ಹಲವಾರು ವರ್ಷಗಳಿಂದ ತಿರುಪತಿ ತಿರುಪತಿ.. ಹೋಗಬೇಕೆನ್ನುವುದು, ಹೋಗಲಾಗದೆ ಒದ್ದಾಡುವುದು ನೆಡೆದಿತ್ತು.. ಆದರೆ ಕಳೆದ ಮೂರು ವರ್ಷಗಳಲ್ಲಿ ಸತತವಾಗಿ ಮೂರು ಬಾರಿ.. ವೆಂಕಟೇಶ್ವರ ಕರುಣೆಯಿಂದ ನನ್ನ ಬರಮಾಡಿಕೊಂಡ.. ಪ್ರತಿ ಬಾರಿಯೂ ವಿಭಿನ್ನ ಅನುಭವ..
Guys.. i can't make it get together.. am planning to tirupathi.. ಶಶಿ ಈ ಮಾತನ್ನು ಹೇಳಿದ ತಕ್ಷಣ..
"ಶಶಿ ಮುಂದಿನ ತಿಂಗಳ ಕೊನೆಯಲ್ಲಿ ಹೋಗೋದಾದರೆ ನಾ ಬರುತ್ತೇನೆ.. ವೆಂಕಿ ನೀನು?"
"ಮಗಾ ನಾನು ಬರ್ತೀನಿ"
ಸರಿ ತ್ರಿಮೂರ್ತಿಗಳು ಹೊರಡೋದು ಅಂತ ಆಯಿತು.. ಕಾರು ನಂದ ನಿಂದ ಎನ್ನುವ ಗೊಂದಲಕ್ಕೆ ಅವಕಾಶವೇ ನೀಡದಂತೆ ಶಶಿ ನಾ ಕಾರು ತರುತ್ತೇನೆ ಅಂದಾ..
"ಲೋ.. ಶ್ರೀಕಿ, ವೆಂಕಿ ನೀವಿಬ್ಬರು ಮೊದಲೇ ಲೇಟ್ ಲತೀಫ್ ಗಳು..ದಯವಿಟ್ಟು .. ಐದಕ್ಕೆ ಬೈಯಪ್ಪನಹಳ್ಳಿ ಹತ್ರ ಬಂದು ಬಿಡಿ.. ಲೇಟ್ ಆದರೆ ಬೆಟ್ಟ ಹತ್ತೋದು ಎಲ್ಲಾ ಪ್ರೋಗ್ರಾಮ್ ಉಲ್ಟಾ ಆಗುತ್ತೆ.. "
ಸರಿ ಕಣೋ ಬರ್ತೀವಿ ಅಂತ ಹೇಳಿ .. ನಾನು ವೆಂಕಿ ಜೋರಾಗಿ ನಕ್ಕು ನಮ್ಮಿಬ್ಬರ ಐವತ್ತೊಂಬತ್ತೂವರೆ ಹಲ್ಲುಗಳನ್ನೂ ಬಿಟ್ಟಿದ್ದೆವು..
ಆದಷ್ಟು ಬೇಗ ತಿರುಪತಿ ಸೇರೋಣ.. ಹೋಟೆಲಿಗೆ ಹೋಗಿ ರೆಸ್ಟ್ ತಗೊಂಡು ಬೆಟ್ಟ ಹತ್ತೋಣ.. ಬೆಟ್ಟದಿಂದ ಇಳಿದು.. ರೂಮಿಗೆ ಬಂದು.. ಸ್ನಾನ ಮುಗಿಸಿ.. ನಿಗದಿತ ಸಮಯಕ್ಕೆ ದರ್ಶನಕ್ಕೆ ನಿಲ್ಲೋಣ .. ದರ್ಶನ ಮಾಡಿ.. ರೂಮಿಗೆ ಬಂದು.. ಮಲಗೋದು. .ಬೆಳಿಗ್ಗೆ ಎದ್ದು ಕಾಳಹಸ್ತಿಗೆ ಹೋಗಿ ಅಲ್ಲಿಂದ ಬೆಂಗಳೂರು.. ಇದು ಪ್ಲಾನ್ ಅಂತ ಮಾತಾಡಿಕೊಂಡಿದ್ದೆವು..
