Thursday, March 27, 2014

ಶಿರಬಾಗಿ ವಂದಿಸುವೆ... ಶಿರಸಿಗೆ!!!

ಚಡಪಡಿಕೆ ಚಡಪಡಿಕೆ.................................................!

"ಏನೋ ಹೊಸ ಉಲ್ಲಾಸ ಇಂದು ನನ್ನಲ್ಲಿ ನೋಡು" ಪ್ರಳಯಾಂತಕ ಚಿತ್ರದ ಹಾಡು ಬೇಡವೆಂದರೂ ಕಾಡುತ್ತಿತ್ತು.

"ಒಂದು ಎರಡು ಮೂರು ನಾಲ್ಕು ಆಮೇಲೆ ಏನು" ಆಚನಾಕ್ಕಾಗಿ ಅಣ್ಣಾವ್ರು ಒಂದು ಮುತ್ತಿನ ಕಥೆಯಿಂದ ಎದ್ದು ಹಾಡ ತೊಡಗಿದರು.

ಅರೆ ಏನಿದು ಎಲ್ಲರು ಒಮ್ಮೆಲೇ ಕಾಡಬೇಕೆ.. ಕಾರಿನ ಹಾಡುವ ಪೆಟ್ಟಿಗೆಯ ಕಿವಿ ಹಿಂಡಿದೆ.. ಕಡ್ಡಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಹಾಡು ನನಗೆ ಅಮಲು ಏರಿಸಲಾರಂಭಿಸಿತು. ಶ್ರೀ ಇವತ್ತು ಏನಾದರೂ ಹುಚ್ಚು ಸಾಹಸಕ್ಕೆ ಕೈಹಾಕು ಎಂದಿತು ಮನಸ್ಸು.. ಮನಸ್ಸಿನ ಮಾತನ್ನ ಇದುವರೆಗೂ ತೆಗೆದುಹಾಕಿಲ್ಲ.

ಅವತ್ತು ಆಫೀಸಿಂದ ಹೊರಟಾಗಿನಿಂದ ಮನೆ ತನಕ ಬರುವ ಸುಮಾರು ಒಂದೂವರೆ ಘಂಟೆ ಅದೇ ಹಾಡನ್ನು ತಿರುಗಿಸಿ ತಿರುಗಿಸಿ ಕೇಳುತ್ತಲೇ ಬಂದೆ..

"ಕೆನ್ ಐ"

"ಶ್ಯೂರ್"

ಇಷ್ಟು ಸಾಕು.. ಮಾತಿನ ಬಂಡಿ ಓಡಿಸಲು..

ದಿನಾಂಕ ನಿಗದಿಯಾಯಿತು.. !

ಕಡೂರಿನ ವಾಹನ ನಿಲ್ಧಾಣದಲ್ಲಿ ಮಲ್ಲಿಗೆ ನಗೆ ಬೀರುತ್ತಾ ನನ್ನ ಮಗಳು ನಿಂತಿದ್ದಳು..

ಅಣ್ಣಾ.. ಅಣ್ಣಾ "ನೀ(ವ್) ಇರಲು ಜೊತೆಯಲ್ಲಿ"

"ಹೇಳು ಮಗಳೇ ಯಾಕೆ  ಅಲ್ಲಿಯೇ ನಿಲ್ಲಿಸಿದೆ"

"ನೀ(ವ್) ಇರಲು ಜೊತೆಯಲ್ಲಿ..
"ಬಾಳೆಲ್ಲ ಹಸಿರಾದಂತೆ"

"ಹ ಹ... ನೋಡು ಮಗಳೇ .. ನಿನಗೋಸ್ಕರ ಅದೇ ಹಾಡು ಬರುತ್ತಿದೆ.. "

ಉ. ಕು. ಸಾಂ ಆಯಿತು.. ಸವಿತಾ ಶೀತಲ್ ಮತ್ತು ನನ್ನ ಎರಡನೇ ಮಗಳು.. ಫುಲ್ ಜೋಶ್ ನಲ್ಲಿ ಮಾತಾಡತೊಡಗಿದರು.. ನಾನು ಸುಮ್ಮನೆ ಕಾರು ಓಡಿಸುತ್ತಾ  ಸಾಗಿದೆ.. ಸಂಜೆಗತ್ತಲು ಮುತ್ತುತ್ತಾ ಬೆಳಕನ್ನು ಮುಟ್ಟುತ್ತಾ ಬಂತು..

ಅಣ್ಣಾ ಇದೆಲ್ಲ ಹೆಂಗೆ ಅಣ್ಣಾ.. ನೀವು ಯಾರೋ ನಾನು ಯಾರೋ.. ಅತ್ತಿಗೆ ಈ ಶೀತಲ್ ಪುಟ್ಟು... ಕೇವಲ ಒಂದು ವರ್ಷದ ಹಿಂದೆ ನೀವು ಯಾರೂ ಅಂತಲೇ ಗೊತ್ತಿರಲಿಲ್ಲ.. ಇಂದು  ನೋಡಿದರೆ ನೀವು ನನ್ನ ಮನೆಗೆ ಬರುತಿದ್ದೀರ.. ನನಗೆ ನಂಬೋದಕ್ಕೆ ಆಗುತ್ತಿಲ್ಲ..

