Showing posts with label Alemaarigalu. Show all posts
Showing posts with label Alemaarigalu. Show all posts

Tuesday, January 15, 2019

Alemaarigalu on cloud bed!!!

What to do and what not to do..!

My energy point trek to KP aka kumara parvatha pushed to last week of January 2019, so somehow i wanted to flex my legs which was put to rest from Nov 2017 my last trek to KP.  Even though 2018 March saw alemaarigalu team trekked Shivagange, after that i cooled my heals for more than 9 months, and yes it is time to deliver :-)

My trusted Lieutenant Sandeep was occupied, Latesh was out of town, then came Giri, he too was not free..but wanted some outing..so I zeroed on Skandagiri...

Its like it was in my list from quite a long time, and it was crying for my attention..Giri also tried many times, but was on the other side of success.. 

Finally it was destined to be decided on Jan 11th.  Few messages, few tele calls  and one telepathy...pulled a team of eleven soldiers ready to peak skandagiri. 

It was Giri, Chinmay, Kishor and Sri...hold hold hold...followed by all gals gang...Rashmi 1, Rashmi 2, Lakshmi, Damini, Manjula, Jamuna, and Sheethal.. !!!


It was a fabulous journey from Bangalore to Skandagiri. We started from Electronics city at 12.45 in the midnight.. It was song and dance till we reached Skanda Giri Base. 

It was wee hours on Sunday chilled morning.. Our bones were crying for attention.  Already there were 100's of enthusiastic trekkers piled up near the ticket counter.  Unfortunately tickets were sold out...what am not talking about KGF or Petta Movie...yes tickets were off for the day.. but asked us to book online referring to a website.  In next few minutes chinmay screamed...got it...and we were on the path to the peak!!!


It is nice to walk in the pitch dark, with torches on.. and if we talk someone either from  front or behind will answer your questions...it will be fun :-) :-) :-)

only 100-200 mtrs everyone with mufler, caps, jackets were looking like Eskimos..then they started putting caps, jackets, mufler in to the bag..and enjoying the chilled weather. 

As usual I was treading the path in my usual pace, Chinmay marshaling Kishor and Rashmi. There were enthusiastic and energetic legs in Giri, Rashmi Hegde, Lakshmi,  Jamuna, Sheethal, Manjula, Damini they rushed to the peak in no time!

Ravi/Sun/Dinakar/Bhaskar in whatever name you call, he staged a perfect play over there!

First he announced to the world that, he is coming on time, by painting the sky with his favorite mixture of red/orange... !


He switched on his torch showing us the white patch of blanket on the landscape...every one on their heels by seeing the first scene of the play!


Then the scene started.. he put one blanket on another..so it was extreme thick white blanket all around!


We started screaming as we do in the entry scene of our demigods on the silver screen!  It was awesome landscape.. Sun showing is face up..brightening the whole landscape, thick cloud bed..waaah amazing!


We burned enough space in the memory card via selfies, DSLR, SLR and of course our beautiful eyes.  You can not say ok, enough, let me go!!!   We turned like kids, one ice cream...and we used to scream for another!!!





It was a fantastic day, amazing team who supported each other.  Few talks, few jokes we all became a feathers of same bird.

For information : 

  • Skandagiri trek open up at 4.00 hrs in the morning.
  • Better to book online 
  • Night trekking is banned, so dont try to do that
  • Nothing is available at the top nor on the way, carry enough water, eatables, fruits
  • Trek is about 4-5kms, it is easy in the beginning, moderate in the middle, and you will be gasping for breath in the last leg, but dont get disheartened once you reach the peak you will get an amazing view
  • The trek is open 365 days, I would recommend to trek only between October to January, as you can see ocean of clouds under your feet.  
  • Make it to the peak before sunrise, and enjoy, and trek back to reach the base by 9.00, so you will be at your dining table for lunch!
  • There are plenty of places of interest near by Sir M Vishweshawaraiah birth place turned in to museum, Bhoga Nandeeshwara temple, Devanahalli Fort, and if you have enough wheels on your legs Nandi Hills also at stone throw away distance. 
  • The entry fee is Rs. 250.00 Per head, even  though it appears pricey, but keeping the trek place intact some restrictions are required otherwise it becomes garbage yard!  

We spent amazing sunday on one of the best landscapes around Bangalore for a one day outing.  Yes, stamina is required to do the trek, but it is not mandatory...Always will power over rules the stamina..!

Keep the will to visit Ocean of clouds underneath!

Have a great time and keep the environment clean!

Monday, January 14, 2019

ಸ್ಕಂದಗಿರಿಯಲ್ಲಿ ಅಲೆಮಾರಿಗಳು !!!

 ಆಸೆ ಪಟ್ಟರೆ ಸಾಕೆ.. ಅದರ ಬೆನ್ನು ಬಿದ್ದು ಸಾಧಿಸಬೇಕು.. !!!

೨೦೦೫ ರಲ್ಲಿ . ಜಿಇ ಕಂಪನಿಯಲ್ಲಿ ಕೆಲಸಮಾಡುವಾಗ .. ಆಫೀಸ್ ಮೇಲ್ ಗೆ ಒಂದು ಪೋಸ್ಟ್ ಬಂತು.. ಹಾಲಿನ ನೊರೆಯಲ್ಲಿ ಸುತ್ತ ಮುತ್ತಲ ಗುಡ್ಡಗಳು ಮುಳುಗೇಳುತ್ತಿದ್ದವು.. ಆ ಚಿತ್ರಗಳನ್ನ ಕಂಡಾಗ ಸಹಜವಾಗಿಯೇ ಕುತೂಹಲ ಮೂಡಿತು... ಎಲ್ಲಿದೆ ಆ ಜಾಗ ಎಂದು ತಡಕಾಡಿದಾಗ ಸಿಕ್ಕಿದ ಉತ್ತರ ಬೆಂಗಳೂರಿಂದ ಕೇವಲ ೭೦-೮೦ ಕಿಮೀಗಳ ದೂರ ಎಂದು ಗೊತ್ತಾಯಿತು..

ಅರೆ ಇಸ್ಕಿ.. ಹೋಗಿಯೇ ಬಿಡೋಣಾ ಅಂತ.. ಅವತ್ತಿಂದ ಪ್ಲಾನ್ ಮಾಡಿದ್ದೆ ಮಾಡಿದ್ದು.. ಫಲಕಾರಿಯಾಗಿರಲಿಲ್ಲ.. ನನ್ನದೇ ಗುಂಪು ಅಲೆಮಾರಿಗಳು ತಂಡವನ್ನು ಕಟ್ಟಿಕೊಂಡಮೇಲೂ ಸಾವಿರಾರು ಕಿಮೀಗಳು..ಸುತ್ತಿದೆವು.. ಹತ್ತಾರು ಜಾಗಗಳಲ್ಲಿ ಅಲೆಮಾರಿಗಳ ಹೆಜ್ಜೆ ಗುರುತು ಮೂಡಿಸಿದ್ದೆವು.. ಆದರೆ ಕೇವಲ ೭೦-೮೦ ಕಿಮಿದೂರದಲ್ಲಿರುವ ಸ್ಕಂದಗಿರಿಗೆ ಮಾತ್ರ ಹೆಜ್ಜೆ ಇಡೋಕೆ ಆಗಿರಲಿಲ್ಲ.. ಅದರ ಸುತ್ತ ಮುತ್ತಲ ನಂದಿ ಬೆಟ್ಟ, ಚನ್ನಗಿರಿ, ಮಾಕಳಿದುರ್ಗ ನೋಡಿ ಬಂದಿದ್ದೆವು ಆದರೆ ಸ್ಕಂದ ಗಿರಿ ಕರೆಯುತ್ತಲೇ ಇತ್ತು..

ಆ ದಿನ ಬಂದೆ ಬಿಡ್ತು.. ಮಲೆನಾಡಿನ ಹುಡುಗ ಗಿರಿ ಪದೇ ಪದೇ ಶ್ರೀ ಎಲ್ಲಾದರೂ ಹೋಗೋಣ ಎನ್ನುವ ನಿರಂತರ ಬೇಡಿಕೆ.. ಸ್ಕಂದಗಿರಿಯ ತಪ್ಪಲಿಗೆ ಕರೆದೊಯ್ಯಲು ಸಿದ್ಧವಾಗಿತ್ತು..  ಒಂದು ಪ್ರವಾಸಕ್ಕೆ ಹೇಗೆ ಎಲ್ಲವೂ ಒದಗಿ ಬಂದು ಹೂವಿನ ಸರವಾಗುತ್ತೆ ಎನ್ನುವುದಕ್ಕೆ ಉದಾಹರಣೆ ಈ ಚಾರಣ..

ಗಿರಿ ಮತ್ತು ನಾನು ಸಿದ್ಧವಾದೆವು.. ರಶ್ಮಿ ಬರ್ತೀನಿ ಅಂತ ಹೇಳಿದ್ಲು.. ಅವಳಿಗೆ ಹೇಳಿದ ಮೇಲೆ.. ಅವಳಿಂದ ಚಿನ್ಮಯ್, ಲಕ್ಷ್ಮಿಪ್ರಿಯ, ಜಮುನಾ, ದಾಮಿನಿ, ಮಂಜುಳಾ ಜೊತೆಯಾದರು.. ನಂತರ ಕಿಶೋರ್ ಬರುವೆ ಎಂದು ಒಪ್ಪಿದರು.. ಇನ್ನೊಬ್ಬಳು ರಶ್ಮಿ ಹೆಗಡೆ ಸಂಜೆ ಸುಮಾರಿಗೆ ಒಪ್ಪಿದಳು.. ಜೊತೆಯಲ್ಲಿ ನನ್ನ ಗೆಳತೀ ಶೀತಲ್.. ಸರಿಯಾಗಿ ಹನ್ನೊಂದು ಮಂದಿ.. ಅದರಲ್ಲಿ ಹೆಣ್ ಮಕ್ಕಳದೇ ಸೈನ್ಯ.. ಏಳು ಮಂದಿ.. ಯಪ್ಪೋ.
ಚಿತ್ರಕೃಪೆ -  ಚಿನ್ಮಯ್ 
ರಾತ್ರಿ ೧೨. ೪೫ಕ್ಕೆ ಹೊರಟ ನಮ್ಮ ವಾಹನ ಎಲ್ಲರನ್ನು ಅವರವರ ಮನೆ ಬಾಗಿಲಿನಿಂದ ಹತ್ತಿಸಿಕೊಂಡು ಬಳ್ಳಾರಿ ರಸ್ತೆಯಲ್ಲಿ ಮುನ್ನುಗುತ್ತಾ ಸಾಗಿ ಸ್ಕಂದಗಿರಿ ತಪ್ಪಲಿಗೆ ಬಂದದ್ದು ಬೆಳಗಿನ ಜಾವ ೪.೧೫ಕ್ಕೆ.. ಅಲ್ಲೊಂದು ಸಂತೆಯೇ ನೆರೆದಿತ್ತು..ನೂರಾರು ಮಂದಿ ಚಾರಣಿಗರು ಬೆಳಗಿನ ಆ ಹಾಲುನೊರೆಯಲ್ಲಿ ಮುಳುಗೇಳುವ ಬೆಟ್ಟಗಳ ಸಾಲನ್ನು ನೋಡಲು ಕಾತುರತೆಯಿಂದ ಟಿಕೆಟ್ ಖರೀದಿಸಲು ನೆರೆದಿದ್ದರು.. ನಮಗೆ ಒಂದು ಶಾಕ್ ಕಾದಿತ್ತು.. ಟಿಕೆಟ್ ಮುಗಿದುಹೋಗಿದೆ.. ಆನ್ಲೈನ್ ಬುಕ್ ಮಾಡಿ ಅಂತ ಅಲ್ಲಿದ್ದ ಸಿಬ್ಬಂದಿ  ಹೇಳಿದರು.. ತಕ್ಷಣ ಎಲ್ಲರ  ಮೊಬೈಲ್ ನೆಟ್ ಆನ್ ಆಯಿತು.. ಆದರೆ ಅಲ್ಲಿಯೂ ನಿರಾಸೆ.. ಅಂದಿನ ದಿನದ ಟಿಕೆಟ್ ಕೋಟಾ ಮುಗಿದುಹೋಗಿತ್ತು ಅಂತ ಮೊಬೈಲ್ ಹೇಳಿತು..

