ದೇವಲೋಕದಲ್ಲಿ ಕಿಕ್ಕಿರಿದ ಸುರ ಸಂದಣಿ..ಎತ್ತ ನೋಡಿದರು ಗುಜು ಗುಜು ಸದ್ದು...
ಇಂದ್ರ ...."ದೇವಾನುದೇವತೆಗಳೇ..ಏನಿದು ಸದ್ದು..ಯಾಕೆ ಈ ತಲ್ಲಣ...ಯಾಕೆ ಏನಾಯಿತು...?"
"ಇಂದ್ರ...ನಿನಗೆ ತಿಳಿಯದ್ದು ಏನಿದೆ..ನಾವೆಲ್ಲರೂ ತಲ್ಲಣಗೊಂಡಿರುವುದು "ಬಜ್ಜಿಗರು" ಗುಂಪು ಮತ್ತೆ ಹೊಸ ಪ್ರವಾಸಕ್ಕೆ ಹೊರಟಿದೆ..ಅವರು ಹೊರಟರೆಂದರೆ..ವಿಷಯಕ್ಕೆ ಕೊರತೆಯೇ ಇಲ್ಲ..ಎಲ್ಲಾ ಲೋಕಗಳ ವಿಷಯ, ಅಣಕು, ಚರ್ಚೆ ಎಲ್ಲವು ನಡೆಯುತ್ತೆ..ಎಲ್ಲಿ ನಮ್ಮ ಬಂಡವಾಳವನ್ನೆಲ್ಲ ಒಬ್ಬಟ್ಟಿನ ಹೂರಣದ ಹಾಗೆ ಹೊರಗೆ ತೆಗೆಯುತ್ತಾರೆ ಎನ್ನುವ ಭಯ ಕಾಡುತ್ತಿದೆ...!!!"
"ಓಹ್ ಹಾಗೋ..ಇರಲಿ ಬಿಡಿ..ನಮ್ಮ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆ ಮುಂತಾದ ಅಪ್ಸರೆಯರು ಇದ್ದಾರೆ ಬಿಡಿ.."
"ಇಲ್ಲ...ಇಂದ್ರ ಅವರೆಲ್ಲ ಸರಸ್ವತಿ ಪುತ್ರರು..ವಿದ್ಯೆ, ಬುದ್ದಿ, ಇವೆರಡಕ್ಕೆ ಅವರು ಬೆರಗಾಗೋದು..ಬೇರೆಯಾವುದು ನಡೆಯೋಲ್ಲ.."
"ಇರಲಿ..ಇವತ್ತು ನೋಡೋಣ..ಮುಂಜಾಗೃತೆಗೆ ನಾನು ವಾಯುವನ್ನು ಕಲಿಸಿರುತ್ತೇನೆ..ಅವನು ತಂಪಾಗಿ ಗಾಳಿ ಬೀಸುತ್ತ..ಅವರ ಪ್ರವಾಸ ಪ್ರಯಾಸವಾಗದಂತೆ ನೋಡಿಕೊಳ್ಳುತ್ತಾನೆ..ಅವರ ತಲೆ ಬಿಸಿ ಆಗದಿದ್ದರೆ..ನಮಗೆ ತಲೆ ಬಿಸಿ ಮಾಡೋಲ್ಲ.....ಸರಿ ಎಲ್ಲರು ಅವರ ಪ್ರವಾಸವನ್ನು ನೋಡಿರಿ...ಹಾಗೂ ನಡೆಯುವ ವಿದ್ಯಮಾನವನ್ನು ನೋಡಿ ನನಗೆ ತಿಳಿಸಿ"
"ನೀವೇನ ಶ್ರೀಕಾಂತ್ ಮಂಜುನಾಥ್"
"ಹೌದು...ನಮಸ್ಕಾರ..ನೀವು ಶಿವೂ ಅಲ್ವ..."
"ಹೌದು..ಬನ್ನಿ ಗಾಡಿ ಅಲ್ಲಿ ನಿಂತಿದೆ..."