"ಭಗವಂತ ಕೊಡುವ ಆಶೀರ್ವಾದ ಕಣೋ ನೀವೆಲ್ಲ...."

ಹೀಗೆ ಸಾಗಿತ್ತು ನಮ್ಮ ಮಾತಿನ ಲಹರಿ.. ಶಿವಮೊಗ್ಗದಲ್ಲಿ ಏನಾದರೂ ಹೊಟ್ಟೆಗೆ ತುಂಬಿಸಿಕೊಳ್ಳೋಣ ಅಂತ.. ನಿಲ್ಲಿಸಿ.. ನನ್ನ ಇಬ್ಬರೂ ಮಕ್ಕಳಿಗೆ ಇಷ್ಟವಾಗುವ ಗೊಲ್ಗುಪ್ಪಾ ಹೊಡೆದೆವು.. 

ಕಾರು ಸಾಗರ ದಾಟಿತು.. ಸಿದ್ದಾಪುರದ ಮಾಯ್ನೋರಮನೆಯ ಮುಂದೆ ಬಂದು ನಿಂತಿತು.. 

ಆ ದೊಡ್ಡ ಮನೆಯಲ್ಲಿ.. ಇರುವವರ ಮನಸ್ಸು ಇನ್ನೂ ದೊಡ್ಡದು.. ಇವರು ಇವರು ಅವರು ಇವರು ಅಂತ  ಪರಿಚಯ ಆಯಿತು.. ಆ ಮನೆಯವರು "ಶ್ರೀಕಾಂತ್ ನೀವು ಏನು ಹೇಳಲೇ ಬೇಡಿ.. ಇವಳು ಆಗಲೇ ಕಿವಿ ತೂತಾಗುವಷ್ಟು ನಿಮ್ಮ ಬಗ್ಗೆ ನಿಮ್ಮ ಮನೆಯವರ ಬಗ್ಗೆ ಎಲ್ಲಾ ಹೇಳಿದ್ದಾಳೆ.. ಹೇಳ್ತಾನೆ ಇರ್ತಾಳೆ.. ನೀವೆಲ್ಲಾ ಬಂದದ್ದು ಬಹಳ ಕುಶಿ ಆಯಿತು.. "

ನನಗೆ ಮನದಲ್ಲಿಯೇ ಸಣ್ಣ ಸಣ್ಣ ಸಂತಸದ ತರಂಗಗಳು ಏಳುತ್ತಿದ್ದವು.. ಬೆಳಿಗ್ಗೆ ಇಂದ ಕಾರು ಪರಿಣಾಮ.. ತಣ್ಣನೆ ಗಾಳಿ.. ಹೊಟ್ಟೆ ತುಂಬಾ ಪೊಗದಸ್ತಾದ ಊಟ.. ನಿದ್ರಾದೇವಿ ಎಳೆಯುತ್ತಿದ್ದಳು.. 

ಆದರೆ ಬೇಸಿಗೆಯಲ್ಲಿ ಈ ಸುಂದರ ಊರಿನ ಪರಿಸರದಲ್ಲಿ ನಿದ್ದೆ ಮಾಡಿ ಸಮಯ ವ್ಯರ್ಥ ಮಾಡುವುದು ನನಗೆ ಇಷ್ಟವಾಗಲಿಲ್ಲ.. ಸಣ್ಣಗೆ ಒಂದಷ್ಟು ದೂರ ನೆಡೆದು ಬಂದೆವು... ಅಂಗಳದಲ್ಲಿಯೇ ಚಾಪೆ ಹಾಸಿಕೊಂಡು.. ಹರಟಿದೆವು.. ಬ್ಲಾಗ್, ಕಾಮೆಂಟ್, ಹಾಡು, ಟ್ರಿಪ್ ಹೀಗೆ ಎಲ್ಲವೂ ಮಾತಿಗೆ ಬಂದವು.. ಶೀತಲ್ ಪ್ರವಾಸದಲ್ಲಿ ನನಗೆ ಅಂತಿಕೊಂಡಿರುವವಳು ಇಂದು ಪಕ್ಷ ಬದಲಾಯಿಸಿಬಿಟ್ಟಿದ್ದಳು.. ಇಬ್ಬರೂ ಮಂಗನಿಂದ ಮಾನವ ಎನ್ನುವ ಸಿದ್ಧಾಂತವನ್ನು ಅದಕ್ಕೆ ತದ್ವಿರುದ್ಧವಾಗಿ  
ನಡೆಸುತ್ತಿದ್ದರು.. 

ಬೆಳಿಗ್ಗೆ ಬೇಗನೆ ಏಳಬೇಕಿತ್ತು.. ಒಲ್ಲದ ಮನಸ್ಸಿನಿಂದ.. ಮಲಗಲು ಹೊರಟೆವು.. 

ಅಣ್ಣಾ.. ಗುಡ್ ಮಾರ್ನಿಂಗ್.. ಪುಟ್ಟು ಗುಡ್ ಮಾರ್ನಿಂಗ್ . ಅತ್ತಿಗೆ ಗುಡ್ ಮಾರ್ನಿಂಗ್  .. ಕೋಗಿಲೆ ಸ್ವರ ಕೇಳಿ ಬಂತು.. ಹಲ್ಲು ಬಿಟ್ಟೆವು.. ಚಕ ಚಕ ಬೆಳಗಿನ ಕಾರ್ಯಕ್ರಮ ಮುಗಿಸಿ.. ತಿಂಡಿ ತಿಂದು.. ನಮ್ಮ ಸವಾರಿ ನಮ್ಮ ಪಯಣದ ಮುಂದಿಯ ಗುರಿ ಸಿರ್ಸಿ ಮಹಾಗಣಪತಿ ದೇವಸ್ಥಾನದ ಕಡೆ ಹೊರಟಿತ್ತು.. 



