ಟ್ರಿಪ್ಪಿಂಗ್ ಬ್ಲಾಗ್ ನಲ್ಲಿ ಏನಾದರೂ ಬರೆಯೋಣ ಅಂತ.. ಆ ಕೊಂಡಿಯನ್ನು ಒತ್ತಿದೆ.. ಬರಲಿಲ್ಲ.. ಅಂತರ್ಜಾಲ ಸಂಬಂಧ ಸರಿಯಿದೆಯೇ ಎಂದು ಪರೀಕ್ಷಿಸಿದೆ.. ಉಆಹೂಂ ಎಲ್ಲವೂ ಸರಿ ಇತ್ತು.. ಏನಾಯಿತು.. ಅರಿವಾಗಲಿಲ್ಲ... ಲ್ಯಾಪ್ಟಾಪ್ ನ ಬಂದ್ ಮಾಡಿ ಮತ್ತೆ ಶುರು ಮಾಡಿದೆ.. ಸ್ವಲ್ಪ ಹೊತ್ತಾಯಿತು.
ಮತ್ತೆ ಅದೇ ಕಾಟ.. ಓಪನ್ ಆಗ್ತಾ ಇಲ್ಲ.. ಆ ಲಿಂಕ್ ಮೇಲೆ ಬೆರಳನ್ನು ಸವರಿ
"ಯಾಕಪ್ಪ ಏನಾಯಿತು" ಎಂದು ಕೇಳಿದೆ..
ಅಲ್ಲಿಯ ತನಕ ಬೆಳ್ಳಗಿದ್ದ ಆ ಲಿಂಕ್ ಅಚಾನಕ್ ಕೆಂಪಾಯಿತು.. ಗಾಬರಿಯಾದೆ..
"ಯಾಕೋ ಏನಾಯಿತು.. ಯಾಕೆ ಕೋಪ.. ಮೈಯೆಲ್ಲಾ ಕೆಂಪಾಗಿದೆ.. ಏನಾಯಿತು"
"ಲೋ ಶ್ರೀ. ಬ್ಲಾಗ್ ಅಂತ ನೀ ಬರೆಯೋಕೆ ಶುರುಮಾಡಿದ್ದೆ ನನ್ನ ಲಿಂಕ್ ಇಂದ.. ಟ್ರಿಪ್ಪಿಂಗ್ ಲೈಫ್ ಶುರುಮಾಡಿದ ಮೇಲೆ ತಾನೇ ಮಿಕ್ಕ ಏಳು ನನ್ನ ತಮ್ಮಂದಿರು ಬಂದದ್ದು.. ನೀ ಅವರನ್ನ ಮಾತ್ರ ಮಾತಾಡಿಸ್ತಿದ್ದೀಯ.. ನನ್ನನ್ನು ಮರೆತೇ ಬಿಟ್ಟಿದ್ದೀಯ.. ೨೦೧೪ ರಲ್ಲಿ ಏನೂ ಆಗಿರಬಹುದು.. ಅದನ್ನೇ ನೀ ಈಗಲೂ ಮನಸ್ಸಲ್ಲಿ ಇಟ್ಟುಕೊಂಡು ಸುಮ್ಮನಿರುವುದು ನ್ಯಾಯವೇ.. ೨೦೧೬ರಲ್ಲಿ ತಿರುಪತಿ ಪ್ರವಾಸದ ಬಗ್ಗೆ ಬರೆದ ಮೇಲೆ ಮತ್ತೆ ನನ್ನ ಕಡೆ ತಿರುಗಿಯೂ ನೋಡಿಲ್ಲ.. ಯಾಕೆ ನನ್ನ ಮೇಲೆ ಕೋಪವೇ, ಬೇಸರವೇ" ಟ್ರಿಪ್ಪಿಂಗ್ ಬ್ಲಾಗ್ ಮುಖ ಕೆಂಪಗೆ ಮಾಡಿಕೊಂಡೆ ಉತ್ತರಿಸಿತು..
"ಹೌದೇ.." ಎಂದು ಆ ಕೊಂಡಿಯನ್ನು ಒತ್ತಿದರೆ.. "ಅರೆ ಹೌದು ೨೦೧೫, ೨೦೧೬ ಪೂರ್ತಿ ಬಣ ಬಣಗುಡುತ್ತಿದೆ.. ಲೇಖನಗಳೇ ಇಲ್ಲ.. ಪ್ರವಾಸ ಆಗೊಮ್ಮೆ ಈಗೊಮ್ಮೆ ಇದ್ದರೂ.. ನಾ ಅಷ್ಟು ದಿನ ಖಾಲಿ ಬಿಡೋಲ್ಲ.. ಸರಿ ಆದದ್ದು ಆಯಿತು.. ಹೋದವರು ಒಳ್ಳೆಯವರೇ.. ಹೋಗಲಿ ಬಿಡು.. ನಿನ್ನ ಯಾತ್ರೆ ಮತ್ತೆ ಶುರುಮಾಡುತ್ತೇನೆ.. ಖಾಲಿ ಬಿಡೋಲ್ಲ.. ಇದು ನಿರ್ಧಾರ ಅಲ್ಲಾ.. ಬದಲಿಗೆ ಎಲ್ಲರನ್ನು ಸಂಭಾಳಿಸುವ ಒಂದು ಯತ್ನ.. "
ಕೆಂಪಗೆ ಕುಡಿಯುತ್ತಿದ್ದ ಮೊಗ.. ನಿಧಾನವಾಗಿ ಅರಳತೊಡಗಿತು.. "ಸರಿಯಪ್ಪ.. ನಿನ್ನ ಮೇಲೆ ನಂಬಿಕೆ ಇದೆ.. ಶುರುಮಾಡು"
"ಧನ್ಯವಾದಗಳು ಕಣೋ.. ನೋಡು ಒಂದು ಲೇಖನ ನಿನಗೋಸ್ಕರ.. ಓದು ಸಂತೋಷ ಪಡು ತೃಪ್ತಿ ಪಡು"
"ವೈಟಿಂಗ್ ವೈಟಿಂಗ್" ಎಂದಿತು ಬ್ಲಾಗ್ ಲಿಂಕ್..
