ಸುಮಾರು ೨೯ ವರ್ಷಗಳ ಹಿಂದೆ .....ರೆಬಲ್ ಸ್ಟಾರ್ ಅಂಬರೀಶ್ ಅವರ ಸಿನಿಮಾಗಳನ್ನು ಬಹಳ ಇಷ್ಟ ಪಡುತಿದ್ದ ಕಾಲ...ಕಾರಣ ಅವರ ಸಿನೆಮಾಗಳಲ್ಲಿ ಬಾಕ್ಸಿಂಗ್ (ಆಗಿನ ನಮ್ಮ ಬಾಲ ಭಾಷೆ) ಬಹಳ ಇರ್ತಾ ಇದ್ದವು.... ಆ ಸಿನಿಮಾದಲ್ಲಿ ನನಗೆ ಗೊತ್ತಿದ್ದಂತೆ ಪ್ರಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡು ಸತ್ಯಂ ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ "ಇದೆ ನಾಡು ಇದೆ ಭಾಷೆ ಎಂದೆಂದೂ ನನ್ನದಾಗಿರಲಿ" ಹಾಡಿನಲ್ಲಿ ಬರುವ...
"ಚಾಮುಂಡಿ ರಕ್ಷಣೆ ನಮಗೆ
ಗೋಮಟೇಶ್ವರ ಕಾವಲು ಇಲ್ಲಿ..."
ಸಾಲು ಬಹಳ ಕಾಡಿತ್ತು...
ಗೊಮ್ಮಟ ಯಾಕೆ ಹಾಗೆ ....ಯಾಕೆ ಹೀಗೆ ನಿಂತ.... ಎನ್ನುವ ನೂರಾರು ತರ್ಕ ಬದ್ಧ ಪ್ರಶ್ನೆಗಳು ಕಾಡಿದ್ದವು...ಜೊತೆಗೆ ಗೋಮ್ಮಟನಷ್ಟೇ ಹೆಸರುವಾಸಿ ಆ ಬೃಹತ್ ಶಿಲ್ಪದ ರೂವಾರಿ ಶ್ರೀ ಚಾವುಂಡರಾಯ..ಅದರಲ್ಲೂ ಶಾಲಾ ದಿನಗಳಲ್ಲಿ ಬಾಹುಬಲಿ ಹಾಗೂ ಭರತನ ನಡುವೆ ನಡೆಯುವ ಯುದ್ಧದ ವರ್ಣನೆ (ದೃಷ್ಠಿ ಯುದ್ದ, ಜಲಯುದ್ದ ಮಲ್ಲಯುದ್ಧ) ಇವೆಲ್ಲ ಕಣ್ಣಿಗೆ ಕಟ್ಟಿದಂತೆ ವರ್ಣನೆ ಮಾಡಿದ್ದ ನಮ್ಮ ಮಾಸ್ತರು..ಆ ಶಿಲ್ಪವನ್ನೊಮ್ಮೆ ನೋಡುವ ಕುತೂಹಲವನ್ನು ಇನ್ನಷ್ಟು ಹೆಚ್ಚು ಮಾಡಿದ್ದರು...
ನನ್ನ ಸ್ನೇಹಿತೆ (ನನ್ನ ಮಗಳು) ಹಾಸನಕ್ಕೆ ಹೋಗುವಾಗೆಲ್ಲ ಹೇಳುತಿದ್ದಳು ಒಮ್ಮೆ ಹೋಗೋಣ ಅಪ್ಪ ಅಂತ...ಸರಿ ಆ ಅವಕಾಶ ಒದಗಿ ಬಂತು...ಕಾರಣಾರ್ಥ ಹಾಸನಕ್ಕೆ ಹೋಗುವ ಅವಕಾಶ ಬಂದಾಗ ಸರಿ ಕರೆದೊಯ್ಯೋಣ ಎಂದು ಹೊರಟೆ...
|
ಇಂದ್ರ ಗಿರಿಯ ಮುಖ್ಯ ದ್ವಾರ |
ಬೆಟ್ಟದ ಬುಡದಲ್ಲಿ ನಿಂತಾಗ ಸುಮಾರು ಸಂಜೆ ನಾಲ್ಕು ಘಂಟೆಯಾಗಿತ್ತು...ಸೂರ್ಯ ತಂಪಾಗಲು ಹೊರಟಿದ್ದ...