ದೇವಾಲಯಕ್ಕೆ ಹೋಗಿ.. ಸಲ್ಲಿಸಬೇಕಿದ್ದ ಹರಕೆ.. ಪ್ರಾರ್ಥನೆ.. ನಮನಗಳನ್ನು ಸಲ್ಲಿಸಿದ ಮೇಲೆ.. ಅಲ್ಲಿಯೇ ಅಂಗಡಿಯಲ್ಲಿ ಗಣಪನ ಚಿತ್ರ ತೆಗೆದುಕೊಂಡು.. ಮಾರಿಕಾಂಬೆಯ ದರ್ಶನಕ್ಕೆ ನುಗ್ಗಿದೆವು.. ಕೇವಲ ಒಂದು ವಾರದ ಹಿಂದೆಯಷ್ಟೇ ಜಾತ್ರೆ ಆಗಿದ್ದರಿಂದ.. ದೇವಿ ದರ್ಶನ ಸಾಧ್ಯವಿರಲಿಲ್ಲ... ದೇವಾಲಯವನ್ನು ಸುತ್ತಿ ಸುತ್ತಿ.. ಶೀತಲ್ ಗೆ ಅಲ್ಲಿನ ವಿವರ ಕೊಡುತ್ತಾ ಬಂದೆ..
 

ಅಣ್ಣಾ.. ಅಣ್ಣಾ.. ಬನವಾಸಿ ಬನವಾಸಿ ಎಂದಳು.... ಹೌದು ಕಣೋ.. ಎಲ್ಲಿ ನಿನ್ನ ಗೆಳತಿ ಬರೋಲ್ಲವೇ ಎಂದೇ.. ಬರ್ತಾಳೆ ಬರ್ತಾಳೆ.. ಅಂದಳು.. 


ಏನೇ ತಲೆಕೆಟ್ಟಿದೆಯ ನಿನಗೆ... ಬಿಳಿ ಸೀರೆ ತರಬೇಕ.. ನೀ ಬರದೆ ಹೋದರೆ ನೇಣು ಹಾಕಿಕೊಳ್ಳುತ್ತೇನೆ ಹೀಗೆ ಒಂದು ತುಂಟ ಪುಟ್ಟಿ ನಮಗಾಗಿ ಕಾಯುತ್ತಿತ್ತು... ಇನ್ನು ಮುಂದೆ ನನ್ನ ಕಾರಲ್ಲಿ ಹಾಡು ಇಲ್ಲಾ.. ನನ್ನ ಮಾತು ಇಲ್ಲ.. ಸವಿತಾ.. ಶೀತಲ್.. @#$#@ ಮತ್ತು @#$#@$# ಮಾತು ಮಾತು.. ಕಿವಿ ತೂತಾಗುವಷ್ಟು ಮಾತು ಮುಗಿಸುತ್ತಿದ್ದರು.. 

ಬನವಾಸಿ.. ಅಪ್ಪ ಇದು ಮಯೂರನ ರಾಜ್ಯ.. ಎಂದು ಶೀತಲ್ ಕುಣಿಯಲು ಶುರುಮಾಡಿದಳು.. ನಿಜಕ್ಕೂ ಬನವಾಸಿ ಒಂದು ರೋಮಾಂಚನ ಕೊಡುವ ಅದ್ಭುತ ತಾಣ....  ಕಲ್ಲಿನ ಮಂಟಪ.. ಕಲ್ಲಿನ ಬಸವ.. ಎತ್ತ ನೋಡಿದರು ನಮ್ಮನ್ನೇ ನೋಡುವಂತೆ ಅನ್ನಿಸುವ ಸುಂದರ ಕೆತ್ತನೆಗಳು.. ಇದಕ್ಕೆಲ್ಲಾ ಕಳಶವಿಟ್ಟಂತೆ ಮಧುಕೇಶ್ವರ.. ಜೇನಿನ ಬಣ್ಣದಲ್ಲಿ ಇರುವ ಈಶ್ವರನನ್ನು ಎಷ್ಟು ಭಾರಿ ನೋಡಿದರೂ ಸಮಾಧಾನವಿಲ್ಲ.. 

ಕ್ಯಾಮೆರ ಹೊಟ್ಟೆ ತುಂಬಿಕೊಳ್ಳುತ್ತಿತ್ತು.. 

ಮನಸ್ಪೂರ್ತಿ ಆ ತಾಣದಲ್ಲಿ ಇದ್ದು.. ಬನವಾಸಿ ದೇಶಮಂ.. ಬನವಾಸಿ ದೇಶಮಂ ಎನ್ನುತ್ತಾ ಹೃದಯ ತಟ್ಟಿಕೊಳ್ಳುವಂತೆ ಮಾಡುವ ಈ ತಾಣದಲ್ಲಿ ಇದ್ದಷ್ಟು ಹೊತ್ತು ಇನ್ನೂ ಇರಬೇಕು ಎನ್ನುವ ಹಂಬಲ ಹೆಚ್ಚಾಗುತ್ತಿತ್ತು.. 

