Friday, December 21, 2018

ಶ್ರೀ ವೆಂಕಟೇಶಾಯ ಮಂಗಳಂ - ಮೂರನೇ ಆವೃತ್ತಿ

ಹಲವಾರು ವರ್ಷಗಳಿಂದ ತಿರುಪತಿ ತಿರುಪತಿ.. ಹೋಗಬೇಕೆನ್ನುವುದು, ಹೋಗಲಾಗದೆ ಒದ್ದಾಡುವುದು ನೆಡೆದಿತ್ತು.. ಆದರೆ ಕಳೆದ ಮೂರು ವರ್ಷಗಳಲ್ಲಿ ಸತತವಾಗಿ ಮೂರು ಬಾರಿ.. ವೆಂಕಟೇಶ್ವರ ಕರುಣೆಯಿಂದ ನನ್ನ ಬರಮಾಡಿಕೊಂಡ.. ಪ್ರತಿ ಬಾರಿಯೂ ವಿಭಿನ್ನ ಅನುಭವ.. 

Guys.. i can't make it get together.. am planning to tirupathi.. ಶಶಿ ಈ ಮಾತನ್ನು ಹೇಳಿದ ತಕ್ಷಣ.. 
"ಶಶಿ ಮುಂದಿನ ತಿಂಗಳ ಕೊನೆಯಲ್ಲಿ ಹೋಗೋದಾದರೆ ನಾ ಬರುತ್ತೇನೆ.. ವೆಂಕಿ ನೀನು?"
"ಮಗಾ ನಾನು ಬರ್ತೀನಿ"

ಸರಿ ತ್ರಿಮೂರ್ತಿಗಳು ಹೊರಡೋದು ಅಂತ  ಆಯಿತು.. ಕಾರು ನಂದ ನಿಂದ ಎನ್ನುವ ಗೊಂದಲಕ್ಕೆ ಅವಕಾಶವೇ ನೀಡದಂತೆ ಶಶಿ ನಾ ಕಾರು ತರುತ್ತೇನೆ ಅಂದಾ.. 

"ಲೋ.. ಶ್ರೀಕಿ, ವೆಂಕಿ ನೀವಿಬ್ಬರು ಮೊದಲೇ ಲೇಟ್ ಲತೀಫ್ ಗಳು..ದಯವಿಟ್ಟು .. ಐದಕ್ಕೆ ಬೈಯಪ್ಪನಹಳ್ಳಿ ಹತ್ರ ಬಂದು ಬಿಡಿ.. ಲೇಟ್ ಆದರೆ ಬೆಟ್ಟ ಹತ್ತೋದು ಎಲ್ಲಾ ಪ್ರೋಗ್ರಾಮ್ ಉಲ್ಟಾ ಆಗುತ್ತೆ.. "

ಸರಿ ಕಣೋ ಬರ್ತೀವಿ ಅಂತ ಹೇಳಿ .. ನಾನು ವೆಂಕಿ ಜೋರಾಗಿ ನಕ್ಕು ನಮ್ಮಿಬ್ಬರ ಐವತ್ತೊಂಬತ್ತೂವರೆ ಹಲ್ಲುಗಳನ್ನೂ ಬಿಟ್ಟಿದ್ದೆವು.. 

ಆದಷ್ಟು ಬೇಗ ತಿರುಪತಿ ಸೇರೋಣ.. ಹೋಟೆಲಿಗೆ ಹೋಗಿ ರೆಸ್ಟ್ ತಗೊಂಡು ಬೆಟ್ಟ ಹತ್ತೋಣ.. ಬೆಟ್ಟದಿಂದ ಇಳಿದು.. ರೂಮಿಗೆ ಬಂದು.. ಸ್ನಾನ ಮುಗಿಸಿ.. ನಿಗದಿತ ಸಮಯಕ್ಕೆ ದರ್ಶನಕ್ಕೆ ನಿಲ್ಲೋಣ .. ದರ್ಶನ ಮಾಡಿ.. ರೂಮಿಗೆ ಬಂದು.. ಮಲಗೋದು. .ಬೆಳಿಗ್ಗೆ ಎದ್ದು ಕಾಳಹಸ್ತಿಗೆ ಹೋಗಿ ಅಲ್ಲಿಂದ ಬೆಂಗಳೂರು..  ಇದು ಪ್ಲಾನ್ ಅಂತ ಮಾತಾಡಿಕೊಂಡಿದ್ದೆವು.. 



ಏಳು ಬೆಟ್ಟದ ಮೇಲೆ ಕೂತಿದ್ದ ವೆಂಕಟೇಶ್ವರ.. ಮನದಲ್ಲೇ ನಕ್ಕಿದ್ದು ನನಗೆ ಕೇಳಿಸಿತ್ತಾದರೂ ನಾ ಸುಮ್ಮನಿದ್ದೆ.. 

ನಿಗದಿತ ಸಮಯಕ್ಕೆ ನಾನು ವೆಂಕಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಹತ್ತಿರ ನಿಂತಿದ್ವಿ.. ಶಶಿ ಕೈಲಿ ಬೈಸಿಕೊಳ್ಳೋದು ತಪ್ಪಿತ್ತು.. ಕಾರಣ.. ಅವನು ಕೊಂಚ ಬೇಗನೆ ಬಂದಿದ್ದ ಆದರೆ ಪಾರ್ಕಿಂಗ್ ಸಮಸ್ಯೆಯಿಂದಾಗಿ ಒಂದು ಕಿಮಿ ದೂರ ನಿಂತಿದ್ದ.. ನಾವಿಬ್ಬರು ನಿಗದಿತ ಐದಕ್ಕೆ ಬಂದಿದ್ವಿ.. ಅವನು ನಮ್ಮ ಸ್ಟಾಪಿಗೆ ಟ್ರಾಫಿಕ್ ದಾಟಿ ಬರುವ ಹೊತ್ತಿಗೆ ನಾ ಅವನಿಗೆ ಬಯ್ಯಲು ಸಮಯ ಕಾಯುತ್ತಿದ್ವಿ.. ಹ ಹ ಹ ಹ :-)


ಮಯ್ಯಾಸ್ ಹೋಟೆಲ್ಲಿನಲ್ಲಿ ಒಂದಷ್ಟು ಮುಕ್ಕಿ.. ತಿರುಪತಿ ದಾರಿ ಹಿಡಿದೆವು.. ದಾರಿಯುದ್ದಕ್ಕೂ ನಗು, ಮಾತು.. ಮುಗಿಯದ ನಮ್ಮ ಹಳೆ ಪುರಾಣಗಳು.. ಎಷ್ಟೊಂದು ಬಾರಿ ಪುನರಾವರ್ತನೆಯಾಗಿದ್ದರೂ ನಗು ಮಾಸದೆ ಇನ್ನಷ್ಟು ಹುಮ್ಮಸ್ಸು ತುಂಬುತ್ತಿತ್ತು.. ಲೋಕಿ ಕಾರಣಗಳನ್ನೇ ಅಂತರ ಮಾಡಿಕೊಂಡು ನಮ್ಮ ಜೊತೆ ಬಂದಿರಲಿಲ್ಲ.. ಲೋಕಿಗೆ ಕರೆ ಮಾಡಿ ಒಂದಷ್ಟು ಕ್ಲಾಸ್ ತಗೊಂಡ್ವಿ.. ವೆಂಕಿ ತನ್ನ ಶೈಲಿಯಲ್ಲಿ ಲೋಕಿಗೆ ಕ್ಲಾಸ್ ತಗೊಂಡ.. ಅವನ ಒಂದು ಸಂಭಾಷಣೆಗೆ ನನಗೆ ನಗು ತಡೆಯೋಕೇ ಆಗಲಿಲ್ಲ.. ಎ ಸಿ ಹಾಕಿದ್ದರಿಂದ ಕಾರಿನ ಗಾಜು ಬಂದಾಗಿತ್ತು.. ನನಗೆ ನಕ್ಕು ನಕ್ಕು ಉಸಿರು ಸಿಕ್ಕಿಕೊಂಡು ಬಿಟ್ಟಿತ್ತು.. 

ಡ್ರೈವ್ ಮಾಡುತ್ತಿದ್ದ ಶಶಿ ತಡೆಯಲಾಗದೆ.. "ಶ್ರೀಕಿ ಉಸಿರು ಬಿಡೋ.. ಉಸಿರು ಬಿಡೋ" ಅಂತ ಹೇಳುತ್ತಲೇ ಇದ್ದ.. ನನಗೆ ನಗೆ ತಡೆಯೋಕೇ ಆಗದಷ್ಟು ಉಸಿರು ಕಟ್ಟಿಕೊಂಡು ಬಿಟ್ಟಿತ್ತು.. ಕಾರಿನ ಗಾಜು ತೆಗೆದು ಒಂದಷ್ಟು ಗಾಳಿಗೆ ಮೊಗವೊಡ್ಡಿದೆ.. "ಶ್ರೀಕಿ ಉಸಿರು ಬಿಡೋ ಉಸಿರು ಬಿಡೋ" ಶಶಿ ಹೇಳುತ್ತಲೇ ಇದ್ದ.. ಒಂದು ನಿಮಿಷ.. ಗಾಳಿಗೆ ಮೊಗವೊಡ್ಡಿದ್ದರಿಂದ ಸ್ವಲ್ಪ ಸಮಾಧಾನವಾಯಿತು.. ಮತ್ತೆ ಲೋಕಿಗೆ ಒಂದಷ್ಟು ನಾಮಾರ್ಚನೆ ಮಾಡಿ.. ಕರೆ ಮುಗಿಸಿದೆವು.. 

ಫ್ರಾಂಕ್ಫರ್ಟ್ ನಲ್ಲಿದ್ದ ಜೆಮ್ ಗೆ ಕರೆ ಮಾಡಿದೆವು.. ಅವನು ಶುಕ್ರವಾರ.. ಕೆಲಸ ಮುಗಿಸುವ ತರಾತುರಿಯಲ್ಲಿದ್ದ.... ಆದರೂ ಸ್ನೇಹಕ್ಕಿಂತ ದೊಡ್ಡದು ಯಾವುದು ಇಲ್ಲ ಎನ್ನುವ ನಮ್ಮೆಲ್ಲರ ಸಿದ್ಧಾಂತಕ್ಕೇ ನಾವು ಬದ್ಧರಾಗಿದ್ದೆವು.. ಅದೇ ರೀತಿ ಜೆಮ್ ನಮ್ಮ ಕರೆಗೆ ಓಗೊಟ್ಟ.. ಅರ್ಧ ಘಂಟೆ ಬರೋಬ್ಬರಿ ಮಾತುಗಳು.. ಮುಂದಿನ ಪ್ಲಾನ್, ಅವನ ಮುಂದಿನ ಭಾರತದ ಭೇಟಿ.. ಹೀಗೆ ಎಲ್ಲ ವಿಷಯಗಳ ಮಾತು ಆಯ್ತು.. ಅರ್ಜೆಂಟ್ ಮೇಲ್ ಕಳಿಸಬೇಕು ಎಂದು ಹೇಳಿ.. ಜೆಮ್ ಶುಭ ಪ್ರವಾಸ ಹೇಳಿದ.. 