ಏಳು ಬೆಟ್ಟದ ಮೇಲೆ ಕೂತಿದ್ದ ವೆಂಕಟೇಶ್ವರ.. ಮನದಲ್ಲೇ ನಕ್ಕಿದ್ದು ನನಗೆ ಕೇಳಿಸಿತ್ತಾದರೂ ನಾ ಸುಮ್ಮನಿದ್ದೆ..
ನಿಗದಿತ ಸಮಯಕ್ಕೆ ನಾನು ವೆಂಕಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಹತ್ತಿರ ನಿಂತಿದ್ವಿ.. ಶಶಿ ಕೈಲಿ ಬೈಸಿಕೊಳ್ಳೋದು ತಪ್ಪಿತ್ತು.. ಕಾರಣ.. ಅವನು ಕೊಂಚ ಬೇಗನೆ ಬಂದಿದ್ದ ಆದರೆ ಪಾರ್ಕಿಂಗ್ ಸಮಸ್ಯೆಯಿಂದಾಗಿ ಒಂದು ಕಿಮಿ ದೂರ ನಿಂತಿದ್ದ.. ನಾವಿಬ್ಬರು ನಿಗದಿತ ಐದಕ್ಕೆ ಬಂದಿದ್ವಿ.. ಅವನು ನಮ್ಮ ಸ್ಟಾಪಿಗೆ ಟ್ರಾಫಿಕ್ ದಾಟಿ ಬರುವ ಹೊತ್ತಿಗೆ ನಾ ಅವನಿಗೆ ಬಯ್ಯಲು ಸಮಯ ಕಾಯುತ್ತಿದ್ವಿ.. ಹ ಹ ಹ ಹ :-)
ಮಯ್ಯಾಸ್ ಹೋಟೆಲ್ಲಿನಲ್ಲಿ ಒಂದಷ್ಟು ಮುಕ್ಕಿ.. ತಿರುಪತಿ ದಾರಿ ಹಿಡಿದೆವು.. ದಾರಿಯುದ್ದಕ್ಕೂ ನಗು, ಮಾತು.. ಮುಗಿಯದ ನಮ್ಮ ಹಳೆ ಪುರಾಣಗಳು.. ಎಷ್ಟೊಂದು ಬಾರಿ ಪುನರಾವರ್ತನೆಯಾಗಿದ್ದರೂ ನಗು ಮಾಸದೆ ಇನ್ನಷ್ಟು ಹುಮ್ಮಸ್ಸು ತುಂಬುತ್ತಿತ್ತು.. ಲೋಕಿ ಕಾರಣಗಳನ್ನೇ ಅಂತರ ಮಾಡಿಕೊಂಡು ನಮ್ಮ ಜೊತೆ ಬಂದಿರಲಿಲ್ಲ.. ಲೋಕಿಗೆ ಕರೆ ಮಾಡಿ ಒಂದಷ್ಟು ಕ್ಲಾಸ್ ತಗೊಂಡ್ವಿ.. ವೆಂಕಿ ತನ್ನ ಶೈಲಿಯಲ್ಲಿ ಲೋಕಿಗೆ ಕ್ಲಾಸ್ ತಗೊಂಡ.. ಅವನ ಒಂದು ಸಂಭಾಷಣೆಗೆ ನನಗೆ ನಗು ತಡೆಯೋಕೇ ಆಗಲಿಲ್ಲ.. ಎ ಸಿ ಹಾಕಿದ್ದರಿಂದ ಕಾರಿನ ಗಾಜು ಬಂದಾಗಿತ್ತು.. ನನಗೆ ನಕ್ಕು ನಕ್ಕು ಉಸಿರು ಸಿಕ್ಕಿಕೊಂಡು ಬಿಟ್ಟಿತ್ತು..
