Showing posts with label ಯಾಣ. Show all posts
Showing posts with label ಯಾಣ. Show all posts

Saturday, November 3, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೮ (ಕಡೆಯ ಕಂತು)

ಯಾಣ ದರ್ಶನದಿಂದ ದೇಹದಲ್ಲಿನ ಸೊಕ್ಕು ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು.

ದೇವರ ಸೃಷ್ಟಿಯ ಮುಂದೆ ನಾವೆಂತ ಕುಬ್ಜರು ಎನ್ನುವ ಮಾತು  ಯಾಣದ ಭೈರವೇಶ್ವರ ಶಿಖರದ ಮುಂದೆ ನಿಂತಾಗ ಅರಿವಾಯಿತು. ನಾವೇನೆ ಜೀವನದಲ್ಲಿ ಸಾಧಿಸಿದರು ಮಡಿಕೆ ಮಡಿಕೆಯಾಗಿ ಒಗ್ಗಟ್ಟಿನಲ್ಲಿ ನಿಂತು ಚೂಪು ತುದಿಗಳಿಂದ ನಮ್ಮನ್ನು ಅಣಕಿಸುವಂತೆ ಭಾಸವಾಯಿತು. ನಿನ್ನ ಗುರಿ ಹರಿತವಾಗಿದ್ದಾಗ ಏನು ಬೇಕಾದರೂ ಸಾಧಿಸಬಲ್ಲೆ "ಕಾಂತ" ಎನ್ನುವಂತೆ ಭೈರವೇಶ್ವರ ತಂಗಾಳಿ ಬೀಸಿ ಆಶೀರ್ವದಿಸಿದ.  ಮೋಹಿನಿ ಶಿಖರ ಭೈರವೆಶ್ವರನಿಗೆ ಸರಿಸಾಟಿಯಾಗಿ ನಿಂತು..ನೋಡು "ಕಾಂತ" ಭೈರವೇಶ್ವರ ನಿನ್ನ ಗುರಿಯ ಹಾಗೆ.ನಾನು ಅದರ ಫಲಿತಾಂಶದ ಹಾಗೆ.  ಜೀವನದ ಇಳಿಜಾರು ಹಾದಿ ಜಾಸ್ತಿ ಹೊತ್ತು ಇರುವುದಿಲ್ಲ, ನಿನಗೆ ಏರು ಹಾದಿ ಸಧ್ಯದಲ್ಲೇ ದೊರೆಯಲಿದೆ ಎಂದು ಹೇಳಿತು. ಧನ್ಯನಾದೆ ಹರಿ-ಹರ ಎನ್ನುತ್ತಾ ರೊಕ್ಕವನ್ನು ಪರೀಕ್ಷಿಸುವ ಗೋಕರ್ಣದ ಕಡೆಗೆ ಚಲಿಸುವಂತೆ ನಮ್ಮ ವಾಹನಕ್ಕೆ ಹೇಳಿದೆ.

ಯಾಣದಿಂದ  ಗೋಕರ್ಣಕ್ಕೆ ...ಸೊಕ್ಕಿನಿಂದ ರೊಕ್ಕದ ಕಡೆಗೆ ನಕಾಶೆ 

"ಪೂಜೆ ಮಾಡಿಸಬೇಕೆ, ಆತ್ಮ ಲಿಂಗಕ್ಕೆ ನೀವೇ ಅಭಿಷೇಕ ಮಾಡಬಹುದು, ಮನಸಿನಲ್ಲಿ ಏನಾದರು ಪೂಜೆ ಮಾಡಿಸಬೇಕು ಅಂದುಕೊಂಡಿದ್ದರೆ ಅಲ್ಲಿ ಚೀಟಿ ಬರೆಯಿಸಿ..." ಈ ಮಾತುಗಳನ್ನು ಧ್ವನಿಮುದ್ರಿಕೆಯಂತೆ ಅಲ್ಲಿನ ಹಲವಾರು ಅರ್ಚಕರು ಬಾಯಿ ಪಾಠ ಮಾಡಿಕೊಳ್ಳಲು ಇರುವಂತೆ ನಮ್ಮನ್ನು ಕೇಳುತ್ತಲೇ ಇದ್ದರು.  ನಾವು ಬೇಡ ಎಂದು ಸೀದಾ ಗೋಕರ್ಣನಾಥನನ್ನು ದರ್ಶನ ಮಾಡಿ, ಆಶೀರ್ವಾದ ಪಡೆದು ಹೊರಗೆ ಬಂದೆವು.