ಅಲ್ಲಿಂದ ಮತ್ತೆ ವೆಂಕಿ, ನಾನು, ಶಶಿಯ ಮಾತುಗಳು, ಕಿಚಾಯಿಸುವುದು ನೆಡೆಯಿತು.. ಸುಮಾರು ಹನ್ನೊಂದು ಘಂಟೆಗೆ ತಿರುಪತಿ ವಾಹನ ನಿಲ್ದಾಣಕ್ಕೆ ಬಂದೆವು.. ಬ್ರಹ್ಮೋತ್ಸವ ಕಳೆದ ವಾರ ಇದ್ದದ್ದರಿಂದ ಜನಜಾತ್ರೆಯೇ ಇತ್ತು.. ಹೋಟೆಲಿಗೆ ಹೋಗುವ ಸಾಹಸ ಮಾಡದೆ.. ಸೀದಾ ಬೆಟ್ಟ ಹತ್ತೋಕೆ ಶುರು ಮಾಡಿದೆವು.. 


ಯಥಾ ಪ್ರಕಾರ ವೆಂಕಿ ಹುಮ್ಮಸ್ಸು ಹೆಚ್ಚಿತ್ತು.. ಸ್ವಲ್ಪ ದೂರ ಮಾತ್ರ ನಾವು ಅವನ ಜೊತೆ ಇದ್ವಿ.. ಅವನು ಎಲ್ಲೂ ನಿಲ್ಲದೆ ಸರ ಸರ ೨೦೮೩ ಮೆಟ್ಟಿಲುಗಳನ್ನು ಏರಿ ಗಾಳಿಗೋಪುರದ ತಲುಪಿ ಕೂತಿದ್ದ.. ಅವನ ಹಿಂದೆ ಶಶಿ ನಾ ಮೆಲ್ಲನೆ ಬರುತ್ತಿದ್ದರಿಂದ ನನ್ನನ್ನು ನೋಡಿಕೊಳ್ಳುತ್ತಾ ಮೆಲ್ಲನೆ ಏರುತ್ತಿದ್ದ..ದಿನವೂ ವಾಕಿಂಗ್, ಜಾಗಿಂಗ್ ಮಾಡಿದ್ದರಿಂದ ಶಶಿ ನಿರಾಯಾಸವಾಗಿ ಹತ್ತಿದ ..  ಒಂದು ಹಂತದಲ್ಲಿ ನೀ ಹೋಗು ನಾ ನಿಧಾನಕ್ಕೆ ಬರುತ್ತೇನೇ ಎಂದು ಹೇಳಿ ಅವನನ್ನು ಕಳಿಸಿದೆ.. ನಾನು ಎಲ್ಲೂ ಕೂರದೆ.. ಆದರೆ ನಿಂತೇ ವಿಶ್ರಮಿಸಿಕೊಂಡು ಸುಮಾರು ೧೨.೩೦ ಹೊತ್ತಿಗೆ ಗಾಳಿ ಗೋಪುರ ತಲುಪಿದೆ.. 


ವೆಂಕಿ.. "ಶ್ರೀಕಿ ಸ್ವಲ್ಪ ಹೊತ್ತು ರೆಸ್ಟ್ ತಗೋ.. ಆಮೇಲೇ ಹೋಗೋಣ" 

"ಬೇಡ ಕಣೋ.. ಮೊದಲು ಬ್ಯಾಂಡ್ ಹಾಕಿಸಿಕೊಳ್ಳೋಣ ಆಮೇಲೆ ಸ್ವಲ್ಪ್ ಏನಾದರೂ ತಿಂದು, ಕುಡಿದು ಹೋಗೋಣ" ಅಂದೇ 

"ಬ್ಯಾಂಡ್ ಇಲ್ಲ ಶ್ರೀಕಿ.. ಮುಂದಿನ ನಾಲ್ಕು ಶನಿವಾರಗಳು ಬೆಟ್ಟ ಹತ್ತೋರಿಗೆ ಸ್ಪೆಷಲ್ ದರ್ಶನದ ಟಿಕೆಟ್ ಇಲ್ಲ.. ಸರ್ವದರ್ಶನಕ್ಕೆ ನಿಲ್ಲಬೇಕು.. " ೨೦ ಸೆಕೆಂಡ್ಸ್ ಮೂರು ಮಂದಿಯಲ್ಲೂ ಮೌನ ಮನೆಮಾಡಿತ್ತು.. 

"ಶ್ರೀಕಿ.. ಸೀದಾ ಬೆಟ್ಟ ಹತ್ತಿ ದರ್ಶನಕ್ಕೆ ನಿಂತು ಬಿಡೋಣ.. ಅದನ್ನೇ ನಾನು ಶಶಿ ಮಾತಾಡ್ತಾ ಇದ್ವಿ.. "

ನಮ್ಮ ಗುಂಪಲ್ಲಿ ಒಂದು ಅಲಿಖಿತ ನಿಯಮವಿದೆ.. ಒಬ್ಬರು ನಿರ್ಧಾರ ತಗೊಂಡ್ರು ಅಂದ್ರೆ ಅದನ್ನು ಪ್ರಶ್ನಿಸೋದು ಇಲ್ಲ.. 

ಬೆಳಿಗಿನ ಜಾವ ೩.೩೦ಕ್ಕೆ ದರ್ಶನಕ್ಕೆ ನಿಂತೆವು.. ದಾರಿಯುದ್ದಕ್ಕೂ ಮಾತುಗಳು, ಹಾಸ್ಯ ಇದ್ದೆ ಇದ್ದವು.. ಆದರೆ ಇದುವರೆಗೂ ನನ್ನ ತಿರುಪತಿ ಯಾತ್ರೆಯಲ್ಲಿ ಸಿಗದ ಅವಕಾಶ ಈ ಯಾತ್ರೆಯಲ್ಲಿ ಸಿಕ್ಕಿತು.. 

ಮೊಬೈಲ್ ಜೇಬಲ್ಲೇ ಇತ್ತು.. ಹಾಗಾಗಿ ಕೆಲವು ಚಿತ್ರಗಳನ್ನು ತೆಗೆಯುವ ಅವಕಾಶ ಸಿಕ್ಕಿತು.. ಕಾರಿನಲ್ಲಿ ಪಯಣ ಮಾಡಿದ್ದು.. ನಿದ್ದೆ ಇಲ್ಲದ ರಾತ್ರಿ.. ಬೆಟ್ಟ ಹತ್ತಿದ್ದ ಆಯಾಸ.. ಹೊಟ್ಟೆಗೆ ಏನಾದರೂ ತಿನ್ನ ಬೇಕೆಂದಾಗ ಸಿಕ್ಕ ಕೆಟ್ಟ ಇಡ್ಲಿ, ಕೆಟ್ಟ ಚಿತ್ರಾನ್ನ.. ಇದ್ಯಾವುದು ದೇವರ ದರ್ಶನಕ್ಕೆ ನಿಂತ ನಮ್ಮ ಗಮನಕ್ಕೆ ಬರಲೇ ಇಲ್ಲ.. ನಮ್ಮ ಕಣ್ಣ ಮುಂದೆ ನಿಂತಿದ್ದು ವೆಂಕಟೇಶ್ವರ ಆ ದಿವ್ಯ ಮೂರ್ತಿಯ ನೋಟವಷ್ಟೇ.. 

ಇಲೆಕ್ಟ್ರಾನಿಕ್ ಉಪಕರಣಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವ ಕೌಂಟರಿಗೆ ಬರುವ ತನಕ.. ಕಂಡದ್ದು, ಚೆನ್ನ ಅನ್ನಿಸಿದ್ದು, ಬೇಕೆನಿಸಿದ್ದು ಫೋಟೋಗಳನ್ನು ಮೊಬೈಲಿನಲ್ಲಿಯೇ ತೆಗೆದೇ... ಅಪರೂಪದ ಅವಕಾಶ.. ಕಾರಣ ಸಾಮಾನ್ಯ ಹಿಂದಿನ ಯಾತ್ರೆಗಳಲ್ಲಿ.. ಎಲ್ಲವನ್ನೂ ಕಾರಿನಲ್ಲಿಯೇ ಇಟ್ಟು ಸರತಿ ಸಾಲಿನಲ್ಲಿ ಬರಿಗೈಯಲ್ಲಿ ನಿಲ್ಲುವುದು ಅಭ್ಯಾಸವಾಗಿತ್ತು.. ಆದರೆ ಈ ಬಾರಿ ಬೆಟ್ಟ ಹತ್ತಿ ಸೀದಾ ದರ್ಶನಕ್ಕೆ ನಿಂತಿದ್ದರಿಂದ.. ಜೊತೆಯಲ್ಲಿ ಕಾರು ಬೆಟ್ಟದ ಕೆಳಗೆ ನಿಲ್ಲಿಸಿದ್ದರಿಂದ.. ಈ ಬಾರಿ ಮೊಬೈಲ್ ನಮ್ಮ ಕೈಯಲ್ಲಿ.


ಸುಮಾರು ಮಧ್ಯಾನ್ಹ ೧೨.೩೦ಕ್ಕೆ ದರ್ಶನವಾಯಿತು ..ಪ್ರಸನ್ನ ವದನ, ಪ್ರಫುಲ್ಲ ಮನಸ್ಸು.. ದಣಿವಾರಿದ್ದ ದೇಹ, ಕಣ್ಣ ಮುಂದೆ ಕಂಡಿದ್ದ ವೆಂಕಟೇಶ್ವರ ಸ್ವಾಮಿಯ ಆ ದಿವ್ಯ ದರ್ಶನ.. ಈ ಯಾತ್ರೆಗೆ ಒಂದು ವಿಶಿಷ್ಟ ಅನುಭವ ಕೊಟ್ಟಿತ್ತು.. 

ದರ್ಶನ ಆಯಿತು..ಇಷ್ಟಾರ್ಥ ಪ್ರಾರ್ಥನೆ ಸಲ್ಲಿಸಿ, ಲಡ್ಡು ಪ್ರಸಾದ ಪಡೆದು.. ಊಟಕ್ಕೆ ಅಲ್ಲಿಯೇ ಹತ್ತಿರದಲ್ಲಿದ್ದ ಹೋಟೆಲಿಗೆ ನುಗ್ಗಿದೆವು.. ಹಿಂದಿನ ಸಂಜೆಯಿಂದ ಸರಿಯಾಗಿ ಹೊಟ್ಟೆಗೆ ಬಿದ್ದಿರಲಿಲ್ಲ.. ದರ್ಶನಕ್ಕೆ ನಿಂತಿದ್ದಾಗ ಸಿಕ್ಕಿದ್ದ ಉಪ್ಪಿಟ್ಟು ಸರತಿ ಸಾಲಿನಲ್ಲಿ ಹೋಗಿ ದರ್ಶನ ಮಾಡುವ ಹೊತ್ತಿಗೆ ಹೊಟ್ಟೆಯಲ್ಲಿ ಭಸ್ಮವಾಗಿ ಹೋಗಿತ್ತು.. ಸರಿಯಾಗಿ ಬಾರಿಸಿದೆವು.. ಬಸ್ಸಿನಲ್ಲಿ ಬಂದು ಕುಳಿತು ಟಿಕೆಟ್ ಪಡೆದದ್ದಷ್ಟೇ ಗೊತ್ತು.. ಮುಂದಿನ ೪೫ ನಿಮಿಷ ಭರ್ಜರಿ ನಿದ್ದೆ.. ವೆಂಕಿ ಸಮಯಪ್ರಜ್ಞೆ ಇರುವ ಗೆಳೆಯ.. ಬೆಟ್ಟದ ಬುಡಕ್ಕೆ ಬರುವುದಕ್ಕೂ ಅವನು ಕಣ್ಣು ಬಿಡೋದಕ್ಕೂ ಸರಿ ಹೋಗಿತ್ತು.. ಲೋ ಶ್ರೀಕಿ, ಶಶಿ.. ಬನ್ರೋ ಇಳಿಯೋಣ ಅಂತ ಎಬ್ಬಿಸಿದಾಗಲೇ ಎಚ್ಚರ.. 