ಡ್ರೈವ್ ಮಾಡುತ್ತಿದ್ದ ಶಶಿ ತಡೆಯಲಾಗದೆ.. "ಶ್ರೀಕಿ ಉಸಿರು ಬಿಡೋ.. ಉಸಿರು ಬಿಡೋ" ಅಂತ ಹೇಳುತ್ತಲೇ ಇದ್ದ.. ನನಗೆ ನಗೆ ತಡೆಯೋಕೇ ಆಗದಷ್ಟು ಉಸಿರು ಕಟ್ಟಿಕೊಂಡು ಬಿಟ್ಟಿತ್ತು.. ಕಾರಿನ ಗಾಜು ತೆಗೆದು ಒಂದಷ್ಟು ಗಾಳಿಗೆ ಮೊಗವೊಡ್ಡಿದೆ.. "ಶ್ರೀಕಿ ಉಸಿರು ಬಿಡೋ ಉಸಿರು ಬಿಡೋ" ಶಶಿ ಹೇಳುತ್ತಲೇ ಇದ್ದ.. ಒಂದು ನಿಮಿಷ.. ಗಾಳಿಗೆ ಮೊಗವೊಡ್ಡಿದ್ದರಿಂದ ಸ್ವಲ್ಪ ಸಮಾಧಾನವಾಯಿತು.. ಮತ್ತೆ ಲೋಕಿಗೆ ಒಂದಷ್ಟು ನಾಮಾರ್ಚನೆ ಮಾಡಿ.. ಕರೆ ಮುಗಿಸಿದೆವು..
ಫ್ರಾಂಕ್ಫರ್ಟ್ ನಲ್ಲಿದ್ದ ಜೆಮ್ ಗೆ ಕರೆ ಮಾಡಿದೆವು.. ಅವನು ಶುಕ್ರವಾರ.. ಕೆಲಸ ಮುಗಿಸುವ ತರಾತುರಿಯಲ್ಲಿದ್ದ.... ಆದರೂ ಸ್ನೇಹಕ್ಕಿಂತ ದೊಡ್ಡದು ಯಾವುದು ಇಲ್ಲ ಎನ್ನುವ ನಮ್ಮೆಲ್ಲರ ಸಿದ್ಧಾಂತಕ್ಕೇ ನಾವು ಬದ್ಧರಾಗಿದ್ದೆವು.. ಅದೇ ರೀತಿ ಜೆಮ್ ನಮ್ಮ ಕರೆಗೆ ಓಗೊಟ್ಟ.. ಅರ್ಧ ಘಂಟೆ ಬರೋಬ್ಬರಿ ಮಾತುಗಳು.. ಮುಂದಿನ ಪ್ಲಾನ್, ಅವನ ಮುಂದಿನ ಭಾರತದ ಭೇಟಿ.. ಹೀಗೆ ಎಲ್ಲ ವಿಷಯಗಳ ಮಾತು ಆಯ್ತು.. ಅರ್ಜೆಂಟ್ ಮೇಲ್ ಕಳಿಸಬೇಕು ಎಂದು ಹೇಳಿ.. ಜೆಮ್ ಶುಭ ಪ್ರವಾಸ ಹೇಳಿದ..
ಅಲ್ಲಿಂದ ಮತ್ತೆ ವೆಂಕಿ, ನಾನು, ಶಶಿಯ ಮಾತುಗಳು, ಕಿಚಾಯಿಸುವುದು ನೆಡೆಯಿತು.. ಸುಮಾರು ಹನ್ನೊಂದು ಘಂಟೆಗೆ ತಿರುಪತಿ ವಾಹನ ನಿಲ್ದಾಣಕ್ಕೆ ಬಂದೆವು.. ಬ್ರಹ್ಮೋತ್ಸವ ಕಳೆದ ವಾರ ಇದ್ದದ್ದರಿಂದ ಜನಜಾತ್ರೆಯೇ ಇತ್ತು.. ಹೋಟೆಲಿಗೆ ಹೋಗುವ ಸಾಹಸ ಮಾಡದೆ.. ಸೀದಾ ಬೆಟ್ಟ ಹತ್ತೋಕೆ ಶುರು ಮಾಡಿದೆವು..