ಗೋಕರ್ಣ ದೇವಾಲಯದ ಒಂದು ಪ್ರವೇಶ ದ್ವಾರ

 "ಗೊಂಬೆಗಳ" ದೇವಸ್ಥಾನದ ಸಮುದ್ರ ತೀರ ಬಿಟ್ಟು ಎರಡು ಬೆಟ್ಟಗಳ ನಡುವಿನ ಕಣಿವೆಯ  "ಕುಡ್ಲೆ" ಸಮುದ್ರತೀರಕ್ಕೆ ನಮ್ಮ ವಾಹನ ಓಡಿತು.

ಈ ಕಣಿವೆಯನ್ನು ದಾಟಿದರೆ ಸಿಗುವುದು ಕುಡ್ಲೆ ಸಂದುರ ತೀರ !

ಪ್ರಶಾಂತ್ ಅಲ್ಲಿಗೆ ಮೊದಲೇ ಹೋಗಿದ್ದನಾದ್ದರಿಂದ ನಮಗೆ ಸರಳವಾಯಿತು. ನಾ ಕಂಡ ಅಮೋಘ ಸಮುದ್ರ ದಂಡೆ ಈ ಕುಡ್ಲೆ  ಸುಮುದ್ರ ತೀರ.  ಎರಡು ಬೆಟ್ಟಗಳ ನಡುವಿನ ಕಣಿವೆ ಪ್ರದೇಶದಲ್ಲಿ ಸೂರ್ಯ ತನ್ನ ಕಾರ್ಯಕ್ರಮ ಮುಗಿಸಿ ಸಾಗುವುದನ್ನು ನೋಡುವುದೇ ಒಂದು ಸೊಬಗು.  ಹತ್ತಿರದ ಬೆಟ್ಟ ಗುಡ್ಡಗಳನ್ನು ಕಡಿದು ಹೋಟೆಲ್, ರೆಸಾರ್ಟ್ಗಳು ತಲೆ ಎತ್ತಲು ಶುರುಮಾಡಿದ್ದವು..ಆದಷ್ಟು ಬೇಗ ಈ ತಾಣವು ವಾಣಿಜ್ಯ ಕೇಂದ್ರವಾಗಿ ಗಬ್ಬೆದ್ದು ಹೋಗಲು ಹೊರಡಲು ಅನುವಾಗಿತ್ತು.


ಬಂಗಾರದ ಸೀರೆಯನ್ನು ಪ್ರಕೃತಿ ಮಾತೆ ಕೊಟ್ಟ ಕ್ಷಣ

ಸುಂದರವಾದ  ತಣ್ಣಗಾಗುತ್ತಿರುವ ಸೂರ್ಯ ತನ್ನ ಬಂಗಾರದ ಬಣ್ಣದಿಂದ ಇಡಿ ತೀರವನ್ನು ಹೊನ್ನಿನ ಶರಧಿಯನ್ನಾಗಿ  ಪರಿವರ್ತಿಸಿದ್ದ.  ಅಲೆಗಳ ಅಪ್ಪಳಿಸುವಿಕೆ ತುಸು ಜೋರಾಗಿತ್ತು ಕಾರಣ ಮಾರನೆದಿನ ಅಮಾವಾಸ್ಯೆಯಾಗಿತ್ತು (ಹಹಹ).


ಅಲೆಗಳ ಮೆರವಣಿಗೆಯ ಮೇಲೆ ದಿನಕರ 

ಸೂರ್ಯನೊಡನೆ, ಸಮುದ್ರದಲೆಗಳ ಜೊತಗೆ, ಹೊನ್ನಿನ ನೀರಿನಲ್ಲಿ ತುಸು ಆಟವಾದಮೇಲೆ, ಛಾಯಾಚಿತ್ರಗಳ ಮೆರವಣಿಗೆ ಸಾಗಿತ್ತು.

ಅಲೆಗಳ ರಭಸಕ್ಕೆ ದಡಕ್ಕೆ ಬಂದು ಬೀಳುತ್ತಿದ್ದ ಮೀನುಗಳು ಸಂದೀಪ್ ಅವರ ಕುತೂಹಲದ ಕಣ್ಣುಗಳನ್ನು ತೆರೆಸಿತು. ಪರೀಕ್ಷಾ ನಿಟ್ಟಿನಲ್ಲಿ ಸಂದೀಪ್ ಕಂಡಿದ್ದು ಹೀಗೆ.

