ಸನಾದಿ ಅಪ್ಪಣ್ಣ ಚಿತ್ರದಲ್ಲಿ ಜಯಪ್ರದ.. ಅಣ್ಣಾವ್ರ (ಅಪ್ಪಣ್ಣ) ಸನಾದಿ ನಾದಕ್ಕೆ ನೃತ್ಯ ಮಾಡಬೇಕು ಎಂದು ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಅದು ಸಾಧ್ಯವಾಗೋಲ್ಲ.. ಹೇಗಾದರೂ ಸರಿ ಅದನ್ನು ಸಾಧಿಸಬೇಕು ಎಂದು ಸ್ವಲ್ಪ ಬುದ್ಧಿವಂತಿಕೆಯಿಂದ ಸನಾದಿ ಹಿಡಿಯಲೂ ಕೂಡ ಬರದ ಬಾಲಣ್ಣ ಅವರನ್ನು ಕರೆಸಿ ಕಾರ್ಯಕ್ರಮ ಸಿದ್ಧಪಡಿಸುತ್ತಾರೆ. ಆ ಊರಿನ ಜನಕ್ಕೆ ಸನಾದಿ ಅಂದ್ರೆ ಅಪ್ಪಣ್ಣ... ಅಪ್ಪಣ್ಣ ಅಂದ್ರೆ ಸನಾದಿ.. ಹಾಗಾಗಿ ಬಾಲಣ್ಣ ಅವರ ಸನಾದಿ ನಾದ ಕೇಳುತ್ತಲೇ ಅಪಶೃತಿ ಅಪಶೃತಿ ಎಂದು ಗಲಾಟೆ ಶುರು ಮಾಡುತ್ತಾರೆ... ಕೋಪಗೊಳ್ಳುವ ಬಾಲಣ್ಣ ಇದು ಅಪಶೃತಿ ಅಲ್ಲ ಕಣ್ರೋ.. ಇದು ಅಪರೂಪದ ಶ್ರುತಿ ಎನ್ನುತ್ತಾರೆ.... !
ಹಾಗೆಯೇ ಕೆಲವೊಂದು ಕಟ್ಟಡಗಳು, ಸ್ಮಾರಕಗಳು ಯಾವುದೋ ಒಂದು ಉದ್ದೇಶದಲ್ಲಿ ಕಟ್ಟಿ ನಂತರ ಇನ್ನ್ಯಾವುದೋ ಯೋಜನೆಗಳಿಗೆ ಬಲಿಯಾಗಿ ಅಪಶೃತಿಯಾಗಿ... ಅಪರೂಪದ ವಸ್ತುಗಳು ಎನ್ನುವ ಹಣೆ ಪಟ್ಟಿ ಹೊತ್ತುಬಿಡುತ್ತವೆ.. ಅಂತಹ ಒಂದು ಕಟ್ಟಡ ಕರ್ನಾಟಕದ ಹಾಸನ ಬಳಿಯ ಗೊರೂರು ಎಂಬ ಊರಿನ ಬಳಿ ಇರುವ ಶೆಟ್ಟಿಹಳ್ಳಿಯಲ್ಲಿರುವ ಚರ್ಚ್.
ಸುಮಾರು ೧೮೬೦ ಇಸವಿಯಲ್ಲಿ ಫ್ರೆಂಚ್ ಪಾದ್ರಿಗಳಿಂದ ನಿರ್ಮಾಣವಾದ ಈ ಚರ್ಚ್ ಹಾಸನ, ಸಕಲೇಶಪುರ ಸುತ್ತಾ ಮುತ್ತಾ ಪ್ರದೇಶಗಳಲ್ಲಿ ವಾಸವಿದ್ದ ಕ್ರಿಸ್ಚಿಯನ್ನರಿಗೆ ಉಪಯೋಗವಾಗುತ್ತಿತ್ತು ಎಂದು ತಿಳಿದುಬರುತ್ತದೆ. ಆ ಕಾಲದಲ್ಲಿ ಈ ಪ್ರದೇಶದ ಸುತ್ತಲು ಹಸಿರು ಹೊಲಗಳು ಇದ್ದಿರಬಹುದು ಎನ್ನುವ ಮಾತಿಗೆ ಸಾಕ್ಷಿಯಾಗಿ ಈಗಲೂ ಕೂಡ ಸುತ್ತ ಮುತ್ತಲು ಅನತಿ ದೂರದಲ್ಲಿ ಅಂತಹ ದೊಡ್ಡ ದೊಡ್ಡ ಕೈಗಾರಿಕೆಗಳಾಗಲಿ ಕಾಣ ಬರುವುದಿಲ್ಲ. ಸರಿ ಸುಮಾರು ೧೯೬೦ ಇಸವಿಯಲ್ಲಿ ಸರಕಾರ ಕುಡಿಯುವ ನೀರಿಗೆ ಹಾಗೂ ನೀರಾವರಿ ಯೋಜನೆಯ ಅಡಿ ಹೇಮಾವತಿ ನದಿಗೆ ಆಣೆಕಟ್ಟು ಕಟ್ಟಿದ ಪರಿಣಾಮ ಈ ಚರ್ಚ್ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿ ಹೋಯಿತು. ಸುತ್ತ ಮುತ್ತಲ ಹಳ್ಳಿಯನ್ನು ಸ್ಥಳಾಂತರಿಸಿದರೂ ಈ ಚರ್ಚ್ ಹಾಗೆಯೇ ಉಳಿಯಿತು .
