Tuesday, February 12, 2013

ಕೆ. ಆರ್ ಪೇಟೆಯಲ್ಲಿ..ಹೊಯ್ಸಳರ ಕಲೆಯ ಮಧ್ಯದಲ್ಲಿ


(ಅರಳುತ್ತಲೇ ಕಂಪನ್ನು ಸೂಸುತ್ತಿರುವ ಕನ್ನಡದ ಸುಮಧುರ ಇ-ಪತ್ರಿಕೆ "ಪಂಜು"ವಿನಲ್ಲಿ  ಪ್ರಕಟಣೆಗೊಂಡಿದೆ. 
ಸಹೋದರ ನಟರಾಜು ಹಾಗೂ "ಪಂಜು" ತಂಡಕ್ಕೆ ಧನ್ಯವಾದಗಳು!)

"ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು...ಅಪಾರ ಕೀರ್ತಿಯೇ"

ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಹೆಸರಾಗಿದ್ದ ಶ್ರೀ ಆರ್. ಎನ್. ನಾಗೇಂದ್ರ ರಾಯರು ದಿಗ್ದರ್ಶಿಸಿದ್ದ ಮಹತ್ವಾಕಾಂಕ್ಷೆಯ ಚಿತ್ರ ವಿಜಯನಗರದ ವೀರಪುತ್ರ ಚಿತ್ರದ ಕುದುರೆ ನಡಿಗೆಯ ತಾಳದ ಜನಪ್ರಿಯ ಗೀತೆ ಕೇಳಿದಾಗೆಲ್ಲ ಕರ್ನಾಟಕದಲ್ಲಿ ಶಿಲ್ಪಕಲೆಯು ಉನ್ನತ ಸ್ಥಾಯಿ ಮುಟ್ಟಿದ್ದ ಹೊಯ್ಸಳ ಅರಸರ ಕಲೆಯು ನೆನಪಿಗೆ ಬರುತ್ತದೆ.  

ಡಿಸೆಂಬರ್ ೨೯ನೆ ತಾರೀಕು ಹಾಸನದಿಂದ ಮೈಸೂರಿಗೆ ಹೋಗಬೇಕಿತ್ತು..ಕರುನಾಡಿನ ಎಲ್ಲಾ ಸ್ಥಳಗಳು ಕೈ ರೇಖೆಯಂತೆ ಗುರುತು ಇಟ್ಟುಕೊಂಡಿರುವ "ನಿಮ್ಮೊಳಗೊಬ್ಬ ಬಾಲೂ" ಬ್ಲಾಗ್  ಖ್ಯಾತಿಯ ಬಾಲೂ ಸರ್ ಗೆ ಫೋನಾಯಿಸಿದೆ....ಚಕ ಚಕ ಅಂತ...ಒಂದು ಸಿದ್ಧ ಪ್ಲಾನ್ ಹೇಳಿಯೇ ಬಿಟ್ಟರು...ಚನ್ನರಾಯಪಟ್ಟಣ ಆದ ಮೇಲೆ ಬಲಕ್ಕೆ ತಿರುಗಿ ಕೆ.ಆರ್. ಪೇಟೆ ಕಡೆ ತಿರುಗಿಸಿರಿ...ಅಂತ...ಸರಿ ಗುರುಗಳ ಮಾರ್ಗದರ್ಶನದಲ್ಲಿ ಮುಂದುವರೆಯಿತು..ನಮ್ಮ ಗಾಡಿ.

