Monday, August 29, 2022

ಏನ್ ಫ್ರೆಂಡ್ಸಪ್ಪಾ ನೀವು...

ಏನ್ ಫ್ರೆಂಡ್ಸಪ್ಪಾ ನೀವು... 

ಸುತ್ತಲೂ ದನಿ ಬಂದತ್ತ ತಿರುಗಿದೆ.. ಸಣ್ಣಗಿನ, ತಣ್ಣನೆಯ ದನಿಯ ಯಜಮಾನರು ನನ್ನ ಕಡೆಯೇ ಬರುತ್ತಿದ್ದರು.. 

ಶ್ರೀಕಾಂತ ಪ್ಲಾನ್ ಪ್ಲಾನ್ ಪ್ಲಾನ್.. ಇನ್ನೂ ಪ್ಲಾನ್ ಮಾಡ್ತಾನೆ ಇದ್ದೀರಾ.. 

ಹೌದು ಸರ್..  ಬೆಂಗಳೂರಿಗೆ ಮರಳಿ ಬರುವ ತನಕ ನಮ್ಮ ಪ್ಲಾನ್ ಬದಲಾವಣೆ ನೆಡೆಯುತ್ತಲೇ ಇರುತ್ತದೆ.. 


ಸರಿ ಈಗ ಏನಪ್ಪಾ ನಿಮ್ಮ ಪ್ಲಾನ್.. ಹೇಳಿ..  ಅದನ್ನು ನಾ ಸರಿ ಪಡಿಸುತ್ತೇನೆ.. 

ಸರ್.. ಮೊದಲು ಕುಕ್ಕೆ ಸುಬ್ರಮಣ್ಯ.. ಧರ್ಮಸ್ಥಳ.. ಇನ್ನೂ ಹೇಳುತ್ತಲೇ ಇದ್ದೆ... ನನ್ನ ಮಾತನ್ನು ತಡೆದು.. ಮೊದಲು  ಬೆಂಗಳೂರಿನಿಂದ ಹೊರಡುವ ಬಗ್ಗೆ ಹೇಳಪ್ಪ.. 

ಆಗ ಶುರುವಾಯಿತು ನಮ್ಮ ಪಯಣದ ಕತೆ.. ನೋಡಿ ಈ  ಕೆಳಗಿನ ಪ್ರವಾಸ ಕಥಾನಕ ನಮ್ಮ  ಗುಂಪಿನ ಬಾಸ್ ಶಶಿಯ ಬಾಸ್ ಹೇಳಿದಂತೆ ಅಚ್ಚುಕಟ್ಟಾಗಿ  ನೆಡೆಯಿತು.. 

ಶ್ರೀಕಾಂತಾ ನಾನು ಪ್ಲಾನ್ ಹೇಳುತ್ತೇನೆ  ಹಾಗೆ ಮಾಡಿ.. ಅಂತ ನಾನು ಅವರಿಗೆ ಹೇಳಿದ ಪ್ರವಾಸದ  ಅಂಶಗಳನ್ನು ಹಿಡಿದು ಅವರೇ ಒಂದು ಪ್ಲಾನ್ ಮಾಡಿ ಅದರಂತೆ ಅಶರೀರವಾಣಿಯಾಗಿ ಇಡೀ ಪ್ರವಾಸವನ್ನು ನೆಡೆಸಿಕೊಟ್ಟರು. 

********

ಮೊಟ್ಟೆ ಮೊದಲು  ಕೋಳಿ ಮೊದಲು ಅನ್ನುವ ಹಾಗೆ ... ಯಾರನ್ನು ಮೊದಲು ಪಿಕ್ ಅಪ್ ಮಾಡಬೇಕು ಅಂತ  ಸಾಕಷ್ಟು ಚರ್ಚೆಯಾಗಿ ಕಡೆಗೆ .. ಎಲ್ಲರೂ ವೆಂಕಿ ಮನೆಗೆ ಹೋಗಿ ಅಲ್ಲಿಂದ ಹೊರಡೋದು ಆಂತ ತೀರ್ಮಾನವಾಯಿತು.. 