ಹೋಟೆಲಿಗೆ ಲಗುಬಗೆಯಿಂದ ಬಂದು.. ಟಕ ಟಕ ಸ್ನಾನ ಮುಗಿಸಿ.. ಮತ್ತೆ ಹೊರಟೆವು.. ಎಲ್ಲಿಗೆ ಅಂದ್ರ.. ಕಾಳಹಸ್ತಿಗೆ.. ದಣಿವರಿಯದ ಪ್ರವಾಸವಿದು..



ಆಗಸ ನಮಗಾಗಿ ಶುಭ ಕೋರುತ್ತಿದೆ ಅನ್ನಿಸಿತು.. ಶಶಿ ಸಾಮಾನ್ಯ ಸ್ಥಿತಪ್ರಜ್ಞ.. ಶ್ರೀಕಿ ನೋಡೋ ಅಲ್ಲಿ ಆಗಸ ಎಷ್ಟು ಚೆನ್ನಾಗಿದೆ.. ಅಂದ.. ಕ್ಯಾಮೆರಾ ಕಾರಿನ ಡಿಕ್ಕಿಯಲ್ಲಿತ್ತು.. ಶಶಿ ನಿಲ್ಲಿಸೋ ಕ್ಯಾಮೆರಾ ತಗೋತೀನಿ ಅಂದೇ.. ವೆಂಕಿ ನನ್ನ ತಲೆಗೆ ಬಿಟ್ಟ.. ಸರಿ ಮೊಬೈಲಿನಲ್ಲಿ ಅಡ್ಜಸ್ಟ್ ಮಾಡಿಕೊಂಡು ಕೆಲವು ಫೋಟೋ ತೆಗೆದೇ.. 




ಕಾಳಹಸ್ತಿ ತಲುಪಿದಾಗ.. ಮನಸ್ಸಿಗೆ ಸಂತೋಷ.. ಹರಿಯ ತಾಣದಿಂದ ಹರನ ತಾಣಕ್ಕೆ.. ಅದ್ಭುತ ದೇವಾಲಯವಿದು.. ದರ್ಶನ ಮಾಡಿಕೊಂಡು.. ಅಲ್ಲಿಯೇ ಸ್ವಲ್ಪ ಹೊತ್ತು ಕೂತು.. ಹೊರಗೆ ಬಂದೆವು.. ಕಾಳಹಸ್ತಿ ಪಂಚಭೂತಗಳಲ್ಲಿ  ಒಂದು ವಾಯುವನ್ನು ಪ್ರತಿನಿಧಿಸುವ ದೇವಾಲಯವಿದು.  ಸುಮಾರು ಐದನೇ ಶತಮಾನದಲ್ಲಿ ಒಳಭಾಗದ ದೇವಸ್ಥಾನ ನಿರ್ಮಾಣಗೊಂಡಿತ್ತು ಏನು ಐತಿಹ್ಯ ಹೇಳುತ್ತದೆ.. ಮುಂದೆ ಅನೇಕ ರಾಜಮನೆತನಗಳು ಈ ದೇವಾಲಯವನ್ನು ಬೆಳೆಸಿದರು ಎನ್ನಲಾಗುತ್ತದೆ.. ಗ್ರಹಣಕಾಲದಲ್ಲಿ ಇಡೀ ಭಾರತದಲ್ಲಿ ಇದೊಂದೇ ದೇವಸ್ಥಾನ ತೆರೆದಿರುವುದು ಎಂದು ಹೇಳುತ್ತಾರೆ . ಕಾರಣ ರಾಹು ಕೇತುಗಳ ಕ್ಷೇತ್ರ ಎನಿಸಿಕೊಂಡಿದೆ.. ಸುಂದರ ಬೃಹದಾಕಾರದ ದೇವಾಲಯ.. ಮನಸ್ಸಿಗೆ ಖುಷಿ ಕೊಡುತ್ತದೆ.. ಸ್ವರ್ಣಮುಖಿ ನದಿ ತೀರದಲ್ಲಿರುವ ಈ ದೇವಾಲಯ ಕಾಲ ಸರ್ಪದೋಷ ಹೊಂದಿರುವವರಿಗೆ ಪೂಜೆ ಮಾಡಿಸಿದರೆ ಒಳ್ಳೆಯದು ಎನ್ನುವ ನಂಬಿಕೆ ಇರುವುದರಿಂದ.. ಸಾಮಾನ್ಯ ಎಲ್ಲಕಾಲದಲ್ಲಿಯೂ ಜನಜಂಗುಳಿ ಇದ್ದೆ ಇರುತ್ತದೆ.. 



ಬರುವ ಹಾದಿಯಲ್ಲಿ ಒಂದು ಹೊಟೇಲಿನಲ್ಲಿ ಹೊಟ್ಟೆ ತುಂಬಾ ತಿಂದು ಕೋಣೆಗೆ ಬಂದು ಮಲಗಿದಾಗ ನಿದ್ರಾದೇವಿ ಎರಡು ಕೈಗಳಿಂದ ತಬ್ಬಿಕೊಂಡಳು. 


ಬೆಳಿಗ್ಗೆ ಎದ್ದು ಸುಮಾರು ಎಂಟು ಘಂಟೆ ಹೊತ್ತಿಗೆ ಸಿದ್ಧರಾಗಿ.. ನಮ್ಮ  ಇಷ್ಟದ ಪೈ ವೈಸ್ರಾಯ್ ಹೋಟೆಲಿನಲ್ಲಿ ಗಡದ್ದಾಗಿ ತಿಂಡಿ ತಿಂದು ಬೆಂಗಳೂರಿನ ಕಡೆಗೆ ಹೊರಟೆವು.. ರಸ್ತೆ ಅಗಲೀಕರಣದ ಪರಿಣಾಮ ರಸ್ತೆಗಳು ಸರಾಗವಾಗಿರಲಿಲ್ಲ.. ಅಲ್ಲಲ್ಲಿ ತಿರುವುಡ್ ತೆಗೆದುಕೊಳ್ಳಬೇಕಿತ್ತು.. ಕೆಲವೊಂದು ಕಡೆ ಕಾಡಿನಲ್ಲಿ ಹೋಗುತ್ತಿದ್ದೇವೆ ಅನಿಸುತಿತ್ತು.. 

ಬೈಯಪ್ಪನಹಳ್ಳಿಯಲ್ಲಿ ಬಂದು ಇಳಿದಾಗ ಎರಡು ದಿನದ ಆಯಾಸ ಗಾಳಿಯಲ್ಲಿ ಸೇರಿಹೋಗಿತ್ತು.. ಶಶಿಗೆ ಬೈ ಹೇಳಿ.. ಮೆಟ್ರೋ ಹತ್ತಿ ನಾನು ವೆಂಕಿ ಮನೆ ಸೇರಿಕೊಂಡಾಗ ಸಂಜೆ ಐದಾಗಿತ್ತು.. ಅದ್ಭುತ ಕ್ಷಣಗಳನ್ನು ಕಳೆದಿದ್ದೆವು ಎನ್ನುವ ಆ ಸಾರ್ಥಕ ಭಾವ.. ಮನೆದೇವರ ದರ್ಶನ , ಕಾಳಹಸ್ತೀಶ್ವರನ ದರ್ಶನ.. ಜೊತೆಯಲ್ಲಿ ಬೆಂಗಳೂರಿಂದ ಹೊರಟ ಮೇಲೆ. .ಶಶಿಯವರ ಮಾವ.. ಚಿತ್ತೂರು ರಸ್ತೆ ರಿಪೇರಿ ಮತ್ತು ಅಗಲೀಕರಣ ಕಾರ್ಯ ನೆಡೆಯುತ್ತಿದ್ದರಿಂದ.. ಅಲ್ಲಿ ಹೋಗದೆ ಮದನ್ ಪಲ್ಲಿಯ ರಸ್ತೆಯಲ್ಲಿ ಹೋಗಿ ಎಂದು ಸೂಚನೆ ಕೊಟ್ಟಿದ್ದು ಫಲಕಾರಿಯಾಗಿತ್ತು.. 

ತಿರುಪತಿಯಲ್ಲಿ.. ನಮ್ಮ ಪ್ಲಾನ್ ಏನೂ ಆಗದೆ.. ವೆಂಕಟೇಶ್ವರನ ಮನದಲ್ಲಿ ಏನಿರುತ್ತದೆಯೋ ಹಾಗೆ ನೆಡೆಯೋದು ಅನ್ನುವ ಸತ್ಯ ಮತ್ತೊಮ್ಮೆ ಅರಿವಿಗೆ ಬಂದ ಪ್ರವಾಸವಿದು.. ಯಾವುದೇ ಏಳು ಬೀಳು ಇಲ್ಲದೆ ಸಲೀಸಾಗಿ ಸಾಗಿದ ಈ ಪ್ರಯಾಣಕ್ಕೆ ತಿರುಪತಿ ತಿಮ್ಮಪ್ಪನ ಅಭಯ ಹಸ್ತವಿದ್ದದ್ದು ವಿಶೇಷ.. 

ತಿರುಪತಿ ಗಿರಿವಾಸ ಶ್ರೀ ವೆಂಕಟೇಶ. .ನೀ ಒಲಿದ ಮನೆ ಮನೆಯೂ ಲಕ್ಷ್ಮಿ ನಿವಾಸ!!!