ಮೀನಿನ ವೀಕ್ಷಣೆಯಲ್ಲಿ ಸಂದೀಪ್ !

ನಮ್ಮ ಸಾರಥಿ ಸುನೀಲ್ "ಜೋಗಿ" ಶೈಲಿಯಲ್ಲಿ ನೆಡೆದು ಬರುತಿದ್ದ ದೃಶ್ಯ ಚಂದವಿತ್ತು.  ಅವರನ್ನು ಗೆಳೆಯರೆಲ್ಲ "ಜೋಗಿ" ಅಂತಾನೆ ಕರೆಯೋದು ಕಾರಣ ಜೋಗಿ ಚಿತ್ರದ ಬಿಡುಗಡೆಯ ಸಮಯದಲ್ಲಿ ಉದ್ದನೆ ಕೂದಲು ಬಿಟ್ಟಿದ್ದರು ಎನ್ನುವ ಕಾರಣಕ್ಕೆ.

ಜೋಗಿ ಶೈಲಿಯಲ್ಲಿ ಸುನೀಲ್ !

ಸೂರ್ಯದೇವನಿಗೆ ಜಗತನ್ನು ಬೆಳಗುವ ಕಲೆ ಚೆನ್ನಾಗಿ ಗೊತ್ತು.  ಆ ದೇವನನ್ನು ಒಂದು ಕೈಯೊಳಗಿನ ಅಂಗಣದಲ್ಲಿ ಸೆರೆ ಹಿಡಿಯೋಣ ಅನ್ನಿಸಿತು. ಸುನೀಲ್ ಬನ್ನಿ ಸರ್ ಈಗ ತೆಗೆಯಿರಿ..ಸರಿಯಾಗಿ ಹಿಡಿದಿದ್ದೀನಿ ಅಂದರು . ನೀವೇ ನೋಡಿ ಆನಂದಿಸಿ.

ಶುಭಕರನಿಗೆ ಕರಗಳಿಂದ ಒಂದು ಚೌಕಟ್ಟು!!!

ಇಕ್ಕಟ್ಟಿನ ಪರಿಸ್ಥಿತಿ ಬಂದಾಗ.ನನ್ನ ಬಾಳು ಅಡಿಕೆ ಕತ್ತರಿಯಾಗಿ ಬಿಟ್ಟಿದೆ ಗುರು ಎನ್ನುವ ಮಾತು ಸಹಜ.ಇಲ್ಲಿ ನೋಡಿ ಭಾನುವನ್ನು ಅಡಿಕೆ ಕತ್ತರಿಯೊಳಗೆ ಸಿಕ್ಕಿಸುವ ಒಂದು ವ್ಯರ್ಥ ಪ್ರಯತ್ನ!!!

ಅಡಿಕೆ ಕತ್ತರಿ ಹಾಗು ಸೂರ್ಯ!

ಈ ಭೂಮಿ ಬಣ್ಣದ ಬುಗುರಿ ಎಂದರು ಡಾ. ವಿಷ್ಣುವರ್ಧನ್..ಅವರ ಅಭಿಮಾನಿಯಾದ ಸುನೀಲ್ ಹೇಳಿದ್ದು ಸರ್ ನಮ್ಮ ಸಾಹಸಿಂಹ ಹೇಳಿದ ಹಾಗೆ ದಿನಕರನು ಬಣ್ಣದ ಬುಗುರಿ..ನೋಡಿ ಸರ್ ಒಮ್ಮೆ ಆಡಿಸುತ್ತೇನೆ..ಎಂದರು..ಅದು ಹೀಗೆ ಮೂಡಿಬಂತು.

ಸೂರ್ಯನೇ ಒಂದು ಬುಗುರು..ಕಾಲ ನಮಗೆ ಚಾವಟಿ 

ಪ್ರತಿಯೊಬ್ಬರ ಜೀವನವನ್ನು ನಕ್ಷತ್ರಗಳು, ರಾಶಿಗಳು, ಗ್ರಹ ಚಲನೆಗಳು ನಿರ್ಧರಿಸುತ್ತವೆ ಎನ್ನುವುದು ಜ್ಯೋತಿಶಾಸ್ತ್ರ ಹೇಳುವ ಮಾತು..ನಮ್ಮ ಪಯಣದ ಹಾದಿಯಲ್ಲಿ ಬಂದು ಸಿಕ್ಕಿದ "ನಕ್ಷತ್ರ" ಮೀನು. 