ಎಲ್ಲರಿಗೂ ನಿರಾಸೆ.. ಆ ನಿರಾಸೆ ಹೊತ್ತ ಮುಖಗಳಲ್ಲಿ ಬಂದ ನಿಟ್ಟುಸಿರು.. ಮತ್ತು ಆ ಬೇಸರದ ಛಾಯೆ ಆ ಕತ್ತಲಿನಲ್ಲಿಯೂ ಕಾಣಿಸುವಷ್ಟು ಸ್ಪಷ್ಟವಾಗಿತ್ತು.. ನಮ್ಮ ಆರ್ಮಿ ಮ್ಯಾನ್ ಚಿನ್ಮಯ್ "ಶ್ರೀಕಾಂತಣ್ಣ ಒಳಗೆ ಹೋಗಿ ಮಾತಾಡಿಕೊಂಡು ಬರ್ತೀನಿ" ಅಂತ.. ಹೋಗಿ ಮಾತಾಡಿಕೊಂಡು ಬಂದು.. ತಕ್ಷಣವೇ ಮೊಬೈಲ್ನಲ್ಲಿ ಬುಕ್ ಮಾಡಿ.. ಟಿಕೆಟ್ ಸಿಕ್ಕ ಸಂದೇಶ ನೋಡಿದಾಗ ಎಲ್ಲರ ಮೊಗವೂ..  "ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ" ಹಾಡಿನಂತೆ ಅರಳಿತ್ತು..

ಇದಕ್ಕೂ ಮೊದಲು.. ಟೆಂಪೋ ಟ್ರಾವೆಲ್ಲರ್ ನಲ್ಲಿ ಎಲ್ಲರೂ ಹತ್ತಿದ ಮೇಲೆ.. ನನಗೆ ಎಲ್ಲರೂ ಪರಿಚಯ.. ಆದರೆ ಕಿಶೋರ್ ಮತ್ತು ಗಿರಿಗೆ ಎಲ್ಲರೂ ಹೊಸಬರು.. ಲಾಡು ಬಾಯಿಗೆ ಬಿತ್ತಾ ಎನ್ನುವ ಸಂಧರ್ಭವೇ ಒದಗಿರಲಿಲ್ಲ.. ಐಸ್ ಬ್ರೇಕಿಂಗ್ ಸೆಶನ್ ನೆಡೆದರೂ  ಒಬ್ಬರಿಗೊಬ್ಬರ ಮಧ್ಯೆ ಆ ಮಟ್ಟದ ಮಾತುಗಳು ನೆಡೆಯೋಕೆ ಅವಕಾಶ ಆಗಿರಲಿಲ್ಲ.. ನನಗೆ ಗೊತ್ತಿತ್ತು.. ಚಾರಣ ಶುರುವಾದ ಮೇಲೆ.. ನನ್ನ ಮಧ್ಯಸ್ಥಿಕೆ ಬೇಕಾಗೋಲ್ಲ.. .ಅವರೆಲ್ಲರೂ ನನ್ನ ಮರೆತು ಒಂದಾಗಿ ಮುನ್ನೆಡೆಯುತ್ತಾರೆ ಎಂದು..

ಬೆಟ್ಟ ಹತ್ತಲು ಶುರುಮಾಡಿದಾಗ.. ಒಬ್ಬರಿಗೊಬ್ಬರು ಮಾತು, ಒಬ್ಬರಿಗೊಬ್ಬರು ಆ ಕತ್ತಲೆಯಲ್ಲಿ ಕೈ ಹಿಡಿದು ಸಹಾಯ ಮಾಡುತ್ತಾ ಹಾಸ್ಯ ಮಾಡುತ್ತಾ ಎಡಬಿಡದೆ ಮಾತಾಡುತ್ತಾ ಹೆಜ್ಜೆ ಹಾಕುತ್ತಾ ಹೋದ ಹಾಗೆ ನಡುವೆ ಇದ್ದ ಕಾಣದೆ ಇದ್ದ ಗೋಡೆ ನಿಧಾನವಾಗಿ ಕರಗಿ ಹೋಯಿತು.. ಎಲ್ಲರಿಗೂ ಕಾಮನ್ ಕೊಂಡಿಯಾಗಿದ್ದ ನಾನು ನಿಟ್ಟುಸಿರು ಬಿಟ್ಟು.. ನನ್ನ ಪಾಡಿಗೆ ನನ್ನ  ಕ್ಯಾಮೆರಾಗೆ ಕೆಲಸ ಕೊಡುತ್ತಾ ಹೋದೆ..  ನಾ ನಿರಾಳ ಆಗಿದ್ದೆ.. ಎಲ್ಲರೂ ಒಂದಾಗಿದ್ದು ನನಗೆ ಖುಷಿ ಕೊಟ್ಟಿತ್ತು.. !!!

ಆ ಮಬ್ಬುಗತ್ತಲಿನಲ್ಲಿ ನಿಧಾನವಾಗಿ ಬೆಟ್ಟವೇರತೊಡಗಿದೆವು... ಗುಂಪು ಮೂರು ಭಾಗವಾಗಿತ್ತು.. ಸ್ವಲ್ಪ ಸಲೀಸಾಗಿ ಹೆಜ್ಜೆ ಹಾಕುತ್ತಾ ಸಾಗುವ ಗುಂಪಿಗೆ ಗಿರಿ ಮುಂದಾಳಾಗಿ ಮಂಜುಳಾ, ದಾಮಿನಿ, ರಶ್ಮಿ ಹೆಗಡೆ, ಲಕ್ಷ್ಮಿಪ್ರಿಯ, ಜಮುನಾ ಜೊತೆಯಲ್ಲಿ ಶೀತಲ್ ಮುನ್ನೆಡೆಸಿದರು .. ಕಿಶೋರ್, ರಶ್ಮಿ ಜಿ ಇವರಿಬ್ಬರನ್ನು ತಾಳ್ಮೆಯ ಚಿನ್ಮಯ್ ಮುನ್ನೆಡೆಸುತ್ತಾ ಹೋದರು.. ಈ ಎರಡು ಗುಂಪುಗಳ ಮಧ್ಯೆ ನಾನು ಸಾಗುತ್ತಾ ಹೋದೆ..



ದಿನಕರನ ತಾಯಿ.. "ಮಗು ಸೂರ್ಯ.. ಬೆಳಿಗ್ಗೆ ನಮ್ಮ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳಲ್ಲಿ ಹಾಲು ಕರೆದು ಹಂಡೆಗಳಲ್ಲಿ ತುಂಬಿಸಿಟ್ಟಿದ್ದೀನಿ.. ಒಲೆ ಹೆಚ್ಚು . ಹಾಲು ಕಾಯಬೇಕು.. " ಎಂದು ಹೇಳಿದ್ದನ್ನು ಕೇಳಿ.. ಬಾಲಕ ದಿನಕರ ಒಲೆ ಹಚ್ಚಿದ ಮೇಲೆ  ಹಂಡೆಗಳು  ಬಿಸಿಯಾಗುತ್ತಿತ್ತು.. ಅದನ್ನು ನೋಡಿ ಖುಷಿ ಪಟ್ಟ.. ತುಂಟ ಹುಡುಗನ ಮನಸ್ಸು ಆಟದ ಕಡೆಗೆ ವಾಲಿತು.. ಆದರೆ ಆಟವಾಡಲು ಸುಮಾರು ಮೆಟ್ಟಿಲು ಮೇಲೆ ಹತ್ತಿ ಬರಬೇಕಿತ್ತು..ಹಾಲು ಕಾಯುವ ಹೊತ್ತಿಗೆ ಒಂದಷ್ಟು ಆಟವಾಡಿ ಬರೋಣ ಎಂದು ಒಂದೊಂದೇ ಮೆಟ್ಟಿಲು ಹತ್ತುವಾಗೂ.. ಹಂಡೆಗಳು ಕಾದು ಕಾದು ಕೆಂಪಾಗುತ್ತಿತ್ತು.. ಆಟದ ಮಧ್ಯೆ ಹಾಲಿನ ಕಡೆಗೆ ಗಮನವನ್ನೇ ನೀಡದ ತುಂಟ ಆಡುತ್ತಲೇ ಹೋದ.. ಹಂಡೆಗಳು ಕೆಂಪಾಗಿ.. ಹಾಲು ಕುದ್ದು ಕುದ್ದು ಉಕ್ಕಲು ಶುರುಮಾಡಿತು.. ಉಕ್ಕಿ ಉಕ್ಕಿ ಎಲ್ಲೆಡೆಯೂ ಹರಿಯತೊಡಗಿತು.. ತನ್ನ ಬುಡಕ್ಕೂ ಬಿಸಿ ಬಿಸಿ ಹಾಲು ತಾಕಿದಾಗ ಆಟದ ಗಮನ ಬಿಟ್ಟು.. ಅಯ್ಯೋ.. ಅಮ್ಮ ನನ್ನ ನೋಡಿದರೆ ಚೆನ್ನಾಗಿ ಬಾರಿಸುವಳು ಎನ್ನುತ್ತಾ ಅವಳ ಕೈಗೆ ಸಿಗಬಾರದು ಎಂದು  ಹಂತ ಹಂತವಾಗಿ ಮೇಲೇರತೊಡಗಿದ.. ಅವನು ಏರುತ್ತಾ ಹೋದ ಹಾಗೆ ಹಾಲಿನ ನೊರೆಗಳು ದಿನಕರನನ್ನು ಹಿಡಿಯಲು ಅವನನ್ನೇ ಹಿಂಬಾಲಿಸಿದವು.. ಆದರೆ ದಿನಕರನು ಪುಟ್ಟ ಪುಟ್ಟದಾಗಿದ್ದ ಆದ್ದರಿಂದ ವೇಗ ಹೆಚ್ಚು ಮಾಡುತ್ತಾ ಹೋದ.. ಸೋತ ಹಾಲಿನ ನೊರೆಗಳು.. ಹಾಗೆಯೇ ಸಿಕ್ಕ ಕಡೆಯೆಲ್ಲಾ ಹರಡಿಕೊಳ್ಳತೊಡಗಿದವು.. ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ದಿನಕರನ ತಾಯಿಗೆ ಏನೋ ಅನುಮಾನ ಬಂದು.. ಒಲೆಯ ಹತ್ತಿರ ಬಂದು ನೋಡಿದರೆ.. ಹಾಲಿನ ನೊರೆಯ ಸಾಗರವೇ ಇತ್ತು.. ಅಚ್ಚರಿ ಎಂದರೆ.. ಒಲೆ ಮಾತ್ರ ಆರಿರಲಿಲ್ಲ.. ಅದೇ ವಿಶೇಷ.. ಆಕೆಯೇ ದಿನಕರನ್ನು ಬಯ್ಯದೆ.. ತುಂಟ ಮಗು.. ಅವನ ಗೆಳೆಯರ ಜೊತೆ ಆಟಕ್ಕಾಗಿ ಪಾಪ ಇದನ್ನೇ ಮರೆಯಿತು.. ಎನ್ನುತ್ತಾ ಒಲೆಯೊಳಗೆ ಇದ್ದ ಸೌದೆಗಳನ್ನ ತೆಗೆದಳು.. ಒಲೆ ಉರಿ ಕಡಿಮೆ ಆದ ಮೇಲೆ.. ನೊರೆಗಳ ಪ್ರವಾಹವೂ ಕಡಿಮೆಯಾಗತೊಡಗಿತು.. ಅಷ್ಟರಲ್ಲಿ ದಿನಕರ ಕೈಗೆ ಸಿಗದಷ್ಟು ಮೇಲಕ್ಕೆ ಹೋಗಿದ್ದ.. ಆಕೆಗೆ  ಗೊತ್ತಿತ್ತು.. ಸಂಜೆ ಮನೆಗೆ ಬಂದೆ ಬರುತ್ತಾನೆ.. ಆಗ ವಿಚಾರಿಸಿಕೊಳ್ಳುತ್ತೇನೆ.. ಎನ್ನುತ್ತಾ ನಕ್ಕು ಅಡಿಗೆ ಮನೆಯೊಳಗೇ ತನ್ನ ಕೆಲಸ ಕಾರ್ಯ ಗಮನಿಸಲು ಹೋದಳು..