Monday, December 3, 2018

ಆ ಮಂಜುನಾಥನ ಕೃಪಾಕಟಾಕ್ಷವು ಎಂದೆಂದೂ ನಿಮಗಿರಲಿ --- ಧರ್ಮಸ್ಥಳ.. ಸೌತಡ್ಕ.. ಸುಬ್ರಮಣ್ಯ

ಅನೇಕ  ಹಾಳೆಗಳು ಸೇರಿ ಒಂದು ಪುಸ್ತಕವಾಗುತ್ತದೆ..
ಅನೇಕ ಕವನಗಳು ಕಥೆಗಳು ಸೇರಿ ಸಂಕಲನವಾಗುತ್ತದೆ
ಅನೇಕ ವೃಕ್ಷಗಳು, ಸಸ್ಯಗಳು ಸೇರಿ ಉದ್ಯಾನವನವಾಗುತ್ತದೆ
ಅನೇಕ ಕಂಬಗಳು ಸೇರಿ ದೇವಾಲಯವಾಗುತ್ತದೆ

ನನ್ನ ಜೀವನದಲ್ಲಿ ಹೀಗೆ ಪರಿಚಯವಾದ ಎರಡು ಸ್ನೇಹಮಯ ಗುಂಪು ಒಂದು ೩ಕೆ ಮತ್ತೊಂದು ಸ್ನೇಹಲೋಕ.. ಸಮಾಜದ ಹಲವಾರು ದಿಕ್ಕುಗಳಿಂದ ಸೇರಿರುವ ಸಹೃದಯರ ಗುಂಪು ಇದು ..ಕೆಲವೇ ಕೆಲವು ಸ್ನೇಹಿತರಿಂದ ಸೇರಿಕೊಂಡು ಆದ ಈ ಗುಂಪು ಇಂದು ಸಾವಿರಾರು ಜನರನ್ನು ಒಳಗೊಂಡಿದೆ.. ಅನೇಕ ಉತ್ತಮ ಕೆಲಸಗಳನ್ನು ಮಾಡುತ್ತಿದೆ..

ಹೀಗೆ ಒಂದು ಪ್ರವಾಸ ಮಲ್ಲೇಶ ಅಲಿಯಾಸ್ ಗುಂಡನ ಮದುವೆ ಧರ್ಮಸ್ಥಳದಲ್ಲಿ ಎಂದು ಆಹ್ವಾನ ಬಂದಾಗ ನಿರಾಕರಿಸಲು ಆಗಲಿಲ್ಲ..ಕಾರಿನಲ್ಲಿ ಹೋಗೋದು ಅಂತ  ನಿರ್ಧಾರವಾಗಿತ್ತು  ಆದರೆ ಕಾರಣಾಂತರಗಳಿಂದ ಒಬ್ಬನೇ ಹೋಗಬೇಕಾಗಿ ಬಂದದ್ದರಿಂದ ಈ ಸ್ನೇಹಲೋಕ ಆಯೋಜಿಸಿದ್ದ ಕಾರ್ಯಕ್ರಮದೊಳಗೆ ನಾ ನುಗ್ಗಿಬಿಟ್ಟೆ..

ಮುಂಬೈ ಲೋಕಲ್ ಯಾರಿಗೆ ಗೊತ್ತಿಲ್ಲ.. ಆ ಟ್ರೈನನ್ನು ಹತ್ತಲು ಇಳಿಯಲು ಪ್ರಯಾಸ ಪಡಬೇಕಿಲ್ಲ.. ಸುಮ್ಮನೆ ಬಾಗಿಲ ಬಳಿ ನಿಂತರೆ ತಳ್ಳುತ್ತ ತಳ್ಳುತ್ತಾ ಜನರೇ ಹತ್ತಿಸುತ್ತಾರೆ/ಇಳಿಸುತ್ತಾರೆ. ಈ ಸ್ನೇಹಲೋಕವೂ ಹಾಗೆ.. ಒಂದು ಸಲ ಆ ಸೆಳೆತಕ್ಕೆ ಬಂದರೆ.. ಹೊರಗೆ ಹೋಗಲು ಸಾಧ್ಯವೇ ಇಲ್ಲ..

ನಾಗರಭಾವಿ ವೃತ್ತದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆವು.. ಬಸ್ಸು ಬಂತು.. ಜೊತೆಯಲ್ಲಿ ನಗೆ ಹೊನಲು ಎಂಬ ನದಿಯನ್ನು ಕಟ್ಟಿದ್ದ ಅಣೆಕಟ್ಟಿನ ಬಾಗಿಲಿಗೆ ಬಂದು ನಿಂತಿದ್ದೆವು.. ಇನ್ನೊಂದೆರಡು ಸ್ಟಾಪುಗಳು ಬರೋರೆಲ್ಲಾ ಹತ್ತಿಕೊಂಡರು... ಬಸ್ಸು ತುಂಬಿಕೊಂಡು ನಲಿಯುತಿತ್ತು..

"ನೋಡ್ರಪ್ಪಾ.. ಇವತ್ತು ಬಸ್ಸಿನಲ್ಲಿ ಯಾರೂ ಮಲಗುವ ಹಾಗಿಲ್ಲ.. " ಒಂದು ಫರ್ಮಾನು ಹೊರಡಿಸಿಯೇಬಿಟ್ಟರು ಪಿಪಿ ಎಂದೇ ಹೆಸರಾದ ಸಂದೀಪ್.. ಅದಕ್ಕೆ ಸಾತ್ ನೀಡಿದ್ದು ಪಾರ್ಟ್ನರ್ ಎಂದು ಗುರುತಿಸಿಕೊಳ್ಳುತ್ತಿದ್ದ ಕಿರಣ್.. ಅದಕ್ಕೆ ಕೈಜೋಡಿಸಿದರು ಆಶಿ ಮಾಮ.. ರಮ್ಮಿ ಡಿಯರ್.. ಭುವನ್.. ಚಂದ್ರು, ನಾಗರಾಜ್ಇ.... ಇವರೆಲ್ಲ ಸೇರಿ ನಗೆ ಹೊನಲು ನದಿಗೆ ಕಟ್ಟಿದ್ದ ಅಣೆಕಟ್ಟಿನ ಎಲ್ಲಾ ಬಾಗಿಲನ್ನು ತೆರೆದೇ ಬಿಟ್ಟರು..

ಬರೋಬ್ಬರಿ ಮೂರುಘಂಟೆಗಳು ಹೇಗೆ ಕಳೆದವು ಗೊತ್ತಿಲ್ಲ.. ಬಸ್ಸಿನ ನಾವಿಕ ಹದವಾಗಿ ಓಡಿಸುತ್ತಿದ್ದ.. ಬೊಂಬಾಟ್ ರಸ್ತೆ.. ಹಾಸನ ದಾಟಿ ಸಕಲೇಶಪುರದ ಕಡೆ ಧಾವಿಸುತ್ತಿದ್ದ ಬಸ್ಸು.. ಮೆಲ್ಲನೆ ಒಬ್ಬೊಬ್ಬರೇ ಕಣ್ಣುಜ್ಜಿಕೊಳ್ಳುತ್ತಾ ಹಾಗೆ ನಿದ್ರಾದೇವಿಯ ಕರೆಗೆ ಓಗೊಟ್ಟರು..

ಯಾರ್ರೀ ಧರ್ಮಸ್ಥಳ ಎಂಬ ಧ್ವನಿ ಕೇಳಿದಾಗ.. ತಮಾಷೆ ಮಾಡುತ್ತಿದ್ದಾರೆ ಎಂದು ಅರ್ಧ ನಿದ್ರೆಯಲ್ಲಿದ್ದ ನನಗೆ ಅನ್ನಿಸಿತು.. ಸಮಯ ಬೆಳಗಿನ ಜಾವ ಮೂರು ಮುಕ್ಕಾಲು ಘಂಟೆ..ಬೆಂಗಳೂರಿಂದ ೫.೪೫ ಘಂಟೆಗಳಲ್ಲಿ ಧರ್ಮಸ್ಥಳ ಮುಟ್ಟಿದ್ದೆವು.. ಡ್ರೈವರಿಗೆ ಒಂದು ಸಲಾಂ..

ಸ್ವಲ್ಪ ಮಂದಿ ರೂಮಿಗೆ ಹೋದರು.. ಇನೊಂದಷ್ಟು ಮಂದಿ ನದಿಗೆ ಸ್ನಾನಕ್ಕೆ ಹೋದರು.. ಬಹುದಿನಗಳಾಗಿತ್ತು ನದಿಯಲ್ಲಿ ಸ್ನಾನ ಮಾಡಿ ಹಾಗಾಗಿ ನಾ ಆ ಗುಂಪಿಗೆ ನುಗ್ಗಿದೆ.. ಚಳಿ ಎಂದುಕೊಂಡಿದ್ದೆ ಆದರೆ ಮಂಜುನಾಥನ ಕೃಪೆ.. ಚಳಿಯಿರಲಿಲ್ಲ.. ನದಿ ನೀರು ಬೆಚ್ಚಗಿತ್ತು.. ಅಚ್ಚುಕಟ್ಟಾಗಿ ಸ್ನಾನವಾಯಿತು..

ಮದುವೆಗೆ ಹೋಗಬೇಕಾದ್ದರಿಂದ ವಿಶೇಷ ದರ್ಶನಕ್ಕೆ ನುಗ್ಗಿ.. ಮಂಜುನಾಥನ ಆಶೀರ್ವಾದ ಪಡೆದು.. ಹೊಟ್ಟೆಗೆ ಒಂದಷ್ಟು ಆಧಾರ ಮಾಡಿಕೊಂಡು.. ಮದುವೆ ಮಂಟಪಕ್ಕೆ ಬಂದೆವು.. ತಾಳಿಧಾರಣೆ ಮುಗಿದಿತ್ತು.. ಹಿರಿಯರಿಂದ ಆಶೀರ್ವಾದದ ಕಾರ್ಯಕ್ರಮ ನೆಡೆದಿತ್ತು.. ಅಷ್ಟರಲ್ಲಿ ನಮ್ಮ ಉಳಿದ ಸ್ನೇಹಿತರಲ್ಲಿ ಕೆಲವರು ದರ್ಶನ ಮುಗಿಸಿ ಬಂದರು.. ಇನ್ನೂ ಕೆಲವರು ಮದುವೆ ಮುಗಿಸಿ ದರ್ಶನಕ್ಕೆ ಹೋದರು.. ಬರೋಬ್ಬರಿ ಹತ್ತು ಘಂಟೆಯ ಹೊತ್ತಿಗೆ ಎಲ್ಲರೂ ದರ್ಶನ ಮುಗಿಸಿ, ತಿಂಡಿ ಮುಗಿಸಿ ಬಸ್ಸಿಗೆ ಬಂದೆವು..

ಬಸ್ಸಿನಲ್ಲಿ ಕೂತು.. ಮುಂದಿನ ನೆಡೆ ಸೌತಡ್ಕ ಗಣಪನ ದರ್ಶನಕ್ಕೆ ಎಂದಾಗ.. ಆಯಾಸದಿಂದ ಕಣ್ಣಾಲಿಗಳು ಮುಚ್ಚಿಕೊಂಡವು.. ಹಾಗೆ ಮಲ್ಲೇಶನ ಮದುವೆಯನ್ನು ಮತ್ತೊಮ್ಮೆ ಕಣ್ಣ ಮುಂದೆ ತಂದಿತು .. .

