Saturday, January 21, 2017

ವೈಟಿಂಗ್ ವೈಟಿಂಗ್ ... !!!

ಟ್ರಿಪ್ಪಿಂಗ್ ಬ್ಲಾಗ್ ನಲ್ಲಿ ಏನಾದರೂ ಬರೆಯೋಣ ಅಂತ.. ಆ ಕೊಂಡಿಯನ್ನು ಒತ್ತಿದೆ.. ಬರಲಿಲ್ಲ.. ಅಂತರ್ಜಾಲ ಸಂಬಂಧ ಸರಿಯಿದೆಯೇ ಎಂದು ಪರೀಕ್ಷಿಸಿದೆ.. ಉಆಹೂಂ ಎಲ್ಲವೂ ಸರಿ ಇತ್ತು.. ಏನಾಯಿತು.. ಅರಿವಾಗಲಿಲ್ಲ... ಲ್ಯಾಪ್ಟಾಪ್ ನ ಬಂದ್ ಮಾಡಿ ಮತ್ತೆ ಶುರು ಮಾಡಿದೆ.. ಸ್ವಲ್ಪ ಹೊತ್ತಾಯಿತು. 

ಮತ್ತೆ ಅದೇ ಕಾಟ.. ಓಪನ್ ಆಗ್ತಾ ಇಲ್ಲ.. ಆ ಲಿಂಕ್ ಮೇಲೆ ಬೆರಳನ್ನು ಸವರಿ 
"ಯಾಕಪ್ಪ ಏನಾಯಿತು" ಎಂದು ಕೇಳಿದೆ..  
ಅಲ್ಲಿಯ ತನಕ ಬೆಳ್ಳಗಿದ್ದ ಆ ಲಿಂಕ್ ಅಚಾನಕ್ ಕೆಂಪಾಯಿತು.. ಗಾಬರಿಯಾದೆ.. 
"ಯಾಕೋ ಏನಾಯಿತು.. ಯಾಕೆ ಕೋಪ.. ಮೈಯೆಲ್ಲಾ ಕೆಂಪಾಗಿದೆ.. ಏನಾಯಿತು" 

"ಲೋ ಶ್ರೀ. ಬ್ಲಾಗ್ ಅಂತ ನೀ ಬರೆಯೋಕೆ ಶುರುಮಾಡಿದ್ದೆ ನನ್ನ ಲಿಂಕ್ ಇಂದ.. ಟ್ರಿಪ್ಪಿಂಗ್ ಲೈಫ್ ಶುರುಮಾಡಿದ ಮೇಲೆ ತಾನೇ ಮಿಕ್ಕ ಏಳು ನನ್ನ ತಮ್ಮಂದಿರು ಬಂದದ್ದು.. ನೀ ಅವರನ್ನ ಮಾತ್ರ ಮಾತಾಡಿಸ್ತಿದ್ದೀಯ.. ನನ್ನನ್ನು ಮರೆತೇ ಬಿಟ್ಟಿದ್ದೀಯ.. ೨೦೧೪ ರಲ್ಲಿ ಏನೂ ಆಗಿರಬಹುದು.. ಅದನ್ನೇ ನೀ ಈಗಲೂ ಮನಸ್ಸಲ್ಲಿ ಇಟ್ಟುಕೊಂಡು ಸುಮ್ಮನಿರುವುದು ನ್ಯಾಯವೇ.. ೨೦೧೬ರಲ್ಲಿ ತಿರುಪತಿ ಪ್ರವಾಸದ ಬಗ್ಗೆ ಬರೆದ ಮೇಲೆ ಮತ್ತೆ ನನ್ನ ಕಡೆ ತಿರುಗಿಯೂ ನೋಡಿಲ್ಲ.. ಯಾಕೆ ನನ್ನ ಮೇಲೆ ಕೋಪವೇ, ಬೇಸರವೇ" ಟ್ರಿಪ್ಪಿಂಗ್ ಬ್ಲಾಗ್ ಮುಖ ಕೆಂಪಗೆ ಮಾಡಿಕೊಂಡೆ ಉತ್ತರಿಸಿತು.. 

"ಹೌದೇ.." ಎಂದು ಆ ಕೊಂಡಿಯನ್ನು ಒತ್ತಿದರೆ.. "ಅರೆ ಹೌದು ೨೦೧೫, ೨೦೧೬ ಪೂರ್ತಿ ಬಣ ಬಣಗುಡುತ್ತಿದೆ.. ಲೇಖನಗಳೇ ಇಲ್ಲ.. ಪ್ರವಾಸ ಆಗೊಮ್ಮೆ ಈಗೊಮ್ಮೆ ಇದ್ದರೂ.. ನಾ ಅಷ್ಟು ದಿನ ಖಾಲಿ ಬಿಡೋಲ್ಲ.. ಸರಿ ಆದದ್ದು ಆಯಿತು.. ಹೋದವರು ಒಳ್ಳೆಯವರೇ.. ಹೋಗಲಿ ಬಿಡು.. ನಿನ್ನ ಯಾತ್ರೆ ಮತ್ತೆ ಶುರುಮಾಡುತ್ತೇನೆ.. ಖಾಲಿ ಬಿಡೋಲ್ಲ.. ಇದು ನಿರ್ಧಾರ ಅಲ್ಲಾ.. ಬದಲಿಗೆ ಎಲ್ಲರನ್ನು ಸಂಭಾಳಿಸುವ ಒಂದು ಯತ್ನ.. "

ಕೆಂಪಗೆ ಕುಡಿಯುತ್ತಿದ್ದ ಮೊಗ.. ನಿಧಾನವಾಗಿ ಅರಳತೊಡಗಿತು.. "ಸರಿಯಪ್ಪ.. ನಿನ್ನ ಮೇಲೆ ನಂಬಿಕೆ ಇದೆ.. ಶುರುಮಾಡು"

"ಧನ್ಯವಾದಗಳು ಕಣೋ.. ನೋಡು ಒಂದು ಲೇಖನ ನಿನಗೋಸ್ಕರ.. ಓದು ಸಂತೋಷ ಪಡು ತೃಪ್ತಿ ಪಡು"

"ವೈಟಿಂಗ್ ವೈಟಿಂಗ್" ಎಂದಿತು ಬ್ಲಾಗ್ ಲಿಂಕ್.. 

ಕಥೆ ಮೂಡಲು ಶುರುವಾಯಿತು
*********
೨೦೦೬ರ ಕಥೆ.. 

ದಸರಾದಲ್ಲಿ ಆಫೀಸಿಗೆ ಒಂದು ವಾರ ವಿರಾಮ ನೀಡಿದ್ದರು.. ಸುಮ್ಮನೆ ಮನೆಯಲ್ಲಿ ಕಳೆಯೋಕೆ ಇಷ್ಟವಿರಲಿಲ್ಲ.. ಸರಿ ಎಲ್ಲಿಗೆ ಹೋಗೋದು ಎಂದು ಯೋಚಿಸುತ್ತಿದ್ದಾಗ ಹೊಳೆದದ್ದು.. ನನ್ನ ಬಾಲ್ಯದ ಕನಸಾದ ಕನ್ಯಾಕುಮಾರಿಗೆ ಹೋಗೋದು ಅಂತ. ಪ್ಯಾಕೇಜ್ ಟ್ರಿಪ್ಪಿಗೆ ಹಣ ಕಟ್ಟಿ ಬಂದಾಯ್ತು... ಮನದಲ್ಲಿ ಏಳುತ್ತಿದ್ದ ಅಲೆಗಳು ಹಿಂದೂ ಮಹಾಸಾಗರದಲ್ಲಿ ಏಳುತ್ತಿದ್ದ ತರಂಗಗಳಿಗಿಂತ ದೊಡ್ಡದಾಗಿತ್ತು. ಮಧುರೈ, ರಾಮೇಶ್ವರಂ ಮತ್ತು ಕನ್ಯಾಕುಮಾರಿ ತ್ರಿವಳಿ ಊರುಗಳ ಭೇಟಿ. 

ರಾತ್ರಿ ಹೊರಟ ಬಸ್ ನಮ್ಮನ್ನು ಕರೆತಂದಿದ್ದು ಮಧುರೈ ದೇವಸ್ಥಾನಕ್ಕೆ. ಉತ್ತಮ ಹೋಟೆಲಿನ ಕೋಣೆಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಸಿಕ್ಕ ಮೇಲೆ, ಸ್ನಾನ ಮಾಡಿ.. ಹೊರಗೆ ಬಂದೆವು. ತಮಿಳುನಾಡಿಗೆ ಅದು ಎರಡನೇ ಭೇಟಿ.. ಊಟ ಉಪಚಾರಗಳ ಬಗ್ಗೆ ಅಷ್ಟೊಂದು ಮಾಹಿತಿ ಇರಲಿಲ್ಲ.  

ಪ್ಯಾಕೇಜ್ ಟ್ರಿಪ್ನವನು ನಾಳೆ ಬೆಳಿಗ್ಗೆ ಎಂಟರ ಹೊತ್ತಿಗೆ ಹೋಟೆಲ್ ಕೋಣೆ ಖಾಲಿ ಮಾಡಿ ಇಲ್ಲಿಯೇ ನಿಂತಿರಿ, ನಮ್ಮ ಬಸ್ ಬರುತ್ತೆ ರಾಮೇಶ್ವರಕ್ಕೆ ಕರೆದುಕೊಂಡು ಹೋಗುತ್ತೀವಿ ಎಂದು ಹೇಳಿದ್ದ ಹಾಗಾಗಿ ನಮಗೆ ಬೇಕಾದಷ್ಟು ಸಮಯವಿತ್ತು. 

ಮೀನಾಕ್ಷಿ ದೇವಸ್ಥಾನಕ್ಕೆ ಹೋಗಬೇಕಿತ್ತು. ಮೊದಲು ತಿಂಡಿ ತಿನ್ನೋಣ ಎಂದು ಅಕ್ಕ ಪಕ್ಕದ ಹೋಟೆಲಿನಲ್ಲಿ ಕಣ್ಣಿಗೆ ಕಂಡದ್ದು ಮಾರ್ಬಲ್ ಬಿಳುಪಿನ ಇಡ್ಲಿ. ಸರಿ ಹೊಟ್ಟೆಗೆ ಸೇರಿದಷ್ಟು ಇಡ್ಲಿ ತಿಂದು ಹೊರಗೆ ಬಂದೆವು. 

ಹೋಟೆಲಿನವನ ಹತ್ತಿರ ಮೀನಾಕ್ಷಿ ದೇವಸ್ಥಾನಕ್ಕೆ ಹೋಗಬೇಕು ಹೇಗೆ ಹೋಗೋದು ಅಂತ ಕನ್ನಡಲ್ಲಿಯೇ ಕೇಳಿದೆ.. ಅವ ಒಬ್ಬ ಸೈಕಲ್ ರಿಕ್ಷನವನನ್ನು ಕರೆದು ದೇವಸ್ಥಾನಕ್ಕೆ ಕರೆದುಕೊಂಡು ಹೋಗು ಅಂತ ತಮಿಳಿನಲ್ಲಿ ಹೇಳಿದ. 

ನಮಗೂ ಒಂದು ಒಂದು ಸಂಭ್ರಮ.. ಟಾಂಗಾ ಶೈಲಿಯ ಸೈಕಲ್ ರಿಕ್ಷಾದಲ್ಲಿ ಹೋಗೋದು. ಒಂದು ಹತ್ತು ನಿಮಿಷ ಪಾಪ ಕಷ್ಟ ಪಟ್ಟು ಸೈಕಲ್ ತುಳಿದು ದೇವಸ್ಥಾನಕ್ಕೆ ಕರೆದುಕೊಂಡು ಬಂದ. 

ಎಲ್ಲೆಲ್ಲಿ ನೋಡಿದರು ಬರಿ ಗೋಪುರಗಳೇ ಕಾಣುತ್ತಿದ್ದವು. ತಮಿಳಿನಲ್ಲಿ ಒಬ್ಬ ಹೇಳಿದ.. ನನಗೆ ಅರ್ಥವಾಗಿದ್ದು ಇಷ್ಟು "ಸರ್ ನೀವು ಹೋದ ಕಡೆಯಲ್ಲಿಯೇ ಬರೋದು ಕಷ್ಟ.. ನೀವು ಯಾವ ಬಾಗಿಲಿನಿಂದಾದರೂ ಸರಿ ಹೊರಗೆ ಬಂದು.. ನಿಮ್ಮ ಹೋಟೆಲ್ ಕಾರ್ಡ್ ತೋರಿಸಿ ಅಲ್ಲಿಗೆ ಬಿಡುತ್ತಾರೆ. ಗಾಬರಿ ಮಾಡಿಕೊಳ್ಳಬೇಡಿ.. " ಅವನ ಸಲಹೆ ಉತ್ತಮವಾಗಿತ್ತು ಮತ್ತು ಅದನ್ನೇ ಕುರುಡು ರೀತಿಯಲ್ಲಿ ಅನುಸರಿಸಿದ್ದೆವು. 

ದಸರಾ ಸಮಯ... ಮೀನಾಕ್ಷಿ ದೇವಾಲಯ ಗಿಜಿ ಗಿಜಿಗುಡುತಿತ್ತು. ಮೀನಾಕ್ಷಿ ದೇವಿಯ ದರ್ಶನವಾಗಲಿಲ್ಲ.. ಆದರೆ ಸುಂದರೇಶ್ವರನ ದರ್ಶನ ಮಾಡಿ.. ನಮ್ಮ ಅರ್ಜಿಯನ್ನು ನಿನ್ನ ಮಡದಿಗೂ ತಲುಪಿಸಿಬಿಡಪ್ಪಾ ಎಂದು ಕೋರಿಕೊಂಡು.. ಅಲ್ಲೇ ಸ್ವಲ್ಪ ಹೊತ್ತು ಧ್ಯಾನ ಮತ್ತು ಕ್ಯಾಮೆರಾಗೆ ಸ್ವಲ್ಪ ಕೆಲಸ ಕೊಟ್ಟೆ.. 

ಮಧ್ಯಾನ್ಹ ಊಟ ಮಾಡಿ.. ಸ್ವಲ್ಪ ಹೊತ್ತು ಮಲಗಿದ್ದೆವು.. ಸಂಜೆ ಎದ್ದು ಗಾಂಧಿ ಸ್ಮಾರಕಕ್ಕೆ ಬಂದೆವು. ಗಾಂಧೀಜಿಯ ರಕ್ತ ಸಿಕ್ತ ಬಟ್ಟೆಯ ಒಂದು ತುಣುಕನ್ನು ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು.. ಅದನ್ನೆಲ್ಲ ಒಂದು ಸುತ್ತಿ ನೋಡಿ ಬಂದು.. ಅದರ ಪಕ್ಕದಲ್ಲಿಯೇ ಶ್ರೀನಿವಾಸನ ದೇವಾಲಯವಿತ್ತು, ಅಲ್ಲಿಂದ ಊರ ಹೊರಗೆ ಇನ್ನೊಂದು ಶ್ರೀನಿವಾಸನ ದೇವಾಲಯ.. ಅದು ತುಂಬಾ ಇಷ್ಟವಾಯಿತು.. 

ನಮ್ಮ ಭಕ್ತಿ ಪೂರಿತ ಅರ್ಜಿಯನ್ನು ತಲುಪಿಸಿ ಹೋಟೆಲಿಗೆ ಬಂದಾಗ ಒಂಭತ್ತಾಗಿತ್ತು. ಮಧ್ಯದಲ್ಲಿ ಊಟ ಮಾಡಲು ಹೋಟೆಲಿಗೆ ಹೋದರೆ.. ಊಟ ಸಿಗೋಲ್ಲ ಇಡ್ಲಿ, ಪರೋಟ ಅದು ಇದು ಎಂದ. ಅನ್ನವಿಲ್ಲದೆ ರಾತ್ರಿ ಮಲಗೋದು ಕಷ್ಟ ನನಗೆ.. ಮೊಸರನ್ನ ಸಿಕ್ಕರೂ ಸರಿ ಅಂತ ಪರೋಟ ಜೊತೆಯಲ್ಲಿ ತಿಂದು.. ಬೆಚ್ಚನೆ ಮಲಗಿದೆವು. 

ಮರುದಿನ.. ಮಿನಿ ಬಸ್ ರಾಮೇಶ್ವರಕ್ಕೆ ಹೋರಡಲು ಸಿದ್ಧವಾಗಿತ್ತು.. ಚಿಕ್ಕ ಗಾಡಿ, ಪುಟ್ಟ ಸೀಟ್.. ಕಷ್ಟವಾಗಿತ್ತು.. ಆದರೆ ಪ್ರಯಾಣ / ಪ್ರವಾಸ ಎಂದರೆ ಅನುಕೂಲತೆಗಳನ್ನು ಹೊರಗೆ ಬಿಸಾಕಿ ಪ್ರವಾಸಕ್ಕೆ ಹೋಗ ಬೇಕು ಎನ್ನುವ ನೀತಿ ತಿಳಿದಿತ್ತು.. ಆದ್ದರಿಂದ "ತೊಂದರೆ" ತೊಂದರೆಯಾಗಿರಲಿಲ್ಲ. 



ರಸ್ತೆಗಳು ಕರ್ರಗೆ.. ಮತ್ತು ಅದರ ಮಧ್ಯದಲ್ಲಿ ಬಿಳಿ ಪಟ್ಟೆಗಳು ಸುಂದರವಾಗಿ ಕಾಣುತ್ತಿದ್ದವು. ೧೮೦ ಕಿಮಿಗಳು ರಿವ್ವನೆ ಹಾರಿ ಹೋಗುತ್ತಿತ್ತು. ಕಡಲ ತಡಿಯ ಗಾಳಿ.. ಸಮುದ್ರದ ಮಟ್ಟ ೦ ಅಡಿ ಈ ಫಲಕ ನೋಡುವುದೇ ಒಂದು ಖುಷಿ. ಕಾರಣ ಬೆಟ್ಟ ಗುಡ್ಡಗಳನ್ನು ಹತ್ತಿ ನಿಂತಾಗ ನೀವೀಗ ಸಮುದ್ರಮಟ್ಟದಿಂದ ಇಷ್ಟು ಅಡಿ ಮೇಲಿದ್ದೀರಾ ಎಂಬ ಫಲಕ ನೋಡಿ ನೋಡಿ ಬೇಜಾರಾಗಿತ್ತು :-)
ಪಾಂಬನ್ ಸೇತುವೆ ನೋಡಿ ಎಂದು ಗೈಡ್ ಕಿರುಚಿದ.. ಸಮುದ್ರ ತೀರದ ಗಾಳಿಗೆ ಒಂದು ಚೂರು ಹತ್ತಿದ್ದ ನಿದ್ದೆ ಮತ್ತೆ ಹಾರಿ ಹೋಯಿತು. 
" ... ತಮಿಳಾ .. ?"
ನನ್ನ ಬಣ್ಣ ನೋಡಿ ಈ ಪ್ರಶ್ನೆ ಕೇಳಿದ್ದ. 
ಎದೆ ತಟ್ಟಿಕೊಂಡು ಹೇಳಿದೆ "... ಕನ್ನಡ... "

"ಬನ್ನಿ ಸರ್.. ನಿಮಗಿಲ್ಲಿ ೨೨ ಬಾವಿಗಳಲ್ಲಿ ಸ್ನಾನ ಮಾಡಿಸುತ್ತೇನೆ.. ರಾಮೇಶ್ವರ ದೇವರ ಪ್ರಸಾದ.. ಇವಿಷ್ಟು ಸೇರಿ ಇಷ್ಟು ದುಡ್ಡು".. 
ಚೌಕಾಸಿ ಮಾಡಲಿಲ್ಲ.. ದುಡ್ಡು ತೆಗೆದೇ.. 

"ಈಗ ಬೇಡ ಪೂರ್ತಿ ಮುಗಿದ ಮೇಲೆ ತೆಗೆದುಕೊಳ್ಳುತ್ತೇನೆ'
"ಮಗುವಿಗೆ ಬಾವಿ ನೀರು ಹಾಕಬೇಕು" ಎಂದೇ.. 
"ಹೌದು ಸರ್.. ಮಗುವಿಗೆ ವಿಶೇಷ ಆಶೀರ್ವಾದ ಬೇಕು.. ಖಂಡಿತ ನಾ ನೋಡಿಕೊಳ್ಳುತ್ತೇನೆ.. " 

ತಲೆ ಅಲ್ಲಾಡಿಸಿದೆವು.. 

ಆವಾ ಹೇಳುತ್ತಿದ್ದ ಮಾಹಿತಿಗಳು ಇಷ್ಟವಾಗುತ್ತಿದ್ದವು.. 

"ಸರ್ ಪ್ರತಿ ಬಾವಿಯ ಹತ್ತಿರ ಕೆಳಗೆ ಕೂತುಕೊಳ್ಳಿ.. ಮೊದಲು ನಾ ಸ್ವಲ್ಪ ನೀರು ಕೊಡುತ್ತೇನೆ ಅದನ್ನು ಕುಡಿಯಿರಿ.. ರುಚಿ ನೋಡಿರಿ ಆಮೇಲೆ ನೀರು ನಿಮ್ಮ ಮೇಲೆ ಸರಿಯಾಗಿ ಬರುವ ಹಾಗೆ ಬಕೆಟ್ ನಲ್ಲಿ ಹಾಕುತ್ತೀನಿ"
ಹೇಳಿದ ಹಾಗೆ ಮಾಡಿದೆವು.. 
ಮಗುವಿಗೆ "ಚಿನ್ನ ಪಾಪ ಚಿನ್ನ ಪಾಪ" ಅಂತ ಒಂದೆರೆಡು ಬಕೆಟ್ ಹೆಚ್ಚಿಗೆ ನೀರು ಹಾಕಿದ.. 
ಮೊದಲಿಗೆ ಅಳುತ್ತಿದ್ದ ಮಗಳು .. ನಂತರ ಅದರ ಸುಖ ಅನುಭವಿಸತೊಡಗಿದಳು.. ಅಪ್ಪ ಅಪ್ಪ ನಂಗೂ ನಂಗೂ ಅಂತ ನಮ್ಮ ಮೇಲೆ ಬಕೆಟ್ ನಲ್ಲಿ ನೀರು ಹಾಕುತ್ತಿದ್ದಾಗ.. ನಮ್ಮ ಜೊತೆಯಲ್ಲಿ ಅವಳು ನುಗ್ಗುತ್ತಿದ್ದಳು.. 