ಮೊದಲ ಹಂತದಲ್ಲಿ ಸಾಗರವಾಗಿ ಕಂಡು ಬಂದ ಹಾಲಿನ ನೊರೆಯ ಬೆಟ್ಟ ಗುಡ್ಡಗಳನ್ನು ಕಂಡಾಗ ಮನಸ್ಸು ಹಾಯ್ ಎಂದಿತು.. ಸೂರ್ಯ ಆಗಲೇ ಉದಯಿಸಲು ಶುರು ಮಾಡಿದ್ದ .. ಬಾನಲ್ಲಿ ರಂಗು ಮೂಡಿಸಿದ್ದ .. ಆಗ ಮೂಡಿ ಬಂದಿದದ್ದೇ ದಿನಕರನ ಉದಯದ ಕಾಲದ ಘಟನೆ..  ನನ್ನ ತುಂಟ ಮನದಲ್ಲಿ ಆ ದೃಶ್ಯಗಳು ಮೂಡಿತ್ತು.. ಅದು ಮೇಲಿನಂತೆ ಅಕ್ಷರಗಳ ರೂಪ ತಾಳಿತು..













ಅಲ್ಲಿನ ದೃಶ್ಯಗಳನ್ನು ನೋಡುತ್ತಾ ಮೈ ಮನಸ್ಸು ಹಗುರಾಯಿತು.. ಕ್ಯಾಮೆರಾದ ಹೊಟ್ಟೆ ತುಂಬುತ್ತಾ ಹೋಯಿತು.. ಸೂಪರ್ ಸೂಪರ್ ಅನ್ನುವಂತಹ ದೃಶ್ಯಗಳು.. ಕ್ಯಾಮೆರವೋ.. ಕಣ್ಣೋ ಎನ್ನುವ ಹೊಡೆದಾಟದಲ್ಲಿ ಕ್ಯಾಮೆರಾ ಗೆದ್ದಿತ್ತು.. ನಮ್ಮ ತಂಡದ ಎಲ್ಲರೂ ಒಂದೇ ಕಡೆಯಲ್ಲಿ ಸಿಕ್ಕಿದೆವು.. ಬೇಕಾದಷ್ಟು ಮಾತುಗಳು.. ತಂದಿದ್ದ ಕುರುಕುಲು ಹೊಟ್ಟೆಯೊಳಗೆ ಮನೆಮಾಡಿದ್ದೆವು..ಯಾರಿಗೂ ಹೊರಡುವ ಮನಸ್ಸು ಇರಲಿಲ್ಲ .. ಐದು ನಿಮಿಷ ಹತ್ತು ನಿಮಿಷ ಎನ್ನುತ್ತಾ ಕಳೆದದ್ದು ಬರೋಬ್ಬರಿ ಒಂದು ಘಂಟೆಗೂ ಹೆಚ್ಚು.. ಕಡೆಗೆ ಇಡೀ ಬೆಟ್ಟದ ಮೇಲೆ ನಾವಷ್ಟೇ ಮಂದಿ ಎಂದು ಅರಿವಾದ ಹೊತ್ತು.. ಸರಿ ನಡೀರಪ್ಪ ಎನ್ನುತ್ತಾ ಭಾರವಾದ ಮನಸ್ಸಿಂದ ಹೊರಟೆವು.. ಬೆಳಿಗ್ಗೆ ಹಾಲಿನ ನೊರೆಯಿಂದ ತುಂಬಿಕೊಂಡಿದ್ದ ಬೆಟ್ಟ ಗುಡ್ಡಗಳು ದಿನಕರನ ಬೆಳಕಿನ ಪ್ರವಾಹದಲ್ಲಿ ಮೀಯಲು ಪುಟ್ಟ ಮಗು ಬಚ್ಚಲು ಮನೆಗೆ ಹೊರಡಲು ಸಿದ್ಧವಾದಂತೆ ಕಂಡಿತು..

ಇಳಿಯುವಾಗ ಎಚ್ಚರಿಕೆ ಹೆಚ್ಚು ಬೇಕಿತ್ತು.. ಜಾರುಬಂಡಿಗಳು ಸಿಕ್ಕಾಪಟ್ಟೆ ಇದ್ದವು.. ಸುಮಾರು ಎರಡು ಘಂಟೆಗಳ ಪ್ರಯತ್ನ.. ಬೆಟ್ಟದ ತಪ್ಪಲಿಗೆ ಬಂದೆವು.. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿಕೊಂಡು.. ಮತ್ತೆ ನಮ್ಮ ವಾಹನವನ್ನು ಹತ್ತಿದಾಗ.. ಎಲ್ಲರಿಗೂ ಒಂದು ತೃಪ್ತಿ.. ಅದೆಷ್ಟೋ ವರ್ಷಗಳ ತಪಸ್ಸಿಗೆ ವರ ಸಿಕ್ಕಿತೇನೋ ಅನ್ನುವ ಖುಷಿ.. ಒಬ್ಬರಿಗೊಬ್ಬರು ಧನ್ಯವಾದ ಹೇಳುತ್ತಾ ಈ ಚಾರಣ ರೂಪಿಸಿದ ನನಗೆ ಕೃತಜ್ಞತೆ ಹೇಳಿದರೂ ನನ್ನ ಮನಸ್ಸು ಮತ್ತು ನನ್ನ ಮಾತು ಹೇಳಿದ್ದು ಒಂದೇ.. "

ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ..
ಮಾಮರವೆಲ್ಲೂ ಕೋಗಿಲೆಯೆಲ್ಲೋ
ಏನೀ ಸ್ನೇಹ ಸಂಬಂಧ.. "

ಒಬ್ಬರಿಗೊಬ್ಬರು ಒಂದೇ ಬಳ್ಳಿಯಲ್ಲಿ ಹುಟ್ಟಲಿಲ್ಲ.. ಆದರೆ ಎಲ್ಲರೂ ಒಂದೇ ಮನೆಯವರ ಹಾಗೆ ಇದ್ದದ್ದು, ಹೊಂದಿಕೊಂಡು ಹೋದದ್ದು ಖುಷಿಯಾಗಿತ್ತು ..  ಹೋಗುವಾಗ ಇದ್ದ ನಿಶ್ಯಬ್ಧ ಬರುವಾಗಲೂ ಇತ್ತು.. ಆದರೆ ಹೋಗುವಾಗ ಇದ್ದ ಮೌನದಲ್ಲಿ ಈ ಚಾರಣ ಹೇಗೋ ಏನೋ ಎನ್ನುವ ಗೊಂದಲವಿದ್ದರೆ.. ಬರುವಾಗ ಅದ್ಭುತ ಚಾರಣದಿಂದ ಮನಸ್ಸು ತುಂಬಿ ಬಂದ ಮನಸ್ಸು ಮೂಕವಾಗಿತ್ತು ಆ ಧನ್ಯಲೋಕದ ದಿವ್ಯ ಮೌನದಲ್ಲಿ.. ಕೈಯನ್ನು ಮೇಲೆ ಎತ್ತಿ ನಮ್ಮನ್ನೆಲ್ಲಾ ಕೂಡಿಸಿದ ಆ ಮಹಾ ಮಹಿಮನಿಗೆ ಒಂದು ನಮಸ್ಕಾರ ಹೇಳಿತು!!!



ಶ್ರೀಚಿರ ಮಂದಾರಗಿ ಜಳಕಿಶಿ ಎನ್ನುವ ಈ ಸುಂದರ ಗುಂಪು ಮತ್ತೆ ಮತ್ತೆ ಒಂದಾಗಿ ಸಾಗುತ್ತೆ ಎನ್ನುವ  ವಿಶ್ವಾಸದಿಂದ ಎಲ್ಲರನ್ನು ಬೀಳ್ಕೊಟ್ಟು ಈ ಚಾರಣದ ಸುಂದರ ಅನುಭವದಲ್ಲಿ ಮಿಂದು ಮುಂದಿನ ಚಾರಣಕ್ಕೆ ಕಾಯುತ್ತ ಕುಂತಿತ್ತು ಮನಸ್ಸು!!!

Friday, December 22, 2017

ಭಾವನೆಗಳ ಭತ್ತದ ... ಬತ್ತದ.... ಕಣಜ.. ಕುಮಾರ ಪರ್ವತ

ಮೊಬೈಲ್ ಚಾರ್ಜ್ ಕಮ್ಮಿ ಆಗ್ತಾ ಇದೆ..

ಹೌದ ಸರಿ ಚಾರ್ಜ್ ಮಾಡ್ತೀನಿ 

ಲ್ಯಾಪ್ಟಾಪ್ ಚಾರ್ಜ್ ಕಡಿಮೆ ಆಗಿದೆ 

ಸರಿ ಚಾರ್ಜ್ ಆಗ್ತೀನಿ 

ಶ್ರೀ ನಿನ್ನ ಎನರ್ಜಿ ಕಡಿಮೆ ಆಗಿದೆ.. 

ಸರಿ ಕುಮಾರ ಪರ್ವತಕ್ಕೆ  ಹೋಗಿ ಬರ್ತೀನಿ.. 

ಅರೆ ಇದೇನಿದು ಸಡನ್ ವಿಭಿನ್ನ ಉತ್ತರ ಅಂದಿರಾ.. ಅದು ಕುಮಾರ ಪರ್ವತದ ತಾಕತ್ತು.. ನನ್ನ ಇಷ್ಟವಾದ ಸಂಖ್ಯೆ ಎಂಟು.. ಇದು ನನ್ನ ಎಂಟನೇ ಬಾರಿಗೆ ಕುಮಾರ ಪರ್ವತದ ಮಡಿಲಿಗೆ.. 

ಹೇಳಬೇಕಿದ್ದು ನೂರಾರು.. ಹೇಳೋಕೆ ಹೊರಟ್ಟಿದ್ದು ಹತ್ತಾರು.. ಹೇಳಿದ್ದು ಒಂದೆರಡು.. ಹೌದು.. ಪ್ರತಿ ಬಾರಿಯೂ ಕುಮಾರಪರ್ವತ ವಿಭಿನ್ನ ಅನುಭವ ಕೊಡುವುದಷ್ಟೇ ಅಲ್ಲದೆ.. ನನ್ನ ಭಾವುಕ ಮನಸ್ಸಿಗೆ ಇನ್ನಷ್ಟು ಸ್ಫೂರ್ತಿ ಕೊಡುವ ತಾಣವೂ ಹೌದು.. 
ಮಹಾ ಪರ್ವ... ಇಲ್ಲಿಂದ ಶುರು.. 
ನವೆಂಬರ್ ಹತ್ತು.. ಚಳಿ ಚಳಿ ಎನ್ನುವ ರಾತ್ರಿ .. ಕುಕ್ಕೆ ಸುಬ್ರಮಣ್ಯದ ಬಸ್ಸಿನಲ್ಲಿ ಕೂತಾಗ.. . ಚಾರಣಕ್ಕೆ ಸಿದ್ಧವಿಲ್ಲದ ದೇಹ.. ಶ್ರೀ ನಾನಿದ್ದೇನೆ.. ನಡಿ ಆಗಿದ್ದು ಆಗಲಿ ಎನ್ನುವ ಮನಸ್ಸು.. ಎಂದಿನಂತೆ ಮನಸ್ಸಿನ ಮಾತು ದಾರಿ ದೀಪವಾಯಿತು.. 

ರಾತ್ರಿ ಇಡೀ.. ಮಾತು ಮಾತು ಮಾತು.. ಮುಗಿಯದ ಮಾತು.. ನಗು.. ಬೆಳಗಿನ ಜಾವ ಮಂಜರಾಬಾದ್ ಕೋಟೆ ಆಸು ಪಾಸಿನಲ್ಲಿ ಬಸ್ಸು ಹೆಡ್ ಲ್ಯಾಂಪ್ ಕೆಟ್ಟಿದೆ ಎಂದು ನಿಂತಾಗ.. ಸ್ವಲ್ಪ ಕಣ್ಣು ಎಳೆಯಲು ಶುರುಮಾಡಿತು.. ಆಗಿದ್ದಾಗಲಿ ಸ್ವಲ್ಪ ನಿದ್ದೆ ಮಾಡುವ ಅಂತ.. ಕಣ್ಣು ಮುಚ್ಚಿದ್ದಷ್ಟೇ ಗೊತ್ತು.. ಇಳೀರಿ ಇಳೀರಿ ಇದೆ ಕಡೆಯ ಸ್ಟಾಪ್ ಎಂದಾಗ ಕಣ್ಣು ಬಿಟ್ಟರೆ ಕುಕ್ಕೆ ತಲುಪಿಯಾಗಿತ್ತು.. 