ಕಿಕ್ಕೇರಿಗಿಂತ ಮುಂಚೆ  ಕಾರನ್ನು ನಿಲ್ಲಿಸಿ ಮತ್ತೆ ಫೋನ್ ಹಚ್ಚಿದೆ..ಕುರುಡನಿಗೂ ದಾರಿ ಗೊತ್ತಾಗಬೇಕು..ಹಾಗೆ ಅಚ್ಚುಕಟ್ಟಾಗಿ ದಾರಿ ಹೇಳಿದರು. ಗೋವಿಂದನ ಹಳ್ಳಿ ಮಾರ್ಗದಲ್ಲಿ ಓಡಿತು ನಮ್ಮ ರಥ...ಸುಮಾರು ೩-೪ ಕಿ.ಮಿ. ಸಾಗುತ್ತ ಹಳ್ಳಿಯ ಸೊಬಗನ್ನು ಸವಿಯುತ್ತ, ಹೊಲ ಗದ್ದೆಗಳ ರಾಶಿ ರಾಶಿ ಜಮೀನನ್ನು ನೋಡುತ್ತಾ ನಿಧಾನವಾಗಿ ಸಾಗಿದೆ. ಬಲ ಭಾಗದಲ್ಲಿ ಒಂದು ಫಲಕ ಕಾಣಿಸಿತು...ಮತ್ತು ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಎಡಗಡೆ ಎಂದು ಬಾಣದ ಗುರುತು ಇತ್ತು...


ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ದಾರಿ 
ಎಡಕ್ಕೆ ತಿರುಗಿ ಸೀದಾ ಒಂದು ೩೦೦ ಮೀಟರ್  ಬಂದಾಗ ಸಿಕ್ಕಿತು ಒಂದು ಸುಂದರ ಹೊಯ್ಸಳ ಕಲೆಯ ದೇವಾಲಯ...ಮನಕ್ಕೆ ಆಹಾ ಎನ್ನಿಸಿತು..ಅಚ್ಚುಕಟ್ಟಾಗಿ ಸುತ್ತಲು ಕಬ್ಬಿಣದ ತಂತಿಗಳ 
ಕಾಂಪೌಂಡ್ ನಿಂದ ಸುತ್ತುವರೆದು, ಹಸಿರು ಹುಲ್ಲು ಹಾಸಿನ ಮಧ್ಯೆ ಇದ್ದ ದೇವಾಲಯ ಸುಂದರವಾಗಿ ಕಂಡಿತು. ಸುಮಾರು ೧೨೩೦ರ ಆಸುಪಾಸಿನಲ್ಲಿ ನಿರ್ಮಾಣವಾದ ದೇವಾಲಯ  ಸಹಜವಾಗಿಯೇ ಹೊಯ್ಸಳರ ಕಾಲದ ಶಿಲ್ಪಿಗಳ ಕೈ ಚಳಕವನ್ನು ಅನಾವರಣ ಮಾಡಿತ್ತು. 


ಸುಂದರ ಆವರಣದೊಳಗೆ ಶಿಲ್ಪಿಗಳ ಕೈಚಳಕ
ನಿಧಾನವಾಗಿ ಕ್ಯಾಮೆರ ಹೊಟ್ಟೆಗೆ ಚಿತ್ರಗಳನ್ನು ತುಂಬಿಸುತ್ತಾ ಒಳಗೆ ಸಾಗಿದೆ. ಅಲ್ಲಿಯ ಕೂತಿದ್ದ ಒಬ್ಬರು ಒಳಗೆ ಬಂದು ದೇವಾಲಯದ ಪರಿಚಯ ಮಾಡಿಕೊಟ್ಟರು. ಒಂದೇ ದೇವಾಲಯದಲ್ಲಿ ಐದು ಶಿವಲಿಂಗದ ದರ್ಶನ ಬಲು ಅಪರೂಪ ಎಂದು ಹೇಳಿದರು. 
ಮೋಡಗಳ ಪರದೆಯಲ್ಲಿ ದೇವಸ್ಥಾನ
ಈಶಾನ್ಯೇಶ್ವರ, ತತ್ಪುರುಶೇಶ್ವರ, ಅಘೋರೇಶ್ವರ, ವಾಮದೇವೇಶ್ವರ ಮತ್ತು                                     ಸಧ್ಯೋ ಜಾತೇಶ್ವರ ಹೀಗೆ ಐದು ಬಗೆಯ ಹೆಸರಿನ ಶಿವಲಿಂಗಗಳಿಗೆ ಪ್ರತ್ಯೇಕ ಗುಡಿಗಳು, ಮತ್ತು ಅದಕ್ಕೆ ಸರಿಯಾಗಿ ಎದುರಿಗೆ ನಂದಿಗಳು ಇವೆ. ದೇವಸ್ಥಾನದ ಒಳಗೆ ಅಪ್ಪಣೆ ಪಡೆದು ಒಂದೆರಡು ಚಿತ್ರಗಳನ್ನು ಸೆರೆ ಹಿಡಿದು ಕೊಂಡೆ. ಅದರಲ್ಲೂ ಸಾಲು ಸಾಲು ಕಂಬಗಳ ಚಿತ್ರ ಮನಸಿಗೆ ಇಷ್ಟವಾಯಿತು. ಚಾಮುಂಡೇಶ್ವರಿ ವಿಗ್ರಹ, ಸುಬ್ರಮಣ್ಯ ವಿಗ್ರಹ, ಗಣಪತಿ ಎಲ್ಲವು ಸುಂದರವಾದ ಕೆತ್ತನೆಗಳಿಗೆ ಸಾಕ್ಷಿಯಾಗಿದ್ದವು. 


