ಶ್ರೀ ಮಹಾಗಣಪತಿಯ ದರ್ಶನದಿಂದ ನಾಡಿನ ನಾಣ್ಣುಡಿಯನ್ನು ಪರೀಕ್ಷಿಸುವ ಮನಸಾಯಿತು. ಗಣಪನ ಆಶೀರ್ವಾದ, ಲಕ್ಷಿ ಕಟಾಕ್ಷ ಎರಡು ಸೇರಿದರೆ ಇದೇನು ಕಷ್ಟದ ಕೆಲಸವಲ್ಲ ಎನ್ನಿಸಿತು.
ಮೈಯಲ್ಲಿ ಸೊಕ್ಕಿದ್ದರೆ ಯಾಣ, ಜೇಬಲ್ಲಿ ರೊಕ್ಕವಿದ್ದರೆ ಗೋಕರ್ಣ..ಒಂದೇ ದಿನ ಸೊಕ್ಕು ರೊಕ್ಕ ಎರಡನ್ನು ಒರೆಗೆ ಹಚ್ಚೇಬಿಡುವ ತೀರ್ಮಾನ ಆಯಿತು. ನಮ್ಮ ಸಾರಥಿ ನಡೀರಿ ಸರ್ ನೀವು ಕರೆದಲ್ಲಿ ನಾ ಬರುವೆ ಎಂದರು. ಸರಿ ನಮ್ಮ ಮನಸಿನಂತೆ ನಡೆಯುವ ಸಾರಥಿ ನಮಗೆ ಸಿಕ್ಕಾಗ ಇನ್ನೇನು ಸಮಸ್ಯೆ
ಸಿರ್ಸಿಯಿಂದ ಯಾಣಕ್ಕೆ ಪಯಣ! |
ವಾಹನ ಸಿರ್ಸಿ ಕುಮಟ ಹಾದಿಯಲ್ಲಿ ರಿವ್ವನೆ ಸಾಗುತಿತ್ತು...ಅಚಾನಕ್ ಸಾರಥಿ ಸುನೀಲ್ ಹೇಳಿದ್ರು "ಸರ್ ನೀವು ಓಡಿಸಿ ಸ್ವಲ್ಪ ದೂರ" ಎಂದು ಹೇಳಿ "ಶಿವರ್ಲೆ ಟವೇರ" ಗಾಡಿಯನ್ನು ಮಾರ್ಗ ಮಧ್ಯದಲ್ಲೇ ನಿಲ್ಲಿಸಿ ಬಿಟ್ಟರು. ನನಗೆ ಒಂದು ಕಡೆ ಅಳುಕು, ಇನ್ನೊಂದು ಕಡೆ ಏನಾದರೂ ಸಾಹಸ ಮಾಡುವ ತವಕ. ಸರಿ ಸಾಧಿಸಿಬಿಡೋಣ ಅಂತ ಸಾರಥಿ ಜಾಗದಲ್ಲಿ ಕುಳಿತೆ ಬಿಟ್ಟೆ..ಒಂದಷ್ಟು ಕಿ.ಮಿ.ಗಳನ್ನೂ ಓಡಿಸಿದೆ ಮನಸಿಗೆ ಖುಷಿಯಾಯಿತು. ನನ್ನ ಮಿತ್ರರು ಉಸಿರು ಬಿಗಿ ಹಿಡಿದು ಕೂತಿದ್ದು ಬೇರೆ ಕಥೆ.
ನಾ ಕೇಳಿದಂತೆ ಮೊದಲು ಸಿರ್ಸಿ ಕುಮಟ ಮಾರ್ಗದಲ್ಲಿ ಸಿಗುವ ಅನೆಗುಂದಿಯಿಂದ ಸುಮಾರು 16-17 ಕಿ.ಮಿ ಗಳಷ್ಟು ದೂರ ದುರ್ಗಮವಾದ ದಟ್ಟಕಾಡಿನಲ್ಲಿ ಇಂಬಳ (ಜಿಗಣೆ)ಗಳು ತುಂಬಿದ್ದ ಹಾದಿಯಲ್ಲಿ ನಡೆದೆ ಹೋಗಬೇಕಿತ್ತು. ಅದಕ್ಕೆ ಮೈಯಲ್ಲಿ ಸೊಕ್ಕಿದ್ದವರು ಮಾತ್ರ ಹೋಗಬಹುದು ಎಂಬ ನುಡಿಗಟ್ಟು ಹುಟ್ಟಿಕೊಂಡದ್ದು ಅನ್ನಿಸುತ್ತದೆ ..ನಂತರ ನಾಗರೀಕತೆ ಬೆಳೆದಂತೆಲ್ಲ ಆ ದೂರ ಕಡಿಮೆಯಾಗುತ್ತ ಬಂದಿತು. ಈಗ ಕೇವಲ 200-300 ಮೀಟರ್ ನಡೆದರೆ ಸಾಕು ಶಿಖರದ ಬುಡ ಮುಟ್ಟಬಹುದು.