ಬಾಳಿನ ದಿಕ್ಕನ್ನು ಬದಲಿಸುವ ನಕ್ಷತ್ರ - ನಕ್ಷತ್ರ ಮೀನು 
ವಿವಿಧ ಭಂಗಿಯಲ್ಲಿ ಅಸ್ತಮಿಸುತಿದ್ದ ದಿನಕರನನ್ನು ಸೆರೆ ಹಿಡಿಯಲು ಶ್ರಮಿಸಿ, ಅಲ್ಲಿಂದ ಬೀಳ್ಕೊಡಲು ಅನುವಾದೆವು. ತುಸು ಕತ್ತಲಿನಲ್ಲಿ ಗೋಕರ್ಣದ ಸಮುದ್ರ ತೀರದ ತನಕ ಬರಬೇಕಿತ್ತು ಮತ್ತು ಆದಷ್ಟು ಬೇಗ ಅಲ್ಲಿಂದ ಹೊರಟು  ಬೆಂಗಳೂರು ಸೇರುವ ತವಕ ಹೆಚ್ಚಾಗಿತ್ತು, ಕಾರಣ ಮರುದಿನ ಎಲ್ಲಾರು ತಮ್ಮ ತಮ್ಮ ಕೆಲಸಗಳಿಗೆ ಮರಳಬೇಕಿತ್ತು.

ನಾವು ಕಡಲಿಗೆ ಹೋಗಿದ್ದ ಸಮಯ, ಮತ್ತು ಅಲ್ಲಿಂದ ಹೊರಡುವ ಸಮಯದ ನಡುವೆ ಅಲೆಗಳ ಆರ್ಭಟ ಮುಂದೆ ಮುಂದೆ ಸಾಗಿತ್ತು.  ಕಡಲ ಕೊರೆತವನ್ನು ಅಕ್ಷರಶಃ ನೋಡಿದ ಅನುಭವ

 ಅಲ್ಲಿಂದ ಹೊರಟು, ಸೀದಾ ಕುಮುಟ, ಹೊನ್ನಾವರ, ಸಿದ್ದಾಪುರ, ಸಾಗರ, ಶಿವಮೊಗ್ಗ, ಬೆಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತಲುಪಿದೆವು.

ಗೋಕರ್ಣದಿಂದ ಬೆಂಗಳೂರಿಗೆ ಪಯಣದ ಹಾದಿ 

ಪ್ರವಾಸ ಸುಂದರವಾಗಿತ್ತು, ನಮ್ಮ ಗುಂಪಿನ ಹಾಸ್ಯದ  ಮಾಂತ್ರಿಕತೆ ಈ ಪ್ರವಾಸದಲ್ಲಿ ಕಡಿಮೆ ಇತ್ತು, ಅದರೂ ಎಲ್ಲರೂ 2000 ವರುಷಗಳ ಯಾನದಿಂದ ಮಂತ್ರ ಮುಗ್ಧರಾಗಿದ್ದರು. ಎಂತಹ ಅಮೋಘ ಪ್ರವಾಸ, ಈ ಪ್ರವಾಸದಲ್ಲಿ ಭಕ್ತಿ, ಚರಿತ್ರೆ, ಇತಿಹಾಸ, ಪ್ರಕೃತಿ, ಜಲಪಾತಗಳು, ಎಲ್ಲವು ಸರಿಯಾದ ಪ್ರಮಾಣದಲ್ಲಿ ಸೇರಿದ್ದವು ಹಾಗಾಗಿ ಖರ್ಚು ತುಸು ಹೆಚ್ಚೇ ಆದರೂ ಯಾರಿಗೂ ಅದರ ಬಗ್ಗೆ ಎರಡನೇ ಮಾತೆ ಇರಲಿಲ್ಲ.

ಸಿರಸಿಯ ಮಾರಿಕಾಂಬೆ, ಮಹಾಗಣಪ,  ಸಹಸ್ರ ಲಿಂಗೇಶ್ವರ,  ಬನವಾಸಿಯ ಮಧುಕೇಶ್ವರ. ಭೈರವೇಶ್ವರ, ಗೋಕರ್ಣದ ಪರಶಿವನೇ ನಮ್ಮ ಅಲೆಮಾರಿಗಳ ತಂಡಕ್ಕೆ ಸದಾ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಬೇಡಿಕೊಳ್ಳುತ್ತ ಈ ಪ್ರವಾಸ ಕಥಾನಕದ ಕಡೆ ಕಂತನ್ನು ನಿಮಗೆ ಅರ್ಪಿಸುತ್ತಿದ್ದೇನೆ.