ಮನಸು ಸಾಂದ್ರತೆಯನ್ನು ಕಳೆದುಕೊಂಡು ಹಕ್ಕಿಯ ಹಾಗೆ ಹಗುರವಾಗುವ ಸಮಯ.. ಬೆಳಗಿನ ವಿಧಿಗಳನ್ನು ಮುಗಿಸಿ.. ಕುಮಾರಕೃಪಾ ಹೋಟೆಲಿನಲ್ಲಿ ಇಡ್ಲಿ ವಡೆ ಬನ್ನು ತಿಂದು.. ಹೊರಟಾಗ ಹೊಟ್ಟೆ ಹಗುರವಾಗಿತ್ತು.. ಕಾರಣ ನನ್ನ ಮಾಮೂಲಿ ಬ್ಯಾಟಿಂಗ್ ಮಾಡಿರಲಿಲ್ಲ.. :-)

"ಹೆಜ್ಜೆ ಹೆಜ್ಜೆ ಮೇಲೆ ಹೆಜ್ಜೆ ಇಡುತ.. ಬಂದ ಬಾಲ ರಾಮ" ಎನ್ನುವ ಕರುಣಾಮಯಿ ಚಿತ್ರದ ಹಾಡಿನಂತೆ..  ನಿಧಾನವಾಗಿ ಚಾರಣದ ಪಥದಲ್ಲಿ ಹೆಜ್ಜೆ ಇಡುತ್ತಾ ಸಾಗಿದೆ.. ದೇಹಕ್ಕೆ ಮಾತು ಬೇಕಿರಲಿಲ್ಲ.. ಮನಸ್ಸು ಮೌನಕ್ಕೆ ಶರಣಾಗಿತ್ತು.. ಮಧ್ಯೆ ಮಧ್ಯೆ ಧಾರಾವಾಹಿಗಳ ನಡುವೆ ನುಸುಳಿ ಬರುವಂತೆ.. ಕೊಂಚ ಮಾತು.. ಕೊಂಚ ನಗು.. ಅಷ್ಟೇ.. 

ತಲೆಯಲ್ಲಿ ಯಾವ ಯೋಚನೆಗಳು ಇರಲಿಲ್ಲ.. ತುತ್ತ ತುದಿ ತಲುಪುತ್ತೇವೆಯೋ ಇಲ್ಲವೋ ಗೊಂದಲ ಇರಲಿಲ್ಲ.. ಅನಿರ್ಧಿಷ್ಟ ಪ್ರಯಾಣ ಮಾಡುವ ಹಾಗೆ ಸುಮ್ಮನೆ ಹೊರಟಿದ್ದೆ.. ನಿತ್ಯ ಹರಿದ್ವರ್ಣ ಕಾಡಿನ ಹಾದಿ... ಹಕ್ಕಿಗಳ ಕಲರವ.. ಜೀರಂಬೆಗಳ ಝೇಂಕಾರ.. ಅಲ್ಲೆಲ್ಲೋ ಸದ್ದಾಗುವ ಎಳೆಗಳ  ನಿನಾದ.. ಗಾಳಿ ಎಲ್ಲಿ ಬೀಸಿತೋ.. ಎಲ್ಲಿ ಬಂತೋ ಅರಿಯದೆ ಮರಗಿಡಗಳ ತೂಗಾಟ.. ಹಸಿಯಾದ ಆದರೆ ಗಟ್ಟಿಯಾದ ಮಣ್ಣು.. ಆ ಮಣ್ಣಿನ ಹದವಾದ ವಾಸನೆ.. ಒಂದು  ರೀತಿಯ ಭಾವುಕ ಲೋಕವನ್ನು ಸೃಷ್ಟಿಸಿತ್ತು.. 

ಆಶ್ಚರ್ಯ ಅಂದರೆ.. ಹಿಂದಿನ ಚಾರಣಗಳಲ್ಲಿ ಬೆವರಿನ ಮುದ್ದೆಯಾಗಿ.. ಸುಸ್ತಾಗಿ.. ಸಾಕಪ್ಪ ಅನ್ನಿಸುತ್ತಿದ್ದ ಮನಸ್ಸು ಇಂದು.. ಅದರ ಯಾವ ಸುಳಿವು ಕೊಡದೆ ಸುಮ್ಮನಿದ್ದದ್ದು.. ಜೊತೆಯಲ್ಲಿ ಆಯಾಸ.. ಮನಸ್ಸಿನ ಮಾತನ್ನು ಕೇಳುತ್ತಾ ಮೆಲ್ಲಗೆ ನನ್ನಿಂದ ದೂರವಾಗಿದ್ದು.. ಇದುವರೆಗೂ ನನಗೆ ಈ ಅನುಭವ ಆಗಿರಲಿಲ್ಲ.. ಜೊತೆಯಿದ್ದಿದ್ದರೆ ಅಂದೇ ಕುಮಾರ ಪರ್ವತದ ತುತ್ತ ತುದಿ ತಲುಪಿಬಿಡುತ್ತೇನೆ ಎನ್ನುವ ವಿಶ್ವಾಸ.. ಆದರೂ ಸುಮ್ಮನೆ ಏನೇನೋ ನಿರ್ಧಾರ ತೆಗೆದುಕೊಳ್ಳದೆ.. ಕವಿರತ್ನ ಕಾಳಿದಾಸ ಚಿತ್ರದಲ್ಲಿ ಅಣ್ಣಾವ್ರು ಹೇಳಿದಂತೆ "ಸ್ನಾನಗೀನ ಎಲ್ಲಾ ದೇಹಕ್ಕಲ್ಲ ಕಂದಾ ಮನಸ್ಸಿಗೆ" ತರಹ ಈ ಚಾರಣ ದೇಹಕ್ಕಲ್ಲ ಮನಸ್ಸಿಗೆ ಎಂದು ಮೊದಲೇ ನಿರ್ಧರಿಸಿ ಆಗಿದ್ದರಿಂದ ಸುಮ್ಮನೆ ಹೆಜ್ಜೆ ಹಾಕುತ್ತಾ ಹೋದೆ.. 

ಮಧ್ಯೆ ಭೀಮನಕಲ್ಲಿನ ಹತ್ತಿರ ಸಿಗುವ ತೊರೆಯಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಹೊಟ್ಟೆ  ತುಂಬಾ ನೀರು ಕುಡಿದು ಮತ್ತೆ ಹೊರತು ನಿಂತಾಗ ಮತ್ತೆ ಹುರುಪು ಮೈಗೂಡಿತ್ತು. .. 

ಭಟ್ಟರ ಮನೆಗೆ ತಲುಪಿದಾಗ ಹೊಟ್ಟೆ ಪಕ ಪಕ ಅನ್ನುತ್ತಿತ್ತು.. ಭಟ್ಟರಿಗೆ ನಮಸ್ಕರಿಸಿದಾಗ.. ನಿಮ್ಮನ್ನು ನೋಡಿದ್ದೇನೆ ಎಂದಾಗ ಖುಷಿಯಾಯಿತು.. ಇದು ನನ್ನ ಎಂಟನೇ ಚಾರಣ ಎಂದಾಗ.. ಹಳೆಯ ಘಟನೆಗಳನ್ನು ನೆನಪಿಸಿಕೊಂಡರು.. ಪುಷ್ಕಳವಾದ ಊಟ... ಹಾಗೆ ಸ್ವಲ್ಪ ಹೊತ್ತು ಮಲಗುವ ಅಂದು... ಸೂರ್ಯಾಸ್ತ ಆಗುವ ಹೊತ್ತಿಗೆ ಭಟ್ಟರ ಮನೆಯ ಮುಂದಕ್ಕೆ ಹೋಗಿ ಸೂರ್ಯಾಸ್ತದ ಸೊಬಗನ್ನು ಸವಿಯುವ ಎಂಬ ಹಂಬಲ ಹೊತ್ತು ನಿದ್ದೆ ಮಾಡಿದೆ.. ಕಣ್ಣು ಬಿಟ್ಟಾಗ ಆಗಲೇ ಕತ್ತಲೆ ಶುರುವಾಗಿತ್ತು.. 

ಮರುದಿನಕ್ಕೆ ಮತ್ತೆ ಚಾರಣಕ್ಕೆ ಸಿದ್ಧವಾಗಬೇಕಾದ್ದರಿಂದ ಒಂದಷ್ಟು ವ್ಯಾಯಾಮ ಆಗಲಿ ಎಂದು ಜೀವದ ಗೆಳೆಯನೊಡನೆ ಸುತ್ತು ಹಾಕಿ ಬಂದೆ.. ಒಂದಷ್ಟು ಮೌನ.. ಸಿಕ್ಕಾಪಟ್ಟೆ ಮಾತು.. ನಗು.. ಹಾಸ್ಯ.. ಒಂದಷ್ಟು ಗೊಂದಲಗಳ ನಿವಾರಣೆ.. 

ವಾಪಸ್ ಬಂದಾಗ ನಮ್ಮ ಜೊತೆ ಬಂದಿದ್ದವರು ಚಳಿಗೆ ಬೆಂಕಿ ಹಾಕಿದ್ದರು.. ಅದರ ಜೊತೆಯಲ್ಲಿ ಮತ್ತೆ ಒಂದಷ್ಟು ಚಿತ್ರಗಳು.. ತಮಾಷೆ.. ಸುಂದರ ಸಮಯ ಕಳೆದದ್ದೇ ಗೊತ್ತಾಗಲಿಲ್ಲ.. 

ಹೊಟ್ಟೆ ತುಂಬಾ ಊಟ ಮಾಡಿ ಮಲಗಿದ್ದೆ ಗೊತ್ತು.. ಬೆಳಿಗ್ಗೆ ಆಗಲೇ ದಿನಕರ ತನ್ನ ಕಚೇರಿಗೆ ಬಂದು ತುಂಬಾ ಹೊತ್ತಾಗಿತ್ತು.. ಪ್ರಾತಃವಿಧಿ ಮುಗಿಸಿ.. ಮತ್ತೆ ಅಲೆದಾಟ.. ಆದರೆ ಇಂದು ಸುಮ್ಮನೆ ಒಂದು ಕಡೆ ಕೂತು ಹೊಟ್ಟೆ ತುಂಬುವಷ್ಟು ಮಾತು ಇದೆ ತಲೆಯಲ್ಲಿ ಇತ್ತು.. ಆರಾಮಾಗಿ ಕೂತು ಮಾತಾಡಿದೆವು.. ಸುಮಾರು ಮೂರು ತಾಸು ಗಾಳಿಯ ವೇಗದಲ್ಲಿ ಓಡಿತು.. 
ಒಂದಕ್ಕೆ ಒಂದು ಆಸರೆ.. !
ಕುಮಾರ ಪರ್ವತ ನೋಡುತ್ತಾ ಕೂತೆ.. ಅದರೊಳಗಿಂದ ಹಿಂದಿನ ಅನುಭವಗಳು ಸಿನಿಮಾದ ರೀತಿಯಲ್ಲಿ ಕಣ್ಣ ಮುಂದೆ ಬಂತು.. ಒಂದೊಂದಾಗಿ ಸಿನೆಮಾಗಳು ಖಾಲಿಯಾಗುತ್ತಾ ಬಂದಾ ಹಾಗೆ.. ಬಿಳಿಯ ಪರದೆಯ ಮೇಲೆ ಮೂಡಿದ್ದು.. ಶ್ವೇತಾ ವಸ್ತ್ರಧಾರಿ.. ನಂತರ ಆ ರವಿಯ ಪ್ರಭೆ ಕಾಣಿಸಿತು.. ಅದರೊಂದಿಗೆ ಒಂದಷ್ಟು ಮಾತು.. ಒಂದಷ್ಟು ದುಃಖ ಹಂಚಿಕೊಂಡೆ.. ಇದು ನ್ಯಾಯವೇ ಅಂದೇ.. ಆ ಕಡೆಯಿಂದ ನನ್ನ ನೆಚ್ಚಿನ ಮುಗುಳುನಗೆಯೊಂದೇಸಿಕ್ಕಿದ್ದು .. ಕಣ್ಣುಗಳು ನೀರಿನ ಬಲೂನಾಗಿತ್ತು.. ಒಂದು ಸಣ್ಣ ಗುಂಡು ಸೂಜಿ ಅಲ್ಲ ಹೂವಿನ ಪಕಳೆ ತಾಕಿದ್ದರು.. ಜೋಗದ ಜಲಪಾತವಾಗುತ್ತಿತ್ತು.. ಮೆಲ್ಲನೆ ನನಗೆ ಅರಿಯದೆ ಒಂದು ಹತ್ತಿಯ ವಸ್ತ್ರ ಕಣ್ಣ ಮುಂದೆ ಬಂದು ನಿಂತಿತು.. ಆಶ್ಚರ್ಯ.. ಹತ್ತಿಯ ಬಟ್ಟೆ ಸುಯ್ ಅಂತ  ಕಣ್ಣಲ್ಲಿನ ಲಿಂಗನಮಕ್ಕಿಯನ್ನು ಹೀರಿಕೊಂಡಿತು.. ಮನಸ್ಸು, ಕಣ್ಣುಗಳು ಹಗುರವಾದವು.. 