ರೈಲನ್ನು ನೆನಪಿಸುವಂತಹ ಸಾಲು ಸಾಲು ಕಂಬಗಳು 
ಹೊರಾಂಗಣವನ್ನು ಸುತ್ತಿ ಬಂದಾಗ ನೀಲಾಕಾಶದಲ್ಲಿ ಹತ್ತಿಯ ಹಾಗೆ ಹಿಂಜಿ ನಿಂತ ಮೋಡಗಳ ಹಿನ್ನೆಲೆಯಲ್ಲಿ ದೇವಾಲಯ ಇನ್ನಷ್ಟು ಸುಂದರವಾಗಿ ಕಂಡಿತು. 
ಮನಸಾರೆ ಚಿತ್ರಗಳನ್ನು ಸೆರೆಹಿಡಿದು ಅಲ್ಲಿಂದ ಹೊರಟೆವು, ಇನ್ನೊಂದು ಅದ್ಭುತ ಶಿಲ್ಪಕಲಾ ಗುಡಿಯ ಕಡೆಗೆ. 
ಸುಂದರ ಆವರಣ!
ಕೆ.ಆರ್. ಪೇಟೆ ಹತ್ತಿರ ಬಂದು ಮತ್ತೆ ಗುರುಗಳಿಗೆ ಫೋನಾಯಿಸಿದೆ. ಅಲ್ಲಿಯೇ ಹೊಸಹೊಳಲು ದೇವಸ್ಥಾನಕ್ಕೆ ದಾರಿ ಕೇಳಿ ಸುಮಾರು ಒಂದೆರಡು ಕಿ.ಮಿ ಹೋದರೆ ನಿಮಗೆ ದೇವಾಲಯ ಸಿಗುತ್ತೆ ಅಂತ ಹೇಳಿದರು. ನಿಧಾನವಾಗಿ ಚಲಿಸುತ್ತ ದಾರಿ ಕೇಳಿಕೊಂಡು ಹೋದಾಗ..ಮುಖ್ಯ ರಸ್ತೆಯಲ್ಲಿಯೇ ಒಂದು  ಕಮಾನು ನಮ್ಮನ್ನು ಸ್ವಾಗತಿಸಿತು. ಹೊಸಹೊಳಲು ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಸ್ವಾಗತ ಎಂದು. 
ಹೊಸಹೊಳಲಿನ ಶ್ರೀ ಲಕ್ಷ್ಮಿ ನರಸಿಂಹ ದೇವಾಸ್ಥಾನ 
ಬೇಲೂರಿನ ಪ್ರತಿ ಕೃತಿಯಂತೆ ಕಂಡು ಬಂದ ಈ ದೇವಾಲಯದ ಮುಂಬಾಗ ನವಿಕರಣಗೊಂಡಿದ್ದರೂ, ಹೊಯ್ಸಳರ ಶಿಲ್ಪಿಗಳು ಪ್ರಭುತ್ವ ಮೆರೆದ ಇನ್ನೊಂದು ಕಲಾ ದೇಗುಲ ನಮ್ಮ ಮನಸಿಗೆ ಸಂತಸದ ಕಡಲನ್ನೇ ತಂದಿತ್ತು.   ಮಧ್ಯಾಹ್ನದ ಸಮಯ ಹತ್ತಿರ ಬಂದಿತ್ತು, ದೇವಾಲಯದ  ಕದ ಹಾಕುವ ಮುಂಚೆ ದೇವರ ದರ್ಶನ ಮಾಡಿದೆವು. ಅಲ್ಲಿಯ ಅರ್ಚಕರು ಅಲ್ಲಿಯ ಗರ್ಭ ಗುಡಿಯ ಕೆತ್ತನೆಗಳ ಬಗ್ಗೆ ಉಪಯುಕ್ತ ಮಾಹಿತಿ ಕೊಟ್ಟರು.