ಅದ್ಭುತ ಪ್ರಕೃತಿ ಸೃಷ್ಠಿ. .. ಸಮುದ್ರ ಮಟ್ಟದಲ್ಲಿ ಇದ್ದ ನೆಲದಿಂದ ಬಾವಿಯ ನೀರು ಒಂದೊಂದು ಬಗೆಯ ರುಚಿ.. ಒಂದು ಕಡು ಉಪ್ಪು, ಇನ್ನೊಂದು ತುಸು ಉಪ್ಪು, ರುಚಿಯಿಲ್ಲದ ನೀರು.. ಸಿಹಿ, ಹಿಮದ ನೀರಿನಂತೆ ತಣ್ಣಗೆ.. ಹೀಗೆ ಒಂದೇ ಅಂಗಣದಲ್ಲಿ ತುಸುವೇ ಅಡಿಗಳ ಅಂತರದಲ್ಲಿ ಇರುವ ಬಾಯಿಯಲ್ಲಿ ಬಗೆ ಬಗೆಯ ಸ್ವಾದದ ನೀರು.. ದೈವನ ಲೀಲೆಯೇ ಲೀಲೆ. 

ರಾಮೇಶ್ವರನ ದರ್ಶನಕ್ಕೆ ಬರುವ ಮುನ್ನ.. ಒಂದು ಛಾವಣಿಯಲ್ಲಿರುವ ಬಸವನ ಚಿತ್ರವನ್ನು ತೋರಿಸಿದರು. ನೀವು ಎಲ್ಲಿಂದಲೇ ನೋಡಿದರು ಆ ಬಸವ ನಿಮ್ಮನ್ನೇ ನೋಡುತ್ತಿರುತ್ತದೆ, ಹೌದು ನಿಜವಾಗಿಯೂ ಅದು ಹಾಗೆ ಇತ್ತು. ಛಾಯಾಚಿತ್ರಣ ನಿಷೇಧ ಇದ್ದದರಿಂದ ಚಿತ್ರಣ ಮಾಡಲಿಲ್ಲ. 

ಸಾಲು ಸಾಲು ಕಂಬಗಳ ಹಜಾರಕ್ಕೆ ಬಂದೆವು .. "ಸರ್ ತಮಿಳು ನಟಿ ರೇವತಿಯವರ ಒಂದು ಚಿತ್ರದ ನೃತ್ಯದ ಚಿತ್ರೀಕರಣ ಇಲ್ಲೇ ನೆಡೆದಿದ್ದು.. " ಅದ್ಭುತ ಸಾಲು ಸಾಲು ಕಂಭಗಳ ಆ ದೃಶ್ಯವನ್ನು ನೋಡುವುದೇ ಒಂದು ಅನುಭವ.. ದಕ್ಷಿಣ ಭಾರತದ ದೇವಾಲಯಗಳ ವಾಸ್ತು ಶಿಲ್ಪಿ ಅದ್ಭುತ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಇದು. 

ರಾಮೇಶ್ವರನ ದರ್ಶನ ಮಾಡಿ... ಪ್ರಸಾದ ತೆಗೆದುಕೊಂಡು.. ಆ ಗೈಡ್ ಗೆ ಸಲ್ಲಬೇಕಿದ್ದ ಸಂಭಾವನೆ ಮತ್ತು ತುಸು ಹೆಚ್ಚಿಗೆ ಇನ್ನೊಂದು ನೂರು ಸೇರಿಸಿ ಕೊಟ್ಟೆ.. ಅವನು ಕುಶ್ ನಾವು ಕುಶ್.... 

ಮನಸ್ಸು ಹಾರಾಡುತ್ತಿತ್ತು.. ಶ್ರೀ ರಾಮ ಮತ್ತು ಸೇನೆ ನೆಡೆದಾಡಿದ್ದ ಜಾಗವಿದು. ರಾಮ ಸೇತುವೆ ಕಟ್ಟಿದ ತಾಣವಿದು.. ಆದರೆ ಸಮಯದ ಅಭಾವವಿದ್ದ ಕಾರಣ ಧನುಷ್ಕೋಟಿ .. ರಾಮ ಸೇತುವೆ ಶುರು ಮಾಡಿದ್ದ ತಾಣಕ್ಕೆ ಹೋಗಲು ಆಗಲಿಲ್ಲ. ಹನುಮಂತ ಸಾಗೋರೋಲ್ಲಂಘನ ಮಾಡಲು ವಿಶ್ರಮಿಸಿದ್ದ ತಾಣ ಎಂದು ಒಂದು ದೇಗುಲವನ್ನು ತೋರಿಸಿದರು. ನಮ್ಮ ನಮನಗಳನ್ನು ಸಲ್ಲಿಸಿ ಒಂದೆರಡು ಚಿತ್ರಗಳನ್ನು ತೆಗೆದು ಹೊರಟೆವು. 

ರಾಮ ಸೇತುವೆ ಕಟ್ಟುವಾಗ ಕಲ್ಲಿನ ಬಂಡೆಗಳು ನೀರಲ್ಲಿ ಮುಳುಗುವುದಿಲ್ಲ ಎಂದು ಪುರಾಣದ ಕಥೆಯಲ್ಲಿ ಕೇಳಿದ್ದೆವು. ಅದನ್ನು ಕಣ್ಣಾರೆ ನೋಡುವ ಅವಕಾಶ. ಲಕ್ಷ್ಮಣನ ದೇವಸ್ಥಾನದಲ್ಲಿ ಕಲ್ಲುಗಳನ್ನು, ಬಂಡೆಗಳನ್ನು ನೀರಿನಲ್ಲಿ ಮುಳುಗಿಸಿದ್ದರು, ನಾವೇ ಕೈಯಾರೆ ಅದನ್ನು ಒಳಗೆ ಮುಳುಗಿಸಿನೋಡಿದೆವು ಮರುಕ್ಷಣವೇ ನೀರಿನಿಂದ ಮೇಲಕ್ಕೆ ಎದ್ದು ಬರುತ್ತಿತ್ತು ಹಠ ಮಾಡುವ ಮಗುವಿನ ತರಹ.. :-)

ರಾಮೇಶ್ವರಂ ಗೆ ಒಂದು ನಮನ ಸಲ್ಲಿಸಿ ಹೊರಟೆವು.. ನನ್ನ ಬಾಲ್ಯದ ಕನಸಿನ ತಾಣಕ್ಕೆ.. 

ಪುಟ್ಟ ಬಸ್.. ತಣ್ಣಗೆ ಬೀಸುತ್ತಿದ್ದ ಗಾಳಿ.. ಸೊಗಸಾದ ಊಟ ಮಾಡಿದ್ದ ದೇಹ.. ಸಣ್ಣಗೆ ನಿದ್ದೆಗೆ ಜಾರಿದೆವು.. ಬೆಳಗಿನ ಜಾವ ಸುಮಾರು ಮೂರು ಘಂಟೆ ಇರಬಹುದು.. ಅಚಾನಕ್ ಎಚ್ಚರವಾಯಿತು.. ಕಣ್ಣು ಬಿಟ್ಟು ನೋಡಿದೆ.. ಹುಣ್ಣಿಮೆ ಚಂದಿರ ಭುವಿಯನ್ನು ಬೆಳಗುತ್ತಿದ್ದ.. ರಸ್ತೆಯ ಎರಡು ಬದಿಯಲ್ಲಿ ಕಣ್ಣಿನ ನೋಟ ಹೋದಷ್ಟು ದೂರ ಗಾಳಿ ಪಂಕಗಳು ಕಾಣುತ್ತಿದ್ದವು. ಬೆಂಗಳೂರಿನಿಂದ ಹೊರಗೆ ಹೋದರೆ.. ಅಲ್ಲೊಂದು ಇಲ್ಲೊಂದು ಕಾಣುವ ಈ ಪಂಕಗಳು ಇಲ್ಲಿ ಎಣಿಸಲಾರದಷ್ಟು ಇದ್ದವು.. ಅದನ್ನೇ ನೋಡುತ್ತಾ ಕಣ್ಣುಗಳು ಭಾರವಾಯಿತು.. ಮತ್ತೆ ಯಾವಾಗೋ ನಿದ್ದೆ ಹತ್ತಿತ್ತು.. 


ಬಸ್ ಗಕ್ಕನೆ ನಿಂತಿತು.. ಚಳಿಗಾಳಿ ರಪ್ಪನೆ ಮುಖಕ್ಕೆ ರಾಚಿತು.. ತುಸು ಬೆಳಕು ತುಸು ಕತ್ತಲೆ.. ನನ್ನ ಹೃದಯವನ್ನು ಮುಟ್ಟಿ ನೋಡಿಕೊಂಡೆ.. ೭೨ಕ್ಕಿಂತ ಜಾಸ್ತಿ ಇತ್ತು.. ಆಗ ಅರಿವಾಯಿತು.. ನನ್ನ ಕನಸು ನನಸಾಗುತ್ತಿದೆ.. ಬಸ್ಸಿನವ ಹೇಳಿದ.. ನಿಮ್ಮ ಹೋಟೆಲ್ ಕೋಣೆಗೆ ಹೋಗಿ ಬೇಗ ಬೇಗ ಸ್ನಾನ ಮಾಡಿ.. ಸೂರ್ಯ ಉದಯಿಸುತ್ತಾನೆ.. ಅಲ್ಲಿಗೆ ಹೋಗಿ ನೋಡಬೇಕು.. 

ನನ್ನ ಜೀವನದ ಮೊದಲ ಕಡಲತಡಿಯ ಸೂರ್ಯೋದಯದ ದೃಶ್ಯ ಕಣ್ಣು ತುಂಬಿಕೊಳ್ಳಲು ಮನಸ್ಸು ಮತ್ತು ಕ್ಯಾಮೆರಾ ಕಾಯುತ್ತಿತ್ತು. ನನ್ನ ಮಗಳು ಕೂಡ ಆ ಪುಟ್ಟ ವಯಸ್ಸಿಗೆ ನನ್ನ ಭಾವನೆ ಅರ್ಥವಾಗಿತ್ತೋ ಏನೋ.. ಹಠ ಮಾಡದೆ ಬೇಗನೆ ಸ್ನಾನ ಮಾಡಿ ಸಿದ್ಧವಾಯಿತು. 


ಎಲ್ಲರೂ.. ಕಡಲ ತೀರಕ್ಕೆ ಬಂದಾಗ.. ಭಾಸ್ಕರ.. ಭಾರತ ಭೂಶಿರವನ್ನು ಬೆಳಗಲು... ಕನ್ಯಾಕುಮಾರಿ ತಾಯಿಯ ನತ್ತನ್ನು ಇನ್ನಷ್ಟು ಫಳ ಫಳ ಹೊಳೆಯುವಂತೆ ಮಾಡಲು ಸಿದ್ಧನಾಗುತ್ತಿದ್ದ.  ಆಗ ನನ್ನ ಹತ್ತಿರ ಇದ್ದದ್ದು ರೀಲ್ ಕ್ಯಾಮೆರಾ. ಅಲ್ಲಿಗೆ ಸುಮಾರು ಮಂದಿ ಡಿಜಿಟಲ್ ಕ್ಯಾಮೆರಾ ತಗೊಂಡು ತಾವು ತೆಗೆದಿದ್ದ ಚಿತ್ರವನ್ನು ಅಲ್ಲಿಯೇ ನೋಡುತ್ತಿದ್ದರು.. ಆಗಲೇ ನನ್ನ ಮನದಲ್ಲಿ ಹುಟ್ಟಿದ ಆಸೆ. .ನನ್ನ ಹತ್ತಿರವೂ ಡಿಜಿಟಲ್ ಕ್ಯಾಮೆರಾ ಬೇಕು.. ಮುಂದಿನ ದಸರೆಗೆ ನನ್ನ ಹತ್ತಿರ ಆ ಡಿಜಿಟಲ್ ಪುಟ್ಟ ಕ್ಯಾಮೆರಾ ಬಂದೆ ಬಿಟ್ಟಿತು. 

ಅದ್ಭುತ ಸೌಂದರ್ಯ ರಾಶಿ ಈ ಸೂರ್ಯೋದಯ. ಕಣ್ಣು ಮನಸ್ಸು ತುಂಬಿ ಬಂತು.. ಎದುರಿಗೆ ಕನ್ಯಾಕುಮಾರಿಯ ವಿವೇಕಾನಂದ ಧ್ಯಾನ ಮಂದಿರ.. ಅದನ್ನೇ ಅಲ್ಲವೇ ನೋಡಲು ಇಷ್ಟು ವರ್ಷಗಳು ಕಾದಿದ್ದು.. ಮನಸ್ಸಿಗೆ ಏನೋ ಆನಂದ.. 

"ಬನ್ನಿ ಬನ್ನಿ.. ಬೋಟ್ ಸಿದ್ಧವಾಗಿದೆ.. ಟಿಕೆಟ್ ಪಡೆದು ಬೋಟ್ ಹತ್ತಿ" ಸೂಚನೆ ಹಿಂದಿನಿಂದ ಬರುತ್ತಿತ್ತು.. ಬೇಗ ಬೇಗನೆ ಒಂದಷ್ಟು ಫೋಟೋ ತೆಗೆದು.. ಬಡಿಕೊಳ್ಳುತ್ತಿದ್ದ ಹೃದಯಕ್ಕೆ ಇನ್ನೊಂದು ಅರ್ಧ ಘಂಟೆ ಕಣೋ ಎಂದು ಸಮಾಧಾನ ಹೇಳುತ್ತಾ... ಬೋಟಿನೆಡೆಗೆ ಅಕ್ಷರಶಃ ಓಡಿದೆವು.. 

ಟಿಕೆಟ್ ಪಡೆದು.. ಕಡಲಿನ ಅಬ್ಬರದ ಅಲೆಗಳ ಮೇಲೆ ಹೊರಟೆ ಬಿಟ್ಟಿತು ನನಸಾಗುವತ್ತ ನನ್ನ ಬಾಲ್ಯದ ಕನಸಿನ ಸವಾರಿ... 
ಕಣ್ಣಲ್ಲಿ ಎದುರಿಗೆ ಕಾಣುತ್ತಿದ್ದ ಅದ್ಭುತ ವಿನ್ಯಾಸದ ಕನ್ಯಾಕುಮಾರಿಯ ವಿವೇಕಾನಂದ ಧ್ಯಾನಮಂದಿರ.. ಮನದಲ್ಲಿ ನನಗೆ ಬಲು ಇಷ್ಟವಾಗಿದ್ದ "ಭಾರತ ಭೂಶಿರ ಮಂದಿರ ಸುಂದರಿ" ಮಾನಸ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರ ಅದ್ಭುತ ಚಿತ್ರ "ಉಪಾಸನೆ"ಯ ಹಾಡು..

ಅಲ್ಲಿಗೆ ಕಾಲಿಟ್ಟೊಡನೆ ಏನೋ ಪುಳಕ.. ಮನಸ್ಸಿಗೆ ಹಾಯ್ ಎನ್ನಿಸುವಂತಹ ಅನುಭವ..  

ನಮ್ಮೊಡನೆ ಬರುತ್ತಿದ್ದ ಒಂದು ಕರುನಾಡಿನ ಜೋಡಿ.. "ರೀ ಇಲ್ಲೇ ಅಲ್ವೇನ್ರಿ ಆರತಿ ಹಾಡಿದ ಹಾಡು ಶೂಟಿಂಗ್ ಮಾಡಿದ್ದು" ಗಂಡ ತಲೆ ಕೆರೆದುಕೊಳ್ಳುತ್ತಿದ್ದ... "ಹೌದು ಅನ್ಸುತ್ತೆ ಕಣೆ.. ಹಾಡು ನೆನಪಿಗೆ ಬರುತ್ತಿಲ್ಲ" ಎಂದು ನನ್ನ ಮುಖ ನೋಡಿದ.. ನಾ ಸುಮ್ಮನೆ ಒಂದು ಹಲ್ಲಿನ ಪೋಸ್ ಕೊಟ್ಟೆ.. ಆ ಜೋಡಿಗೆ ಕೇಳುವಂತೆ "ಸವಿತಾ.. ಇಲ್ಲೇ ಕಣೆ.. ಭಾರತ ಭೂಶಿರ ಮಂದಿರ ಸುಂದರಿ" ಹಾಡು ಚಿತ್ರೀಕರಣವಾಗಿದ್ದು.. ನೋಡು ಅಲ್ಲಿಯೇ ಆರತಿ ವೀಣೆಯನ್ನು ಎತ್ತಿಕೊಂಡು ದೇವಸ್ಥಾನದ ಒಳಗೆ ಹೋಗುವುದು.. ಆಗಲೇ ಉಪಾಸನೆ ಅಂತ ಚಿತ್ರದ ಅಂತ್ಯ ತೋರಿಸೋದು.. ಇಲ್ಲೇ ಕಣೆ.. ಆರತಿಯ ಗುರುಗಳು ಕೂತಿದ್ದು, ಇಲ್ಲೇ ಕಣೆ ಆರತಿಯನ್ನು ಸಮಾಧಾನ ಮಾಡಲು ಎಲ್ಲರೂ ಪ್ರಯತ್ನ ಮಾಡೋದು.. " ಹೀಗೆ ಉಪಾಸನೆಯ ಅಂತಿಮ ದೃಶ್ಯವನ್ನು ಹಾಗೆ ಕಣ್ಣ ಮುಂದೆ ತಂದಿಟ್ಟಿದ್ದೆ.. 

ಆ ಜೋಡಿಗೆ ಬೇಕಾದ ಮಾಹಿತಿ ಸಿಕ್ಕಿತು.. ಹೆಂಡತಿಗೆ ತನಗೆ ಬೇಕಿದ್ದ ಮಾಹಿತಿ ಸಿಕ್ಕ ಖುಷಿ.. ಗಂಡನಿಗೆ ತನ್ನ ಮರ್ಯಾದೆ ಉಳಿಸಿದ ನನಗೆ ಒಂದು ತುಸು ನಗೆ ಬೀರಿ ಕೈ ಬೀಸಿ ದೇವಸ್ಥಾನಕ್ಕೆ ಹೊರಟರು.. ನನಗೆ ಒಂದು ಬಗೆಯ ಸಂತೋಷ.. ಅರೆ ನನಗಿಷ್ಟವಾದ ತಾಣ, ನನಗಿಷ್ಟವಾದ ಹಾಡು, ನನಗಿಷ್ಟವಾದ ಚಿತ್ರ.. ನನಗಿಷ್ಟವಾದ ನಿರ್ದೇಶಕ.. ಇದರ ಬಗ್ಗೆ ಯಾರಿಗಾದರೂ ಹೇಳಬೇಕೆಂದರೆ.. .. :-) 

ಒಂದು ಚೂರು ಜಾಗ ಬಿಡದ ಹಾಗೆ.. ಎಲ್ಲವನ್ನು ನೋಡುತ್ತಾ ಬಂದೆ.. ಕಣ್ಣ್ ಮನಸ್ಸು ತಣಿಯುತ್ತಲೇ ಇಲ್ಲ.. ಧ್ಯಾನಮಂದಿರಕ್ಕೆ ಹೋಗಿ ಸ್ವಲ್ಪ ಹೊತ್ತು ಧ್ಯಾನ ಮಾಡಿದೆ.. ಹೊರಕ್ಕೆ ಬಂದರೆ ಕಡಲಿನ ಅಲೆಗಳ ಅಬ್ಬರ.. ಆದರೆ ಆ ಧ್ಯಾನಮಂದಿರಲದಲ್ಲಿ ನಮ್ಮ ಎದೆ ಬಡಿತವೇ ನಮಗೆ ಕೇಳುಸುತ್ತೇನೋ ಅನ್ನಿಸುವಷ್ಟು ನಿಶ್ಯಬ್ಧ.. 

ಇಷ್ಟವಿಲ್ಲದೆ ಹೋದರು.. ಬೆಂಗಳೂರಿಗೆ ಬರಲೇಬೇಕಿತ್ತು.. ಜೊತೆಗೆ ಮುಂದಿನ ಕಾರ್ಯಕ್ರಮದ ಪ್ರಕಾರ ಸುಚಿಂದ್ರಂ ದೇವಸ್ಥಾನಕ್ಕೆ ಭೇಟಿ.. 

ಆಗಾಧವಾಗಿದ್ದ ಹನುಮಂತನ ಮೂರ್ತಿ ಅಬ್ಬಬ್ಬಾ ಎನ್ನಿಸುತ್ತಿತ್ತು.. ಆ ದೇವಾಲಯದ ವಿನ್ಯಾಸವೂ ಸುಂದರವಾಗಿತ್ತು. ತಮಿಳ್, ಮಲಯಾಳಂ, ಹಿಂದಿ, ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಆ ದೇವಾಲಯದ ವಿಶೇಷಗಳನ್ನು ಹೇಳುತ್ತಿದ್ದದು ವಿಶೇಷವಾಗಿತ್ತು. ನವಗ್ರಹಗಳು ಛಾವಣಿಯಲ್ಲಿ ನೆಲೆ ನಿಂತದ್ದು ವಿಶೇಷ ಇಲ್ಲಿ.  

ಸುಂದರ ದೇವಾಲಯಕ್ಕೆ ನಮಸ್ಕಾರ ಸಲ್ಲಿಸಿ.. ನಮ್ಮ ಹರಕೆಗಳನ್ನು ಕಾಣಿಕೆಗಳನ್ನು ಸಲ್ಲಿಸಿ.. ಬೇಡವೆಂದರೂ.. ವಿಧಿಯಿಲ್ಲದೇ ಬೆಂಗಳೂರಿನ ಕಡೆಗೆ ಪಯಣ ನೆಡೆಸಿತ್ತು. 

