Monday, October 29, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೪

ಗಂಗಾವತರಣದಲ್ಲಿ ಶಿವ ತನ್ನ ಜಟೆಯನ್ನು ಬಿಚ್ಚಿ ಗಂಗೆಯನ್ನು ಸೆರೆ ಹಿಡಿದು ನಿಂತಾಗ...
ಭಗೀರಥ ಮಹಾರಾಜ  "ಇಳಿದು ಬಾ ತಾಯಿ ಇಳಿದು ಬಾ..ಹರನ ಜಡೆಯಿಂದ" ಎಂದು ಹಾಡು ಹೇಳಲು ನಿಲ್ಲುತ್ತಾನೆ...

ಅರೆ ಇದೇನು ಸಹಸ್ರ ಲಿಂಗ ನೋಡಿ ಇವನಿಗೆ ತಲೆ ತಿರುಗಿತೆ ಎನ್ನುವಷ್ಟರಲ್ಲಿ.... ನಮ್ಮ ಅಲೆಮಾರಿಗಳು ತಂಡದ ಖಾಯಂ ಸದಸ್ಯ "Between the Books" ಬ್ಲಾಗಿನ ಸಂದೀಪ್ ಹೇಳಿದ್ದು..."ಶ್ರೀಕಾಂತ್ ನಮ್ಮ ಅಲೆಮಾರಿಗಳು ತಂಡ ಸಾತೊಡ್ಡಿ ಜಲಪಾತದ ದಾರಿಯನ್ನು ಸಂಜೆಯ ಇರುಳು ಬೆಳಕಿನಲ್ಲಿ ನೋಡಿ ಸವಿಯಬೇಕು ಎನ್ನುವುದು ನನ್ನ ಬಯಕೆ" ನೆನಪಿಗೆ ಬಂತು. ಸಾರಥಿಗೆ ಹೇಳಿದೆ."ನಡೀರಿ ಸುನೀಲ್ ಸಾತೊಡ್ಡಿ ಜಲಪಾತಕ್ಕೆ ಹೋಗೋಣ"
ಸಾತೊಡ್ಡಿ ಜಲಪಾತಕ್ಕೆ ಪಯಣದ ಹಾದಿ!
ಸಿರ್ಸಿಯಿಂದ ಯೆಲ್ಲಾಪುರ ತಲುಪಿ ಅಲ್ಲಿಂದ ಬಲಕ್ಕೆ ತಿರುವು ತೆಗೆದುಕೊಂಡು ಸಾಗಿದರೆ ಸಿಗುತ್ತೆ ಸಾತೊಡ್ಡಿ ಜಲಪಾತಕ್ಕೆ ಹಾದಿ. ಮಾಗೋಡ್ ಜಲಪಾತ ಮತ್ತು ಜೇನುಕಲ್ಲು ಗುಡ್ಡದ ವೀಕ್ಷಣ ಸ್ಥಳವನ್ನು ಕೈ ಬಿಟ್ಟೆವು,  ಕಾರಣ, ಸಾತೊಡ್ಡಿ ಜಲಪಾತ ಕಾಡು ದಾರಿಯಲ್ಲಿ ಹಾದು ಹೋಗಬೇಕಿತ್ತು ಮತ್ತು ಆರು ಘಂಟೆ ಆದ ಮೇಲೆ ಆ ಜಲಪಾತ ವೀಕ್ಷಣೆಗೆ ಅವಕಾಶವಿರಲಿಲ್ಲ.