ಕಥೆ ಮೂಡಲು ಶುರುವಾಯಿತು
*********
೨೦೦೬ರ ಕಥೆ..
ದಸರಾದಲ್ಲಿ ಆಫೀಸಿಗೆ ಒಂದು ವಾರ ವಿರಾಮ ನೀಡಿದ್ದರು.. ಸುಮ್ಮನೆ ಮನೆಯಲ್ಲಿ ಕಳೆಯೋಕೆ ಇಷ್ಟವಿರಲಿಲ್ಲ.. ಸರಿ ಎಲ್ಲಿಗೆ ಹೋಗೋದು ಎಂದು ಯೋಚಿಸುತ್ತಿದ್ದಾಗ ಹೊಳೆದದ್ದು.. ನನ್ನ ಬಾಲ್ಯದ ಕನಸಾದ ಕನ್ಯಾಕುಮಾರಿಗೆ ಹೋಗೋದು ಅಂತ. ಪ್ಯಾಕೇಜ್ ಟ್ರಿಪ್ಪಿಗೆ ಹಣ ಕಟ್ಟಿ ಬಂದಾಯ್ತು... ಮನದಲ್ಲಿ ಏಳುತ್ತಿದ್ದ ಅಲೆಗಳು ಹಿಂದೂ ಮಹಾಸಾಗರದಲ್ಲಿ ಏಳುತ್ತಿದ್ದ ತರಂಗಗಳಿಗಿಂತ ದೊಡ್ಡದಾಗಿತ್ತು. ಮಧುರೈ, ರಾಮೇಶ್ವರಂ ಮತ್ತು ಕನ್ಯಾಕುಮಾರಿ ತ್ರಿವಳಿ ಊರುಗಳ ಭೇಟಿ.
ರಾತ್ರಿ ಹೊರಟ ಬಸ್ ನಮ್ಮನ್ನು ಕರೆತಂದಿದ್ದು ಮಧುರೈ ದೇವಸ್ಥಾನಕ್ಕೆ. ಉತ್ತಮ ಹೋಟೆಲಿನ ಕೋಣೆಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಸಿಕ್ಕ ಮೇಲೆ, ಸ್ನಾನ ಮಾಡಿ.. ಹೊರಗೆ ಬಂದೆವು. ತಮಿಳುನಾಡಿಗೆ ಅದು ಎರಡನೇ ಭೇಟಿ.. ಊಟ ಉಪಚಾರಗಳ ಬಗ್ಗೆ ಅಷ್ಟೊಂದು ಮಾಹಿತಿ ಇರಲಿಲ್ಲ.
ಪ್ಯಾಕೇಜ್ ಟ್ರಿಪ್ನವನು ನಾಳೆ ಬೆಳಿಗ್ಗೆ ಎಂಟರ ಹೊತ್ತಿಗೆ ಹೋಟೆಲ್ ಕೋಣೆ ಖಾಲಿ ಮಾಡಿ ಇಲ್ಲಿಯೇ ನಿಂತಿರಿ, ನಮ್ಮ ಬಸ್ ಬರುತ್ತೆ ರಾಮೇಶ್ವರಕ್ಕೆ ಕರೆದುಕೊಂಡು ಹೋಗುತ್ತೀವಿ ಎಂದು ಹೇಳಿದ್ದ ಹಾಗಾಗಿ ನಮಗೆ ಬೇಕಾದಷ್ಟು ಸಮಯವಿತ್ತು.
ಮೀನಾಕ್ಷಿ ದೇವಸ್ಥಾನಕ್ಕೆ ಹೋಗಬೇಕಿತ್ತು. ಮೊದಲು ತಿಂಡಿ ತಿನ್ನೋಣ ಎಂದು ಅಕ್ಕ ಪಕ್ಕದ ಹೋಟೆಲಿನಲ್ಲಿ ಕಣ್ಣಿಗೆ ಕಂಡದ್ದು ಮಾರ್ಬಲ್ ಬಿಳುಪಿನ ಇಡ್ಲಿ. ಸರಿ ಹೊಟ್ಟೆಗೆ ಸೇರಿದಷ್ಟು ಇಡ್ಲಿ ತಿಂದು ಹೊರಗೆ ಬಂದೆವು.
ಹೋಟೆಲಿನವನ ಹತ್ತಿರ ಮೀನಾಕ್ಷಿ ದೇವಸ್ಥಾನಕ್ಕೆ ಹೋಗಬೇಕು ಹೇಗೆ ಹೋಗೋದು ಅಂತ ಕನ್ನಡಲ್ಲಿಯೇ ಕೇಳಿದೆ.. ಅವ ಒಬ್ಬ ಸೈಕಲ್ ರಿಕ್ಷನವನನ್ನು ಕರೆದು ದೇವಸ್ಥಾನಕ್ಕೆ ಕರೆದುಕೊಂಡು ಹೋಗು ಅಂತ ತಮಿಳಿನಲ್ಲಿ ಹೇಳಿದ.
ನಮಗೂ ಒಂದು ಒಂದು ಸಂಭ್ರಮ.. ಟಾಂಗಾ ಶೈಲಿಯ ಸೈಕಲ್ ರಿಕ್ಷಾದಲ್ಲಿ ಹೋಗೋದು. ಒಂದು ಹತ್ತು ನಿಮಿಷ ಪಾಪ ಕಷ್ಟ ಪಟ್ಟು ಸೈಕಲ್ ತುಳಿದು ದೇವಸ್ಥಾನಕ್ಕೆ ಕರೆದುಕೊಂಡು ಬಂದ.