ಹುಡುಗಾಟದ, ತಮಾಷೆಯ ಮಲ್ಲೇಶ.. ಗಂಭೀರವಾಗಿ ವರನ ಧಿರಿಸಿನಲ್ಲಿ ಕೂತಿದ್ದು.. ಬಂದವರಿಗೆ ನಗೆ ಬೀರುತ್ತಾ ತನ್ನ ಮಡದಿಗೆ ಬಂದವರ ಪರಿಚಯ ಮಾಡಿಸಿಕೊಡುತ್ತಾ ಕೂತಿದ್ದರು.. ನಮ್ಮ ಸ್ನೇಹ ಕುಟುಂಬ ಒಬ್ಬೊಬ್ಬರಾಗಿ ಶುಭ ಹಾರೈಸಿ... ಹೊರಗೆ ಬಂದೆವು.. ಗ್ರೂಪ್ ಫೋಟೋಗೆ ಎಲ್ಲರನ್ನು ಸೇರಿಸಿ ಒಂದಷ್ಟು ಫೋಟೋಗಳನ್ನು ಜಮಾಯಿಸಿದ್ದು ಆಯಿತು.. ಆ ರಸ್ತೆಯಲ್ಲಿದ್ದವರೆಲ್ಲ ಅಚ್ಚರಿಗಣ್ಣಿಂದ ನಮ್ಮನ್ನೆಲ್ಲ ನೋಡುತ್ತಿದ್ದರು. ನಮ್ಮ ಸ್ನೇಹವಲಯದ ಸೆಳೆತ ಅರಿವಾಗತೊಡಗಿತ್ತು..

ಕಣ್ಣುಬಿಟ್ಟೆ.. ಬರಿ ಘಂಟಾನಾದ.. ಟಣ್ ಟಣ್ ಟಣ್.. ವಿಶಾಲವಾದ ಅಂಗಳ.. ಅಲ್ಲೊಂದು ಕಮಾನು.. ಅದಕ್ಕೆ ತೂಗು ಹಾಕಿದ್ದ ದೊಡ್ಡ ದೊಡ್ಡ ಘಂಟೆಗಳು.. ಪುಟ್ಟ ಘಂಟೆಗಳ ತೋರಣಗಳೇ ಇದ್ದವು.. ಅಭಿಷೇಕವಾಗುತ್ತಿತ್ತು.. ಭಕ್ತಿಯ ಒಂದು ಪದರವೇ ಅಲ್ಲಿತ್ತು.. ಈ ದೇವಸ್ಥಾನದ ಬಗ್ಗೆ ತುಂಬಾ ಕೇಳಿದ್ದೆ.. ನೋಡಬೇಕೆನ್ನುವ ಆಸೆ ಈ ದಿನ ನೆರವೇರಿತ್ತು.. ಗೊಂದಲದ ಗೂಡಾಗಿದ್ದ ಮನಸ್ಸಿಗೆ ಏನೋ ನೆಮ್ಮದಿ..

ಅಪ್ಪ ಮಂಜುನಾಥನ ದರ್ಶನದಿಂದ ಮನಸ್ಸು ಹಗುರಾಗಿತ್ತು.. ಈಗ ಮಗ ಗಣಪನ ದರ್ಶನ.. ಯಾರೊಡನೆಯೂ ಮಾತಾಡದೆ ಸುಮ್ಮನೆ ಒಂದು ಕಟ್ಟೆಯ ಮೇಲೆ ಕೂತಿದ್ದೆ.. ಧ್ಯಾನ ಮಾಡಿದೆ.. ಮನಸ್ಸು ಹತ್ತಿಯ ಹಾಗೆ ಹಗುರಾಗುತ್ತಿತ್ತು.. ಏನೋ ಒಂದು ರೀತಿಯ ನೆಮ್ಮದಿಯ ಅಲೆಗಳು ಮನಸ್ಸಿನ ಕಡಲಿಗೆ ಬಂದು ಬಡಿಯುತ್ತಿದ್ದವು..

ಅಲ್ಲಿಂದ ಹೊರಟಿದ್ದು ಮಂಜುನಾಥನ ಇನ್ನೊಬ್ಬ ಸುತ ಸುಬ್ರಮಣ್ಯನ ಆವಾಸ ಸ್ಥಾನಕ್ಕೆ..

ಕುಕ್ಕೆ ಸುಬ್ರಮಣ್ಯ ತಾಣ ನನಗೆ ಹೊಸದೇನಲ್ಲ ಕಳೆದ ಎಂಟು ವರ್ಷಗಳಲ್ಲಿ ಎಂಟು ಬಾರಿ ಕುಮಾರಪರ್ವತ ಚಾರಣಕ್ಕೆ ಹೋಗಿದ್ದಾಗೆಲ್ಲ ಸುಬ್ರಮಣ್ಯನ ದರ್ಶನ ನೆಡೆದೆ ಇತ್ತು.. ಆದರೂ ಪ್ರತಿಬಾರಿಯೂ ಭಿನ್ನ ಅನುಭವ ಕೊಡುವ ತಾಣವಿದು.. ಬೇಗ ಹೋಗಿ ಬೇಗ ಹೋಗಿ ದರ್ಶನ ಕ್ಲೋಸ್ ಆಗುತ್ತಿದೆ ಎಂದು ದೇವಸ್ಥಾನದ ಆವರಣದ ಸಿಬ್ಬಂಧಿ ಹೇಳುತ್ತಿದ್ದರು.. ಓಡಿದೆವು.. ಚಕ ಚಕ ದರ್ಶನವಾಯಿತು.. ಮನಸ್ಸು ಇನ್ನಷ್ಟು ಹಗುರಾಯಿತು.. ಅದರ ಫಲ.. ಬಸ್ಸು ಬೆಂಗಳೂರು ಹಾದಿ ಹಿಡಿದಾಗ ಅಮೋಘ ಎರಡು ಘಂಟೆಗೂ ಮಿಕ್ಕಿ ಭರ್ಜರಿ ನಿದ್ದೆ ಮಾಡಿದ್ದೆ.. ಕಾಫಿ ಬ್ರೇಕಿಗೆ ನಿಲ್ಲಿಸಿದಾಗೂ ಎಚ್ಚರವಿಲ್ಲ..  ಎಚ್ಚರವಿಲ್ಲದೆ ಮಲಗಿದ್ದ
ನನ್ನ ಎಬ್ಬಿಸಲು ಆಗದೆ ಸೋತಿದ್ದರು ನನ್ನ ಆತ್ಮೀಯ ಗೆಳೆಯರು..

ಗಂಗೂಲಿ ಮತ್ತು ದ್ರಾವಿಡ್ ಬ್ಯಾಟಿಂಗ್ ನೆಡೆಯುತ್ತಿತ್ತು.. ತುಂಬಾ ಮಹತ್ವದ ಪಂದ್ಯವಾಗಿತ್ತು.. ಕಾಮೆಂಟರಿ ಟೋನಿ ಗ್ರೆಗ್.. ಬೊಂಬಾಟ್ ಧ್ವನಿ.. ಈ "If India to win one of these two batsman need to cut loose.. " ದಾದಾ ಭರ್ಜರಿ ಬ್ಯಾಟಿಂಗ್ ಶುರುಮಾಡಿದರು.. ಬೌಂಡರಿ, ಸಿಕ್ಸುಗಳ ಮಳೆ ಸುರಿಯುತ್ತಿದ್ದವು.. ದ್ರಾವಿಡ್ ಕೂಡ ಶುರುಮಾಡಿದ್ದರು ಪರಿಣಾಮ ಗೆದ್ದದ್ದು ಭಾರತ..

ಇದೇನಪ್ಪ ಶ್ರೀ ಗೆ ಏನಾಯಿತು ಅಂದ್ರ... ಹೋಗುವಾಗ ಮಾತು ಮಾತು ಹಾಸ್ಯ ತುಂಬಿದ್ದ ಬಸ್ಸು.. ಬೆಂಗಳೂರು ಹಾದಿ ಹಿಡಿದಾಗ ಡಿಸ್ಕೋ ದೀಪಗಳು ಬಸ್ಸನ್ನು ಬೆಳಗಿದವು.. ಹಾಗೆ ಆ ದೀಪದ ಕುಣಿತಕ್ಕೆ ತಕ್ಕ ಹಾಗೆ ಚಿನ್ಮಯ್ ಮತ್ತು ನಾಗರಾಜ್ ತರಹಾವರಿ ಹಾಡುಗಳನ್ನು ಹಾಕಿದರು .. ಅಲ್ಲಿಯ ತನಕ ತಣ್ಣಗೆ ಕೂತು ಮಾತಾಡುತ್ತಿದ್ದ ರಮೇಶ್, ವಸಂತ್ ಕುಣಿಯಲು ಹೆಜ್ಜೆ ಹಾಕಿದರು.. ಅಲ್ಲಿಂದ ಶುರು.. ಎಲ್ಲರ ಪಾದಗಳು ಕುಣಿಯಲಾರಂಭಿಸಿತು.. ನನಗೆ ಕುಣಿಯಲು ಬರೋಲ್ಲ, ನಾಚಿಕೆ ಎಂದವರನ್ನು ಬಿಡದೆ ಎಳೆದು ತಂದು ಆ ಹಾಡಿನ ತಾಳಕ್ಕೆ ಒಂದಷ್ಟು ಹೆಜ್ಜೆಗಳು ಕುಣಿಯುವ ಹಾಗೆ ಮಾಡಿದರು .. ಇದಕ್ಕೆ ಹೇಳಿದ್ದು cut loose ಅಂತ.. ಸಂಕೋಚ ಬಿಟ್ಟು ಹಾಡಿನ ಲಯಕ್ಕೆ ಹೆಜ್ಜೆ ಹಾಕಿದ ಎಲ್ಲರಿಗೂ ಸಿಕ್ಕಿದ್ದು ಚಪ್ಪಾಳೆಯ ಸ್ವಾಗತ ಮತ್ತು ಪ್ರೋತ್ಸಾಹ..

ಶ್ರೀ.. ಮನಸ್ಸು ಹಗುರಾಗಿದೆ.. ಸ್ವಲ್ಪ ಹೊತ್ತು ವಿಶ್ರಾಂತಿ ಕೊಡು ಎಂದು ಮನಸ್ಸು ಹೇಳಿದಾಗ... ಅದಕ್ಕೆ ಶರಣಾಗಿ ಕಣ್ಣು ಮುಚ್ಚಿದೆ.. ಕಣ್ಣು ಬಿಟ್ಟಾಗ ಗೊರಗುಂಟೆಪಾಳ್ಯ... ಸ್ನೇಹಿತರಿಗೆ ವಂದನೆ ಹೇಳಿ ಮನೆಗೆ ತಲುಪಿದಾಗ.. ಕ್ಷೀರಸಾಗರದಿ ತೇಲುತ್ತ ಸಾಗುವ ಹಂಸದ ಹಾಗಾಗಿತ್ತು.. ಮನಸ್ಸು..

ಇಪ್ಪತ್ತನಾಲ್ಕು ಘಂಟೆಗಳು.. ಅದರಲ್ಲಿ ಸುಮಾರು ಹನ್ನೆರಡು ಘಂಟೆಗಳು ಬಸ್ಸಿನಲ್ಲಿಯೇ ಇದ್ದೆವು.. ಉಳಿದ ಸಮಯ ದೇವಸ್ಥಾನಗಳಲ್ಲಿ ಇನ್ನೇನು ಬೇಕು ಖುಷಿ ಪಡಲು.. ಸ್ನೇಹಿತನ ಮದುವೆ.. ಗೆಳೆಯರ ಜೊತೆಯಲ್ಲಿ ಪ್ರವಾಸ.. ಇದನ್ನೆಲ್ಲಾ ಅಚ್ಚುಕಟ್ಟಾಗಿ ಆಯೋಜಿಸಿದ್ದ ಸ್ನೇಹಲೋಕದ ಹೂವಿನ ಮನಸ್ಸಿನ ಗೆಳೆಯರಿಗೆ ಈ ಲೇಖನ ಅರ್ಪಿತಾ... ಇಡೀ ದಿನದ ಕೆಲವು ಚಿತ್ರಗಳು ನಿಮಗಾಗಿ ತೇಲುತ್ತಿವೆ..

