ಮೊಬೈಲ್ ಚಾರ್ಜ್ ಕಮ್ಮಿ ಆಗ್ತಾ ಇದೆ..
ಹೌದ ಸರಿ ಚಾರ್ಜ್ ಮಾಡ್ತೀನಿ
ಲ್ಯಾಪ್ಟಾಪ್ ಚಾರ್ಜ್ ಕಡಿಮೆ ಆಗಿದೆ
ಸರಿ ಚಾರ್ಜ್ ಆಗ್ತೀನಿ
ಶ್ರೀ ನಿನ್ನ ಎನರ್ಜಿ ಕಡಿಮೆ ಆಗಿದೆ..
ಸರಿ ಕುಮಾರ ಪರ್ವತಕ್ಕೆ ಹೋಗಿ ಬರ್ತೀನಿ..
ಅರೆ ಇದೇನಿದು ಸಡನ್ ವಿಭಿನ್ನ ಉತ್ತರ ಅಂದಿರಾ.. ಅದು ಕುಮಾರ ಪರ್ವತದ ತಾಕತ್ತು.. ನನ್ನ ಇಷ್ಟವಾದ ಸಂಖ್ಯೆ ಎಂಟು.. ಇದು ನನ್ನ ಎಂಟನೇ ಬಾರಿಗೆ ಕುಮಾರ ಪರ್ವತದ ಮಡಿಲಿಗೆ..
ಹೇಳಬೇಕಿದ್ದು ನೂರಾರು.. ಹೇಳೋಕೆ ಹೊರಟ್ಟಿದ್ದು ಹತ್ತಾರು.. ಹೇಳಿದ್ದು ಒಂದೆರಡು.. ಹೌದು.. ಪ್ರತಿ ಬಾರಿಯೂ ಕುಮಾರಪರ್ವತ ವಿಭಿನ್ನ ಅನುಭವ ಕೊಡುವುದಷ್ಟೇ ಅಲ್ಲದೆ.. ನನ್ನ ಭಾವುಕ ಮನಸ್ಸಿಗೆ ಇನ್ನಷ್ಟು ಸ್ಫೂರ್ತಿ ಕೊಡುವ ತಾಣವೂ ಹೌದು..
ಮಹಾ ಪರ್ವ... ಇಲ್ಲಿಂದ ಶುರು.. |
ನವೆಂಬರ್ ಹತ್ತು.. ಚಳಿ ಚಳಿ ಎನ್ನುವ ರಾತ್ರಿ .. ಕುಕ್ಕೆ ಸುಬ್ರಮಣ್ಯದ ಬಸ್ಸಿನಲ್ಲಿ ಕೂತಾಗ.. . ಚಾರಣಕ್ಕೆ ಸಿದ್ಧವಿಲ್ಲದ ದೇಹ.. ಶ್ರೀ ನಾನಿದ್ದೇನೆ.. ನಡಿ ಆಗಿದ್ದು ಆಗಲಿ ಎನ್ನುವ ಮನಸ್ಸು.. ಎಂದಿನಂತೆ ಮನಸ್ಸಿನ ಮಾತು ದಾರಿ ದೀಪವಾಯಿತು..
ರಾತ್ರಿ ಇಡೀ.. ಮಾತು ಮಾತು ಮಾತು.. ಮುಗಿಯದ ಮಾತು.. ನಗು.. ಬೆಳಗಿನ ಜಾವ ಮಂಜರಾಬಾದ್ ಕೋಟೆ ಆಸು ಪಾಸಿನಲ್ಲಿ ಬಸ್ಸು ಹೆಡ್ ಲ್ಯಾಂಪ್ ಕೆಟ್ಟಿದೆ ಎಂದು ನಿಂತಾಗ.. ಸ್ವಲ್ಪ ಕಣ್ಣು ಎಳೆಯಲು ಶುರುಮಾಡಿತು.. ಆಗಿದ್ದಾಗಲಿ ಸ್ವಲ್ಪ ನಿದ್ದೆ ಮಾಡುವ ಅಂತ.. ಕಣ್ಣು ಮುಚ್ಚಿದ್ದಷ್ಟೇ ಗೊತ್ತು.. ಇಳೀರಿ ಇಳೀರಿ ಇದೆ ಕಡೆಯ ಸ್ಟಾಪ್ ಎಂದಾಗ ಕಣ್ಣು ಬಿಟ್ಟರೆ ಕುಕ್ಕೆ ತಲುಪಿಯಾಗಿತ್ತು..