ಸಂದೀಪ್ ಹೇಳಿದಂತೆ ಆ ಕಾಡು ದಾರಿ ನಿಜವಾಗಲೂ ಸಂಜೆಯ ಇರುಳು ಬೆಳಕಿನಲ್ಲೇ ಇತ್ತು..ನಾವು ಹೋದಾಗ ಸುಮಾರು ಐದು ಘಂಟೆ..ಆದ್ರೆ ಆಗಲೇ ಸೂರ್ಯಾಸ್ತವಾದಂತೆ ಕತ್ತಲು ತನ್ನ ದಾಳಿ ಇಟ್ಟಿರುವ ಕುರುಹುಗಳು ಇದ್ದವು..
ಕೊಡಸಳ್ಳಿ ಅಣೆಕಟ್ಟಿನ ಹಿನ್ನೀರಲ್ಲಿ ಮುಳುಗುತ್ತಿರುವ ಸೂರ್ಯ
ನಮ್ಮ ಸಾರಥಿ ಸುನೀಲ್ ಇಂತಹ ಜಾಗಗಳನ್ನು ಬಲು ಇಷ್ಟ ಪಡುತ್ತಾರೆ ಹಾಗು ಇಂತಹ ಸಾಹಸ ಜಾಗಗಳಲ್ಲಿ ಅವರ ಡ್ರೈವಿಂಗ್ ಬಗ್ಗೆ ನಮಗೆ ಬಲು ವಿಶ್ವಾಸ..ನಗುತ್ತ ನಲಿಯುತ್ತ ಆ ಇಳಿಜಾರಾದ ಕಾಡಿನ ಹಾದಿಯನ್ನು ಇಳಿಯುತ್ತ ಸಾಗಿತು ನಮ್ಮ ವಾಹನ..
ಎಲ್ಲಿ ನೋಡಿದರು ಹಸಿರು ಹೊದಿಕೆ ಹೊದ್ದು ಮಲಗಿದ್ದಳು ಪ್ರಕೃತಿ ಮಾತೆ

ಸೂರ್ಯ ತನ್ನ ಮನೆಗೆ ಪಯಣ ಬೆಳೆಸುತಿದ್ದ...ಕೊಡಸಳ್ಳಿ ಅಣೆಕಟ್ಟಿನ ಹಿನ್ನೀರು ಸುಂದರವಾಗಿ ಕಾಣುತಿತ್ತು..ಜಲಪಾತದ ನೀರು ಅಣೆಕಟ್ಟಿಗೆ ಹರಿದು ಸಾಗುವ ದೃಶ್ಯ ಮನಮೋಹಕವಾಗಿತ್ತು..ಸೂರ್ಯ ತನ್ನ ಮನೆಗೆ ಹೋಗುವ ಮೊದಲು ಹಿನ್ನೀರನ್ನು ಬಂಗಾರದ ನೀರಾಗಿ ಮಾಡಿದ್ದ...ಅದರ ಸೊಗಸು ನೋಡಿಯೇ ಸವಿಯಬೇಕು..ನಮ್ಮ ಕ್ಯಾಮೆರ ಹೊಟ್ಟೆ ಹಸಿವು.. ಇನ್ನಷ್ಟು ಬೇಕು..ಎಂದು ದಯನೀಯವಾಗಿ ಬೇಡುತಿತ್ತು ...ಆದ್ರೆ ಸಮಯದ ಅಭಾವವಿದ್ದ ಕಾರಣ..ವಾಹನದಿಂದಲೇ ಒಂದೆರಡು ಚಿತ್ರಗಳನ್ನು ಸೆರೆಹಿಡಿದು ಸಾಗಿದೆವು.
ಜಲಪಾತ ವೀಕ್ಷಣೆಗೆ ಕೆಲವು ಸೂಚನೆಗಳು 
 ನಮ್ಮ ವಾಹನ ನಿಂತಾಗ, ಅಲ್ಲಿ ಒಂದು ಪುಟ್ಟ ಮಗು "ಟಿಕೆಟ್ ಟಿಕೆಟ್" ಎಂದು ಸುಮಧುರ (?) ಧ್ವನಿಯಲ್ಲಿ ಕೂಗಿತು...ನಾನು "ಟಿಕೆಟ್ ಟಿಕೆಟ್..ಆರು ಟಿಕೆಟ್ ಕೊಡು ಪುಟ್ಟಿ" ಅಂದೇ.ಅಲ್ಲಿದ್ದ ಆ ಮಗುವಿನ ತಾಯಿ ತನ್ನೆಲ್ಲ ಮೊವತ್ತೆರಡು  ದಂತಗಳನ್ನು ತೋರಿಸಿ..ಮೂವತ್ತು ರುಪಾಯಿ ಅಂದರು..
ಕೈ ಬೀಸಿ ಕರೆದಳು ತಾಯಿ ಸಾತೊಡ್ಡಿ ಜಲಪಾತ 
ನಿಜವಾಗಲು ಸಂದೀಪ್ ಮಾತು ನಿಜವಾಗಿತ್ತು..ಆ ಕಾಡಿನ ಹಾದಿ, ಜಲಪಾತ ತಲುಪಲು ಸಾಗುವ ಸುಮಾರು ಅರ್ಧ ಕಿ.ಮಿ.ಮಾರ್ಗ ಸೊಗಸಾಗಿತ್ತು..ನಮ್ಮ ಕ್ಯಾಮೆರಾಗೆ ಹೆಚ್ಚಿನ ಅವಕಾಶ ಕೊಡದೆ.ನಾವು ಜಲಪಾತದ ಬುಡಕ್ಕೆ ಸಾಗಿದೆವು..

