ಶೇಷಪರ್ವತವನ್ನ ಇನ್ನೊಮ್ಮೆ ಮುಟ್ಟಿ ನಿಲ್ಲುವ ಒಂದು ಚಿಲುಮೆ ಮನಸಿನಲ್ಲಿ ಬಂತು. ಸಂದೀಪ್ ನನ್ನ ಅನಿಸಿಕೆಗೆ ಜೀವ ತುಂಬಿದರು. ನನ್ನ ಗೆಳೆಯರಾದ ಲತೆಶ್ ಮತ್ತು ಯಶದೀಪ್ ಜೊತೆಗೂಡಿದರು. ಅರುಣ್ ಉರುಫ್ ಸ್ವಾಮೀಜಿ ಕೂಡ ನಮ್ಮ ಜೊತೆ ಬರುವ ಒಂದು ಆಶಯ ತೋರಿದರು. ಹೀಗಾಗಿ ಪಂಚ ಪಾಂಡವರು ವನವಾಸ ಮಾಡೋಕೆ ಹೊರಟೆವು ದ್ರೌಪದಿ ಇಲ್ಲದೆ.
ಸುವರ್ಣ ಸಾರಿಗೆ ವಾಹನ ಹತ್ತಿ ಕುಳಿತಾಗ ೨೧.೧೬ ರಾತ್ರಿ ಸಮಯ. ಆರಾಮಾಗಿ ಕುಕ್ಕೆ ತಲುಪಿದಾಗ ಬೆಳಗಿನ ಜಾವ ೪.೦೦ ಗಂಟೆ. ದೇವಸ್ಥಾನದ ಆವರಣದಲ್ಲಿ ಬೆಳಗಿನ ಕಾರ್ಯಕ್ರಮ ಮುಗಿಸಿದೆವು. ಕೆಫೆ ಮೈಸೂರ್ ತೆಗೆಯುವುದನ್ನೇ ಕಾಯುತ್ತ ಕುಳಿತೆವು. ಎಲ್ಲರು ಸರಿಯಾಗಿ ಹೊಟ್ಟೆಗೆ ತುಂಬಿಕೊಂಡ ನಂತರ ನಿಧಾನವಾಗಿ ಚಾರಣ ಶುರುವಾಯಿತು.
ಕಾಡಿನ ಹಾದಿ ದುರ್ಗಮ ಹಾಗು ಸಾಹಸದಾಯಕ.
ಒಂಥರಾ ಮಜಾ ಇತ್ತು, ಕಾಡಿನ ದಾರಿ, ಕಂಡಿರುವ ದಾರಿ (ನನಗೆ ಮತ್ತು ಸಂದೀಪ್) , ಹೊಸ ದಾರಿ ಕಾಣದೆ ಇರುವ ಮೂರು ಚಾರಣಿಗರು (ಯಶದೀಪ್, ಸ್ವಾಮಿಜಿ, ಲತೆಶ್). ಎಲ್ಲರು ಸರಿ ಸುಮಾರು ಒಂದೇ ವೇಗದಲ್ಲಿ ಸಾಗುತಿದ್ದೆವು. ಭೀಮನ ಕಲ್ಲು ನಮಗೆ ಒಳ್ಳೆ ಅಲ್ಪ ವಿರಾಮ ಕೊಟ್ಟಿತು. ನೀರಿನಲ್ಲಿ ಆಟ, ಛಾಯೆಗಳ ಜೊತೆ ಆಟ ದೇಹಕ್ಕೆ ಮನಸಿಗೆ ಸಂತಸ ತಂದಿತು.
ಭಟ್ಟರ ಮನೆ ತಲುಪುವ ದಾರಿಯಲ್ಲಿ ಕಾಡಿನ ಆರಕ್ಷಕ ಅಧಿಕಾರಿಗಳು, ಅವರ ಸಿಬ್ಬಂಧಿ ವರ್ಗದವರು, ಭಟ್ಟರ ಮನೆಯವರು ನಮ್ಮ ಜೊತೆ ಹೆಜ್ಜೆ ಹಾಕುತ್ತ ಸಾಗುತ್ತಿದ್ದರು. ಅವರಿಗೆ ನಾವು ತಂದಿದ್ದ ಹಣ್ಣುಗಳನ್ನು ಹಂಚಿ ತಿಂದೆವು. ಬಹಳ ಖುಷಿಪಟ್ಟರು. ಅವರ ತಲೆಯ ಮೇಲೆ ಸುಮಾರು ಮಣ ಭಾರ ಇದ್ದರು ಕೂಡ, ನಗು, ಬತ್ತಿರಲಿಲ್ಲ.
ಭಟ್ಟರ ಮನೆಯಾ ಊಟ ಹಸಿದ ಹೊಟ್ಟೆ ಮತ್ತು ದಣಿದ ದೇಹವನ್ನು ತಣಿಸಿತು. ಸ್ವಲ್ಪ ದಣಿವಾರಿದ ಮೇಲೆ, ದೇಹ ಹಗುರಾಯಿತು. ಹಾಗೆ ಮಂಟಪದ ಕಡೆಗೆ ಹೆಜ್ಜೆ ಹಾಕುತ್ತ ಹೊರಟೆವು. ದಾರಿಯಲ್ಲಿ ಅನೇಕ ಸಹ ಚಾರಣಿಗರು ಸಿಕ್ಕಿದರು.