ಸೂರ್ಯ ಮುಳುಗಲು ಸಿದ್ಧವಾಗುತ್ತಿದ್ದ.. ಜೊತೆಯಲ್ಲಿ ಇಬ್ಬರೂ ಜಗಳ ಶುರುಮಾಡಿದ್ದರು.. ನನ್ನ ಮನೆ ನಮ್ಮಜ್ಜನ ಮನೆ.. ಇಲ್ಲ್ಲಾ ಇಲ್ಲ ನನ್ನ ಮನೆ.. ಇಲ್ಲ ಕಣೋ ನಮ್ಮಜ್ಜನ ಮನೆ.. ಪೈಪೋಟಿ ನಡೆದೆ ಇತ್ತು.. 

ಮುಂದಿನ ಬಾರಿ ಬಂದಾಗ ಖಂಡಿತ ನಿನ್ನ ಮನೆಯಲ್ಲಿ ಉಳಿಯುವೆ.. ಆದರೆ ಈಗ ಬರುತ್ತೇನೆ.. ಎಂದು ಹೇಳಿ ಅವರ ಮನೆಗೆ ಹೋಗಿ.. ಮನೆಯವರ ಮನಸ್ಸನ್ನು ತಟ್ಟಿ ನಕ್ಕು ನಲಿದು .. ಮಗಳ ಅಜ್ಜನ ಮನೆಗೆ ಹೊರಟೆವು... ಮತ್ತೆ ಚರಿತೆ ಮರಳಿತು.. ಶ್ರೀಕಾಂತ್ ನೀವು ನಿಮ್ಮ ಕುಟುಂಬ ಬಂದದ್ದು ಬಹಳ ಖುಷಿಯಾಯ್ತು.. ಆದರೆ ಇಂದು ನಿಮಗೆ ಆತಿಥ್ಯ ಕೊಡೋಕೆ ಆಗೋಲ್ಲ.. ತೊಂದರೆ ಇಲ್ಲ ಬೆಳಿಗ್ಗೆ ಉಪಹಾರದಲ್ಲಿ ನಿಮ್ಮನ್ನು ಮುಳುಗಿಸುತ್ತೇವೆ ಎಂದರು.. 

ಮತ್ತೊಮ್ಮೆ ಮಾತು ಮಾತು ಮಾತು.. ಆಕಾಶ ತೂತಾಗಿ ಬೀಳುವಷ್ಟು ಮಾತು.. ಕನಸಿನಲ್ಲೂ ಊಹಿಸಿಕೊಳ್ಳದಷ್ಟು ಮಧುರವಾಗಿ ಕ್ಷಣಗಳು ಕಳೆಯುತ್ತಿದ್ದವು.. ಅರೆ ಹೀಗೂ ಉಂಟೆ . ಬರಿ ಅಂತರ್ಜಾಲದಲ್ಲಿ ಪರಿಚಯವಾಗಿ.. ಇಂದು ಮನಸ್ಸಿನ ಮೇಲೆ ನಡೆಯುತ್ತಿರುವ ಈ ರೀತಿಯ ಪ್ರೀತಿ ವಿಶ್ವಾಸ ನಿಜಕ್ಕೂ ಇದು ಇಂದ್ರಜಾಲವೇ ಎನ್ನಿಸುತ್ತಿತ್ತು.. 

ಬೆಳಿಗ್ಗೆ ಒಂದು ಪುಟ್ಟಾ ಸುತ್ತಾ ಮುತ್ತಾ ಇರುವ ವಿಹಂಗಮ ನೋಟ.. ಜೊತೆಯಲ್ಲಿ ಬಿಸಿ ಬಿಸಿ ಕಾಫಿ.. ಆಹಾ.. ಹಳ್ಳಿಯ ವಾತಾವರಣಕ್ಕೆ ಸಾಟಿ.. ಹಳ್ಳಿಯೇ.. !

ಸಹಸ್ರಲಿಂಗ ಕ್ಷೇತ್ರ ಕೆಲವೇ ನಿಮಿಷಗಳ ಹಾದಿಯಾಗಿದ್ದರಿಂದ..ಅಲ್ಲಿಗೆ ಸಾಗಿದೆವು.. ಬಯಲಿನಲ್ಲಿ ಕಾಣುವ ತಾಣವೆಲ್ಲಾ ಲಿಂಗದ ರೂಪವೇ.. ಒಂದು ಕಡೆ ಲಿಂಗ ಇದ್ದಾರೆ ಇನ್ನೊಂದು ಕಡೆ ಬಸವ.. ಎನಿಸಿದರೆ ಎಣಿಕೆ ತಪ್ಪುತ್ತಿತ್ತು.. ಶಾಲ್ಮಲಾ ನದಿಯ ಹರಿವು ಕಡಿಮೆ ಇದ್ದದರಿಂದ ಕಳೆದ ಬಾರಿ ನೋಡಿದ್ದಕ್ಕಿಂತ ಇನ್ನು ಹೆಚ್ಚಿನ ಲಿಂಗಗಳ ದರ್ಶನ ಸಿಕ್ಕಿತು.. ತೂಗು ಸೇತುವೆಯ ಮೇಲೆ ನಡೆದಾಟ.. ಮರೆಯಲು ಆಗುವುದೇ ಇಲ್ಲಾ.. 