ಎಲ್ಲೆಲ್ಲಿ ನೋಡಿದರು ಬರಿ ಗೋಪುರಗಳೇ ಕಾಣುತ್ತಿದ್ದವು. ತಮಿಳಿನಲ್ಲಿ ಒಬ್ಬ ಹೇಳಿದ.. ನನಗೆ ಅರ್ಥವಾಗಿದ್ದು ಇಷ್ಟು "ಸರ್ ನೀವು ಹೋದ ಕಡೆಯಲ್ಲಿಯೇ ಬರೋದು ಕಷ್ಟ.. ನೀವು ಯಾವ ಬಾಗಿಲಿನಿಂದಾದರೂ ಸರಿ ಹೊರಗೆ ಬಂದು.. ನಿಮ್ಮ ಹೋಟೆಲ್ ಕಾರ್ಡ್ ತೋರಿಸಿ ಅಲ್ಲಿಗೆ ಬಿಡುತ್ತಾರೆ. ಗಾಬರಿ ಮಾಡಿಕೊಳ್ಳಬೇಡಿ.. " ಅವನ ಸಲಹೆ ಉತ್ತಮವಾಗಿತ್ತು ಮತ್ತು ಅದನ್ನೇ ಕುರುಡು ರೀತಿಯಲ್ಲಿ ಅನುಸರಿಸಿದ್ದೆವು.
ದಸರಾ ಸಮಯ... ಮೀನಾಕ್ಷಿ ದೇವಾಲಯ ಗಿಜಿ ಗಿಜಿಗುಡುತಿತ್ತು. ಮೀನಾಕ್ಷಿ ದೇವಿಯ ದರ್ಶನವಾಗಲಿಲ್ಲ.. ಆದರೆ ಸುಂದರೇಶ್ವರನ ದರ್ಶನ ಮಾಡಿ.. ನಮ್ಮ ಅರ್ಜಿಯನ್ನು ನಿನ್ನ ಮಡದಿಗೂ ತಲುಪಿಸಿಬಿಡಪ್ಪಾ ಎಂದು ಕೋರಿಕೊಂಡು.. ಅಲ್ಲೇ ಸ್ವಲ್ಪ ಹೊತ್ತು ಧ್ಯಾನ ಮತ್ತು ಕ್ಯಾಮೆರಾಗೆ ಸ್ವಲ್ಪ ಕೆಲಸ ಕೊಟ್ಟೆ..
ಮಧ್ಯಾನ್ಹ ಊಟ ಮಾಡಿ.. ಸ್ವಲ್ಪ ಹೊತ್ತು ಮಲಗಿದ್ದೆವು.. ಸಂಜೆ ಎದ್ದು ಗಾಂಧಿ ಸ್ಮಾರಕಕ್ಕೆ ಬಂದೆವು. ಗಾಂಧೀಜಿಯ ರಕ್ತ ಸಿಕ್ತ ಬಟ್ಟೆಯ ಒಂದು ತುಣುಕನ್ನು ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು.. ಅದನ್ನೆಲ್ಲ ಒಂದು ಸುತ್ತಿ ನೋಡಿ ಬಂದು.. ಅದರ ಪಕ್ಕದಲ್ಲಿಯೇ ಶ್ರೀನಿವಾಸನ ದೇವಾಲಯವಿತ್ತು, ಅಲ್ಲಿಂದ ಊರ ಹೊರಗೆ ಇನ್ನೊಂದು ಶ್ರೀನಿವಾಸನ ದೇವಾಲಯ.. ಅದು ತುಂಬಾ ಇಷ್ಟವಾಯಿತು..
ನಮ್ಮ ಭಕ್ತಿ ಪೂರಿತ ಅರ್ಜಿಯನ್ನು ತಲುಪಿಸಿ ಹೋಟೆಲಿಗೆ ಬಂದಾಗ ಒಂಭತ್ತಾಗಿತ್ತು. ಮಧ್ಯದಲ್ಲಿ ಊಟ ಮಾಡಲು ಹೋಟೆಲಿಗೆ ಹೋದರೆ.. ಊಟ ಸಿಗೋಲ್ಲ ಇಡ್ಲಿ, ಪರೋಟ ಅದು ಇದು ಎಂದ. ಅನ್ನವಿಲ್ಲದೆ ರಾತ್ರಿ ಮಲಗೋದು ಕಷ್ಟ ನನಗೆ.. ಮೊಸರನ್ನ ಸಿಕ್ಕರೂ ಸರಿ ಅಂತ ಪರೋಟ ಜೊತೆಯಲ್ಲಿ ತಿಂದು.. ಬೆಚ್ಚನೆ ಮಲಗಿದೆವು.
ಮರುದಿನ.. ಮಿನಿ ಬಸ್ ರಾಮೇಶ್ವರಕ್ಕೆ ಹೋರಡಲು ಸಿದ್ಧವಾಗಿತ್ತು.. ಚಿಕ್ಕ ಗಾಡಿ, ಪುಟ್ಟ ಸೀಟ್.. ಕಷ್ಟವಾಗಿತ್ತು.. ಆದರೆ ಪ್ರಯಾಣ / ಪ್ರವಾಸ ಎಂದರೆ ಅನುಕೂಲತೆಗಳನ್ನು ಹೊರಗೆ ಬಿಸಾಕಿ ಪ್ರವಾಸಕ್ಕೆ ಹೋಗ ಬೇಕು ಎನ್ನುವ ನೀತಿ ತಿಳಿದಿತ್ತು.. ಆದ್ದರಿಂದ "ತೊಂದರೆ" ತೊಂದರೆಯಾಗಿರಲಿಲ್ಲ.
ರಸ್ತೆಗಳು ಕರ್ರಗೆ.. ಮತ್ತು ಅದರ ಮಧ್ಯದಲ್ಲಿ ಬಿಳಿ ಪಟ್ಟೆಗಳು ಸುಂದರವಾಗಿ ಕಾಣುತ್ತಿದ್ದವು. ೧೮೦ ಕಿಮಿಗಳು ರಿವ್ವನೆ ಹಾರಿ ಹೋಗುತ್ತಿತ್ತು. ಕಡಲ ತಡಿಯ ಗಾಳಿ.. ಸಮುದ್ರದ ಮಟ್ಟ ೦ ಅಡಿ ಈ ಫಲಕ ನೋಡುವುದೇ ಒಂದು ಖುಷಿ. ಕಾರಣ ಬೆಟ್ಟ ಗುಡ್ಡಗಳನ್ನು ಹತ್ತಿ ನಿಂತಾಗ ನೀವೀಗ ಸಮುದ್ರಮಟ್ಟದಿಂದ ಇಷ್ಟು ಅಡಿ ಮೇಲಿದ್ದೀರಾ ಎಂಬ ಫಲಕ ನೋಡಿ ನೋಡಿ ಬೇಜಾರಾಗಿತ್ತು :-)
ಪಾಂಬನ್ ಸೇತುವೆ ನೋಡಿ ಎಂದು ಗೈಡ್ ಕಿರುಚಿದ.. ಸಮುದ್ರ ತೀರದ ಗಾಳಿಗೆ ಒಂದು ಚೂರು ಹತ್ತಿದ್ದ ನಿದ್ದೆ ಮತ್ತೆ ಹಾರಿ ಹೋಯಿತು.