ಮನಸು ಸಾಂದ್ರತೆಯನ್ನು ಕಳೆದುಕೊಂಡು ಹಕ್ಕಿಯ ಹಾಗೆ ಹಗುರವಾಗುವ ಸಮಯ.. ಬೆಳಗಿನ ವಿಧಿಗಳನ್ನು ಮುಗಿಸಿ.. ಕುಮಾರಕೃಪಾ ಹೋಟೆಲಿನಲ್ಲಿ ಇಡ್ಲಿ ವಡೆ ಬನ್ನು ತಿಂದು.. ಹೊರಟಾಗ ಹೊಟ್ಟೆ ಹಗುರವಾಗಿತ್ತು.. ಕಾರಣ ನನ್ನ ಮಾಮೂಲಿ ಬ್ಯಾಟಿಂಗ್ ಮಾಡಿರಲಿಲ್ಲ.. :-)
"ಹೆಜ್ಜೆ ಹೆಜ್ಜೆ ಮೇಲೆ ಹೆಜ್ಜೆ ಇಡುತ.. ಬಂದ ಬಾಲ ರಾಮ" ಎನ್ನುವ ಕರುಣಾಮಯಿ ಚಿತ್ರದ ಹಾಡಿನಂತೆ.. ನಿಧಾನವಾಗಿ ಚಾರಣದ ಪಥದಲ್ಲಿ ಹೆಜ್ಜೆ ಇಡುತ್ತಾ ಸಾಗಿದೆ.. ದೇಹಕ್ಕೆ ಮಾತು ಬೇಕಿರಲಿಲ್ಲ.. ಮನಸ್ಸು ಮೌನಕ್ಕೆ ಶರಣಾಗಿತ್ತು.. ಮಧ್ಯೆ ಮಧ್ಯೆ ಧಾರಾವಾಹಿಗಳ ನಡುವೆ ನುಸುಳಿ ಬರುವಂತೆ.. ಕೊಂಚ ಮಾತು.. ಕೊಂಚ ನಗು.. ಅಷ್ಟೇ..
ತಲೆಯಲ್ಲಿ ಯಾವ ಯೋಚನೆಗಳು ಇರಲಿಲ್ಲ.. ತುತ್ತ ತುದಿ ತಲುಪುತ್ತೇವೆಯೋ ಇಲ್ಲವೋ ಗೊಂದಲ ಇರಲಿಲ್ಲ.. ಅನಿರ್ಧಿಷ್ಟ ಪ್ರಯಾಣ ಮಾಡುವ ಹಾಗೆ ಸುಮ್ಮನೆ ಹೊರಟಿದ್ದೆ.. ನಿತ್ಯ ಹರಿದ್ವರ್ಣ ಕಾಡಿನ ಹಾದಿ... ಹಕ್ಕಿಗಳ ಕಲರವ.. ಜೀರಂಬೆಗಳ ಝೇಂಕಾರ.. ಅಲ್ಲೆಲ್ಲೋ ಸದ್ದಾಗುವ ಎಳೆಗಳ ನಿನಾದ.. ಗಾಳಿ ಎಲ್ಲಿ ಬೀಸಿತೋ.. ಎಲ್ಲಿ ಬಂತೋ ಅರಿಯದೆ ಮರಗಿಡಗಳ ತೂಗಾಟ.. ಹಸಿಯಾದ ಆದರೆ ಗಟ್ಟಿಯಾದ ಮಣ್ಣು.. ಆ ಮಣ್ಣಿನ ಹದವಾದ ವಾಸನೆ.. ಒಂದು ರೀತಿಯ ಭಾವುಕ ಲೋಕವನ್ನು ಸೃಷ್ಟಿಸಿತ್ತು..