ಸೂರ್ಯ ಆಗಲೇ ನೆತ್ತಿಯನ್ನು ಸುಡಲು ಶುರುಮಾಡಿದ್ದ.. ಸರಿ ವಾಪಾಸ್ ಹೋಗೋಣ ಅಂತ.. ಮತ್ತೆ ಭಟ್ಟರ ಮನೆಗೆ ಬಂದೆವು.. ಸ್ನಾನ ಮಾಡಿ ಹೊರಬಂದೆ.. ಭಟ್ಟರು ನನ್ನ ಜನಿವಾರ ನೋಡಿ.. ಓಯ್.. ಸಂಧ್ಯಾವಂದನೆ ಮಾಡುವುದುಂಟೇ ಅಂದರು.. ಪರಿಕರ ಕೊಟ್ಟರೆ ಖಂಡಿತ ಅಂದೇ.. ಮುಂದಿನ ಮೂವತ್ತು ನಿಮಿಷ ಆ ಪರ್ವತದ ಮಡಿಲಲ್ಲಿ ಧ್ಯಾನ, ಸಂಧ್ಯಾವಂದನಾ ಆಹಾ ಆಗಲೇ ಹಗುರಾಗಿದ್ದ ಮನಸ್ಸಿಗೆ ರೆಕ್ಕೆ ಮೂಡಿತು.. 

ಭರ್ಜರಿ ಊಟ.. ಮತ್ತೆ ಇಳಿಯಲು ಶುರುವಾಯಿತು ನಮ್ಮ ಪಯಣ.. ಭಟ್ಟರ ಜೊತೆಯಲ್ಲಿ ಒಂದು ಚಿತ್ರ ನೆನಪಿಗೆ.. ಜೊತೆಯಲ್ಲಿ ಅಗಾಧವಾದ ಉತ್ಸಾಹದ ಮೂಟೆಯನ್ನು ಹೊತ್ತು ಇಳಿಯಲು ಶುರುವಾಯಿತು ಪಯಣ.. 
ತಂಡದ ಜೊತೆ ಒಂದು ಚಿತ್ರ 

ಯಾಕೋ ಮನಸ್ಸು ಮೂಕವಾಗಬೇಕು ಎನ್ನಿಸಿತು.. ಇರಲಿ ಮನಸ್ಸಿಗೂ ಒಂದಷ್ಟು ವಿಶ್ರಾಂತಿ ಬೇಕಲ್ಲವೇ.. ನನ್ನ ಹಿಂದೆ ಮುಂದೆ ತಮಾಷೆಯ ಮಾತುಗಳು..  ಪ್ರಕೃತಿಯ ಕಲರವ ಯಾವುದು ನನ್ನ ಕಿವಿಗೆ ಬೀಳುತ್ತಿರಲಿಲ್ಲ.. ಶಾಂತಿ, ನಿಶ್ಯಬ್ಧ.. ಮನಸ್ಸಿಗೆ ನೆಮ್ಮದಿ ಇಷ್ಟೇ ಕಣ್ಣ ಮುಂದೆ ಇದ್ದದ್ದು.. 

ನನ್ನ ಪ್ರೀತಿಯ ಗೆಳೆಯ ಕೇಳಿದ "ತನ್ಹಾಯಿ ಬೇಕಿತ್ತು" ಅದಕ್ಕೆ ಅಂದೇ.. ಓಕೇ ಶ್ರೀ ಎಂದು ಬೆನ್ನು ತಟ್ಟಿತಾಗ ಮನಸ್ಸಿಗೆ ಆನಂದ.. 

ಆಹಾ.. ಈಗ ನನ್ನ ಫಾರ್ಮ್ ಗೆ ಬರುತ್ತಿದ್ದೇನೆ.. ಫೀಲಿಂಗ್ ಬೆಟರ್ ಅಂದೇ.. ಸೂಪರ್ ಎಂದಿತು ಅಶರೀರವಾಣಿಗಳು.. 
ಸವಾಲು, ಜವಾಬು.. ಎಲ್ಲಕ್ಕೂ ಸಿದ್ಧ.. 

ಮುಂದೆ ನೆಡೆದದ್ದು ಮ್ಯಾಜಿಕ್.. ಆಯಾಸವಿಲ್ಲದೆ.. ಬೆಟ್ಟದ ಬುಡ ತಲುಪಿದಾಗ ಆರಾಮ್ ಎನ್ನಿಸಿತು.. 

ನದಿಯ ಕಡೆ ಪಯಣ.. ನದಿಯ ನೀರಲ್ಲಿ ಸ್ವಲ್ಪ ಹೊತ್ತು ಧ್ಯಾನ.. ಮತ್ತೆ ಬಾಸ್ ಗಣಪನ ದರ್ಶನ.. ಮನಸ್ಸಿಗೆ ಇನ್ನಷ್ಟು ಮುದ ನೀಡಿತು.. 
ಬೆಳಕಿನಲ್ಲಿ ದೇವಸ್ಥಾನ 

ಕುಕ್ಕೆ ಸುಬ್ರಮಣ್ಯನ ದೇವಸ್ಥಾನಕ್ಕೆ ಬಂದಾಗ.. ಕಾಲುಗಳು ಪದ ಹೇಳುತ್ತಿದ್ದವು .. ಆದರೆ ಆ ಮಹಾಮಹಿಮ ಸನ್ನಿಧಿ. ಜೊತೆಯಲ್ಲಿ ನೆಡೆಯುತ್ತಿದ್ದ ಉತ್ಸವ ಮೂರ್ತಿಯ ಮೆರವಣಿಗೆ... ಆ ಗಜರಾಜನ ಗಾಂಭೀರ್ಯ ನೆಡಿಗೆ.. ದೇವಸ್ಥಾನದೊಳಗೆ ಹಚ್ಚುತ್ತಿದ್ದ ಸಾಲು ಸಾಲು ಹಣತೆಗಳು.. ಜೊತೆಯಲ್ಲಿ ನಮ್ಮ ಅಳಿಲು ಸೇವೆಯೂ ತಲುಪಿತು..

ಸಾಲು ಸಾಲು ದೀಪಗಳು 
ಗಜರಾಜನ ವೈಭವ 
ದರ್ಶನ ಮಾಡಿ.. ನಮಿಸಿ.. ದೇವಸ್ಥಾನದ ಪ್ರಸಾದ ಸೇವಿಸಿದ ಮೇಲೆ ಮತ್ತಷ್ಟು ಹುರುಪು ತುಂಬಿತು.. 
ಶಕ್ತಿ ಹುಮ್ಮಸ್ಸು ತುಂಬಿದ ಚಾರಣ 

ಮೊದಲೇ ನಿಗಧಿ ಪಡಿಸಿದ್ದ ಬಸ್ಸಿನಲ್ಲಿ ಬಂದು ಕಾಲು ಚಾಚಿ ಮಲಗಿದಾಗ ಸ್ವರ್ಗ ಸುಖ.. ಬೆಳಿಗ್ಗೆ ಎಷ್ಟು ಹೊತ್ತಿಗೆ ಬೆಂಗಳೂರು ತಲುಪಿದೆವೋ ಅರಿವಿಲ್ಲದಂತಹ ನಿದ್ದೆ ... 

ಆರಾಮಾಗಿ ಮನೆಗೆ ಬಂದು.. ಸ್ನಾನ ಮಾಡಿ ಆಫೀಸಿಗೆ ಹೋದಾಗ ಪುನರ್ ನೆನಪುಗಳು ಕಾಡತೊಡಗಿದವು.. 

ಯಾವುದೇ ಏರು ಪೇರಿಲ್ಲದೆ, ತ್ರಾಸದಾಯಕವಿಲ್ಲದ ಚಾರಣ ಇದಾಗಿತ್ತು.. ಕುಮಾರಪರ್ವತದ ಇನ್ನೊಂದು ಅನುಭವ ಮನಸ್ಸಿಗೆ ಮುದ ನೀಡಿತು.. ಮತ್ತೆ ನಮ್ಮ ಅಲೆಮಾರಿಗಳು ತಂಡವನ್ನು ಮತ್ತೆ ಹಳಿಗೆ ತಲುಪುವ ನಿರ್ಧಾರ ಮಾಡಿಕೊಂಡಿತು ಈ ಮನಸ್ಸು.. 
ಅಲೆಮಾರಿಗಳ ಪಯಣ ಶುರು 


೨೦೧೮ ರಲ್ಲಿ ಅಲೆಮಾರಿಗಳು ತಂಡದ ಸಾಹಸ ಮತ್ತೆ ಕೊಂಚ  ಬಹು ಧೀರ್ಘ ವಿರಾಮದ ನಂತರ ಮತ್ತೆ ಮುಂದುವರೆಯಲಿದೆ!!!!

ಹೆಸರಿಗೆ ಒಂದು ಗುರುತು.. 

Wednesday, January 16, 2013

ಕುಮಾರ ಪರ್ವತ ಚಾರಣ - ೨೦೧೩ರ ಜನವರಿ ೫-೬!

"ಸಿಂಧೂರ ಲಕ್ಷ್ಮಣನೆಂದರೆ ಸಾಕು ಶೌರ್ಯವು ಮೈಯಲ್ಲಿ ತುಂಬುವುದು" ಸಿಂಧೂರ ಲಕ್ಷಣ ಚಿತ್ರದ ಮೈನವಿರೇಳಿಸುವ ಗೀತೆಯ ಹಾಗೆ ಕುಮಾರ ಪರ್ವತ ಎಂದರೆ ಸಾಕು ಅರ್ಧ ರಾತ್ರಿಯಲ್ಲೂ ಕೂಡ ಏನೋ ಒಂದು ಹೊಸತನ ಮೈ ಮನಸನ್ನು ಆವರಿಸಿಕೊಳ್ಳುತ್ತದೆ.

ವರ್ಷ ೨೦೧೨ ಆರಂಭದಲ್ಲಿ ಇಲ್ಲಿಂದಲೇ ಶುರುಮಾಡಿದ ಅಲೆಮಾರಿಗಳ ಪ್ರವಾಸ, ವರ್ಷಾಂತ್ಯದಲ್ಲಿ ಇಲ್ಲಿಯೇ ಮುಗಿಸುವ ಆಸೆ ಕೈಗೂಡಲಿಲ್ಲ. ಆದರೇನು ಕುಮಾರ ಪರ್ವತ ಚಾರಣ ಎಂದರೆ ನಮ್ಮ ಅಲೆಮಾರಿಗಳ ತಂಡ ಕೊಡುವ ಉತ್ತರ ಒಂದೇ "ಹೋಗೋಣ"

ಈ ಬಾರಿ ಸಂದೀಪ್, ಪ್ರಶಾಂತ್  ಗಿರೀಶ್, ರವಿಕಾಂತ್, ದರ್ಶನ್ ನನ್ನನ್ನು ಜೊತೆಗೂಡಿದರು. ಆರು ಮಂದಿ ಶುಕ್ರವಾರ ರಾತ್ರಿ ೮.೫೦ಕ್ಕೆ ಬಸ್ಸಿನಲ್ಲಿ ಕೂತಾಗ ಒಂದು ರೀತಿಯ ಸಂತಸಭರಿತ ಕುತೂಹಲ. ಪ್ರತಿಬಾರಿಯೂ ಹೊಸ ಅನುಭವ ಕೊಡುತಿದ್ದ ಪರ್ವತ ಈ ಬಾರಿ ತನ್ನೊಡಲಲ್ಲಿ ಏನು ಹುದುಗಿಸಿಕೊಂಡಿದೆಯೋ ಎನ್ನುವ ತವಕ.