ಮಲ್ಲೇಶ ಮತ್ತು ಅನುಪಮಾ ವೈವಾಹಿಕ  ಆನಂದದಾಯಕವಾಗಿರಲಿ. .. ಶುಭವಾಗಲಿ.. !!!















Sunday, June 24, 2018

ಹೊರನಾಡಿನ ಶೃಂಗಗಿರಿಯಲ್ಲಿ ಕೋರವಂಗಲದ ಮಣಿಗಳು

 ಭಾವದ ಹುತ್ತ  ಬೆಳೆದಾಗ ಅಲ್ಲಿ ನೆನಪುಗಳ ಗಣಿಯನ್ನು ಸದಾ ಒಂದು ಉರಗ ಕಾಯುತ್ತಲೇ ಇರುತ್ತದೆ..

ಫೇಮ್ ಫೇಮ್.. ಮನೆಯ ಹತ್ತಿರ ಬಸ್ಸು ಬಂದು ನಿಂತಾಗ.. ಅಣ್ಣಾವ್ರ ಕಸ್ತೂರಿ ನಿವಾಸದ "ನೀ ಬಂದು ನಿಂತಾಗ ನಿಂತು ನೀ ನಕ್ಕಾಗ.. ನಕ್ಕು ನೀ ಸೆಳೆದಾಗ ಸೋತೆ ನಾನಾಗ" ಹಾಡು ನೆನಪಿಗೆ ಬಂತು..

ಬಸ್ಸು ಬಂದಿತ್ತು.. ಬಂದು ನಕ್ಕಿತ್ತು.. ನಕ್ಕು ನಮ್ಮನ್ನು ಸೆಳೆದಿತ್ತು.. ಸೊತ್ತಿದ್ದು ಮಾತ್ರ ನಾವಲ್ಲ.. ಯಾರೂ ಅಂದಿರಾ.. ಕೊನೆಯಲ್ಲಿ ಸಿಗುತ್ತೆ ಉತ್ತರ ನೋಡಿ..

ಮನೆಯಲ್ಲಿ ಇಡ್ಲಿ ಚಟ್ನಿ ಜೊತೆಯಲ್ಲಿ ಒಳ್ಳೆಯ ಬ್ಯಾಟಿಂಗ್ ಮಾಡಿ ಎಲ್ಲರೂ ಬಸ್ಸಿನ ಒಡಲಲ್ಲಿ ಕೂತಾಗ.. ಇದೊಂದು ಅವಿಸ್ಮರಣೀಯ ಪ್ರವಾಸ ಆಗುತ್ತೆ ಅನ್ನುವ ಒಂದು ಪುಟ್ಟ ಸುಳಿವನ್ನು ಕೊಟ್ಟಿರಲಿಲ್ಲ..

ಬಸ್ಸೊಳಗೆ ಕಲರವ... ಪುಟ್ಟ ಮಕ್ಕಳು.. ಬೆಳೆದ ಮಕ್ಕಳು.. ಮೂರು ತಲೆಮಾರನ್ನು ನೋಡಿದ್ದ ಮಕ್ಕಳು.. ಎಲ್ಲರೂ ತುಂಬಿದ್ದರು.. ಆದರೆ ಎಲ್ಲರ ವಯಸ್ಸು ಹತ್ತು ದಾಟಿರಲಿಲ್ಲ ಎನ್ನುವಷ್ಟು ಉತ್ಸಾಹ ತುಂಬಿತ್ತು..

ನಾನೂ.. ಜ್ಞಾನೇಶ.. ನಮ್ಮ ಬಸ್ಸಿನ ಸಾರಥಿಯ ಜೊತೆಯಲ್ಲಿ ಹರಟುತ್ತ ಅವರ ಪಕ್ಕದಲ್ಲಿಯೇ ಕುಳಿತಿದ್ದೆವು.. ಬಸ್ಸಿನ ಒಳಗಡೆ ಮಸ್ತಿ ನೆಡೆಯುತ್ತಿತ್ತು.. ಅಂತ್ಯಾಕ್ಷರಿ.. ಹಾಡುಗಳ ಸಾಲು.. ನೆಡೆದಿತ್ತು.. ಇದರ ಮಧ್ಯೆ ಹದವಾಗಿ ಹುರಿದು ಖಾರ ಹಾಕಿದ್ದ ಕಡಲೆ ಬೀಜ, ಚಕ್ಕುಲಿ.. ಕಡಲೆ ಪುರಿ.. ಎಲ್ಲವೂ ಬೆರೆತು ಪ್ರವಾಸಕ್ಕೆ ಒಳ್ಳೆಯ ಗಮ್ಮತ್ತು ನೀಡಿತ್ತು..

ಹೆಬ್ಬಾವಿನ ಹಾಗೆ ಮಲಗಿದ್ದ ರಸ್ತೆಯಲ್ಲಿ ನಾಗಾಲೋಟದಿ ಓಡುತ್ತಿತ್ತು ಬಸ್ಸು..  ಆಡಿ ಕಾರು ಕೊಳ್ಳುವುದರಿಂದ ಹಿಡಿದು.. ಇತ್ತೀಚಿಗಷ್ಟೇ ಮುಗಿದಿದ್ದ ಕರುನಾಡಿನ ಚುನಾವಣೆ .. ತೋಟ, ಗದ್ದೆ.. ಲಾರಿ ವ್ಯಾಪಾರ.. ಹರಾಜು.. ಬಸ್ಸು ಕೊಂಡುಕೊಳ್ಳುವಿಕೆ.. ಎಲ್ಲವೂ ನಮ್ಮ ಮಾತುಗಳಲ್ಲಿ ಬಂದು ಹೋಗುತ್ತಿತ್ತು..
ಮೋಡಗಳ ಹಾದಿಯಲ್ಲಿ 
ಬೆಳಿಗ್ಗೆ ಬಾರಿಸಿದ್ದ ಇಡ್ಲಿ ಇನ್ನೂ ಹೊಟ್ಟೆಯೊಳಗೆ ಸ್ಥಾನ ಉಳಿಸಿಕೊಂಡಿದ್ದರಿಂದ.. ಮಧ್ಯಾಹ್ನ ಮತ್ತೆ ಅದಕ್ಕೆ ತೊಂದರೆ ಕೊಡುವುದು ಬೇಡವೆನಿಸಿದ್ದರೂ.. ಬಂದ ದಾರಿಯಷ್ಟೇ ಮತ್ತೆ ಸಾಗಬೇಕಾದ್ದರಿಂದ ಮತ್ತು ಹೆಂಗಸರು ಮಕ್ಕಳಿಗೆ ಒಂದು ಬ್ರೇಕ್ ಕೊಡು ಉದ್ದೇಶದಿಂದ.. ಕೋರವಂಗಲದ ಗುರುಗಳ ಸ್ಥಾನದಲ್ಲಿ ಇರುವ ಶ್ರೀ ನಾಗಭೂಷಣ ಅವರ ಆಶ್ರಮಕ್ಕೆ ದಾಳಿಯಿಟ್ಟೆವು... ನಾವು ಅಲ್ಲಿ ತಲುಪಿದ ಸಮಯಕ್ಕೆ ಸ್ವಲ್ಪ ಹೊತ್ತಿನ ಮುಂಚೆ ಅವರು ಬಂದಿದ್ದರು...

ನಾವು ಹೊತ್ತು ತಂದಿದ್ದ ಪುಲಾವ್, ಮೊಸರನ್ನ ಜೊತೆಯಲ್ಲಿ ಖಾರವಾದ ಕಡಲೆ ಬೀಜ ಹೊಟ್ಟೆಯ ಅಣೆಕಟ್ಟನ್ನು ಸೇರಿತು.. ಅಲ್ಲಿ ಸ್ವಲ್ಪ ಹೊತ್ತು ಮಾತುಕತೆ.. ಗುರುಗಳು ಭಗವತ್ ಪ್ರೇರಣೆಯಿಂದ ಕಟ್ಟಿಸುತ್ತಿರುವ ಗಣಪತಿ ದೇವಾಲಯದ ಅಡಿಪಾಯದ ಕೆಲಸ ಅದರ ಬಗ್ಗೆ ಸ್ವಲ್ಪ ಹೊತ್ತು ತಿಳುವಳಿಕೆ.. ನಂತರ ನೆಡೆದದ್ದು ಚಮತ್ಕಾರ..

ಸುಮ್ಮನೆ ಒಂದು ವಿಷಯ ಬಿಸಾಕಿ.. ಅದನ್ನು ಆರಿಸಿಕೊಂಡು.. ಹಲಸಿನ ಹಣ್ಣಿನ ತರಹ ಅದರ ಹೂರಣ ಬಗೆದು.. ಸಿಹಿಯಾದ  ಹಣ್ಣು ರುಚಿಯಾಗುವ ಹಾಗೆ.. ತಿಳಿಯಾಗಿ ವಿಷಯವನ್ನು ಮನನ ಮಾಡಿಸುವ ನಾಗರಾಜ್ ಚಿಕ್ಕಪ್ಪ ಅವರ ಹುಟ್ಟು ಹಬ್ಬಕ್ಕೆ ಸೊಗಸಾದ ತೇರು ಸಿದ್ಧವಾಗಿತ್ತು..


ತಳ್ಳು ಗಾಡಿಯಲ್ಲಿ ಅವರನ್ನು ಕೂರಿಸಿಕೊಂಡು ಮೊಮ್ಮಕ್ಕಳ ಜೊತೆಯಲ್ಲಿ ಬಹುಪರಾಕ್ ಸ್ವೀಕರಿಸಿ ತಮ್ಮ ಹುಟ್ಟು ಹಬ್ಬವನ್ನು ಇನ್ನಷ್ಟು ಮಧುರವಾಗಿಸಿದರು..

ಮುಂದೆ ಸುಮಾರು ನಾಲ್ಕು ಘಂಟೆಗಳ ಕಾಲ ಬಸ್ಸು ಕಾಡಿನ ಹಾದಿಯನ್ನು ಸೀಳಿಕೊಂಡು ನುಗ್ಗುತ್ತಿತ್ತು..

ಇಳೆಯನ್ನು ತೋಯಿಸಿದ ಮಳೆ
ಮಳೆಯಿಂದ ಕಂಗೊಳಿಸಿದ ಕಾನನ
ಆ ಮಣ್ಣಿನ ಘಮಲು
ಗಿರಿಗೆ ಮುತ್ತಿಕ್ಕುವ ಮೋಡಗಳು
ಅಲ್ಲಲ್ಲಿ ಬಂಡೆಗಳ ಮಧ್ಯದಿಂದ
ಧುಮುಕುವ ಝರಿಗಳು
ಈ ಪ್ರವಾಸವನ್ನು ಮತ್ತಷ್ಟು ಸುಂದರವಾಗಿಸಿದ್ದವು.