ಈ ಪ್ರವಾಸಕ್ಕೆ ಸುಮಾರು ಹತ್ತು ವರ್ಷಗಳ ಇತಿಹಾಸವಿದೆ.. ನನ್ನ ಸ್ನೇಹಿತೆ ಕಂ ಮಗಳು ಶೀತಲ್ ಹುಟ್ಟಿದ ದಿನವಿದು... ಇಡೀ ಪ್ರವಾಸದಲ್ಲಿ ಆ ಬಿರು ಬಿಸಿಲು.. ನಮ್ಮ ತೊಡೆಯ ಮೇಲೆ ನಿದ್ದೆ.. ಚಿಕ್ಕ ಜಾಗ.. ಕಿರಿ ಎನ್ನಿಸುವ ಕ್ಷಾರಸಹಿತ ಗಾಳಿ.. ಇಷ್ಟಿದ್ದರೂ.. ಒಮ್ಮೆಯೂ ತರಲೆ ಮಾಡದೆ ನಮ್ಮ ಜೊತೆಯಲ್ಲಿಯೇ ಆಕೆಯು ಈ ಪ್ರವಾಸವನ್ನು ಅನುಭವಿಸಿದ್ದು ಖುಷಿಯಾಯಿತು. ಇಂದಿಗೂ ಉಪಾಸನೆ ಹಾಡು ಟಿವಿಯಲ್ಲಿ ಬಂದಾಗ.. ನಾ ಒಮ್ಮೆ ಅವಳ ಕಡೆ ನೋಡುತ್ತೇನೆ.. ಅವಳು ಒಂದಷ್ಟು ಹಲ್ಲು ಬಿಡುತ್ತಾಳೆ.. 

ಹುಟ್ಟಿದ ಹಬ್ಬಕ್ಕೆ ಈ ಉಡುಗೊರೆ ನಿನಗಾಗಿ ತಂದಿದ್ದೇನೆ ನೆನಪಿನ ಪಲ್ಲಕ್ಕಿಯಲ್ಲಿ.. !!!
****

"ಶಭಾಷ್ ಗುರು.. ಬೆಂಕಿಗೆ ಸ್ವಲ್ಪ ತಿದಿ ಒತ್ತಿದರೆ.. ಶಾಖ ಹೆಚ್ಚುತ್ತದೆ.. ಹಾಗೆ ನಿನಗೆ ಸ್ವಲ್ಪ ಕೆಣಕಿದರೆ.. ಹಹಹಹಹಾ.. "

"ತುಂಬಾ ಥ್ಯಾಂಕ್ಸ್ ಗುರು.. ಮತ್ತೆ ಈ ಅಂಕಣವನ್ನು ಖಾಲಿ ಬಿಡೋಲ್ಲ.. ಅವಾಗವಾಗ ತುಂಬುತ್ತಲೇ ಇರುತ್ತೇನೆ.. ಬೇಸರ ಮಾಡಿಕೊಳ್ಳಬೇಡ" 

ಇರಲಿ ಬಿಡು ಶ್ರೀ .. ಅಣ್ಣಾವ್ರು ಹೇಳಿಲ್ವಾ "ನಾನು ನೀನು ನೆಂಟರಯ್ಯ.. ನಮಗೆ ಭೇದ ಇಲ್ಲವಯ್ಯಾ.. "

"ಸ್ನೇಹ ಎಂದರೆ ಇದೆ ಅಲ್ಲವೇ.. "

"ನನ್ನ ಕಡೆಯಿಂದಲೂ ನಿನ್ನ ಮಗಳಿಗೆ.. ಜನುಮದಿನದ ಶುಭಾಶಯಗಳನ್ನು ತಲುಪಿಸು ಶ್ರೀ"

ಟ್ರಿಪ್ಪಿಂಗ್ ಲೈಫ್ ಬ್ಲಾಗ್ ಲಿಂಕ್ ನೋಡಿದೆ.. ನಗು ನಗುತ್ತಾ ಹಸಿರಾಗಿತ್ತು... !

Monday, March 28, 2016

ಶ್ರೀ ವೆಂಕಟೇಶಾಯ ಮಂಗಳಂ!!! -

ಯಾರು ಯಾರು ನಮ್ಮ ಜೀವನದಲ್ಲಿ  ಹೆಜ್ಜೆ ಮೂಡಿಸುತ್ತಾರೆ ಮತ್ತು ಆ ಹೆಜ್ಜೆ ಗುರುತುಗಳಿಗೆ ಹೇಗೆ ಜೊತೆಯಾಗುತ್ತಾರೆ ಎನ್ನುವುದು  ಖಂಡಿತ ಒಂದು ಯಕ್ಷ ಪ್ರಶ್ನೆ.

ಈ ಪ್ರಶ್ನೆ ಮನದಲ್ಲಿ ಮೂಡಿದ್ದು ಬಹಳ ಬಹಳ ಹಿಂದೆ.. !

೧೯೮೪ ನೆ ಜೂನ್ ಮಾಸದಿಂದ ಜೊತೆ ಜೊತೆಯಾಗಿ ಓದಿ, ನಂತರ ಜೀವನದ ಕವಲು ದಾರಿ ಬೇರೆ ಬೇರೆಯಾದರೂ, ನಮ್ಮಲ್ಲಿದ್ದ ಸ್ನೇಹ ಎಂಬ ಹಡಗಿಗೆ ಹುಟ್ಟು ಹಾಕುತ್ತಲೇ ಇದ್ದದ್ದು ನಮ್ಮ ಗೆಳೆತನದ ಅಯಸ್ಕಾಂತ.

ನಾವು ಮಾಡಿದ ಸಾಹಸಗಳು ಅನೇಕ ಅನೇಕ.. ಲೆಕ್ಕವೇ ಇಲ್ಲ. ಅಂಥಹ ಒಂದು ಅದ್ಭುತ ಎನ್ನಿಸದಿದ್ದರೂ, ಬೇಸತ್ತ ಮನಸ್ಸಿಗೆ, ಕಾರ್ಯ ಕ್ಷೇತ್ರದ ದುಡಿಮೆಯಿಂದ ಕೊಂಚ ವಿರಾಮ ಬೇಕೆನಿಸಿದ್ದ ಮನಸ್ಸಿಗೆ ತಂಗಾಳಿಯಂತೆ ಬಂದು ಬೀಸಿದ್ದು ನಮ್ಮೆಲ್ಲರ ಇಷ್ಟ ದೈವ ತಿರುಪತಿ ವೆಂಕಟೇಶ್ವರನ ಆವಾಸ ತಾಣಕ್ಕೆ ಭೇಟಿ.

ಇದೊಂದು ಅಚಾನಕ್ ನಿರ್ಧಾರ. ಆದರೆ ನಮ್ಮ ಗೆಳೆತನದ ತಂಡದಲ್ಲಿ ಎಲ್ಲಾ ನಿರ್ಧಾರಗಳು ಅಚ್ಚರಿ ತರುವಂತಹವೇ. ಒಂದು ವಾರದ ಹಿಂದೆ ನಿಗದಿಯಾದ ಕಾರ್ಯಕ್ರಮ. ನಡೀರಲೇ ತಿರುಪತಿಗೆ ಹೋಗೋಣ. ಅಷ್ಟೇ!!!!

ಶುಕ್ರವಾರ ೨೫ನೆ ತಾರೀಕು ಹೊರಟೆ ಬಿಟ್ಟೆವು. ರಾತ್ರಿ ಹತ್ತು ಘಂಟೆಗೆ ದಾರಿಯ ಹೋಟೆಲ್ ಒಂದರಲ್ಲಿ ಊಟ ಮಾಡಿ ಹೊರಟ ದೇಹಕ್ಕೆ ಬೇಕಿದ್ದು ವಿಶ್ರಾಂತಿ, ಆದರೆ ಮನಸ್ಸಿಗೆ ಬೇಕಾಗಿದ್ದು ಮಾತು ಮಾತು, ಮನಸ್ಸೇ ಮರೆಸುವಂಥಹ ಮಾತು.

ಮಂಜಿಗಿಂತ ತಣ್ಣಗಿನ ವ್ಯಕ್ತಿತ್ವದ ಶಶಿ, ತಾನು ಅಂದುಕೊಂಡದ್ದನ್ನು ಮಾಡುವ ಭಗೀರಥನ ಮನಸ್ಸಿನಂತಹ  ಧೃಡತೆಯು ಜೆಎಂ, ಕಲ್ಲನ್ನು ಕರಗಿಸಿ ನಗಿಸುವ ನಗೆಯ ಸರದಾರ ವೆಂಕಿ ಹಾಗೂ ಇವರ ಅದ್ಭುತ ಸ್ನೇಹ ಲೋಕದೊಳಗೆ ನಾನು.

ಅದೆಷ್ಟು ಮಾತಾಡಿದೆವೋ ಗೊತ್ತಿಲ್ಲ.. ಹಾಸ್ಯ, ಒಬ್ಬರ ಕಾಲನ್ನು ಒಬ್ಬರು ಎಳೆಯುವುದು, ೩೦ ವರ್ಷಗಳಾದರೂ ಹಂಚಿಕೊಂಡು, ಮಾತಾಡಿ ನಕ್ಕು ನಕ್ಕು ಸುಸ್ತಾಗಿದ್ದರೂ, ಅದೇ ವಿಷಯಗಳನ್ನು ಎಷ್ಟೇ ಬಾರಿ ಮಾತಾಡಿದ್ದರೂ, ಮತ್ತೆ ಮೆಲುಕು ಹಾಕಿ ಖುಷಿ ಪಡುತ್ತಿದ್ದೆವು.

ರಾತ್ರಿ ಪಯಣ ಯಾರಿಗೂ ಆಯಾಸ ಎನಿಸಲೇ ಇಲ್ಲಾ, ಕಾರಣ ಬಿಡುವಿಲ್ಲದ ಮಾತು, ಮತ್ತು ನಗು.

ವೆಂಕಟೇಶ್ವರನ ತಾಣದ ಬುಡವನ್ನು ತಲುಪಿದಾಗ ಬೆಳಗಿನ ಜಾವ ೩ ಘಂಟೆ. ಬೇಕಿದ್ದ ಪದಾರ್ಥಗಳನ್ನು ತೆಗೆದುಕೊಂಡು, ಕಾರನ್ನು ಬೆಟ್ಟದ ಬುಡದಲ್ಲಿ ನಿಲ್ಲಿಸಿ, ನಮ್ಮನ್ನು ಸುರಕ್ಷಿತವಾಗಿ ಹೊತ್ತು ತಂದ ನಮ್ಮ ಚೈತನ್ಯ ರಥದ ಬೆನ್ನಿಗೆ ಶಭಾಶ್ ಹೇಳಿ, ಬೇಗ ಬರುತ್ತೇವೆ ಎಂದು ಅದರ ಮೈ ಸವರಿ ಹೊರಟೆವು.

ಸುಮಾರು ಮೂರು ಘಂಟೆ ಪಯಣ, ಏಳು ಸುತ್ತಿನ ಬೆಟ್ಟವನ್ನು ಹತ್ತಿಯೇ ಬಿಟ್ಟೆವು. ದೇಹದಿಂದ ಬೆವರು ಸುರಿಯುತ್ತಿದ್ದರೂ, ಮನಸ್ಸು ಮಾತ್ರ ಬೆಳದಿಂಗಳ ಮಳೆಯಲ್ಲಿ ಮಿಂದ ಅನುಭವ ಪಡೆಯುತ್ತಿತ್ತು.


ಇಡಿ ಬೆಟ್ಟವನ್ನು ಹತ್ತುವಾಗ ಎಲ್ಲಿಯೂ ಬೇಸರ ಅನಿಸದೆ ನಮ್ಮನ್ನು ಕೈ ಹಿಡಿದು ನಡೆಸಿದ್ದು ದೈವ ಮತ್ತು ನಮ್ಮ ಕಲ್ಮಶವಿಲ್ಲದ ಗೆಳೆತನ.

ಬೆಟ್ಟವನ್ನು ಏರಿದ ಮೇಲೆ, ಶಶಿ ಮತ್ತು ವೆಂಕಿ ಇಬ್ಬರೂ ತಮ್ಮ ತಮ್ಮ ಹರಕೆಯ ರೂಪವಾಗಿ ತಮ್ಮ ತಮ್ಮ ಮುಡಿಯನ್ನು ನೀಡಿ ಬಂದರು. ಹಳೆಯ ಕಾಲದ ಚಿತ್ರಗಳ ಖಾಯಂ ಫೈಟರ್ "ಫೈಟರ್ ಶೆಟ್ಟಿ" ತರಹ ತಮ್ಮ ತಲೆಯನ್ನು ನುಣ್ಣಗೆ ಮಾಡಿಸಿಕೊಂಡು ಬಂದ ಇಬ್ಬರನ್ನು ನೋಡಿದಾಗ ಅನ್ನಿಸಿದ್ದು ಭೂಮಿಯಿಂದ ಕಾಣುವುದು ಒಂದೇ ಚಂದ್ರ ಅಂತ ಯಾಕೆ ಸುಳ್ಳು ಹೇಳುತ್ತಾರೆ ಎಂದು.

ಬೆಟ್ಟದ ಕೆಳಗಿನ ತಿರುಪತಿಯ ಹೋಟೆಲಿನಲ್ಲಿ ಒಂದು ಕೋಣೆ ಮುಂಗಡವಾಗಿ ಗೊತ್ತು ಪಡಿಸಿದ್ದದರಿಂದ, ಬೆಟ್ಟದ ಮೇಲಿನ ಬಸ್ಸಿನಲ್ಲಿ ಕೆಳಗೆ ಬಂದು, ಪ್ರಾತಃ ಕರ್ಮಗಳನ್ನು ಮುಗಿಸಿ ಹೊಟ್ಟೆಗೆ ಒಂದಷ್ಟು ಆಧಾರ ಮಾಡಿಕೊಂಡು ತಿಮ್ಮಪ್ಪನ ದರ್ಶನಕ್ಕೆ ಹೊರಟೆವು.

ಸುಮಾರು ೧೧.೪೫ಕ್ಕೆ ಹನುಮಂತನ ಬಾಲದಂತೆ ಇದ್ದ ಸರತಿ ಸಾಲಿನಲ್ಲಿ ನಿಂತೆವು.  ಸರಣಿ ರಜಗಳು, ಪ್ರಪಂಚದ ಎಲ್ಲಾ ಜನರನ್ನು ವೆಂಕಟರಮಣ ದರ್ಶನಕ್ಕೆ ಕಳುಹಿಸಿದ್ದಾರೆನೋ ಎನ್ನುವಂತೆ ಜನ ಸಂದಣಿ ಸೇರಿತ್ತು. ನಮಗೆಲ್ಲರಿಗೂ ಅರಿವಿತ್ತು ದರುಶನ ಒಂದೇ ದಿನದಲ್ಲಿ ಅಸಾಧ್ಯ ಎಂದು.  ಶ್ರೀನಿವಾಸನನ್ನು ನೆನೆಯುತ್ತಾ ಸರತಿಯಲ್ಲಿ ನಿಂತೆವು. ಬರೋಬ್ಬರಿ ೧೨ ತಾಸುಗಳ ನಂತರ ಶ್ರೀ ವೆಂಕಟೇಶ್ವರ ನಮಗೆ ದರ್ಶನವಿತ್ತು, ಅಭಯ ನೀಡಿದ.

ಈ ಅದ್ಭುತ ಮತ್ತು ಸುಂದರ ಯಾತ್ರೆಯಲ್ಲಿ ನಾನು ಶ್ರೀ ವೆಂಕಟೇಶ್ವರನ ಹತ್ತಿರ ಅವನದೇ ಆವಾಸ ಸ್ಥಾನದಲ್ಲಿ ಮಾತಾಡಲು
ಅವಕಾಶ ಸಿಕ್ಕಿತು. ನಮ್ಮಿಬ್ಬರ ಸಂಭಾಷಣೆ ನಿಮ್ಮ ಸನ್ನಿಧಾನಕ್ಕೆ ಲಭ್ಯ.. ಅದು ಇಂತಿವೆ.

ಮಾಮೂಲಿ ಅಕ್ಷರಗಳಲ್ಲಿ ಇರುವುದು ನನ್ನ ಮಾತುಗಳು, ದಪ್ಪನೆ ಅಕ್ಷರದಲ್ಲಿ ಇರುವುದು ನಮ್ಮೆಲ್ಲರ ಬಾಸ್ ಶ್ರೀ ವೆಂಕಟೇಶ್ವರನ ಮಾತುಗಳು.

