬೆಳಿಗ್ಗೆ ಬೇಗನೆ ಎದ್ದು ಪ್ರಶಾಂತ್ ತಯಾರಿಸಿದ ಸೂಪ್ ಕುಡಿದು ಚಳಿಗೆ ಮರಗಟ್ಟಿದ್ದ ದೇಹವನ್ನು ಅರಳಿಸಿಕೊಂಡು ಕುಮಾರಪರ್ವತ ಶಿಖರಾಗ್ರಕ್ಕೆ ಬಂದು ನಿಂತಾಗ ಕಂಡ ದೃಶ್ಯ ನೋಡುತ್ತಾ ಮನದಾಳದಲ್ಲಿ ಪದಗಳು ಹುಟ್ಟಿ ಕೊಂಡವು

ಉದಯಿಸಲು ಬಂದ ಉದಯರವಿ!

"ಮೂಡುತ ಬರುವ ಸೂರ್ಯ
ತನ್ನ ಹಿಂದೆ ಇದ್ದ ಕತ್ತಲನ್ನು ಬಡಿದೋಡಿಸಿ
ಹೊಸ ಬೆಳಗಿಗೆ ನಾಂದಿ ಹಾಡುವನು"
ಸುತ್ತ ಮುತ್ತಲಿನ ದೃಶ್ಯ...ನಯನ ಮನೋಹರ!

ಶಿಖರಾಗ್ರ ತಲುಪಿ..ಇಲ್ಲಿಯ ತನಕ ನಮ್ಮನ್ನು ಸುರಕ್ಷಿತವಾಗಿ ಕರೆದು ತಂದ ಆ ದೇವನಿಗೆ ಮನಸಾರೆ ವಂದಿಸಿ, ಕೆಲ ಸುಂದರ ಕ್ಷಣಗಳನ್ನು ಕಳೆದು ಮತ್ತೆ ನಮ್ಮ ಗೂಡಿಗೆ ಹೊರಟೆವು.
ಸುರಕ್ಷಿತವಾಗಿ ತಲುಪಿಸಿದ ದೇವರಿಗೆ ಒಂದು ನಮನ 
ಸುತ್ತಮುತ್ತಲು ಕಾಣುವ ನಯನ ಮನೋಹರ ದೃಶ್ಯಗಳು ಕಣ್ಣಿಗೆ ಹಬ್ಬವನ್ನೇ ಉಂಟು ಮಾದುತಿದ್ದವು!

ದೂರದಲ್ಲಿ ಶೇಷ ಪರ್ವತ!
ಒಬ್ಬೊಬ್ಬರಿಗೆ ಒಂದೊಂದು ರೀತಿ ನೆನಪಲ್ಲಿ ಉಳಿಯುವ ಈ ಕುಮಾರಪರ್ವತ ನಮ್ಮ ಪ್ರಶಾಂತ್ ಜ್ಞಾನ ಪ್ರಭಾವಳಿಯಲ್ಲಿ ಮಿಂದ ಬಗೆ ಹೀಗಿತ್ತು!

ಜ್ಞಾನ ಪ್ರಭಾವಳಿಯಲ್ಲಿ ಅಲೆಮಾರಿಗ ಪ್ರಶಾಂತ್ !

ನೆನಪಿನ ಪುಟದಲ್ಲಿ ದಾಖಲಾಗುವಂತೆ ಅಲೆಮಾರಿಗಳ ತಂಡದ ಒಂದು ಚಿತ್ರ ಶಿಖರಾಗ್ರದಲ್ಲಿ.


ಕುಮಾರ ಪರ್ವತಕ್ಕೆ ಸಾಗುವ ಕಡಿದಾದ ಹಾದಿ. ಮಳೆಗಾಲದಲ್ಲಿ ಇದು ಸದಾ ಹರಿಯುವ ಜಲಪಾತ!...

ಮಳೆಗಾಲದಲ್ಲಿ ಇದು ಜಲಪಾತದ ಹಾದಿ..!

ಸಂದೀಪ್ ನಾವೆಲ್ಲಾ ಬರುವಷ್ಟರಲ್ಲಿ  "ಅಲೆಮಾರಿಗಳು" ತಂಡದ ಹೆಸರನ್ನು ಪರ್ವತದ ಹೃದಯ ಭಾಗದಲ್ಲಿ ಅರಳಿಸಿದ್ದರು.

ಅ;ಅಲೆಮಾರಿಗಳು ತಂಡದ ಹೆಸರು ಭೂತಾಯಿಯ ಹಣೆಯ ಮೇಲೆ!