ಆ ಕಾರಣದಿಂದಾಗಿ ಗೊರೂರು ಅಣೆಕಟ್ಟಿನಲ್ಲಿ ನೀರು ಹೆಚ್ಚಾದಾಗ ಈ ಚರ್ಚ್ ಭಾಗಶಃ ಮುಳುಗಿಹೋಗುತ್ತದೆ. ಅವಾಗ ತೆಪ್ಪಗಳಲ್ಲಿ ಈ ಚರ್ಚಿನ ತನಕ ಹೋಗಬಹುದು. ಅನತಿ ದೂರದಲ್ಲಿರುವ ಸೇತುವೆ ಮೇಲೆ ನಿಂತು ಮುಳುಗಿ ಹೋದ ಕಟ್ಟಡದ ಮೇಲ್ಬಾಗವನ್ನು ನೋಡಬಹುದು. ಬೇಸಿಗೆಯಲ್ಲಿ ಅಥವಾ ಅಣೆಕಟ್ಟಿನಲ್ಲಿ ನೀರು ಕಡಿಮೆ ಇದ್ದರೇ ಚರ್ಚಿನ ತನಕ ಗಾಡಿಯಲ್ಲೇ ಹೋಗಬಹುದು.
ನಾವು ಕಳೆದ ವಾರಾಂತ್ಯದಲ್ಲಿ ಕುಟುಂಬದ ಒಂದು ಕಾರ್ಯಕ್ರಮಕ್ಕೆ ಹಾಸನಕ್ಕೆ ಹೋಗಿದ್ದಾಗ ಈ ಪ್ರದೇಶಕ್ಕೆ ಭೇಟಿ ಕೊಡುವ ಅವಕಾಶ ಕೂಡಿಬಂತು.
ಅಲ್ಲಿಗೆ ಹೋಗಿ ನೋಡಿದಾಗ ಆಗಲೇ ಸುಮಾರು ನೂರ ಅರವತ್ತು ವರ್ಷಗಳು ಕಳೆದಿರುವ ಈ ಕಟ್ಟಡ, ಕಳೆದ ೫೦ ವರ್ಷಗಳಿಂದ ನೀರಿನಲ್ಲೇ ಇರುವುದರಿಂದ ಕೆಲ ಭಾಗಗಳು ಬಿದ್ದುಹೋಗಿವೆ .. ಇನ್ನಷ್ಟು ಭಾಗಗಳು ಕಾಲನ ದಾಳಿಗೆ ಕುಸಿಯುವ ಎಲ್ಲಾ ಸೂಚನೆಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದೆ ಎಂದು ಅರಿವಾಯಿತು.. ಭೇಟಿ ಆದಷ್ಟು ಬೇಗ ಮಾಡಿದಷ್ಟು ಈಗಿರುವ ಕಟ್ಟಡವನ್ನು ಅದೇ ಸ್ಥಿತಿಯಲ್ಲಿ ನೋಡಬಹುದು.
ಸುಂದರ ಕಮಾನುಗಳು, ಗವಾಕ್ಷಿಗಳು, ಎತ್ತರದ ಬಾಗಿಲುಗಳು, ಮಿನಾರುಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಧರ್ಮ ಯಾವುದಾದರೇನು ಕಟ್ಟಡ ವಿನ್ಯಾಸ ಮನಸೆಳೆಯುತ್ತದೆ. ಅದನ್ನೆಲ್ಲ ನೋಡಿದಾಗ ಇದು ತನ್ನ ಉಚ್ಚ್ರಾಯ ಸ್ಥಿತಿಯಲ್ಲಿದ್ದಾಗ ಯಾವ ಗತ್ತು ಗಾಂಭೀರ್ಯ ಹೊಂದಿತ್ತು ಎಂದು ಕಲ್ಪಿಸಿಕೊಳ್ಳಬಹುದು.