ಶನಿವಾರ ಬೆಳಿಗ್ಗೆ  ಐದಕ್ಕೆ ಕುಕ್ಕೆ ಸುಬ್ರಮಣ್ಯದ ನಿಲ್ದಾಣದಲ್ಲಿ ಬಸ್ ನಿಂತಾಗಷ್ಟೇ ಎಚ್ಚರ.  ಬ್ಯಾಗ್ಗಳನೆಲ್ಲ ಒಟ್ಟು ಗೂಡಿಸಿಕೊಂಡು ಬೆಳಗಿನ ಉಪಹಾರಕ್ಕೆ ಬಂದೆವು. ಆಗಲೇ ಅನೇಕ ತಂಡಗಳು ಚಾರಣಕ್ಕೆ ಹೊರಡಲು ಸಿದ್ಧವಾಗಿದ್ದವು.  ಲಘು ಉಪಹಾರ ಮುಗಿಸಿ ಹೆಜ್ಜೆ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ ಅಲೆಮಾರಿಗಳು ತಂಡದ ರಜತ ಸಂಭ್ರಮದ ಚಾರಣಕ್ಕೆ (ಹೌದು ಅಲೆಮಾರಿಗಳ ತಂಡದ ಇಪ್ಪತೈದನೆಯ ಯಾನ ಇದು) ಚಾಲನೆ ನೀಡಿದೆವು.

ಮೊದಲ ಹಂತದ ಚಾರಣ - ಭೀಮನ ಕಲ್ಲು

ಮಾತು ಕಮ್ಮಿ ಹೆಜ್ಜೆ ಹೆಚ್ಚು ಎನ್ನುತ್ತಾ ಸದ್ದಿಲ್ಲದೇ ಮೊದಲ ಐದು ಕಿ.ಮಿ. ಗಳನ್ನೂ ಸಾಗುವ ಉತ್ಸಾಹ ತೋರಿದೆವು. ಕಾಡಿನ  ಏರು ಹಾದಿ ತ್ರಾಸದಾಯಕವಾಗಿತ್ತು. ಆದ್ರೆ ಉತ್ಸಾಹ ಇಮ್ಮಡಿಸುತಿತ್ತು.  ಸುಸ್ತಾದಗಲೆಲ್ಲ ಕೊಂಚ ವಿಶ್ರಾಂತಿ, ಕೊಂಚ ತಿನಿಸು, ಹರಟೆ ತಮಾಷೆ ಮಾತುಗಳು, ಹೊಸ ಹುಡುಗು ದರ್ಶನ್ ಹುಮ್ಮಸ್ಸಿನಲ್ಲಿ ಚಿತ್ರಗಳನ್ನು ತೆಗೆಯುತ್ತ ಇನ್ನಷ್ಟು ಹುರುಪನ್ನು ತುಂಬುತ್ತಿದ್ದರು. ಸುಮಾರು ೨.೫ ಕಿ.ಮಿ.ಗಳು ನಡೆದು ಭೀಮನ ಕಲ್ಲು ತಲುಪಿದಾಗ ಅಲ್ಲಿದ್ದ ತಂಡದ ಜೊತೆ ಮಾತಾಡಿ, ಅವರು ಹೋದ ಮೇಲೆ ಆ ಬೃಹತ್ ಬಂಡೆಯ ಮೇಲೆ ನಮ್ಮ ತ್ರಾಣಗೊಂಡಿದ್ದ ದೇಹವನ್ನು ಹಾಗೆ ಗಾಳಿಗೆ ಮೈಯೊಡ್ಡಿ ವಿರಮಿಸಿದೆವು.

ಎರಡನೇ ಹಂತ - ಪುಷ್ಪಗಿರಿಯ ಹುಲ್ಲುಗಾವಲು
ಅಂದು ಕೊಂಡಂತೆ ಸರಿ ಸುಮಾರು ಬೆಳಗಿನ ೯.೩೦ರ ಸಮಯಕ್ಕೆ ಪುಷ್ಪಗಿರಿ ಹುಲ್ಲುಗಾವಲಿನ ತಾಣಕ್ಕೆ ಬಂದೆವು. ಕೊಂಚ ದೀರ್ಘ ವಿಶ್ರಾಂತಿ ಬೇಕು ಎಂದು ಬಯಸಿದ್ದರಿಂದ ಅಲ್ಲಿಯೇ ಕುಳಿತು ದಣಿವಾರಿಸಿಕೊಳ್ಳುತ್ತ ತಂದಿದ್ದ ಕ್ಯಾರೆಟ್, ಸೌತೆಕಾಯಿ, ಬಿಸ್ಕೆಟ್, ಬ್ರೆಡ್ ಖಾಲಿ ಮಾಡಿದೆವು. ಕಳೆದ ಬಾರಿ ಇದೆ ಜಾಗದಲ್ಲಿ ಕುಳಿತು ಹರಟಿದ ಸುಂದರ ಕ್ಷಣಗಳನ್ನು ಮೆಲುಕು ಹಾಕುತ್ತ ಮತ್ತೆ ಮುಂದೆ ಹೊರಟೆವು.
ದೂರದ ಬೆಟ್ಟ ನುಣ್ಣಗೆ! ಮೊದಲ ಝಲಕ್ !!!

ಮೂರನೇ ಹಂತ - ಅರಣ್ಯ ಇಲಾಖೆ ಕಚೇರಿ 
ಎಲ್ಲರೂ ಒಂದೇ ನಿರ್ಧಾರಕ್ಕೆ ಬಂದೆವು..ಭಟ್ಟರ ಮನೆಯಲ್ಲಿ ನಾಳೆ ಊಟ ಮಾಡುವ ಎಂದು. ಸರಿ ನಿಧಾನವಾಗಿ ಸುಸ್ತಾದ ಕಾಲುಗಳನ್ನು ಎಳೆದುಕೊಂಡು ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಅರಣ್ಯ ಇಲಾಖೆಯ ಕಚೇರಿಯ ಕಡೆ ನಡೆದೆವು. ಚಾರಣ ಮಾಡಬೇಕಿದ್ದ ಪರ್ವತ ತುತ್ತ ತುದಿ ಕಾಣುವ ಇಲ್ಲಿನ ನೋಟ ಮನೋಹರ. ದರ್ಶನ್, ಗಿರೀಶ್, ರವಿ ಕಾಂತ್ ಉತ್ಸುಕರಾಗಿದ್ದರು.  ಕಚ ಕಚ ಅಂತ ಕೆಲ ಚಿತ್ರಗಳನ್ನು ಕ್ಯಾಮೆರ ಪೆಟ್ಟಿಗೆಯೊಳಗೆ ಸೆರೆ ಹಿಡಿದಾಗಿತ್ತು.  "ಅಗೋ ನೋಡಿ ಭಟ್ಟರ ಮನೆ" ಎಂದ ತಕ್ಷಣ ಇನ್ನೊಮ್ಮೆ ಕ್ಯಾಮೆರ ಸದ್ದು ಮಾಡಿತು. ಕಚೇರಿ ಹತ್ತಿರ ನಿಧಾನವಾಗಿ ಬರುತಿದ್ದಾಗ ಅರಣ್ಯಾಧಿಕಾರಿ ಕುಕ್ಕೆಗೆ ಹೊರಟಿದ್ದರು. ನಮ್ಮನ್ನು ನೋಡಿದ ತಕ್ಷಣ
"ಓಹ್ ನಮಸ್ಕಾರ ಚೆನ್ನಾಗಿದ್ದೀರಾ, ಏನೋ ಈ ಸಲ ಬಹಳ ಹೊತ್ತು ಮಾಡಿಬಿಟ್ರಲ್ಲ. ಡಿಸೆಂಬರ್ ತಿಂಗಳಲ್ಲಿ ಬರುತ್ತೀರಾ ಎಂದು ಕೊಂಡಿದ್ದೆ"
"ನಮಸ್ಕಾರ ಸರ್..ನಾವು ಚೆನ್ನಾಗಿದ್ದೇವೆ..ಹೌದು ಬರಬೇಕಿತ್ತು...ಹುಡುಗರಿಗೆ ರಜ ಇರಲಿಲ್ಲ ಹಾಗಾಗಿ ತಡವಾಯಿತು"
"ಒಳ್ಳೇದು ಒಳ್ಳೆ ಸಮಯಕ್ಕೆ ಬಂದಿದ್ದೀರಿ...ಬನ್ನಿ ತಿಂಡಿ ತಿನ್ನೋದಾದ್ರೆ ನೋಡಿ ಅಲ್ಲಿ ಸೊಂಪಾಗಿ ನೆರಳಿದೆ..ಅಲ್ಲೇ ಕುಳಿತು ವಿಶ್ರಾಂತಿ ತೆಗೆದುಕೊಂಡು ನಿಧಾನವಾಗಿ ಹೋಗಿ..ನನಗೆ ಸ್ವಲ್ಪ ಕೆಲಸ ಇದೆ ಕುಕ್ಕೆ ಹೋಗ್ತಾ ಇದ್ದೀನಿ...ನಮ್ಮ ಹುಡುಗ ಇದ್ದಾನೆ ನಿಮಗೆ ಏನಾದರು ಅನುಕೂಲ ಬೇಕು ಅಂದ್ರೆ ಮಾಡಿಕೊಡ್ತಾನೆ:
ಇಷ್ಟು ಆತ್ಮೀಯವಾಗಿ ಮಾತಾಡಿಸುವ ವ್ಯಕ್ತಿ ಈ ಕಾಡಿನಲ್ಲಿ ಸಿಕ್ಕಾಗ ಸುಸ್ತಾದ ದೇಹಕ್ಕೆ ಮತ್ತೆ ಉಲ್ಲಾಸ ತುಂಬಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ ಅಲ್ಲವೇ.
ಗಿರೀಶ್ ತಂದಿದ್ದ ಖಡಕ್ ರೋಟಿ, ಮೊಸರು, ಉಪ್ಪಿನಕಾಯಿ, ದರ್ಶನ್ ತಂದಿದ್ದ ಚಪಾತಿ ಎಲ್ಲ ಅನಾಯಾಸವಾಗಿ ತಮ್ಮ ಪೂರ್ವ ನಿರ್ಧಾರಿತ ಗುರಿ ಸೇರಿದವು. ಒಂದು ಹದಿನೈದು ನಿಮಿಷ ನಿದ್ದೆ ಮಾಡಿ ಸುಮಾರು ೧೨.೦೦ ಘಂಟೆಗೆ ಮುಂದಿನ ಮಹಾನ್ ಯಾನಕ್ಕೆ ಹೊರಟೆವು.

ನಾಲ್ಕನೆ ಹಂತ - ಕಲ್ಲು ಮಂಟಪ 
ಕುಮಾರ ಪರ್ವತ ಚಾರಣ ಸಾಮಾನ್ಯವಾಗಿ ಕಠಿಣ ಅನ್ನುವ ಪದ ಉಪಯೋಗಕ್ಕೆ ಬರುವುದು ಇಲ್ಲೇ.  ಸೂರ್ಯ ತನ್ನ ಮನೆಯಲ್ಲಿರುವ ಒಲೆಯನ್ನು ಉರಿಸುತ್ತಾ ಅತಿ ಹೆಚ್ಚು ಶಾಖ ಹೊಮ್ಮಿಸುವ ಸಮಯ ಇದಾಗಿರುತ್ತೆ. ನೆರಳಿಗೆ ಒಂದು ಗಿಡ ಮರವಿರುವುದಿಲ್ಲ, ಮತ್ತೆ ಏರು ಹಾದಿ ದೇಹದಲ್ಲಿನ ಶಕ್ತಿಯನ್ನು ಉಡುಗಿಸಿಬಿಡುತ್ತದೆ . ಸಾಕಪ್ಪ ಈ ಪರ್ವತದ ಸಹವಾಸ ಎನ್ನುವಷ್ಟು ಹತಾಶೆ ಮೂಡಿಸುತ್ತದೆ ಇದಕ್ಕೆ ನಿದರ್ಶನವಾಗಿ ಇನ್ನೊಂದು ತಂಡದಲ್ಲಿ ಬಂದಿದ್ದ ಮೂರು ನಾಲ್ಕು ಹುಡುಗಿಯರು ಅವರನ್ನು ಕರೆದುಕೊಂಡು ಬಂದಿದ್ದ ಆ ತಂಡದ ನಾಯಕನಿಗೆ ಹಿಗ್ಗಾ ಮುಗ್ಗಾ ಬಯ್ತ ಇದ್ದರು! ಈ ಬಿಸಿಲು, ನೆರಳಿಲ್ಲ..ಎಷ್ಟು  ನೀರು ಕುಡಿದರೂ ಸಾಕಾಗೊಲ್ಲ, ಸಮತಟ್ಟಾದ ಹಾದಿಯಿಲ್ಲ ಅಂತ ಸಹಸ್ರನಾಮಾರ್ಚನೆ ಮಾಡುತ್ತಿದ್ದರು.