ಅವರಲ್ಲಿ ಒಂದು ಗುಂಪು ಬಿಸಿಲೆ ಕಾಡಿನಿಂದ ಕುಮರಪರ್ವತದವರೆಗೂ ಚಾರಣ ಮಾಡುತ್ತಿದ್ದರು. ಅವರಲ್ಲಿ ರೊಟ್ಟಿ ಕಲ್ಲು, ಮತ್ತು ಜೇನು ಕಲ್ಲು ರೆಸಾರ್ಟ್ ನ ಇಬ್ಬರು ಹೇಳಿದ ಮಾತು, ಹಗಲಲ್ಲಿ ನಾಗವಲ್ಲಿ ನೋಡಿದಂತೆ ಭಯ ಆಯಿತು.
ಅವರ ತಂಡ ಪ್ರತಿವರುಷ ಸುಮಾರು ೨೦೦೦ ಕಿಲೋ ಮೀಟರ್ ಚಾರಣ ಮಾಡುತ್ತಾರೆ. ಅವರಿಗೆ ಸಣ್ಣ ನಮನ ತಿಳಿಸಿ ನಾವು ಹೊರಟೆವು. ಮಂಟಪದ ಬಳಿ, ಸ್ವಾಮಿಜಿ ತಂದಿದ್ದ ಚಪಾತಿ, ಹಾಗು ಖಾರವಾದ ಚಟ್ನಿ ತಿಂದ ಮೇಲೆ ಜೀವಕ್ಕೆ ಮತ್ತೆ ಹುರುಪು ಸಿಕ್ಕಿತು.
ಮುಂದೆ ಹೋಗುತ್ತಾ, ಒಮ್ಮೆ ತಲೆ ಎತ್ತಿ ನೋಡಿದರೆ...ಆಗಲೇ ಮೋಡಗಳು ಶೇಷಪರ್ವತವನ್ನು ತಬ್ಬುತ್ತ ಸಾಗುತಿದ್ದವು. ನಮ್ಮ ವೇಗವನ್ನು ಜಾಸ್ತಿ ಮಾಡಿದೆವು. ಇನ್ನೇನು ತುಸು ದೂರದಲ್ಲಿ ಶೇಷಪರ್ವತದ ತುತ್ತ ತುದಿ ಇತ್ತು, ಮುತ್ತು ಮುತ್ತು ನೀರ ಹನಿಯ ಅಂತ ಹನಿಗಳು ಶುರು ಮಾಡಿದವು.
ಬೇಗನೆ, ಪರ್ವತ ದಾಟಿ, ಕಾಡಿನಲ್ಲಿ ಬಿಡಾರ ಹೂಡೋಣ ಅನ್ನುವ ನಮ್ಮ ಆಸೆಗೆ ದೊಡ್ಡ ಪೆಟ್ಟು ಬಿಟ್ಟು. ಮಳೆ ಹನಿಗಳು ಜೋರಾಗಿ ತನ್ನ ಕಾರ್ಯಭಾರ ಶುರು ಮಾಡಿದವು. ನಮಗೆ ಬೇರೆ ದಾರಿ ಕಾಣಲಿಲ್ಲ, ಸೀದಾ, ಕಷ್ಟ ಪಟ್ಟು ಮಂಟಪಕ್ಕೆ ಬಂದು ತಲುಪಿದೆವು. ಮಳೆ, ಗಾಳಿ, ಗುಡುಗು, ಮಿಂಚು, ಸಿಡಿಲು ಅಬ್ಬರಿಸುತ್ತ ನಮ್ಮನ್ನು ಹೆದರಿಸುತ್ತ, ನಡುಕ ಶುರುಮಾಡಿದವು.
ಒಂದು ಕಡೆ ಚಳಿ, ಇನ್ನೊಂದು ಕಡೆ ಮುಂದೇನು ಅನ್ನುವ ಯೋಚನೆ, ಕಡೆಗೆ, ಮಳೆ ಸ್ವಲ್ಪ ವಿರಾಮ ಕೊಟ್ಟರೆ,
ಭಟ್ತರಮನೆಯಲ್ಲಿ ಬಿಡಾರ ಹಾಕುವುದು ಎನ್ನುವ ಯೋಜನೆ ಮನಸಿನಲ್ಲಿ ಸಿದ್ದವಾಯಿತು.