ಆಶ್ಚರ್ಯ ಅಂದರೆ.. ಹಿಂದಿನ ಚಾರಣಗಳಲ್ಲಿ ಬೆವರಿನ ಮುದ್ದೆಯಾಗಿ.. ಸುಸ್ತಾಗಿ.. ಸಾಕಪ್ಪ ಅನ್ನಿಸುತ್ತಿದ್ದ ಮನಸ್ಸು ಇಂದು.. ಅದರ ಯಾವ ಸುಳಿವು ಕೊಡದೆ ಸುಮ್ಮನಿದ್ದದ್ದು.. ಜೊತೆಯಲ್ಲಿ ಆಯಾಸ.. ಮನಸ್ಸಿನ ಮಾತನ್ನು ಕೇಳುತ್ತಾ ಮೆಲ್ಲಗೆ ನನ್ನಿಂದ ದೂರವಾಗಿದ್ದು.. ಇದುವರೆಗೂ ನನಗೆ ಈ ಅನುಭವ ಆಗಿರಲಿಲ್ಲ.. ಜೊತೆಯಿದ್ದಿದ್ದರೆ ಅಂದೇ ಕುಮಾರ ಪರ್ವತದ ತುತ್ತ ತುದಿ ತಲುಪಿಬಿಡುತ್ತೇನೆ ಎನ್ನುವ ವಿಶ್ವಾಸ.. ಆದರೂ ಸುಮ್ಮನೆ ಏನೇನೋ ನಿರ್ಧಾರ ತೆಗೆದುಕೊಳ್ಳದೆ.. ಕವಿರತ್ನ ಕಾಳಿದಾಸ ಚಿತ್ರದಲ್ಲಿ ಅಣ್ಣಾವ್ರು ಹೇಳಿದಂತೆ "ಸ್ನಾನಗೀನ ಎಲ್ಲಾ ದೇಹಕ್ಕಲ್ಲ ಕಂದಾ ಮನಸ್ಸಿಗೆ" ತರಹ ಈ ಚಾರಣ ದೇಹಕ್ಕಲ್ಲ ಮನಸ್ಸಿಗೆ ಎಂದು ಮೊದಲೇ ನಿರ್ಧರಿಸಿ ಆಗಿದ್ದರಿಂದ ಸುಮ್ಮನೆ ಹೆಜ್ಜೆ ಹಾಕುತ್ತಾ ಹೋದೆ..
ಮಧ್ಯೆ ಭೀಮನಕಲ್ಲಿನ ಹತ್ತಿರ ಸಿಗುವ ತೊರೆಯಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಹೊಟ್ಟೆ ತುಂಬಾ ನೀರು ಕುಡಿದು ಮತ್ತೆ ಹೊರತು ನಿಂತಾಗ ಮತ್ತೆ ಹುರುಪು ಮೈಗೂಡಿತ್ತು. ..
ಭಟ್ಟರ ಮನೆಗೆ ತಲುಪಿದಾಗ ಹೊಟ್ಟೆ ಪಕ ಪಕ ಅನ್ನುತ್ತಿತ್ತು.. ಭಟ್ಟರಿಗೆ ನಮಸ್ಕರಿಸಿದಾಗ.. ನಿಮ್ಮನ್ನು ನೋಡಿದ್ದೇನೆ ಎಂದಾಗ ಖುಷಿಯಾಯಿತು.. ಇದು ನನ್ನ ಎಂಟನೇ ಚಾರಣ ಎಂದಾಗ.. ಹಳೆಯ ಘಟನೆಗಳನ್ನು ನೆನಪಿಸಿಕೊಂಡರು.. ಪುಷ್ಕಳವಾದ ಊಟ... ಹಾಗೆ ಸ್ವಲ್ಪ ಹೊತ್ತು ಮಲಗುವ ಅಂದು... ಸೂರ್ಯಾಸ್ತ ಆಗುವ ಹೊತ್ತಿಗೆ ಭಟ್ಟರ ಮನೆಯ ಮುಂದಕ್ಕೆ ಹೋಗಿ ಸೂರ್ಯಾಸ್ತದ ಸೊಬಗನ್ನು ಸವಿಯುವ ಎಂಬ ಹಂಬಲ ಹೊತ್ತು ನಿದ್ದೆ ಮಾಡಿದೆ.. ಕಣ್ಣು ಬಿಟ್ಟಾಗ ಆಗಲೇ ಕತ್ತಲೆ ಶುರುವಾಗಿತ್ತು..
ಮರುದಿನಕ್ಕೆ ಮತ್ತೆ ಚಾರಣಕ್ಕೆ ಸಿದ್ಧವಾಗಬೇಕಾದ್ದರಿಂದ ಒಂದಷ್ಟು ವ್ಯಾಯಾಮ ಆಗಲಿ ಎಂದು ಜೀವದ ಗೆಳೆಯನೊಡನೆ ಸುತ್ತು ಹಾಕಿ ಬಂದೆ.. ಒಂದಷ್ಟು ಮೌನ.. ಸಿಕ್ಕಾಪಟ್ಟೆ ಮಾತು.. ನಗು.. ಹಾಸ್ಯ.. ಒಂದಷ್ಟು ಗೊಂದಲಗಳ ನಿವಾರಣೆ..