ವಾಹನ ನಿಲುಗಡೆ ಪ್ರದೇಶ..ಇಲ್ಲಿಂದ ಕೇವಲ ಮೀಟರ್ ಗಳ ದೂರದಲ್ಲಿ ಯಾಣ ! |
ವಾಹನ ನಿಲ್ಲಿಸುವ ಸ್ಥಳದಿಂದ ಕೆಲವೇ ಮೀಟರುಗಳ ಅಂತರದಲ್ಲಿ ನಿಂತಿತ್ತು ಭೈರವೇಶ್ವರ ಶಿಖರ..
ಭೈರವೇಶ್ವರ ಶಿಖರ..ಕಡಿದ ಮರದ ತುಂಡಿನಂತೆ ನಿಂತ ಭಂಗಿ |
ಭೈರವೇಶ್ವರನ ಮುಖವನ್ನು ತೋರಿಸಲೆ ಎನ್ನುವಂತೆ ಕನ್ನಡಿಯಂತೆ ಎದೆಯುಬ್ಬಿಸಿ ಮುಗಿಲನ್ನು ಚುಂಬಿಸುವಂತೆ ನಿಂತಿತ್ತು ಮೋಹಿನಿ ಶಿಖರ.
ನಾನು ನಿಂತೇ ಎನ್ನುವ ಸೊಬಗಿನ ಮೋಹಿನಿ ಶಿಖರ |
ನನ್ನ ತಿಳುವಳಿಕೆಯಂತೆ ಸುರೇಶ ಹೆಬ್ಳೀಕರ್ರವರ ಆಗಂತುಕ ಸಿನಿಮಾದಲ್ಲಿ ಪ್ರಥಮ ಬಾರಿಗೆ ಯಾಣದಲ್ಲಿ ಚಿತ್ರಿಕರಣವಾಯಿತು ನಂತರ ನಮ್ಮೊರ ಮಂದಾರ ಹೂವೆ ಸಿನಿಮಾ. ಆನಂತರ ಈ ತಾಣ ಇನ್ನಷ್ಟು ಪ್ರಸಿದ್ಧಿಗೆ ಬಂತು.
ಪುರಾಣದಲ್ಲಿ ವಿವರಿಸಿರುವಂತೆ ಭಸ್ಮಾಸುರನ ವಧೆ ಮಾಡಲು ವಿಷ್ಣು ಮೋಹಿನಿ ರೂಪದಲ್ಲಿ ಬರುತ್ತಾನೆ. ನೃತ್ಯ ಮಾಡುತ್ತಾ ಭಸ್ಮಾಸುರ ತನ್ನ ತಲೆಯ ಮೇಲೆ ಕೈಯನ್ನು ಇಟ್ಟುಕೊಳ್ಳುವಂತೆ ಭಂಗಿ ಪ್ರದರ್ಶನ ಮಾಡುತ್ತಾ ಹೋದಾಗ ಅವನು ಅಲ್ಲೇ ಸುಟ್ಟು ಭಸ್ಮವಾಗಿಬಿಡುತ್ತಾನೆ. ಆ ಕಾರಣದಿಂದ ಇಲ್ಲಿಯ ಮಣ್ಣು ಕಪ್ಪಾಗಿದೇ ಎಂದು ಹೇಳುತ್ತಾರೆ. ಭಸ್ಮಾಸುರನ ಸಂಹಾರವಾದ ಮೇಲೆ ಶಿವ ಭೈರವೇಶ್ವರ ರೂಪದಲ್ಲಿಯೂ, ಮತ್ತು ಮೋಹಿನಿ ರೂಪದಲ್ಲಿ ವಿಷ್ಣು ಮತ್ತು ಚಿಕ್ಕ ಚಿಕ್ಕ ಶಿಖರಗಳಾಗಿ ಶಿವಗಣಗಳು ಇಲ್ಲಿಯೇ ನೆಲೆಸುತ್ತಾರೆ.