ಯಥಾ ಪ್ರಕಾರ ವೆಂಕಿ ಹುಮ್ಮಸ್ಸು ಹೆಚ್ಚಿತ್ತು.. ಸ್ವಲ್ಪ ದೂರ ಮಾತ್ರ ನಾವು ಅವನ ಜೊತೆ ಇದ್ವಿ.. ಅವನು ಎಲ್ಲೂ ನಿಲ್ಲದೆ ಸರ ಸರ ೨೦೮೩ ಮೆಟ್ಟಿಲುಗಳನ್ನು ಏರಿ ಗಾಳಿಗೋಪುರದ ತಲುಪಿ ಕೂತಿದ್ದ.. ಅವನ ಹಿಂದೆ ಶಶಿ ನಾ ಮೆಲ್ಲನೆ ಬರುತ್ತಿದ್ದರಿಂದ ನನ್ನನ್ನು ನೋಡಿಕೊಳ್ಳುತ್ತಾ ಮೆಲ್ಲನೆ ಏರುತ್ತಿದ್ದ..ದಿನವೂ ವಾಕಿಂಗ್, ಜಾಗಿಂಗ್ ಮಾಡಿದ್ದರಿಂದ ಶಶಿ ನಿರಾಯಾಸವಾಗಿ ಹತ್ತಿದ .. ಒಂದು ಹಂತದಲ್ಲಿ ನೀ ಹೋಗು ನಾ ನಿಧಾನಕ್ಕೆ ಬರುತ್ತೇನೇ ಎಂದು ಹೇಳಿ ಅವನನ್ನು ಕಳಿಸಿದೆ.. ನಾನು ಎಲ್ಲೂ ಕೂರದೆ.. ಆದರೆ ನಿಂತೇ ವಿಶ್ರಮಿಸಿಕೊಂಡು ಸುಮಾರು ೧೨.೩೦ ಹೊತ್ತಿಗೆ ಗಾಳಿ ಗೋಪುರ ತಲುಪಿದೆ..
ವೆಂಕಿ.. "ಶ್ರೀಕಿ ಸ್ವಲ್ಪ ಹೊತ್ತು ರೆಸ್ಟ್ ತಗೋ.. ಆಮೇಲೇ ಹೋಗೋಣ"
"ಬೇಡ ಕಣೋ.. ಮೊದಲು ಬ್ಯಾಂಡ್ ಹಾಕಿಸಿಕೊಳ್ಳೋಣ ಆಮೇಲೆ ಸ್ವಲ್ಪ್ ಏನಾದರೂ ತಿಂದು, ಕುಡಿದು ಹೋಗೋಣ" ಅಂದೇ
"ಬ್ಯಾಂಡ್ ಇಲ್ಲ ಶ್ರೀಕಿ.. ಮುಂದಿನ ನಾಲ್ಕು ಶನಿವಾರಗಳು ಬೆಟ್ಟ ಹತ್ತೋರಿಗೆ ಸ್ಪೆಷಲ್ ದರ್ಶನದ ಟಿಕೆಟ್ ಇಲ್ಲ.. ಸರ್ವದರ್ಶನಕ್ಕೆ ನಿಲ್ಲಬೇಕು.. " ೨೦ ಸೆಕೆಂಡ್ಸ್ ಮೂರು ಮಂದಿಯಲ್ಲೂ ಮೌನ ಮನೆಮಾಡಿತ್ತು..
"ಶ್ರೀಕಿ.. ಸೀದಾ ಬೆಟ್ಟ ಹತ್ತಿ ದರ್ಶನಕ್ಕೆ ನಿಂತು ಬಿಡೋಣ.. ಅದನ್ನೇ ನಾನು ಶಶಿ ಮಾತಾಡ್ತಾ ಇದ್ವಿ.. "
ನಮ್ಮ ಗುಂಪಲ್ಲಿ ಒಂದು ಅಲಿಖಿತ ನಿಯಮವಿದೆ.. ಒಬ್ಬರು ನಿರ್ಧಾರ ತಗೊಂಡ್ರು ಅಂದ್ರೆ ಅದನ್ನು ಪ್ರಶ್ನಿಸೋದು ಇಲ್ಲ..