ವಾಪಸ್ ಬಂದಾಗ ನಮ್ಮ ಜೊತೆ ಬಂದಿದ್ದವರು ಚಳಿಗೆ ಬೆಂಕಿ ಹಾಕಿದ್ದರು.. ಅದರ ಜೊತೆಯಲ್ಲಿ ಮತ್ತೆ ಒಂದಷ್ಟು ಚಿತ್ರಗಳು.. ತಮಾಷೆ.. ಸುಂದರ ಸಮಯ ಕಳೆದದ್ದೇ ಗೊತ್ತಾಗಲಿಲ್ಲ..
ಹೊಟ್ಟೆ ತುಂಬಾ ಊಟ ಮಾಡಿ ಮಲಗಿದ್ದೆ ಗೊತ್ತು.. ಬೆಳಿಗ್ಗೆ ಆಗಲೇ ದಿನಕರ ತನ್ನ ಕಚೇರಿಗೆ ಬಂದು ತುಂಬಾ ಹೊತ್ತಾಗಿತ್ತು.. ಪ್ರಾತಃವಿಧಿ ಮುಗಿಸಿ.. ಮತ್ತೆ ಅಲೆದಾಟ.. ಆದರೆ ಇಂದು ಸುಮ್ಮನೆ ಒಂದು ಕಡೆ ಕೂತು ಹೊಟ್ಟೆ ತುಂಬುವಷ್ಟು ಮಾತು ಇದೆ ತಲೆಯಲ್ಲಿ ಇತ್ತು.. ಆರಾಮಾಗಿ ಕೂತು ಮಾತಾಡಿದೆವು.. ಸುಮಾರು ಮೂರು ತಾಸು ಗಾಳಿಯ ವೇಗದಲ್ಲಿ ಓಡಿತು..
ಒಂದಕ್ಕೆ ಒಂದು ಆಸರೆ.. ! |
ಕುಮಾರ ಪರ್ವತ ನೋಡುತ್ತಾ ಕೂತೆ.. ಅದರೊಳಗಿಂದ ಹಿಂದಿನ ಅನುಭವಗಳು ಸಿನಿಮಾದ ರೀತಿಯಲ್ಲಿ ಕಣ್ಣ ಮುಂದೆ ಬಂತು.. ಒಂದೊಂದಾಗಿ ಸಿನೆಮಾಗಳು ಖಾಲಿಯಾಗುತ್ತಾ ಬಂದಾ ಹಾಗೆ.. ಬಿಳಿಯ ಪರದೆಯ ಮೇಲೆ ಮೂಡಿದ್ದು.. ಶ್ವೇತಾ ವಸ್ತ್ರಧಾರಿ.. ನಂತರ ಆ ರವಿಯ ಪ್ರಭೆ ಕಾಣಿಸಿತು.. ಅದರೊಂದಿಗೆ ಒಂದಷ್ಟು ಮಾತು.. ಒಂದಷ್ಟು ದುಃಖ ಹಂಚಿಕೊಂಡೆ.. ಇದು ನ್ಯಾಯವೇ ಅಂದೇ.. ಆ ಕಡೆಯಿಂದ ನನ್ನ ನೆಚ್ಚಿನ ಮುಗುಳುನಗೆಯೊಂದೇಸಿಕ್ಕಿದ್ದು .. ಕಣ್ಣುಗಳು ನೀರಿನ ಬಲೂನಾಗಿತ್ತು.. ಒಂದು ಸಣ್ಣ ಗುಂಡು ಸೂಜಿ ಅಲ್ಲ ಹೂವಿನ ಪಕಳೆ ತಾಕಿದ್ದರು.. ಜೋಗದ ಜಲಪಾತವಾಗುತ್ತಿತ್ತು.. ಮೆಲ್ಲನೆ ನನಗೆ ಅರಿಯದೆ ಒಂದು ಹತ್ತಿಯ ವಸ್ತ್ರ ಕಣ್ಣ ಮುಂದೆ ಬಂದು ನಿಂತಿತು.. ಆಶ್ಚರ್ಯ.. ಹತ್ತಿಯ ಬಟ್ಟೆ ಸುಯ್ ಅಂತ ಕಣ್ಣಲ್ಲಿನ ಲಿಂಗನಮಕ್ಕಿಯನ್ನು ಹೀರಿಕೊಂಡಿತು.. ಮನಸ್ಸು, ಕಣ್ಣುಗಳು ಹಗುರವಾದವು..