ನಮ್ಮ ಬ್ಯಾಗ್ಗಳನ್ನ ತೆಗೆದುಕೊಂಡು..ಒಂದು ಸುಂದರ ಚಿತ್ರವನ್ನು ಚಿತ್ರೀಕರಿಸಿ ಕುಮಾರಪರ್ವತಕ್ಕೆ ಶುಭ ವಿದಾಯ ಹೇಳಿದೆವು. 

ನಮ್ಮ ಗುಡಾರದ ಜೊತೆ ನಾವು...!
ಮುಂದಿನ ಪಯಣ ಎಡಬಿಡದೆ ಭಟ್ಟರ ಮನೆ ತಲುಪುವುದಾಗಿತ್ತು. ಗಡಿಯಾರ ಬೆಳಗಿನ ಹತ್ತು ಘಂಟೆ ಎಂದು ಉಲಿಯುತ್ತಿತ್ತು!

ಎಂಟನೆ ಹಂತ - ಭಟ್ಟರ ಮನೆ ಹಾಗೂ ರುಚಿಕರ ಭೋಜನ!
ಸರಿ ಸುಮಾರು ೧೩.೦೦ ಘಂಟೆಗೆ ಭಟ್ಟರ ಮನೆಗೆ ಬಂದೆವು..ಪುಷ್ಕಳ ಭೋಜನ ಸಿದ್ಧವಾಗಿತ್ತು. ನಗುಮೊಗದಲ್ಲಿ ಭಟ್ಟರ ಮನೆಯ ಸಿಬ್ಬಂಧಿಗಳು ಮಾತಾಡಿಸಿದರು. ಶುಚಿರ್ಭೂತರಾಗಿ ಹೊಟ್ಟೆಗೆ ಸಮಾರಾಧನೆಯ ಯೋಗ ಮಾಡಿಕೊಟ್ಟೆವು. ಭಟ್ಟರ ಮನೆಯವರ ಜೊತೆ ಒಂದು ಚಿತ್ರ ನಮ್ಮ ನೆನಪಿಗೆ ಸಿಕ್ಕಿತು. ಕಾಫಿ ಕೇಳಿದೆವು ಅದು ಸಿಕ್ಕಿತು.  ಇನ್ನೇನು ಬೇಕು ಆ ಬೆಟ್ಟದಲ್ಲಿ ಓ ಎಂದರೆ ಯಾರು ಸಿಗುತ್ತಾರೆ?..ಅಂತಹ ರುದ್ರ ರಮಣೀಯ ತಾಣದಲ್ಲಿ ನೆರಳು, ನೀರು, ಆಹಾರ ಯಾರೇ ಕೊಟ್ಟರೂ ಆ ದೇವರ ಸಾಕ್ಷಾತ್ಕಾರವಾದಷ್ಟು ಖುಷಿಯಾಗುತ್ತದೆ ಅಲ್ಲವೇ...ಅಂತಹ ಒಂದು ಸುಂದರ ಜಾಗ ಭಟ್ಟರ ಮನೆ!

ದೇವರ ಮನೆ...ಭಟ್ಟರ ಮನೆಯ ಸಿಬ್ಬಂಧಿ ವರ್ಗದ ಜೊತೆಯಲ್ಲಿ ಅಲೆಮಾರಿಗಳು !