ಬೆಂಗಳೂರಿನ ಒಂದೊಂದು ಮೂಲೆಯಿಂದ ಒಬ್ಬೊಬ್ಬರು ಬಂದು.. ಅದೂ ಸಮಯಕ್ಕೆ ಸರಿಯಾಗಿ.. ಅದೇ ಅಚ್ಚರಿಯ ವಿಚಾರ.. ಆದರೆ ಅದಕ್ಕೆ ಹಿನ್ನೆಲೆ ಕಾರಣ.. ಶಶಿಯ ಕ್ಯಾಬ್ ಕೈಕೊಟ್ಟು.. ಇನ್ನೊಂದು ಕ್ಯಾಬ್ ಹಿಡಿಯುವ ಸಮಯ ವಿಳಂಬವಾಗಿ... ಎಲ್ಲರಿಗೂ ಒಂದಷ್ಟು ಹೆಚ್ಚಿನ ಸಮಯ ಸಿಕ್ಕಿತು... ಆದರೂ ಎಲ್ಲರೂ ನಿಗದಿತ ಸಮಯಕ್ಕೆ ಬಂದಿದ್ದು .. well planned is half victory ಎನ್ನುವ ಮಾತಿನಂತೆ ಪಯಣಕ್ಕೆ ಚಾಲನೆ ಸಿಕ್ಕಿತು.. 

ನೇರ ಸ್ವಾತಿ ಹೋಟೆಲ್ ಮೊದಲ ನಿಲ್ದಾಣ.. ಹೊಟ್ಟೆ ತುಂಬಾ  ತಿಂದು.. ಅರೆ ಬರೇ ನಿದ್ದೆ ಮಾಡುತ್ತಾ ತಲುಪಿದ್ದು ಪ್ರಕೃತಿಯೇ ಹಸಿರು ಸೀರೆ ಹೊದ್ದು ಮಲಗಿರುವ ಮಂಜರಾ ಬಾದ್ ಕೋಟೆಗೆ.. 



ಪ್ರಕೃತಿಯ ರಮ್ಯಾ ತಾಣದಲ್ಲಿ ಸುಮಾರು ಸುಮಾರು ಒಂದು ಘಂಟೆಗೂ ಮಿಗಿಲಾಗಿ ಕಳೆದೆವು.. ಬೇಕಾದಷ್ಟು ಫೋಟೋಗಳು ಬಂದವು.. ಎಲ್ಲರ ಮೊಬೈಲ್.. ನನ್ನ DSLR ಹೊಟ್ಟೆಗೆ  ಆದಷ್ಟು ಫೋಟೋಗಳನ್ನು .. ಆ ಪ್ರಕೃತಿ ತಾಣದಲ್ಲಿ ನಾವೇ ಮಗುವಾಗಿ ಮೆರೆದಾಡಿದೆವು.. ಎಷ್ಟು ಫೋಟೋ ತೆಗೆದರೂ ತೃಪ್ತಿ ಇಲ್ಲ.. ಎಷ್ಟು ಮಾತಾಡಿದರೂ ಸಾಕಾಗುತ್ತಿಲ್ಲ.. ಸಿಕ್ಕ ಸಿಕ್ಕ ಕಡೆ ಚಿತ್ರಗಳನ್ನು ತೆಗೆದು.. ತೆಗಿಸಿಕೊಂಡು.. ಹಾದಿಯಲ್ಲಿ ಸಿಕ್ಕ ಜೋಳ, ಎಳನೀರು ಮನಸ್ಸಿಗೆ ಬಂದಷ್ಟು ಸೇವಿಸಿದ ಮೇಲೆ.. ಎಲ್ಲರ ಅರಿವಿಗೆ ಬಂದದ್ದು ಮುಂದಿನ ನೆಡೆ ಕುಕ್ಕೆಯ ಕಡೆಗೆ ಅಂತ.. 


