Thursday, April 17, 2014

ಶಿರಬಾಗಿ ವಂದಿಸುವೆ... ಶಿರಸಿಗೆ....ಭಾಗ ಎರಡು !!!

ಮುಂದುವರೆದ ಚಡಪಡಿಕೆ ಚಡಪಡಿಕೆ.................!


ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲೆದಾಗಿತ್ತು.. ಕುಲಾವಿ ಈ 

ಕೊಂಡಿಯಲ್ಲಿ ಸಿಗುತ್ತಿತ್ತು.. 

ಕುಲಾವಿ ಹಾಕಿಕೊಂಡ ಕೊಂಡ ಕಂದ ಮೊದಲ ಹೆಜ್ಜೆ ಇಟ್ಟಿದ್ದು ಈ ಪಾದದ ಅಳತೆಯಲ್ಲಿ ಸಿಗುತ್ತಿತ್ತು

ಈಗ ಕಂದ ನಡೆದಾಡುವ ಸಮಯ.. ಮತ್ತೆ ಚಡಪಡಿಕೆ ಆರಂಭವಾಗಿತ್ತು.. ಅದ್ಭುತವಾಗಿ ಶುರುವಾದ ಪಯಣ ಒಂದು ಹಂತಕ್ಕೆ ಬಂದು ಸುಧಾರಿಸಿಕೊಳ್ಳುತ್ತಿತ್ತು.. ಮುಂದಿನ ದಿನದ ಬಗ್ಗೆ ದಾರದಲ್ಲಿ ನೇಯ್ಗೆ ಕೆಲಸ ಆರಂಭವಾಗಿತ್ತು..

"ಬೇಡ ಕಣೋ.. ಪಾಪ ಅಣ್ಣ.. ದಿನವೆಲ್ಲ ಕಾರು ಡ್ರೈವ್ ಮಾಡಿದ್ದಾರೆ.. ಏಳಿಸಬೇಡ.. ಮಲಗಿಕೊಳ್ಳಲಿ" ಎಂದಿದ್ದರಂತೆ ಅಮ್ಮ..

 ಕಣ್ಣು ಬಿಟ್ಟೆ.. ಸೂರ್ಯ "ಹಲೋ ಗುರು" ಎಂದು ಹೇಳುತ್ತಾ ಲ್ಯಾರಿ ಅಜ್ಜನ ಕೋಣೆಯ ಕಿಟಕಿಯಿಂದ ಒಳ ನುಸುಳುತಿದ್ದ..

ಸಿಕ್ಕ ಜಾಗದಲ್ಲಿ ತೂರಿಕೊಂಡು ನನ್ನನ್ನು ಮೃದುವಾಗಿ ಎಬ್ಬಿಸಿದ 
ಸೂರ್ಯ ಭಗವಾನ್!!!

"ಗುಡ್ ಮಾರ್ನಿಂಗ್ ಅಣ್ಣಾ" ಮಗಳ ಕೋಗಿಲೆ ಧ್ವನಿ.. ಮನಸನ್ನು ಅರಳಿಸಿತು...ತಂಗಿಯಾಗಿ ಬಂದು ಮಗಳಾಗಿದ್ದವಳ ಮಂಜುಳ ಧ್ವನಿ ಅದು..  ಪಕ್ಕದಲ್ಲಿ ನೋಡಿದೆ ಸ್ನೇಹಿತಳಂತ ಮಗಳು ಇನ್ನು ಸಕ್ಕರೆ ನಿದ್ದೆಯಲ್ಲಿದ್ದರೆ.. ಮನ ಮೆಚ್ಚಿದ ಮಡದಿ ಸಿಹಿ ನಿದ್ದೆಯ ಇಳಿಜಾರಿನಲ್ಲಿ ಜಾರಾಡುತ್ತಿದ್ದಳು....!

"ಅಣ್ಣಾ ಕಾಫೀ ಕುಡಿಯಿರಿ.. ಹಾಗೆ ಒಂದು ಪುಟ್ಟದಾಗಿ ಸುತ್ತಾಡಿ ಬರೋಣ.."