ಸುಂದರಜಾಗಕ್ಕೆ ಭೇಟಿ ನೀಡಬೇಕು ಎಂಬ ಆಸೆ ಈಡೇರಿದ ಸಮಾಧಾನ ಒಂದು ಕಡೆಯಾದರೆ ಮನುಜನ ಆಸೆ ಆಕಾಂಕ್ಷೆಗಳು ಬೆಳೆಯುತ್ತಲೇ ಅನೇಕ ಸುಂದರ ಕಟ್ಟಡಗಳು, ಸ್ಮಾರಕಗಳು, ಮಂದಿರಗಳು ಅನೈತಿಕ ಚಟುವಟಿಕೆಗೆ ಆಸರೆಯಾಗಿಬಿಡುತ್ತವೆ ಎನ್ನುವ ಬೇಸರ ಕಾಡುತ್ತದೆ. ಎಲ್ಲಿ ನೋಡಿದರು ಒಡೆದ ಬಾಟಲಿಗಳು, ಬೇಡವಾದ ಕೆಲ ಪದಾರ್ಥಗಳು, ನೋಡೋಕೆ ಅಸಹ್ಯ ಎನ್ನಿಸುವಂತೆ ಎಲ್ಲೆಂದರಲ್ಲಿ ಕಾಣ ಸಿಗುತ್ತದೆ. ಗೋಡೆಗಳ ಮೇಲೆಲ್ಲಾ ಪ್ರೇಮಿಗಳ ಕೆತ್ತನೆ ಕೆಲಸಗಳು ಬೇಸರ ತರಿಸುತ್ತವೆ. ಅನೇಕ ಸುಂದರ ಸ್ಮಾರಕಗಳನ್ನೂ ರಕ್ಷಿಸಲಾಗದ ನಾವೇ ಆರಿಸಿದ ಸರಕಾರ ಇನ್ನು ಜನರ ಸುಖಕ್ಕೆ ಶ್ರಮಿಸುವುದೇ ಎಂಬ ಗೊಂದಲ ಕಾಡುತ್ತದೆ!
ಒಂದು ಕಣ್ಣಿನಲ್ಲೇ ಪ್ರಪಂಚ ತೋರುವ |
ತಲುಪಲು ನಕಾಶೆ |
ಕೈ ಬೀಸಿ ಕರೆಯುತ್ತಿದೆ |
ಗತ ಕಾಲದ ಇತಿಹಾಸವನ್ನು ಗರ್ಭದೊಳಗೆ ಉಳಿಸಿಕೊಂಡು ನಿಂತಿದೆ |
ಒಂದು ಕಾಲದಲ್ಲಿ ಈ ಹಾದಿ ಹೇಗೆ ಇತ್ತು? |
ಕುಟುಂಬದ ಜೊತೆಯಲ್ಲಿ ಸ್ಮಾರಕದ ಮುಂದೆ |
ಕಾಲನ ದಾಳಿಗೆ? |
ಬೃಹದ್ ಬಾಗಿಲು |
ಮೊದಲಿಗೆ ನೀವು ಲೇಖನವನ್ನು ಪ್ರಸ್ತುತ ಪಡೆಸುವ ಸರಳ ಶೈಲಿ ಮತ್ತು ಆರಂಭಿಸುವ ಆ ಸುಂದರತೆ ನನಗೆ ಮೊದಲ ಪಾಠ. ಎಲ್ಲೋ ಸವಕಲಾಗದ ಅಪ್ಪಟ ಮಾಹಿತಿಪೂರ್ಣ ಬರಹಗಳು ನಿಮ್ಮ ಗಿರಿಮೆ.
ReplyDeleteಇಲ್ಲಿ ಪ್ರಸ್ತುತ ಪಡೆಸಿರುವ ಶೆಟ್ಟಿಹಳ್ಳಿ ಚರ್ಚು - ಸ್ಮಾರಕಗಳ ಕುರಿತಾದ ನಮ್ಮ ಅವಜ್ಞತೆಗೆ ಉದಾಹರಣೆ. ಪ್ರಾಮುಖ್ಯತೆಯನ್ನು ಸರ್ಕಾರಗಳೂ ಅರಿಯುವುದಿಲ್ಲ ಮತ್ತು ಸಾರ್ವಜನಿಕರಿಗೂ ಅದು ಅನೈತ ಚಟುವಟಿಕೆಗಳಿಗೆ 'ಬಾಡಿಗೆ ಇಲ್ಲದ' ತಾಣ.