ಒಂದೆರಡು ವಾರಗಳ ಹಿಂದೆ ನೋಡಿದ್ದ ವಿಡಿಯೋದಲ್ಲಿ ಕುಕ್ಕೆ ದೇವಳ  ಕುಮಾರ ಧಾರೆಯಲ್ಲಿ ಮುಳುಗಿ ತೇಲುತ್ತಿತ್ತು.. ಆದರೆ ಧಾರೆಯ ಸೆಳೆತ ಕಡಿಮೆಯಾಗಿ ಭಕ್ತಾದಿಗಳಿಗೆ ಮತ್ತೆ ದರ್ಶನ ಭಾಗ್ಯ ಕೊಟ್ಟಿದ್ದ ಸುಬ್ರಮಣ್ಯ ಸ್ವಾಮಿ.. 

 ಪ್ರಾರ್ಥನೆ ಸಲ್ಲಿಸೋಕೆ ಅಡ್ಡಿ ಬಂದದ್ದು ದೇವಾಲಯದ ದರ್ಶನದ ಸಮಯ.. ಮೊದಲು ಊಟ ಮಾಡಿ ಮಕ್ಕಳ ಅಂತ ಸುಬ್ರಮಣ್ಯ ಸ್ವಾಮೀ ಹೇಳಿದ ಮಾತಿನಂತೆ.... ದೇವಾಲಯದ ಆಶೀರ್ವಾದದ ಪ್ರಸಾದ ಸೇವಿಸಿ.. ದರ್ಶನ ಮಾಡಿದಾಗ ಸ್ವಾಮಿಯು ಶಭಾಷ್ ಅಂತ ಹರಸಿದರು.. 

ಧರ್ಮಸ್ಥಳಕ್ಕೆ ಬರುವ ಹಾದಿಯಲ್ಲಿ ಸುಬ್ರಮಣ್ಯನ ಅಣ್ಣ ಗಣಪತಿ ಬಯಲು ವೇದಿಕೆಯಲ್ಲಿ ಕುಳಿತಿರುವ ಸ್ಥಳ ಸೌತಡ್ಕ ದೇವಾಲಯಕ್ಕೆ ಭೇಟಿ ನೀಡಿದೆವು.. ಸುಂದರ ಪರಿಸರ.. ಬಯಲು ರಂಗದಲ್ಲಿ ಆಸೀನನಾದ ಗಣಪನಿಗೆ ನಮ್ಮ ಪ್ರಾರ್ಥನೆ ಸಲ್ಲಿಸಿದೆವು.. ಆ ಜಾಗದ ಪುಟ್ಟ ಪುಟ್ಟ  ಮಾಹಿತಿಗಳನ್ನು ಹೆಕ್ಕಿ ಮುಂದಕ್ಕೆ ಹೆಜ್ಜೆ ಇಟ್ಟೆವು.. 



ಬನ್ರಪ್ಪ ಬನ್ರಪ್ಪ ನನ್ನ ಇಬ್ಬರು ಮಕ್ಕಳನ್ನು ನೋಡಿಬಂದ್ರಾ ಸುಬ್ಬಣ್ಣ ಹೇಗಿದ್ದಾನೆ, ಗಣಪ ಹೇಗಿದ್ದಾನೆ, ನಿತ್ಯ ಪೂಜೆಗಳು ಸಾಂಗೋಪಾಂಗವಾಗಿ ನೆರವೇರುತ್ತಿದೆಯೇ.. ಎಂದು ಧರ್ಮಸ್ಥಳದ  ಕೇಳಿದ ಪ್ರಶ್ನೆಗಳಿಗೆ ಸಮಂಜಸ ಉತ್ತರ ಕೊಟ್ಟು... ಆ ಮಹಾಮಹಿಮ ದರ್ಶನ ಮಾಡಿದಾಗ  ಗಡಿಯಾರ ಒಂಭತ್ತು ಘಂಟೆಗೆ ಬಂದು ನಿಂತಿತ್ತು ... ದೇವಾಲಯದ ಅನ್ನಪೂರ್ಣೇಶ್ವರಿಯ ಪ್ರಸಾದ ಹೊಟ್ಟೆಗೆ ಇಳಿದ ಮೇಲೆ ಆಯಾಸವೆಲ್ಲಾ  ಗಾಳಿಯಲ್ಲಿ ತೇಲಿ ಹೋಗಿತ್ತು.. 