ಸುಂದರ ಕೆತ್ತನೆಗಳ ಆವರಣ
 ಶ್ರೀ ಲಕ್ಷ್ಮಿ ನಾರಾಯಣ, ಶ್ರೀ ಲಕ್ಷ್ಮಿ ನರಸಿಂಹ, ಶ್ರೀ ವೇಣು ಗೋಪಾಲ ಮೂರ್ತಿಗಳು ತುಂಬಾ ಮುದ್ದಾಗಿದ್ದವು, ಸುಂದರವಾದ ನವರಂಗ, ಅಮೋಘ  ಕುಸುರಿ ಕೆಲಸವನ್ನು ಹೊಂದಿದ್ದ ಕಂಬಗಳು ಒಂದಕ್ಕಿಂತ ಒಂದು ಸೊಗಸಾಗಿದ್ದವು. ಇದನ್ನು ಮನದಣಿಯೆ ನೋಡಬೇಕು. 
ಕ್ಯಾಮೆರಾದಲ್ಲಿ ಆದಷ್ಟು ತುಂಬಿಕೊಂಡು ಹೊರಗೆ ಬಂದೆ. 


ಶಿಲ್ಪಿಗಳ ಕೈಚಳ ಅಮೋಘ!
  ಸುಮಾರು ೧೨೫೦ ರ ಆಸುಪಾಸಿನಲ್ಲಿ ನಿರ್ಮಾಣವಾದ ದೇವಾಲಯವನ್ನು ಸುಂದರವಾಗಿ ರಕ್ಷಿಸಿದ್ದಾರೆ ಮತ್ತು ನೋಡಿಕೊಂಡಿದ್ದಾರೆ. ದೇವಾಲಯವನ್ನು ಒಂದು ಸುತ್ತು ಹಾಕಿದರೆ ನಮಗೆ ಅರಿವಿಲ್ಲದೆ ಸುಮಾರು ೮೦೦-೯೦೦ ವರ್ಷಗಳ ಹಿಂದೆ ಹೋಗಿಬಿಡುತ್ತೇವೆ. ಅಷ್ಟು ಸುಂದರ ಮೂರ್ತಿಗಳು, ಕುಸುರಿ ಕೆತ್ತನೆ, ಆಹಾ ಪದಗಳಲ್ಲಿ ಬಣ್ಣಿಸಲಾಗದು.  


ಪ್ರತಿ ಸಾಲಿನಲ್ಲೂ ಶಿಲ್ಪಿಗಳ ನೈಪುಣ್ಯ ಎದ್ದು ಕಾಣುತ್ತದೆ 

ಹೊಯ್ಸಳ ಶಿಲ್ಪಕಲೆ ಎಂದರೆ ಬೇಲೂರು ಹಳೇಬೀಡು ಅಷ್ಟೇ ಅಲ್ಲ..ಇಂತಹ ಅನೇಕ ಅಮೋಘ ಕೆತ್ತನೆಗಳು ಹಾಸನ, ಮೈಸೂರು, ಮಂಡ್ಯ, ಚಿಕಮಗಳೂರು, ಭದ್ರಾವತಿ, ಶಿವಮೊಗ್ಗ, ಹರಿಹರ,  ಹೀಗೆ ಅನೇಕ ಕಡೆ ಸಿಗುತ್ತದೆ. ಹೊಯ್ಸಳರಸರ ಕಾಲದ ಕೆತ್ತನೆ ಕಂಡು ಬರುವ ಇಲ್ಲಾ ದೇವಾಲಯಗಳನ್ನು ನೋಡುವ ತವಕ, ಉತ್ಸಾಹವಿದೆ.  ಭಗವಂತನ  ಅನುಗ್ರಹವಿದ್ದರೆ ಸಾಧ್ಯವಾಗುತ್ತದೆ ಎನ್ನುವ ಆಶಾಭಾವ ಹೊತ್ತು ದೇವಸ್ಥಾನದಿಂದ ಹೊರಟೆವು. 