***********************
ವೆಂಕಟೇಶ್ವರ ನಮಸ್ಕಾರ 
ನಮಸ್ಕಾರ ಶ್ರೀ , ಹೇಗಿದ್ದೀಯ 
ನಾನು ನಿನ್ನ ಆಶೀರ್ವಾದ, ಅಪ್ಪ ಅಮ್ಮನ ಹಾರೈಕೆ ಮತ್ತು ಬಂಧು ಮಿತ್ರರ ಹರಕೆಯಿಂದ ಸಂತುಷ್ಟನಾಗಿದ್ದೇನೆ. 
ಓಹೋ ಸುಂದರ ಅತಿ ಸುಂದರ 
ನನ್ನ ಕೆಲವು ಪ್ರಶ್ನೆಗಳಿಗೆನಿನ್ನಿಂದ ಉತ್ತರ ಬೇಕಿತ್ತು 
ಆಗಲಿ ಕೇಳು 
ಸುಂದರವಾದ ರಸ್ತೆಯಿದೆ, ವಾಹನಗಳ ಸೌಕರ್ಯ ಇದೆ, ಇಷ್ಟಿದ್ದರೂ ಬೆವರು ಸುರಿಸಿಕೊಂಡು, ಕೆಲವೊಮ್ಮೆ ತಮ್ಮ ತಮ್ಮ ಬಗ್ಗೆಯೇ ಬೇಸರ ಬಂದರೂ, ಅಯ್ಯೋ ಇದು ದೇವರ ಹರಕೆ ಎಂದು ಬೆಟ್ಟವನ್ನು ಏರಿ ಬರುವ ಕೆಲವು ಭಕ್ತರು, ಇನ್ನು ಕೆಲವರು ತಮ್ಮ ಹರಕೆಯನ್ನು ತೀರಿಸಲು ಬಂದರೆ, ಇನ್ನೂ ಕೆಲವರು ಅರೆ ಇಂದೊಂದು ಚಾರಣ ಅನ್ನಿಸುತ್ತದೆ, ಹೋಗಿಯೇ ಬಿಡೋಣ 
ಎನ್ನುತ್ತಾರೆ, ಇನ್ನಷ್ಟು ಮಂದಿ, ಅಯ್ಯೋ ನಮ್ಮ ಅಪ್ಪ ಅಮ್ಮ ಹರಕೆ ಮಾಡಿಕೊಂಡಿದ್ದರು, ಆದರೆ ಅವರಿಗೆ ತೀರಿಸಲು ಆಗಲಿಲ್ಲ ಹಾಗಾಗಿ ಅದರ ಋಣವನ್ನು ನಾನು ತಿರುಪತಿಗೆ ಯಾತ್ರೆ ಕೈಗೊಂಡು ತೀರಿಸುವೆನು ಎಂದು ಹೇಳುತ್ತಾ, ಬೆಟ್ಟವನ್ನು ಏರಿ ಬರುತ್ತಾರೆ. ದೇವ ನನ್ನ ಪ್ರಶ್ನೆ ಇಷ್ಟೇ "ನೀನೆ ಸೃಷ್ಟಿಸಿರುವ ಈ ಸೃಷ್ಟಿಯಲ್ಲಿ ಈ ರೀತಿಯ  ಭಿನ್ನ ಭಿನ್ನ ಆಲೋಚನೆಗಳು ಏಕೆ, ಮತ್ತು ಹೇಗೆ?
ಅಕ್ಕಿ ಒಂದೇ, ಆದರೆ ಅದರಿಂದ ತಯಾರಿಸುವ ಖಾದ್ಯ ಅನೇಕ ಬಗೆ ಅಲ್ಲವೇ, ಹಾಗೆ ಇದು ಕೂಡ!
ಆಹಾ.. ನನ್ನ ದೊಡ್ಡ ಪ್ರಶ್ನೆಗೆ ಎಂಥಹ  ಚುಟುಕಾದ ಉತ್ತರ.. .!
ಹೌದು ಶ್ರೀ, ದೊಡ್ಡ ಸಮಸ್ಯೆಗೆ ಪರಿಹಾರ ಯಾವಾಗಲೂ ಪುಟ್ಟದಾಗಿಯೇ ಇರುತ್ತದೆ!
ನಿನ್ನ ದರುಶನಕ್ಕೆ ಪ್ರಯಾಸ ಪಟ್ಟು ಬರುವ ಭಕ್ತಾದಿಗಳಿಗೆ ಆಹಾರ ಸಾಮಗ್ರಿ ನೀಡುವಾಗ, ನಾ ಗಮನಿಸಿದೆ, ತಿಂಡಿ,  ಊಟಗಳು,  ಪಾನೀಯಗಳು ಕಣ್ಣಿಗೆ ಕಾಣುವಷ್ಟು ಸನಿಹವಿದ್ದರೂ, ಕೆಲವರಿಗೆ ಲಭ್ಯವಾಯಿತು, ಇನ್ನು ಕೆಲವರಿಗೆ ಸಿಗಲೇ ಇಲ್ಲ, ಕೆಲವರಿಗೆ ಬೇಕಾದಕ್ಕಿಂತ ಹೆಚ್ಚೇ ಸಿಕ್ಕಿತು.. ಇದು ಹೇಗೆ, ಮತ್ತು ಯಾಕೆ?
ಶ್ರೀ, ನಿನ್ನ ಮೊಬೈಲ್ ನಲ್ಲಿ ಕೆಲವೊಮ್ಮೆ ನಿನಗೆ ಸಿಗುವ ಸಿಗ್ನಲ್ ತರಹ, ನೀ ಗೋಪುರದ ಹತ್ತಿರ ಇದ್ದರೆ ಚೆನ್ನಾಗಿ ಸಿಗ್ನಲ್ ಸಿಗುತ್ತದೆ, ಇಲ್ಲವಾದರೆ ಇಲ್ಲಾ. ನಿನಗೆ ಗೋಪುರ ಕಂಡರೆ ಸಾಲದು, ಸಿಗ್ನಲ್ ಸಿಗಬೇಕು..! 
ಯಪ್ಪಾ, ಎಷ್ಟು ಸುಂದರ ದೇವ ನಿನ್ನ ಉತ್ತರ... 
:-)
ದೇವ, ನಿನ್ನ ದರುಶನಕ್ಕೆ ಕಾಯುತ್ತಾ ನಿಂತಾಗ, ಎಷ್ಟೋ ಜನ ಭಕ್ತಾದಿಗಳು, ಇದೆಲ್ಲಾ ಯಾಕೆ, ಇಷ್ಟೆಲ್ಲಾ ಕಷ್ಟ ಪಟ್ಟು  ದರುಶನ ಮಾಡಬೇಕೆ, ಆ ಸಾಲಿನಲ್ಲಿ ನಿಂತಾಗ ಕಣ್ಣಾರೆ ಕಾಣುವ  ಎಷ್ಟೋ ಬೇಡದ ವಿಚಾರಗಳು, ಕೆಲವೊಮ್ಮೆ ಅಧಿಕಾರಶಾಯಿಗಳು ನಡೆಸುವ ದರ್ಪ, ಇವೆಲ್ಲಾ ನೋಡಿದಾಗ ಅರೆ ಇಷ್ಟೆಲ್ಲಾ ನಡೆಯುತ್ತೆ, ಆದರೂ ಮತ್ತೆ ಮತ್ತೆ ಜನ ನಿನ್ನ ದರುಶನಕ್ಕೆ ಬರುತ್ತಾರಲ್ಲ.. ?
ಶ್ರೀ, ದಿನಕರ ಮೇಲೆ ಏರುತ್ತಾ ಹೋದ ಹಾಗೆ ಶಾಖ ಹೆಚ್ಚು, ಪ್ರಖರತೆ ಹೆಚ್ಚು, ಆದರೆ, ಮಧ್ಯಾನ್ಹದ ಸೂರ್ಯನನ್ನು  ನೋಡುವುದಿಲ್ಲ, ಆದರೆ ಮುಂಜಾನೆಯ ಮತ್ತು ಸಂಜೆಯ ರವಿಯನ್ನು ನೋಡಲು ಜನ ಹಾತೊರೆಯುತ್ತಾರೆ. ಅರ್ಥವಾಯಿತೇ ಹಾಗೆ ತಮಗೆ ಯಾವುದು ಬೇಕೋ ಅದನ್ನು ಮಾತ್ರ ನನ್ನ ಭಕ್ತಾದಿಗಳು ನೋಡಲು ಬರುತ್ತಾರೆ. 
ಸವಾಲಿಗೆ ಒಂದು ಜವಾಬು.. ! 
ಶ್ರೀ.. ನಾ ಒಂದು ಪ್ರಶ್ನೆ ಕೇಳುತ್ತೇನೆ.. ಉತ್ತರ ನೀಡುವೆಯ... !
ಮಹಾ ಮಹಿಮಾ, ನಿನ್ನ ಪ್ರಶ್ನೆಗೆ ನಾ ಉತ್ತರ ಹೇಳುವಷ್ಟು ಯೋಗ್ಯತೆ ಇಲ್ಲಾ ನನಗೆ.. ನಿನ್ನ ಆಶೀರ್ವಾದ.. ಪ್ರಯತ್ನ ಮಾಡುತ್ತೇನೆ. 
ನೂಕು ನುಗ್ಗಲು, ಜನರ ಜಾತ್ರೆ, ಕೂಗುತ್ತಿರುವ ಸಿಬ್ಬಂಧಿ ಇವುಗಳ ಮಧ್ಯೆ ನೀ ನನ್ನನ್ನು ಕೆಲವೇ ಕ್ಷಣಗಳ ಮಟ್ಟಿಗೆ ಕಣ್ಣಲ್ಲಿ ತುಂಬಿಕೊಂಡೆ ಅದರ ಬಗ್ಗೆ ನಿನ್ನ ಅಭಿಪ್ರಾಯ ಹೇಳು.
ಸದ್ಯ, ನೀ ಪ್ರಶ್ನೆ ಕೇಳಲಿಲ್ಲ, ಬದಲಿಗೆ ಅಭಿಪ್ರಾಯ ಕೇಳುತ್ತಿರುವೆ ..! 
ಇದನ್ನು ಹೇಳು ಆಮೇಲೆ ಪ್ರಶ್ನೆ ಕೇಳುವೆ
ವೆಂಕಟ.. ಸರತಿ ಸಾಲಿನ ಕಡೆ ಮಗ್ಗಲಿಗೆ ನುಗ್ಗಿದಾಗ, ಭಕ್ತಾದಿಗಳ "ಗೋವಿಂದ ಗೋವಿಂದ" ಉದ್ಗಾರ ವಿದ್ಯುತ್ ಸಂಚಾರ ಮಾಡಿತ್ತು, ಆ ಕ್ಷಣದಲ್ಲಿ ಆಯಾಸ ಎನ್ನುವುದೇ ಅರಿವಾಗಲಿಲ್ಲ, ಜೊತೆಯಲ್ಲಿ ಹೆಜ್ಜೆ ಹೆಜ್ಜೆಗೆ ನಿನ್ನ ನಾಮಸ್ಮರಣೆ ಮಾಡುತ್ತಾ ನಾ ಆ ನೂಕು ನುಗ್ಗಲಿನಲ್ಲಿ ಹೋಗಿ ನೀ ನನ್ನ ಕಣ್ಣ ಮುಂದೆ ಕಂಡಾಗ ಇಡಿ ಆಯಾಸ ಮಾಯ. ಸುಮಾರು ಒಂದು ದಿನ ಪಟ್ಟ, ಶ್ರಮ ಆಯಾಸ, ಕೋಪ, ವ್ಯಸನ, ಪ್ರಾಪಂಚಿಕ ಸಮಸ್ಯೆಗಳು, ಎಲ್ಲವೂ ಭಾಸ್ಕರನ ಕಂಡು ಆವಿಯಾಗುವ ಮಂಜಿನ ಹನಿಯ ಹಾಗೆ ಮಾಯವಾಯಿತು. 
ಆ ಕ್ಷಣದಲ್ಲಿ ನೀ ಕಂಡ ಭವ್ಯವಾದ ದೃಶ್ಯ ನನಗೆ ಗೊತ್ತು.. ಆದರೆ ಇದನ್ನು ನಿನ್ನ ಓದುಗರಿಗೆ ಹೇಳುವೆಯ?
ಶ್ರೀ ವೆಂಕಟೇಶ್ವರ.. (ಸ್ವಲ್ಪ ಹೊತ್ತು ಮಾತಿಲ್ಲ)..... 
ದೇವ ನಿನ್ನ ದರುಶನ ಪಡೆದು ಹೊರಬಂದೆ... ದೇಹ ದಣಿದಿತ್ತು.. ನಿನ್ನ ದರುಶನದಿಂದ ಆಯಾಸ ಪ್ರವಾಸ ಕೈಗೊಂಡಿತು. ಮನಸ್ಸು ಹೂವಿನ ಹಾಗೆ ಆಗಿತ್ತು. ನನ್ನ ಸ್ನೇಹಿತರ ಜೊತೆ ದೇಗುಲದಿಂದ ಪ್ರಾಂಗಣಕ್ಕೆ ಬಂದು ಕುಳಿತೆ. ಆಗಸದ ಕಡೆ ಒಮ್ಮೆ ನೋಡಿದೆ.. ಕ್ಷಣಕಾಲ ಕಣ್ಣು ಮುಚ್ಚಿದೆ. ಮುಚ್ಚಿದ ಕಣ್ಣಿನ ಮುಂದೆ ಬಿಳಿ ಪರದೆ ಮೂಡಿತು. ಆ ಪರದೆಯಲ್ಲಿ ಒಂದು ಚೈತನ್ಯದ ಚಿಲುಮೆ ಚಿಮ್ಮುತ್ತಿತ್ತು. ಬಗೆ ಬಗೆಯಾಗಿ ಎತ್ತರ ಎತ್ತರಕ್ಕೆ ಚಿಮ್ಮುತ್ತಿತ್ತು. ಆ ಚಿಲುಮೆಯ ತುದಿಯಲ್ಲಿ ಒಂದು ಭವ್ಯವಾದ ಆಕಾರ, ನಗುಮೊಗದ ಮುದ್ದು ಮೊಗ.. ಅರೆ ಅರೆ ಇದು  ನನ್ನ ಅಪ್ಪನ ಮುಖ.. ಕಣ್ಣಿನ ಒಳಗೆ ಕಡಲು ಉಕ್ಕುತ್ತಿತ್ತು. ಕಣ್ಣಿಂದ ಆ ಕಡಲಿನ ಅಲೆಗಳು ಹೊರಬರುತ್ತಿದ್ದವು. ಸುಮಾರು ಮೂರು ನೂರು ಸೆಕೆಂಡ್ಸ್ ಹಾಗೆ ಕಣ್ಣು ಮುಚ್ಚಿ ಕೂತಿದ್ದೆ. ಮನಸ್ಸು ಮಾನಸ ಸರೋವರವಾಗಿತ್ತು. ಪ್ರಶಾಂತವಾಗಿತ್ತು.  ನಿದ್ದೆ ಇಲ್ಲದೆ ಬಾಡಿ, ಕೆಂಪಾಗಿದ್ದ ಕಣ್ಣುಗಳನ್ನು ಒಮ್ಮೆ ಮುಚ್ಚಿ ತೆಗೆದರೆ ಕಣ್ಣೊಳಗೆ ಬೆಂಕಿ ಇಟ್ಟ ಅನುಭವ ಆಗುತ್ತಿದ್ದ ಸ್ಥಿತಿಯಿಂದ ಕಣ್ಣೊಳಗೆ ಮಂಜಿನ ಪರ್ವತ ಇದ್ದ ಹಾಗೆ ತಣ್ಣಗಿನ ಅನುಭವ. 
ಧಾರಾಕಾರ ಕಣ್ಣೀರು ಹರಿದ ಮೇಲೆ, ಕರಗಳಿಂದ ಕಣ್ಣೀರನ್ನು ಒರೆಸಿಕೊಂಡೆ, ಸ್ನೇಹಿತರಿಗೆ ಕಾಣದ ಹಾಗೆ ಕಣ್ಣನ್ನು ಒರೆಸಿಕೊಂಡು ಮತ್ತೆ ಕೂತಾಗ ಒಂದು ಅದ್ಭುತ ಅನುಭವ ನನ್ನ ಮನದಲ್ಲಿ. ಕೈ ಎತ್ತಿ ಪ್ರಾರ್ಥಿಸಿದೆ.. 
"ದೇವ ನಾ ಪ್ರೀತಿ ಮಾಡುವ ಜನಗಳು, ಮತ್ತು ನನ್ನನ್ನು ಪ್ರೀತಿ ಮಾಡುವ ಜನಗಳು ಸದಾ ಸುಖವಾಗಿರಲಿ. ನನ್ನನ್ನು ಇಷ್ಟ ಪಡುವ ಬಂಧು ಮಿತ್ರರ ಅಭಿಮಾನದ ಸರೋವರದಲ್ಲಿ ಮೀಯುತ್ತಿರುವ ನನಗೆ ಅಹಂ ಎನ್ನುವ ಕೂಪಕ್ಕೆ ಎಂದೂ ನಾ ಬೀಳದಿರುವ ಹಾಗೆ ನೋಡಿ ಕೊಳ್ಳುವ ಹೊಣೆ ನಿನ್ನದು.  
ಶ್ರೀ ಶ್ರೀ ಶ್ರೀ.. ಇದು ಕಣೋ ಮಾತು ಎಂದರೆ. ತುಂಬಾ ತುಂಬಾ ಖುಷಿ ಆಯಿತು. ನೀ ಏನೂ ಕೇಳುವುದೇ ಬೇಡ, ನಿನಗೆ ಅಂತ ನಾ ಕೊಟ್ಟಿರುವ ಮಿತ್ರರು (ಫೇಸ್ಬುಕ್, ವ್ಹಾಟ್ಸಪ್, ಬ್ಲಾಗ್) ಸದಾ ನಿನ್ನ ನೆರಳಾಗಿ ಜೊತೆಯಾಗಿರುತ್ತಾರೆ. ಅವರಿಂದ ನೀನು, ನಿನ್ನಿಂದ ಅವರು ಸದಾ ಖುಷಿಯಾಗಿರುತ್ತಾರೆ.. ಶುಭವಾಗಲಿ, ಮತ್ತು ನಿನ್ನ ಕೆಲವು ಅಚಲ ನಿರ್ಧಾರಕ್ಕೆ ನನ್ನ ಅನುಗ್ರಹ ಇದೆ. ಕೈ ತೆಗೆದುಕೊಂಡಿರುವ ಸಾಹಸವನ್ನು ಖಂಡಿತ ಇಡೇರಿಸುವ ಧೈರ್ಯ, ಸ್ಫೂರ್ತಿ, ಶಕ್ತಿ ನಿನಗೆ ಕರುಣಿಸಿದ್ದೇನೆ... ಶುಭವಾಗಲಿ 
******************
"ನಿನ್ನ ಮೊಬೈಲ್ ಅಲರಾಂ ಸದ್ದನ್ನು ನಿಲ್ಲಿಸು"

ಕಣ್ಣು ಬಿಟ್ಟೆ, ದೇವಾಲಯದಲ್ಲಿ ಕಂಡು ಅನುಭವಿಸಿದ ಘಟನೆಗಳೆಲ್ಲ ಹಾಗೆ ಮತ್ತೊಮ್ಮೆ ಕನಸ್ಸಲ್ಲಿ ಮೂಡಿ ಬಂದಿತ್ತು. ಶಶಿಯ ಮಾತುಗಳು ಎಚ್ಚರ ಗೊಳಿಸಿದವು. ನಂತರ ಪಟ ಪಟ ಎಂದು ಒಬ್ಬೊಬ್ಬರಾಗಿ ಸ್ನಾನ ಮುಗಿಸಿ, ಬೆಳಗಿನ ಉಪಹಾರ ಮುಗಿಸಿ ಬೆಂಗಳೂರಿನ ಹಾದಿ ಹಿಡಿದೆವು. 


ಇಡಿ ಪ್ರವಾಸದ ಅತ್ಯುತ್ತಮ ಅಂಶಗಳು
೧) ಬಹಳ ವರ್ಷಗಳ ನಂತರ, ನಾವು ನಾಲ್ಕು ಜನ ಮಸ್ತ್ ಪ್ರಯಾಣ ಮಾಡಿದ್ದು
೨)  ಮಾತು ಮಾತು ಮಾತು..
೩) ವೆಂಕಿಯ ಅದ್ಭುತ ವಾಹನ ಚಾಲನೆ.. ರಾತ್ರಿ ನಿದ್ದೆಗೆಟ್ಟು ಕಾರು ಚಲಾಯಿಸಿದ್ದು, ಮತ್ತೆ ದೇಹ ಶ್ರಮ, ಮತ್ತೆ ಹನ್ನೆರಡು ಘಂಟೆಗಳ ಸರತಿಯಲ್ಲಿ ನಿಂತು ದೇಹ  ಎಂದಿದ್ದರೂ, ಮಾರನೆ ದಿನ ತುಸು ನಿದ್ದೆ ಮಾಡಿ ಎದ್ದ ಮೇಲೆ ಮತ್ತೆ ವಾಹನ ಚಾಲನೆ. ವೆಂಕಿ ನಿನಗೆ ಒಂದು ಹಾಟ್ಸ್ ಆಫ್
೪) ಮಂಜಿನಂತೆ ತಣ್ಣಗಿನ ಶಶಿ, ತನ್ನ ಹೆಸರಿಗೆ ವಿರುದ್ಧವಾಗಿ ಶಶಿಯಿಂದ ಸೂರ್ಯನಂತೆ ಬುಸು ಬುಸುಗುಟ್ಟಿದ್ದು
೫) ಜೆ ಎಂ ತಣ್ಣಗಿನ ಮಾತುಗಳು, ವೆಂಕಿಯನ್ನು ಗೋಳು ಹುಯ್ದುಕೊಂಡು ತಮಾಷೆ ಮಾಡಿದ್ದು.
೬) ಆಂಧ್ರದ ಬಸ್ಸಿನ ಚಾಲಕ ಬೆಟ್ಟದಿಂದ ಕೆಳಗೆ ಇಳಿಯುವಾಗ ನಮ್ಮೆಲ್ಲರನ್ನೂ ಸೀಟಿನ ಅಂಚಿಗೆ ತಂದು ಕೂರಿಸಿದ ರೋಮಾಂಚಕಾರಿ ವಾಹನ ಚಾಲನೆ.
೭) ರೆನೋಲ್ಟ್ ಡಸ್ಟರ್ ಅತ್ಯುತ್ತಮ ಸ್ಪ್ರಿಂಗ್ ಆಕ್ಷನ್.
೮)  ಸಾಲು ಸಾಲು ರಜವಿದ್ದರೂ, ಆಯಾಸವೆನಿಸುವ ಪ್ರವಾಸ ಆಗಿದ್ದರೂ ದೇವರ ದರ್ಶನ ಆದ ಮೇಲೆ ಸಿಕ್ಕ ಅದ್ಭುತ ಅನುಭವ.

ಸುಮಾರು  ಹದಿನೈದು ತಿಂಗಳಾದ ಮೇಲೆ ಈ ನನ್ನ ಪ್ರವಾಸಿ ಬ್ಲಾಗಿಗೆ ಮತ್ತೆ  ಕೊಟ್ಟಿದ್ದು ಈ ಲೇಖನದ ಮೂಲಕ ಎನ್ನುವ ಒಂದು ಸಂತೃಪ್ತಿ ನನಗೆ..

ಓದಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ..

"ಶ್ರೀ ವೆಂಕಟೇಶಾಯ ಮಂಗಳಂ!!! "

Wednesday, December 31, 2014

ಕುಮಾರ ಪರ್ವತ ಕಳಿಸಿದ, ಕಲಿಸಿದ ಪಾಠ.. ಆರನೇ ಬಾರಿ ಚಾರಣ

ಗೊಬ್ಬರದ ಗುಂಡಿಯೇ ವಾಸಿ.. ದುರ್ನಾತ ಇದ್ದರೂ.. ಸಸ್ಯ ಸಂಪತ್ತು ಚಿಗುರಲು ಕಾರಣವಾಗುತ್ತದೆ.. ನನ್ನ ತಲೆ ಅದಕ್ಕಿಂತ ಅತ್ತತ್ತ ಆಗಿತ್ತು.. ಯೋಚಿಸಿದ್ದು ಉಲ್ಟಾ.. ಅನಿಸಿದ್ದು ಉಲ್ಟಾ.. ಪ್ರೀತಿ ವ್ಯಕ್ತ ಪಡಿಸಿದ್ದು ಉಲ್ಟಾ.. ಎಲ್ಲಾ ಕಲಸು ಮೇಲೋಗರವಾಗಿತ್ತು.. ಕನ್ನಡಿ ನೋಡಿಕೊಂಡೆ.. ಮುಖದಲ್ಲಿ ಯಾವ ಭಾವವೂ ಬದಲಾಗಿಲ್ಲ.. ತಲೆ ನೋಡಿಕೊಂಡೆ ಹುಲುಸಾಗಿ ಬೆಳೆದ ತಲೆಗೂದಲನ್ನು ಕತ್ತರಿಸಿ ಆಗಿತ್ತು.. ಹೃದಯ ಮುಟ್ಟಿನೋಡಿಕೊಂಡೆ.. ಆತ್ಮೀಯರಿಗೆ ಮಿಡಿಯುತ್ತಿದ್ದ ಮನಸ್ಸು "ಲೋ ನಿನಗಾಗಿ ಮಿಡಿಯಲು ಶುರುಮಾಡಿಕೋ.. ನೀನಿದ್ದರೆ ಇತರರು ಇರುತ್ತಾರೆ.. ನೀನೆ ನೀನಾಗದೆ ಅವರಾದರೆ ನಿನಗೆ ಜಾಗವೇ ಇರೋಲ್ಲ.. ಇದುವರೆಗೂ ನೀ ಇತರರಿಗೆ ಬದುಕಿದ್ದು ಸಾಕು.. ಇನ್ನು ನೀನು ನಿನಗಾಗಿ ಬದುಕು.. " ಎಂದಿತು. 

ಅರೆ ಏನಾಗಿದೆ.. ನನಗೆ.. 

ನನ್ನ ಪ್ರೀತಿಯ ಕುಮಾರ ಪರ್ವತದ ತುತ್ತ ತುದಿಯಲ್ಲಿ ನನ್ನ ಮಾಮೂಲಿ ಧ್ಯಾನಕ್ಕೆ ಕೂರುವ ಮುನ್ನ ಮೇಲಿನ ಎಲ್ಲಾ ಸಾಲುಗಳು ಎಲ್ ಇ ಡಿ ಪರದೆಯ ಮೇಲೆ ಹಾದುಹೋಗುವಂತೆ ಜುಯ್ ಜುಯ್ ಅಂಥಾ ಓಡುತ್ತಿತ್ತು. 

ಕಣ್ಣು ಮುಚ್ಚಿ ಕೂತೆ.. ಕೆಳಗಿನ ಪರದೆ ಕಂಡಿತು.. 
_________________________________________________________________________________











































_______________________________________________________________________________
ಗಾಬರಿ ಆದಿರಾ.. ಹೌದು ಇದೆ ದೃಶ್ಯ ಮುಚ್ಚಿದ ಕಣ್ಣ ಒಳಗಿನ ಪರದೆಯ ಮೇಲೆ ಮೂಡಿ ಬಂದದ್ದು. ಯಾವಾಗಲೂ ಅಪ್ಪ ಕಣ್ಣ ಮುಂದೆ ಬರುತ್ತಿದ್ದರು ಆಶೀರ್ವಾದದ ಭಂಗಿಯಲ್ಲಿ.. ಆದರೆ ಇಂದು ಯಾರೂ ಇಲ್ಲ.. ಏನೂ ಇಲ್ಲ.. ಖಾಲಿ ಖಾಲಿ ಬೆಳ್ಳಿ ಪರದೆ.. 
ನನ್ನ ಮಾರ್ಗದರ್ಶಿಯಂಥಹ ಗೆಳತಿ ನಿವಿ ಹೇಳಿದ್ದು.. ಶ್ರೀ ಇದು ಶುಭ ಸೂಚನೆ.. ನೀವು ಅಂದುಕೊಂಡಿದ್ದು ಸಾಧಿಸುತ್ತೀರಿ.. ನಿಮ್ಮ ಅಪ್ಪ ಸರಿಯಾಗಿ ಮಾರ್ಗದರ್ಶನ ನೀಡಿದ್ದಾರೆ.. ಸುಂದರ ವಸಂತ ನಿಮಗಾಗಿ ಕಾಯುತ್ತಿದೆ ಎಂದರು.. 