ರಾತ್ರಿ ದೇವಾಲಯದ ಅಧೀನದಲ್ಲಿರುವ ಕೋಣೆಗಳಲ್ಲಿ ವಿರಮಿಸಿಕೊಂಡು  ಬೆಳಗ್ಗೆ ಶಶಿ ತನ್ನ ಹರಕೆ ಮುಗಿಸಿಕೊಂಡು ಬರುವ ತನಕ ಕಾದಿದ್ದು.. ಉಪಹಾರ ಮಾಡುತ್ತಾ ನೆಡೆದದ್ದು ಇನ್ನೊಂದು ಅದ್ಭುತ ಜಾಗ .... ಅದೇ ಈ ಪ್ರವಾಸದ ಮುಖ್ಯ ಆಕರ್ಷಣೆ ಚಾರಣ.. 

ಅದೇ ಹಾದಿಯಲ್ಲಿ ನೋಡಿದ ಇನ್ನೊಂದು ದೇಗುಲ.. ರಾಮಚಂದ್ರ ಭವ್ಯವಾದ ದೇಗುಲ.. ಹಾಗೆ  ನಾರಾಯಣನ ದೇಗುಲ.. ಒಂದು ಭವ್ಯತೆಗೆ ಹೆಸರಾಗಿದ್ದಾರೆ.. ಇನ್ನೊಂದು ಭಕ್ತಿಗೆ ಹೆಸರಾಗಿತ್ತು... 

ಅಲ್ಲಿಂದ ಮುಂದೆ ಜಿಗಿದಿದ್ದು ಬಲ್ಲಾಳರಾಯನ ದುರ್ಗಾ ಅರ್ಥಾತ್ ಕೋಟೆಯ ಪಳೆಯುಳಿಕೆಯತ್ತ.. ಮಲೆನಾಡಿನ ಪ್ರಕೃತಿ ಒಂದು ನಿಮಿಷ ಇದ್ದ ಹಾಗೆ ಇನ್ನೊಂದು ನಿಮಿಷ  ಇರೋದಿಲ್ಲ  ಅನ್ನೋದಕ್ಕೆ ಸಾಕ್ಷಿ ನಮ್ಮ ಕಣ್ಣಾರೆ ನೋಡಿದ ದೃಶ್ಯ.. ಒಂದು ತಿರುವಿನಲ್ಲಿ ದಟ್ಟವಾದ ಮಂಜು.. ಇನ್ನೊಂದು ತಿರುವಿನಲ್ಲಿ ಜಿಟಿ ಜಿಟಿ ಮಳೆ.. ಆಮೇಲೆ  ಬಿಸಿಲು.. ಒಂದೇ ತಾಣದಲ್ಲಿ ಕ್ಷಣ ಕ್ಷಣಕ್ಕೆ ಬದಲಾಗುವ ಪ್ರಕೃತಿ ವಿಸ್ಮಯವನ್ನು ನೋಡುತ್ತಾ.... ಬಲ್ಲಾಳರಾಯನ ದುರ್ಗದತ್ತ ಹೆಜ್ಜೆ ಹಾಕಿದೆವು.. 



ದಟ್ಟವಾದ ಕಾಡು ...   ಕೆಲವು ಕಡೆ ಸೂರ್ಯ ರಶ್ಮಿ ಕೂಡ ಕಾಣದಷ್ಟು ದಟ್ಟವಾಗಿದ್ದರೆ.. ಇನ್ನೊಂದು ಕಡೆ  ಹರಿಯುವ ನೀರಿನ ಹಾದಿಯಲ್ಲಿಯೇ ಜಾರುತ್ತಾ ಜೀಕುತ್ತಾ ಎತ್ತರೆತ್ತರಕ್ಕೆ ಹೆಜ್ಜೆ ಹಾಕುತ್ತಿದ್ದೆವು..  ಸುಂದರ ಪರಿಸರ.. ಸುಂದರ ತಾಣ.. ತಂಪು ಗಾಳಿ.. ಕೆಲವೊಮ್ಮೆ ಮೈ ಕೊರೆಯುವ ಚಳಿ.. ಮಳೆ.. ಲಘುವಾದ ಬಿಸಿಲು... ಎಲ್ಲವೂ ಸಿಕ್ಕಿತ್ತು.. 