ಐದೇ ನಿಮಿಷ.. ಇಬ್ಬರು ಮನೆಯಿಂದ ಹೊರಗೆ.. ಆ ತಂಗಾಳಿಯಲ್ಲಿ.. ನಡೆಯುತ್ತಾ ಸಾಗಿದ್ದೆವು.. ಮೆಲ್ಲಗೆ ನನ್ನನ್ನೇ ಚಿವುಟಿಕೊಂಡೆ.. 

"ಅರೆ ಇದು ಕನಸೋ ನನಸೋ.. ಇಲ್ಲಿ ಬರಲು ಸಾಧ್ಯವೇ ಇಲ್ಲ.. ಕಾರಣವೇ ಇಲ್ಲಾ..  
ಏನಪ್ಪಾ ಅಯ್ಯೋ ತಪ್ಪು ತಪ್ಪು !!!!

ಏನಮ್ಮ ನಿನ್ನ ಲೀಲೆ ಶಾರದೇ.. ನಿನ್ನ ಲೋಕದ ಜೀವಿಗಳಲ್ಲಿ ಈ ಮಟ್ಟಿನ ಪ್ರೀತಿ ವಿಶ್ವಾಸ.. ನಿನ್ನ ಗಂಡನ ಲೋಕದಲ್ಲಿದ್ದರೆ.. ಆಹಾ. !"

ಬೆಳಗಿನ ತಂಗಾಳಿ... ಸೂರ್ಯ ಬೀರುತ್ತಿದ್ದ ಬಿಸಿಲು ಕೋಲು.. ಹಿತ ಮಿತ ಶಾಖ.. ಸುತ್ತ ಮುತ್ತಲು ಹಸಿರು.. ಜೊತೆಯಲ್ಲಿ ಪ್ರೀತಿ ಪಾತ್ರಳಾದ ಮಗಳು ತಾನು ಅಕ್ಷರದ ಮೆಟ್ಟಿಲನ್ನು ಹತ್ತಲು ಶುರುಮಾಡಿದ್ದ ಶಾಲಾ ದೇಗುಲದ ಬಳಿ ಕರೆದೊಯ್ದಿದ್ದಳು..
ಅಣ್ಣ.. ಇಲ್ಲೇ ಸ್ವಲ್ಪ ದೂರದಲ್ಲಿ ನನ್ನನ್ನು ರೂಪಿಸಿದ ದೇಗುಲ ಇರುವುದು!!!

ಅಣ್ಣ ನಾ ಇಲ್ಲೇ ನನ್ನ ವಿಧ್ಯಾಭ್ಯಾಸ ಶುರು ಮಾಡಿದ್ದು.. ಇದನ್ನು ಹೇಳುವಾಗ ಅವಳ ಕಣ್ಣಲ್ಲಿ ಹೆಮ್ಮೆಯ ಸಾಧನೆ ಕಂಡರೆ.. ಶಾಲಾ ದೇಗುಲದ ಆವರಣದಲ್ಲಿದ್ದ ಐದು ಸಿಂಹಗಳು..ಹೌದು ಹೌದು ಎಂದವು!

ಐದು ಸಿಂಹಗಳು ಒಂದೇ ಚೌಕಟ್ಟಿನಲ್ಲಿ.. 
ನಾವಿಲ್ಲಿ ಇರುವಾಗ ಭಾವನೆ ತುಂಬಿರುವ ಅಕ್ಷರಗಳ ತೇರುಗಳೇ ಸಿಂಹಗಳಾಗಿ ಹೊರ ಹೋಗುವುದು ಎನ್ನುವಂತೆ ಎದೆ ಸೆಟೆದು ಹೇಳುತ್ತಿದ್ದವು..

ತನ್ನ ಪ್ರೀತಿಯ ವಿದ್ಯಾರ್ಥಿಗೆ ಸ್ವಾಗತ ಕೋರಲು ಸಜ್ಜಾಗಿ ನಿಂತ 
ಶಾಲಾ ದೇಗುಲ. 