ನನ್ನ ಆಪ್ತ ಮಿತ್ರ ಹಾಗೂ ಸಹ ಚಾರಣಿಗ "ಸಂದೀಪ್" ಚಾರಣ ಮುಗಿದ ಮೇಲೆ ಹೇಳಿದ್ದು "ಶ್ರೀ.. ಆರಂಭದಲ್ಲಿಯೇ ಅಂದುಕೊಂಡೆ ನಿಮ್ಮ ಮೆದುಳು..  ಮೈ..  ಎರಡು ಹಾಳಾಗಿ ಹೋಗಿದೆ.. ಅದನ್ನ ಸರಿಮಾಡಿಕೊಳ್ಳಲು ಈ ಚಾರಣ ಸಿದ್ಧ ಮಾಡಿದ್ದೀರಿ ಅಲ್ಲವೇ .. ಮೇಲೆ ಕತ್ತೆತ್ತಿ ನೋಡಿದೆ.. ಪಡೆಯಪ್ಪ ಚಿತ್ರದಲ್ಲಿ ರಜನಿ ಹೊಡೆಯುವ ಸಲ್ಯೂಟ್ ಶೈಲಿಯಲ್ಲಿ ನನ್ನ ಅಪ್ಪ.. ಆಲ್ ದಿ ಬೆಸ್ಟ್ ಶ್ರೀ ಎಂದು ಹೇಳಿ ಸಲ್ಯೂಟ್ ಹೊಡೆದ ಹಾಗೆ ಅನ್ನಿಸಿತ್ತು.. ಹಾಗೆ ಸುಮ್ಮನೆ ಎರಡು ದಿನ ಹಿಂದಕ್ಕೆ ಹೋದೆ.. ಅನಾವರಣಗೊಂಡಿತ್ತು.. ಕುಮಾರ ಪರ್ವತದ ಚಾರಣದ ಹೂರಣ.. 
* * * * * *

೨೦೧೩ ನಂತರ ಅಲೆಮಾರಿಗಳು ತಂಡ ಎಲ್ಲಿಯೂ ಹೋಗಿರಲಿಲ್ಲ.. ಕುಮಾರಪರ್ವತ ಚಾರಣವೇ ಕಡೆಯದಾಗಿತ್ತು.. ನನ್ನ ಹಠ ಮತ್ತೆ ಅಲ್ಲಿಂದಲೇ ಶುರುಮಾಡೋಣ ಎಂದು.. ಎಂದಿನಂತೆ ಸಂದೀಪ್ ಜೊತೆಯಾದರು.. ಅವರ ಜೊತೆಯಲ್ಲಿ ದರ್ಶನ್ ನಾ ಬರುವೆ ಅಂದರು. . ಶುರುವಾಯಿತು ನಮ್ಮ ಪಯಣ.. 

ಬೆಳಗಿನ ಚುಮು ಚುಮು ಚಳಿಯಲ್ಲಿ ಮಂದಗತಿಯಲ್ಲಿ ಹೆಜ್ಜೆ ಹಾಕುತ್ತಾ ಚಾರಣದ ಆರಂಭಿಕ ತಾಣಕ್ಕೆ ಬಂದೆವು. ಮನದಲ್ಲಿ ವಂದಿಸಿದೆ. ಸೂರ್ಯ ರಶ್ಮಿ ಮೈ ಮೇಲೆ ಬಿದ್ದ ಹಾಗೆ ಆಯಿತು.. ಆಶೀರ್ವಾದ ಸಿಕ್ಕಿತು ಎಂದು ಹೊರಟೆ. 

ಮೂಕ ಮನಸ್ಸು.. ಬಳಲುವ ದೇಹ ಚಾರಣಕ್ಕೆ ಹೇಳಿ ಮಾಡಿಸಿದ ಜೋಡಿ: (ಮೊದಲನೇ ಪಾಠ)
ಕಾಡುತ್ತವೆ ಸರಮಾಲೆಯ ಕಷ್ಟಗಳು.. ಗಟ್ಟಿ ತನ ಇದ್ದಾಗ ಅದು ಮುಟ್ಟಲು ಬರುವುದಿಲ್ಲ 
ದೇಹ ಕೇಳುತ್ತಿರಲಿಲ್ಲ.. ಮನಸ್ಸು ಬಿಡುತ್ತಿರಲಿಲ್ಲ.. ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಸಾಗಿದೆವು. ಮೊದಲ ಕಾಡು ದಾರಿ ಆಯಾಸದಾಯಕವಾಗಿದ್ದರೂ.. ಹಾಸ್ಯವೂ ಎಂದಿನಂತೆ ಕಡಿಮೆ ಇದ್ದರೂ ಕೂಡ ಹುಮ್ಮಸ್ಸು ಕಡಿಮೆಯಾಗಿರಲಿಲ್ಲ.. ಜೊತೆಯಲ್ಲಿಯೇ ಹಾದಿ ನಮಗೋಸ್ಕರ ಹತ್ತಿರವಾಗುತ್ತಿದೆ ಎನ್ನಿಸಿತು. ಭೀಮನ ಕಲ್ಲಿಗೆ ಹೋಗುವಷ್ಟರಲ್ಲಿಯೇ ಬಸವಳಿದು ಹೋಗುತ್ತಿದ್ದ ನಾನು.. ಸ್ವಲ್ಪ ಹೊತ್ತಿನಲ್ಲಿಯೇ ಭೀಮನ ಕಲ್ಲಿನ ಮೇಲೆ ವಿರಮಿಸಿಕೊಳ್ಳುತ್ತಿದ್ದೆವು.. ನಂತರ ಅರಿವಾಯಿತು.. ಸಾಧಿಸಲು ಹೊರಟಾಗ ಮನಸ್ಸು ದೇಹ ಎರಡು ಹೇಗೆ ಇದ್ದರೂ ಗಂಡ ಹೆಂಡತಿಯ ಹಾಗೆ ಜೊತೆ ಜೊತೆಯಲ್ಲಿ ಸಾಗಿದರೆ ಮಾತ್ರ ಯಶಸ್ಸು ಶತಃ ಸಿದ್ಧ ಎಂದು. ಎಷ್ಟು ನಿಜ.. 


ಎಲ್ಲೋ ಇರುವ ಎರಡು ವಸ್ತುಗಳನ್ನು ಜೊತೆ ಮಾಡಿ ಉಪಾಯ ಕಂಡುಕೊಳ್ಳಿ  : (ಎರಡನೇ ಪಾಠ)
ಚಾರಣದಲ್ಲಿ ಎಂದಿಗೂ ಹೊಟ್ಟೆಗೆ ಮೋಸ ಮಾಡಿಕೊಳ್ಳದ ನಾವು.. ವಿಚಿತ್ರ ಸ್ಥಿತಿಯಲ್ಲಿ ಈ ಚಾರಣಕ್ಕೆ ಹೊರಟೆವು.. ಹಾದಿಯಲ್ಲಿ ಸಿಕ್ಕ ಸಹ ಚಾರಣಿಗರು ಮೊದಲ ಬಾರಿಗೆ ಎಂದರೂ.. ಅವರ ಸಿದ್ಧತೆ ಸಕತ್ತಾಗಿತ್ತು.. ಕುಮಾರಪರ್ವತದಲ್ಲಿ ಸಿಗುವ ಕಾಮಧೇನು ಭಟ್ಟರ ಮನೆ.. ಅಲ್ಲಿಗೆ ಹೋಗಿ ಅನ್ನವನ್ನು ತೆಗೆದುಕೊಂಡು ನಿಂತಾಗ.. ಬೇಕೇ ಬೇಡವೇ.. ಎನ್ನುವ ಗೊಂದಲ ಇತ್ತು. ಆದರೆ ಹೊಟ್ಟೆಯನ್ನೊಮ್ಮೆ ಸವರಿಕೊಂಡೇ.. ಬೇಕು ಶ್ರೀ ಎಂದಿತು.. ದೇಹವನ್ನು ದಂಡಿಸುವಾಗ ಮಧ್ಯೆ ಮಧ್ಯೆ ಅದಕ್ಕೆ ತುಸು ಉಪಚಾರವನ್ನು ಮಾಡಲೇ ಬೇಕು.. ಎಂದಿತು ಮನಸ್ಸು. ತೆಗೆದುಕೊಂಡದ್ದು ಒಳ್ಳೆಯದೇ ಆಯ್ತು... ಕಲ್ಲು ಮಂಟಪದ ಬಳಿ ಸಹಚಾರಣಿಗರು ತಂದಿದ್ದ ಪುಳಿಯೋಗರೆ ಗೊಜ್ಜು.. ಬಿಸಿ ಅನ್ನಕ್ಕೆ ಜಂಟಿಯಾಗಿ ನಿಂತು ಹೊಟ್ಟೆಯನ್ನು ಅರಳಿಸಿತು. ಕಷ್ಟಗಳನ್ನು ಸ್ವಲ್ಪ ಸ್ವಲ್ಪವೇ ನಿವಾರಿಸುತ್ತ ಹೋಗಬೇಕು.. ಆಗಲೇ ಕೆಲವು ಕಷ್ಟಗಳ ಜೊತೆಯಲ್ಲಿ ಕೆಲವು ಉಪಾಯಗಳು ಕೂಡ ಹೆಜ್ಜೆ ಹಾಕುತ್ತವೆ. 
ಒಮ್ಮೆ ಕಣ್ಣು ಬಿಟ್ಟರೆ ಸಾಕು.. 

ಸುಡುವ ಜ್ಯೋತಿಯನ್ನೆ ಮನೆ ಬೆಳಗಲು ಉಪಯೋಗಿಸಿದರೆ: (ಮೂರನೇ ಪಾಠ)
ಕಲ್ಲು ಮಂಟಪದ ಮುಂದಿನ ಹಾದಿ ಬಲು ತ್ರಾಸದಾಯಕ.  ಏರು ಹಾದಿ, ನೆರಳಿಲ್ಲದ ಬಿರುಬಿಸಿಲಿನಲ್ಲಿ ನಡೆಯುವುದು ನಿಜಕ್ಕೂ ಸವಾಲಿನ ಗುರಿಯೇ ಹೌದು. ಆದರೂ ಆ ಬಿರು ಬಿಸಿಲಿನಲ್ಲಿ ತುಂಬಿದ ಹೊಟ್ಟೆ ಹೇಳಿತು.. ನಾ ಸಂತುಷ್ಟನಾಗಿದ್ದೇನೆ.. ನಾ ಇರುವೆ ನಿಮ್ಮ ಜೊತೆಯಲ್ಲಿ ನಡೆಯಿರಿ ಎಂದಿತು. ಒಳಗೆ ಜಠರಾಗ್ನಿ ತಣ್ಣಗಾಗಿತ್ತು.. ಹೊರಗೆ ಬಿಸಿಲಿನ ಬೆಂಕಿ ದೇಹವನ್ನು ಸುಡುತಿತ್ತು.  ಆಗ ಮನಕ್ಕೆ ಬಂದಿದ್ದು ವಜ್ರವನ್ನು ವಜ್ರದಿಂದ ಕತ್ತರಿಸಬಹುದಾದರೆ ಬೆಂಕಿಯನ್ನು ಬೆಂಕಿಯಿಂದ ಏಕೆ ಆರಿಸಲಾಗದು.. ಹಾಗೆಯೇ ಮನದ ಮೂಲೆಯಲ್ಲಿರುವ ಕಸವನ್ನು ರಸವನ್ನಾಗಿ ಮಾಡಿ ಆ ಕಸಕ್ಕೆ ಹೊಸದು ರೂಪ ಕೊಡಬಹುದು ಎನ್ನಿಸಿತು. ಆ ಬಿಸಿಲಿನಲ್ಲಿಯೇ ಮಲಗಿ ನಿದ್ದೆ ಮಾಡಿದೆ.. ಆಹಾ ಎಷ್ಟು ಸೊಗಸಾಗಿತ್ತು. ಬಿಸಿಲಿನ ಜಾಲಕ್ಕೆ ಒಳಗಿನ ಗೊಂದಲಮಯ ಮಿಕ ಶರಣಾಗಿತ್ತು.. ಹೊಸ ಉತ್ಸಾಹದಿಂದ ಮುಂದೆ ಸಾಗಿದೆ. ಕಷ್ಟಗಳು ಇರುತ್ತವೆ ಬರುತ್ತವೆ.. ಆದರೆ ಆ ಕಷ್ಟಗಳು ನಮ್ಮನ್ನು ಕತ್ತರಿಸಲು ಬಿಡದೆ ಅವಕ್ಕೆ ಇನ್ನಷ್ಟು ಕಷ್ಟಗಳನ್ನು ಕೊಟ್ಟು ಅವೇ ಬಡಿದಾಡುವಂತೆ ಮಾಡಿ.. ಹೊಸ ರೂಪ/ಉಪಾಯ ಕಂಡು ಕೊಳ್ಳಬೇಕು. 
ಎದುರಿಸಿ ನಿಲ್ಲಬೇಕು.. ಉರಿಯುವ ಸೂರ್ಯನು ಕೆಲಕಾಲ
 ಮರೆಯಾಗುತ್ತಾನೆ 

ಹಾದಿಯಲ್ಲಿ ಸಿಗುವ ಉತ್ಸಾಹದ ಚಿಲುಮೆಯನ್ನು ಚಿಮ್ಮು ಹಲಗೆಯಂತೆ ಬಳಸಬೇಕು: (ನಾಲ್ಕನೇ ಪಾಠ)
ಶೇಷ ಪರ್ವತದ ಹಾದಿಯಲ್ಲಿ ಮನಸ್ಸಿಗೆ ದೇಹಕ್ಕೆ ಬಯ್ದು ಬಿಡುವಷ್ಟು ಕೋಪ ಬರುತ್ತದೆ. ಏರು ಹಾದಿ, ಬಿರು ಬಿಸಿಲು, ಕಾಲುಗಳು ಪದ ಹೇಳುತ್ತಿರುತ್ತವೆ. ಬೆನ್ನಿನ ಮೇಲೆ ಭಾರ, ಸಾಕಪ್ಪ ಎನ್ನಿಸುತ್ತದೆ. ವಾಪಸ್ ಹೋಗಿ ಬಿಡೋಣ ಅನ್ನಿಸುವುದು ನಿಜವಾದ ಮಾತು. ಅಂಥಹ ಗೊಂದಲಮಯ ಸನ್ನಿವೇಶದಲ್ಲಿ ಸಿಗುತ್ತದೆ ಕಣಿವೆ ಪ್ರದೇಶ. ಆಹಾ ಆ ತಾಣದಲ್ಲಿ ಕೂತಾಗ, ಸುತ್ತಲಿನ ಕಣಿವೆ ಪ್ರದೇಶದಿಂದ ಅನೇಕ ಗಿಡ ಮೂಲಿಕೆ ಮರಗಳನ್ನು ಬಳಸಿಬರುವ ಗಾಳಿ ಮನಸ್ಸಿಗೆ ಹಾಯ್ ಎನ್ನಿಸುವಷ್ಟು ಆಹ್ಲಾದ ಕೊಡುತ್ತದೆ. ಆ ಕಣಿವೆ ಪ್ರದೇಶದಲ್ಲಿ ಕಾಣಿಸುವ ರುದ್ರ ಸೌಂದರ್ಯ ಎಂಥವರನ್ನು ಮೂಕನನ್ನಾಗಿಸಿ ಬಿಡುತ್ತದೆ. ಅಲ್ಲಿಯೇ ಕೊಂಚ ಹೊತ್ತು ಕೂತಾಗ ಅರಿವಾಗುವ ಸತ್ಯ, ಇಲ್ಲಿಯೇ ಇಂಥಹ ಸೌಂದರ್ಯ ನಮಗೋಸ್ಕರ ಇಟ್ಟಿರುವ ಕಾಣದ ಶಕ್ತಿ, ಈ ಸೌಂದರ್ಯವನ್ನು ನೋಡಿ ಮನಸ್ಸಿಗೆ ಸಂತೋಷ ಸಿಕ್ಕಾಗ, ಅದರ ನೆರಳಲ್ಲಿ ಸಾಗಿದರೆ ಗುರಿ ಕಾಲು ಬುಡದಲ್ಲಿ. ನಿಜ ಈ ಮಾತು, ಸಿಕ್ಕ ಅವಕಾಶವನ್ನು ಚಿಮ್ಮು ಹಲಗೆಯಂತೆ ಉಪಯೋಗಿಸಿ ನಮ್ಮ ಗುರಿಯತ್ತ ಧೈರ್ಯ ಮಾಡಿ ಸಾಗಬೇಕು.. ಆಗ ನಾ ಹೇಳಬಹುದು ಗೆಲುವು ನನ್ನದೇ. 
ಎದುರಿಗೆ ಬರುವ ಕಷ್ಟಗಳು ದೂರದ ಕನಸನ್ನು ನನಸು ಮಾಡುತ್ತವೆ 

ಗುರಿ ಮುಂದಿದ್ದಾಗ.. ವಿರಮಿಸಬಾರದು: (ಐದನೇ ಪಾಠ)
ಹೆಜ್ಜೆ ಹೆಜ್ಜೆ ಇಡುತ್ತ ಕೃಷ್ಣ ಗೋಕುಲವನ್ನೆಲ್ಲ ಸುತ್ತಿ ಬಂದಾ ಹಾಗೆ, ನಾವು ಹೆಜ್ಜೆ ಹೆಜ್ಜೆ ಅಡಿಯಿಟ್ಟು ಶೇಷಪರ್ವತದ ತುತ್ತ ತುದಿಗೆ ಬಂದು ನಿಂತೆವು. ಸುತ್ತಲು ವಿಹಂಗಮ ದೃಶ್ಯ. ನಾವು ಹತ್ತಿ ಬಂದ ಹಾದಿಯನ್ನು ಒಮ್ಮೆ ಅವಲೋಕನ ಮಾಡಿದೆವು. ಸೂರ್ಯಾಸ್ತ ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ಆದರೆ ನಮ್ಮ ಗುರಿ ಇದ್ದದ್ದು ಕುಮಾರ ಪರ್ವತದ ತುತ್ತ ತುದಿ ಮತ್ತು ಅಂದಿನ ರಾತ್ರಿ ಅಲ್ಲಿಯೇ  ಕಳೆಯುವುದು. ನೀರಿಲ್ಲ ಎಂದು ಅರಿವಾಯಿತು, ಮುಂದೆ ನೀರು ಸಿಗುವ ಲಕ್ಷಣಗಳು ಇರಲಿಲ್ಲ. ಆದರೆ ನಮ್ಮ ಗುರಿ ಇದ್ದದ್ದು ತುತ್ತ ತುದಿಯಲ್ಲಿ ನಮ್ಮ ವಿಶ್ರಾಂತಿ ಎಂದು. ಜೊತೆಯಲ್ಲಿ ತಂದಿದ್ದ  ಗುಡಾರಗಳು ನಮ್ಮನ್ನು ಹೊರಗೆ ಬಿಡಿ ಎಂದು ಕಿರುಚಿಕೊಳ್ಳುತ್ತಿದ್ದವು. ಭಾರವಾದ ಹೆಜ್ಜೆಯನ್ನು ಮತ್ತೆ ಮುಂದಡಿ ಇಡಲು ಶುರುಮಾಡಿದೆವು. ಗುರಿ ಮುಂದೆ ಕಾಣುವಾಗ ಕೊಂಚ ವಿಶ್ರಾಂತಿ ಬಾಳಿನ ಗುರಿಯನ್ನು ಬದಲಿಸಿಬಿಡುತ್ತದೆ ಅಥವಾ ಗುರಿ ದಾರಿ ಕಾಣದೆ ಮಂಕಾಗಿ ಬಿಡುತ್ತದೆ. 