ತುತ್ತ ತುದಿಯಲ್ಲಿ ನಿಂತಾಗ ಆ ಗಾಳಿಗೆ ಮೈಯೊಡ್ಡಿ ನಿಂತಾಗ ಆಹಾ ಜಗತ್ತೇ ನಮದು ಎನ್ನುವ ಉತ್ಸಾಹ.. 

ತಂದಿದ್ದ ತಿಂಡಿಯನ್ನು ಹೊಟ್ಟೆಗೆ ಇಳಿಸಿ.. ಮತ್ತೆ ವಾಪಾಸ್ ಹೊರಟಾಗ ಮಳೆರಾಯನ ಕೃಪೆಯಿಂದ ಒದ್ದೆ ಮುದ್ದೆಯಾಗಿ ಹೋದೆವು.. ಅಡಿಯಿಂದ ಮುಡಿಯ ತನಕ ನೀರೇ ನೀರು.. ಸುಸ್ತು ಎನ್ನುವ [ಪದದ  ಅರ್ಥವನ್ನು ಕಳೆದುಕೊಂಡಂಥ ಅನುಭವ ಕೊಡುವ ಚಾರಣವಿದು.. ಮಳೆಗಾಲದ ಮುನ್ನ.. ಮಳೆಗಾಲದ  ನಂತರ.. ಹಾಗೂ ಮಳೆಗಾಲದಲ್ಲಿ ಅದ್ಭುತ ಅನುಭವ ಕೊಡುವ ಚಾರಣವಿದು.. ಆದರೆ ಬೇಸಿಗೆ ಬಿರು ಬಿಸಿಲಿನಲ್ಲಿ ಈ ಸಾಹಸಕ್ಕೆ ಕೈ ಹಾಕದೆ ಇರೋದು ಒಳ್ಳೆಯದು.. 

ಈ ಚಾರಣ ಎಲ್ಲರ ಮನದಲ್ಲಿ ಉತ್ಸಾಹ ತುಂಬಿಸಿತ್ತು ಅನ್ನೋದಕ್ಕೆ ನಿದರ್ಶನ ಹೋಂ ಸ್ಟೇಗೆ ಬಂದ ಮೇಲೆ ಎಲ್ಲರೂ ಒಂದು ಬಾರಿ ಫ್ರೆಶ್ ಆದ ಮೇಲೆ.. ಚಳಿ ಕಾಯಿಸಿಕೊಳ್ಳೋಕೆ ಬೆಂಕಿ ಹಾಕಿ.. ಅದರ  ನೃತ್ಯ, ಹಾಡುಗಾರಿಕೆ.. ಹಾಸ್ಯ... ಎಲ್ಲವೂ ಮೇಳೈಸಿತ್ತು.. ಜೊತೆಯಲ್ಲಿ  ಹದವಾದ ಊಟ.. ಆಹಾ ಎನ್ನಿಸುವಷ್ಟು ಸೊಗಸಾಗಿತ್ತು.. ಹೊಟ್ಟೆ ತುಂಬಾ ಊಟ ಮಾಡಿ.. ಇನ್ನಷ್ಟು ಹೊತ್ತು ಹರಟಿ... ನಿದ್ರಾದೇವಿಗೆ ಶರಣಾದಾಗ ರಾತ್ರಿ ದಾಟಲು ಸಮಯ ಕಾಯುತಿತ್ತು.. 