ಅಪಾರ ಪ್ರತಿಭೆಯ ಹಾಗೂ ವಾಕ್ ಚಾತುರ್ಯದ ಶಿವೂ ವಾಹನದ ಬಳಿ ನಮ್ಮನ್ನು ಕರೆದೊಯ್ದರು
ಒಳಗೆ ಬಂದಾಗ ಒಂದು ಸುಂದರ ನವ ಜೋಡಿ ಶಿವ ಪ್ರಕಾಶ್ (ಚಿಕ್ಕ ಸುಂದರ ಗಿರಿಜಾ ಮೀಸೆ ಹಾಗೂ ಮೋಹಕ ನಗು )..ಮತ್ತು ಅವರ "ಮನದನ್ನೆ" ನಂದಿನಿ ನಸುನಗುತ್ತ ಸ್ವಾಗತಿಸಿದರು.
ಇಲ್ಲಿಂದ ಸೀದಾ ನಿರ್ಮಲ ಸ್ಟೋರ್'ಸ್ ಹತ್ತಿರ ನಮ್ಮ ಉತ್ತರ ಕರ್ನಾಟಕದ ಬಹುಮುಖ ಪ್ರತಿಭೆ ಉಮೇಶ್ ದೇಸಾಯಿ ಹಾಗು ಅವರ ಕುಟುಂಬ ಚೈತನ್ಯ ರಥವನ್ನ ಏರಿದರು ..ಅಲ್ಲಿಂದ ಸೀದಾ ಬನಶಂಕರಿಗೆ ದೌಡಾಯಿಸಿತು ...ನಮ್ಮ ಬಸ್..
ಅಲ್ಲಿ "ಪ್ರವಾಸದ ಉತ್ಸಾಹದ ಟಾನಿಕ್" ಪ್ರಕಾಶಣ್ಣ ಮತ್ತು ಆಶಾ ಅತ್ತಿಗೆ, ಸುಂದರ ಮಾಸ್ತರು ನವೀನ, "ಭೀಮ ಹಾಗೂ ನಿಶ್ಯಬ್ಧ ಹಾಡಿನ ಕಲಾವಿದ" ಮಹೇಶ್, "ಸುಂದರ ಅವಳಿಗಳು" "೬- ಪ್ಯಾಕೆಟ್ ಸುದೇಶ್" ಹಾಗು "ಒಳ್ಳೆಯ ಬಳ್ಳಿ" ಸುಲತಾ, ಚೆಲುವ ಬ್ರಹ್ಮಚಾರಿ ಗಿರೀಶ್, "ಉಟ್ ಜಾ ಬೇಟಾ ನಹಿ ತೋ ಜ್ಯೋತಿ ಕ್ಯಾಮೆರ ಲೆಖೆ ಆಯೆಗಿ" ಖ್ಯಾತಿಯ ಜ್ಯೋತಿ ಮತ್ತು ಕುಟುಂಬ, ಗಡಿನಾಡಿನ ನಗುಮೊಗ ಹಾಗೂ ಬಹುಮುಖ ಪ್ರತಿಭೆಯ ಆಜಾದ್...ವಿಕಿಪೀಡಿಯದ ದೈತ್ಯ ಪ್ರತಿಭೆ ಶಿವೂ ಹಾಗು ಕುಟುಂಬ ...ಇವರೆಲ್ಲರೂ ನಗುನಗುತ ಎಲ್ಲರೂ ಹಲ್ಲು ಬೀರುವಂತೆ ಮಾಡಿ ನಗೆ ಬುಗ್ಗೆಯ ಕಾರಂಜಿಯನ್ನು "ಆನ್" ಮಾಡಿದರು...
ದೇವಗೌಡ ಪೆಟ್ರೋಲ್ ಬಂಕ್ ಹತ್ತಿರ ಮುಂಜಾನೆಯಲ್ಲೇ ಅಂಗಳದಲ್ಲಿ ರಂಗವಲ್ಲಿ ಹಾಕುವ ಸಂಧ್ಯಾ ಬಸ್ಸಿನ ಅಂಗಳಕ್ಕೆ ದಾಂಗುಡಿ ಇಟ್ಟರು...
ಇನ್ನೇನು ಮೈಸೂರು ಹೆದ್ದಾರಿಗೆ ವಾಹನ ಬಂತು..ಅಷ್ಟರಲ್ಲೇ ಬೆಳದಿಂಗಳ ನಗೆ ಚೆಲ್ಲುವ ರೂಪ ಮತ್ತು ಕುಟುಂಬ ಕೈ ಬೀಸಿದಾಗ ನಿಂತ ಬಸ್ಸಿನಲ್ಲಿ ಆಸೀನರಾಗುತ್ತಾರೆ...