ನಮ್ಮ ಜೊತೆ ಬಂದಿದ್ದ ಮಿಕ್ಕೆಲ್ಲರೂ ಹುಮ್ಮಸ್ಸಿನಿಂದ ನಿಧಾನವಾಗಿ ಕಲ್ಲು ಮಂಟಪದೆಡೆಗೆ ಸಾಗುತಿದ್ದರು. ನನಗೆ ತುಂಬಾ ಸುಸ್ತಾಗುತಿತ್ತು. ಒಂದು ನಿಮಿಷ ಸಾಕಪ್ಪ...ಈ ಬಾರಿ ಆಗೋಲ್ಲ.ವಾಪಸ್ ಭಟ್ಟರ ಮನೆಯಲ್ಲಿ ಇರ್ತೀನಿ ನೀವು ಹತ್ತಿ ಬನ್ನಿ ಎಂದು ಕೂಗಿ ಹೇಳುವ ಆಸೆಯಾಗುತ್ತಿತ್ತು. ಆದ್ರೆ ಅವರು ನನ್ನಿಂದ ತುಸು ದೂರದಲ್ಲಿದ್ದರೂ. ಮತ್ತೆ ನಾನೇ ಈ ಚಾರಣಕ್ಕೆ ಹೋಗೋಣ ಅಂತ ಎಲ್ಲರನ್ನು ಕರೆದು ನಾನೇ ಹಿಂದೆ ಬಂದರೇ....ಛೆ ಛೆ ಏನು ಮಾಡೋದು ಅನ್ನುವಾಗ ತಲೆಗೆ ಬಂದದ್ದು...

"ಆಗದು ಎಂದು.... ಕೈಲಾಗದು ಎಂದು
ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವೂ ಮುಂದೆ"

ಮೂರು ಅಣ್ಣಂದಿರು ....ನನ್ನ ಅಣ್ಣ ( ಅಪ್ಪ ), ನಮ್ಮ ಅಣ್ಣ (ಅಣ್ಣಾವ್ರು ), ಬಾಲಣ್ಣ (ಕನ್ನಡ ಚಿತ್ರನಟ ಬಾಲಕೃಷ್ಣ)  ನೆನಪಿಗೆ ಬಂದರು, ಮೂವರಿಗೂ ಮನದಲ್ಲಿಯೇ ವಂದಿಸಿ ನಿಮ್ಮ ಛಲ, ಸಾಹಸ ಮನೋಭಾವದ ಒಂದು ಅಂಶ ನನಗೆ ಕೊಡಿ ಎಂದು ಬೇಡುತ್ತಾ ಹತ್ತಲು ಶುರು ಮಾಡಿದೆ...ಆಶ್ಚರ್ಯ...ಅನಾಯಾಸವಾಗಿ ಕಲ್ಲು ಮಂಟಪದೆಡೆಗೆ ಸಾಗುತ್ತ ಹೋದೆ...
ಸಂದೀಪ್ ಹೇಳಿದ್ರು "ಶ್ರೀಕಾಂತ್..ಇ-ಮೇಲ್ ನಲ್ಲಿ ೨.೩೦ಕ್ಕೆ ಕಲ್ಲು ಮಂಟಪ ಅಂತ ಹಾಕಿದ್ರಿ...ನೋಡಿ ಸಮಯ ಈಗ ಸರಿಯಾಗಿ ೨.೩೦ ಅಂದಾಗ...ಮನಸ್ಸು ಹಾರಾಡುತ್ತಿತ್ತು!

ಐದನೇ ಹಂತ - ಶೇಷ ಪರ್ವತ
ಗಿರೀಶ್, ದರ್ಶನ್ "ಸರ್ ಅದೇನಾ ಕುಮಾರಪರ್ವತ? "
"ಇಲ್ಲ ಗಿರಿ ಅದು ಶೇಷ ಪರ್ವತ..ಅದನ್ನು ದಾಟಿ ಹೋದರೆ ಸಿಗುತ್ತೆ ಕುಮಾರಪರ್ವತ "
"ಮತ್ತೆ ಎಲ್ಲಿ ಉಳಿಯೋದು, ಎಲ್ಲಿ ಮಲಗೋದು"
"ಏನು ಯೋಚನೆ ಬೇಡ..ಎಲ್ಲರಿಗೂ ಸುಸ್ತಾಗಿದೆ...ಶೇಷಪರ್ವತ ಸುಮಾರು ೪.೩೦ - ೫.೦೦ ಘಂಟೆಗೆ ತಲುಪುತ್ತೇವೆ. ಅಲ್ಲಿಂದ ಒಂದು ಐದು ನಿಮಿಷ ನಡೆದರೆ ಕಾಡು ಸಿಗುತ್ತೆ...ಅಲ್ಲಿಯೇ ನಮ್ಮ ಬಿಡಾರ ಹೂಡಿ ಬಿಡೋಣ..ಚೆನ್ನಾಗಿ ಊಟ ಮಾಡಿ..ರಾತ್ರಿ ಮಲಗಿ ಬೆಳಿಗ್ಗೆ ಹೊಸ ಹುರುಪಿಂದ ಕುಮಾರಪರ್ವತಕ್ಕೆ ಹೋಗುವ.."
ಸಂದೀಪ್, ಪ್ರಶಾಂತ್ ಕೂಡ ಇದು ಸರಿಯಾದ ಯೋಚನೆ ಎಂದರು.
ಮುಂದಿನ ಮಾರ್ಗ ತುಂಬಾ ಕಡಿದಾಗಿತ್ತು. ಇಲ್ಲಿಯ ತನಕ ಬಂದಾಗಿದೆ..ಇನ್ನೂ ಹಿಂದಕ್ಕೆ ಹೋಗುವ ಮಾತೆ ಇರಲಿಲ್ಲ..ನಿಧಾನವಾಗಿ ಶೇಷಪರ್ವತದ ತುದಿಯಲ್ಲಿ ನಿಂತಾಗ ಸುಮಾರು ಐದು ಘಂಟೆ. ಸೂರ್ಯ ಅಸ್ತಮಿಸಲು ಸಿದ್ದವಾಗುತಿದ್ದ!
ಆನಂದದ ಸಮಯ - ಅಲೆಮಾರಿಗಳು ಹಕ್ಕಿಗಳ ಹಾಗೆ ಹಾರಾಡುವ ಸಮಯ !

ಆರನೇ ಹಂತ - ಬಿಡಾರ - ಊಟ - ನಿದ್ದೆ 
ಪ್ರಶಾಂತ್ ಮತ್ತು ನಾನು ತಂದಿದ್ದ ಬಿಡಾರಗಳನ್ನು ಬಿಚ್ಚಿ ಸಿದ್ದ ಮಾಡುತಿದ್ದೆವು, ಗಿರೀಶ್, ದರ್ಶನ್ ಸಂದೀಪ್ ಸಹಾಯಕ್ಕೆ ಬಂದರು. ರವಿ ಅದಕ್ಕೆ ಬೇಕಾದ ಅನುಕೂಲ ಮಾಡುತ್ತಾ, ರಾತ್ರಿ ಒಲೆಗೆ ಬೇಕಾದ ಸೌದೆಗಳನ್ನು ಒಟ್ಟು ಗೂಡಿಸುತ್ತಿದ್ದರು. ಮೊದಲಿಗೆ ನಮ್ಮ ಗುಡಾರ ಸಿದ್ಧವಾಯಿತು. ಕಟ್ಟಿಗೆ, ಒಣಗಿದ ಎಲೆ, ಒಲೆ ಕೂಡ ಸಿದ್ಧವಾಯಿತು. ಇನ್ನು ಬೇಕಾಗಿದ್ದು ನೀರು.
ಪ್ರಶಾಂತ್ ಗುಡಾರವನ್ನು ನೋಡಿಕೊಳ್ಳುವ ಹೊಣೆ ಹೊತ್ತುಕೊಂಡ...ಸಂದೀಪ್ ಸೂರ್ಯಾಸ್ತದ ಚಿತ್ರ ತೆಗೆದುಕೊಂಡು ಬರ್ತೀನಿ ಅಂತ ಹೋದರು..ಮಿಕ್ಕ ನಾಲ್ವರು ನೀರು ತರಲೆಂದು ಹೊರಟೆವು. ಸಂಜೆಯ ಸಮಯ..ದಿನವಿಡೀ ಬಿರು ಬಿಸಿಲಿನಲ್ಲಿ ನೆಡೆದು ಹಣ್ಣಾಗಿದ್ದ ದೇಹಕ್ಕೆ ಮುಸ್ಸಂಜೆಯ ತಂಗಾಳಿ ಮುದ ತರುತ್ತಿತ್ತು. ಇದ್ದ ಬಾಟಲಿಗಳು ನೀರಿನಿಂದ ತುಂಬಿ ತುಳುಕುತ್ತಿತ್ತು.

ಓಲೆ ಹಚ್ಚಿ ಪಾತ್ರೆ ಇಟ್ಟಿದ್ದೆ ತಡ...ಎಂ.ಟಿ.ಆರ್ ನ ಸಿದ್ಧಪಡಿಸಿದ ಊಟಕ್ಕೆ ನಾಲಿಗೆ ಕಾತರಿಸುತಿತ್ತು.  ಒಂದೊಂದೇ ಪ್ಯಾಕೆಟ್ ಅಂತ ಸುಮಾರು ೧೨ ಪ್ಯಾಕ್ಕೆಟ್ಗಳು ಎಲ್ಲರ ಹೊಟ್ಟೆಯೊಳಗೆ ಶಿವೈಕ್ಯ ಹೊಂದಿತು. ಸ್ವಲ್ಪ ಚೇತನ ಬಂದ ಮೇಲೆ ಮತ್ತೆ ಹರಟಲು ಶುರು ಮಾಡಿದೆವು.
ಊಟದ ಸಮಯ...ಬಿಸಿ ಬಿಸಿ ಊಟ...ಆಹಾ...!

ಇಲ್ಲಿಯ ತನಕ ಬ್ಯಾಗಿನಲ್ಲಿ ಸುಮ್ಮನೆ ಕೂತಿದ್ದ ಕ್ಯಾಮೆರ ನಿಧಾನವಾಗಿ ಹೊರಬಂದು ಸದ್ದು ಮಾಡಲು ಶುರುಮಾಡಿತು. ನಮ್ಮ ಹೊಟ್ಟೆ ತುಂಬಿತ್ತು..ಕ್ಯಾಮೆರಗೂ ಹೊಟ್ಟೆ ತುಂಬಿಸಿ ಸಂತಸ ನಿದ್ರೆಗೆ ನಮ್ಮನ್ನು ಅರ್ಪಿಸಿಕೊಂಡೆವು.
ಬೆಳಗಿನ ಚಳಿಗೆ ಬಿಸಿ ಬಿಸಿ ಬಿಸಿಸೂಪ್  ಕುಡಿದ ಆ ಕ್ಷಣ !!!

ಏಳನೇ ಹಂತ - ಕುಮಾರ ಪರ್ವತ
ಬೆಳಿಗ್ಗೆ ಬೇಗನೆ ಎದ್ದು ಪ್ರಶಾಂತ್ ತಯಾರಿಸಿದ ಸೂಪ್ ಕುಡಿದು ಚಳಿಗೆ ಮರಗಟ್ಟಿದ್ದ ದೇಹವನ್ನು ಅರಳಿಸಿಕೊಂಡು ಕುಮಾರಪರ್ವತ ಶಿಖರಾಗ್ರಕ್ಕೆ ಬಂದು ನಿಂತಾಗ ಕಂಡ ದೃಶ್ಯ ನೋಡುತ್ತಾ ಮನದಾಳದಲ್ಲಿ ಪದಗಳು ಹುಟ್ಟಿ ಕೊಂಡವು

ಉದಯಿಸಲು ಬಂದ ಉದಯರವಿ!