ಬೆಳಿಗಿನ ಜಾವ ೩.೩೦ಕ್ಕೆ ದರ್ಶನಕ್ಕೆ ನಿಂತೆವು.. ದಾರಿಯುದ್ದಕ್ಕೂ ಮಾತುಗಳು, ಹಾಸ್ಯ ಇದ್ದೆ ಇದ್ದವು.. ಆದರೆ ಇದುವರೆಗೂ ನನ್ನ ತಿರುಪತಿ ಯಾತ್ರೆಯಲ್ಲಿ ಸಿಗದ ಅವಕಾಶ ಈ ಯಾತ್ರೆಯಲ್ಲಿ ಸಿಕ್ಕಿತು..
ಮೊಬೈಲ್ ಜೇಬಲ್ಲೇ ಇತ್ತು.. ಹಾಗಾಗಿ ಕೆಲವು ಚಿತ್ರಗಳನ್ನು ತೆಗೆಯುವ ಅವಕಾಶ ಸಿಕ್ಕಿತು.. ಕಾರಿನಲ್ಲಿ ಪಯಣ ಮಾಡಿದ್ದು.. ನಿದ್ದೆ ಇಲ್ಲದ ರಾತ್ರಿ.. ಬೆಟ್ಟ ಹತ್ತಿದ್ದ ಆಯಾಸ.. ಹೊಟ್ಟೆಗೆ ಏನಾದರೂ ತಿನ್ನ ಬೇಕೆಂದಾಗ ಸಿಕ್ಕ ಕೆಟ್ಟ ಇಡ್ಲಿ, ಕೆಟ್ಟ ಚಿತ್ರಾನ್ನ.. ಇದ್ಯಾವುದು ದೇವರ ದರ್ಶನಕ್ಕೆ ನಿಂತ ನಮ್ಮ ಗಮನಕ್ಕೆ ಬರಲೇ ಇಲ್ಲ.. ನಮ್ಮ ಕಣ್ಣ ಮುಂದೆ ನಿಂತಿದ್ದು ವೆಂಕಟೇಶ್ವರ ಆ ದಿವ್ಯ ಮೂರ್ತಿಯ ನೋಟವಷ್ಟೇ..
ಇಲೆಕ್ಟ್ರಾನಿಕ್ ಉಪಕರಣಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವ ಕೌಂಟರಿಗೆ ಬರುವ ತನಕ.. ಕಂಡದ್ದು, ಚೆನ್ನ ಅನ್ನಿಸಿದ್ದು, ಬೇಕೆನಿಸಿದ್ದು ಫೋಟೋಗಳನ್ನು ಮೊಬೈಲಿನಲ್ಲಿಯೇ ತೆಗೆದೇ... ಅಪರೂಪದ ಅವಕಾಶ.. ಕಾರಣ ಸಾಮಾನ್ಯ ಹಿಂದಿನ ಯಾತ್ರೆಗಳಲ್ಲಿ.. ಎಲ್ಲವನ್ನೂ ಕಾರಿನಲ್ಲಿಯೇ ಇಟ್ಟು ಸರತಿ ಸಾಲಿನಲ್ಲಿ ಬರಿಗೈಯಲ್ಲಿ ನಿಲ್ಲುವುದು ಅಭ್ಯಾಸವಾಗಿತ್ತು.. ಆದರೆ ಈ ಬಾರಿ ಬೆಟ್ಟ ಹತ್ತಿ ಸೀದಾ ದರ್ಶನಕ್ಕೆ ನಿಂತಿದ್ದರಿಂದ.. ಜೊತೆಯಲ್ಲಿ ಕಾರು ಬೆಟ್ಟದ ಕೆಳಗೆ ನಿಲ್ಲಿಸಿದ್ದರಿಂದ.. ಈ ಬಾರಿ ಮೊಬೈಲ್ ನಮ್ಮ ಕೈಯಲ್ಲಿ.
.