ಜಲಪಾತದ ಬುಡಕ್ಕೆ ಸಾಗುವ ಹಾದಿಯಲ್ಲಿ ತಿಂಡಿ ತಿನಿಸಿಗೆ ಅವಕಾಶವಿತ್ತು..ಮೊದಲೇ ಹೇಳಿದರೆ ಊಟ, ಪಲಾವ್ ಕೂಡ ಸಿದ್ಧ ಮಾಡುತ್ತೇವೆ ಎನ್ನುವ ಫಲಕ ಇತ್ತು..ಸಮಯವಿಲ್ಲದ ಕಾರಣ ಅಲ್ಲಿಗೆ ಭೇಟಿ ಕೊಡಲು ಅವಕಾಶವಿರಲಿಲ್ಲ..
ಹೊಟ್ಟೆ ತುಂಬಿಸಿಕೊಳ್ಳಲು ಇಲ್ಲಿ...ಕಣ್ಣು ತುಂಬಿಸಿಕೊಳ್ಳಲು ಇನ್ನರ್ಧ ಕಿಮೀ ಗಳ ಹಾದಿ 
ಆ ಗಂಗಾವತರಣದ ದೃಶ್ಯಗಳನ್ನು ನನ್ನ ಮಾತಿಗಿಂತಲೂ ಚಿತ್ರಗಳೇ ಚೆನ್ನಾಗಿ ವರ್ಣಿಸುತ್ತವೆ..
ದೂರದಲ್ಲಿ ಕೈ ಬೀಸುತ್ತ ಹರಿ ಬೀಳುವ ಜಲಧಾರೆ!!
ಆ ಹಸಿರಿನ ಹೊದಿಕೆ ಹೊದ್ದ ಆ ಕಣಿವೆಯಲ್ಲಿ ಬೂದು ಬಣ್ಣದ ಬಂಡೆಗಳು ಸೆರಗಿಗೆ ಸುಂದರ ನೆರಿಗೆಯನ್ನು ಕೊಟ್ಟರೆ.ತಿಳಿ ಹಾಲಿನ ಜಲಪಾತ ಒಳ್ಳೆಯ ಜರಿಯನ್ನು  ಕೊಟ್ಟಿತ್ತು..ಆ ಸುಂದರ ದೃಶ್ಯ ಮನಮೋಹಕ..