ಅರೆ ಎಲ್ಲ ಬಂದರು..ಆದ್ರೆ ಎಲ್ಲರನ್ನು "ಆಡಿಸಿ ನೋಡು...ಕುಣಿಸಿ ನೋಡು...ದಣಿವು ಬಾರದು" ಎಂದು , ನಗಿಸಿ, ಕುಣಿಸಿ, ಮನ ತಣಿಸುವ ಗುರು ಕೆಂಗೇರಿ ಬಳಿ ತಮ್ಮ ಸಲಕರಣೆಗಳೊಂದಿಗೆ ಬರುತ್ತಾರೆ ಅನ್ನುವ ವಿಷಯ ತಿಳಿದು ಎಲ್ಲರ ಉಭಯ ಕುಶೋಲೋಪರಿ ಸಾಂಪ್ರತ ಅವರು ಬಂದ ಮೇಲೆಯೇ ಎಂದು ಒಮ್ಮತದ ನಿರ್ಧಾರ ಮಾಡಿದೇವು..
ಅಬ್ಬ...ಈಗ ಶುರು...ನಗೆ ಚಟಾಕಿ ಅಲ್ಲಲ್ಲ ನಗೆ ಬಾಂಬಿನ ಸರಮಾಲೆ...
ಒಬ್ಬರಾದ ಮೇಲೆ ಒಬ್ಬರು....ಆರತಕ್ಷತೆಯಲ್ಲಿ ನಿಂತ ವಧು-ವರರಂತೆ..ತಮ್ಮ ಬಗ್ಗೆ ಹೇಳಲು ಸಂಕೋಚ ಪಡುತ್ತ..ಹಿತ ಮಿತವಾಗಿ ಅವರ ಪರಿಚಯ ಮಾಡಿಕೊಂಡರು...
ಮಹೇಶ್ .."ಬಿಡದಿ ತಟ್ಟೆ ಇಡ್ಲಿ..ತಟ್ಟೆ ಇಡ್ಲಿ.ಬಂತು...ಹುರ್ರಾ "
ಎಲ್ಲರರೂ ಒಂದೆರಡು ತಟ್ಟೆ ಇಡ್ಲಿ ಹೊಡೆದ ಮೇಲೆ....ಮತ್ತೆ ಪರಿಚಯದ ಕಾರ್ಯಕ್ರಮ ಚಾಲನೆ ಶುರುವಾಯಿತು...
ಮದ್ದೂರ್ ತಿಫ್ಫ್ಯಾನಿಸ್ ಬರುವ ಹೊತ್ತಿಗೆ ಎಲ್ಲರ ಹೊಟ್ಟೆ, ತಲೆ, ಹಾಗು ಮನಸು ತುಂಬಿತು..ಎಲ್ಲರು ಗುಟುಕು ಕಾಫಿಯನ್ನು ಹೀರುತ್ತಾ ಪರಿಚಯವನ್ನು ಚಿರಪರಿಚಯವನ್ನಾಗಿ ಮಾರ್ಪಾಡಿಸಿದರು...
ಅಂತ್ಯಾಕ್ಷರಿ ಹೊಸ ಮುಖಗಳನ್ನು ಹಾಗೂ ಹಳೆ ಮುಖಗಳನ್ನು ಜೊತೆಮಾಡಿತು...ಬತ್ತಳಿಕೆಯಲ್ಲಿ ಇದ್ದ ಹಾಡುಗಳು ಹೊರ ಬರಲು ಶುರುವಾಯಿತು..
ಯಾಕೋ ಮುಖವನ್ನು ಹೊರಗೆ ಹಾಕಿ ಇಣುಕಿ ನೋಡಿದಾಗ..ಪ್ರಕಾಶಣ್ಣ "ಬಾಬು ರಾಯನ ಕೊಪ್ಪಲು ಬಂತು...ಬಾಲಣ್ಣ ಇಲ್ಲೇ ತಮ್ಮ ತುಂಟ ಕ್ಯಾಮೆರಾದ ಜೊತೆ ನಿಂತಿರುತ್ತಾರೆ..."