ಸುಮಾರು ಮಧ್ಯಾನ್ಹ ೧೨.೩೦ಕ್ಕೆ ದರ್ಶನವಾಯಿತು ..ಪ್ರಸನ್ನ ವದನ, ಪ್ರಫುಲ್ಲ ಮನಸ್ಸು.. ದಣಿವಾರಿದ್ದ ದೇಹ, ಕಣ್ಣ ಮುಂದೆ ಕಂಡಿದ್ದ ವೆಂಕಟೇಶ್ವರ ಸ್ವಾಮಿಯ ಆ ದಿವ್ಯ ದರ್ಶನ.. ಈ ಯಾತ್ರೆಗೆ ಒಂದು ವಿಶಿಷ್ಟ ಅನುಭವ ಕೊಟ್ಟಿತ್ತು..
ದರ್ಶನ ಆಯಿತು..ಇಷ್ಟಾರ್ಥ ಪ್ರಾರ್ಥನೆ ಸಲ್ಲಿಸಿ, ಲಡ್ಡು ಪ್ರಸಾದ ಪಡೆದು.. ಊಟಕ್ಕೆ ಅಲ್ಲಿಯೇ ಹತ್ತಿರದಲ್ಲಿದ್ದ ಹೋಟೆಲಿಗೆ ನುಗ್ಗಿದೆವು.. ಹಿಂದಿನ ಸಂಜೆಯಿಂದ ಸರಿಯಾಗಿ ಹೊಟ್ಟೆಗೆ ಬಿದ್ದಿರಲಿಲ್ಲ.. ದರ್ಶನಕ್ಕೆ ನಿಂತಿದ್ದಾಗ ಸಿಕ್ಕಿದ್ದ ಉಪ್ಪಿಟ್ಟು ಸರತಿ ಸಾಲಿನಲ್ಲಿ ಹೋಗಿ ದರ್ಶನ ಮಾಡುವ ಹೊತ್ತಿಗೆ ಹೊಟ್ಟೆಯಲ್ಲಿ ಭಸ್ಮವಾಗಿ ಹೋಗಿತ್ತು.. ಸರಿಯಾಗಿ ಬಾರಿಸಿದೆವು.. ಬಸ್ಸಿನಲ್ಲಿ ಬಂದು ಕುಳಿತು ಟಿಕೆಟ್ ಪಡೆದದ್ದಷ್ಟೇ ಗೊತ್ತು.. ಮುಂದಿನ ೪೫ ನಿಮಿಷ ಭರ್ಜರಿ ನಿದ್ದೆ.. ವೆಂಕಿ ಸಮಯಪ್ರಜ್ಞೆ ಇರುವ ಗೆಳೆಯ.. ಬೆಟ್ಟದ ಬುಡಕ್ಕೆ ಬರುವುದಕ್ಕೂ ಅವನು ಕಣ್ಣು ಬಿಡೋದಕ್ಕೂ ಸರಿ ಹೋಗಿತ್ತು.. ಲೋ ಶ್ರೀಕಿ, ಶಶಿ.. ಬನ್ರೋ ಇಳಿಯೋಣ ಅಂತ ಎಬ್ಬಿಸಿದಾಗಲೇ ಎಚ್ಚರ..
ಹೋಟೆಲಿಗೆ ಲಗುಬಗೆಯಿಂದ ಬಂದು.. ಟಕ ಟಕ ಸ್ನಾನ ಮುಗಿಸಿ.. ಮತ್ತೆ ಹೊರಟೆವು.. ಎಲ್ಲಿಗೆ ಅಂದ್ರ.. ಕಾಳಹಸ್ತಿಗೆ.. ದಣಿವರಿಯದ ಪ್ರವಾಸವಿದು..
ಆಗಸ ನಮಗಾಗಿ ಶುಭ ಕೋರುತ್ತಿದೆ ಅನ್ನಿಸಿತು.. ಶಶಿ ಸಾಮಾನ್ಯ ಸ್ಥಿತಪ್ರಜ್ಞ.. ಶ್ರೀಕಿ ನೋಡೋ ಅಲ್ಲಿ ಆಗಸ ಎಷ್ಟು ಚೆನ್ನಾಗಿದೆ.. ಅಂದ.. ಕ್ಯಾಮೆರಾ ಕಾರಿನ ಡಿಕ್ಕಿಯಲ್ಲಿತ್ತು.. ಶಶಿ ನಿಲ್ಲಿಸೋ ಕ್ಯಾಮೆರಾ ತಗೋತೀನಿ ಅಂದೇ.. ವೆಂಕಿ ನನ್ನ ತಲೆಗೆ ಬಿಟ್ಟ.. ಸರಿ ಮೊಬೈಲಿನಲ್ಲಿ ಅಡ್ಜಸ್ಟ್ ಮಾಡಿಕೊಂಡು ಕೆಲವು ಫೋಟೋ ತೆಗೆದೇ..