"ಸರ್ ಕಾಲು ಸುಡುತ್ತೆ ಸರ್ ಸಾಕ್ಸ್ ತಗೊಳ್ಳಿ.."
"ಚಪ್ಪಲಿ ಹಾಕಿಕೊಂಡು ಬೆಟ್ಟ ಹತ್ತುವ ಹಾಗಿಲ್ಲ"
"ಮ್ಯಾಪ್ ತಗೊಳ್ಳಿ ಸರ್, ಬೇಳೂರು, ಹಳೇಬೀಡು, ಶ್ರವಣ ಬೆಳಗೊಳದ ಬಗ್ಗೆ ಪುಸ್ತಕ ಇದೆ ಸರ್" ಹೀಗೆಲ್ಲ ಪ್ರಾಣ ತಿಂತಾ ಇದ್ದರು ...
"ಅಪ್ಪ ಸಾಕ್ಸ್ ಬೇಡ..ಪುಸ್ತಕ ತಗೊಳ್ಳಿ ಓದೋಕೆ ಆಗುತ್ತೆ.."ಅಂದಳು ಮಗಳು...
|
ಶುರುವಾಯಿತು ಮೆಟ್ಟಿಲಿನ ಲೆಕ್ಕಾಚಾರ! |
"ಸರಿ" ಎಂದೆ ...ಪುಸ್ತಕವನ್ನು ಚೀಲಕ್ಕೆ ಹಾಕಿಕೊಂಡು...ನಿಧಾನವಾಗಿ ಸುಮಾರು ೬೫೦ ಮೆಟ್ಟಿಲು ಅಂತ ಅಂದಾಜು ಇರುವ ಇಂದ್ರ ಗಿರಿ ಬೆಟ್ಟವನ್ನು ಹತ್ತಲು ಶುರು ಮಾಡಿದೆವು..ಮಗಳು ಉತ್ಸಾಹದ ಚಿಲುಮೆಯಾಗಿದ್ದಳು..ಮನದನ್ನೆ ಮನವನ್ನೇ ಬಾಣಲೆ ಮಾಡಿಕೊಂಡು ಮನದಲ್ಲೇ ನನ್ನನ್ನು ಹುರಿಯುತಿದ್ದಳು...ನಾನು ಹಾಗೂ ಮಗಳು ಇಬ್ಬರೂ ನಗುತ್ತ...ಹಾಗೆ ಕ್ಯಾಮೆರಾಗೆ ಕೆಲಸ ಕೊಡುತ್ತ ಹತ್ತುತ್ತಾ ಸಾಗಿದೆವು...
|
ಹುರುಪಿನಲ್ಲಿ! |
ಮಗಳಿಗೆ ಗೊಮ್ಮಟನ ಕಥೆ ಹೇಳುತ್ತಾ, ನಗಿಸುತ್ತಾ ಸಾಗಿದೆ...ಮನದನ್ನೆಯು ದುಮುಗುಡುತ್ತಲೇ ಇದ್ದಳು...ಕಡೆಗೆ ವಿಧಿಯಿಲ್ಲದೆ ನಮ್ಮ ಹಾದಿಗೆ ಬಂದಳು...ಕಾರಣ ಸಂಪುಟ ಸಭೆಯಲ್ಲಿ ಮೆಜಾರಿಟಿ ನಮ್ಮ ಕಡೆ ಇತ್ತು....:-)
|
ಉಸ್ಸಪ್ಪಾ ...ಹೆಂಗಪ್ಪ ಹತ್ತೋದು... ಮನದನ್ನೆ! |
ಸುಮಾರು ಒಂದು ಸಾವಿರ ವರ್ಷಗಳ ಆಸು ಪಾಸಿನ, ಬಂಡೆಯ ಮೇಲೆ ಕೆತ್ತಿರುವ, ಲಿಪಿಗಳನ್ನು ಸಂರಕ್ಷಿಸಿರುವ ರೀತಿಯನ್ನು ವಿವರಿಸುತ್ತ, ಅದನ್ನೆಲ್ಲ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಗಿದೆ..