ಇಲ್ಲಿಯವರೆಗೆ ಈ ಪ್ರವಾಸದ ಎಂಟು ಕಂತುಗಳನ್ನು ಓದಿ, ಪ್ರೋತ್ಸಾಹಿಸಿ, ಪ್ರತಿಕ್ರಿಯಿಸಿದ ಎಲ್ಲರಿಗೂ ಅಲೆಮಾರಿಗಳ ತಂಡದ ಪರವಾಗಿ ಧನ್ಯವಾದಗಳು.

Wednesday, October 31, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೭

ಶ್ರೀ ಮಹಾಗಣಪತಿಯ ದರ್ಶನದಿಂದ ನಾಡಿನ ನಾಣ್ಣುಡಿಯನ್ನು ಪರೀಕ್ಷಿಸುವ ಮನಸಾಯಿತು. ಗಣಪನ ಆಶೀರ್ವಾದ, ಲಕ್ಷಿ ಕಟಾಕ್ಷ ಎರಡು ಸೇರಿದರೆ ಇದೇನು ಕಷ್ಟದ ಕೆಲಸವಲ್ಲ ಎನ್ನಿಸಿತು. 

ಮೈಯಲ್ಲಿ ಸೊಕ್ಕಿದ್ದರೆ ಯಾಣ, ಜೇಬಲ್ಲಿ ರೊಕ್ಕವಿದ್ದರೆ ಗೋಕರ್ಣ..ಒಂದೇ ದಿನ ಸೊಕ್ಕು ರೊಕ್ಕ ಎರಡನ್ನು  ಒರೆಗೆ  ಹಚ್ಚೇಬಿಡುವ ತೀರ್ಮಾನ ಆಯಿತು. ನಮ್ಮ ಸಾರಥಿ ನಡೀರಿ ಸರ್ ನೀವು ಕರೆದಲ್ಲಿ ನಾ ಬರುವೆ ಎಂದರು.  ಸರಿ ನಮ್ಮ ಮನಸಿನಂತೆ ನಡೆಯುವ ಸಾರಥಿ ನಮಗೆ ಸಿಕ್ಕಾಗ ಇನ್ನೇನು ಸಮಸ್ಯೆ

ಸಿರ್ಸಿಯಿಂದ ಯಾಣಕ್ಕೆ  ಪಯಣ! 

ವಾಹನ ಸಿರ್ಸಿ ಕುಮಟ ಹಾದಿಯಲ್ಲಿ  ರಿವ್ವನೆ ಸಾಗುತಿತ್ತು...ಅಚಾನಕ್ ಸಾರಥಿ ಸುನೀಲ್ ಹೇಳಿದ್ರು "ಸರ್ ನೀವು ಓಡಿಸಿ ಸ್ವಲ್ಪ ದೂರ" ಎಂದು ಹೇಳಿ "ಶಿವರ್ಲೆ ಟವೇರ" ಗಾಡಿಯನ್ನು ಮಾರ್ಗ ಮಧ್ಯದಲ್ಲೇ ನಿಲ್ಲಿಸಿ ಬಿಟ್ಟರು. ನನಗೆ ಒಂದು ಕಡೆ ಅಳುಕು, ಇನ್ನೊಂದು ಕಡೆ ಏನಾದರೂ ಸಾಹಸ ಮಾಡುವ  ತವಕ. ಸರಿ ಸಾಧಿಸಿಬಿಡೋಣ ಅಂತ ಸಾರಥಿ ಜಾಗದಲ್ಲಿ ಕುಳಿತೆ ಬಿಟ್ಟೆ..ಒಂದಷ್ಟು ಕಿ.ಮಿ.ಗಳನ್ನೂ ಓಡಿಸಿದೆ ಮನಸಿಗೆ ಖುಷಿಯಾಯಿತು.  ನನ್ನ ಮಿತ್ರರು ಉಸಿರು ಬಿಗಿ ಹಿಡಿದು ಕೂತಿದ್ದು ಬೇರೆ ಕಥೆ.