ಬಣ್ಣ ಬಣ್ಣದ ಹೊಂಗಿರಣಗಳು - ಅವಕಾಶಗಳ ಸುರಿಮಳೆ 


ಪಟ್ಟ ಶ್ರಮಕ್ಕೆ ಪ್ರತಿ ಫಲ ಇದ್ದೆ ಇದೆ. : (ಆರನೇ ಪಾಠ)
ಕೊರೆಯುವ ಚಳಿ, ಸುಮಾರಾಗಿ ತುಂಬಿದ ಹೊಟ್ಟೆ, ಇನ್ನೂ ಹಸಿವು, ಆಯಾಸ ಎಂದು ಹೇಳುತ್ತಿದ್ದ ದೇಹ, ಎಲ್ಲವೂ ನಮ್ಮನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿತ್ತು. ಆದರೆ ಬೆಳಗಿನ ಸೂರ್ಯಾಸ್ತ ನೋಡಲು ಹಾತೊರೆಯುತ್ತಿತ್ತು.  ಆದರೆ ಆ ಚಳಿಗೆ ದೇಹದ ಮೂಳೆಯೇ ನಡುಗುತ್ತಿತ್ತು ಅಂದರೆ ತಪ್ಪಲ್ಲಾ. ಸಿಕ್ಕ ಎಲ್ಲಾ ತಿನ್ನುವ ಪದಾರ್ಥಗಳನ್ನು ತಿಂದು ಮುಗಿಸಿ ಮೆಲ್ಲಗೆ ಗುಡಾರದ ಒಳಗೆ ನುಗ್ಗಿದೆವು. ನನ್ನ ಮತ್ತು ಸಂದೀಪ್ ಬಳಿ ಮಲಗುವ ಚೀಲವಿತ್ತು, ಆದರೆ ದರ್ಶನ್ ಪಾಪ ಚಳಿಯಿಂದ ರಾತ್ರಿ ಇಡಿ ನಡುಗುತ್ತಾ ಕಳೆದರು, ಗುಡಾರದ ಒಳಗೆ ಮಲಗಿದ್ದೆವು ಅನ್ನುವುದಷ್ಟೇ ನಮಗೆ ಶ್ರೀ ರಕ್ಷೆಯಾಗಿತ್ತು..ಬೆಳಿಗ್ಗೆ ಎಂದು ಆಗಸವನ್ನು ಹಾಗೆ ನೋಡಿದಾಗ, ಕಲಾವಿದ ತನ್ನ ಕುಂಚದಿಂದ ಅರಳಿಸಿದ ವರ್ಣಭರಿತ ಆಗಸವನ್ನು ನೋಡಿದಾಗ ಅಬ್ಬಬ್ಬ ಎನ್ನಿಸಿತು. ಇದುವರೆಗೂ ಪಟ್ಟ ಪರಿಶ್ರಮ ಸಾರ್ಥಕ ಅನ್ನಿಸಿದ್ದು ಈಗಲೇ. ಶ್ರಮ ಪಡಲೇಬೇಕು, ಶ್ರಮ ಪಟ್ಟಷ್ಟು ಅದರ ಸವಿ ರುಚಿಯಾಗಿರುತ್ತದೆ. 
ಚಿತ್ರಕೃಪೆ - ಸಂದೀಪ್ 

ಅರಿ ಷಡ್ವರ್ಗಗಳು ನಮ್ಮನ್ನು ಕಾಡಿ ಹಿಂಡಿ ಹಿಪ್ಪೆ ಮಾಡುತ್ತದೆ. ಆದರೆ ಅದನ್ನೇ ನಮಗೆ ಬೇಕಾದಂತೆ ಉಪಯೋಗಿಸಿಕೊಂಡು ಅವುಗಳನ್ನು ಮೆಟ್ಟಿ ನಿಲ್ಲುತ್ತಾ, ನಮ್ಮ ಗುರಿಯತ್ತ ಸಾಗಲೇ ಬೇಕು. ಆಗ ಅರಿಗಳು ವರ್ಗವಾಗಿ ದಾರಿ ಕೊಡುತ್ತಾ ನಮ್ಮ ಸಾಧನೆಗೆ ಬೆನ್ನೆಲುಬಾಗಿ ನಿಲ್ಲುತ್ತವೆ. 

ಇಂಥಹ ಒಂದು ಸುಂದರ ಸಂದೇಶವನ್ನು ಕುಮಾರಪರ್ವತ ನನಗಾಗಿ ಕಾದಿರಿಸಿತ್ತೇನೋ ಅನ್ನಿಸಿತು. ಹೌದು ಮೇಲೆ ಕಲಿತ ಆರು ಪಾಠಗಳು ಒಂದಕ್ಕಿಂತ ಒಂದು ತಾಳ ಮೆಳೈಸಿಕೊಂಡು ಒಲವಿನ ಉಡುಗೊರೆಯಾಗಿ ನಮ್ಮ ಮುಂದೆ ಬಂದು ನಿಲ್ಲುತ್ತದೆ. 

ಬಳಲಿ ಬೆಂಡಾಗಿದ್ದ ಮನಸ್ಸು ಮತ್ತು ದೇಹ ಈ ಚಾರಣ ಮುಗಿದಮೇಲೆ ಹೂವಿನ ಮೇಲೆ ಮಂಜಿನ ಹನಿ ಬಿದ್ದ ಹಾಗೆ ನಸು ನಗುತ್ತಾ ಬಂದದ್ದು ನನ್ನ ಮನಸ್ಸಿಗೆ ಮತ್ತು ದೇಹಕ್ಕೆ ತಂಪೆರೆದಂತೆ ಆಯಿತು. 

ಕುಮಾರಪರ್ವತವೆ ಎಂಥಹ ಶುಭ ಸಂದೇಶ ಮತ್ತು ಪಾಠ ನೀ ಕಳಿಸಿದ್ದು. ನಿನಗೆ ನನ್ನ ಕಡೆಯಿಂದ ಸಲಾಂ. ಮತ್ತೆ ಬರುವೆ ಏಳನೇ ಬಾರಿಗೆ. 

Monday, May 26, 2014

ವಿನಾಯ"ಕಂಗಳ"ದಲ್ಲಿ ಸಂಧ್ಯಾ !!!!(ಶಿರಬಾಗಿ ವಂದಿಸುವೆ... ಶಿರಸಿಗೆ....ಭಾಗ ಮೂರು !!! )

"ಅಣ್ಣಾ ಅಣ್ಣಾ.. "

ಫೋನ್ ಕಿರುಚುತಿತ್ತು,..

"ಹಲೋ ಎಸ್ ಪಿ ಹೇಗಿದ್ದೀಯ.. .. ಏನೂ ಯೋಚನೆ ಬೇಡ.. ತಲೆ ಮೇಲೆ ತಲೆ ಬೀಳಲಿ ನಿನ್ನ ಅಮೃತ ಘಳಿಗೆಯಲ್ಲಿ ನಾನಿರುವೆ.. "
"ಅಣ್ಣಾ ಅದು ನನಗೆ ಗೊತ್ತು ಕನ್ನಡಿಯಿಲ್ಲದೆ ನನ್ನ ಮೊಗವನ್ನು ಹೇಗೆ ನೋಡಿಕೊಳ್ಳಲಿ.. ನೀವು ಬಂದೆ ಬರುತ್ತೀರಿ ಎಂದು ನಂಗೆ ಗೊತ್ತು.. ನನ್ನದೊಂದು ಪ್ರಾರ್ಥನೆ.. "

"ಒಯೆ ಯಾಕೋ ಹಾಗೆಲ್ಲ ಹೇಳ್ತೀಯ.. ನೀನು ನನ್ನ ಬಂಗಾರದ ಪುಟ್ಟಿ.. ಹೇಳು ಏನು ನಿನ್ನ ಪ್ರಾರ್ಥನೆ"

"ಮದುವೆ.. ನನ್ನ ಲೋಕದಲ್ಲಿ ನಾನಿರುವೆ.. ಫೋಟೋಗಳು ಬರುವ ತನಕ ಕಾಯುವ ತಾಳ್ಮೆ ಎನಗಿಲ್ಲ.. ಅದಕ್ಕೆ"

"ಓಕೆ ಸರಿ.. ಸಿಗೋಣ ಮದುವೆಯಲ್ಲಿ"

"ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು" ಆಹಾ... ಹೆಣ್ಣು ಮಗಳು ತಲೆ ಸ್ನಾನ ಮಾಡಿ ಕಪ್ಪು ಕೂದಲನ್ನು ಹರಡಿಕೊಂಡು ಕೂತಿರುವ ಹಾಗೆ ಇರುವ ಯಲ್ಲಾಪುರ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಕ್ಕನೆ ಒಂದು ಪೋಸ್ಟರ್ ತಡೆದು ನಿಲ್ಲಿಸಿತು .. 

ಹಾರಾಡುತ್ತಿರುವ ಮನಸ್ಸಿಗೆ ಆಹ್ವಾನ!!!


"ಅರೆ ಅರೆ ಹೌದು ಸರಿಯಾದ ನಕ್ಷೆ" ನನ್ನ ಕಾರು ನನಗೆ ಹೇಳಿತು.. 

ನಿಧಾನವಾಗಿ ಅದರ ತಲೆ ಸವರುತ್ತಾ ಆ ಕಾಡಿನ ಒಳಗೆ ನುಗ್ಗಿಸಿದೆ.. 

ಅಲ್ಲೊಂದು ಇಲ್ಲೊಂದು ಚಿನ್ಹೆಗಳು ನಾವು ಸರಿಯಾದ ಹಾದಿಯಲ್ಲಿದ್ದೇವೆ ಎಂದು ತೋರಿಸುತ್ತಿತ್ತು.. 

ಆಹಾ.. ಬನ್ನಿ ಅಣ್ಣಾ ಕಾಯುತ್ತಾ ಇದ್ದೀವಿ!!!


ಸುಮಾರು ಐದು ನಿಮಿಷಗಳ ನಂತರ... 

ಕಾಯುತ್ತಿರುವ ಮಾರ್ಗ ಸೂಚಿ 

ಪ್ರಕೃತಿ ಮಡಿಲಲ್ಲಿ ಮುದ್ದು ಕಂದಮ್ಮ ನಸುನಗುತ್ತಿರುವಂತೆ ವೇದ ಘೋಷಗಳ ಮಧ್ಯೆ ನಮ್ಮ ಸಂಧ್ಯೆ ಅಂಗಳದಿ ಹಸೆಮನೆಯಲ್ಲಿ ನಾಚಿಕೆಯಿಂದ ಕೂತಿದ್ದಳು.. 

ನಮ್ಮನ್ನು ನೋಡಿದ ಸಂಭ್ರಮ ಆ ಪುಟ್ಟ ಕಣ್ಣುಗಳಲ್ಲಿ ಶರಧಿಯನ್ನೇ ತೋರಿಸಿತು.. 

ಅದನ್ನು ನೋಡಿದ ನಮಗೆಲ್ಲರಿಗೂ ಸುಮಾರು ೪೭೫ ಕಿಮಿ ಗಳ ಪ್ರಯಾಣದ ಆಯಾಸ ಉಫ಼್ಫ಼್ ಅಂಥಾ ಹಾರಿ ಹೋಯಿತು.. ಅಬ್ಬಾ ನಮ್ಮ ಸಂಧ್ಯಾ ಪುಟ್ಟಿಯ ಮೊಗದಲ್ಲಿ ಈ ನಗುವನ್ನು ತಂದ ನಮ್ಮ ಆಗಮನ ಆಹಾ ಸಾರ್ಥಕ ಎನ್ನಿಸಿತು,. 

ಮಂದ ಗತಿಯಲ್ಲಿ ಸಾಗುತ್ತಿದ್ದ ವೇದ ಘೋಷಗಳ ನಡುವೆ ಪರಿಣಯದ ಸುಮಧುರ ಘಳಿಗೆಗೆ ಸಾಕ್ಷಿಯಾಗಿದ್ದು ಬಂಧು ಮಿತ್ರರ ಸಂತಸ.. ಶುಭಕೋರುವ ಮಧುರ ಮನಗಳ ವಿನಿಮಯ.. 

ನಮಸ್ಕಾರ.. ನಾನು "ವಿನಾಯಕ" ಸಂಧ್ಯಾಳ ಭಾವ.. ಒಂದು ಸ್ಪುರಧ್ರೂಪಿ ಬಿಳಿ ಜುಬ್ಬಾ ಪೈಜಾಮದಲ್ಲಿ ಕಂಗೊಳಿಸುತ್ತಿದ್ದರು... ಫೇಸ್ಬುಕ್ನಲ್ಲಿ ನಿಮ್ಮನ್ನು ನೋಡಿದ್ದೇನೆ.. ನೀವೆಲ್ಲಾ ಬಂದದ್ದು ಬಹಳ ಕುಶಿಯಾಯಿತು ಎಂದರು.. ೬೦ ಹಲ್ಲುಗಳ ಪ್ರದರ್ಶನ ಆದಮೇಲೆ ಆಸರಿಕೆ ಆಯಿತೆ.. ತಂಪಾಗಿ ಕುಡಿಯಿರಿ ಅಂದರು.. 

ಸಂಧ್ಯಾ ಅಲ್ಲಿಯೇ ಕುಳಿತು ಕಣ್ಣಲ್ಲಿ ಏನೋ ಹೇಳಿದಳು.. ಮರುಕ್ಷಣ ಅವಳ ಇನ್ನೊಂದು ಪ್ರತಿರೂಪ ನಮ್ಮ ಮುಂದೆ ಹಾಜರ್.. 

ನಾನು ಸುಷ್ಮಾ.. ಸಂಧ್ಯಾಳ ಅಕ್ಕ.. ನೀವೆಲ್ಲ ಬಂದದ್ದು ಖುಷಿಯಾಯಿತು.. ತಂಪಾಗಿ ಕುಡಿಯಿರಿ. ಮತ್ತೆ ಬರುವೆ.. ಎಂದು ಮತ್ತೆ ಮಂಟಪದ ಒಳಗೆ ಓಡಿದರು 

ನಿಧಾನವಾಗಿ ಧರೆಗೆ ಇಳಿಯುತ್ತಿದ್ದೆವು.. 

ಮದುವೆ ಎಂದರೆ ಜಗಮಗ ಬೆಳಕು.. ಗದ್ದಲ.. ಗೌಜು.. ಎಲ್ಲಾ ಕಂಡಿದ್ದ ನಮಗೆ.. ಇಲ್ಲಿ ಪ್ರಕೃತಿ ಮಡಿಲಲ್ಲಿ ಎರಡು ಸುಮಧುರ ಮನೆಗಳ ಮನಗಳ ಒಂದಾಗುತ್ತಿದ್ದದ್ದು ನನಗೆ ಒಂದು ಸುಂದರ ಲೋಕಕ್ಕೆ ಹೋದ ಅನುಭವ.. 

ಕಲಾತ್ಮಕವಾಗಿ ಮೂಡಿದ್ದ ಕಲ್ಯಾಣ ಮಂಟಪ.. ಅದಕ್ಕೆ ತಕ್ಕ ಒಪ್ಪವಾದ ತೋರಣ.. ವಧು ವರನ ಹೆಸರು. ಅದಕ್ಕೆ ಮಾಡಿದ್ದ ಶೃಂಗಾರ.. ಒಂದಕ್ಕೊಂದು ಕಲಾತ್ಮಕ..

ಎರಡು ಸುಂದರ ಮನಗಳು - ಅಕ್ಕ ತಂಗಿ 

"ಅಣ್ಣಾ ಅಣ್ಣ.. " ಚಿರಪರಿಚಿತ ದನಿ ನನ್ನನ್ನು ಧರೆಗೆ ರಪ್ಪನೆ ಇಳಿಸಿತು..  

ಸಿದ್ಧವಾದ ಪುಟ್ಟಿ 

ಕಲಾಕುಸುರಿಯಲ್ಲಿ ಎತ್ತಿದ ಕೈ ನಮ್ಮ ಪುಟ್ಟಿ 


"ಆಯ್ ಪುಟ್ಟಾ ಹೇಗಿದ್ದೀಯ.. "

"ಅಣ್ಣಾ ನಾನು ಸೂಪರ್.. ಪುಟ್ಟಿ.. ಹೇಗಿದ್ದೀಯ.. ಅತ್ತಿಗೆ ಹೇಗಿದ್ದೀರಾ.. ಅರೆ ಭಾಗ್ಯ ಪುಟ್ಟಿ.. ಅರ್ಚನ ಪುಟ್ಟಿ.. ಅಣ್ಣಾ ನನಗೆ ಇದಕ್ಕಿಂತ ಆನಂದ ಇನ್ನೇನು ಬೇಕು.. ಥ್ಯಾಂಕ್ ಯು ಸೊ ಮುಚ್"

"ಅಣ್ಣಾ.. ಅರ್ಚನ ಪುಟ್ಟಿ ಹಾಕಿದ ಮೆಹಂದಿ ನೋಡಿ.. ನಾನೇ ಮಾಡಿಕೊಂಡ ಜಡೆಗೆ ಅಲಂಕಾರ ನೋಡಿ.. " ಅಷ್ಟರಲ್ಲಿ ಸಂಧ್ಯಾಳ ಅಕ್ಕ ಕೂಡ ಶ್ರೀಕಾಂತ್ ನೋಡಿ ಅವಳೇ ಮಾಡಿಕೊಂಡ ಜಡೆಗೆ ಅಲಂಕಾರ ಎಂದರು..


ಅರ್ಚನ ಪುಟ್ಟಿಯ ಚಮತ್ಕಾರ 

ಅರ್ಚನ ಪುಟ್ಟಿಯ ಚಮತ್ಕಾರ

ಅರ್ಚನ ಪುಟ್ಟಿಯ ಚಮತ್ಕಾರ

ಅರ್ಚನ ಪುಟ್ಟಿಯ ಚಮತ್ಕಾರ

ನನ್ನ ಮೊಬೈಲ್ ನಲ್ಲಿ "ಈ ಸಮಯ ಆನಂದಮಯ... " ಹಾಡು ಬರುತ್ತಿತ್ತು... 

ಯಾರೋ ಕೂಗಿದರು... ಸಂಧ್ಯಾ ಒಳಗೆ ಓಡಿದಳು.. 

ವಿನಾಯಕ್ ಬಂದು "ಗೊತ್ತಾಯಿತು ನೀವೆಲ್ಲ ಸಂಧ್ಯಾಳ ಸ್ನೇಹಿತರು.. ಬಂದದ್ದು ಬಹಳ ಖುಷಿಯಾಯಿತು.. ಸುಧಾರಿಸಿಕೊಳ್ಳಿ ಇದೆಲ್ಲ ಸಂಭ್ರಮ ಮುಗಿದಮೇಲೆ ಭೇಟಿ ಮಾಡುವೆ ಎಂದರು.."

ನಮಗೆ ಅರೆ ಮದುವೆ ಇಷ್ಟು ಸರಳ ಸುಂದರ ಸಂಭ್ರವನ್ನಾಗಿ ಮಾಡಬಹುದು ಎಂದು ಅರಿವಾದ ಸಮಯ ನಿಜಕ್ಕೂ ಆನಂದಮಯ ಎನ್ನಿಸಿತು.. 

ಹೋಮ ಹವನಾದಿಗಳು ಜರುಗುತಿದ್ದವು... ಅಷ್ಟರಲ್ಲಿ ಸ್ವಲ್ಪ ಅಡ್ಡಾಡಿ ಬರೋಣ ಅಂತ ಹೊರಗೆ ಬಂದೆ.. 

ನಮ್ಮೆಲ್ಲರ ಸುಂದರ ಮನದ ಸರದಾರರು ಬಾಲು ಸರ್ ಕಾರಿನಿಂದ ಇಳಿಯುತ್ತಿದ್ದರು.. ಇನ್ನು ಬಿಡಿ ನಗೆ ಹಬ್ಬ ಖಾತ್ರಿ ಎನ್ನಿಸಿತು.. 

ಲಾಜ ಹೋಮ ನಡೆಯುತ್ತಿತ್ತು.. ಅತ್ತ ಕಡೆ ನೆರೆದಿದ್ದವರಿಗೆ,.. ಈ ಸಂಭ್ರದಲ್ಲಿ ಪಾಲ್ಗೊಂಡವರ ಉದರವನ್ನು ತಣಿಸಲು ರುಚಿ ರುಚಿ ಭಕ್ಷ್ಯಗಳು ತಯಾರಾಗುತ್ತಿದ್ದವು.. 
ಲಾಜ ಹೋಮಕ್ಕೆ ಸಿದ್ಧವಾದರು 

ಅಂಗಳದಲ್ಲಿ ಒಲವಿನ ರಂಗವಲ್ಲಿ ಸದಾ ಇರಲಿ ಎಂಬ ಪ್ರಾರ್ಥನೆ ಸಲ್ಲಿಕೆ 

ತಮ್ಮನಿಂದ ಲಾಜ ಹೋಮಕ್ಕೆ

ದಂಪತಿಗಳಿಂದ ಒಲವಿಗಾಗಿ ಹೋಮಕ್ಕೆ ಲಾಜ 

ಲಾಜ ಹೋಮ ಕೊನೆ ಹಂತಕ್ಕೆ ಬರುತ್ತಿತ್ತು.. ಇತ್ತ ಕಡೆ ವಧುವನ್ನು ಬರಮಾಡಿಕೊಳ್ಳಲು ಮನೆಯಲ್ಲಿ ತಯಾರಿ ಸಿದ್ಧವಾಗಿತ್ತು.. 

ಮಂದ ಜ್ಯೋತಿಯ ಬೆಳಕಲ್ಲಿ ವಧುವನ್ನು ತಮ್ಮ ಮನೆಯ ಬೆಳಕಾಗುವ ಬೆಳಕನ್ನು ಬರಮಾಡಿಕೊಳ್ಳಲು ಹಾಡು ಹಸೆ ನಡೆಯುತ್ತಿದ್ದವು., 
ಬೀಗುತ್ತಿರುವ ಸಂಭ್ರಮದಲ್ಲಿ ಬೀಗರು 

ಸುಮಧುರ ಮನಗಳ ಒಡತಿಯರು 

ಹೊಟ್ಟೆಯಲ್ಲಿ ಪರಶಿವ ತಾಂಡವವಾಡುತ್ತಿದ್ದ... ಬಾಲೂ ಸರ್ ಎಂದು ಕಣ್ಣು ಹೊಡೆದೆ.. ನಡೆರಿ ಗುರುವೇ ಅಂದರು... 


ಚಕಾ ಚಕ್ ಹೊರಗೆ ಬಂದೆವು... ಮೊದಲನೇ ಪಂಕ್ತಿ ಭರ್ತಿಯಾಗಿತ್ತು.. ನಾವು  ನಮ್ಮ ದಂತ ಪಂಕ್ತಿಯನ್ನು ತೋರಿದೆವು.. ಚಿಕ್ಕ ಚಿಕ್ಕ ನಗೆ ಚಟಾಕಿ ಸಿಡಿಯುತ್ತಿದ್ದವು.. 

ಮಗಳಾದ ಭಾಗ್ಯ, ಸ್ನೇಹಿತೆಯಾದ ಶೀತಲ್, ಹೃದಯ ಭಾಗವಾದ ಸವಿತಾ, ತುಂಟ ತಂಗಿ ಅರ್ಚನ, ಮಾವನ ಮಗಳಾದರೂ ನನ್ನ ಮನೆ ಮಗಳಾದ ವಿದ್ಯಾ, ಗುರುಗಳಿಗೂ ಮಿಗಿಲಾದ ಬಾಲೂ ಸರ್ ಮತ್ತು ಅವರ ಶಿಷ್ಯ ನವೀನ ಎಲ್ಲರ ಜೊತೆಯಲ್ಲಿ ಕಳೆದ ಆ ಸಮಯ ನೆನಪಲ್ಲಿ ಉಳಿಯುವಂತದ್ದು.. 
ಪಾ ಸೂಪರ್ ಟೈಮ್ ಇದು!!!