" ... ತಮಿಳಾ .. ?"
ನನ್ನ ಬಣ್ಣ ನೋಡಿ ಈ ಪ್ರಶ್ನೆ ಕೇಳಿದ್ದ.
ಎದೆ ತಟ್ಟಿಕೊಂಡು ಹೇಳಿದೆ "... ಕನ್ನಡ... "
"ಬನ್ನಿ ಸರ್.. ನಿಮಗಿಲ್ಲಿ ೨೨ ಬಾವಿಗಳಲ್ಲಿ ಸ್ನಾನ ಮಾಡಿಸುತ್ತೇನೆ.. ರಾಮೇಶ್ವರ ದೇವರ ಪ್ರಸಾದ.. ಇವಿಷ್ಟು ಸೇರಿ ಇಷ್ಟು ದುಡ್ಡು"..
ಚೌಕಾಸಿ ಮಾಡಲಿಲ್ಲ.. ದುಡ್ಡು ತೆಗೆದೇ..
"ಈಗ ಬೇಡ ಪೂರ್ತಿ ಮುಗಿದ ಮೇಲೆ ತೆಗೆದುಕೊಳ್ಳುತ್ತೇನೆ'
"ಮಗುವಿಗೆ ಬಾವಿ ನೀರು ಹಾಕಬೇಕು" ಎಂದೇ..
"ಹೌದು ಸರ್.. ಮಗುವಿಗೆ ವಿಶೇಷ ಆಶೀರ್ವಾದ ಬೇಕು.. ಖಂಡಿತ ನಾ ನೋಡಿಕೊಳ್ಳುತ್ತೇನೆ.. "
ತಲೆ ಅಲ್ಲಾಡಿಸಿದೆವು..
ಆವಾ ಹೇಳುತ್ತಿದ್ದ ಮಾಹಿತಿಗಳು ಇಷ್ಟವಾಗುತ್ತಿದ್ದವು..
"ಸರ್ ಪ್ರತಿ ಬಾವಿಯ ಹತ್ತಿರ ಕೆಳಗೆ ಕೂತುಕೊಳ್ಳಿ.. ಮೊದಲು ನಾ ಸ್ವಲ್ಪ ನೀರು ಕೊಡುತ್ತೇನೆ ಅದನ್ನು ಕುಡಿಯಿರಿ.. ರುಚಿ ನೋಡಿರಿ ಆಮೇಲೆ ನೀರು ನಿಮ್ಮ ಮೇಲೆ ಸರಿಯಾಗಿ ಬರುವ ಹಾಗೆ ಬಕೆಟ್ ನಲ್ಲಿ ಹಾಕುತ್ತೀನಿ"
ಹೇಳಿದ ಹಾಗೆ ಮಾಡಿದೆವು..
ಮಗುವಿಗೆ "ಚಿನ್ನ ಪಾಪ ಚಿನ್ನ ಪಾಪ" ಅಂತ ಒಂದೆರೆಡು ಬಕೆಟ್ ಹೆಚ್ಚಿಗೆ ನೀರು ಹಾಕಿದ..
ಮೊದಲಿಗೆ ಅಳುತ್ತಿದ್ದ ಮಗಳು .. ನಂತರ ಅದರ ಸುಖ ಅನುಭವಿಸತೊಡಗಿದಳು.. ಅಪ್ಪ ಅಪ್ಪ ನಂಗೂ ನಂಗೂ ಅಂತ ನಮ್ಮ ಮೇಲೆ ಬಕೆಟ್ ನಲ್ಲಿ ನೀರು ಹಾಕುತ್ತಿದ್ದಾಗ.. ನಮ್ಮ ಜೊತೆಯಲ್ಲಿ ಅವಳು ನುಗ್ಗುತ್ತಿದ್ದಳು..
ಅದ್ಭುತ ಪ್ರಕೃತಿ ಸೃಷ್ಠಿ. .. ಸಮುದ್ರ ಮಟ್ಟದಲ್ಲಿ ಇದ್ದ ನೆಲದಿಂದ ಬಾವಿಯ ನೀರು ಒಂದೊಂದು ಬಗೆಯ ರುಚಿ.. ಒಂದು ಕಡು ಉಪ್ಪು, ಇನ್ನೊಂದು ತುಸು ಉಪ್ಪು, ರುಚಿಯಿಲ್ಲದ ನೀರು.. ಸಿಹಿ, ಹಿಮದ ನೀರಿನಂತೆ ತಣ್ಣಗೆ.. ಹೀಗೆ ಒಂದೇ ಅಂಗಣದಲ್ಲಿ ತುಸುವೇ ಅಡಿಗಳ ಅಂತರದಲ್ಲಿ ಇರುವ ಬಾಯಿಯಲ್ಲಿ ಬಗೆ ಬಗೆಯ ಸ್ವಾದದ ನೀರು.. ದೈವನ ಲೀಲೆಯೇ ಲೀಲೆ.
ರಾಮೇಶ್ವರನ ದರ್ಶನಕ್ಕೆ ಬರುವ ಮುನ್ನ.. ಒಂದು ಛಾವಣಿಯಲ್ಲಿರುವ ಬಸವನ ಚಿತ್ರವನ್ನು ತೋರಿಸಿದರು. ನೀವು ಎಲ್ಲಿಂದಲೇ ನೋಡಿದರು ಆ ಬಸವ ನಿಮ್ಮನ್ನೇ ನೋಡುತ್ತಿರುತ್ತದೆ, ಹೌದು ನಿಜವಾಗಿಯೂ ಅದು ಹಾಗೆ ಇತ್ತು. ಛಾಯಾಚಿತ್ರಣ ನಿಷೇಧ ಇದ್ದದರಿಂದ ಚಿತ್ರಣ ಮಾಡಲಿಲ್ಲ.