ಈ ಜಲಪಾತವನ್ನು ಅತಿ ಹತ್ತಿರದಿಂದ ಹಾಗೂ ಅತಿ ಕಡಿಮೆ ಎತ್ತರದಿಂದ ಅಗಲವಾಗಿ ಸುರಿಯುವ ಜಲಧಾರೆ ಎಂದರೆ ತಪ್ಪಿಲ್ಲ...ನೀವೇ ನೋಡಿ..
ಹಾಲು ಹಾಲಾಗಿ ಬೀಳುವ ಪರಿ 
 ಎಷ್ಟು ನೋಡಿದರು ಸಾಲದು..ಪ್ರತಿಬಾರಿಯೂ ತನ್ನ ಹೊಸತನ ಬಿಚ್ಚಿಡುವ ಜಲಪಾತ !!!
ಸುಂದರ ಜಲಧಾರೆ...
 ನಾವು ಹೊರಡುವಾಗ.... ಭಾನು "ನಾ ಹೊರಟೆ..ನಿಮಗಾಗಿ ಬಾನನ್ನು ರಂಗು ರಂಗಾಗಿ ಮಾಡಿದ್ದೇನೆ" ಎಂದು ಹೇಳಿದ!!
 "ಭಾನು"ವಿನಿಂದ ರಂಗಾದ "ಬಾನು"!
ಮೊದಲಬಾರಿಗೆ ನನ್ನಲ್ಲಿ ಮೌನ ಮಾತನ್ನು ಸೋಲಿಸಿತು..ಆ ದೃಶ್ಯ ವ್ಯಭವ ನನ್ನನ್ನು ಮೂಕನನ್ನಾಗಿ ಮಾಡಿತ್ತು.  ಸುಂದರ ಜಲಪಾತ, ಪ್ರಾಯಶಃ ಬಲು ಸಾಹಸದ ಹಾದಿಯಾಗಿದ್ದರಿಂದ ಜಲಪಾತದ ಸುತ್ತಾ ಮುತ್ತಾ ಕಸ ಕಡ್ಡಿಗಳು ಕಡಿಮೆ ಇದ್ದವು ಮತ್ತು ಜಲಪಾತವು ಸುಂದರವಾಗಿತ್ತು..ನೀರಲ್ಲಿ ಇಳಿಯುವ ಸಾಹಸದ ಸಾಧ್ಯತೆಗಳು ಕಡಿಮೆ ಇರುವುದು ಈ ಜಲಪಾತವನ್ನು ಸ್ವಚ್ಛವಾಗಿಡಲು ಸಹಾಯ ಮಾಡಿದೆ ಅನ್ನಿಸಿತು. ಯೆಲ್ಲಪುರಕ್ಕೆ ನಮ್ಮ ಪಯಣ ಕತ್ತಲಿನಲ್ಲಿ ಸಾಗಿತ್ತು.ನಮ್ಮ ಸಾರಥಿ ಸುನೀಲ್ ಜಾಗರೂಕತೆಯಿಂದ ನಿಧಾನವಾಗಿ ವಾಹನ ಚಲಿಸುತ್ತಿದ್ದರು..ಮಾತು ಸಾಗಿತ್ತು..ಸುನೀಲ್ "ಸರ್ ನಿಮ್ಮ ಜೊತೆ ಬಂದ್ರೆ..ಕಾಣದೆ ಇರುವ ಜಾಗವನ್ನು ತೋರಿಸುತ್ತೀರಿ..ಸೂಪರ್ ಸರ್ ನಿಮ್ಮ ಗುಂಪು ಎಂದರು"

ಯೆಲ್ಲಾಪುರದ ಚೆಕ್-ಪೋಸ್ಟ್ ಬಳಿ  ಇದ್ದ ಒಂದು ಅಂಗಡಿಯಲ್ಲಿ ಜಲ್ಜೀರ, ಐಸ್ ಕ್ರೀಂ, ಬೋಟಿ ಬಿಸ್ಕೆಟ್, ಕಾಫಿ ಟೀ, ಎಲ್ಲವು ಸೊಗಸಿತ್ತು. ನಮ್ಮ ಮುಂದಿನ ಗುರಿ ಇದ್ದದ್ದು ರಾತ್ರಿಗೆ ವಾಸ್ತವ್ಯದ ವ್ಯವಸ್ಥೆ ..ಅದು ಒಂದು ಸುಂದರ ಕಥೆ..