"ನಗುಮುಖದ ನಡೆದಾಡುವ ಇತಿಹಾಸ ಕೈಪಿಡಿ" ಬಾಲು ಸರ್.. ಅವರಷ್ಟೇ ನಗುಮೊಗದ ಕ್ಯಾಮೆರ ಜೊತೆಗೆ ಒಳಗೆ ಬಂದರು..ಅವರ ಬಗ್ಗೆ ಪ್ರಕಾಶಣ್ಣ ಚಿಕ್ಕದಾದ ಚೊಕ್ಕದಾದ ಮಾಹಿತಿ ಕೊಟ್ಟು..ಅವರ ಹಿರಿಮೆ ಹೇಳಿದರು..
ಬಾಲು ಸರ್..ಇತಿಹಾಸ ಪುಟವನ್ನು ಚಿಕ್ಕದಾಗಿ ಮಡಚುತ್ತ...ಕರಿ ಬೆಟ್ಟದ ಹಾಗು ಅದರ ಸುತ್ತ ಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೇಳುತ್ತಾ ಇದ್ದಂತೆ....ವಾಹನದಲ್ಲಿದ್ದ ಎಲ್ಲರು ಮಂತ್ರ ಮುಗ್ಧರಾಗಿ ಅವರ ಮಾತುಗಳನ್ನ ಕೇಳಿಸಿಕೊಳ್ಳುತ್ತಾ ಮನಸಾರೆ ಅವರಿಗೆ ವಂದಿಸಿದೆವು..
ಅಗೋ ಅಲ್ಲಿ "ಸತೀಶಣ್ಣ..." ಕ್ಯಾಮೆರ ಕೈಯಲ್ಲಿ ಇಲ್ಲದಿದ್ದಾಗ ಜ್ಯೋತಿ ಜೋರಾಗಿ ಕೂಗಿದರು..."ಶತಮಾನದ ವೀರ ಕನ್ನಡಿಗ" ಸತೀಶ್ ಎಲ್ಲರಿಗೂ ಕೈ ಕುಲುಕಿ...ದೇವಸ್ಥಾನಕ್ಕೆ ನಮ್ಮನೆಲ್ಲ ಬಾಲು ಸರ್ ಜೊತೆ ಕರೆದೊಯ್ದರು...
ವೆಂಕಟರಮಣ ಸುಂದರ ಮೂರ್ತಿ ನಮ್ಮನ್ನೆಲ್ಲ ನಗುಮೊಗದೊಂದಿಗೆ ಹರಸಿತು....ಮದುವೆಯಾದ ಅನೇಕರು ತಮ್ಮ ಸಹ-ಧರ್ಮಿಣಿಯ ಜೊತೆ ಬಂದಿದ್ದರಿಂದ ದೇವರ ಮಂಗಾಳಾರತೀಯೇ ಮೊದಲನೆಯದಾಗಿದ್ದ ಕಾರಣ ಖುಷಿಯಿಂದ ತಮ್ಮ ತಮ್ಮ ಹರಕೆಗಳನ್ನು ಸಲ್ಲಿಸಿ ಹೊರಗೆ ಬಂದಾಗ...ಭೋಜನ ವಿರಾಮದ ಫಲಕ ಕೂಗುತಿತ್ತು...
ಸುಖವಾದ ಭೋಜನ..ರುಚಿ ರುಚಿಯಾದ ಅಡುಗೆ..."ಇಲ್ಲೇ ಒಂದು ಮರದ ಕೆಳಗೆ ಮಲಗಿ ಬಿಟ್ಟರೆ" ನವೀನ-ಗಿರೀಶರ ಮಾತು ಇನ್ನು ಮುಗಿದಿರಲಿಲ್ಲ...
ಅಷ್ಟರಲ್ಲೇ ಪ್ರಕಾಶಣ್ಣ "ಯಾರಪ್ಪ ಅದು...ಜಯ ವಿಜಯ ಇರುವಾಗ...ಅದು ಸಾಧ್ಯವಿಲ್ಲ...ಏನಪ್ಪಾ ಮಹೇಶಪ್ಪ...?"
"ಮತ್ತೆ ಅಣ್ಣ...ಸಾಧ್ಯವೇ ಇಲ್ಲ..."