ಸುಂದರ ಭಾವದ ತೇರನ್ನು ಏರಿಸುವ ಬರಹಗಾರ್ತಿಗೆ ಅಡಿಪಾಯ ಹಾಕಿಕೊಟ್ಟ ಶಾಲಾ ದೇಗುಲಕ್ಕೆ ಮನದಲ್ಲಿ ನಮಿಸಿದೆ. ಮೆಲ್ಲಗೆ ಕಿರುಗಣ್ಣಲ್ಲಿ ಮಗಳನ್ನು ನೋಡಿದೆ.. "ಓಹ್ ನೋ" ಎಂದು ನಕ್ಕಳು.. ಇಬ್ಬರಿಗೂ ಅರ್ಥವಾಯಿತು.. ಇಬ್ಬರೂ ಶಾಲೆಗೇ ನಮಿಸಿ ಮನೆಗೆ ಬಂದೆವು..
ಶಾಲಾ ಫಲಕ.. !!!

ಅಣ್ಣಾ ನಾ ಓದಿದ ಶಾಲೆ.. !

ಒಂದು ಸುಂದರ ದಿನದ ಮುನ್ನುಡಿಗೆ  ಬೆಳಗಿನ ಒಂದು ಹಿತಮಿತ ನಡಿಗೆ ಕೊಟ್ಟ ಆರಂಭ ಸಕತ್ ಇತ್ತು.. ಪ್ರಾತಃಕರ್ಮಗಳನ್ನು ಮುಗಿಸಿ.. ತಿಂಡಿ ತಿಂದು.. ಮತ್ತೆ ಕಾರಲ್ಲಿ ಕೂತಾಗ ಘಂಟೆ ಎಂಟುವರೆ ಒಂಭತ್ತು ಆಗಿತ್ತು..

ಆ ಒಂದು ಪುಟ್ಟ ಪುಟ್ಟ ಸಮಯದಲ್ಲಿ ಮಾಯ್ನೋರ ಮನೆಯ ಯಜಮಾನರಾದ ಅಜ್ಜ, ಅವರ ಸಾರಥಿಯಾದ ಅಜ್ಜಿ, ದೊಡ್ಡಮ್ಮ, ದೊಡ್ಡಪ್ಪ, ಅಪ್ಪ ಅಮ್ಮ.. ಎಲ್ಲರ ಕಿರು ಪರಿಚಯವಾಗಿತ್ತು.. ಎಲ್ಲರ ಕುತೂಹಲದ ಕೇಂದ್ರ ಬಿಂಧು ನಾನಾಗಿದ್ದೆ ಎನ್ನುವುದು ನನಗೆ ಬೆಂಗಳೂರಿಗೆ ಬಂದ  ಮೇಲೆ ತಿಳಿಯಿತು.. !!!

ವಿಶಾಸ ಪ್ರೀತಿ ಮಮತೆಯ ಶರಧಿ.. ಮಾಯ್ನೋರ್ ಮನೆ 

ಕಾರು ಶಿರಸಿ ಕಡೆ ಹರಿಯುತಿತ್ತು.. ದಾರಿಯಲ್ಲಿ ಸಂದೇಶಗಳ ಮೇಲೆ ಸಂದೇಶ.

"ಪ್ಲೀಸ್ ಹೇಳು.. ಯಾತಕ್ಕೆ ಬರ್ತಾ ಇದ್ದೀಯ.. ಯಾರಿದ್ದಾರೆ.. ಎಷ್ಟು ಹೊತ್ತಿಗೆ.. ಐದು ನಿಮಿಷ ಹತ್ತು ನಿಮಿಷ ಇದಕ್ಕೆ ಬೆಲೆಯಿಲ್ಲವೇ.. ಬರದೆ ಇದ್ದರೆ ಹಗ್ಗ.. ಬಿಳಿ ಸೀರೆ.. " ಹೀಗೆ ಸಾಗುತ್ತಲೇ ಇತ್ತು.. ಮಗಳ ಮೊಬೈಲ್ ನಲ್ಲಿ.. ಎಲ್ಲರೂ ನಗುತ್ತಲೇ ಇದ್ದೆವು.. ಅಷ್ಟೇ!