ಒಂಭತ್ತನೇ ಹಂತ - ಕುಕ್ಕೆ ಸುಬ್ರಮಣ್ಯ ಹಾಗು ದೇವರ ದರ್ಶನ!
ಕುಮಾರ ಪರ್ವತದಿಂದ ಹೊರಡಬೇಕಲ್ಲ ಎನ್ನುವ ಭಾರವಾದ ಮನಸು, ಏನೋ ಸಾಧಿಸಿದ ಹುಮ್ಮಸ್ಸಿನಿಂದ ಹಗುರಾದ ದೇಹ ಇವರೆಡನ್ನು ಹೊತ್ತು ಸುಮಾರು ೧೭.೦೦ ಘಂಟೆಗೆ ಬೆಟ್ಟದ ತಪ್ಪಲಿಗೆ ಬಂದೆವು. ಕೊಂಚ ಕಾಲ ವಿರಮಿಸಿಕೊಂಡು..ಸ್ನಾನಕ್ಕೆ ಕುಮಾರಧಾರ ನದಿಗೆ ಹೊರಟೆವು. ನದಿ ಸ್ನಾನ ಮುಗಿಸಿ ಹೊರಬಂದಾಗ.ಒಂದು ಆಘಾತ ಕಾಡಿತ್ತು..ಬಂದ ಆಟೋ ರಿಕ್ಷಾದಲ್ಲಿ ಸಂದೀಪ್ ಅವರ ಕ್ಯಾಮೆರಾದ ಟ್ರೈ-ಪಾಡ್ ಬಿಟ್ಟಿದ್ದೆವು. ನಮ್ಮೆಲ್ಲರ ಪ್ರಾರ್ಥನೆ ಒಂದೇ ಆಗಿತ್ತು..ಹೇಗಾದರೂ ಆ ಕಳೆದ ಹೋದ ವಸ್ತು ನಮ್ಮ ಕೈಸೇರಲಿ ಎಂದು.  ಅಲ್ಲಿಯೇ ಇದ್ದ ಕೆಲ ಆಟೋ ರಿಕ್ಷ ಚಾಲಕರಿಗೆ ನಾವು ಬಂದ ಆಟೋ ಚಾಲಕನ ಗುರುತು ಎಲ್ಲ ಹೇಳಿದೆವು...ಹತ್ತೇ ನಿಮಿಷ ಟ್ರೈ-ಪಾಡ್ ನಮ್ಮ ಕೈಯಲ್ಲಿ ಇತ್ತು. ಎಲ್ಲ ಒಳ್ಳೆಯ ಮನಸಿನ ಮಹಿಮೆ...ದೇವರ ಮಹಿಮೆ...!
ದೇವರ ದರ್ಶನವಾಯಿತು..ಮನಸಿಗೆ ಸಂತಸವಾಯಿತು. ದೇವಸ್ಥಾನದಲ್ಲಿ ಊಟ ಮಾಡುವಷ್ಟು ಸಮಯವಿಲ್ಲದ ಕಾರಣ, ಅಲ್ಲಿಯೇ ಒಂದು ಹೋಟೆಲ್ನಲ್ಲಿ ಸಿಕ್ಕ ಮಸಾಲೆ ದೋಸೆ, ಕಾಫಿಯನ್ನು ಹೀರಿ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದೆವು.

ಹತ್ತನೇ ಹಂತ - ವಾಪಸ್ ಬೆಂಗಳೂರಿಗೆ
ನಿಲ್ದಾಣಕ್ಕೆ ಬಂದಾಗ ವೈಭವ ಬಸ್ ನಮಗಾಗಿ ಕಾದಿತ್ತು. ನಮ್ಮ ಲಗೇಜ್ಗಳನ್ನೂ ಅದರ ಸ್ಥಾನಕ್ಕೆ ಸೇರಿಸಿ ಸೀಟಿಗೆ ಒರಗಿ ಕಣ್ಣು ಮುಚ್ಚಿದೆವು...ಕಣ್ಣು ಬಿಟ್ಟಾಗ ಯಾರಿ ನವರಂಗ ಸರ್ಕಲ್ ಅಂತ ಹೇಳುತ್ತಿದ್ದ ಧ್ವನಿ ಎಚ್ಚರಿಸಿತು.  ಮೆಜೆಸ್ಟಿಕ್ ನಿಲ್ದಾಣಕ್ಕೆ ಬಂದು..
ಆ ಚಳಿಯಲ್ಲಿ ಬಿಸಿ ಬಿಸಿ ಕಾಫಿ ಕುಡಿದು ಎಲ್ಲ ಸ್ನೇಹಿತರಿಗೆ ವಿದಾಯ ಹೇಳಿದಾಗ ಕಾಫಿ ಅಂಗಡಿಯಲ್ಲಿದ್ದ ಕುಕ್ಕೆ ಸುಬ್ರಮಣ್ಯ ದೇವರ ಚಿತ್ರ ಒಮ್ಮೆ ಕಣ್ಣು ಮಿಟುಕಿಸಿದ ಅನುಭವವಾಯಿತು. ಅಲ್ಲಿಯೇ ದೇವರಿಗೆ ನಮ್ಮ ನಮನಗಳನ್ನು ಸಲ್ಲಿಸಿ ನಮ್ಮ ನಮ್ಮ ಗೂಡಿಗೆ ಸೇರಿಕೊಂಡೆವು. 

8 comments:

  1. Sakkattu narration maga!!!! kannige kattida hage!!

    ReplyDelete
    Replies
    1. ರವಿ ಕಾಣದ್ದನ್ನ ಕವಿ ಕಂಡ...ಕವಿ ಕಾಣದ್ದನ್ನ ಕಪಿ ಕಂಡ...ಹಾಗೆ ಬರೆದೆ..ಧನ್ಯವಾದಗಳು ಗುರು!

      Delete
  2. ಉತ್ತಮ ನಿರೂಪಣೆಯೊಂದಿಗೆ ಅತ್ಯುತ್ತಮ ಫೋಟೋಗಳು. ಫೋಟೋಗಳೇ ಇಷ್ಟು ಚನ್ನಾಗಿರಬೇಕಾದರೆ ಅಲ್ಲಿಯ ತಾಣಗಳು ಇನ್ನೆಷ್ಟು ಚಂದ ಇರಬೇಡ? ಪ್ರವಾಸ ಕಥನ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಶ್ರೀಕಾಂತ .