ಅರೆ ಯಾರದು....ಚಂಡಾಮಠದ ಸ್ವಾಮೀಜಿಗಳು ಸಿದ್ಧವಾದರು .ರಂಗೀಲದ ಧಿರಿಸಿನಲ್ಲಿ...ಕಾಗೆಯನ್ನು ನಾಚಿಸುವಷ್ಟು ಕಪ್ಪಾದ ಕನ್ನಡಕ..ಯಾವುದೋ ದೇಶದ ದ್ವಜ ನೆನಪಿಗೆ ತರಿಸುವ ತಲೆಗೆ ರುಮಾಲು, "ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ" ಅಣ್ಣಾವ್ರು ಹೇಳಿದ ರೀತಿಯಲ್ಲೇ ಇದ್ದ ಮಲ್ಲಿಗೆ ಹೂವಿನ ಎಸಳುಗಳು ಎರಡು ಕಿವಿಯಲ್ಲಿ ರಾರಾಜಿಸುತಿದ್ದವು..."ಗಿರಿ ನವಿಲು ಎಲ್ಲೋ...ಅದರ ಗರಿ ಎಲ್ಲೋ" ಅಂತ ಹುಡುಕಿ ಹುಡುಕಿ ಕಡೆಗೆ ನವಿಲಿನ ಗರಿ ಸಿಗದೇ ಗಿಡದ ಎಲೆಗಳನ್ನೇ ಸಿಕ್ಕಿಸಿಕೊಂಡು...ತಮ್ಮ ಭವಿಷ್ಯವೇ ಒಂದು ಎರಡು ಎಣಿಸಲು ಸಿದ್ದವಾಗಿದ್ದರೂ...ಇತರರಿಗೆ ಭವಿಷ್ಯ ಪೇಳಲು ಸಿದ್ದವಾಗಿದ್ದರು ನಮ್ಮ ಅಭಿನವ ಚಂಡಾನಂದ ಸ್ವಾಮೀಜಿ...!!!!
ತರಲೆ ಪ್ರಶ್ನೆಗಳು, ತರಲೆ ಉತ್ತರಗಳು, ಯಾವ ಪ್ರಶ್ನೆಗೂ ಬರಿ ೩೨ ಹಲ್ಲು ತೋರಿಸದೆ ಸಮರ್ಪಕ, ಸಮಂಜಸ, ಹಾಸ್ಯ ಮಿಶ್ರಿತ ಉತ್ತರಗಳನ್ನು ಬಿತ್ತರಿಸಿ, ಪ್ರತಿಯೊಂದು ಉತ್ತರವನ್ನು ವ್ಯಾಕರಣದ ಸಂಧಿಯಂತೆ ಬಿಡಿಸಿ ಬಿಡಿಸಿ ಅರ್ಥೈಸಿದ ಜೆ.ಜೆ. (ಜ್ಯೋತಿಷ್ಯ ಜಾಕಿ ) ಬಾಲು ಸರ್ ಅವರಿಗೆ ನಮ್ಮ ಅಭಿನಂದನೆಗಳು
ಶಿವೂ ತಮ್ಮ ಬತ್ತಳಿಕೆಯಿಂದ ಒಂದು ಅಮೋಘ ಆಟ ತೆಗೆದರು...ಮದುವೇ ಎಲ್ಲರ ಜೀವನದಲ್ಲಿ ಅವರವರ ಹಣೆಯಲ್ಲಿ ಬರೆದಿರುತ್ತದೆ...ಆದ್ರೆ ಬರೆದ ಹಣೆಯನ್ನೇ ಅಸ್ತ್ರವನ್ನಾಗಿಸಿಕೊಂಡು ಜೀವನದ ಚಂಡಿನಲ್ಲಿ ಪ್ರೀತಿಯ ಆಸರೆಯಲ್ಲಿ "ನಲಿಯುತ ಹೃದಯ ಹಾಡನು ಹಾಡಿದೆ.." ಅಂತ ಹೇಳಿಸುವ ಒಂದು ಸುಂದರ ಆಟವನ್ನು ಆಡಿಸಿದರು...ಶಿವೂ ನಿಮ್ಮ ಕ್ರಿಯಾ ಶೀಲತೆಗೆ ಒಂದು ಸಲ್ಯೂಟ್...ಅದರ ಕೆಲವು ಚಿತ್ರಗಳು...ನಿಮಗಾಗಿ....