ಇಲ್ಲಿ ಪ್ರಧಾನವಾದ ಶಿಖರಗಳು ಭೈರವೇಶ್ವರ ಮತ್ತು ಮೋಹಿನಿ. ಪುರಾಣದ ಹಿನ್ನೆಲೆ ಕೂಡ ಸೊಗಸು, ನೈಸರ್ಗಿಕವಾಗಿಯೂ ಕೂಡ ಈ ಸ್ಥಳ ನಮ್ಮನ್ನು ಮಂತ್ರ ಮುಗ್ಧರನ್ನಾಗಿ ಮಾಡುವುದು ಸುಳ್ಳಲ್ಲ. ದೇವಸ್ಥಾನದಲ್ಲಿರುವ ಭೈರವೇಶ್ವರ ಲಿಂಗದ ಮೇಲೆ ಸದಾ ನೀರು (ತೀರ್ಥ) ಜಿನುಗುತ್ತಲೇ ಇರುವುದು ಇಲ್ಲಿನ ವಿಶೇಷ.
ಶಿಖರದ ಬುಡದಲ್ಲಿರುವ ಶಿವಾಲಯ |
ಅತ್ಯಂತ ರಮಣೀಯವಾಗಿ ಕಾಣುವ ಈ ಶಿಖರಗಳು ಚಾರಣಕ್ಕೂ, ಪ್ರವಾಸಿತಾಣವಾಗಿಯೂ, ಭಕ್ತಿ ಸಾರುವ ಕ್ಷೇತ್ರವಾಗಿಯೂ ಪ್ರಸಿದ್ಧಿಯನ್ನು ಹೊಂದಿದೆ. ಭೈರವೇಶ್ವರ ಶಿಖರವನ್ನು ಒಮ್ಮೆ ಸುತ್ತಿಬರಲು ಅವಕಾಶವಿದೆ.
ಅಲೆಮಾರಿಗಳ ಗುಂಪು ಗುಹೆಯ ಬುಡದಲ್ಲಿ |
ಆ ಶಿಖರದ ಕೆಳಗೆ ನಿಸರ್ಗ ನಿರ್ಮಿತ ಗುಹೆ, ಅದರಲ್ಲಿ ನೆರಳು ಬೆಳಕಿನ ಆಟ, ಸುಂದರ ಕಲಾಕೃತಿ ಮೂಡಿಸಿರುವ ಕಲ್ಲುಗಳು, ಪ್ರತಿಧ್ವನಿ ಎಲ್ಲವೂ ಮನಸಿಗೆ ಮುದ ನೀಡುತ್ತವೆ
ಮುಗಿಲ ಚುಂಬಿಸುವ ಆಸೆಯಲಿ..ಶಿಖರ ಮತ್ತು ಮರಗಳಿಗೆ ಪೈಪೋಟಿ... |
ಛಾಯಾಗ್ರಾಹಕರಿಗೆ ಈ ಗುಹೆಯೊಳಗಿನ ನೆರಳು ಬೆಳಕು ಹಬ್ಬವನ್ನೇ ಉಂಟು ಮಾಡುತ್ತದೆ.
ಹಲ್ಲಿಯೋ ..ಮೊಸಳೆಯೋ ..ಒಟ್ಟಿನಲ್ಲಿ ನೆರಳು ಬೆಳಕಿನ ಆಟ |
ಒಂದು ಕಡೆ ಇಳಿಯಲು ಕಷ್ಟವಾಗಬಹುದೆಂದು ಹಗ್ಗವನ್ನು ಕಟ್ಟಿದ್ದಾರೆ, ಅದನ್ನು ಹಿಡಿದು ನಿಧಾನವಾಗಿ ಇಳಿಯಬಹುದು . ಚಾರಣದ ಮಜಾ ಕೊಡುತ್ತೆ ಈ ತಾಣ.