|
ಸಂರಕ್ಷಿಸುವ ರೀತಿ ಇಷ್ಟವಾಯಿತು |
ಪಕ್ಕದಲ್ಲೇ ಒದೆಕಲ್ಲ ಬಸದಿ ಕಾಣಿಸಿತು.. ಕಲ್ಲುಗಂಭಗಳನ್ನು ಸುತ್ತಲು ಆಧಾರವಾಗಿ ನಿಲ್ಲಿಸಿದ್ದರಿಂದ ಇದಕ್ಕೆ ಒದೆಗಲ್ಲ ಬಸದಿ ಎಂದು ಕರೆಯುತ್ತಾರೆ ಎಂದು ಅಲ್ಲಿನ ಒಂದು ಶಾಸನ ಹೇಳಿತು. ಇದು ಸುಮಾರು ಹದಿನಾಲ್ಕನೇ ಶತಮಾನದಲ್ಲಿ ನಿರ್ಮಿಸಿದೆ ಎನ್ನುವ ಮಾಹಿತಿ ಸಿಕ್ಕಿತು. ಒಳಗೆ ಸುಂದರ ಮೂರ್ತಿಗಳು ಇದ್ದವು..ಅದನ್ನೆಲ್ಲ ನೋಡಿ ಮತ್ತೆ ಮೇಲಕ್ಕೆ ಹತ್ತಲು ಶುರು ಮಾಡಿದೆವು.
|
ಒದೆಗಲ್ಲ ಬಸದಿ |
ಮುಂದೆ ತ್ಯಾಗದ ಕಂಬದ ದರ್ಶನವಾಯಿತು. ಇದು ಎರಡು ಅಂತಸ್ತಿನ ಮಂಟಪದ ಮಧ್ಯ ಭಾಗದಲ್ಲಿ ಕುಸುರಿ ಕೆಲಸ ನಾಜೂಕಾಗಿ ಮಾಡಿರುವ ಸುಮಾರು ಹತ್ತು ಅಡಿ ಕಂಭ ಮನಸೆಳೆಯಿತು. ಸುಮಾರು ಹತ್ತನೆಯ ಶತಮಾನದಲ್ಲಿ ಕೆತ್ತಿಸಿರಬಹುದು ಎಂದು ತಿಳಿಯಿತು. ಸೊಗಸಾದ ಕೆತ್ತನೆ ಎಷ್ಟು ಬಾರಿ ನೋಡಿದರು ಮನತಣಿಯದು.
|
ತ್ಯಾಗದ ಕಂಬ |
ಇಲ್ಲಿಂದ ಕಾಣುವ ಎದುರಿನಲ್ಲಿರುವ ಚಂದ್ರ ಗಿರಿ, ಕೊಳ, ಸುತ್ತ ಮುತ್ತಲ ದೃಶ್ಯಗಳು ನಯನ ಮನೋಹರ.
|
ಚಂದ್ರ ಗಿರಿ, ಕೊಳದ ಮನಮೋಹಕ ದೃಶ್ಯ |
ನಿಧಾನವಾಗಿ ಏರುತ್ತಿದ್ದ ಹಾಗೆ ಸುಂದರ ಜಾಲಂಧ್ರಗಳನ್ನು ಹೊಂದಿದ (ಅಖಂಡ ಬಾಗಿಲು) ಹೆಬ್ಬಾಗಿಲು, ಅಕ್ಕ ಪಕ್ಕದಲ್ಲಿ ಗೋಮಟೇಶ್ವರ, ಭರತೇಶ್ವರರ ವಿಗ್ರಹ, ಕೆಲವು ಸಣ್ಣ ಸಣ್ಣ ಶೀಲ ಶಾಸನಗಳು ಕಣ್ಣಿಗೆ ಬಿದ್ದವು. ಬಂಡೆಯ ಮೇಲೆ ಕೆತ್ತಿರುವ ತೀರ್ಥಂಕರರ ದೃಶ್ಯ ನನ್ನ ಮಗಳ ಮನಸೆಳೆಯಿತು.
ಹಾಗೆಯೇ ಕಡೆಯ ತಿರುವನ್ನು ಹತ್ತಿ ಮೇಲೆ ಬರುವಾಗ ಬಾಗಿಲ ಅಕ್ಕ ಪಕ್ಕದಲ್ಲಿ ರಚಿಸಿರುವ ಕುದುರೆ, ಆನೆ ಚಿತ್ರಗಳು, ಬಸದಿಯ ಹೊರ ಗೋಡೆಗಳು ಸುಂದರವೆನಿಸುವ ಅನುಭವ ನೀಡಿತು.