"ಗುರು ಬಂದರು..ಹೊಸ ಆಟ ತಂದರು..ಆಟದಿಂದಲೇ ತಂಡದ ಸ್ವಾಸ್ಥ್ಯ ಎಂದರು..." ಶಾಂತಿ ಇಂದಲೇ ಕ್ರಾಂತಿಕಾರಕ ಕೆಲಸ ಮಾಡಬಹುದು ಎಂದು ಸೂಚ್ಯವಾಗಿ ತೋರಿಸಿದ ಆಟದಲ್ಲಿ ಎಲ್ಲರೂ ವಿಜಯಿಗಳೇ...ಗುರು ನಿಮಗೆ ಹಾಗೂ ನಿಮ್ಮ ತಂಡಕ್ಕೆ ನಮನಗಳು...
"ಸರ್...ಸರ್...ಕಾಫೀ, ಪಕೋಡ...."...ಒಹ್..ಬನ್ನಿ..ಆಗಲೇ ತುಂಬಾ ಹೊತ್ತಾಗಿದೆ...ಹೊಟ್ಟೆಗೆ ಬಿಸಿ ಬಿಸಿ ಕಾಫಿ..ಹಾಗೂ ಪಕೋಡ ಇಳಿಸೋಣ ಅಂದಿದ್ದೆ...ಒಬ್ಬೊಬ್ಬರಾಗಿ ಬಿಸಿ ಬಿಸಿ ಬ್ರೇಕ್ ನ ಲಾಭ ಪಡೆದು..ಎಲ್ಲರು ಉದರಕ್ಕೆ ಒಂದು ಸಣ್ಣ ಹೊದ್ದಿಕೆಯನ್ನ ಹೊದೆಸಿದರು...
ಯಾಕೋ ಸುಮ್ಮನೆ ಹಾಗೆ ಕೈ ಗಡಿಯಾರ ನೋಡಿದಾಗ ಚಿಕ್ಕ ಮುಳ್ಳು ಪಾಂಡವರ ಸಂಖ್ಯೆಯನ್ನ ತೋರಿಸುತಿತ್ತು..ಎಲ್ಲರಿಗೂ ಮನೆ ಸೇರುವ ತವಕ....ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಬಾಣಲೆಯಲ್ಲಿ ಇರುವ ಬೋಂಡದ ಹಾಗೆ ಒಬ್ಬರ ಒಬ್ಬರ ಮೇಲೆ ಬೀಳಲು ತುದಿಗಾಲಲ್ಲಿ ನಿಂತಿರುವಂತೆ ವಾಹನ ದಟ್ಟಣೆ ಇರುವುದರಿಂದ ಬೇಗನೆ ಹೊರಡುವ ತಯಾರಿ ಶುರುವಾಯಿತು..
ಕಡೆಯ ಸಮಾರೋಪ ಸಮಾರಂಭ..ಪ್ರಕಾಶಣ್ಣ..ಬಾಲು ಸರ್, ಆಜಾದು ಸರ್ ಶುರು ಮಾಡಿದರು..ಎಲ್ಲರಿಗೂ ಒಂದು ತೆರನಾದ ಉಡುಗೊರೆಯ ಪೊಟ್ಟಣ ಕಾದಿತ್ತು..
ತಮಾಷೆ, ನಗು, ಕೀಟಲೆ, ಕಿಚಾಯಿಸುವ ಪರಂಪರೆ ಇನ್ನೇನು ಮುಗಿಯುವ ಹಂತಕ್ಕೆ ಬಂದಿತ್ತು..
ಎಲ್ಲರೂ ಭಾರವಾದ ಮನಸಿನಿಂದ "ಯಾಕಪ್ಪ ಇಷ್ಟು ಬೇಗ ಈ ಪ್ರವಾಸ ಮುಗಿಯ ಹತ್ತಿತು..ಸೂರ್ಯ ಇನ್ನೊಂದೆರಡು ತಾಸು ಇದ್ದಿದ್ದರೆ ಏನು ಆಗುತಿತ್ತು ಎನ್ನುವ ಯೋಚನೆ, ಆಲೋಚನೆ..."
"ಸಾಗುವ ಕಾಲದ ಗಾಲಿಯ ಹಿಂದೆ ಸೂರ್ಯನು ಸುಮ್ಮನೆ ನಡೆದಿದ್ದ ..ಆಗು ಹೋಗುಗಳ ಪರಿವೆ ಇಲ್ಲದೆ ಆಗಸದಲ್ಲಿ ಸೂರ್ಯ ಮುಳುಗಿದ್ದ" ಅಂತ ಸೂರ್ಯ ತನ್ನ ಮನೆಕಡೆಗೆ ಹೊರಟಿದ್ದ..ಹಾಗೆಯೇ ನಮ್ಮ ಸುಂದರ ಪ್ರವಾಸವು ಕರಿ ಘಟ್ಟದಲ್ಲಿ ಕೊನೆ ಘಟ್ಟಕ್ಕೆ ಬಂದು ನಿಂತಿತ್ತು..