ಚಳಿ ಇತ್ತೇ.. ?
ಹೌದು ಚಳಿ ಇತ್ತು
ಕೊರೆಯುತ್ತಿತ್ತಾ?
ಹೌದು ಕೊರೆಯುತ್ತಿತ್ತು
ಆದರೆ ಯಾರಿಗೂ ಚಳಿಯಾಗುತ್ತಿರಲಿಲ್ಲ ಕಾರಣ ಎಲ್ಲರ ಮನಸ್ಸು ಹಕ್ಕಿಯಾಗಿತ್ತು..
ಹಕ್ಕಿ ನೆಂದರೂ ಅದರ ರೆಕ್ಕೆಗಳ ಗರಿಗಳು ಒದ್ದೆಯಾಗೋಲ್ಲ ಕಾರಣ ಗರಿಗಳಲ್ಲಿರುವ ತೈಲದ ಲೇಪ..
ಹಾಗೆಯೇ ನಾವೂ ಕೂಡ.. ನಮ್ಮ ಮೈ ಮನಸ್ಸು ಹಗುರಾಗಿತ್ತು.. ಚಳಿ ಓಡಿ ಹೋಗಿತ್ತು..

ಹೊರನಾಡಿನ ಮನೆ ಬೇಕೆಂದಿವಳು
ಕುಳಿತಿಹಳಿಲ್ಲಿ ಮಲೆನಾಡಿನಲ್ಲಿ..
ದೇವಾನುದೇವತೆಗಳಿಗೆ ಬೆಟ್ಟ ಗುಡ್ಡಗಳ ತಾಣ ಇಷ್ಟವಾಗಿತ್ತು..
ಮನುಜರ ಅಹಂ ಇಳಿದು ತಮಸ್ಸಿನಿಂದ ಬೆಳಕಿನ ಕಡೆಗೆ ಸಾಗುವ ಪಯಣ ಸುಂದರವಾಗಿರಲಿ
ಎನ್ನುವ ಸಂದೇಶ ಹೊತ್ತು ನಿಂತಿರುವ ಈ ದೇಗುಲಗಳ ಪಯಣ ಮನಸ್ಸಿಗೆ ಮುದ ನೀಡಿತ್ತು..

ಹೊರನಾಡಿಗೆ ಬಂದಾಗ. ಚುಮು ಚುಮು ಮಳೆ..ರೂಮಿನೊಳಗೆ ಸೇರಿಕೊಂಡು.. ಸುಸ್ತು ಪರಿಹಾರ ಮಾಡಿಕೊಂಡು ಮೋರೆ ತೊಳೆದು ಅನ್ನಪೂರ್ಣೇಶ್ವರಿಯ ಮುಂದೆ ನಿಂತಾಗ.. ಮನದೊಳಗೆ ಭಕ್ತಿಯ ಶಕ್ತಿ ಜಾಗೃತಿಗೊಂಡಿತ್ತು..

ಹತ್ತಿರದಿಂದ ಆಕೆಯ ಮೊಗವನ್ನು ಎಷ್ಟು ಬಾರಿ ನೋಡಿದರೂ ತೃಪ್ತಿಯಾಗುತ್ತಿರಲಿಲ್ಲ.. ಅಲ್ಲಿ ನನ್ನ ಮನದೊಳಗೆ ಕೂಗುತ್ತಿದ್ದದ್ದು ಒಂದೇ "ಓಂ ಅನ್ನಪೂರ್ಣೇಶ್ವರಿಯೇ ನಮಃ"



ಅನ್ನಪೂರ್ಣೇಶ್ವರಿ ತಾಯಿ ನೀಡಿದ ಪ್ರಸಾದ ಸ್ವೀಕರಿಸಿ ಮುಂಜಾವಿಗೆ ಕಾಯುತ್ತಾ ಮಲಗಿದಾಗ.. ಕೈಲಾಸವನ್ನೇ ಕಂಡಷ್ಟು ಸಂತಸ ಮನದಲ್ಲಿ..

ಚಂಡಿಕಾ ಹೋಮಕ್ಕೆ ಎಲ್ಲಾ ಸಿದ್ಧತೆಗಳು ನೆಡೆದಿದ್ದವು.. ಮಾತೆ ಕಾಳಿ, ಮಾತೆ ಲಕ್ಷ್ಮಿ, ಮಾತೆ ಸರಸ್ವತಿಯ ಸಂಗಮವಾದ ಈ ಚಂಡಿಕಾ ಅಥವಾ ಚಂಡಿಯ ಹೋಮ ನಾ ಮೊದಲಬಾರಿಗೆ ನೋಡಿದ್ದು ..ಒಳ್ಳೆಯ ಅನುಭವ ಕೊಟ್ಟಿತು.. ಯಾವುದೇ ದೇಗುಲಗಳಲ್ಲಿ ಹತ್ತು ಹದಿನೈದು ನಿಮಿಷ ಇದ್ದರೆ ಹೆಚ್ಚು.. ಜನಸಂದಣಿ, ಅಥವಾ ಮತ್ತೆ ಇನ್ನೆಲ್ಲೂ ಹೋಗುವ ಕಾರ್ಯಕ್ರಮಗಳು ಇದ್ದದ್ದೇ ಹೆಚ್ಚು.. ಹೊರನಾಡಿನ ಅನ್ನಪೂರ್ಣೆ ದೇವಾಲಯದಿ ನಾವು ಇದ್ದದ್ದು ಬರೋಬ್ಬರಿ ಏಳು ಘಂಟೆಗೂ ಹೆಚ್ಚು.. ಆ ಮಂತ್ರ ಪಠಣಗಳು.. ಘಂಟಾನಾದ... ತಾಯಿ ಅನ್ನಪೂರ್ಣೇಶ್ವರಿಯ ದರ್ಶನ ಮಾಡಬೇಕೆಂದಾಗ ಹೋಗಿ ಬರುವ ಅವಕಾಶ.. ಪೂರ್ಣಾಹುತಿ... ಆ ಧೂಮ.. ತುಪ್ಪದ ಸುವಾಸನೆ.. ಮನಸ್ಸಿಗೆ ಇನ್ನೇನು ಬೇಕು..





ಮಹಾಮಂಗಳಾರತಿ ಸಮಯ.. ಮಂತ್ರಘೋಷಗಳು ತಾರಕಕ್ಕೆ ಏರಿದ್ದವು... ಸಾಲು ಸಾಲು ದೀಪಗಳು .. ತಾಯಿಯ ಮೊಗವನ್ನು ಬೆಳಗುತ್ತಿದ್ದವು.. ಪ್ರಸಾದ ಸ್ವೀಕರಿಸಿ ಧನ್ಯತೆಯಿಂದ ಬೀಗುತ್ತಿದ್ದ ಮನಸ್ಸು ಮತ್ತೆ ಪಯಣಕ್ಕೆ ಸಿದ್ಧವಾಗಿದ್ದು.. ಶೃಂಗೇರಿ ಶಾರದಾಂಬೆಯ ದರುಶನಕ್ಕೆ..

ಉಕ್ಕಿ ಹರಿಯುತಿದ್ದ ತುಂಗೆ.. ಮುಗಿಲಿಂದ ಹನಿಯುತಿದ್ದ  ಮಳೆ.. ಹೋಟೆಲಿನಲ್ಲಿ ನಮ್ಮ ಬ್ಯಾಗುಗಳನ್ನು ಹೊತ್ತಾಕಿ ಕೆಳಗೆ ಬಂದೆವು.. ದಿನವೂ ಟೇಬಲಿನಲ್ಲಿ ಕೂತು.. ತಟ್ಟೆಯಲ್ಲಿ ತಿಂದು ಸಾಕಾಗಿದ್ದ ನಮಗೆ.. ಸ್ವಲ್ಪ ಬದಲಾವಣೆ ಬಯಸಿತ್ತು.. ಹೋಟೆಲಿಗೆ ಹೋಟೆಲಲ್ಲ.. ಮನೆಗೆ ಮನೆಯಲ್ಲ.. ಆ  ರೀತಿಯ ಒಂದು ವ್ಯವಸ್ಥೆಗೆ ನಾವು ಹೋದೆವು..

ಅಚ್ಚುಕಟ್ಟಾಗಿ ಬಾಳೆ ಎಲೆ..ಕುಡಿಯಲು ನೀರು.. ಇಡ್ಲಿ.. ಪೂರಿ.. ಚಟ್ನಿ.. ಸಾಗು.. ಕಾಫೀ .. ಟೀ.. ಹಾಲು.. ವಾಹ್ ಸುಂದರ ಅನುಭವ.. ಶೃಂಗೇರಿಗೆ ಮತ್ತೆ ಭೇಟಿ ನೀಡುವಾಗ ತಿಂಡಿಗಾಗಿ ಸ್ಥಳ ಹುಡುಕುತ್ತಾ ಅಲೆಯುವ ಶ್ರಮ ತಪ್ಪಿತು..


ಪಾದಪೂಜೆ ಮಾಡಿಸುವ ಅವಕಾಶ ಸಿಕ್ಕಿತು.. ಗುರುಗಳನ್ನು ಹತ್ತಿರದಿಂದ ನೋಡುವ ಸಂಭ್ರಮ.. ಅವರ ಕೈಯಿಂದ ಪ್ರಸಾದ ಸ್ವೀಕರಿಸುವ ಯೋಗ.. ವಾಹ್.. ಸುಮಾರು ಎರಡು ಘಂಟೆಗಳ ಕಾಲ ಗುರುಗಳು ಪೂಜೆ ಮಾಡುವ ದೃಶ್ಯವನ್ನು ಕಂಡ ಕಣ್ಣುಗಳು ಧನ್ಯ ಎಂದವು.. ಆ ದೊಡ್ಡ ಗುರುಮಂದಿರದಲ್ಲಿ ಪ್ರತಿಧ್ವನಿಸುತ್ತಿದ್ದ ಮಂತ್ರೋಚ್ಛಾರಗಳು ಮನಸ್ಸನ್ನು ಹಿಡಿದಿಟ್ಟಿದ್ದವು..

"ಎಲ್ಲರಿಗೂ ಒಳ್ಳೇದಾಗಲಪ್ಪಾ" ಆ ಗುರುಗಳ ಮಧುರ ಧ್ವನಿ ಕಿವಿಯಲ್ಲಿ ಇನ್ನೂ ಗುಯ್ ಗುಟ್ಟುತ್ತಿದೆ. .

ಬೆಳಿಗ್ಗೆ ಜಳಕ ಮುಗಿಸಿ ನದಿ ತೀರದೆಡೆಗೆ ಹೆಜ್ಜೆ ಹಾಕಿದೆ..