(ಸಶೇಷ)

11 comments:

  1. Wow Srikanth.... kannige kattidanta drushyagaLu, nimma vimarshe too good. Jeevanadalli omme illige hogale beku anniside.
    Thanks for sharing such wonderful trip :)

    ReplyDelete
  2. ನಿಸರ್ಗ ರಮಣೀಯ ....ನೀರಧಾರೆ , ಸೂರ್ಯಾಸ್ತಮಾನ ಚಿತ್ರಗಳು ಕ್ಯಾಮರಾದಲ್ಲಿ ಅಧ್ಭುತವಾಗಿ ಸೆರೆಯಾಗಿದೆ...

    ReplyDelete
  3. ಶ್ರೀಕಾಂತ್ ಸಾರ್ ಸಾತೊಡ್ಡಿ ಫಾಲ್ಸ್ ಬಗ್ಗೆ ಒಳ್ಳೆಯ ಮಾಹಿತಿ , ಚಿತ್ರಗಳ ಮಾಲಿಕೆಯಂತೂ ಬಹಳ ಇಷ್ಟಾ ಆಯ್ತು. ನಿಮ್ಮ ಅನುಭವ ಮುಂದೆ ನಮಗೆ ದಾರಿದೀಪವಾಗಲಿದೆ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  4. ೪ನೇ ಭಾಗವೂ ಸೂಪರ್ರು.

    ಕರ್ನಾಟಕದ ಜಲಪಾತಗಳಲಿ ಎಂದು ಮೀಯುವೆನೋ?

    "ಕೊಡಸಳ್ಳಿ ಅಣೆಕಟ್ಟಿನ ಹಿನ್ನೀರಲ್ಲಿ ಮುಳುಗುತ್ತಿರುವ ಸೂರ್ಯ" ಚಿತ್ರವಂತೂ ವಾಲ್ ಪೋಸ್ಟರಿನಂತೆ ಅದ್ಭುತ.

    ಬರೀ ನಮ್ಮ ಜಲಪಾತಗಳಲ್ಲೇ ಹಲವು ಸಿನಿಮಾ ಗೀತೆಗಳನ್ನು ಚಿತ್ರೀಕರಿಸಬಹುದು ಅಲ್ಲವೇ?




    ReplyDelete
  5. ರೂಪ..ಧನ್ಯವಾದಗಳು..ಒಳ್ಳೆಯ ಸ್ಥಳ ಹೋಗಿ ಬನ್ನಿ..

    ReplyDelete
  6. ಧನ್ಯವಾದಗಳು ಗಿರೀಶ್..ನಿಮ್ಮ ಪ್ರೋತ್ಸಾಹ ನಮಗೆ ದಾರಿ ತೋರುವ ಬೀಡು..

    ReplyDelete
  7. ಸುದೀಪ ಹೌದು ಆ ಪ್ರಕೃತಿಯ ರಮ್ಯ ತಾಣದಲ್ಲಿ ಕಳೆದ ಹೊತ್ತು ಅವರ್ಣನೀಯ ಧನ್ಯವಾದಗಳು ನಿಮಗೆ

    ReplyDelete
  8. ಬಾಲೂ ಸರ್..ಧನ್ಯವಾದಗಳು ನೀವು ಮಾಹಿತಿಯ ಕಣಜ..ನಿಮ್ಮಿಂದ ಬರುವ ಪ್ರೋತ್ಸಾಹದ ನುಡಿಗಳು ನಿಜಕ್ಕೂ ಸಂತಸ ತರುತ್ತದೆ..

    ReplyDelete
  9. ಬದರಿ ನಮ್ಮ ಕರುನಾಡಿನಲ್ಲಿ ಇರುವ ಸ್ಥಳಗಳು ಒಂದಕ್ಕಿಂತ ಒಂದು ಅಪೂರ್ವ..ಅದನ್ನ ಚೆನ್ನಾಗಿ ಬಿಂಬಿಸಿದ್ದು ಪುಟ್ಟಣ್ಣ..ಧನ್ಯವಾದಗಳು ನಿಮ್ಮ ಅನಿಸಿಕೆಗೆ

    ReplyDelete