ಎಂತಹ ಸುಂದರ ಲೋಕ ಈ ಬಜ್ಜಿಗರದು..."ವಾಹ್ ವಾಹ್ ವೆಂಕಿಜಿ....ಜೋಡಿ ಕ್ಯಾ ಬನಾದಿ....ಬಜ್ಜಿಗರು ಗ್ರೂಪ್ ಕೋ...ಬದಾಹಿ ಹೋ ಬದಾಹಿ..ಸಬ್ ರಸಮೊಂಕಿ ಬಡಿ ಹೇ ಜಗ ಮೇ ದೋಸ್ತ್ ಕೋ ದೋಸ್ತ್ಹೊಂಸೆ ಮಿಲಾಯೀ."..ಎಂದು ಹೇಳುತ್ತಾ ವೆಂಕಟರಮಣನಿಗೆ ಒಂದು ನಮಸ್ಕಾರ ಸಲ್ಲಿಸಿದೆವು...
ದೇವೇಂದ್ರ ಸಮಾಧಾನದ ಉಸಿರು ಬಿಡುತ್ತಾ.."ಅಬ್ಬ ಎಲ್ಲೂ ನಮಗೆ ತೊಂದರೆ ಕೊಡದೆ ಸುಂದರ ಕ್ಷಣಗಳನ್ನು ಕಳೆದ ಬಜ್ಜಿಗರು ಗುಂಪಿಗೆ ನನ್ನ ಶುಭಾಶಯಗಳು...ಹೀಗೆ ಬರುತಿರಿ..ಸಂತಸದಿಂದಿರಿ...ಶುಭ ವಾರಾಂತ್ಯ...."
ಸಕತ್ ಮೇಲೆ ದೀಪಗಳು : (high -lights )
೨. ಪ್ರತಿಯೊಬ್ಬರೂ ಒಬ್ಬರಿಗೂಬ್ಬರು ಸ್ಪಂದಿಸುವಿಕೆಯ ಗುಣ
೩. ನಮ್ಮ ಪ್ರಪಂಚದಲ್ಲಿ ನಾವು ರಾಜರೆ ಆಗಿದ್ದರು..ಹೊರಗೆ ಬಂದು ನಿಂತಾಗ..ಎಲ್ಲರೊಳು ಒಬ್ಬರಾಗಿ ನಿಲ್ಲುವುದು..
೪. ಪ್ರವಾಸವನ್ನು ಪ್ರಯಾಸವಾಗದೆ ಇರುವ ನಿಟ್ಟಿನಲ್ಲಿ ಆಯೋಜಿಸಿದ ಎಲ್ಲರಿಗು ನನ್ನ
೫. ಇದು ಬಜ್ಜಿಗರ ಜೊತೆ ಮೊದಲನೆಯದು..."ಆರಂಭಗಾರ ಯಾವಾಗಲು ಇಂತಹ
ಮಮತೆಯನ್ನು ತುಂಬಿಕೊಂಡಿರಬೇಕು...." ಇಂತಹ ಮಮಕಾರದ ಮೂರ್ತಿಗಳು
ತುಂಬಿರುವ ಈ ತಂಡದ ಜೊತೆ ಇದ್ದಾಗ ಯುಗಗಳು ಕ್ಷಣದಂತೆ...." ನನ್ನ
ಮೊದಲನೆಯ ಪ್ರವಾಸ ಅನ್ನುವ ಸಂಕೋಚ..."ನಾಚಿಕೆ ಇನ್ನೇಕೆ ಅಂಜಿಕೆ ಇನ್ನೇಕೆ
ನಾನಿಲ್ಲಿ ಇರುವಾಗ" ಎಂದು ಹೇಳುತ್ತಾ ದೃಷ್ಟಾಂತ ಪಡಿಸಿದವರು ಪ್ರಕಾಶಣ್ಣ
ಹಾಗು ತಂಡ.