ಕರ್ನಾಟಕವನ್ನು ನೀವು ನೋಡುವ ರೀತಿ, ನಮಗೂ ಸಿದ್ಧಿಸಲಿ ಎಂದು ಹರೆಸಿರಿ...
ನಿಮಗೆ ಮೆಚ್ಚುಗೆಯಾಗಿದೆ ಎಂದರೆ ಅರ್ಧ ಯಶಸ್ಸು ಸಿಕ್ಕಂತೆ ಎನಗೆ. ಊರಿಗೆ ದಾರಿ ಆದರೆ ಎಡವಟ್ಟಂಗೆ ಒಂದು ದಾರಿ ಅನ್ನುವ ಹಾಗೆ ಆ ಕ್ಷಣದಲ್ಲಿ ಮನಸ್ಸಿಗೆ ಬಂದದ್ದು ಮುನ್ನುಡಿಯಾಗಿ ಬಿಡುತ್ತದೆ. ಅಪೂರ್ವ ಕಲಾಕೃತಿಗಳಾದ ಹೊಯ್ಸಳರ ಶಿಲ್ಪಕಲೆಗಳು, ವಿಜಯನಗರದ ಹಂಪಿ ಇವೆಲ್ಲವೂ ಕಾಲನ ದಾಳಿಗೆ ತುತ್ತಾಗಿ ಹಾಳಾಗಿವೆ ನಿಜ ಆದರೆ ಅದನ್ನು ಅಂದಗೆಡಿಸುವಲ್ಲಿ ಜನರ ಪಾಲೂ ಸಾಕಷ್ಟಿದೆ. ಹಾಕಿದ ರಸ್ತೆಗೆ ಇಪ್ಪತ್ತು ಸಾರಿ ಟಾರ್ ಹಾಕುವ ಬುದ್ದಿವಂತ ಸರ್ಕಾರ ಇತಿಹಾಸ ಸಾರುವ ಸ್ಮಾರಕಗಳನ್ನು ನೋಡದೆ ಇರುವುದು ಖೇದವೆನಿಸುತ್ತದೆ. ಸುಂದರ ಪ್ರತಿಕ್ರಿಯೆ ಬದರಿ ಸರ್. ಒಮ್ಮೆ ನಿಮ್ಮನ್ನು ನಮ್ಮ ಸಂಗಡ ಕರೆದೊಯ್ಯುವೆ ಇದು ಭೀಷ್ಮ ಶಪಥ!!!
Deleteಬಹಳ ಹಿಂದೆ ಅಲ್ಲಿ ಸೇತುವ ಮೇಲಿಂದ ಇದನ್ನು ನೋಡಿದ್ದೇ. ಆಗ ಇದು ನೀರಿನಿಂದ ಆವರಿಸಿತ್ತು.. ಮತ್ತೆ ಅಲ್ಲಿಗೆ ಹೋಗಲು ಸಾಧ್ಯವಾಗಿಲ್ಲ.... ಅಂದ ಹಾಗೆ ಈಶ್ತೋ ಸ್ಮಾರಕಗಳು ಈ ರೀತಿ ಹಾಳು ಬಿದ್ದು ಹೋಗುತ್ತಿವೆ .... ಕೆಲವು ಸಾರ್ವಜನಿಕರ ಕೆಟ್ಟ ಕೃತ್ಯಗಳಿಂದ ಕೂಡ... ಅಲ್ಲಿನ ಗೋಡೆಗಳನ್ನು ನೋಡಿದಾಗಲೇ ತಿಳಿಯುತ್ತದೆ ..