ಸಾಲು ಸಾಲು ಕಂಬಗಳ ಹಜಾರಕ್ಕೆ ಬಂದೆವು .. "ಸರ್ ತಮಿಳು ನಟಿ ರೇವತಿಯವರ ಒಂದು ಚಿತ್ರದ ನೃತ್ಯದ ಚಿತ್ರೀಕರಣ ಇಲ್ಲೇ ನೆಡೆದಿದ್ದು.. " ಅದ್ಭುತ ಸಾಲು ಸಾಲು ಕಂಭಗಳ ಆ ದೃಶ್ಯವನ್ನು ನೋಡುವುದೇ ಒಂದು ಅನುಭವ.. ದಕ್ಷಿಣ ಭಾರತದ ದೇವಾಲಯಗಳ ವಾಸ್ತು ಶಿಲ್ಪಿ ಅದ್ಭುತ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಇದು.
ರಾಮೇಶ್ವರನ ದರ್ಶನ ಮಾಡಿ... ಪ್ರಸಾದ ತೆಗೆದುಕೊಂಡು.. ಆ ಗೈಡ್ ಗೆ ಸಲ್ಲಬೇಕಿದ್ದ ಸಂಭಾವನೆ ಮತ್ತು ತುಸು ಹೆಚ್ಚಿಗೆ ಇನ್ನೊಂದು ನೂರು ಸೇರಿಸಿ ಕೊಟ್ಟೆ.. ಅವನು ಕುಶ್ ನಾವು ಕುಶ್....
ಮನಸ್ಸು ಹಾರಾಡುತ್ತಿತ್ತು.. ಶ್ರೀ ರಾಮ ಮತ್ತು ಸೇನೆ ನೆಡೆದಾಡಿದ್ದ ಜಾಗವಿದು. ರಾಮ ಸೇತುವೆ ಕಟ್ಟಿದ ತಾಣವಿದು.. ಆದರೆ ಸಮಯದ ಅಭಾವವಿದ್ದ ಕಾರಣ ಧನುಷ್ಕೋಟಿ .. ರಾಮ ಸೇತುವೆ ಶುರು ಮಾಡಿದ್ದ ತಾಣಕ್ಕೆ ಹೋಗಲು ಆಗಲಿಲ್ಲ. ಹನುಮಂತ ಸಾಗೋರೋಲ್ಲಂಘನ ಮಾಡಲು ವಿಶ್ರಮಿಸಿದ್ದ ತಾಣ ಎಂದು ಒಂದು ದೇಗುಲವನ್ನು ತೋರಿಸಿದರು. ನಮ್ಮ ನಮನಗಳನ್ನು ಸಲ್ಲಿಸಿ ಒಂದೆರಡು ಚಿತ್ರಗಳನ್ನು ತೆಗೆದು ಹೊರಟೆವು.
ರಾಮ ಸೇತುವೆ ಕಟ್ಟುವಾಗ ಕಲ್ಲಿನ ಬಂಡೆಗಳು ನೀರಲ್ಲಿ ಮುಳುಗುವುದಿಲ್ಲ ಎಂದು ಪುರಾಣದ ಕಥೆಯಲ್ಲಿ ಕೇಳಿದ್ದೆವು. ಅದನ್ನು ಕಣ್ಣಾರೆ ನೋಡುವ ಅವಕಾಶ. ಲಕ್ಷ್ಮಣನ ದೇವಸ್ಥಾನದಲ್ಲಿ ಕಲ್ಲುಗಳನ್ನು, ಬಂಡೆಗಳನ್ನು ನೀರಿನಲ್ಲಿ ಮುಳುಗಿಸಿದ್ದರು, ನಾವೇ ಕೈಯಾರೆ ಅದನ್ನು ಒಳಗೆ ಮುಳುಗಿಸಿನೋಡಿದೆವು ಮರುಕ್ಷಣವೇ ನೀರಿನಿಂದ ಮೇಲಕ್ಕೆ ಎದ್ದು ಬರುತ್ತಿತ್ತು ಹಠ ಮಾಡುವ ಮಗುವಿನ ತರಹ.. :-)
ರಾಮೇಶ್ವರಂ ಗೆ ಒಂದು ನಮನ ಸಲ್ಲಿಸಿ ಹೊರಟೆವು.. ನನ್ನ ಬಾಲ್ಯದ ಕನಸಿನ ತಾಣಕ್ಕೆ..
ಪುಟ್ಟ ಬಸ್.. ತಣ್ಣಗೆ ಬೀಸುತ್ತಿದ್ದ ಗಾಳಿ.. ಸೊಗಸಾದ ಊಟ ಮಾಡಿದ್ದ ದೇಹ.. ಸಣ್ಣಗೆ ನಿದ್ದೆಗೆ ಜಾರಿದೆವು.. ಬೆಳಗಿನ ಜಾವ ಸುಮಾರು ಮೂರು ಘಂಟೆ ಇರಬಹುದು.. ಅಚಾನಕ್ ಎಚ್ಚರವಾಯಿತು.. ಕಣ್ಣು ಬಿಟ್ಟು ನೋಡಿದೆ.. ಹುಣ್ಣಿಮೆ ಚಂದಿರ ಭುವಿಯನ್ನು ಬೆಳಗುತ್ತಿದ್ದ.. ರಸ್ತೆಯ ಎರಡು ಬದಿಯಲ್ಲಿ ಕಣ್ಣಿನ ನೋಟ ಹೋದಷ್ಟು ದೂರ ಗಾಳಿ ಪಂಕಗಳು ಕಾಣುತ್ತಿದ್ದವು. ಬೆಂಗಳೂರಿನಿಂದ ಹೊರಗೆ ಹೋದರೆ.. ಅಲ್ಲೊಂದು ಇಲ್ಲೊಂದು ಕಾಣುವ ಈ ಪಂಕಗಳು ಇಲ್ಲಿ ಎಣಿಸಲಾರದಷ್ಟು ಇದ್ದವು.. ಅದನ್ನೇ ನೋಡುತ್ತಾ ಕಣ್ಣುಗಳು ಭಾರವಾಯಿತು.. ಮತ್ತೆ ಯಾವಾಗೋ ನಿದ್ದೆ ಹತ್ತಿತ್ತು..