ಸೂರ್ಯ ಆಗಲೇ ನೆತ್ತಿಯನ್ನು ಸುಡಲು ಶುರುಮಾಡಿದ್ದ.. ಸರಿ ವಾಪಾಸ್ ಹೋಗೋಣ ಅಂತ.. ಮತ್ತೆ ಭಟ್ಟರ ಮನೆಗೆ ಬಂದೆವು.. ಸ್ನಾನ ಮಾಡಿ ಹೊರಬಂದೆ.. ಭಟ್ಟರು ನನ್ನ ಜನಿವಾರ ನೋಡಿ.. ಓಯ್.. ಸಂಧ್ಯಾವಂದನೆ ಮಾಡುವುದುಂಟೇ ಅಂದರು.. ಪರಿಕರ ಕೊಟ್ಟರೆ ಖಂಡಿತ ಅಂದೇ.. ಮುಂದಿನ ಮೂವತ್ತು ನಿಮಿಷ ಆ ಪರ್ವತದ ಮಡಿಲಲ್ಲಿ ಧ್ಯಾನ, ಸಂಧ್ಯಾವಂದನಾ ಆಹಾ ಆಗಲೇ ಹಗುರಾಗಿದ್ದ ಮನಸ್ಸಿಗೆ ರೆಕ್ಕೆ ಮೂಡಿತು..
ಭರ್ಜರಿ ಊಟ.. ಮತ್ತೆ ಇಳಿಯಲು ಶುರುವಾಯಿತು ನಮ್ಮ ಪಯಣ.. ಭಟ್ಟರ ಜೊತೆಯಲ್ಲಿ ಒಂದು ಚಿತ್ರ ನೆನಪಿಗೆ.. ಜೊತೆಯಲ್ಲಿ ಅಗಾಧವಾದ ಉತ್ಸಾಹದ ಮೂಟೆಯನ್ನು ಹೊತ್ತು ಇಳಿಯಲು ಶುರುವಾಯಿತು ಪಯಣ..
ತಂಡದ ಜೊತೆ ಒಂದು ಚಿತ್ರ |
ಯಾಕೋ ಮನಸ್ಸು ಮೂಕವಾಗಬೇಕು ಎನ್ನಿಸಿತು.. ಇರಲಿ ಮನಸ್ಸಿಗೂ ಒಂದಷ್ಟು ವಿಶ್ರಾಂತಿ ಬೇಕಲ್ಲವೇ.. ನನ್ನ ಹಿಂದೆ ಮುಂದೆ ತಮಾಷೆಯ ಮಾತುಗಳು.. ಪ್ರಕೃತಿಯ ಕಲರವ ಯಾವುದು ನನ್ನ ಕಿವಿಗೆ ಬೀಳುತ್ತಿರಲಿಲ್ಲ.. ಶಾಂತಿ, ನಿಶ್ಯಬ್ಧ.. ಮನಸ್ಸಿಗೆ ನೆಮ್ಮದಿ ಇಷ್ಟೇ ಕಣ್ಣ ಮುಂದೆ ಇದ್ದದ್ದು..
ನನ್ನ ಪ್ರೀತಿಯ ಗೆಳೆಯ ಕೇಳಿದ "ತನ್ಹಾಯಿ ಬೇಕಿತ್ತು" ಅದಕ್ಕೆ ಅಂದೇ.. ಓಕೇ ಶ್ರೀ ಎಂದು ಬೆನ್ನು ತಟ್ಟಿತಾಗ ಮನಸ್ಸಿಗೆ ಆನಂದ..
ಆಹಾ.. ಈಗ ನನ್ನ ಫಾರ್ಮ್ ಗೆ ಬರುತ್ತಿದ್ದೇನೆ.. ಫೀಲಿಂಗ್ ಬೆಟರ್ ಅಂದೇ.. ಸೂಪರ್ ಎಂದಿತು ಅಶರೀರವಾಣಿಗಳು..
ಸವಾಲು, ಜವಾಬು.. ಎಲ್ಲಕ್ಕೂ ಸಿದ್ಧ.. |
ಮುಂದೆ ನೆಡೆದದ್ದು ಮ್ಯಾಜಿಕ್.. ಆಯಾಸವಿಲ್ಲದೆ.. ಬೆಟ್ಟದ ಬುಡ ತಲುಪಿದಾಗ ಆರಾಮ್ ಎನ್ನಿಸಿತು..