ಅವಳ ಅಜ್ಜನ ಮನೆಯ ತಿಂಡಿ ಬಾ ಬಾ ಎಂದು ಕರೆಯುತ್ತಿತ್ತು.. ಹೊಟ್ಟೆಯ ಮೂಲೆ ಮೂಲೆಗೂ ತುರುಕಿಕೊಂಡು.. ಮಾಮೂಲಿಗಿಂತ ತುಸು ಹೆಚ್ಚೇ ತಿಂದೆವು.. 

ಸರ್ಜಿ ನಮಸ್ಕಾರ.. ನೀವು ಯಾರು ಅಂತ ನನಗೆ ಗೊತ್ತು.. "ಹಾವು ಕಚ್ಚಿದ ಪ್ರಸಂಗ" ಇವತ್ತು ನನ್ನನ್ನು ನಗೆಗಡಲಲ್ಲಿ ಮೀಯಿಸುತ್ತದೆ.. ಅರೆ ಇವರೇ ನಮ್ಮ ಪ್ರಕಾಶಣ್ಣ ಅರ್ಥಾತ್ ಪ್ರಕಾಶ್ ಹೆಗ್ಗಡೆಯವರ ಅಗ್ರಜ.  ಚೋಟೆ ಮೀಯ ಚೋಟೆ ಮಿಯ ಬಡೇ ಮಿಯ ಸುಬಾಹನಲ್ಲ ಎನ್ನುವ ಹಾಗೆ.. ಅಣ್ಣ ತಮ್ಮ ಇಬ್ಬರೂ ಒಂದೊಂದು ನಗೆ ಬಾಂಬುಗಳೇ...  ಮನೆಯವರನ್ನು ಭೇಟಿ ಮಾಡಿದ್ದು ಬಹಳ ಖುಷಿಯಾಗಿತ್ತು.. ಪ್ರಕಾಶಣ್ಣ ಅವರ ಅಣ್ಣ ಅತ್ತಿಗೆ.. ಅಕ್ಕ ಭಾವ ಆಹಾ ಒಂದು ಚಂದದ ಸಂಸಾರ.. ! 

ಅಲ್ಲಿಯೇ ಬಹಳ ಹೊತ್ತು ಇರಬೇಕು ಎನ್ನುವ ಹಂಬಲ ಇದ್ದರೂ.. ವಾಪಾಸ್ ಬೆಂಗಳೂರಿಗೆ ಬರುವ ಪ್ಲಾನ್ ಇದ್ದದರಿಂದ ಅವರ ಬಲವಂತದ ಮಧ್ಯೆಯೂ.. ಅವರಿಗೆ ತುಸು ಬೇಜಾರಾಗಿದ್ದರು ಸಮಾಧಾನ ಪಡಿಸಿ.. ಮತ್ತೆ ಮಾಯ್ನೋರಮನೆಯ ಕಡೆ ನಾಗಾಲೋಟದಿಂದ ಕಾರು ಓಡುತ್ತಿತ್ತು.. !

ಸಿದ್ದಾಪುರಕ್ಕೆ ಬಂದು.. ಕೊಂಚ ಹೊತ್ತು ವಿಶ್ರಮಿಸಿಕೊಂಡೆವು.. ಅಡಿಗೆ ಮನೆಯಿಂದ ಘಮ ಘಮ.. ಹೊಟ್ಟೆ ಚೂರು ಚೂರು ಏನಾದರೂ ಬೇಕು ಎಂದು ಅರಚುತ್ತಿತ್ತು... ಊಟ ರೆಡಿ ಅಣ್ಣಾ ಅಂದಾಗ.. !!!!!

ಸುಮಾರು ನಾಲ್ಕು ಘಂಟೆಗೆ ಹೊರಟೆವು... ಮೊದಲ ಗುರಿ ಇದ್ದದ್ದು ವರದ ಹಳ್ಳಿ ಅಥವಾ ಶ್ರೀಧರ ಸ್ವಾಮಿಗಳ ಆಶ್ರಮ.. ಇದರ ಮಧ್ಯೆ ಇಕ್ಕೇರಿಯ ದರ್ಶನ.. ಎರಡು ತರಾತುರಿಯಲ್ಲಿ ಮುಗಿಸಿ.. ಚಿಕಮಗಳೂರಿನತ್ತ ಓಡುತ್ತಿತ್ತು... 

ಅಣ್ಣಾ.. ಅಣ್ಣಾ.. ಕಣ್ಣು ಕೆಂಪಗೆ ಮಾಡಿಕೊಂಡು ಬಿಕ್ಕಳಿಸುತ್ತಿದ್ದಳು.. ಅಳಬೇಡ ಕಣೋ ಇನ್ನೊಮ್ಮೆ ಮತ್ತೆ ಹೋಗೋಣ.. ಒಂದೆರಡು ಮೂರುದಿನ ನಿಮ್ಮ ಮನೆಯಲ್ಲಿ ಇದ್ದು ಬಿಡ್ತೀನಿ.. ಎಲ್ಲೂ ಹೋಗೋದೇ ಬೇಡ .. ಆಯ್ತಾ!!!