ಬಸ್ ಗಕ್ಕನೆ ನಿಂತಿತು.. ಚಳಿಗಾಳಿ ರಪ್ಪನೆ ಮುಖಕ್ಕೆ ರಾಚಿತು.. ತುಸು ಬೆಳಕು ತುಸು ಕತ್ತಲೆ.. ನನ್ನ ಹೃದಯವನ್ನು ಮುಟ್ಟಿ ನೋಡಿಕೊಂಡೆ.. ೭೨ಕ್ಕಿಂತ ಜಾಸ್ತಿ ಇತ್ತು.. ಆಗ ಅರಿವಾಯಿತು.. ನನ್ನ ಕನಸು ನನಸಾಗುತ್ತಿದೆ.. ಬಸ್ಸಿನವ ಹೇಳಿದ.. ನಿಮ್ಮ ಹೋಟೆಲ್ ಕೋಣೆಗೆ ಹೋಗಿ ಬೇಗ ಬೇಗ ಸ್ನಾನ ಮಾಡಿ.. ಸೂರ್ಯ ಉದಯಿಸುತ್ತಾನೆ.. ಅಲ್ಲಿಗೆ ಹೋಗಿ ನೋಡಬೇಕು..
ನನ್ನ ಜೀವನದ ಮೊದಲ ಕಡಲತಡಿಯ ಸೂರ್ಯೋದಯದ ದೃಶ್ಯ ಕಣ್ಣು ತುಂಬಿಕೊಳ್ಳಲು ಮನಸ್ಸು ಮತ್ತು ಕ್ಯಾಮೆರಾ ಕಾಯುತ್ತಿತ್ತು. ನನ್ನ ಮಗಳು ಕೂಡ ಆ ಪುಟ್ಟ ವಯಸ್ಸಿಗೆ ನನ್ನ ಭಾವನೆ ಅರ್ಥವಾಗಿತ್ತೋ ಏನೋ.. ಹಠ ಮಾಡದೆ ಬೇಗನೆ ಸ್ನಾನ ಮಾಡಿ ಸಿದ್ಧವಾಯಿತು.
ಎಲ್ಲರೂ.. ಕಡಲ ತೀರಕ್ಕೆ ಬಂದಾಗ.. ಭಾಸ್ಕರ.. ಭಾರತ ಭೂಶಿರವನ್ನು ಬೆಳಗಲು... ಕನ್ಯಾಕುಮಾರಿ ತಾಯಿಯ ನತ್ತನ್ನು ಇನ್ನಷ್ಟು ಫಳ ಫಳ ಹೊಳೆಯುವಂತೆ ಮಾಡಲು ಸಿದ್ಧನಾಗುತ್ತಿದ್ದ. ಆಗ ನನ್ನ ಹತ್ತಿರ ಇದ್ದದ್ದು ರೀಲ್ ಕ್ಯಾಮೆರಾ. ಅಲ್ಲಿಗೆ ಸುಮಾರು ಮಂದಿ ಡಿಜಿಟಲ್ ಕ್ಯಾಮೆರಾ ತಗೊಂಡು ತಾವು ತೆಗೆದಿದ್ದ ಚಿತ್ರವನ್ನು ಅಲ್ಲಿಯೇ ನೋಡುತ್ತಿದ್ದರು.. ಆಗಲೇ ನನ್ನ ಮನದಲ್ಲಿ ಹುಟ್ಟಿದ ಆಸೆ. .ನನ್ನ ಹತ್ತಿರವೂ ಡಿಜಿಟಲ್ ಕ್ಯಾಮೆರಾ ಬೇಕು.. ಮುಂದಿನ ದಸರೆಗೆ ನನ್ನ ಹತ್ತಿರ ಆ ಡಿಜಿಟಲ್ ಪುಟ್ಟ ಕ್ಯಾಮೆರಾ ಬಂದೆ ಬಿಟ್ಟಿತು.
ಅದ್ಭುತ ಸೌಂದರ್ಯ ರಾಶಿ ಈ ಸೂರ್ಯೋದಯ. ಕಣ್ಣು ಮನಸ್ಸು ತುಂಬಿ ಬಂತು.. ಎದುರಿಗೆ ಕನ್ಯಾಕುಮಾರಿಯ ವಿವೇಕಾನಂದ ಧ್ಯಾನ ಮಂದಿರ.. ಅದನ್ನೇ ಅಲ್ಲವೇ ನೋಡಲು ಇಷ್ಟು ವರ್ಷಗಳು ಕಾದಿದ್ದು.. ಮನಸ್ಸಿಗೆ ಏನೋ ಆನಂದ..
"ಬನ್ನಿ ಬನ್ನಿ.. ಬೋಟ್ ಸಿದ್ಧವಾಗಿದೆ.. ಟಿಕೆಟ್ ಪಡೆದು ಬೋಟ್ ಹತ್ತಿ" ಸೂಚನೆ ಹಿಂದಿನಿಂದ ಬರುತ್ತಿತ್ತು.. ಬೇಗ ಬೇಗನೆ ಒಂದಷ್ಟು ಫೋಟೋ ತೆಗೆದು.. ಬಡಿಕೊಳ್ಳುತ್ತಿದ್ದ ಹೃದಯಕ್ಕೆ ಇನ್ನೊಂದು ಅರ್ಧ ಘಂಟೆ ಕಣೋ ಎಂದು ಸಮಾಧಾನ ಹೇಳುತ್ತಾ... ಬೋಟಿನೆಡೆಗೆ ಅಕ್ಷರಶಃ ಓಡಿದೆವು..