ಬೆಳಿಗ್ಗೆ ಎಲ್ಲರೂ ಲಗುಬಗೆಯಿಂದ ಎದ್ದು.. ಹೊಟ್ಟೆಗೆ  ಮಾಡಿದ್ದ ತಿಂಡಿಯನ್ನು ಮೆದ್ದು ಆ ಪರ್ವತ ಶ್ರೇಣಿಗಳ ಕಣಿವೆ ಹಾದಿಗಳಲ್ಲಿ ಹೊರಟಿದ್ದು ತಾಯಿ ಅನ್ನಪೂರ್ಣೇಶ್ವರಿಯ ಪಾದ ಚರಣಗಳ ಸೇವೆಗೆ.. 

ತಾಯಿ ಅನ್ನಪೂರ್ಣೇಶ್ವರಿ ನಗು ನಗುತ್ತಾ  ಬರಸೆಳೆದು ಆಶೀರ್ವದಿಸಿದಳು.. ಶಿವನ ಇಡೀ  ಪರಿವಾರವನ್ನು ಕಂಡು.. ಪ್ರಾರ್ಥನೆ ಸಲ್ಲಿಸಿ.. ಮನಸ್ಸಿಗೆ ಮುದ ತಂದುಕೊಟ್ಟ ಈ ಪ್ರವಾಸ ಎಲ್ಲರಿಗೂ ಪ್ರಿಯವಾಗಿತ್ತು ಅನ್ನೋದಕ್ಕೆ ಸಾಕ್ಷಿ ಅದ್ಭುತ ಚಿತ್ರಗಳ ಮಾಲಿಕೆ.. 




*****

ನೋಡ್ರಪ್ಪಾ ಈ  ರೀತಿ ಪ್ಲಾನ್ ಮಾಡಬೇಕು.. ನೋಡಿ ಒಂದು ರಸ್ತೆಯಲ್ಲಿ ಹೋಗಿ ಇನ್ನೊಂದು ರಸ್ತೆಯಲ್ಲಿ ಬಂದಿರಿ.. ಎಲ್ಲಾ ಜಾಗಗಳನ್ನು ನೋಡಿ  ಪಟ್ಟಿರಿ.. ಜಲಪಾತಗಳನ್ನು ಕಂಡು ಹಿಗ್ಗಿದಿರಿ.. ಪರ್ವತಗಳ ಸಾಲನ್ನು ಕಂಡು ಉತ್ಸಾಹದಿಂದ ಕುಣಿದಾಡಿದಿರಿ..  ಬೆಟ್ಟ ಗುಡ್ಡಗಳ ಸಾಲನ್ನು ಕಂಡು ಖುಷಿ ಪಟ್ಟಿರಿ.. ವರ್ಷ ಧಾರೆಯನ್ನು  ಎರಡೂ ಕೈಗಳಿಂದ ಸ್ವಾಗತಿಸಿದಿರಿ.. ನಿಮ್ಮ ಗೆಳೆತನದ ನೆನಪುಗಳನ್ನು ಹೆಕ್ಕಿ ತೆಗೆದಿರಿ.. ನಿಮ್ಮ ಮೊಗದಲ್ಲಿ ನಾ ಕಂಡಿದ್ದು ಆಯಾಸವನ್ನಲ್ಲ.. ನಿಮ್ಮ ಗೆಳೆತನದ ಭವ್ಯ ಸೆಳೆತವನ್ನು... ಹೌದು ನಾ  ಎಷ್ಟೋ ಬಾರಿ ಹೇಳಿದ್ದೆ.. ಏನ್ ಫ್ರೆಂಡ್ಸಪ್ಪ ನೀವು ಅಂತ.. ಆದರೆ ನಿಮ್ಮ ಗುಣದಲ್ಲಿ ಸಾಮ್ಯತೆ ಇಲ್ಲದಿದ್ದರೂ ಒಬ್ಬರು ಹೇಳಿದ್ದನ್ನ ಇನ್ನೊಬ್ಬರು  ತಾಳ್ಮೆಯ ಗುಣವನ್ನು ಮೇಳೈಸಿಕೊಂಡಿದ್ದೀರಿ.. ಇದೆ ಅಲ್ಲವೇ ಗೆಳೆತನದ ಮುಖ್ಯ ಮಂತ್ರ.. 