ಅಲ್ಲಿಯೇ ಕಂಡು ಬರುವ ಗುಳ್ಳೆ ಕಾಯಿ ಅಜ್ಜಿಯ ಮಂಟಪ, ವಿಗ್ರಹ, ಮಧ್ಯದ ಕಂಭವನ್ನು ಬಂಡೆಯಲ್ಲೇ ಕೊರೆದು ನಿರ್ಮಿಸಿರುವ ಮಂಟಪ ಇಷ್ಟವಾಗುತ್ತದೆ. ಸುಮಾರು ಹದಿನಾಲ್ಕನೇ ಶತಮಾನದಲ್ಲಿ ನಿರ್ಮಿತವಾಯಿತು ಎನ್ನುವ ಸಂದೇಶ ಅಲ್ಲಿನ ಲಿಖಿತ ಮಾಹಿತಿಯಿಂದ ತಿಳಿದು ಬಂತು. ದಂತ ಕಥೆಯ ಪ್ರಖಾರ ಚಾವುಂಡರಾಯ ಗೊಮ್ಮಟನ ಶಿಲ್ಪವನ್ನು ಕೆತ್ತಿಸಿದ ಮೇಲೆ ಗರ್ವಿತನಾದಾಗ..ಗರ್ವವನ್ನು ಇಳಿಸಲು ಪದ್ಮಾವತಿ ಯಕ್ಷಿಯು ಗುಳ್ಳೆಕಾಯಿ ಅಜ್ಜಿ ರೂಪದಲ್ಲಿ ಬಂದು ಗರ್ವವನ್ನು ಇಳಿಸಿದಳು.
|
ಗೋಮಟೇಶ ಕಾವಲು ಇಲ್ಲಿ! |
ಅಲ್ಲಿಯೇ ನಿಂತು ತಲೆ ಎತ್ತಿ ನೋಡಿದಾಗ ಇಡಿ ಗಿರಿಯನ್ನು ತನ್ನ ಕಣ್ಣಲ್ಲೇ ಕಾಯುವಂತೆ ನಿಂತಿರುವ ಭಂಗಿಯಂತೆ ಭಾಸವಾಯಿತು. "ಗೋಮಟೇಶ ಕಾವಲು ಇಲ್ಲಿ" ಎನ್ನುವ ಸಾಲು ನೆನಪಿಗೆ ಬಂದಿತು. ಹಾಗೆ ನೋಡುತ್ತಾ ಒಳಗೆ ಕಾಲಿಟ್ಟೆ...ನನ್ನ ಮಗಳಿಗೆ ಏನೋ ಸಾಧಿಸಿದ ಖುಷಿ. ಬಾಹುಬಲಿಯನ್ನು ಹತ್ತಿರದಿಂದ ನೋಡಿ, ನಮಸ್ಕರಿಸಿ, ಧ್ಯಾನ ಮಾಡಿ, ಅಲ್ಲೇ ಇದ್ದ ಆರ್ಚಕರಿಂದ ತೀರ್ಥವನ್ನು ಪಡೆದ ಮೇಲೆ ತೋರಿದ ಮಂದಹಾಸ ಇನ್ನು ಮನಸಲ್ಲಿ ಅಚ್ಚೊತ್ತಿ ನಿಂತಿದೆ.
|
ಮನಸಿನ ಜಗತ್ತನ್ನು ಗೆದ್ದು ನಿಂತ! |
ಸುಮಾರು ೫೭ ಅಡಿ ಎತ್ತರದ ಸುಮಾರು ೯೮೩ನೆ ಇಸವಿಯಲ್ಲಿ, ವಿಶ್ವದಲ್ಲೇ ಒಂದೇ ಬಂಡೆಯಿಂದ ಕೊರೆದ, ಬೃಹತ್ ಶಿಲ್ಪ ಇದಾಗಿದೆ. ಶಾಂತ ಮುಖ ಭಾವ, ಅರೆ ತೆರೆದ ಕಣ್ಣುಗಳು, ನೀಳವಾದ ಕೈ ಬೆರಳುಗಳು, ನಿಜವೇನೋ ಅನ್ನಿಸುವಂತೆ ಕೆತ್ತಿರುವ ಕಾಲಿನ ಬೆರಳುಗಳು, ಗುಂಗುರು ಕೂದಲು, ನೀಳ ನಾಸಿಕ, ಹುತ್ತದ ಮಧ್ಯೆ ನಿಂತ ಭಂಗಿ, ಹಬ್ಬಿರುವ ಬಳ್ಳಿಯ ಚಿತ್ರಗಳು ತುಂಬಾ ಸಹಜವಾಗಿ ಮೂಡಿ ಬಂದಿದೆ.