ಟಿಕೆಟ್ ಪಡೆದು.. ಕಡಲಿನ ಅಬ್ಬರದ ಅಲೆಗಳ ಮೇಲೆ ಹೊರಟೆ ಬಿಟ್ಟಿತು ನನಸಾಗುವತ್ತ ನನ್ನ ಬಾಲ್ಯದ ಕನಸಿನ ಸವಾರಿ...
ಕಣ್ಣಲ್ಲಿ ಎದುರಿಗೆ ಕಾಣುತ್ತಿದ್ದ ಅದ್ಭುತ ವಿನ್ಯಾಸದ ಕನ್ಯಾಕುಮಾರಿಯ ವಿವೇಕಾನಂದ ಧ್ಯಾನಮಂದಿರ.. ಮನದಲ್ಲಿ ನನಗೆ ಬಲು ಇಷ್ಟವಾಗಿದ್ದ "ಭಾರತ ಭೂಶಿರ ಮಂದಿರ ಸುಂದರಿ" ಮಾನಸ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರ ಅದ್ಭುತ ಚಿತ್ರ "ಉಪಾಸನೆ"ಯ ಹಾಡು..
ಅಲ್ಲಿಗೆ ಕಾಲಿಟ್ಟೊಡನೆ ಏನೋ ಪುಳಕ.. ಮನಸ್ಸಿಗೆ ಹಾಯ್ ಎನ್ನಿಸುವಂತಹ ಅನುಭವ..
ನಮ್ಮೊಡನೆ ಬರುತ್ತಿದ್ದ ಒಂದು ಕರುನಾಡಿನ ಜೋಡಿ.. "ರೀ ಇಲ್ಲೇ ಅಲ್ವೇನ್ರಿ ಆರತಿ ಹಾಡಿದ ಹಾಡು ಶೂಟಿಂಗ್ ಮಾಡಿದ್ದು" ಗಂಡ ತಲೆ ಕೆರೆದುಕೊಳ್ಳುತ್ತಿದ್ದ... "ಹೌದು ಅನ್ಸುತ್ತೆ ಕಣೆ.. ಹಾಡು ನೆನಪಿಗೆ ಬರುತ್ತಿಲ್ಲ" ಎಂದು ನನ್ನ ಮುಖ ನೋಡಿದ.. ನಾ ಸುಮ್ಮನೆ ಒಂದು ಹಲ್ಲಿನ ಪೋಸ್ ಕೊಟ್ಟೆ.. ಆ ಜೋಡಿಗೆ ಕೇಳುವಂತೆ "ಸವಿತಾ.. ಇಲ್ಲೇ ಕಣೆ.. ಭಾರತ ಭೂಶಿರ ಮಂದಿರ ಸುಂದರಿ" ಹಾಡು ಚಿತ್ರೀಕರಣವಾಗಿದ್ದು.. ನೋಡು ಅಲ್ಲಿಯೇ ಆರತಿ ವೀಣೆಯನ್ನು ಎತ್ತಿಕೊಂಡು ದೇವಸ್ಥಾನದ ಒಳಗೆ ಹೋಗುವುದು.. ಆಗಲೇ ಉಪಾಸನೆ ಅಂತ ಚಿತ್ರದ ಅಂತ್ಯ ತೋರಿಸೋದು.. ಇಲ್ಲೇ ಕಣೆ.. ಆರತಿಯ ಗುರುಗಳು ಕೂತಿದ್ದು, ಇಲ್ಲೇ ಕಣೆ ಆರತಿಯನ್ನು ಸಮಾಧಾನ ಮಾಡಲು ಎಲ್ಲರೂ ಪ್ರಯತ್ನ ಮಾಡೋದು.. " ಹೀಗೆ ಉಪಾಸನೆಯ ಅಂತಿಮ ದೃಶ್ಯವನ್ನು ಹಾಗೆ ಕಣ್ಣ ಮುಂದೆ ತಂದಿಟ್ಟಿದ್ದೆ..
ಆ ಜೋಡಿಗೆ ಬೇಕಾದ ಮಾಹಿತಿ ಸಿಕ್ಕಿತು.. ಹೆಂಡತಿಗೆ ತನಗೆ ಬೇಕಿದ್ದ ಮಾಹಿತಿ ಸಿಕ್ಕ ಖುಷಿ.. ಗಂಡನಿಗೆ ತನ್ನ ಮರ್ಯಾದೆ ಉಳಿಸಿದ ನನಗೆ ಒಂದು ತುಸು ನಗೆ ಬೀರಿ ಕೈ ಬೀಸಿ ದೇವಸ್ಥಾನಕ್ಕೆ ಹೊರಟರು.. ನನಗೆ ಒಂದು ಬಗೆಯ ಸಂತೋಷ.. ಅರೆ ನನಗಿಷ್ಟವಾದ ತಾಣ, ನನಗಿಷ್ಟವಾದ ಹಾಡು, ನನಗಿಷ್ಟವಾದ ಚಿತ್ರ.. ನನಗಿಷ್ಟವಾದ ನಿರ್ದೇಶಕ.. ಇದರ ಬಗ್ಗೆ ಯಾರಿಗಾದರೂ ಹೇಳಬೇಕೆಂದರೆ.. .. :-)
ಒಂದು ಚೂರು ಜಾಗ ಬಿಡದ ಹಾಗೆ.. ಎಲ್ಲವನ್ನು ನೋಡುತ್ತಾ ಬಂದೆ.. ಕಣ್ಣ್ ಮನಸ್ಸು ತಣಿಯುತ್ತಲೇ ಇಲ್ಲ.. ಧ್ಯಾನಮಂದಿರಕ್ಕೆ ಹೋಗಿ ಸ್ವಲ್ಪ ಹೊತ್ತು ಧ್ಯಾನ ಮಾಡಿದೆ.. ಹೊರಕ್ಕೆ ಬಂದರೆ ಕಡಲಿನ ಅಲೆಗಳ ಅಬ್ಬರ.. ಆದರೆ ಆ ಧ್ಯಾನಮಂದಿರಲದಲ್ಲಿ ನಮ್ಮ ಎದೆ ಬಡಿತವೇ ನಮಗೆ ಕೇಳುಸುತ್ತೇನೋ ಅನ್ನಿಸುವಷ್ಟು ನಿಶ್ಯಬ್ಧ..