ಪ್ರತಿಮೆಗಳು, ಅಲಂಕಾರ ಒಂದಕ್ಕೊಂದು ವಿಭಿನ್ನ...ಸುಂದರ

ಎರಡು ಸುಂದರ ದೇವಾಲಯಗಳನ್ನು ಭೇಟಿ ಮಾಡಲು ಮಾರ್ಗದರ್ಶನ ನೀಡಿದ ಬಾಲೂ ಸರ್ ಅವರಿಗೆ ಧನ್ಯವಾದ ತಿಳಿಸುತ್ತ ಈ ಲೇಖನವನ್ನು ಅವರಿಗೆ ಅರ್ಪಿಸುತ್ತಿದ್ದೇನೆ. ಧನ್ಯವಾದಗಳು ಬಾಲೂ ಸರ್.

18 comments:

  1. ಈಗ ನಮಗೆ ನೀವು ಮಾರ್ಗದರ್ಶಕರು.... ಒಳ್ಳೆಯ ಲೇಖನ... ಒಳ್ಳೆಯ ಪರಿಚಯ... ಹೊಯ್ಸಳ ಶಿಲ್ಪ ಕಲೆಯಲ್ಲಿ ಕಲ್ಲುಗಳು ಮಾತನಾಡುತ್ತವೆ ಎನ್ನವುದಕ್ಕೆ ಇದಕ್ಕಿಂತ ನಿದರ್ಶನ ಬೇಕಿಲ್ಲ..

    ReplyDelete
    Replies
    1. ಭಕ್ತ ಕುಂಬಾರ ಚಿತ್ರದ ಸಂಭಾಷಣೆ."ತಿಳಿಯದೆ ಇರೋದನ್ನ ತಿಳಿದುಕೊಳ್ಳೋಣ..ತಿಳಿದಿದ್ದನ್ನ ತಿಳಿಸೋಣ.."..ಹಾಗೆ ಸಾಗುತ್ತಿದೆ ನಮ್ಮ ಅಲೆಮಾರಿಗಳ ತಂಡ ..ಹೊಯ್ಸಳ ಶಿಲ್ಪಕಲೆ ಹುಟ್ಟಿದ ನಾಡಲ್ಲಿ ನಾವಿರುವುದು ನಿಜಕ್ಕೂ ನಮ್ಮ ಪುಣ್ಯವೇ ಸರಿ
      ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಗಿರೀಶ್.

      Delete
  2. ಹೊಸ ಹೊಳಲಿನ ದೇವಸ್ಥಾನಗಳನ್ನು ಚಿತ್ರ ಸಹಿತ ವಿವರಣೆ ನೀಡಿ ಪಂಚಲಿಂಗೇಶ್ವರನ ಹೆಸರು ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು.

    ReplyDelete
    Replies
    1. ಧನ್ಯವಾದಗಳು ಚಿಕ್ಕಪ್ಪ.ಕಲ್ಲಲ್ಲಿ ಹೂವನ್ನು ಅರಳಿಸುವ ತಾಕತ್ ಹೊಂದಿದ್ದ ಆ ಶಿಲ್ಪಿಗಳ ಪರಿಶ್ರಮ ಅಮೋಘ.

      Delete
  3. ವಾಹ್..!! ಒಳ್ಳೆಯ ಸ್ಥಳ ಪರಿಚಯ, ಅಂದಿನ ಶಿಲ್ಪ ಕಲೆಯಲ್ಲಿ ಇರುವ ಜೀವ ಇಂದಿಗೂ ನಮ್ಮೆಲ್ಲರನ್ನ ಬೆರಗುಮಾಡುತ್ತವೆ. ಹೀಗೆ ಓಡಾಡುತ್ತಲಿರಿ ನಮ್ಮೆಲ್ಲರಿಗೂ ಸ್ಥಳಗಳ ವಿವರ ನೀಡುತ್ತಲೇ ಇರಿ.