ಈ ಚೆಲುವಾಂತ ಚೆನ್ನಿಗನನ್ನು ಚಂದನ, ಕುಂಕುಮ, ಅರಿಶಿನ ಮುಂತಾದ ಮಂಗಳ ದ್ರವ್ಯಗಳಲ್ಲಿ ಮಜ್ಜನ ಮಾಡಿಸುವ ಹನ್ನೆರಡು ವರ್ಷಗಳಿಗೊಮ್ಮೆ ನೆರವೇರುವ ಮಹಾ ಮಸ್ತಕಾಭಿಷೇಕ ಬಲು ಸೊಗಸಾಗಿರುತ್ತೆ. ೨೦೧೮ರಲ್ಲಿ ನಡೆಯುವ ಮಹಾ ಮಜ್ಜನಕ್ಕೆ ಮಗಳನ್ನು ಕರೆದುಕೊಂಡು ಬರುವೆ ಎಂಬ ಸಂಕಲ್ಪದಿಂದ ಹಕ್ಕಿಯ ಮನಸಿನ ಹಾಗೆ ನಿಧಾನವಾಗಿ ಕೆಳಗಿಳಿಯಲು ಶುರು ಮಾಡಿದೆವು. ದೇವಸ್ಥಾನದ ಆವರಣದ ಗೋಡೆಯ ಮೇಲೆ ಉಬ್ಬು ಶಿಲ್ಪದ ಮಾದರಿ ಕೆತ್ತನೆಗಳು ಸುಂದರವಾಗಿದ್ದವು.
|
ಸುಂದರ ಉಬ್ಬು ಶಿಲ್ಪ! |
|
ನನ್ನ ಕುಟುಂಬ ಮೊದಲ ಚಾರಣದ ಅನುಭವದಲ್ಲಿ! |
ಸೂರ್ಯ ತನ್ನದಿನದ ಕಾರ್ಯ ಮುಗಿಸುವ ತರಾತುರಿಯಲ್ಲಿದ್ದ. ಸೂರ್ಯಸ್ಥದ ದೃಶ್ಯವನ್ನು ಸೆರೆ ಹಿಡಿಯಲು ಇನ್ನಷ್ಟು ಹೊತ್ತು ಅಲ್ಲಿರ ಬೇಕಿತ್ತು..ಆದರೆ ಸಮಯದ ಅಭಾವವಿದ್ದ ಕಾರಣ...ಮತ್ತು ಹೊಟ್ಟೆ ಚುರುಗುಟ್ಟುತಿದ್ದುದರಿಂದ ನಿಧಾನವಾಗಿ ಕೆಳಗಿಳಿದು "ಹೋಟೆಲ್ ರಘು" ಗೆ ಕಾಲಿಟ್ಟೆವು.
|
ತನ್ನ ಮನೆಗೆ ಹೊರತು ನಿಂತ ದಿನಕರ! |
ಮಾಮೂಲಿ ಮಗಳಿಗೆ ಇಡ್ಲಿ, ಮನದನ್ನೆಗೆ ಮಸಾಲಾ ದೋಸೆ, ನನಗೆ ನನ್ನ "ಸೆಟ್ ದೋಸೆ " ಬಂತು. ಚಟ್ನಿ ಬಾಯಿಗಿಟ್ಟೆ..ಆಹಾ..ಈಗಲೂ ಬಾಯಲ್ಲಿ ನೀರು ಬರಿಸುತ್ತೆ...ವಡೆ ಸ್ವಲ್ಪ ತಡವಾಗುತ್ತೆ ಅಂದ್ರು...ಸರಿ ಕಾಯುವ ಅಂದು ಕೂತೆವು.ವಡೆ ಸೀದಾ ಬಾಣಲೆಯಿಂದ ತಟ್ಟೆಗೆ ತಂದು ಹಾಕಿದರು...ಬಿಸಿ ಬಿಸಿ ವಡೆ, ಮಸಾಲೆ ಭರಿತ ಖಾರ ಖಾರ ಚಟ್ನಿ...ಆಹಾ ಆ ಛಳಿಗೆ ಇನ್ನೇನು ಬೇಕು...ಚಟ್ನಿಯ ಮೇಲಿನ ಪ್ರೀತಿಯಿಂದ ಇನ್ನೊಮ್ಮೆ ಮೂರು ಮಂದಿ ವಡೆ-ಚಟ್ನಿ ಬಾರಿಸಿದೆವು ಹೊರಬರುವಾಗ ನಾಲಿಗೆ ಖುಶಿಯಿಂದ ಆ ಹೋಟೆಲಿನ ಮಾಲಿಕರಿಗೆ "ಸರ್ ಚಟ್ನಿ ಸೂಪರ್.." ಎಂದಿತು..ಮಾಲೀಕರು..ಸಣ್ಣಗೆ ನಗೆ ಬೀರಿದರು..ನಾವು ವಡೆಯಂತೆ ಗರಿ ಗರಿ ಮನಸಿನಿಂದ ಅಲ್ಲಿಂದ ಹೊರಟೆವು!