    ReplyDelete
    Replies
    1. ಪ್ರಕೃತಿಯಲ್ಲಿ ಬೆರೆತಾಗ, ಕಲೆತಾಗ ಒಳಗಿನ ಅಹಂ ದೇಹದಿಂದ ಹೊರಗೆ ಬಂದು...ನಾನಿದ್ದರೆ ಇಲ್ಲೆಲ್ಲಾ ಬರಲಾಗದು..ನಾನು ಹೋಗಿ ಬರುವೆ ಎನ್ನುವಂತಹ ಸುಂದರ ತಾಣಗಳು...ಧನ್ಯವಾದಗಳು ಚಿಕ್ಕಪ್ಪ..ಸುಂದರ ಅನಿಸಿಕೆಗೆ

      Delete
  3. ಚಾರಣದಲ್ಲಿನ ಸಂತೋಷ ಮತ್ತು ಕಷ್ಟಗಳನ್ನು ಅತಿಶಯೋಕ್ತಿ ಎನಿಸದಂತೆ ವಿವರಿಸಿದ್ದೀರಿ ಅಣ್ಣಯ್ಯ...
    ಒಂದೊಂದೇ ಹಂತವಾಗಿ ಮೂಡಿಬಂದ ಚಾರಣದ ಘಟ್ಟಗಳು ಓದುಗನ ಮನಸ್ಸಲ್ಲಿ ಅಚ್ಚಳಿಯದೇ ನಿಲ್ಲುತ್ತದೆ.. ನಿಮ್ಮ ಬರಹ ನಮ್ಮೊಳಗೂ ಚಾರಣದ ಅನುಭವ ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ. ಮತ್ತೊಂದು ಸುಂದರ ಲೇಖನ ಅಣ್ಣಯ್ಯ..

    ReplyDelete
    Replies
    1. ಬೆಳದಿಂಗಳು ಚಂದಿರ ಇದ್ದಾಗಲೆಲ್ಲ ಹರಿಯುತ್ತದೆ...ಪುಟ್ಟಿ ಸುಷ್ಮಾ ನೀನು ಸದಾ ಬೆಳದಿಂಗಳು ಸುರಿಸುವ ಮುದ್ದು ಸಹೋದರಿ..ಪ್ರಕೃತಿ ಮಾತೆಯ ಜೊತೆ ಚಾರಣದ ಅನುಭವದ ಪರಿಯೇ ಚಂದ..ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಪುಟ್ಟಿ..

      Delete
  4. ಮೊದಲಿಗೆ ಒಂದು ಮಾತು ನಿಮಗೆ ವಿಶ್ವ ಪ್ರವಾಸದ ಆಶೀರ್ವಾದ ಲಭಿಸಲಿ.

    ನನಗೆ ಮೆಚ್ಚುಗೆಯಾದ ಚಿತ್ರಗಳು:
    1. ಆನಂದದ ಸಮಯ - ಅಲೆಮಾರಿಗಳು ಹಕ್ಕಿಗಳ ಹಾಗೆ ಹಾರಾಡುವ ಸಮಯ !
    2. ಜ್ಞಾನ ಪ್ರಭಾವಳಿಯಲ್ಲಿ ಅಲೆಮಾರಿಗ ಪ್ರಶಾಂತ್ !

    ಕ್ಯಾಮರಾ ಟ್ರೈ ಪಾಡ್ ಬಗೆಗೆ ಓದಿದರೆ ನನಗೆ ನೆನಪಾದದ್ದು ನಾನು ವಿನ್ ಟೀವಿಯಲ್ಲಿ ಹೀಗೇ ಆಟೋದಲ್ಲಿ ಕಳೆದುಕೊಂಡ ಮೈಕ್ ಮತ್ತು ಸನ್ ಗನ್ !

    ReplyDelete
    Replies
    1. ಬದರಿ ಸರ್ ನಿಮ್ಮ ಹಾರೈಕೆಗೆ ಶಿರಬಾಗಿ ವಂದಿಸುವೆ...ದೇವರ ಅಭಯ ಹಸ್ತ ಕಾಣದ ಬೆಳಕಿನಂತೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆ ಟ್ರೈ ಪಾಡ್ ಮತ್ತೆ ಸಿಕ್ಕದ್ದು..ಧನ್ಯವಾದಗಳು ನಿಮ್ಮ ಶುಭಾಹಾರೈಕೆಯ ಪ್ರತಿಕ್ರಿಯೆಗೆ

      Delete