    ReplyDelete
    Replies
    1. ಕಲ್ಲಿನಲ್ಲಿ ಕಥೆಹೇಳುವ ಚಾತುರ್ಯ ನಮ್ಮ ನಾಡಿನಲ್ಲಿದೆ ಎಂದು ಹೇಳಿಕೊಳ್ಳುವುದೇ ಒಂದು ಅಭಿಮಾನದ ವಿಷಯ..ಸುಗುಣಕ್ಕ ಸುಂದರ ಮನಸಿನ ಸುಂದರ ಪ್ರತಿಕ್ರಿಯೆ...ಹಾರೈಕೆಗೆ ಧನ್ಯವಾದಗಳು

      Delete
  4. "ರೈಲನ್ನು ನೆನಪಿಸುವಂತಹ ಸಾಲು ಸಾಲು ಕಂಬಗಳು" ಚಿತ್ರದ ಕ್ಯಾಪ್ಷನ್ ಅಮೋಘ.

    ನಿಮ್ಮ ಬ್ಲಾಗ್ ಬರಹಗಳನ್ನೇ ಮುಂದಿಟ್ಟುಕೊಂಡು, ಪ್ರವಾಸ ಹೊರಟರೆ ನಮಗೆ ಬಹು ಉಪಯೋಗವಾಗುವುದು.

    ಹೊಯ್ಸಳರ ಶಿಲ್ಪ ಕಲೆಯ ಬಗೆಗಿನ ಪ್ರೀತಿಯು ನೂರ್ಕಾಲಕೂ ಜನ ಮಾನ್ಯ.

    ReplyDelete
    Replies
    1. ಹೌದು ಬದರಿ ಸರ್...ಶಿಲ್ಪಕಲೆಗಳು ಕಣ್ಣು ಮನಸನ್ನು ತಂಪಾಗಿಸುತ್ತೆ...ಆ ಕಲೆಗಳ ಮುಂದೆ ನಿಂತಾಗ ಒಳಗಿನ ಅಹಂ ನೆಲದಾಳಕ್ಕೆ ಇಳಿದು ಹೋಗುತ್ತೆ.
      ಧನ್ಯವಾದಗಳು ಸರ್ಜಿ

      Delete
  5. ಸೊಗಸಾದ ದೇವಾಲಯಗಳು!!

    ReplyDelete
    Replies
    1. ಧನ್ಯವಾದಗಳು ಅರವಿಂದ್ ನಿಜಕ್ಕೂ ಸುಂದರ ಪರಿಸರ ಹೊಂದಿರುವ ಸುಂದರ ದೇವಾಲಯಗಳು

      Delete
  6. ಸುಂದರ ಲೇಖನ ...ಒಂದು ಸುಂದರ ತಾಣದ ಸಮಗ್ರ ಚಿತ್ರಣ ನಿಮ್ಮ ಲೆಖನದಲ್ಲಿದೆ. ಅಭಿನಂದನೆಗಳು ಸರ್ ...

    ReplyDelete
    Replies
    1. ಧನ್ಯವಾದಗಳು ಅಶೋಕ್ ಸರ್. ಈ ಶ್ರೇಯಸ್ಸು ಬಾಲೂ ಸರ್ ಗೆ ಸೇರಬೇಕು . ಒಂದು ಸುಂದರ ಸ್ಥಳವನ್ನು ನನಗೆ ತೋರಿಸಿಕೊಟ್ಟರು.