ಏನೋ ಗೊತ್ತಿಲ್ಲ ಅಣ್ಣ.. ನಿಮ್ಮನ್ನು ತುಂಬಾ ಹಚ್ಚಿಕೊಂಡು ಬಿಟ್ಟಿದ್ದೀನಿ.. ಸರಿ ಅಣ್ಣಾ ಸಿಗ್ತೀನಿ ಮತ್ತೆ ಬ್ಲಾಗ್.. ಫೇಸ್ ಬುಕ್, ಜಿಟಾಕ್.. ವ್ಹಾಟ್ಸಪ್.. ಅಣ್ಣ ಒಂದು ಹಗ್ ನಿಮಗೆ ಮತ್ತು ಪುಟ್ಟುಗೆ... 

ಸರಿ ಕಣೋ ಹೊರಡ್ತೀನಿ ಅಂದೇ!!!

ಕಣ್ಣಂಚಿನ ಆ ಮಾತಲ್ಲಿ ನೂರಾರು ಹೇಳಲಾಗದ ಭಾವಗಳು ನಿರೂಪಾಯವಾಗಿ ಸುಮ್ಮನೆ ಕೂತಿದ್ದವು.. 

ಅಣ್ಣಾ ಇನ್ನು ಮುಂದೆ ಪಾ ಎಂದು ಕರೆಯುತ್ತೇನೆ ಎಂದಳು.. ನೀನು ಹೇಗೆ ಕರೆದರೂ ಓಕೆ ಮಗಳೇ ಅಂದೇ.. 

ಸರಿ ಕಣೋ ಬೆಂಗಳೂರಿಗೆ ತಲುಪಿದ ಮೇಲೆ ಮೆಸೇಜ್ ಮಾಡ್ತೀನಿ.. 

ಪಾ ಮೆಸೇಜ್ ಬೇಡ ಕರೆ ಮಾಡಿ... ನಾ ನಿಮ್ಮ ಕರೆಗೆ ಕಾಯ್ತಾ ಇರ್ತೀನಿ.. 

****************************

ರೀ ಶ್ರೀ ರೀ ಶ್ರೀ ರೀ ಶ್ರೀ.. ಆಫೀಸ್ ಗೆ ಹೋಗೋಲ್ವ.. ಆಗಲೇ ಏಳು ಘಂಟೆ.. .. ಸುಮಾರು ಹನ್ನೆರಡು ಘಂಟೆ ಅಷ್ಟೊತ್ತಿಗೆ ಅಲ್ಲಿಗೆ ಬರುತ್ತೇವೆ.. ಹೋಗೋಣ.. ಈಗಲೇ ಕಾರಲ್ಲಿ ಲಗೇಜ್ ಹಾಕಿಬಿಡಿ... !

ಕಣ್ಣುಜ್ಜಿ ಕೊಂಡೆ... ಅರೆ ಇದೇನು.. ಹೋಗುವ ಮೊದಲೇ.. ಕನಸು ಕಂಡು ಬಿಟ್ಟೆನೆ... ಆಹಾ!!!

****************************
ಮತ್ತೆ ಚಡಪಡಿಕೆ ಚಡಪಡಿಕೆ..................................................!

13 comments:

  1. ಹ ಹ ಹ ಒಳ್ಳೆಯ ಮಜಾ ಇದೆ, ನಾನೆಲ್ಲೋ ಆಗ್ಲೇ ಶ್ರೀಕಾಂತ್ ಶಿರಸಿಗೆ ಹೋಗಿ ಬಂದ್ರು ಅಂದುಕೊಂಡೆ , ಆಮೇಲೆ ಬ್ಲಾಗ್ ನಲ್ಲಿನ ಚಿತ್ರ ಗಳನ್ನೂ ಈಗಾಗಲೇ ನೋಡಿದ ನೆನಪಾಯ್ತು, ಹಾಗು ಬಿ. ಪಿ , ಎಸ. ಪಿ . ಫೋಟೋಗಳು ಇರಲಿಲ್ಲ, ಆದ್ರೆ ಲೇಖನ ಬರೆದ ರೀತಿ ಖುಷಿ ಕೊಟ್ಟಿತು . ನೀವಂದು ಕೊಂಡ ರೀತಿಯಲ್ಲೇ ನಿಮ್ಮ ಶಿರಸಿ ಪ್ರವಾಸ ಸುಖಮಯ ವಾಗಿರಲಿ. ಭಾಗ್ಯ ಪುಟ್ಟಿ, ಸಂಧ್ಯಾ ಪುಟ್ಟಿ, ಪ್ರಕಾಶ್ ಹೆಗ್ಡೆ ಮನೆ, ಶಿರಸಿ ಗಣಪನ ದರ್ಶನ, ಮಾರಿಕಾಂಬೆ ದರ್ಶನ, ಬನವಾಸಿ, ಸಹಸ್ರಲಿಂಗ, ಎಲ್ಲ ಕಡೆ ಹೋಗಿಬನ್ನಿ, ಒಳ್ಳೆಯ ಅನುಭವಗಳನ್ನು ಹೊತ್ತು ತನ್ನಿ, ಶುಭವಾಗಲಿ