ಇಷ್ಟವಿಲ್ಲದೆ ಹೋದರು.. ಬೆಂಗಳೂರಿಗೆ ಬರಲೇಬೇಕಿತ್ತು.. ಜೊತೆಗೆ ಮುಂದಿನ ಕಾರ್ಯಕ್ರಮದ ಪ್ರಕಾರ ಸುಚಿಂದ್ರಂ ದೇವಸ್ಥಾನಕ್ಕೆ ಭೇಟಿ..
ಆಗಾಧವಾಗಿದ್ದ ಹನುಮಂತನ ಮೂರ್ತಿ ಅಬ್ಬಬ್ಬಾ ಎನ್ನಿಸುತ್ತಿತ್ತು.. ಆ ದೇವಾಲಯದ ವಿನ್ಯಾಸವೂ ಸುಂದರವಾಗಿತ್ತು. ತಮಿಳ್, ಮಲಯಾಳಂ, ಹಿಂದಿ, ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಆ ದೇವಾಲಯದ ವಿಶೇಷಗಳನ್ನು ಹೇಳುತ್ತಿದ್ದದು ವಿಶೇಷವಾಗಿತ್ತು. ನವಗ್ರಹಗಳು ಛಾವಣಿಯಲ್ಲಿ ನೆಲೆ ನಿಂತದ್ದು ವಿಶೇಷ ಇಲ್ಲಿ.
ಸುಂದರ ದೇವಾಲಯಕ್ಕೆ ನಮಸ್ಕಾರ ಸಲ್ಲಿಸಿ.. ನಮ್ಮ ಹರಕೆಗಳನ್ನು ಕಾಣಿಕೆಗಳನ್ನು ಸಲ್ಲಿಸಿ.. ಬೇಡವೆಂದರೂ.. ವಿಧಿಯಿಲ್ಲದೇ ಬೆಂಗಳೂರಿನ ಕಡೆಗೆ ಪಯಣ ನೆಡೆಸಿತ್ತು.
ಈ ಪ್ರವಾಸಕ್ಕೆ ಸುಮಾರು ಹತ್ತು ವರ್ಷಗಳ ಇತಿಹಾಸವಿದೆ.. ನನ್ನ ಸ್ನೇಹಿತೆ ಕಂ ಮಗಳು ಶೀತಲ್ ಹುಟ್ಟಿದ ದಿನವಿದು... ಇಡೀ ಪ್ರವಾಸದಲ್ಲಿ ಆ ಬಿರು ಬಿಸಿಲು.. ನಮ್ಮ ತೊಡೆಯ ಮೇಲೆ ನಿದ್ದೆ.. ಚಿಕ್ಕ ಜಾಗ.. ಕಿರಿ ಎನ್ನಿಸುವ ಕ್ಷಾರಸಹಿತ ಗಾಳಿ.. ಇಷ್ಟಿದ್ದರೂ.. ಒಮ್ಮೆಯೂ ತರಲೆ ಮಾಡದೆ ನಮ್ಮ ಜೊತೆಯಲ್ಲಿಯೇ ಆಕೆಯು ಈ ಪ್ರವಾಸವನ್ನು ಅನುಭವಿಸಿದ್ದು ಖುಷಿಯಾಯಿತು. ಇಂದಿಗೂ ಉಪಾಸನೆ ಹಾಡು ಟಿವಿಯಲ್ಲಿ ಬಂದಾಗ.. ನಾ ಒಮ್ಮೆ ಅವಳ ಕಡೆ ನೋಡುತ್ತೇನೆ.. ಅವಳು ಒಂದಷ್ಟು ಹಲ್ಲು ಬಿಡುತ್ತಾಳೆ..
ಹುಟ್ಟಿದ ಹಬ್ಬಕ್ಕೆ ಈ ಉಡುಗೊರೆ ನಿನಗಾಗಿ ತಂದಿದ್ದೇನೆ ನೆನಪಿನ ಪಲ್ಲಕ್ಕಿಯಲ್ಲಿ.. !!!
****
"ಶಭಾಷ್ ಗುರು.. ಬೆಂಕಿಗೆ ಸ್ವಲ್ಪ ತಿದಿ ಒತ್ತಿದರೆ.. ಶಾಖ ಹೆಚ್ಚುತ್ತದೆ.. ಹಾಗೆ ನಿನಗೆ ಸ್ವಲ್ಪ ಕೆಣಕಿದರೆ.. ಹಹಹಹಹಾ.. "
"ತುಂಬಾ ಥ್ಯಾಂಕ್ಸ್ ಗುರು.. ಮತ್ತೆ ಈ ಅಂಕಣವನ್ನು ಖಾಲಿ ಬಿಡೋಲ್ಲ.. ಅವಾಗವಾಗ ತುಂಬುತ್ತಲೇ ಇರುತ್ತೇನೆ.. ಬೇಸರ ಮಾಡಿಕೊಳ್ಳಬೇಡ"
ಇರಲಿ ಬಿಡು ಶ್ರೀ .. ಅಣ್ಣಾವ್ರು ಹೇಳಿಲ್ವಾ "ನಾನು ನೀನು ನೆಂಟರಯ್ಯ.. ನಮಗೆ ಭೇದ ಇಲ್ಲವಯ್ಯಾ.. "
"ಸ್ನೇಹ ಎಂದರೆ ಇದೆ ಅಲ್ಲವೇ.. "
"ನನ್ನ ಕಡೆಯಿಂದಲೂ ನಿನ್ನ ಮಗಳಿಗೆ.. ಜನುಮದಿನದ ಶುಭಾಶಯಗಳನ್ನು ತಲುಪಿಸು ಶ್ರೀ"
ಟ್ರಿಪ್ಪಿಂಗ್ ಲೈಫ್ ಬ್ಲಾಗ್ ಲಿಂಕ್ ನೋಡಿದೆ.. ನಗು ನಗುತ್ತಾ ಹಸಿರಾಗಿತ್ತು... !