      Delete
  7. ಈ ಪೋಸ್ಟನ್ನ ಇವತ್ತು ನೋಡಿದೆ , ಎಷ್ಟು ಸಮಯ ಬೇಕಾಯಿತು ಪಯಣಕ್ಕೆ ಮತ್ತು ಊಟ ತಿಂಡಿ ವಿಚಾರವಾಗಿ ಸ್ವಲ್ಪ ವಿವರ ಕೊಡ್ತಿರಾ ?
    ಚಿತ್ರಗಳು ಮತ್ತು ಬರಹ ಸುಂದರವಾಗಿದೆ

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದಗಳು ಸ್ವರ್ಣ. ಮೈಸೂರಿಂದ ಸುಮಾರು ಅರ್ಧ ಇಲ್ಲವೇ ಮುಕ್ಕಾಲು ಘಂಟೆ ಆಗುತ್ತದೆ. ಕೆ.ಅರ್ ಪೇಟೆ ಮಾರ್ಗದಲ್ಲಿ ಸಿಗುತ್ತದೆ. ಊಟ ತಿಂಡಿ ಅಲ್ಲೇ ಪುಟ್ಟ ಪುಟ್ಟ ಹೋಟೆಲ್ ಗಳಲ್ಲಿ ಸಿಗುತ್ತದೆ. ಕಾರಿನಲ್ಲೇ ಹೋದರೆ ಹೊಸಹೊಳಲು, ಪಂಚಲಿಂಗೇಶ್ವರ ದೇವಾಸ್ಥಾನದ ಜೊತೆಗೆ, ಕಲ್ಲಳ್ಳಿಯಲ್ಲಿರುವ ಭೂವರಾಹ ಸ್ವಾಮಿ ದೇವಸ್ಥಾನಕ್ಕೂ ಭೇಟಿ ನೀಡಬಹುದು.

      Delete
  8. ನಮಸ್ಕಾರ ಶ್ರೀಕಾಂತ್,
    ನನ್ನ ತಾತನವರ ಊರು ಹೊಸಹೊಳಲು. ಅಲ್ಲಿನ ದೇವಸ್ತಾನದ ಫೋಟೋಗಳನ್ನು ನೋಡಿ ಬಹಳ ಖುಷಿ ಆಯ್ತು. ನಾನು ಚಿಕ್ಕವಳಿದ್ದಾಗ ಮಕ್ಕಳು ದೇವಸ್ಥಾನದ ಗೋಪುರದ ಮೇಲೆಲ್ಲಾ ಹತ್ತಿ ಬಚ್ಚಿಟ್ಟುಕೊಳ್ಳುವ ಆಟ ಇತ್ಯಾದಿ ಆಡುತ್ತಿದ್ದರು. ಕೆತ್ತನೆಗಳನ್ನು ಕಲ್ಲಿನಿಂದ ಚೆಚ್ಚುತ್ತಿದ್ದರು:(

    ಇದಕ್ಕೊಂದು ಸರಿಯಾದ ಕಾಂಪೊಂಡ್ ಹಾಕಿದ್ದು ಇತ್ತೀಚೆಗೆ.

    ReplyDelete
    Replies
    1. ನನ್ನ ಬ್ಲಾಗ್ ಲೋಕಕ್ಕೆ ಸ್ವಾಗತ ರೂಪ.
      ಹೌದು ನಿಮ್ಮ ಮಾತು ಸರಿ ಎಷ್ಟು ವಿಗ್ರಹಗಳನ್ನು ಚಚ್ಚಿ ಕುಟ್ಟಿ ಮಾಡಿದ್ದಾರೆ. ಇಂತಹ ಅನೇಕ ಸುಂದರ ದೇವಾಲಯಗಳನ್ನು ವಿರೂಪಗೊಳಿಸಿದ ಕೀರ್ತಿ ಬರಿ ವಿಗ್ರಹ ಛೇದಕರಿಗೆ ಮಾತ್ರವಲ್ಲ ಭಾರತೀಯರ ಮೇಲೂ ಇದೆ. ದೇವಾಲಯದ ಸಂರಕ್ಷಣೆ ಚೆನ್ನಾಗಿ ಮಾಡುತ್ತಿದ್ದಾರೆ ಈಗ. ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  9. ಲೇಖನೆ ಸೊಗಸಾಗಿದೆ ಶ್ರೀಕಾಂತ್ ...

    ReplyDelete
    Replies
    1. ಧನ್ಯವಾದಗಳು ಸಂದೀಪ್. ಬಹಳ ಕಾಲದ ನಂತರ ಮತ್ತೆ ಬ್ಲಾಗ್ ಲೋಕಕ್ಕೆ ಬಂದಿದ್ದೀರಾ

      Delete