ನದಿಯ ಕಡೆ ಪಯಣ.. ನದಿಯ ನೀರಲ್ಲಿ ಸ್ವಲ್ಪ ಹೊತ್ತು ಧ್ಯಾನ.. ಮತ್ತೆ ಬಾಸ್ ಗಣಪನ ದರ್ಶನ.. ಮನಸ್ಸಿಗೆ ಇನ್ನಷ್ಟು ಮುದ ನೀಡಿತು..
ಬೆಳಕಿನಲ್ಲಿ ದೇವಸ್ಥಾನ |
ಕುಕ್ಕೆ ಸುಬ್ರಮಣ್ಯನ ದೇವಸ್ಥಾನಕ್ಕೆ ಬಂದಾಗ.. ಕಾಲುಗಳು ಪದ ಹೇಳುತ್ತಿದ್ದವು .. ಆದರೆ ಆ ಮಹಾಮಹಿಮ ಸನ್ನಿಧಿ. ಜೊತೆಯಲ್ಲಿ ನೆಡೆಯುತ್ತಿದ್ದ ಉತ್ಸವ ಮೂರ್ತಿಯ ಮೆರವಣಿಗೆ... ಆ ಗಜರಾಜನ ಗಾಂಭೀರ್ಯ ನೆಡಿಗೆ.. ದೇವಸ್ಥಾನದೊಳಗೆ ಹಚ್ಚುತ್ತಿದ್ದ ಸಾಲು ಸಾಲು ಹಣತೆಗಳು.. ಜೊತೆಯಲ್ಲಿ ನಮ್ಮ ಅಳಿಲು ಸೇವೆಯೂ ತಲುಪಿತು..
ಸಾಲು ಸಾಲು ದೀಪಗಳು |
ಗಜರಾಜನ ವೈಭವ |
ದರ್ಶನ ಮಾಡಿ.. ನಮಿಸಿ.. ದೇವಸ್ಥಾನದ ಪ್ರಸಾದ ಸೇವಿಸಿದ ಮೇಲೆ ಮತ್ತಷ್ಟು ಹುರುಪು ತುಂಬಿತು..
ಶಕ್ತಿ ಹುಮ್ಮಸ್ಸು ತುಂಬಿದ ಚಾರಣ |
ಮೊದಲೇ ನಿಗಧಿ ಪಡಿಸಿದ್ದ ಬಸ್ಸಿನಲ್ಲಿ ಬಂದು ಕಾಲು ಚಾಚಿ ಮಲಗಿದಾಗ ಸ್ವರ್ಗ ಸುಖ.. ಬೆಳಿಗ್ಗೆ ಎಷ್ಟು ಹೊತ್ತಿಗೆ ಬೆಂಗಳೂರು ತಲುಪಿದೆವೋ ಅರಿವಿಲ್ಲದಂತಹ ನಿದ್ದೆ ...
ಆರಾಮಾಗಿ ಮನೆಗೆ ಬಂದು.. ಸ್ನಾನ ಮಾಡಿ ಆಫೀಸಿಗೆ ಹೋದಾಗ ಪುನರ್ ನೆನಪುಗಳು ಕಾಡತೊಡಗಿದವು..
ಯಾವುದೇ ಏರು ಪೇರಿಲ್ಲದೆ, ತ್ರಾಸದಾಯಕವಿಲ್ಲದ ಚಾರಣ ಇದಾಗಿತ್ತು.. ಕುಮಾರಪರ್ವತದ ಇನ್ನೊಂದು ಅನುಭವ ಮನಸ್ಸಿಗೆ ಮುದ ನೀಡಿತು.. ಮತ್ತೆ ನಮ್ಮ ಅಲೆಮಾರಿಗಳು ತಂಡವನ್ನು ಮತ್ತೆ ಹಳಿಗೆ ತಲುಪುವ ನಿರ್ಧಾರ ಮಾಡಿಕೊಂಡಿತು ಈ ಮನಸ್ಸು..
ಅಲೆಮಾರಿಗಳ ಪಯಣ ಶುರು |
೨೦೧೮ ರಲ್ಲಿ ಅಲೆಮಾರಿಗಳು ತಂಡದ ಸಾಹಸ ಮತ್ತೆ ಕೊಂಚ ಬಹು ಧೀರ್ಘ ವಿರಾಮದ ನಂತರ ಮತ್ತೆ ಮುಂದುವರೆಯಲಿದೆ!!!!
ಹೆಸರಿಗೆ ಒಂದು ಗುರುತು.. |