ಶ್ರವಣಬೆಳಗೊಳ ಕರ್ನಾಟಕದ ಹೆಮ್ಮೆಯ ತಾಣ.
ReplyDeleteಜೈನರ ಆಳ್ವಿಕೆಯ ಮತ್ತು ಗತ ಕಾಲದ ಸಂಸ್ಕೃತಿಯ ಅಧ್ಯಯನಕ್ಕೆ ಹೇಳಿ ಮಾಡಿಸಿದ ಬೆಳಗೊಳವನ್ನು ಏರುವುದೇ ಒಂದು ಸಾಹಸ.
ಬೃಹದಾಕಾರದ ಗೊಮ್ಮಟನ ಅನನ್ಯ ಕ್ರಮಬದ್ದ ಕೆತ್ತನೆ ಮತ್ತು ಅವನ ಪ್ರಶಾಂತತೆ ನನಗೆ ಮೋಡಿ ಮಾಡುತ್ತದೆ.
ಪ್ರತಿ ಬಾರಿ ಶ್ರವಣಬೆಳಗೊಳಕ್ಕೆ ಭೇಟಿ ಕೊಟ್ಟಾಗಲೂ ನಾನು ಏದುಸಿರು ಬಿಡುತ್ತಲೇ ಮೆಟ್ಟಿಲೇರಿದ್ದೇನೆ. ಆದರೂ ಪದೇ ಪದೇ ಸೆಳೆವ ಅವನ ರೂಪು ಅನನ್ಯ.
ಪ್ರವಾಸಿಗರಿಗೆ ಹಲವಾರು ಊರುಗಳ ಸವಿವರ ಕೊಡುವ ನಿಮ್ಮ ಶ್ರಮ ಪ್ರಶಂಸನೀಯ.
ಅಂತೆಯೇ ಇಲ್ಲಿನ ಚಿತ್ರಗಳು ಅಮೋಘ.
ದೂರದಿಂದ ಕತ್ತಲೆಯಲ್ಲಿ ನೋಡಿದಾಗ ಗೊಮ್ಮಟನ ತಲೆ ಬೆಳಕಿನ ಸಿರಿಯಲ್ಲಿ ನೋಡುವ ಮಜವೇ ಬೇರೆ. ..ಇತಿಹಾಸ ಕೆದಕುವವರಿಗೆ ಅಕ್ಷಯ ಭಂಡಾರ, ಚಾರಣಿಗರಿಗೆ ಹತ್ತುವ ಛಲವನ್ನು ಕಾಡುವ ಹುಮ್ಮಸ್ಸು ಎಲ್ಲವು ಮೆಲೈಸಿರುವ ಬೆಳಗೊಳ ಅದು ಸುಂದರ ಸ್ಥಳ. ನಿಮ್ಮ ಮಾತಿಗೆ ನನ್ನ ನಮನಗಳು ಬದರಿ ಸರ್ :-)
Deleteಆತ್ಮೀಯ ಶ್ರೀಕಾಂತ,
ReplyDeleteಬಿಸಿ ಬಿಸಿ ವಡೆ ಚಟ್ನಿ ಬಿಟ್ಟು ಮಿಕ್ಕೆಲ್ಲವೂ ನಮಗೂ ಸಿಕ್ಕಿತು. ಉತ್ತಮ ಚಿತ್ರದೊಂದಿಗೆ ಸೊಗಸಾದ ನಿರೂಪಣೆ. ಒಳ್ಳೆಯ ಪ್ರವಾಸ ಕಥನ.