ಸೀದಾ ಮತ್ತೊಂದು ಅಜ್ಜನ ಮನೆಗೆ ಬಂದೆವು.. ಮನಸ್ಸಲ್ಲಿ ಇರುವ ಪ್ರೀತಿ ಭೂಮಿಯ ಆಳಕ್ಕಿಂಥ ಕೆಳಗೆ ಇಳಿಯುವ ಸುಂದರ ಸಂದರ್ಭ.. ಲಗುಬಗೆಯಿಂದ ಕೊಟ್ಟ ಕಾಫೀ.. ದೇಹವನ್ನು ಮತ್ತೆ ಚುರುಕುಗೊಳಿಸಿತು.. ಎಲ್ಲರಿಗೂ ಸಂಜೆ ಬರುತ್ತೇವೆ ಎಂದು ಹೇಳಿ.. ನಾವು ಮತ್ತೆ ಹೊರಟೆವು..

ಅಜ್ಜನ ಮನೆಯ ಮೊದಲ ಮನೆಯಾಗಿ ಎಂದಳಾ ಭಾಗ್ಯ!!!

ಅಷ್ಟರಲ್ಲಿಯೇ.. "ಹೇ ನೀನು ಬರ್ತೀಯೋ ಇಲ್ಲಾ.. ನಾ"

"ಇಲ್ಲ ಬರ್ತಾ ಇದ್ದೀನಿ.. ಐದು ಹತ್ತು ನಿಮಿಷ.. ಸಿದ್ಧವಾಗಿರು ಪ್ಲೀಸ್"

"ನೀ ಬರೋಲ್ಲ.. ನಾ ಕಾಲೇಜಿಗೆ ಹೋಗುತ್ತೇನೆ.. "

"ಇಲ್ಲ ಪ್ಲೀಸ್.. ಪ್ಲೀಸ್.. "

ದೇವರಿಗೆ "ಅರ್ಚ"ನೆ ಪೂಜೆ ಮಂಗಳಾರತಿ ಏನೇ ಕೊಡಬಹುದು ಅಥವಾ ಮಾಡಬಹುದು ಆದರೆ..  ಈ ಚಿಕ್ಕ ಚಿಕ್ಕ ಪುಟ್ಟಿಯರನ್ನು ಸಂಭಾಳಿಸುವ ಕೆಲಸ.. ರಾಮರಾಮ!

ಸಿರ್ಸಿ ಹೃದಯ ಭಾಗದ ಹತ್ತಿರ.. ಒಂದು ತಿರುವಿನಲ್ಲಿ ಕಾರು ನಿಂತಿತು..

"ಓಹ್ ಓಹ್ ಇವರ.. ಓಕೆ ಓಕೆ.. ಕೋಗಿಲೆ ಧ್ವನಿ "ಕ್ರಶ್" ಮಾಡುತ್ತಾ ಹರಿಯಿತು.. ತಿರುಗಿ ನೋಡಿದೆ.. ಹಲ್ಲು ಬಿಟ್ಟೆ..

ಹಾಯ್ ಅತ್ತಿಗೆ.. ಹಾಯ್ ಶೀತಲ್.. "

ಹಾಯ್ ಒಯ್ ಗಳು ವಿನಿಮಯವಾದವು..

"ಏನ್ರಿ ಹೇಗಿದ್ದೀರ.. " 

ನಾ ಕೇಳಿದ ಗಂಭೀರ ಪ್ರಶ್ನೆಗೆ ಅಷ್ಟೇ ಗಂಭೀರವಾಗಿ "ನಾ ಚೆನ್ನಾಗಿದ್ದೀನಿ ಶ್ರೀಕಾಂತಣ್ಣ"

(ಪುಣ್ಯ ಮಗಳಿಗೆ.. ಅರ್ಚನ ಪುಟ್ಟಿಯಿಂದ ಅರ್ಚನೆಯಾಗಲಿಲ್ಲ.. ಇವರ ಬಗ್ಗೆನಾ ಇಷ್ಟೊಂದು ಬಿಲ್ಡ್ ಅಪ್ ಕೊಟ್ಟಿದ್ದು ಅಂತ)

ಮುಂದಿನ ಹತ್ತು ಘಂಟೆಗಳು ಮನಸಲ್ಲಿ ಒಂದು ಸುಂದರ ನೆನಪಾಗಿ ಅಚ್ಚು ಮೂಡಿಸಿತ್ತು..