ನಾ ಕೇಳಿದಂತೆ ಮೊದಲು ಸಿರ್ಸಿ ಕುಮಟ ಮಾರ್ಗದಲ್ಲಿ ಸಿಗುವ ಅನೆಗುಂದಿಯಿಂದ ಸುಮಾರು 16-17 ಕಿ.ಮಿ ಗಳಷ್ಟು ದೂರ ದುರ್ಗಮವಾದ ದಟ್ಟಕಾಡಿನಲ್ಲಿ ಇಂಬಳ (ಜಿಗಣೆ)ಗಳು ತುಂಬಿದ್ದ ಹಾದಿಯಲ್ಲಿ ನಡೆದೆ ಹೋಗಬೇಕಿತ್ತು. ಅದಕ್ಕೆ ಮೈಯಲ್ಲಿ ಸೊಕ್ಕಿದ್ದವರು ಮಾತ್ರ ಹೋಗಬಹುದು ಎಂಬ ನುಡಿಗಟ್ಟು ಹುಟ್ಟಿಕೊಂಡದ್ದು ಅನ್ನಿಸುತ್ತದೆ ..ನಂತರ ನಾಗರೀಕತೆ ಬೆಳೆದಂತೆಲ್ಲ ಆ ದೂರ ಕಡಿಮೆಯಾಗುತ್ತ ಬಂದಿತು. ಈಗ ಕೇವಲ 200-300 ಮೀಟರ್ ನಡೆದರೆ ಸಾಕು ಶಿಖರದ ಬುಡ ಮುಟ್ಟಬಹುದು. 

ವಾಹನ ನಿಲುಗಡೆ ಪ್ರದೇಶ..ಇಲ್ಲಿಂದ ಕೇವಲ ಮೀಟರ್ ಗಳ ದೂರದಲ್ಲಿ ಯಾಣ !

ವಾಹನ ನಿಲ್ಲಿಸುವ ಸ್ಥಳದಿಂದ ಕೆಲವೇ ಮೀಟರುಗಳ ಅಂತರದಲ್ಲಿ ನಿಂತಿತ್ತು ಭೈರವೇಶ್ವರ ಶಿಖರ..

ಭೈರವೇಶ್ವರ ಶಿಖರ..ಕಡಿದ ಮರದ ತುಂಡಿನಂತೆ ನಿಂತ ಭಂಗಿ

ಭೈರವೇಶ್ವರನ ಮುಖವನ್ನು ತೋರಿಸಲೆ ಎನ್ನುವಂತೆ  ಕನ್ನಡಿಯಂತೆ  ಎದೆಯುಬ್ಬಿಸಿ ಮುಗಿಲನ್ನು ಚುಂಬಿಸುವಂತೆ  ನಿಂತಿತ್ತು ಮೋಹಿನಿ ಶಿಖರ. 
ನಾನು ನಿಂತೇ ಎನ್ನುವ ಸೊಬಗಿನ ಮೋಹಿನಿ ಶಿಖರ 

ನನ್ನ ತಿಳುವಳಿಕೆಯಂತೆ ಸುರೇಶ ಹೆಬ್ಳೀಕರ್ರವರ ಆಗಂತುಕ ಸಿನಿಮಾದಲ್ಲಿ ಪ್ರಥಮ ಬಾರಿಗೆ ಯಾಣದಲ್ಲಿ  ಚಿತ್ರಿಕರಣವಾಯಿತು  ನಂತರ ನಮ್ಮೊರ ಮಂದಾರ ಹೂವೆ ಸಿನಿಮಾ.  ಆನಂತರ ಈ ತಾಣ ಇನ್ನಷ್ಟು ಪ್ರಸಿದ್ಧಿಗೆ ಬಂತು. 

ಪುರಾಣದಲ್ಲಿ ವಿವರಿಸಿರುವಂತೆ ಭಸ್ಮಾಸುರನ  ವಧೆ ಮಾಡಲು ವಿಷ್ಣು ಮೋಹಿನಿ ರೂಪದಲ್ಲಿ ಬರುತ್ತಾನೆ. ನೃತ್ಯ ಮಾಡುತ್ತಾ ಭಸ್ಮಾಸುರ ತನ್ನ ತಲೆಯ ಮೇಲೆ ಕೈಯನ್ನು ಇಟ್ಟುಕೊಳ್ಳುವಂತೆ ಭಂಗಿ ಪ್ರದರ್ಶನ ಮಾಡುತ್ತಾ ಹೋದಾಗ ಅವನು ಅಲ್ಲೇ ಸುಟ್ಟು ಭಸ್ಮವಾಗಿಬಿಡುತ್ತಾನೆ.  ಆ ಕಾರಣದಿಂದ ಇಲ್ಲಿಯ ಮಣ್ಣು ಕಪ್ಪಾಗಿದೇ ಎಂದು ಹೇಳುತ್ತಾರೆ. ಭಸ್ಮಾಸುರನ ಸಂಹಾರವಾದ ಮೇಲೆ ಶಿವ ಭೈರವೇಶ್ವರ ರೂಪದಲ್ಲಿಯೂ,  ಮತ್ತು ಮೋಹಿನಿ ರೂಪದಲ್ಲಿ ವಿಷ್ಣು ಮತ್ತು ಚಿಕ್ಕ ಚಿಕ್ಕ ಶಿಖರಗಳಾಗಿ ಶಿವಗಣಗಳು ಇಲ್ಲಿಯೇ ನೆಲೆಸುತ್ತಾರೆ.  