ಚಿಕ್ಕಪ್ಪ...ವಡೆ ಚಟ್ನಿಯನ್ನು ಮತ್ತೊಮ್ಮೆ ಹಾಸನಕ್ಕೆ ಬರುವಾಗ ತರುವೆ..ಯೋಚನೆಯೇ ಬೇಡ...ಹಃ ಹಃ ..ಸುಂದರ ಪ್ರತಿಕ್ರಿಯೆ ಚಿಕ್ಕಪ್ಪ ಧನ್ಯವಾದಗಳು
Deleteಶ್ರವಣ ಬೆಳಗೊಳದ ಫೋಟೋಸ್, ಮಾಹಿತಿ ಓದಿಯಾದ ಮೇಲೆ ಅಲ್ಲೊಮ್ಮೆ ಹೋಗಲೇಬೇಕೆಂಬ ಮನಸ್ಸಾಗಿದೆ... ವೇಣೂರು , ಧರ್ಮಸ್ಥಳದ ಬಾಹುಬಲಿಯ ಮೂರ್ತಿಯನ್ನು ನೋಡಿದ್ದೇನೆ. ಅದಕ್ಕಿಂತಲೂ ಎತ್ತರದ ಮೂರ್ತಿ ಮತ್ತು ಶಿಲ್ಪಕಲೆಯ ನೋಡುವ ಇಚ್ಛೆಯಿದೆ.. :)
ReplyDeleteಚಂದದ ಮಾಹಿತಿ ಮತ್ತು ಫೋಟೋಸ್ ಗಾಗಿ ಧನ್ಯವಾದಗಳು ಅಣ್ಣಯ್ಯ... ಸೊಸೆ ಕೂಡ ಅಣ್ಣನಂತೆ ಓದುವ ಮತ್ತು ಚಾರಣ ಪ್ರೇಮಿ ಅನ್ನೋದು ಮನದಟ್ಟಾಯಿತು.
:)
ಇದು ನನಗೆ ಎರಡನೇ ಪ್ರವಾಸ ಗೊಮ್ಮಟನ ಗಿರಿಗೆ...ಆದರು ಮೊದಲ ಬಾರಿ ಹೋಗುತ್ತಿದ್ದೇನೆ ಎನ್ನುವ ತವಕ ಮನದಲ್ಲಿ..ಜೊತೆಯಲ್ಲಿ ನನ್ನ ಕುಟುಂಬ ಇನ್ನಷ್ಟು ಹೊಸ ಕಳೆಯಿಂದ ಕೂಡಿತ್ತು ಗೊಮ್ಮಟ ಗಿರಿ. ಒಮ್ಮೆ ನೋಡಬಯಸುವ ತಾಣ ಇದು. ನಿನ್ನ ಸೊಸೆಗೆ ಓದುವ ಸುತ್ತುವ ಆಸೆ ನನಗಿಂತ ಜಾಸ್ತಿ ಪಿ.ಎಸ್ ...ಸ್ವಲ್ಪ ದೊಡ್ಡವಳಾದ ಮೇಲೆ ಸೊಸೆಯೂ ಕೂಡ ನನ್ನ ಜೊತೆ ಚಾರಣಕ್ಕೆ. ಧನ್ಯವಾದಗಳು ಪಿ.ಎಸ್
Deleteಸೊಗಸಾದ ವರ್ಣನೆ!!
ReplyDeleteಧನ್ಯವಾದಗಳು ಅರವಿಂದ್..
Deleteಸೂಪರ್ ಅನುಭವ,ಸೂಪರ್ ನಿರೂಪಣೆ!!!!