ಕಾಳಹಸ್ತಿ ತಲುಪಿದಾಗ.. ಮನಸ್ಸಿಗೆ ಸಂತೋಷ.. ಹರಿಯ ತಾಣದಿಂದ ಹರನ ತಾಣಕ್ಕೆ.. ಅದ್ಭುತ ದೇವಾಲಯವಿದು.. ದರ್ಶನ ಮಾಡಿಕೊಂಡು.. ಅಲ್ಲಿಯೇ ಸ್ವಲ್ಪ ಹೊತ್ತು ಕೂತು.. ಹೊರಗೆ ಬಂದೆವು.. ಕಾಳಹಸ್ತಿ ಪಂಚಭೂತಗಳಲ್ಲಿ ಒಂದು ವಾಯುವನ್ನು ಪ್ರತಿನಿಧಿಸುವ ದೇವಾಲಯವಿದು. ಸುಮಾರು ಐದನೇ ಶತಮಾನದಲ್ಲಿ ಒಳಭಾಗದ ದೇವಸ್ಥಾನ ನಿರ್ಮಾಣಗೊಂಡಿತ್ತು ಏನು ಐತಿಹ್ಯ ಹೇಳುತ್ತದೆ.. ಮುಂದೆ ಅನೇಕ ರಾಜಮನೆತನಗಳು ಈ ದೇವಾಲಯವನ್ನು ಬೆಳೆಸಿದರು ಎನ್ನಲಾಗುತ್ತದೆ.. ಗ್ರಹಣಕಾಲದಲ್ಲಿ ಇಡೀ ಭಾರತದಲ್ಲಿ ಇದೊಂದೇ ದೇವಸ್ಥಾನ ತೆರೆದಿರುವುದು ಎಂದು ಹೇಳುತ್ತಾರೆ . ಕಾರಣ ರಾಹು ಕೇತುಗಳ ಕ್ಷೇತ್ರ ಎನಿಸಿಕೊಂಡಿದೆ.. ಸುಂದರ ಬೃಹದಾಕಾರದ ದೇವಾಲಯ.. ಮನಸ್ಸಿಗೆ ಖುಷಿ ಕೊಡುತ್ತದೆ.. ಸ್ವರ್ಣಮುಖಿ ನದಿ ತೀರದಲ್ಲಿರುವ ಈ ದೇವಾಲಯ ಕಾಲ ಸರ್ಪದೋಷ ಹೊಂದಿರುವವರಿಗೆ ಪೂಜೆ ಮಾಡಿಸಿದರೆ ಒಳ್ಳೆಯದು ಎನ್ನುವ ನಂಬಿಕೆ ಇರುವುದರಿಂದ.. ಸಾಮಾನ್ಯ ಎಲ್ಲಕಾಲದಲ್ಲಿಯೂ ಜನಜಂಗುಳಿ ಇದ್ದೆ ಇರುತ್ತದೆ..
ಬರುವ ಹಾದಿಯಲ್ಲಿ ಒಂದು ಹೊಟೇಲಿನಲ್ಲಿ ಹೊಟ್ಟೆ ತುಂಬಾ ತಿಂದು ಕೋಣೆಗೆ ಬಂದು ಮಲಗಿದಾಗ ನಿದ್ರಾದೇವಿ ಎರಡು ಕೈಗಳಿಂದ ತಬ್ಬಿಕೊಂಡಳು.