    ReplyDelete
    Replies
    1. ​ ​ಬಾಲೂ ಸರ್ ಸುಂದರ ನಗೆಯ ನಿಮ್ಮ ಮಾತುಗಳು ಮನಸ್ಸನ್ನು ಇನ್ನಷ್ಟು ತಣಿಸುತ್ತವೆ.. ವಿಚಿತ್ರ ಅನ್ನಿಸಿದರು ಹೀಗೆ ಬರೆಯಬೇಕು ಎನ್ನುವ ಹಂಬಲ ತುಂಬ ವರ್ಷಗಳಿಂದ ಇತ್ತು.. ಧನ್ಯವಾದಗಳು ನಿಮ್ಮ ಸುಂದರ ಹಾರೈಕೆ ಮತ್ತು ಪ್ರತಿಕ್ರಿಯೆಗೆ

      Delete
  2. ಒಂದು ವಾರದಿಂದ ಶಿರಸಿಯಲ್ಲಿಯೇ ಇದ್ದ ತಲೆ ಈಗ ನನ್ನೂರನ್ನೊಮ್ಮೆ ಸುತ್ತಿ ಮತ್ತೆ ಚಿಕ್ಕಮಗಳೂರ ಸೇರಿರೋ ಭಾವ!!
    ಅನುಭವಿಸಹೊರಟಿರೋ ಭಾವವೊಂದ ಅನುಭಾವಿಸಿ ಹಾಗೆಯೇ ಬರೆಯೋ ನನ್ನಣ್ಣ ಇನ್ನು ಅನುಭವಿಸಿರೋ ಭಾವವ ಅದೆಷ್ಟು ಚಂದದಿ ಬರೆದು ದಾಖಲಿಸ್ತಾರೆ ಅಲ್ವಾ...
    ಬರಹ ಬರಿಯ ಬರಹವಾಗಿ ಉಳಿದಿಲ್ಲ ನನ್ನ ಮಟ್ಟಿಗೆ.
    "ನೀ(ವ್) ಇರಲು ಜೊತೆಯಲ್ಲಿ..." ನನ್ನೂ ಮೋಡಿ ಮಾಡಿದ್ದಂತೂ ಸುಳ್ಲಲ್ಲ...

    ಶ್ರೀಕಾಂತಣ್ಣ ಕಾಯ್ತಿದೆ ಮನೆ,ಮನೆಯವರ ಮನಸ್ಸುಗಳು ನಿಮ್ಮ ಬರುವಿಕೆಗೆ.
    ಅಲ್ಲಿದೇ ಪ್ರೀತಿ,ಇಷ್ಟೂ ಜಾಗಗಳ ನಿಮಗೆ ತೋರಿಸಿಯೇ ಸಿದ್ಧ ನಾನು...
    ಅದೆಷ್ಟೋ ವಿಳಂಬ,ಸ್ಪಷ್ಟವಿಲ್ಲದ ಗೋಜಲಗಳ ನಂತರವೂ ಹೀಗೊಂದು ಪ್ಲಾನ್ ಮಾಡಿ ಇವತ್ತು ಹೊರಡ್ತಿರೋದು ನನ್ನ ಖುಷಿ.
    ನನ್ನೂರಿಗೆ ಪ್ರೀತಿಯಿಂದ ಸ್ವಾಗತಿಸ್ತಾ.
    ಬಿಪಿ

    ReplyDelete
    Replies
    1. ಬಹುದಿನಗಳ ಪೂಜಾ ಫಲ ಎನ್ನುವಂತೆ ಅನೇಕ ಬಾರಿ ಕಾರ್ಯಕ್ರಮ ಹಿಂದೆ ಮುಂದೆ ಹೋಗಿ ಅಂತೂ ಹೋಗುವ ದಿಸೆಯಲ್ಲಿದ್ದೇವೆ. ಅದನ್ನು ಒಮ್ಮೆ ಹಾಕೆ ಎರಡು ದಿನ ಮುಂದಕ್ಕೆ ಹೋಗಿ ಬರೆಯೋಣ ಅನ್ನಿಸಿತು.. ನನಗೂ ಅನ್ನಿಸುತ್ತಿದೆ ಈ ಬರಹ ನಿಜವಾಗುತ್ತದೆ ಖಂಡಿತ ಎಂದು..

      ನಿನ್ನ ಆಹ್ವಾನಕ್ಕೆ ಚಿರಋಣಿ ಮಗಳೇ.. ಬರುತ್ತೇವೆ ಖಂಡಿತ ಬರುತ್ತೇವೆ.. ಕುಶಿ ಪಡುತ್ತೇವೆ..

      Delete
  3. ನನಸಾಗೋ ಕನಸು ಕಾಣಲೂ ಲಕ್ಕು ಬೇಕು ಶ್ರೀಮಾನ್.
    ಭಾಗ್ಯವಂತರು ನೀವೆ ಭಾಗ್ಯವಂತರು.

    ಸದರೀ ಬ್ಲಾಗ್ ಬರಹವನ್ನು ನಾವು home work ಲೆಕ್ಕದಲ್ಲಿ ಬರ್ಕೊಂಡಿದ್ದೀವಿ.
    ಯಾತ್ರಾ ನಂತರಂ - ಪೂರ್ಣ ಬರಹಂ ಬರಲಿ.

    ಬಾಲಣ್ಣನ ಹಾರೈಕೆ ಮತ್ತು ಭಾಗ್ಯ ಅವರ ಸ್ವಾಗತ ನೂರಕ್ಕೆ ನೂರರಷ್ಟು ಫಲ ಕೊಡಲಿ.
    ಕಾಯುತಿದೆ ಶಿರಸಿ...