ಇಲ್ಲಿ ಪ್ರಧಾನವಾದ ಶಿಖರಗಳು ಭೈರವೇಶ್ವರ ಮತ್ತು ಮೋಹಿನಿ. ಪುರಾಣದ ಹಿನ್ನೆಲೆ ಕೂಡ ಸೊಗಸು, ನೈಸರ್ಗಿಕವಾಗಿಯೂ  ಕೂಡ ಈ ಸ್ಥಳ ನಮ್ಮನ್ನು ಮಂತ್ರ ಮುಗ್ಧರನ್ನಾಗಿ ಮಾಡುವುದು ಸುಳ್ಳಲ್ಲ.  ದೇವಸ್ಥಾನದಲ್ಲಿರುವ ಭೈರವೇಶ್ವರ ಲಿಂಗದ ಮೇಲೆ ಸದಾ ನೀರು (ತೀರ್ಥ) ಜಿನುಗುತ್ತಲೇ ಇರುವುದು ಇಲ್ಲಿನ ವಿಶೇಷ. 

ಶಿಖರದ ಬುಡದಲ್ಲಿರುವ ಶಿವಾಲಯ

ಅತ್ಯಂತ ರಮಣೀಯವಾಗಿ ಕಾಣುವ ಈ ಶಿಖರಗಳು ಚಾರಣಕ್ಕೂ, ಪ್ರವಾಸಿತಾಣವಾಗಿಯೂ, ಭಕ್ತಿ ಸಾರುವ ಕ್ಷೇತ್ರವಾಗಿಯೂ ಪ್ರಸಿದ್ಧಿಯನ್ನು ಹೊಂದಿದೆ.   ಭೈರವೇಶ್ವರ ಶಿಖರವನ್ನು ಒಮ್ಮೆ ಸುತ್ತಿಬರಲು ಅವಕಾಶವಿದೆ.   

ಅಲೆಮಾರಿಗಳ ಗುಂಪು ಗುಹೆಯ ಬುಡದಲ್ಲಿ

ಆ ಶಿಖರದ ಕೆಳಗೆ ನಿಸರ್ಗ ನಿರ್ಮಿತ ಗುಹೆ, ಅದರಲ್ಲಿ ನೆರಳು ಬೆಳಕಿನ ಆಟ, ಸುಂದರ ಕಲಾಕೃತಿ ಮೂಡಿಸಿರುವ ಕಲ್ಲುಗಳು, ಪ್ರತಿಧ್ವನಿ ಎಲ್ಲವೂ ಮನಸಿಗೆ ಮುದ ನೀಡುತ್ತವೆ

ಮುಗಿಲ ಚುಂಬಿಸುವ ಆಸೆಯಲಿ..ಶಿಖರ ಮತ್ತು ಮರಗಳಿಗೆ ಪೈಪೋಟಿ...

ಛಾಯಾಗ್ರಾಹಕರಿಗೆ ಈ ಗುಹೆಯೊಳಗಿನ ನೆರಳು ಬೆಳಕು ಹಬ್ಬವನ್ನೇ ಉಂಟು ಮಾಡುತ್ತದೆ. 


ಹಲ್ಲಿಯೋ ..ಮೊಸಳೆಯೋ ..ಒಟ್ಟಿನಲ್ಲಿ ನೆರಳು ಬೆಳಕಿನ ಆಟ 

ಒಂದು ಕಡೆ ಇಳಿಯಲು ಕಷ್ಟವಾಗಬಹುದೆಂದು ಹಗ್ಗವನ್ನು ಕಟ್ಟಿದ್ದಾರೆ, ಅದನ್ನು ಹಿಡಿದು ನಿಧಾನವಾಗಿ ಇಳಿಯಬಹುದು . ಚಾರಣದ ಮಜಾ ಕೊಡುತ್ತೆ ಈ ತಾಣ. 