ಸ್ನೇಹಿತೆಯಾದ ಶೀತಲ್.. ಮಗಳಾದ ಭಾಗ್ಯ ಪುಟ್ಟಿ.. ಮನದನ್ನೆಯಾಗಿ  ನಗುತ್ತಲೇ ಇರುವ  ಸವಿತಾ.. ನೋಡಿದ ತಕ್ಷಣ ತಂಗಿ ಅಂದ್ರೆ ಹೀಗೆ ಇರಬೇಕು ಎನ್ನಿಸುವ ಅರ್ಚನ ಪುಟ್ಟಿ.. ನನ್ನ ಪ್ರವಾಸಕ್ಕೆ ಯಾವಾಗಲೂ ತನ್ನ ಟೈರ್ ಗಳನ್ನೂ ತಟ್ಟಿಕೊಂಡು ಸಿದ್ಧವಾಗಿರುವ ನನ್ನ ರಿಟ್ಜ್ ಕಾರು.. ಶ್ರೀ ನಿನ್ನ ಎಲ್ಲ ನೆನಪುಗಳು  ನನ್ನ ಸಂಗಡ ಎನ್ನುವ ನನ್ನ ಕ್ಯಾಮೆರ.. ಇದಕ್ಕಿಂತ ಇನ್ನೇನು ಬೇಕು ಒಂದು ಸುಂದರ ಪ್ರವಾಸ ರಸಮಯವಾಗಲು..!

ಎಲ್ಲೆಲ್ಲಿಗೆ ಹೋಗೋದು.. ಕೆಲವರು ಅಲ್ಲೇನು ಇದೆ ಮಣ್ಣು ಅಂದರೆ.. ಇನ್ನು ಕೆಲವರು ಮಣ್ಣಾದರು ಸರಿ ಅಲ್ಲಿ ಕ್ರಶ್ ಇರುತ್ತದೆ ಎಂದು ಹೇಳುತ್ತಿದ್ದರು .. ಅಣ್ಣಾ ನೀವೆಲ್ಲಿಗೆ ಕರೆದುಕೊಂಡು ಹೋದರು ಸರಿ.. ನಾ ನಿಮ್ಮ ಜೊತೆ ಎನ್ನುತ್ತಾ ಎಲ್ಲರೂ ನನ್ನ ಕೊರಳಿಗೆ ಜೋತು ಬಿದ್ದರು...

ಕೊಸರು: ಶಾಲಾ ದೇಗುಲದ ಮುಂದೆ ಕಂಡ ಫಲಕ.. ನನ್ನ ಮನಸ್ಸೆಳೆಯಿತು.. ಅಕ್ಷರಗಳಲ್ಲೇ ಮತ್ತು ಬರಿಸುವ ಸುಮಧುರ ಭಾವಗಳ ಬರಹಗಳ ಒಡತಿಯನ್ನೇ ಸರಸ್ವತಿ ಲೋಕಕ್ಕೆ ಕೊಟ್ಟಾ ಈ ಶಾಲಾ ದೇಗುಲದ ಮುಂದೇ ಬೇರೆ ನಶೆ ಬರಿಸುವ ಪದಾರ್ಥಗಳನ್ನು ನಿಷೇದಿಸಿರುವುದು ಸಮಂಜಸ ಎನ್ನಿಸಿತು!!!!

ಬರಹಗಳ ನಶೆಯ ಮುಂದೇ ಈ ನಶಾ ಪದಾರ್ಥಗಳು ತೃಣ ಸಮಾನ!!!

ಮತ್ತೆ ಚಡಪಡಿಕೆ ಶುರುವಾಯಿತು.. !!!!