ನಾ ಹೀಂಗ ನೋಡುವುದು ನಿಮ್ಮಾ!!!

ಊಟಕ್ಕೆ ಕೂತೆವು.. ನನಗೆ ಅಪರಿಚಿತ ಅನ್ನಿಸುವ ಕೆಲವು ಪದಾರ್ಥಗಳನ್ನು ಭಾಗ್ಯ ಮತ್ತು ಅರ್ಚನ ವಿವರಿಸುತ್ತಿದ್ದರು.. ಹೊಟ್ಟೆಯೊಳಗೆ ಸದ್ದಿಲ್ಲದೇ ಇಳಿದು ಉಶ್ ಎಂದು ನಿಟ್ಟುಸಿರು ಬಿಡುತ್ತಿದ್ದವು..  ಕೈ ತೊಳೆದು ಹೊರಗೆ ಬಂದಾಗ ನಮ್ಮ ಉದರ ಸಂತೃಪ್ತ ನಗೆ ಬೀರಿದರೆ.. ನಮ್ಮ ಮನ ಸಂತೃಪ್ತ ನಗೆ ಬೀರಲು ಈ ಕೆಳಗಿನ ಚಿತ್ರಕ್ಕೆ ಕಾಯುತ್ತಿತ್ತು.. 
ನವ ವಸಂತದ ಗಾಳಿಯ ಜೊತೆ ನಾವೆಲ್ಲರು 

ಒಂದು ಸುಂದರ ದಿನವನ್ನು ಇನ್ನಷ್ಟು ಸುಂದರಗೊಳಿಸಲು ಮಧುರ ಮಧುರವೀ ಮಂಜುಳಾ ಗಾನ ಎನ್ನಿಸುವಂತ ಮನಗಳು ಬೇಕಿತ್ತು... ಅವುಗಳೆಲ್ಲ ಒಂದಾಗಿ ಸಂಗಮವಾಗಿದ್ದ ದಿನ ಸಂಧ್ಯಾ ಪುಟ್ಟಿಯ ವಿವಾಹದ ಮೆಟ್ಟಿಲು ಹತ್ತಿದ ದಿನ.. 

ಸಂಧ್ಯಾ ಪುಟ್ಟಿ ವಿನಾಯಕ್ ಭಾವ.. ಗಮನ ಸೆಳೆಯುವ ಮನಗಳ ಸರದಾರರು ನೀವಿಬ್ಬರು.. ಇಡುವ ಹೆಜ್ಜೆಗಳೆಲ್ಲ ಹೂವಿನ 
ಹೆಜ್ಜೆಯಾಗಲಿ.. ಹೆಜ್ಜೆಯಲೆಲ್ಲಾ ಸವಿಯಾದ ಫಲಗಳು ಮೂಡಲಿ.. ನಿಮ್ಮ ಬಾಳು ಸುಂದರ ಅಂಗಳದಲ್ಲಿ ನಲಿಯುವ ನಗುವ ರಂಗವಲ್ಲಿಯಾಗಲಿ ಎಂಬ ಹಾರೈಕೆಯೊಂದಿಗೆ ಸಮಸ್ತ ಬ್ಲಾಗ್ ಬಳಗ ನಿಮ್ಮಗೆ ವೈವಾಹಿಕ ಜೀವನ ಅಂದುಕೊಂಡ ಕನಸ್ಸುಗಳನ್ನು ನನಸ್ಸು ಮಾಡಲಿ ಎಂದು ಉಲಿಯುತ್ತೆವೆ!!!!

ವಿವಾಹ ಜೀವನಕ್ಕೆ ಶುಭಾಶಯಗಳು... !!!

ಅಣ್ಣ ನನಗೆ.. ನಿಮ್ಮ ಸಿರ್ಸಿ ಪಯಣದ ಮುಂದುವರೆದ ಭಾಗ ಬೇಕು ಬೇಗ ಹೇಳಿ.. ನೋಡಿ ನಾ ಮದುವೆಯ ಸಂಭ್ರಮದಲ್ಲಿ ಮಿಂದು ಬೆಂಗಳೂರಿಗೆ ಬರುವಷ್ಟರಲ್ಲಿ ಈ ಸರಣಿ ಬರಬೇಕು ಆಯ್ತಾ... ನನ್ನ ಒತ್ತಾಯಕ್ಕೆ ಮಣಿದು ಸಿರ್ಸಿ ಪಯಣದ ಈ ಭಾಗವನ್ನು ಕೊಟ್ಟಿದ್ದೀರ.. ಇದಕ್ಕಾಗಿ ಸಮಸ್ತ ಬ್ಲಾಗ್ ಬಳಗಕ್ಕೆ ನನ್ನ ಧನ್ಯವಾದಗಳು.. !!!
ಇಡಿ ಸಮಸ್ತ ಬ್ಲಾಗ್ ಕುಟುಂಬಕ್ಕೆ ನಮ್ಮ ಧನ್ಯವಾದಗಳು 

ಇಂತಿ ನಿಮ್ಮ ವಿನಾಯ"ಕಂಗಳ"ದಲ್ಲಿ ಸಂಧ್ಯಾ 

Thursday, April 17, 2014

ಶಿರಬಾಗಿ ವಂದಿಸುವೆ... ಶಿರಸಿಗೆ....ಭಾಗ ಎರಡು !!!

ಮುಂದುವರೆದ ಚಡಪಡಿಕೆ ಚಡಪಡಿಕೆ.................!


ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲೆದಾಗಿತ್ತು.. ಕುಲಾವಿ ಈ 

ಕೊಂಡಿಯಲ್ಲಿ ಸಿಗುತ್ತಿತ್ತು.. 

ಕುಲಾವಿ ಹಾಕಿಕೊಂಡ ಕೊಂಡ ಕಂದ ಮೊದಲ ಹೆಜ್ಜೆ ಇಟ್ಟಿದ್ದು ಈ ಪಾದದ ಅಳತೆಯಲ್ಲಿ ಸಿಗುತ್ತಿತ್ತು

ಈಗ ಕಂದ ನಡೆದಾಡುವ ಸಮಯ.. ಮತ್ತೆ ಚಡಪಡಿಕೆ ಆರಂಭವಾಗಿತ್ತು.. ಅದ್ಭುತವಾಗಿ ಶುರುವಾದ ಪಯಣ ಒಂದು ಹಂತಕ್ಕೆ ಬಂದು ಸುಧಾರಿಸಿಕೊಳ್ಳುತ್ತಿತ್ತು.. ಮುಂದಿನ ದಿನದ ಬಗ್ಗೆ ದಾರದಲ್ಲಿ ನೇಯ್ಗೆ ಕೆಲಸ ಆರಂಭವಾಗಿತ್ತು..

"ಬೇಡ ಕಣೋ.. ಪಾಪ ಅಣ್ಣ.. ದಿನವೆಲ್ಲ ಕಾರು ಡ್ರೈವ್ ಮಾಡಿದ್ದಾರೆ.. ಏಳಿಸಬೇಡ.. ಮಲಗಿಕೊಳ್ಳಲಿ" ಎಂದಿದ್ದರಂತೆ ಅಮ್ಮ..

 ಕಣ್ಣು ಬಿಟ್ಟೆ.. ಸೂರ್ಯ "ಹಲೋ ಗುರು" ಎಂದು ಹೇಳುತ್ತಾ ಲ್ಯಾರಿ ಅಜ್ಜನ ಕೋಣೆಯ ಕಿಟಕಿಯಿಂದ ಒಳ ನುಸುಳುತಿದ್ದ..

ಸಿಕ್ಕ ಜಾಗದಲ್ಲಿ ತೂರಿಕೊಂಡು ನನ್ನನ್ನು ಮೃದುವಾಗಿ ಎಬ್ಬಿಸಿದ 
ಸೂರ್ಯ ಭಗವಾನ್!!!

"ಗುಡ್ ಮಾರ್ನಿಂಗ್ ಅಣ್ಣಾ" ಮಗಳ ಕೋಗಿಲೆ ಧ್ವನಿ.. ಮನಸನ್ನು ಅರಳಿಸಿತು...ತಂಗಿಯಾಗಿ ಬಂದು ಮಗಳಾಗಿದ್ದವಳ ಮಂಜುಳ ಧ್ವನಿ ಅದು..  ಪಕ್ಕದಲ್ಲಿ ನೋಡಿದೆ ಸ್ನೇಹಿತಳಂತ ಮಗಳು ಇನ್ನು ಸಕ್ಕರೆ ನಿದ್ದೆಯಲ್ಲಿದ್ದರೆ.. ಮನ ಮೆಚ್ಚಿದ ಮಡದಿ ಸಿಹಿ ನಿದ್ದೆಯ ಇಳಿಜಾರಿನಲ್ಲಿ ಜಾರಾಡುತ್ತಿದ್ದಳು....!

"ಅಣ್ಣಾ ಕಾಫೀ ಕುಡಿಯಿರಿ.. ಹಾಗೆ ಒಂದು ಪುಟ್ಟದಾಗಿ ಸುತ್ತಾಡಿ ಬರೋಣ.."

ಐದೇ ನಿಮಿಷ.. ಇಬ್ಬರು ಮನೆಯಿಂದ ಹೊರಗೆ.. ಆ ತಂಗಾಳಿಯಲ್ಲಿ.. ನಡೆಯುತ್ತಾ ಸಾಗಿದ್ದೆವು.. ಮೆಲ್ಲಗೆ ನನ್ನನ್ನೇ ಚಿವುಟಿಕೊಂಡೆ.. 

"ಅರೆ ಇದು ಕನಸೋ ನನಸೋ.. ಇಲ್ಲಿ ಬರಲು ಸಾಧ್ಯವೇ ಇಲ್ಲ.. ಕಾರಣವೇ ಇಲ್ಲಾ..  
ಏನಪ್ಪಾ ಅಯ್ಯೋ ತಪ್ಪು ತಪ್ಪು !!!!

ಏನಮ್ಮ ನಿನ್ನ ಲೀಲೆ ಶಾರದೇ.. ನಿನ್ನ ಲೋಕದ ಜೀವಿಗಳಲ್ಲಿ ಈ ಮಟ್ಟಿನ ಪ್ರೀತಿ ವಿಶ್ವಾಸ.. ನಿನ್ನ ಗಂಡನ ಲೋಕದಲ್ಲಿದ್ದರೆ.. ಆಹಾ. !"

ಬೆಳಗಿನ ತಂಗಾಳಿ... ಸೂರ್ಯ ಬೀರುತ್ತಿದ್ದ ಬಿಸಿಲು ಕೋಲು.. ಹಿತ ಮಿತ ಶಾಖ.. ಸುತ್ತ ಮುತ್ತಲು ಹಸಿರು.. ಜೊತೆಯಲ್ಲಿ ಪ್ರೀತಿ ಪಾತ್ರಳಾದ ಮಗಳು ತಾನು ಅಕ್ಷರದ ಮೆಟ್ಟಿಲನ್ನು ಹತ್ತಲು ಶುರುಮಾಡಿದ್ದ ಶಾಲಾ ದೇಗುಲದ ಬಳಿ ಕರೆದೊಯ್ದಿದ್ದಳು..
ಅಣ್ಣ.. ಇಲ್ಲೇ ಸ್ವಲ್ಪ ದೂರದಲ್ಲಿ ನನ್ನನ್ನು ರೂಪಿಸಿದ ದೇಗುಲ ಇರುವುದು!!!

ಅಣ್ಣ ನಾ ಇಲ್ಲೇ ನನ್ನ ವಿಧ್ಯಾಭ್ಯಾಸ ಶುರು ಮಾಡಿದ್ದು.. ಇದನ್ನು ಹೇಳುವಾಗ ಅವಳ ಕಣ್ಣಲ್ಲಿ ಹೆಮ್ಮೆಯ ಸಾಧನೆ ಕಂಡರೆ.. ಶಾಲಾ ದೇಗುಲದ ಆವರಣದಲ್ಲಿದ್ದ ಐದು ಸಿಂಹಗಳು..ಹೌದು ಹೌದು ಎಂದವು!

ಐದು ಸಿಂಹಗಳು ಒಂದೇ ಚೌಕಟ್ಟಿನಲ್ಲಿ.. 
ನಾವಿಲ್ಲಿ ಇರುವಾಗ ಭಾವನೆ ತುಂಬಿರುವ ಅಕ್ಷರಗಳ ತೇರುಗಳೇ ಸಿಂಹಗಳಾಗಿ ಹೊರ ಹೋಗುವುದು ಎನ್ನುವಂತೆ ಎದೆ ಸೆಟೆದು ಹೇಳುತ್ತಿದ್ದವು..

ತನ್ನ ಪ್ರೀತಿಯ ವಿದ್ಯಾರ್ಥಿಗೆ ಸ್ವಾಗತ ಕೋರಲು ಸಜ್ಜಾಗಿ ನಿಂತ 
ಶಾಲಾ ದೇಗುಲ. 

ಸುಂದರ ಭಾವದ ತೇರನ್ನು ಏರಿಸುವ ಬರಹಗಾರ್ತಿಗೆ ಅಡಿಪಾಯ ಹಾಕಿಕೊಟ್ಟ ಶಾಲಾ ದೇಗುಲಕ್ಕೆ ಮನದಲ್ಲಿ ನಮಿಸಿದೆ. ಮೆಲ್ಲಗೆ ಕಿರುಗಣ್ಣಲ್ಲಿ ಮಗಳನ್ನು ನೋಡಿದೆ.. "ಓಹ್ ನೋ" ಎಂದು ನಕ್ಕಳು.. ಇಬ್ಬರಿಗೂ ಅರ್ಥವಾಯಿತು.. ಇಬ್ಬರೂ ಶಾಲೆಗೇ ನಮಿಸಿ ಮನೆಗೆ ಬಂದೆವು..
ಶಾಲಾ ಫಲಕ.. !!!

ಅಣ್ಣಾ ನಾ ಓದಿದ ಶಾಲೆ.. !

ಒಂದು ಸುಂದರ ದಿನದ ಮುನ್ನುಡಿಗೆ  ಬೆಳಗಿನ ಒಂದು ಹಿತಮಿತ ನಡಿಗೆ ಕೊಟ್ಟ ಆರಂಭ ಸಕತ್ ಇತ್ತು.. ಪ್ರಾತಃಕರ್ಮಗಳನ್ನು ಮುಗಿಸಿ.. ತಿಂಡಿ ತಿಂದು.. ಮತ್ತೆ ಕಾರಲ್ಲಿ ಕೂತಾಗ ಘಂಟೆ ಎಂಟುವರೆ ಒಂಭತ್ತು ಆಗಿತ್ತು..

ಆ ಒಂದು ಪುಟ್ಟ ಪುಟ್ಟ ಸಮಯದಲ್ಲಿ ಮಾಯ್ನೋರ ಮನೆಯ ಯಜಮಾನರಾದ ಅಜ್ಜ, ಅವರ ಸಾರಥಿಯಾದ ಅಜ್ಜಿ, ದೊಡ್ಡಮ್ಮ, ದೊಡ್ಡಪ್ಪ, ಅಪ್ಪ ಅಮ್ಮ.. ಎಲ್ಲರ ಕಿರು ಪರಿಚಯವಾಗಿತ್ತು.. ಎಲ್ಲರ ಕುತೂಹಲದ ಕೇಂದ್ರ ಬಿಂಧು ನಾನಾಗಿದ್ದೆ ಎನ್ನುವುದು ನನಗೆ ಬೆಂಗಳೂರಿಗೆ ಬಂದ  ಮೇಲೆ ತಿಳಿಯಿತು.. !!!

ವಿಶಾಸ ಪ್ರೀತಿ ಮಮತೆಯ ಶರಧಿ.. ಮಾಯ್ನೋರ್ ಮನೆ 

ಕಾರು ಶಿರಸಿ ಕಡೆ ಹರಿಯುತಿತ್ತು.. ದಾರಿಯಲ್ಲಿ ಸಂದೇಶಗಳ ಮೇಲೆ ಸಂದೇಶ.

"ಪ್ಲೀಸ್ ಹೇಳು.. ಯಾತಕ್ಕೆ ಬರ್ತಾ ಇದ್ದೀಯ.. ಯಾರಿದ್ದಾರೆ.. ಎಷ್ಟು ಹೊತ್ತಿಗೆ.. ಐದು ನಿಮಿಷ ಹತ್ತು ನಿಮಿಷ ಇದಕ್ಕೆ ಬೆಲೆಯಿಲ್ಲವೇ.. ಬರದೆ ಇದ್ದರೆ ಹಗ್ಗ.. ಬಿಳಿ ಸೀರೆ.. " ಹೀಗೆ ಸಾಗುತ್ತಲೇ ಇತ್ತು.. ಮಗಳ ಮೊಬೈಲ್ ನಲ್ಲಿ.. ಎಲ್ಲರೂ ನಗುತ್ತಲೇ ಇದ್ದೆವು.. ಅಷ್ಟೇ!

ಸೀದಾ ಮತ್ತೊಂದು ಅಜ್ಜನ ಮನೆಗೆ ಬಂದೆವು.. ಮನಸ್ಸಲ್ಲಿ ಇರುವ ಪ್ರೀತಿ ಭೂಮಿಯ ಆಳಕ್ಕಿಂಥ ಕೆಳಗೆ ಇಳಿಯುವ ಸುಂದರ ಸಂದರ್ಭ.. ಲಗುಬಗೆಯಿಂದ ಕೊಟ್ಟ ಕಾಫೀ.. ದೇಹವನ್ನು ಮತ್ತೆ ಚುರುಕುಗೊಳಿಸಿತು.. ಎಲ್ಲರಿಗೂ ಸಂಜೆ ಬರುತ್ತೇವೆ ಎಂದು ಹೇಳಿ.. ನಾವು ಮತ್ತೆ ಹೊರಟೆವು..

ಅಜ್ಜನ ಮನೆಯ ಮೊದಲ ಮನೆಯಾಗಿ ಎಂದಳಾ ಭಾಗ್ಯ!!!

ಅಷ್ಟರಲ್ಲಿಯೇ.. "ಹೇ ನೀನು ಬರ್ತೀಯೋ ಇಲ್ಲಾ.. ನಾ"

"ಇಲ್ಲ ಬರ್ತಾ ಇದ್ದೀನಿ.. ಐದು ಹತ್ತು ನಿಮಿಷ.. ಸಿದ್ಧವಾಗಿರು ಪ್ಲೀಸ್"

"ನೀ ಬರೋಲ್ಲ.. ನಾ ಕಾಲೇಜಿಗೆ ಹೋಗುತ್ತೇನೆ.. "

"ಇಲ್ಲ ಪ್ಲೀಸ್.. ಪ್ಲೀಸ್.. "

ದೇವರಿಗೆ "ಅರ್ಚ"ನೆ ಪೂಜೆ ಮಂಗಳಾರತಿ ಏನೇ ಕೊಡಬಹುದು ಅಥವಾ ಮಾಡಬಹುದು ಆದರೆ..  ಈ ಚಿಕ್ಕ ಚಿಕ್ಕ ಪುಟ್ಟಿಯರನ್ನು ಸಂಭಾಳಿಸುವ ಕೆಲಸ.. ರಾಮರಾಮ!

ಸಿರ್ಸಿ ಹೃದಯ ಭಾಗದ ಹತ್ತಿರ.. ಒಂದು ತಿರುವಿನಲ್ಲಿ ಕಾರು ನಿಂತಿತು..

"ಓಹ್ ಓಹ್ ಇವರ.. ಓಕೆ ಓಕೆ.. ಕೋಗಿಲೆ ಧ್ವನಿ "ಕ್ರಶ್" ಮಾಡುತ್ತಾ ಹರಿಯಿತು.. ತಿರುಗಿ ನೋಡಿದೆ.. ಹಲ್ಲು ಬಿಟ್ಟೆ..

ಹಾಯ್ ಅತ್ತಿಗೆ.. ಹಾಯ್ ಶೀತಲ್.. "

ಹಾಯ್ ಒಯ್ ಗಳು ವಿನಿಮಯವಾದವು..

"ಏನ್ರಿ ಹೇಗಿದ್ದೀರ.. " 

ನಾ ಕೇಳಿದ ಗಂಭೀರ ಪ್ರಶ್ನೆಗೆ ಅಷ್ಟೇ ಗಂಭೀರವಾಗಿ "ನಾ ಚೆನ್ನಾಗಿದ್ದೀನಿ ಶ್ರೀಕಾಂತಣ್ಣ"

(ಪುಣ್ಯ ಮಗಳಿಗೆ.. ಅರ್ಚನ ಪುಟ್ಟಿಯಿಂದ ಅರ್ಚನೆಯಾಗಲಿಲ್ಲ.. ಇವರ ಬಗ್ಗೆನಾ ಇಷ್ಟೊಂದು ಬಿಲ್ಡ್ ಅಪ್ ಕೊಟ್ಟಿದ್ದು ಅಂತ)

ಮುಂದಿನ ಹತ್ತು ಘಂಟೆಗಳು ಮನಸಲ್ಲಿ ಒಂದು ಸುಂದರ ನೆನಪಾಗಿ ಅಚ್ಚು ಮೂಡಿಸಿತ್ತು..