ನಿಜಕ್ಕೂ ನೀವುಗಳು ಎಷ್ಟೋ  ಪ್ರವಾಸ ಮಾಡಿದ್ದೀರಾ.. ನನಗೆ ಮೆಚ್ಚುಗೆಯಾದ ಪ್ರವಾಸವಿದು.. ವೆಂಕಿಯ ಪ್ಲಾನ್.. ಶಶಿಯ ಮಾರ್ಗದರ್ಶನ, ಜೆಎಂ ನಿಮಗೆ ಸಾತ್ ನೀಡಿದ್ದು.. ಜೊತೆಯಲ್ಲಿ ಪ್ರತಿಭಾ, ಸಮತಾ, ಸೌಮ್ಯ, ಸೀಮಾ ಎಲ್ಲರೂ  ಖುಷಿ ಪಟ್ಟಿದ್ದು, ನಿಮಗೆ ಸಾತ್ ಕೊಟ್ಟಿದ್ದು.. ಒಬ್ಬನೇ ಇದ್ದರೂ ಧನುಷ್ ಎಲ್ಲೂ ಬೇಸರ ಪಟ್ಟುಕೊಳ್ಳದೆ ನಿಮ್ಮ ಪ್ರವಾಸಕ್ಕೆ ಜುಗಲ್ ಬಂದಿಯಾಗಿದ್ದು ಸಂತಸ ಕೊಟ್ಟಿತು.. ಮಿಕ್ಕ ಮಕ್ಕಳು ಸಾತ್ವಿಕ್, ಸುಖಿ, ಶೀತಲ್, ಐಶ್ವರ್ಯ ಜೊತೆಗಿದ್ದಿದ್ದರೆ ಇನ್ನಷ್ಟು ಚೆನ್ನಾಗಿರುತಿತ್ತು.. ಮತ್ತೆ ನಿಮ್ಮೆಲ್ಲರ  ಪರಮ ಮಿತ್ರ ಲೋಕೇಶ್ ಹಾಗೂ ದಾಕ್ಷಾಯಿಣಿ ಮತ್ತು ಚಿಲ್ಟು, ಪಿಲ್ಟುಗಳು ಜೊತೆಗೂಡಿದ್ದರೆ ಇನ್ನೂ ಚೆನ್ನಾಗಿರುತಿತ್ತು.. ಇರಲಿ ಮತ್ತೊಮ್ಮೆ ಎಲ್ಲರೂ ಜೊತೆಯಾಗಿ ಅದ್ಭುತ ಕ್ಷಣಗಳನ್ನು ದಾಖಲಿಸಿ.. ಶುಭವಾಗಲಿ.. 

ಸರ್.. ಇಡೀ ಪ್ರವಾಸದುದ್ದಕ್ಕೂ ವರ್ಚುಯಲ್ ಆಗಿ ನಮ್ಮ ಜೊತೆಯಿದ್ದು ಈ ಪ್ರವಾಸವನ್ನು ಆಯಾಸವಿಲ್ಲದೆ ನೆಡೆಸಿಕೊಟ್ಟ ನಿಮಗೆ ಧನ್ಯವಾದಗಳು.. ಮತ್ತೆ ಸಲೀಸಾಗಿ ಈ ಪ್ರವಾಸಕ್ಕೆ ಸಾರಥಿಯಾದ ನಮ್ಮ  ಉಮೇಶ್ ಅವರಿಗೂ ಧನ್ಯವಾದಗಳು.. 





















ಇದಪ್ಪ ಮಾತು ಅಂದರೆ.. ಎಲ್ಲರನ್ನು ನೆನೆಸಿಕೊಳ್ಳುವ ನಿಮ್ಮ ಸ್ನೇಹ ಸದಾ ಹಸಿರಾಗಿರಲಿ.. ,ಮತ್ತೊಂದು ಪ್ರವಾಸದ ಕಥಾನಕ  ಶೀಘ್ರದಲ್ಲಿ ಬರಲಿ.. !!!