"ಮೂಡುತ ಬರುವ ಸೂರ್ಯ
ತನ್ನ ಹಿಂದೆ ಇದ್ದ ಕತ್ತಲನ್ನು ಬಡಿದೋಡಿಸಿ
ಹೊಸ ಬೆಳಗಿಗೆ ನಾಂದಿ ಹಾಡುವನು"
ಸುತ್ತ ಮುತ್ತಲಿನ ದೃಶ್ಯ...ನಯನ ಮನೋಹರ!

ಶಿಖರಾಗ್ರ ತಲುಪಿ..ಇಲ್ಲಿಯ ತನಕ ನಮ್ಮನ್ನು ಸುರಕ್ಷಿತವಾಗಿ ಕರೆದು ತಂದ ಆ ದೇವನಿಗೆ ಮನಸಾರೆ ವಂದಿಸಿ, ಕೆಲ ಸುಂದರ ಕ್ಷಣಗಳನ್ನು ಕಳೆದು ಮತ್ತೆ ನಮ್ಮ ಗೂಡಿಗೆ ಹೊರಟೆವು.
ಸುರಕ್ಷಿತವಾಗಿ ತಲುಪಿಸಿದ ದೇವರಿಗೆ ಒಂದು ನಮನ 
ಸುತ್ತಮುತ್ತಲು ಕಾಣುವ ನಯನ ಮನೋಹರ ದೃಶ್ಯಗಳು ಕಣ್ಣಿಗೆ ಹಬ್ಬವನ್ನೇ ಉಂಟು ಮಾದುತಿದ್ದವು!

ದೂರದಲ್ಲಿ ಶೇಷ ಪರ್ವತ!
ಒಬ್ಬೊಬ್ಬರಿಗೆ ಒಂದೊಂದು ರೀತಿ ನೆನಪಲ್ಲಿ ಉಳಿಯುವ ಈ ಕುಮಾರಪರ್ವತ ನಮ್ಮ ಪ್ರಶಾಂತ್ ಜ್ಞಾನ ಪ್ರಭಾವಳಿಯಲ್ಲಿ ಮಿಂದ ಬಗೆ ಹೀಗಿತ್ತು!

ಜ್ಞಾನ ಪ್ರಭಾವಳಿಯಲ್ಲಿ ಅಲೆಮಾರಿಗ ಪ್ರಶಾಂತ್ !

ನೆನಪಿನ ಪುಟದಲ್ಲಿ ದಾಖಲಾಗುವಂತೆ ಅಲೆಮಾರಿಗಳ ತಂಡದ ಒಂದು ಚಿತ್ರ ಶಿಖರಾಗ್ರದಲ್ಲಿ.


ಕುಮಾರ ಪರ್ವತಕ್ಕೆ ಸಾಗುವ ಕಡಿದಾದ ಹಾದಿ. ಮಳೆಗಾಲದಲ್ಲಿ ಇದು ಸದಾ ಹರಿಯುವ ಜಲಪಾತ!...

ಮಳೆಗಾಲದಲ್ಲಿ ಇದು ಜಲಪಾತದ ಹಾದಿ..!

ಸಂದೀಪ್ ನಾವೆಲ್ಲಾ ಬರುವಷ್ಟರಲ್ಲಿ  "ಅಲೆಮಾರಿಗಳು" ತಂಡದ ಹೆಸರನ್ನು ಪರ್ವತದ ಹೃದಯ ಭಾಗದಲ್ಲಿ ಅರಳಿಸಿದ್ದರು.

ಅ;ಅಲೆಮಾರಿಗಳು ತಂಡದ ಹೆಸರು ಭೂತಾಯಿಯ ಹಣೆಯ ಮೇಲೆ!

ನಮ್ಮ ಬ್ಯಾಗ್ಗಳನ್ನ ತೆಗೆದುಕೊಂಡು..ಒಂದು ಸುಂದರ ಚಿತ್ರವನ್ನು ಚಿತ್ರೀಕರಿಸಿ ಕುಮಾರಪರ್ವತಕ್ಕೆ ಶುಭ ವಿದಾಯ ಹೇಳಿದೆವು. 

ನಮ್ಮ ಗುಡಾರದ ಜೊತೆ ನಾವು...!
ಮುಂದಿನ ಪಯಣ ಎಡಬಿಡದೆ ಭಟ್ಟರ ಮನೆ ತಲುಪುವುದಾಗಿತ್ತು. ಗಡಿಯಾರ ಬೆಳಗಿನ ಹತ್ತು ಘಂಟೆ ಎಂದು ಉಲಿಯುತ್ತಿತ್ತು!

ಎಂಟನೆ ಹಂತ - ಭಟ್ಟರ ಮನೆ ಹಾಗೂ ರುಚಿಕರ ಭೋಜನ!
ಸರಿ ಸುಮಾರು ೧೩.೦೦ ಘಂಟೆಗೆ ಭಟ್ಟರ ಮನೆಗೆ ಬಂದೆವು..ಪುಷ್ಕಳ ಭೋಜನ ಸಿದ್ಧವಾಗಿತ್ತು. ನಗುಮೊಗದಲ್ಲಿ ಭಟ್ಟರ ಮನೆಯ ಸಿಬ್ಬಂಧಿಗಳು ಮಾತಾಡಿಸಿದರು. ಶುಚಿರ್ಭೂತರಾಗಿ ಹೊಟ್ಟೆಗೆ ಸಮಾರಾಧನೆಯ ಯೋಗ ಮಾಡಿಕೊಟ್ಟೆವು. ಭಟ್ಟರ ಮನೆಯವರ ಜೊತೆ ಒಂದು ಚಿತ್ರ ನಮ್ಮ ನೆನಪಿಗೆ ಸಿಕ್ಕಿತು. ಕಾಫಿ ಕೇಳಿದೆವು ಅದು ಸಿಕ್ಕಿತು.  ಇನ್ನೇನು ಬೇಕು ಆ ಬೆಟ್ಟದಲ್ಲಿ ಓ ಎಂದರೆ ಯಾರು ಸಿಗುತ್ತಾರೆ?..ಅಂತಹ ರುದ್ರ ರಮಣೀಯ ತಾಣದಲ್ಲಿ ನೆರಳು, ನೀರು, ಆಹಾರ ಯಾರೇ ಕೊಟ್ಟರೂ ಆ ದೇವರ ಸಾಕ್ಷಾತ್ಕಾರವಾದಷ್ಟು ಖುಷಿಯಾಗುತ್ತದೆ ಅಲ್ಲವೇ...ಅಂತಹ ಒಂದು ಸುಂದರ ಜಾಗ ಭಟ್ಟರ ಮನೆ!

ದೇವರ ಮನೆ...ಭಟ್ಟರ ಮನೆಯ ಸಿಬ್ಬಂಧಿ ವರ್ಗದ ಜೊತೆಯಲ್ಲಿ ಅಲೆಮಾರಿಗಳು !

ಒಂಭತ್ತನೇ ಹಂತ - ಕುಕ್ಕೆ ಸುಬ್ರಮಣ್ಯ ಹಾಗು ದೇವರ ದರ್ಶನ!
ಕುಮಾರ ಪರ್ವತದಿಂದ ಹೊರಡಬೇಕಲ್ಲ ಎನ್ನುವ ಭಾರವಾದ ಮನಸು, ಏನೋ ಸಾಧಿಸಿದ ಹುಮ್ಮಸ್ಸಿನಿಂದ ಹಗುರಾದ ದೇಹ ಇವರೆಡನ್ನು ಹೊತ್ತು ಸುಮಾರು ೧೭.೦೦ ಘಂಟೆಗೆ ಬೆಟ್ಟದ ತಪ್ಪಲಿಗೆ ಬಂದೆವು. ಕೊಂಚ ಕಾಲ ವಿರಮಿಸಿಕೊಂಡು..ಸ್ನಾನಕ್ಕೆ ಕುಮಾರಧಾರ ನದಿಗೆ ಹೊರಟೆವು. ನದಿ ಸ್ನಾನ ಮುಗಿಸಿ ಹೊರಬಂದಾಗ.ಒಂದು ಆಘಾತ ಕಾಡಿತ್ತು..ಬಂದ ಆಟೋ ರಿಕ್ಷಾದಲ್ಲಿ ಸಂದೀಪ್ ಅವರ ಕ್ಯಾಮೆರಾದ ಟ್ರೈ-ಪಾಡ್ ಬಿಟ್ಟಿದ್ದೆವು. ನಮ್ಮೆಲ್ಲರ ಪ್ರಾರ್ಥನೆ ಒಂದೇ ಆಗಿತ್ತು..ಹೇಗಾದರೂ ಆ ಕಳೆದ ಹೋದ ವಸ್ತು ನಮ್ಮ ಕೈಸೇರಲಿ ಎಂದು.  ಅಲ್ಲಿಯೇ ಇದ್ದ ಕೆಲ ಆಟೋ ರಿಕ್ಷ ಚಾಲಕರಿಗೆ ನಾವು ಬಂದ ಆಟೋ ಚಾಲಕನ ಗುರುತು ಎಲ್ಲ ಹೇಳಿದೆವು...ಹತ್ತೇ ನಿಮಿಷ ಟ್ರೈ-ಪಾಡ್ ನಮ್ಮ ಕೈಯಲ್ಲಿ ಇತ್ತು. ಎಲ್ಲ ಒಳ್ಳೆಯ ಮನಸಿನ ಮಹಿಮೆ...ದೇವರ ಮಹಿಮೆ...!
ದೇವರ ದರ್ಶನವಾಯಿತು..ಮನಸಿಗೆ ಸಂತಸವಾಯಿತು. ದೇವಸ್ಥಾನದಲ್ಲಿ ಊಟ ಮಾಡುವಷ್ಟು ಸಮಯವಿಲ್ಲದ ಕಾರಣ, ಅಲ್ಲಿಯೇ ಒಂದು ಹೋಟೆಲ್ನಲ್ಲಿ ಸಿಕ್ಕ ಮಸಾಲೆ ದೋಸೆ, ಕಾಫಿಯನ್ನು ಹೀರಿ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದೆವು.

ಹತ್ತನೇ ಹಂತ - ವಾಪಸ್ ಬೆಂಗಳೂರಿಗೆ
ನಿಲ್ದಾಣಕ್ಕೆ ಬಂದಾಗ ವೈಭವ ಬಸ್ ನಮಗಾಗಿ ಕಾದಿತ್ತು. ನಮ್ಮ ಲಗೇಜ್ಗಳನ್ನೂ ಅದರ ಸ್ಥಾನಕ್ಕೆ ಸೇರಿಸಿ ಸೀಟಿಗೆ ಒರಗಿ ಕಣ್ಣು ಮುಚ್ಚಿದೆವು...ಕಣ್ಣು ಬಿಟ್ಟಾಗ ಯಾರಿ ನವರಂಗ ಸರ್ಕಲ್ ಅಂತ ಹೇಳುತ್ತಿದ್ದ ಧ್ವನಿ ಎಚ್ಚರಿಸಿತು.  ಮೆಜೆಸ್ಟಿಕ್ ನಿಲ್ದಾಣಕ್ಕೆ ಬಂದು..
ಆ ಚಳಿಯಲ್ಲಿ ಬಿಸಿ ಬಿಸಿ ಕಾಫಿ ಕುಡಿದು ಎಲ್ಲ ಸ್ನೇಹಿತರಿಗೆ ವಿದಾಯ ಹೇಳಿದಾಗ ಕಾಫಿ ಅಂಗಡಿಯಲ್ಲಿದ್ದ ಕುಕ್ಕೆ ಸುಬ್ರಮಣ್ಯ ದೇವರ ಚಿತ್ರ ಒಮ್ಮೆ ಕಣ್ಣು ಮಿಟುಕಿಸಿದ ಅನುಭವವಾಯಿತು. ಅಲ್ಲಿಯೇ ದೇವರಿಗೆ ನಮ್ಮ ನಮನಗಳನ್ನು ಸಲ್ಲಿಸಿ ನಮ್ಮ ನಮ್ಮ ಗೂಡಿಗೆ ಸೇರಿಕೊಂಡೆವು.