ReplyDeleteಅಷ್ಟೆತ್ತರಕ್ಕೂ ಹೋಗಿ ಗೀಚಿ ಬಂದಿರುವ ಆ ಕಿಡಿಗೇಡಿಗಳ ಪರಿಶ್ರಮ ಅವರ ಇನ್ನಿತರ ಉತ್ತಮ ಕಾರ್ಯಗಳಲ್ಲಿ ತೋರಿದ್ದರೆ ಅವರು ಜೀವನದಲ್ಲೂ ಮುಂದುವರಿಯುತ್ತಿದ್ದರೆನೋ. ನೀರು ತುಂಬಿಕೊಂಡ ಚರ್ಚನ್ನು ಒಮ್ಮೆ ನೋಡಬೇಕು ಎನ್ನುವ ಹಂಬಲ ಇದೆ. ವರುಣ ದೇವ ಕೃಪೆ ಮಾಡಬೇಕು. ಸುಂದರ ಪ್ರತಿಕ್ರಿಯೆ ಗಿರಿ. ಧನ್ಯವಾದಗಳು
Deleteಅಬ್ಬಬ್ಬಾ! ಅದೆಷ್ಟು ಚೆನ್ನಾಗಿ ಕನ್ನಡ ಸಿನೆಮಾ ಮತ್ತು ಹಾಡುಗಳನ್ನ ಪ್ರಾಸಂಗಿಕವಾಗಿ
ReplyDeleteಉದಾಹರಿಸ್ತಿರಿ. ನಮ್ಮ ಕೋಟೆ ಕೊತ್ತಲಗಳು, ಸ್ಮಾರಕಗಳು ಇರುವುದೇ ತಮ್ಮ 'ಮಜಾ'ಕ್ಕಾಗಿ
ಅಂತ ತಿಳಿದುಕೊಡ ಒಂದು ದೊಡ್ಡ ಗುಂಪಿದೆ ಬಿಡಿ. ಲೇಖನ ಚೆನ್ನಾಗಿದೆ.
ಚಿತ್ರಗಳು ಮನಸ್ಸಿನ ಮೇಲೆ ಅಳಿಸದ ಛಾಪನ್ನು ಮೂಡಿಸಿದೆ ಸಹೋದರಿ.. ಹಾಗಾಗಿ ಏನೇ ಯೋಚಿಸಿದರೂ ಅಲ್ಲಿಗೆ ಒಂದು ಸಿನಿಮಾ ಸನ್ನಿವೇಶ, ಹಾಡು ಅರಿವಿಲ್ಲದೆ ಮನದ ಹಾಳೆಯ ಮೇಲೆ ಮೂಡಿಬಿಡುತ್ತದೆ. ಸುಂದರ ಅನಿಸಿಕೆಗೆ ಧನ್ಯವಾದಗಳು ಸ್ವರ್ಣ.
Deleteನಿಮ್ಮ ನಿರೂಪಣಾ ಶೈಲಿಗೆ ಶರಣು ಶರಣು..
ReplyDeleteಒಂದೊಳ್ಳೆ ಸ್ಥಳದ ಮಾಹಿತಿಯ ಜೊತೆಗೆ ಅವನತಿಯ ಕಡೆಗೆ ಸಾಗುತ್ತಿರುವ ಸ್ಮಾರಕಗಳ ಕುರಿತು ಚಿಂತೆಗೆ ಹಚ್ಚುವ ಲೇಖನ ಅಣ್ಣಯ್ಯ..
ಹಹಹ... ತಲೆಗೆ ಬಂದಿದ್ದು ಬೆರಳಿಗೆ ಬರುತ್ತೆ ಅದರಲ್ಲೇನು ವಿಶೇಷವಿಲ್ಲ. ನಿನ್ನ ಕಾಮೆಂಟ್ಗಳು ಸೂಪರ್ ಇರುತ್ತೆ. ಸ್ಥಳಗಳನ್ನು ನೋಡಬೇಕು, ಮಗಳಿಗೆ ಪರಿಚಯಿಸಬೇಕು ಇದು ನನ್ನ ಹಂಬಲ. ಧನ್ಯವಾದಗಳು ಪಿ.ಎಸ್!
Deleteexplanation and photos both are good..
ReplyDeleteThank you madam :-)
Deleteಓಹ್...ಅದೆಷ್ಟೋ ಸುಂದರ ಕಟ್ಟಡಗಳು ನಮಗರಿವಿಲ್ಲದಂತೆ ಅವಸಾನದಂಚಿಗೆ ತಲುಪುತ್ತಿದೆ...
ReplyDeleteಒಳ್ಳೆಯ ಲೇಖನ...ಸ್ವಲ್ಪ ಗಮನ ಹರಿಸಿದರೆ ಅದನ್ನೊಂದು ವಿಶಿಷ್ಟ ಪ್ರವಾಸಿ ತಾಣವನ್ನಾಗಿಸಬಹುದೇನೋ....
ವಂದನೆಗಳು....
ಧನ್ಯವಾದಗಳು ಚಿನ್ಮಯ
Delete