    ಶುಭವಾಗಲಿ.

    ReplyDelete
    Replies
    1. ಅದೃಷ್ಟ ಎಲ್ಲರ ಕಿಸೆಯಲ್ಲಿಯು ಇರುತ್ತದೆ ಬದರಿ ಸರ್.. ಕೆಲವೊಮ್ಮೆ ಕತ್ತಲಲ್ಲಿ ಆ ಜೇಬನ್ನು ಹುಡುಕುತ್ತೇವೆ ಅಷ್ಟೇ.. ನಿಮ್ಮನ್ನು ಒಂದು ಪ್ರವಾಸಕ್ಕೆ ಕರೆದೊಯ್ಯದೇ ಬಿಡೆನು.. ಸುಂದರ ಪ್ರತಿಕ್ರಿಯೆ ನಿಮ್ಮದು. ಹಾರೈಕೆಗೆ ಧನ್ಯವಾದಗಳು

      Delete
  4. ಸವಿತಾ ಅವರು ಎಬ್ಬಿಸಿದಾಗ ನಂಗು ಎಚ್ಚರಾಯಿತು. :) ಹೋಗುವ ಹುಮ್ಮಸು ಇಷ್ಟಿದ್ದರೆ ಕನಸಿನಲ್ಲಿ ಅದೇ ಕಾಣುತ್ತೆ... :)

    ReplyDelete
    Replies
    1. ಹಹಹ.. ನಿವಿ ನಿಮ್ಮ ಹಾಸ್ಯ ಪ್ರಜ್ಞೆ ನನ್ನನ್ನು ಇನ್ನಷ್ಟು ಬರೆಯಲು ಒತ್ತಡ ಹಾಕುತ್ತದೆ.. ಸೂಪರ್ ಪ್ರತಿಕ್ರಿಯೆ ಧನ್ಯವಾದಗಳು ನಿಮ್ಮ ಹಾರೈಕೆಗೆ

      Delete
  5. ಪ್ರೀತಿಯ ಶ್ರೀಕಾಂತೂ....

    ಬದುಕಿನ
    ಪ್ರತಿ ಕ್ಷಣವನ್ನೂ
    ತನ್ನ ಬಾಂಧವ್ಯಗಳನ್ನು ಅನುಭವಿಸ ಬಲ್ಲವ ಹೀಗೆ ಬರೆಯಬಲ್ಲ...

    ಬರಹ ಓದುತ್ತಿದ್ದರೆ ನಿಮ್ಮ ಸ್ನೇಹ ಪ್ರಭಾವಳಿಯಲ್ಲಿ ಒಳಗಾದ ನಾವು ಧನ್ಯ ಎನಿಸುತ್ತದೆ...

    ವ್ಯವಹಾರದ ಈ ಜಗತ್ತಿನಲ್ಲಿ ನಿಮ್ಮಂಥವರು
    ಮತ್ತೆ ಮತ್ತೆ ನಮ್ಮೊಳಗಿನ ಅಂತಃಪ್ರಜ್ಞೆಯನ್ನು ಜಾಗ್ರತಿಗೊಳಿಸುತ್ತಾರೆ..

    ನಿಮಗೆ ಪ್ರೀತಿಯ ವಂದನೆಗಳು ಪುಟ್ತಮ್ಮಾ...

    ReplyDelete
    Replies
    1. ಪ್ರಕಾಶಣ್ಣ ಈ ಬಾಂಧವ್ಯದ ಹರಿಕಾರರು ನೀವು.. ನಿಮ್ಮ ಸಾಂಗತ್ಯ ಸಿಕ್ಕಿದ್ದರ ಫಲ ಅದೆಷ್ಟು ತಂಗಿಯರು.. ಒಲುಮೆ ತೋರಿಸುವ ಕುಟುಂಬ ನನಗೆ ಸಿಕ್ಕಿದ್ದು.. ಅದಕ್ಕೆ ನಾ ಚಿರಋಣಿ.. ನಿಮ್ಮ ಪ್ರತಿಕ್ರಿಯೆ ಮನಸ್ಸಿಕೆ ರೆಕ್ಕೆ ಕೂಡಿಸುತ್ತಿದೆ.. ಧನ್ಯೊಸ್ಮಿ..

      Delete
  6. Hi Sri,
    heegoo bareethaara? hoguva muncheye kannige kattida haage kanasu kandu vivarisiddeeri!! super-style nimdu..... nimma payaNa anubhava ellavoo neevandukondaddakkinta duppatavaagali antha aashistheeni :)

    ReplyDelete
    Replies
    1. ಧನ್ಯವಾದಗಳು DFR.. ಹಾರೈಕೆ ಹೀಗಿದ್ದರೆ ಹಕ್ಕಿಯ ಹಾಗೆ ಹಾರುತ್ತದೆ ಮನಸ್ಸು.. ಕನಸು ಕಂಡ ಹಾಗೆ ಪ್ರವಾಸವು ಇರಲಿ ಎಂಬ ಆಶಯ ನನ್ನದು.. ಮತ್ತು ಇದ್ದೆ ಇರುತ್ತದೆ ಎನ್ನುವ ಅಚಲ ವಿಶ್ವಾಸ ನನ್ನದು..

      Delete