ಜಿಟಿ ಜಿಟಿ ಮಳೆ..
ಮೈತೊಳೆದುಕೊಂಡು ನಲಿಯುತ್ತಿದ್ದ ಬೆಟ್ಟ ಸಾಲುಗಳು
ಮೋಡಗಳು ಬೆಟ್ಟಗಳಿಗೆ ನಾ ನಿಮ್ಮನ್ನು ತಬ್ಬಿಕೊಳ್ಳುತ್ತೇನೆ ಎಂದು ಮುತ್ತಿಕ್ಕುತಿದ್ದ ದೃಶ್ಯಗಳು
ಆದಿ ಗುರು ಶ್ರೀ ಶಂಕರಾಚಾರ್ಯರು ಓಡಾಡಿದ ನೆಲ
ತನ್ನ ಆಹಾರ ಸರಪಳಿ ಮರೆತು ಪ್ರಸವ ವೇದನೆ ಅನುಭವಿಸುತ್ತಿದ್ದ ಮಂಡೂಕಕ್ಕೆ ನೆರಳು ನೀಡಿದ ಪುಣ್ಯ ತಾಣ
ತಾಯಿ ಶಾರದಾಂಬೆಯನ್ನು ಕಂಡ ಕಣ್ಣುಗಳು.. ವಾಹ್ ಹೊರಗಿನ ಮಳೆ ದೇಹವನ್ನು ನೆನೆಸುತ್ತಿದ್ದರೆ.. ಒಳಗೆ ನೆಡೆಯುತಿದ್ದ ನೆನಪುಗಳ ಮಂಥನ  ಮನವನ್ನು ತೋಯಿಸುತ್ತಿದ್ದವು..


ಗುರುಗಳು ತಮ್ಮ ಪೂಜೆಯ ಸಮಯಕ್ಕೆ ತಾಯಿ ಶಾರದಾಂಬೆಯ ದೇಗುಲಕ್ಕೆ ಹೊರಟಿದ್ದ ದೃಶ್ಯ ಮನವನ್ನು ತುಂಬಿಸಿತು..

ಬೆಳಗಿನ ಉಪಹಾರ ಮುಗಿಸಿ ಬಸ್ಸನ್ನು ಹತ್ತಲು ಮನಸ್ಸಿಲ್ಲ.. ಆದರೆ ಕರ್ತವ್ಯದ ಕರೆ.. ಈ ಮಾಯಾನಗರಿಗೆ ಬರಲೇ ಬೇಕಿತ್ತು.. ಒಲ್ಲದ ಮನಸ್ಸಿಂದ ತಾಯಿ ಶಾರದಾಂಬೆಗೆ ಕೈ ಮುಗಿದು.. ನಮ್ಮನ್ನು ಹರಸು ತಾಯೆ ಎಂದು ಬೇಡಿಕೊಂಡು ಹೊರಟೆವು..







ಮುಂದೆ.. ಮುಂದೆ.. ಮುಂದೆ.. ಮುಂದೆ.. ಮುಂದೆ.. ಮುಂದೆ.. ಮುಂದೆ.. ಮುಂದೆ.. ಮುಂದೆ.. ಮುಂದೆ.. ಮುಂದೆ.. ಮುಂದೆ..

ಹ ಹ ಹ ಹ ಹ ಹ ಹ ಹ

ಮುಂದೆ ಮ್ಯಾಜಿಕ್ ನೆಡೆಯಿತು.. ಮನುಜನ ಬಾಳಿಗೆ ನವರಸಗಳು ಮುಖ್ಯ.. ಮೂರು ದಿನಗಳಿಂದ ಭಕ್ತಿ ರಸಗಳಲ್ಲಿ ಮಿಂದಿದ್ದ ಎಲ್ಲರೂ.. ಇಂದು ಹಾಸ್ಯ ರಸ.. ಮನೋರಂಜನೆಯ ಕಡೆಗೆ ಮುಖ ಮಾಡಿದ್ದೆವು.. ಈ ಕಾರ್ಯಕ್ರಮಕ್ಕೆ ಸಾರಥಿಗಳಾಗಿದ್ದು ನಮ್ಮ ಪುಟಾಣಿಗಳು ಮತ್ತು ಅವರ ಜನನಿಯರು.. .. ಹಾಡು.. ನೃತ್ಯ ... ಅಂತ್ಯಾಕ್ಷರಿ.. ಹಾಸ್ಯ ಜೋರಾಗಿತ್ತು.. ಬರುತ್ತಿದ್ದ ಹಾಡುಗಳಿಗೆಲ್ಲಾ ಸಿಗುತ್ತಿದ್ದ ಸ್ಟೆಪ್ಪುಗಳು ಸೂಪರ್ ಇದ್ದವು.. ಹಿರಿಯರು.. ಕಿರಿಯರು ಎನ್ನದೆ ಎಲ್ಲರೂ ಸಂಭ್ರಮಿಸಿದರು..

ಇದರ ನಡುವೆ.. ಹೆಬ್ಬಾವಿನ ಹಾಗೆ ಸುತ್ತಿ ಸುತ್ತಿ ಒಮ್ಮೆ ಮೇಲೇರುತ್ತಿದ್ದ .. ಒಮ್ಮೆ ಕೆಳಗೆ ಇಳಿಯುತ್ತಿದ್ದ ಬಸ್ಸು.. ತನ್ನ ಪಾಡಿಗೆ ಹಾಸನದ ಕಡೆಗೆ ಪಯಣಿಸುತ್ತಿತ್ತು.. ಅತ್ತ ಕಂದರ.. ಇತ್ತ ಗಿರಿ... ಇದರ ನಡುವೆ ಮೋಡಗಳ ಚಲ್ಲಾಟ.. ಒಂದು ಸುತ್ತಿನಲ್ಲಿ ಮಳೆ ಇದ್ದರೆ.. ಇನ್ನೊಂದು ತಿರುವಿನಲ್ಲಿ ಮೋಡಗಳ ಮುತ್ತಿಗೆ.. ಹೀಗೆ ಸಾಗಿತ್ತು.. ಹಾಸನ ಬರುವ ಹೊತ್ತಿಗೆ ಹೊಟ್ಟೆಯೊಳಗಿದ್ದ ಇಡ್ಲಿ, ಮಸಾಲೆ ದೋಸೆ... ಪೂರಿ.. ಸಾಗು.. ಕಾಫಿ.. ಟೀಗಳು.. ಬನ್ನು.. ಕಡಲೇಕಾಯಿ ಬೀಜ.. ಚಕ್ಕುಲಿ.. ಎಲ್ಲವೂ ವಾತಾಪಿ ಜೀರ್ಣೋಭವವಾಗಿತ್ತು..

ಹೋಟೆಲ್ ರಾಮ ಕಂಡೊಡನೆ.. ಟೇಬಲಿನತ್ತ ಹೆಜ್ಜೆ ಹಾಕಿ.. ತಂದಿಟ್ಟ ಸರಕುಗಳನ್ನು ತುಟಿ ಪಿಟಿಕ್ ಮಾಡದೆ ಹೊಟ್ಟೆಗಿಳಿಸಿದೆವು.. ಹೊಟ್ಟೆಗೆ ಆಹಾರ ಬಿದ್ದೊಡನೆ.. ನೆಟ್ವರ್ಕ್ ಸಿಕ್ಕಿದ ಮೊಬೈಲಿನ ಹಾಗೆ ಮತ್ತೆ ಶುರುವಾಯಿತು  ಬಸ್ಸಿನೊಳಗೆ ಸಂಭ್ರಮ..

ಮೂರು ದಿನ ಕಳೆದದ್ದು ಹೇಗೆ. .ಯಾರ ಬಳಿಯೂ ಉತ್ತರವಿರಲಿಲ್ಲ.. ಏ ದಿಲ್ ಮಾಂಗೆ ಮೋರ್  ಎನ್ನುವ ವಾಕ್ಯ ಎಲ್ಲರ ತುಟಿಯ ಮೇಲಿತ್ತು .

ಈ ಪ್ರವಾಸದ ವಿಶೇಷಗಳು

೧) ಬಸ್ಸಿನ ಸಾರಥಿ ದರ್ಶನ ಮತ್ತು ಆತನ ಸಹಾಯಕ ಶಿವೂ.. ಒಂದು ಚೂರು ಮೋರೆಯನ್ನು  ಗಂಟು ಹಾಕಿಕೊಳ್ಳದೆ ನಮ್ಮೆಲ್ಲರ ಜೊತೆ ಸಹಕರಿಸಿದ್ದು
೨) ಮಕ್ಕಳು ಪುಟಾಣಿಗಳಾಗಿದ್ದು.. ದೊಡ್ಡವರು ಮಕ್ಕಳಾಗಿದ್ದು
೩) ತಾಯಿ ಅನ್ನಪೂರ್ಣೇಶ್ವರಿಯ ಸುದೀರ್ಘ ದರ್ಶನ
೪) ಭಕ್ತಿ ಶಕ್ತಿ ಕೂಡಿದ ಚಂಡಿಕಾ ಹೋಮ
೫) ಉಕ್ಕಿ ಹರಿಯುತಿದ್ದ ತುಂಗಾ ತೀರಾ
೬) ಶೃಂಗೇರಿಯ ಗುರುಗಳನ್ನು ಹತ್ತಿರದಿಂದ ನೋಡಿದ್ದು.. ಅವರ ಆಶೀರ್ವಾದ ಸಿಕ್ಕಿದ್ದು
೭) ತಾಯಿ  ಶಾರದಾಬೆಯ ಆಶೀರ್ವಾದ
೮) ಘಟ್ಟ ಪ್ರದೇಶದ ತಾಣ.. ಹಸಿರಾಗಿ ಉಸಿರಾಗಿ ನಮ್ಮಲ್ಲಿ ನಿಂತಿದ್ದು
೯) ಶೃಂಗೇರಿಯ ಮನೆಯ ಹೋಟೆಲಿನ ಬಾಳೆ ಎಲೆಯ ಉಪಹಾರ
೧೦) ಕಡೆಗೆ ಸೋತಿದ್ದು ಏನೂ ಅಂದರೆ.. ನಮ್ಮ ನಮ್ಮ ಸಂಕಷ್ಟಗಳು

ಈ ಪ್ರವಾಸದಿಂದ ಸಿಕ್ಕ ಸ್ಪೂರ್ತಿಯ ಶಕ್ತಿ ನಮ್ಮ ಬದುಕಿನ ರಥವನ್ನು ಎಳೆಯಲು ಸಹಾಯ ಮಾಡುತ್ತದೆ ಎನ್ನುವ ವಿಶ್ವಾಸ ನಮ್ಮೆಲರದು..

ಮತ್ತೊಮ್ಮೆ ಎಲ್ಲರೊ ಸೇರೋಣ.. ಪ್ರವಾಸ ಮಾಡೋಣ ಎನ್ನುವ ಆಶಯದಲ್ಲಿ ನಮ್ಮ ನಮ್ಮ ಮನೆಯನ್ನು ಸೇರಿಕೊಂಡಾಗ ಮನಸ್ಸು ಹೇಳುತ್ತಿತ್ತು

"ನಗು ನಗುತಾ ನಲಿ ನಲಿ 
ಎಲ್ಲಾ ದೇವನ ಕಲೆ ಎ೦ದೇ ನೀ ತಿಳಿ 
ಅದರಿ೦ದ ನೀ ಕಲಿ 
ನಗು ನಗುತಾ ನಲಿ ನಲಿ 
ಏನೇ ಆಗಲಿ"