ReplyDeleteಡಾಕ್ಟ್ರೇ ಸುಂದರ ಪ್ರತಿಕ್ರಿಯೆ ನಿಮ್ಮದು ಧನ್ಯವಾದಗಳು
Deleteನಾವು ಕಳೆದ ವರುಷ ಹೋಗಿದ್ದೆವು ತುಂಬ ಇಷ್ಟ ಆಗಿತ್ತು. ನಿಮ್ಮ ಆರ್ಟಿಕಲ್ ಓದಿ ಇನ್ನೊಮ್ಮೆ ಹೋಗಿ ಬಂದ ಹಾಗಾಯ್ತು:)
ReplyDeleteಧನ್ಯವಾದಗಳು ಎಸ್ ಎಸ್...ತುಂಬಾ ಸುಂದರವಾದ ಸ್ಥಳ
Deleteಸುಮಾರು ಆರು ವರ್ಷಗಳ ಹಿಂದೆ ಸುಡು ಬಿಸಲಿನಲ್ಲಿ ಕುಳಿತು ಗೊಮ್ಮಟನಿಗೆ ನಡೆಯುತಿದ್ದ ಮಹಾಮಸ್ತಕಾಭಿಷೇಕ ನೋಡುತಿದ್ದ ನನ್ನ ಕಣ್ಣ ಮುಂದೆ ರಾಜಕಾರಣ ,ಭಯೋತ್ಪಾದನೆ ,ಹಿಂಸೆಗಳು ತಾಂಡವ ನೃತ್ಯವಾಡುತಿರುವ ಈ ಸಂದರ್ಭದಲ್ಲಿ ಬಾಹುಬಲಿ ಆದರ್ಶವಾಗಿ ಕಾಣುತ್ತಾನೆ.ಆರು ವರ್ಷಗಳಿಂದ ಬಾಹುಬಲಿಯನ್ನು ಕುರಿತು ನಾಟಕ ಮಾಡಿಸಬೇಕೆನ್ನುವ ಕನಸು ಡಾ .ಕೆ ವೈ .ನಾರಾಯಣಸ್ವಾಮಿಯವರ ಚಕ್ರ ರತ್ನ ನಾಟಕ ಮಾಡುವ ಮೂಲಕ ನನಸಾಗಿದೆ .ಇತ್ತೀಚಿಗೆ ರೂಪಾಂತರ ತಂಡ ಅಭಿನಯಿಸಿದ ಚಕ್ರ ರತ್ನ ನಾಟಕಕ್ಕೆ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚುಗೆಗಳಿಸಿದ್ದು ಸಂತೋಷದ ವಿಚಾರವಾದರೆ ,ಕೆಲವು ಜೈನ ಧರ್ಮೀಯರು ತಕರಾರು ತೆಗೆದಿರುವುದು ಬೇಸರದ ಸಂಗತಿ .ನಿಮ್ಮ ಗೊಮ್ಮಟನನ್ನು ನೋಡುತಿದ್ದಾಗ ಇದೆಲ್ಲ ನೆನಪಾಯಿತು .
ReplyDeleteಸುಮಾರು ಆರು ವರ್ಷಗಳ ಹಿಂದೆ ಸುಡು ಬಿಸಲಿನಲ್ಲಿ ಕುಳಿತು ಗೊಮ್ಮಟನಿಗೆ ನಡೆಯುತಿದ್ದ ಮಹಾಮಸ್ತಕಾಭಿಷೇಕ ನೋಡುತಿದ್ದ ನನ್ನ ಕಣ್ಣ ಮುಂದೆ ರಾಜಕಾರಣ ,ಭಯೋತ್ಪಾದನೆ ,ಹಿಂಸೆಗಳು ತಾಂಡವ ನೃತ್ಯವಾಡುತಿರುವ ಈ ಸಂದರ್ಭದಲ್ಲಿ ಬಾಹುಬಲಿ ಆದರ್ಶವಾಗಿ ಕಾಣುತ್ತಾನೆ.ಆರು ವರ್ಷಗಳಿಂದ ಬಾಹುಬಲಿಯನ್ನು ಕುರಿತು ನಾಟಕ ಮಾಡಿಸಬೇಕೆನ್ನುವ ಕನಸು ಡಾ .ಕೆ ವೈ .ನಾರಾಯಣಸ್ವಾಮಿಯವರ ಚಕ್ರ ರತ್ನ ನಾಟಕ ಮಾಡುವ ಮೂಲಕ ನನಸಾಗಿದೆ .ಇತ್ತೀಚಿಗೆ ರೂಪಾಂತರ ತಂಡ ಅಭಿನಯಿಸಿದ ಚಕ್ರ ರತ್ನ ನಾಟಕಕ್ಕೆ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚುಗೆಗಳಿಸಿದ್ದು ಸಂತೋಷದ ವಿಚಾರವಾದರೆ ,ಕೆಲವು ಜೈನ ಧರ್ಮೀಯರು ತಕರಾರು ತೆಗೆದಿರುವುದು ಬೇಸರದ ಸಂಗತಿ .ನಿಮ್ಮ ಗೊಮ್ಮಟನನ್ನು ನೋಡುತಿದ್ದಾಗ ಇದೆಲ್ಲ ನೆನಪಾಯಿತು .
ReplyDeleteReally nice
ReplyDelete