ಹಗ್ಗ ಹಿಡಿದು ಇಳಿಯುವ ಸಾಹಸದಲ್ಲಿ ನಮ್ಮ ತಂಡ 

ಸುಮಾರು ಹೊತ್ತು ಕ್ಯಾಮೆರ ಕೈಚಳಕ ಪ್ರದರ್ಶಿಸಿ ಗುಹೆಯನ್ನು ಒಂದು ಸುತ್ತು ಸುತ್ತಿ ಧಣಿವಾದ ಮೇಲೆ,  ಅಲ್ಲಿಯೇ ಇದ್ದ ಒಂದು ಅಂಗಡಿಯಲ್ಲಿ ಕಷಾಯ, ಚುರುಮುರಿ ಎಲ್ಲ ಮೆದ್ದ ಮೇಲೆ ಮೈ ಮನ ಎರಡು "ಇದು ಹಕ್ಕಿಯಲ್ಲ.... ಆದ್ರೆ ಹಾರ್ತೈತಲ್ಲ" ಎಂದು ಹಾಡಲು ಶುರು ಮಾಡಿದವು. 

ಬಂದ ಕಾಡು ಹಾದಿಯಲ್ಲಿ ತಿರುಗಿ ನೋಡಿದಾಗ!

ಮುಂದಿನ ಪಯಣ ಇನ್ನಷ್ಟು ರೋಚಕವಾಗಿತ್ತು, ದಾರಿಯಲ್ಲಿ ವಿಭೂತಿ ಜಲಪಾತಕ್ಕೆ ದಾರಿ ಎನ್ನುವ ಸೂಚನೆಗನುಸಾರ ಕಾಡಿನಲ್ಲಿ ಮತ್ತೆ ಹೊಕ್ಕೆವು. ಯಾಣದಿಂದ  ಕುಮಟ, ಗೋಕರ್ಣ ಹಾದಿಯಲ್ಲಿ ಸುಮಾರು 8 ಕಿ.ಮಿ ಕಳೆದ ಮೇಲೆ ಎಡಕ್ಕೆ ತಿರುಗಿದರೆ ವಿಭೂತಿ ಜಲಪಾತ, ಬಲಕ್ಕೆ ಹೋದರೆ ಕುಮಟ, ಗೋಕರ್ಣಕ್ಕೆ ಹೋಗುತ್ತದೆ. ಸೂಚನಾ ಫಲಕದ ಹತ್ತಿರ ಎಡಗಡೆ ತಿರುಗಿ ಸುಮಾರು 1-2 ಕಿ.ಮಿ.ಒಳಗೆ ಹೋಗಿ ವಾಹನ ನಿಲುಗಡೆಯಾದ ಮೇಲೆ..ಸುಮಾರು ಒಂದು-ಒಂದೂವರೆ ಕಿ.ಮಿ.ನಷ್ಟು ನೆಡೆದು ಸಾಗಬೇಕು.  ಭೋರ್ಗರೆಯುತ್ತಾ ಎರಡು ಹಂತದಲ್ಲಿ ಧುಮುಕುವ ಜಲಾರಾಶಿಯೇ ವಿಭೂತಿ ಜಲಪಾತ.  

ಬೆಳ್ಳನೆ ಹಾಲಿನ ಧಾರೆ!!!
ಜಲಪಾತದ ಮಧ್ಯೆ ಸಣ್ಣ ಸುಣ್ಣದ ಕಲ್ಲಿನ ಮೇಲೆ ಹರಿಯುವ ನೀರು ವಿಭೂತಿಯಂತೆ ಬೆಳ್ಳಗಿರುವುದು  ಈ ಹೆಸರಿಗೆ ಕಾರಣ ಎನ್ನುವುದು ಸ್ಥಳೀಯರ ಮಾತು.  
ವಿಭೂತಿ ಜಲಪಾತದ ಧಾರೆ
ಇಲ್ಲಿ ಅಪಾಯವಿಲ್ಲದೆ ನೀರಲ್ಲಿ ಇಳಿಯಬಹುದು..ನೀರು ದಣಿದ ದೇಹಕ್ಕೆ ಒಂದು ಸುಂದರ ಅನುಭವ ಕೊಡುತ್ತದೆ.  

(ಸಶೇಷ)