ಹಗ್ಗ ಹಿಡಿದು ಇಳಿಯುವ ಸಾಹಸದಲ್ಲಿ ನಮ್ಮ ತಂಡ |
ಸುಮಾರು ಹೊತ್ತು ಕ್ಯಾಮೆರ ಕೈಚಳಕ ಪ್ರದರ್ಶಿಸಿ ಗುಹೆಯನ್ನು ಒಂದು ಸುತ್ತು ಸುತ್ತಿ ಧಣಿವಾದ ಮೇಲೆ, ಅಲ್ಲಿಯೇ ಇದ್ದ ಒಂದು ಅಂಗಡಿಯಲ್ಲಿ ಕಷಾಯ, ಚುರುಮುರಿ ಎಲ್ಲ ಮೆದ್ದ ಮೇಲೆ ಮೈ ಮನ ಎರಡು "ಇದು ಹಕ್ಕಿಯಲ್ಲ.... ಆದ್ರೆ ಹಾರ್ತೈತಲ್ಲ" ಎಂದು ಹಾಡಲು ಶುರು ಮಾಡಿದವು.
ಬಂದ ಕಾಡು ಹಾದಿಯಲ್ಲಿ ತಿರುಗಿ ನೋಡಿದಾಗ! |
ಮುಂದಿನ ಪಯಣ ಇನ್ನಷ್ಟು ರೋಚಕವಾಗಿತ್ತು, ದಾರಿಯಲ್ಲಿ ವಿಭೂತಿ ಜಲಪಾತಕ್ಕೆ ದಾರಿ ಎನ್ನುವ ಸೂಚನೆಗನುಸಾರ ಕಾಡಿನಲ್ಲಿ ಮತ್ತೆ ಹೊಕ್ಕೆವು. ಯಾಣದಿಂದ ಕುಮಟ, ಗೋಕರ್ಣ ಹಾದಿಯಲ್ಲಿ ಸುಮಾರು 8 ಕಿ.ಮಿ ಕಳೆದ ಮೇಲೆ ಎಡಕ್ಕೆ ತಿರುಗಿದರೆ ವಿಭೂತಿ ಜಲಪಾತ, ಬಲಕ್ಕೆ ಹೋದರೆ ಕುಮಟ, ಗೋಕರ್ಣಕ್ಕೆ ಹೋಗುತ್ತದೆ. ಸೂಚನಾ ಫಲಕದ ಹತ್ತಿರ ಎಡಗಡೆ ತಿರುಗಿ ಸುಮಾರು 1-2 ಕಿ.ಮಿ.ಒಳಗೆ ಹೋಗಿ ವಾಹನ ನಿಲುಗಡೆಯಾದ ಮೇಲೆ..ಸುಮಾರು ಒಂದು-ಒಂದೂವರೆ ಕಿ.ಮಿ.ನಷ್ಟು ನೆಡೆದು ಸಾಗಬೇಕು. ಭೋರ್ಗರೆಯುತ್ತಾ ಎರಡು ಹಂತದಲ್ಲಿ ಧುಮುಕುವ ಜಲಾರಾಶಿಯೇ ವಿಭೂತಿ ಜಲಪಾತ.
ಬೆಳ್ಳನೆ ಹಾಲಿನ ಧಾರೆ!!! |
ಜಲಪಾತದ ಮಧ್ಯೆ ಸಣ್ಣ ಸುಣ್ಣದ ಕಲ್ಲಿನ ಮೇಲೆ ಹರಿಯುವ ನೀರು ವಿಭೂತಿಯಂತೆ ಬೆಳ್ಳಗಿರುವುದು ಈ ಹೆಸರಿಗೆ ಕಾರಣ ಎನ್ನುವುದು ಸ್ಥಳೀಯರ ಮಾತು.
ವಿಭೂತಿ ಜಲಪಾತದ ಧಾರೆ |
ಇಲ್ಲಿ ಅಪಾಯವಿಲ್ಲದೆ ನೀರಲ್ಲಿ ಇಳಿಯಬಹುದು..ನೀರು ದಣಿದ ದೇಹಕ್ಕೆ ಒಂದು ಸುಂದರ ಅನುಭವ ಕೊಡುತ್ತದೆ.
(ಸಶೇಷ)