ಆಗಲೇ ರವಿ ತನ್ನ ದಿನದ ಕೆಲಸ ಮುಗಿಸಿ, ಮನೆಗೆ ಹೋಗಿಯಾಗಿತ್ತು, ನಮ್ಮಣ್ಣ ದೂರದಿಂದಲೇ ನೋಡಿ ಅಣಕಿಸುತ್ತ ನಾನು ಇಲ್ಲದೆ ನೀವು ಹೇಗೆ ಚಾರಣ ಮಾಡುತ್ತೀರ ಅಂತ ಹೇಳಿದಾಗೆ ಅನ್ನಿಸಿತು. ಆ ಚಳಿಯಲ್ಲೇ, ಜಂಗಮ ಗಂಟೆಯ ಬೆಳಕಿನಲ್ಲಿ, ಹಾಗು ಇನ್ನೊಂದು ತುರ್ತು ದೀಪದ ಜೊತೆಯಲ್ಲಿ ಭಟ್ಟರ ಮನೆ ಕಡೆಗೆ ಹೆಜ್ಜೆ ಹಾಕಿದೆವು. ಸುತ್ತಲು ಕತ್ತಲು, ಎಲ್ಲಿ ನೋಡಿದರು ಮಳೆಯ ಶಬ್ದ, ಹೀಗೆ ಸಾಗಿತ್ತು ನಮ್ಮ ಪಯಣ.
ಭಟ್ಟರ ಮನೆ ಸೇರಿದಾಗ ಎಲ್ಲರಿಗು ಮನಸಿನಲ್ಲಿ ಸಂತಸ. ಬಿಸಿ ಬಿಸಿ ಕಾಫಿ ಕುಡಿದು, ನಾವು ತಂದಿದ್ದ ಸಿದ್ದ ತಿನಿಸು (MTR) ಬಿಸಿ ನೀರನಲ್ಲಿ ಬೇಯಿಸಿ ತಿಂದು ಮಲಗಿದಾಗ ಸ್ವರ್ಗಕ್ಕೆ ಕಿಚ್ಚು ಹಚ್ಚು ಎಂದ ಸರ್ವಜ್ಞ.
ಮರುದಿನದ ಮುಂಜಾನೆ ಆರು ಗಂಟೆ ಸುಮಾರಿಗೆ, ಕೈಯಲ್ಲಿ ಛಾಯಾಚಿತ್ರ ಪೆಟ್ಟಿಗೆ ಹಿಡಿದು, ಓಡಿದೆವು. ಎಂಥಹ
ಅದ್ಭುತ ದೃಶ್ಯ. ಹಿಂದಿನದಿನದ ದಣಿವೆಲ್ಲ ಒಮ್ಮೆಗೆ ಪುರ್ರರ್ ಅಂತ ಹಾರಿ ಹೋಯಿತು. ನಮ್ಮ ಅದೃಷ್ಟಕ್ಕೆ ವನಾಧಿಕಾರಿಗಳು ನಮಗೆ ದೂರಬೆಟ್ಟದಲ್ಲಿ ಇದ್ದ ಕಾಡೆಮ್ಮೆಗಳನ್ನ ತೋರಿದರು. ಸೂರ್ಯ ಕಚೇರಿಗೆ ಬರುವ ದೃಶ್ಯ ಕಣ್ಣಿಗೆ ತುಂಬಿಕೊಳ್ಳುತ್ತಾ, ಸಂತಸ ಪಡುತ್ತ ನಗು ಛಾಯೆಯ ಚಿತ್ರಗಳನ್ನು ಧಾಖಲಿಸುತ್ತ ಭಟ್ಟರ ಮನೆಗೆ ತಿಂಡಿ ತಿನ್ನಲು ಬಂದಿಳಿದೆವು.
ಮತ್ತೆ ವಾಪಾಸ್ ಕಾಡಿನ ದಾರಿ ಯಲ್ಲಿ, ಮಂಗನಿಂದ ಮಾನವ ಎಂಬ ಸಂದೇಶ ಸಾರುತ್ತಾ, ಸುಖವಾಗಿ ಕುಕ್ಕೆ ಸುಬ್ರಮಣ್ಯಕ್ಕೆ ತಲುಪಿದೆವು. ದೇವರ ದರ್ಶನ ಪಡೆಯಲು ಹೊರಗೆ ಬಂದಾಗ ಮತ್ತೆ ಮಳೆ ಕಾಡಿತು. ಸ್ವಲ್ಪ ಸಮಯದ ತರುವಾಯ ದೇವರನ್ನು ಕಂಡು ಮನಸಿನಲ್ಲೇ ಮಾತಾಡಿ ಹೊರಗೆ ಬಂದಾಗ ಸುವರ್ಣ ಸಾರಿಗೆ ವಾಹನ ನಮಗಾಗಿ ಕಾಯುತ್ತ ಇತ್ತು.
ಎಂಥ ಸುಖಕರ ಚಾರಣ, ಮಳೆಯಲ್ಲಿ ಕುಮಾರಪರ್ವತದ ಸೊಬಗು ಹೇಳಿದರೆ ಸರಿಯಲ್ಲ, ನೋಡಿಯೇ ತೀರಬೇಕು.
ಮತ್ತೆ ಬರುವ ನಿಬಂಧನೆಯೊಡನೆ ಕುಮಾರಪರ್ವತದಿಂದ ಬೀಳ್ಕೊಂಡೆವು.