ಬೆಳಿಗ್ಗೆ ಎದ್ದು ಸುಮಾರು ಎಂಟು ಘಂಟೆ ಹೊತ್ತಿಗೆ ಸಿದ್ಧರಾಗಿ.. ನಮ್ಮ ಇಷ್ಟದ ಪೈ ವೈಸ್ರಾಯ್ ಹೋಟೆಲಿನಲ್ಲಿ ಗಡದ್ದಾಗಿ ತಿಂಡಿ ತಿಂದು ಬೆಂಗಳೂರಿನ ಕಡೆಗೆ ಹೊರಟೆವು.. ರಸ್ತೆ ಅಗಲೀಕರಣದ ಪರಿಣಾಮ ರಸ್ತೆಗಳು ಸರಾಗವಾಗಿರಲಿಲ್ಲ.. ಅಲ್ಲಲ್ಲಿ ತಿರುವುಡ್ ತೆಗೆದುಕೊಳ್ಳಬೇಕಿತ್ತು.. ಕೆಲವೊಂದು ಕಡೆ ಕಾಡಿನಲ್ಲಿ ಹೋಗುತ್ತಿದ್ದೇವೆ ಅನಿಸುತಿತ್ತು..
ಬೈಯಪ್ಪನಹಳ್ಳಿಯಲ್ಲಿ ಬಂದು ಇಳಿದಾಗ ಎರಡು ದಿನದ ಆಯಾಸ ಗಾಳಿಯಲ್ಲಿ ಸೇರಿಹೋಗಿತ್ತು.. ಶಶಿಗೆ ಬೈ ಹೇಳಿ.. ಮೆಟ್ರೋ ಹತ್ತಿ ನಾನು ವೆಂಕಿ ಮನೆ ಸೇರಿಕೊಂಡಾಗ ಸಂಜೆ ಐದಾಗಿತ್ತು.. ಅದ್ಭುತ ಕ್ಷಣಗಳನ್ನು ಕಳೆದಿದ್ದೆವು ಎನ್ನುವ ಆ ಸಾರ್ಥಕ ಭಾವ.. ಮನೆದೇವರ ದರ್ಶನ , ಕಾಳಹಸ್ತೀಶ್ವರನ ದರ್ಶನ.. ಜೊತೆಯಲ್ಲಿ ಬೆಂಗಳೂರಿಂದ ಹೊರಟ ಮೇಲೆ. .ಶಶಿಯವರ ಮಾವ.. ಚಿತ್ತೂರು ರಸ್ತೆ ರಿಪೇರಿ ಮತ್ತು ಅಗಲೀಕರಣ ಕಾರ್ಯ ನೆಡೆಯುತ್ತಿದ್ದರಿಂದ.. ಅಲ್ಲಿ ಹೋಗದೆ ಮದನ್ ಪಲ್ಲಿಯ ರಸ್ತೆಯಲ್ಲಿ ಹೋಗಿ ಎಂದು ಸೂಚನೆ ಕೊಟ್ಟಿದ್ದು ಫಲಕಾರಿಯಾಗಿತ್ತು..
ತಿರುಪತಿಯಲ್ಲಿ.. ನಮ್ಮ ಪ್ಲಾನ್ ಏನೂ ಆಗದೆ.. ವೆಂಕಟೇಶ್ವರನ ಮನದಲ್ಲಿ ಏನಿರುತ್ತದೆಯೋ ಹಾಗೆ ನೆಡೆಯೋದು ಅನ್ನುವ ಸತ್ಯ ಮತ್ತೊಮ್ಮೆ ಅರಿವಿಗೆ ಬಂದ ಪ್ರವಾಸವಿದು.. ಯಾವುದೇ ಏಳು ಬೀಳು ಇಲ್ಲದೆ ಸಲೀಸಾಗಿ ಸಾಗಿದ ಈ ಪ್ರಯಾಣಕ್ಕೆ ತಿರುಪತಿ ತಿಮ್ಮಪ್ಪನ ಅಭಯ ಹಸ್ತವಿದ್ದದ್ದು ವಿಶೇಷ..
ತಿರುಪತಿ ಗಿರಿವಾಸ ಶ್ರೀ ವೆಂಕಟೇಶ. .ನೀ ಒಲಿದ ಮನೆ ಮನೆಯೂ ಲಕ್ಷ್ಮಿ ನಿವಾಸ!!!