ಸ್ನೇಹಿತೆಯಾದ ಶೀತಲ್.. ಮಗಳಾದ ಭಾಗ್ಯ ಪುಟ್ಟಿ.. ಮನದನ್ನೆಯಾಗಿ  ನಗುತ್ತಲೇ ಇರುವ  ಸವಿತಾ.. ನೋಡಿದ ತಕ್ಷಣ ತಂಗಿ ಅಂದ್ರೆ ಹೀಗೆ ಇರಬೇಕು ಎನ್ನಿಸುವ ಅರ್ಚನ ಪುಟ್ಟಿ.. ನನ್ನ ಪ್ರವಾಸಕ್ಕೆ ಯಾವಾಗಲೂ ತನ್ನ ಟೈರ್ ಗಳನ್ನೂ ತಟ್ಟಿಕೊಂಡು ಸಿದ್ಧವಾಗಿರುವ ನನ್ನ ರಿಟ್ಜ್ ಕಾರು.. ಶ್ರೀ ನಿನ್ನ ಎಲ್ಲ ನೆನಪುಗಳು  ನನ್ನ ಸಂಗಡ ಎನ್ನುವ ನನ್ನ ಕ್ಯಾಮೆರ.. ಇದಕ್ಕಿಂತ ಇನ್ನೇನು ಬೇಕು ಒಂದು ಸುಂದರ ಪ್ರವಾಸ ರಸಮಯವಾಗಲು..!

ಎಲ್ಲೆಲ್ಲಿಗೆ ಹೋಗೋದು.. ಕೆಲವರು ಅಲ್ಲೇನು ಇದೆ ಮಣ್ಣು ಅಂದರೆ.. ಇನ್ನು ಕೆಲವರು ಮಣ್ಣಾದರು ಸರಿ ಅಲ್ಲಿ ಕ್ರಶ್ ಇರುತ್ತದೆ ಎಂದು ಹೇಳುತ್ತಿದ್ದರು .. ಅಣ್ಣಾ ನೀವೆಲ್ಲಿಗೆ ಕರೆದುಕೊಂಡು ಹೋದರು ಸರಿ.. ನಾ ನಿಮ್ಮ ಜೊತೆ ಎನ್ನುತ್ತಾ ಎಲ್ಲರೂ ನನ್ನ ಕೊರಳಿಗೆ ಜೋತು ಬಿದ್ದರು...

ಕೊಸರು: ಶಾಲಾ ದೇಗುಲದ ಮುಂದೆ ಕಂಡ ಫಲಕ.. ನನ್ನ ಮನಸ್ಸೆಳೆಯಿತು.. ಅಕ್ಷರಗಳಲ್ಲೇ ಮತ್ತು ಬರಿಸುವ ಸುಮಧುರ ಭಾವಗಳ ಬರಹಗಳ ಒಡತಿಯನ್ನೇ ಸರಸ್ವತಿ ಲೋಕಕ್ಕೆ ಕೊಟ್ಟಾ ಈ ಶಾಲಾ ದೇಗುಲದ ಮುಂದೇ ಬೇರೆ ನಶೆ ಬರಿಸುವ ಪದಾರ್ಥಗಳನ್ನು ನಿಷೇದಿಸಿರುವುದು ಸಮಂಜಸ ಎನ್ನಿಸಿತು!!!!

ಬರಹಗಳ ನಶೆಯ ಮುಂದೇ ಈ ನಶಾ ಪದಾರ್ಥಗಳು ತೃಣ ಸಮಾನ!!!

ಮತ್ತೆ ಚಡಪಡಿಕೆ ಶುರುವಾಯಿತು.. !!!!

Monday, March 31, 2014

ಶಿರಬಾಗಿ ವಂದಿಸುವೆ... ಶಿರಸಿಗೆ....ಭಾಗ ಒಂದು - !!!

ಚಡಪಡಿಕೆ ಚಡಪಡಿಕೆ.................................................!



ನನಗೆ ಹುಚ್ಚಿತ್ತು.. ಪ್ರವಾಸಕ್ಕೆ ಹೋಗುವ ಮೊದಲೇ.. ಆ ಪ್ರವಾಸದ ಬಗ್ಗೆ ಬರೆದು ನಂತರ ಬರೆದ ಹಾಗೆಯೇ ಪ್ರವಾಸವನ್ನು ಅನುಭವಿಸಬೇಕು ಎಂದು.. ಈ ಹುಚ್ಚಿನ ಮೊದಲ ಮಜಲು ಈ ಲೇಖನ ಈ ಕೊಂಡಿಯಲ್ಲಿದೆ.. ಕೂಸು ಹುಟ್ಟುವ ಮುಂಚೆಯೇ ಕುಲಾವಿ!

ಸೂರ್ಯಂಗೇ ಟಾರ್ಚ್...  ಪ್ರವಾಸಕ್ಕೆ ಟಾರ್ಚ್!!!

ರವಿಯೂ ಕಾಯುತ್ತಿದ್ದ ಈ ಪ್ರವಾಸಕ್ಕೆ ಬೆಳಕಾಗಲು!!!
ಕಡೂರಿನ ವಾಹನ ನಿಲ್ಧಾಣದಲ್ಲಿ ಮಲ್ಲಿಗೆ ನಗೆ ಬೀರುತ್ತಾ ನನ್ನ ಮಗಳು ನಿಂತಿದ್ದಳು..


ಅಪ್ಪ ಭಾಗ್ಯ ಅಕ್ಕನನ್ನು ನಾನೆ ಕರೆದು ಕೊಂಡು ಬರುತ್ತೇನೆ ಎಂದಳು ನನ್ನ ಸ್ನೇಹಿತೆ ಶೀತಲ್!! 


ಅಣ್ಣಾ.. ಅಣ್ಣಾ "ನೀ(ವ್) ಇರಲು ಜೊತೆಯಲ್ಲಿ" 



"ಹೇಳು ಮಗಳೇ ಯಾಕೆ  ಅಲ್ಲಿಯೇ ನಿಲ್ಲಿಸಿದೆ"



"ನೀ(ವ್) ಇರಲು ಜೊತೆಯಲ್ಲಿ..
"ಬಾಳೆಲ್ಲ ಹಸಿರಾದಂತೆ"



"ಹ ಹ... ನೋಡು ಮಗಳೇ .. ನಿನಗೋಸ್ಕರ ಅದೇ ಹಾಡು ಬರುತ್ತಿದೆ.. "



ಉ. ಕು. ಸಾಂ ಆಯಿತು.. ಸವಿತಾ ಶೀತಲ್ ಮತ್ತು ನನ್ನ ಎರಡನೇ ಮಗಳು.. ಫುಲ್ ಜೋಶ್ ನಲ್ಲಿ ಮಾತಾಡತೊಡಗಿದರು.. ನಾನು ಸುಮ್ಮನೆ ಕಾರು ಓಡಿಸುತ್ತಾ  ಸಾಗಿದೆ.. ಸಂಜೆಗತ್ತಲು ಮುತ್ತುತ್ತಾ ಬೆಳಕನ್ನು ಮುಟ್ಟುತ್ತಾ ಬಂತು..


ರವಿ ನಮ್ಮ ಪಯಣಕ್ಕೆ ಶುಭಕೋರಿ ತನ್ನ ಗೂಡನ್ನು ಸೇರಲು ಹೊರಟ ಕ್ಷಣ!


ಅಣ್ಣಾ ಇದೆಲ್ಲ ಹೆಂಗೆ ಅಣ್ಣಾ.. ನೀವು ಯಾರೋ ನಾನು ಯಾರೋ.. ಅತ್ತಿಗೆ ಈ ಶೀತಲ್ ಪುಟ್ಟು... ಕೇವಲ ಒಂದು ವರ್ಷದ ಹಿಂದೆ ನೀವು ಯಾರೂ ಅಂತಲೇ ಗೊತ್ತಿರಲಿಲ್ಲ.. ಇಂದು  ನೋಡಿದರೆ ನೀವು ನನ್ನ ಮನೆಗೆ ಬರುತಿದ್ದೀರ.. ನನಗೆ ನಂಬೋದಕ್ಕೆ ಆಗುತ್ತಿಲ್ಲ..


ನಾ ಹಲ್ಲು ಬಿಡುವುದನ್ನು ಬಿಟ್ಟು ಬೇರೇನೂ ತೋಚಲಿಲ್ಲ ಕಾರಣ.. ನನಗೂ ಅದೇ ಪ್ರಶ್ನೆಗಳು ಕಾಡುತ್ತಿದ್ದವು. 

ನಿಮ್ಮ ಪ್ರವಾಸಕ್ಕೆ ನಾನು ಬರುತ್ತೇನೆ ಎಂದ ಶ್ವಾನ ಮಹಾರಾಜ!!! 

"ಶ್ರೀ ಇಷ್ಟು ದೂರ ಬಂದಿದ್ದೇವೆ.. ದೊಡ್ಡಮ್ಮನ ಮನೆಗೆ ಹೋಗಿ ಬರೋಣ" ಸವಿ ಉವಾಚ.. 

ಶೀತಲ್ ಕುಣಿಯುತ್ತಿದ್ದಳು..  ಮೆಲ್ಲಗೆ ಮಗಳ (ಭಾಗ್ಯ) ಕಡೆ ನೋಡಿದೆ ..

"ಅಣ್ಣಾ ನೀವು ಎಲ್ಲಿಗೆ ಕರೆದುಕೊಂಡು ಹೋದರು ನಾ ಬರುವೆ ನಿಮ್ಮೊಡನೆ.. "ಭಾಗ್ಯ ಉವಾಚ!

ಸರಿ ಶಿವಮೊಗ್ಗದ ಕೋಟೆ ಆಂಜನೇಯನ ಬೀದಿಯಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋದೆವು.. ಅಲ್ಲಿ ನದಿಯಲ್ಲಿರುವ ನೀರು ಶರಧಿಗೆ ಸೇರುವಂತೆ.. ಪ್ರೀತಿಯ ಸಾಗರವನ್ನೇ ಹರಿಸಿ ಬಿಟ್ಟರು.. ಕೇವಲ ಒಂದು ಹತ್ತು ಹದಿನೈದು ನಿಮಿಷದ ಭೇಟಿ.. ಎರಡು ಘಂಟೆಗಳ ಭೇಟಿಗೆ ತಿರುಗಿತು.... 

ಹೊಟ್ಟೆ ತುಂಬಾ ಊಟ ಬಾಯಿ ತುಂಬಾ ಮಾತು.. ಸಂಕೋಚದ ಮುದ್ದೆ ಎನಿಸಿಕೊಂಡಿದ್ದ ಭಾಗ್ಯ.. ಉತ್ಸಾಹದ ಚಿಲುಮೆಯಾಗಿದ್ದಳು.. 

ಸುಮಾರು ಹೊತ್ತು ಇದ್ದು.. ಮಾತು ಮಾತು ಇನ್ನಷ್ಟು ಮಾತಿನ ನಂತರ ದೊಡ್ಡಮ್ಮನ ಆಶೀರ್ವಾದ ಪಡೆದು.. ಅಣ್ಣ ತಮ್ಮ ಎನ್ನುವ ಮಾತೆ ಇಲ್ಲದೆ ಗೆಳೆಯರ ತರಹ ಮಾತಾಡುತ್ತಿದ್ದ ಸುಬ್ಬರಾಮು ದಂಪತಿಗಳಿಂದ ಅಪ್ಪಣೆ ಪಡೆದು ಹೊರಟೆವು... !

ಮೆಲ್ಲನೆ ಒರೆಗಣ್ಣಲ್ಲಿ ನೋಡಿ "ಅಣ್ಣಾ ಗಿರೀಶ್ ಮತ್ತು ಅವರ ಸ್ನೇಹಿತ ಶಿವಮೊಗ್ಗದಲ್ಲಿ ಇದ್ದಾರಂತೆ" ಭೇಟಿ ಮಾಡೋಣ.. 

ಕಣ್ಣು ಮಿಟುಕಿಸಿದೆ... ನನ್ನ ಪ್ರೀತಿಯ ಕಾರು ಶಿವಮೊಗ್ಗದ ವಾಹನ ನಿಲ್ದಾಣದ ಮುಂದೆ ಹಾಜಿರ್.. ಗಿರೀಶ್ ಮತ್ತು ಅವರ ಸ್ನೇಹಿತರಾದ ಪೂರ್ಣೇಶ್ ನಿಂತಿದ್ದರು... ಮಾತು ಇನ್ನಷ್ಟು ಮಾತು.. ಭಾಗ್ಯ ಪುಟ್ಟಿಯ ಸಂತಸದ ನಗು.. ಅರೆ ಘಳಿಗೆ ಅರೆ ಘಳಿಗೆಯಲ್ಲೂ ಬದಲಾಗುತ್ತಿದ್ದ ನಮ್ಮ ಪಯಣದ ಪಟ್ಟಿ.. 

ಸಿದ್ದಾಪುರದಿಂದ ಕರೆ ಬರುತ್ತಲೇ ಇತ್ತು.. ಎಷ್ಟು ಹೊತ್ತಿಗೆ ಬರ್ತೀರಿ.. ಆ ಪ್ರಶ್ನೆಗೆ ಯಾರಲ್ಲೂ ಉತ್ತರವಿರದ ಪ್ರಶ್ನೆಯಾಗಿತ್ತು.. :-)

ಗಿರೀಶ್ ಮತ್ತು ಸ್ನೇಹಿತರಿಗೆ ಎಲ್ಲಾ ಆಮಿಷ ತೋರಿದೆವು ನಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಲು.. ಆದ್ರೆ ಅವರು (AAP) ಪೊರಕೆ ಗುರುತಿನ ಮಾಲೀಕನಂತೆ.. ಗಲಿಬಿಲಿ ನಿರ್ಧಾರವಿರಲಿಲ್ಲ.. ಇಲ್ಲ ಸರ್ ನಮ್ಮದು ಆಗಲೇ ಪೂರ್ವ ನಿಯೋಜಿತ ಕಾರ್ಯಕ್ರಮ.. ದಯಮಾಡಿ ಕ್ಷಮಿಸಿ ಮತ್ತೊಮ್ಮೆ ಬರುತ್ತೇವೆ.. ಎಂದರು. 

ಸಾಗರದ ನಿರೀಕ್ಷಣ ಮಂದಿರದತ್ತ ಕಾರು ಓಡಿತು.. ನಗುಮೊಗದ ಅಧ್ಯಾಪಕರು ಸರಿ ರಾತ್ರಿ ಹನ್ನೆರಡರ ಆಸುಪಾಸಿನಲ್ಲಿಯೂ ನಸು ನಗುತ್ತ ನಮ್ಮನ್ನು ಮಾತಾಡಿಸಿ ಬನ್ನಿ ಊಟ ಮಾಡುವಿರಂತೆ.. ಇಲ್ಲಾ ಕಡೆ ಪಕ್ಷ ಕಾಫಿಯಾದರೂ ಕುಡಿಯಲೇ ಬೇಕು ಎಂದು ಒತ್ತಾಯ ಮಾಡಿದರು. ಆಗದು ಎಂದು ಹೇಳಲು ಆಗಲಿಲ್ಲ.. 

ಏನೀ ಸ್ನೇಹ ಸಂಬಂಧ. ಎಲ್ಲಿಯದೂ ಈ ಅನುಬಂಧ.. ಸರಿ ರಾತ್ರಿಯಲ್ಲಿ ಬ್ಲಾಗ್ಲೋಕದ ಜೊತೆಯಲ್ಲಿ!!! 

ಭಾಗ್ಯ ನಗುತ್ತಲೇ ಇದ್ದಳು.. "ಅಣ್ಣಾ ನಿಮ್ಮ ಹೃದಯ ನಿಮ್ಮ ಕಾರಿಗಿಂತ ದೊಡ್ಡದು....:) "

ಮಧ್ಯರಾತ್ರಿಯಲ್ಲಿ ಪರಿಚಯವೇ ಇಲ್ಲದ ಒಂದು ಕುಟುಂಬದ ಭೇಟಿಗೆ ಮನ ಕಾಯುತ್ತಿತ್ತು. ಮುದ್ದಾದ ಮಗುವಿನ.. ತಾಳ್ಮೆಯ ಮಡದಿ ಕೂಡಿದ ಚಂದದ ಸಂಸಾರ ಅವರದ್ದು.. ಬನ್ನಿ ಬನ್ನಿ ಸ್ವಲ್ಪ ಹೊತ್ತು ಮಾತಾಡುತ್ತಾ ಕೂತಿರಿ.. ಬಿಸಿ ಬಿಸಿ ಅಡಿಗೆ ಮಾಡಿಬಿಡುತ್ತೇನೆ. ಆ ಮಲೆನಾಡಿನ ಹೆಬ್ಬಾಗಿಲಲ್ಲಿ ಸರಿ ರಾತ್ರಿಯ ತಣ್ಣನೆ ಗಾಳಿಯಲ್ಲೂ ಮೈ ಸಣ್ಣಗೆ ಬೆವರಿತು. 

ಬೇಡ ಸರ್.. ಕಾಫಿ ಮಾತ್ರ ಕೊಡಿ.. ಭಾಗ್ಯ ಮತ್ತೆ ಮತ್ತೆ ನಗುತ್ತಿದ್ದಳು.. "ಅಣ್ಣ ನಿಮಗೆ ಕಾಫಿ ಸಿಕ್ಕರೆ.. ಆ ದೇವರನ್ನು ಕೂಡ ಒಮ್ಮೆ.... ಹಹಹ ಹಹಹ" ಅವಳ ನಗು ನಿಂತಿರಲಿಲ್ಲ. 

ಕಾಫಿ ಬಂತು.. ಸರ ಸರ ಕುಡಿದು.. ದೇವರಲ್ಲಿ ಪ್ರಾರ್ಥಿಸಿದೆವು. ದೇವರೇ ಇನ್ನು ನಮ್ಮ ಮುಂದಿನ ನಿಲ್ದಾಣ ಸಿದ್ದಾಪುರದ ಮಾಯ್ನೋರಮನೆ ಆಗಿರಲಪ್ಪ. ಕಾರಣ ಭಾಗ್ಯ ಪುಟ್ಟಿಯ ಮೊಬೈಲ್ ಅಳುತ್ತಲೇ ಇತ್ತು.. ಪಾಪ ಅದನ್ನು ಎತ್ತಿ ಕೊಂಡು ಎತ್ತಿ ಕೊಂಡು ಸಮಾಧಾನ ಮಾಡಿ ಮಾಡಿ.... !

"ಅಣ್ಣಾ ಮಾತಾಡುತ್ತಿರಿ.. "

ಸರಿ ಜೀವನದ ಕೆಲವು ಸ್ವಾರಸ್ಯಕರ ಘಟನೆಗಳು.. ಎಲ್ಲವೂ ನನ್ನ ಬಾಯಿಂದ ಅನಾವರಣಗೊಳ್ಳುತ್ತಿದ್ದವು!

ಕಾರು ಸಿದ್ದಾಪುರ ದಾಟಿತು.. ಮಾಯ್ನೋರಮನೆಯ ಮುಂದೆ ಬಂದು ನಿಂತಿತು..!!! 

ಆ ದೊಡ್ಡ ಮನೆಯಲ್ಲಿ.. ಇರುವವರ ಮನಸ್ಸು ಇನ್ನೂ ದೊಡ್ಡದು.. ಇವರು ಇವರು ಅವರು ಇವರು ಅಂತ  ಪರಿಚಯ ಆಯಿತು.. ಆ ಮನೆಯವರು "ಶ್ರೀಕಾಂತ್ ನೀವು ಏನು ಹೇಳಲೇ ಬೇಡಿ.. ಇವಳು ಆಗಲೇ ಕಿವಿ ತೂತಾಗುವಷ್ಟು ನಿಮ್ಮ ಬಗ್ಗೆ ನಿಮ್ಮ ಮನೆಯವರ ಬಗ್ಗೆ ಎಲ್ಲಾ ಹೇಳಿದ್ದಾಳೆ.. ಹೇಳ್ತಾನೆ ಇರ್ತಾಳೆ.. ನೀವೆಲ್ಲಾ ಬಂದದ್ದು ಬಹಳ ಕುಶಿ ಆಯಿತು.. "

ನನಗೆ ಮನದಲ್ಲಿಯೇ ಸಣ್ಣ ಸಣ್ಣ ಸಂತಸದ ತರಂಗಗಳು ಏಳುತ್ತಿದ್ದವು.. ಬೆಳಿಗ್ಗೆ ಇಂದ ಕಾರು ಓಡಿಸಿದ್ದ ಪರಿಣಾಮ.. ತಣ್ಣನೆ ಗಾಳಿ.. ಹೊಟ್ಟೆ ತುಂಬಾ ಪೊಗದಸ್ತಾದ ಊಟ.. ನಿದ್ರಾದೇವಿ ಎಳೆಯುತ್ತಿದ್ದಳು..!

ಆದರೆ ಬೇಸಿಗೆಯಲ್ಲಿ ಈ ಸುಂದರ ಊರಿನ ಪರಿಸರದಲ್ಲಿ ನಿದ್ದೆ ಮಾಡಿ ಸಮಯ ವ್ಯರ್ಥ ಮಾಡುವುದು ನನಗೆ ಇಷ್ಟವಾಗಲಿಲ್ಲ.. ಆದರೆ ಮರುದಿನ ಬೆಳಿಗ್ಗೆ.. (ಮರುದಿನ ಬೆಳಿಗ್ಗೆ ವಾಟ್ ನಾನ್ಸೆನ್ಸ್.. ನಾವು ತಲುಪಿದ್ದು ಬೆಳಗಿನ ಜಾವ ಎರಡು ಘಂಟೆ ಹೊತ್ತಿಗೆ) ಮತ್ತೆ ಪ್ರಯಾಣ ಮುಂದುವರೆಸ ಬೇಕಾಗಿದ್ದರಿಂದ.. ಲ್ಯಾರಿ ಅಜ್ಜನ ಕೋಣೆಯಲ್ಲಿ ಮಲಗಿಕೊಂಡೆವು.. ಸವಿತಾ ಶೀತಲ್ ಆಗಲೇ ನಿದ್ರಾದೇವಿಯ ಅಸ್ತ್ರಕ್ಕೆ ಬೆರಗಾಗಿದ್ದರು. ನಾನು ಕೆಲಹೊತ್ತು ಸಂದೇಶಗಳನ್ನು ನೋಡಿ..ಹಾಗೇ.. ನಿದ್ರಾದೇವಿಯ ಮಡಿಲಿಗೆ ಜಾರಿದೆ. 

ಮುಂದಿನ ದಿನದ ದಿನಚರಿಯ ಬಗ್ಗೆ ಮತ್ತೆ ಚಡಪಡಿಕೆ.. ಚಡಪಡಿಕೆ.........................!